Categories: myworldOpinion

ಕನ್ನಡ ಕನ್ನಡ ಅಂತ ಹೋರಾಡಬೇಕಿರುವುದೇಕೆ?

ಹೌದು… ‘ಕನ್ನಡ ಉಳಿಸಿ, ಕನ್ನಡ ಉಳಿಸೀ ಅಂತ ಕೂಗಾಡೋದ್ಯಾಕೆ ಸುಮ್ಮನೆ, ಅವರಿಗೆ ಸುಮ್ಮನಿರಲಾಗುವುದಿಲ್ಲವೇ’ ಅಂತ ಹಲವರು ಹೇಳಿಕೊಳ್ಳುವುದನ್ನು ಕೇಳುತ್ತಾ ಬಂದಿದ್ದೇವೆ. ಕನ್ನಡ ಹೋರಾಟಗಾರರು ಅಲ್ಲಲ್ಲಿ ಗಾಜು ಪುಡಿ ಮಾಡಿದರು, ದಾಂಧಲೆ ಮಾಡಿದರು ಎಂಬೆಲ್ಲಾ ವರದಿಗಳನ್ನೂ ಓದುತ್ತಾ ಬಂದಿದ್ದೇವೆ.

ಕರ್ನಾಟಕದಲ್ಲಿ ಕನ್ನಡಕ್ಕೆ ಅನ್ಯಾಯ ಆದಾಗ ಜನರು ಧ್ವನಿಯೆತ್ತುವುದು ಸಹಜವೇ. ಆದರೆ ಆಕ್ರೋಶವನ್ನೆಲ್ಲಾ ಅವುಡುಗಚ್ಚಿ ಸುಮ್ಮನೆ ಕುಳಿತರೆ ಅದು ಅಪಾಯಕಾರಿಯೇ. ಯಾವಾಗ ಈ ರೋಷದ ಕಟ್ಟೆ ಉಕ್ಕಿ ಒಡೆಯುದು ಧುಮ್ಮಿಕ್ಕುವುದೋ ಎಂಬುದನ್ನು ಊಹಿಸುವುದು ಅಸಾಧ್ಯವೇ.

ರಾಜ್ಯ ರಾಜಧಾನಿಯಲ್ಲಿ ಕನ್ನಡದ ಈ ಸ್ಥಿತಿಗೆ ಕಾರಣರು ಯಾರು ಎಂಬುದನ್ನು ಪರಾಮರ್ಶಿಸುವ ಮೊದಲು ಒಂದು ಪುಟ್ಟ ಘಟನೆ.

ಇತ್ತೀಚೆಗೆ ತುರ್ತು ಕಾರ್ಯ ನಿಮಿತ್ತ ಚೆನ್ನೈನಿಂದ ಬೆಂಗಳೂರಿಗೆ ಬಂದಿಳಿಯಬೇಕಾಗಿತ್ತು. ವಿಮಾನ ನಿಲ್ದಾಣದಿಂದ ಹೊರಬಂದು ಮುಂದಿನ ವಿಮಾನಕ್ಕೆ ಸಾಕಷ್ಟು ಸಮಯವಿದ್ದುದರಿಂದ ಮಧ್ಯಾಹ್ನದೂಟ ಪೂರೈಸೋಣವೆಂದು ದೊಮ್ಮಲೂರಿಗೆ ಟ್ಯಾಕ್ಸಿ ಹಿಡಿಯಲು ತೆರಳಿದೆ. ಅಲ್ಲಿ ನಾಲ್ಕೈದು ಮಂದಿ ಟ್ಯಾಕ್ಸಿವಾಲಾರನ್ನು ವಿಚಾರಿಸಿದಾಗ (ಬಾಯಿಗೆ ಬಂದ ರೇಟು… ಚರ್ಚೆ ಮಾಡೋದು ನಮ್ಮ ಕರ್ಮ!) ಅವರೆಲ್ಲಾ ಮಾತನಾಡಿದ್ದು ಅಚ್ಚ ತಮಿಳಿನಲ್ಲಿ! ಯಾಕಂದ್ರೆ ಚೆನ್ನೈ ವಿಮಾನದಲ್ಲೇ ಬಂದಿಳಿದದ್ದು ಅಂತ ಅವರಿಗೆ ಖಚಿತವಾಗಿ ಗೊತ್ತಿತ್ತು.

ಊಟ ಮುಗಿಸಿ, ಮಂಗಳೂರಿನತ್ತ ಪ್ರಯಾಣ ಬೆಳೆಸಲು ಮರಳಿ ವಿಮಾನ ನಿಲ್ದಾಣಕ್ಕೆ ಹೋಗಲೆಂದು ಆಟೋ ರಿಕ್ಷಾವೊಂದನ್ನು ನಿಲ್ಲಿಸಿದೆವು.

‘ಕಹಾಂ ಜಾನಾ ಹೈ ಸಾಬ್’ ಅಂತ ಆಟೋ ಚಾಲಕನಿಂದ ಪ್ರಶ್ನೆ ಎದುರಾಯಿತು. ಬಹುಶಃ ನನ್ನನ್ನು ನೋಡಿ ಆತ ಯಾರೋ ಮಾರ್ವಾಡಿಯೋ, ಉತ್ತರ ಭಾರತೀಯನೋ ಇರಬೇಕೂಂತ ತೀರ್ಮಾನ ಮಾಡಿರಬೇಕು. ಯಾಕಂದ್ರೆ ಆಟೋ ರಿಕ್ಷಾದವರಿಗೆ ಚಹರೆ ನೋಡಿ ತಮ್ಮ ಸಂಭಾವ್ಯ ಗಿರಾಕಿಯನ್ನು ಕೈತಪ್ಪಿ ಹೋಗದಂತೆ ಮಾಡುವ ಕಲೆ ಬಹುಶಃ ಗೊತ್ತಿರಬೇಕು.

‘ಏರ್ ಪೋರ್ಟ್’ ಅಂತ ಹೇಳಿದೆ… ವಿಮಾನ ನಿಲ್ದಾಣ ಅಂತ ಹೇಳಿದರೆ ಅರ್ಥವಾಗಲಾರದು ಎಂಬ ಶಂಕೆಯಿಂದ. ಹಿಂದಿ ಚೆನ್ನಾಗಿ ಬರುತ್ತಿತ್ತಾದ್ದರಿಂದ ಆಟೋದವನು ಕೇಳಿದ 60 ರೂಪಾಯಿಯನ್ನು ಕೊನೆಗೆ 40 ರೂಪಾಯಿಗೆ ಇಳಿಸುವಷ್ಟು ಚರ್ಚೆ ಮಾಡಬೇಕಾಯಿತು. (ಬೆಂಗಳೂರಿನ ಹೆಚ್ಚಿನ ಆಟೋದವರ ಪರಿಸ್ಥಿತಿ ಗೊತ್ತಲ್ಲ… ಮೀಟರ್ ಇದ್ದರೂ ಹಾಕಲೊಪ್ಪರು… ಹೊರಗಿನವರು ಅಂದ ತಕ್ಷಣ ಬಾಯಿಗೆ ಬಂದ ದರ ಹೇಳಿಬಿಡುತ್ತಾರೆ. ಹಾಗಾಗಿ ಚರ್ಚೆ ಮಾಡೋದು ಅಭ್ಯಾಸವಾಗಿದೆ).

ಆಟೋದಲ್ಲಿ ಕುಳಿತ ಮೇಲೆ, ಕೌನ್ಸಾ ಫ್ಲೈಟ್ ಹೈ ಸಾಬ್ ಅಂತ ಕೇಳಿದಾಗ, ಮಂಗಳೂರು ಅಂತ ಅಚ್ಚಕನ್ನಡದಲ್ಲಿ ಉದ್ದೇಶಪೂರ್ವಕವಾಗಿ ಹೇಳಿದೆ. ಆಗ ಆತನಿಗೆ ಇವರು ಕನ್ನಡದವರೇ ಅಂತ ಜ್ಞಾನೋದಯವಾಯಿತು. ಮತ್ತೆ ಕನ್ನಡದಲ್ಲೇ ಮಾತು ಮುಂದುವರಿಸಿದೆವು.

ನಾನು ಕೇಳಿದೆ… ‘ಯಾಕಪ್ಪಾ ಬೆಂಗಳೂರಲ್ಲಿದ್ದುಕೊಂಡೂ ಕನ್ನಡದಲ್ಲಿ ಮಾತನಾಡಿಸೋದಿಲ್ಲ?’. ಅದಕ್ಕೆ ಅವನಿಂದ ಬಂದ ಉತ್ತರ ಕೇಳಿ ನಾನು ಕೆಲವು ಲೇಖನಗಳಲ್ಲಿ ಓದಿದ್ದು ಕಣ್ಣೆದುರಿಗೆ ಬಂತು, ಅಲ್ಲಿ ಉತ್ಪ್ರೇಕ್ಷೆ ಇರಲಿಲ್ಲ ಎಂಬುದೂ ಖಚಿತವಾಯಿತು.

ಆತ ಹೇಳಿದ್ದು: ‘ಸಾರ್, ನಾನು ಕನ್ನಡದೋನೇ. ಆದ್ರೆ ನನ್ನ ಆಟೋ ಏರೋರು ಯಾರು ಕೂಡ ಕನ್ನಡ ಮಾತಾಡಲ್ಲ. ಕನ್ನಡದವರೇ ಆದ್ರೂ ವಿಮಾನ ನಿಲ್ದಾಣಕ್ಕೆ ಹೋಗೋವಾಗಲಂತೂ ಅಪ್ಪಿತಪ್ಪಿಯೂ ಕನ್ನಡ ಮಾತಾಡಲೊಲ್ಲರು. ಯಾಕೆ ಗೊತ್ತೇ? ಅವರಿಗೆ ಕನ್ನಡ ಮಾತಾಡಿದ್ರೆ ತಮ್ಮ ಪ್ರೆಸ್ಟೀಜ್ ಕಡಿಮೆ ಅನ್ನೋ ಭಾವನೆ. ಠುಸ್ ಪುಸ್ ಇಂಗ್ಲೀಷೋ, ಹಿಂದಿನೋ… ಅಥವಾ ಕನ್ನಡ ಬಿಟ್ಟು ಬೇರಾವುದೇ ಭಾಷೆ ಮಾಡಿದ್ರೇನೇ ಆತ್ಮತೃಪ್ತಿ ಮತ್ತು ಪ್ರೆಸ್ಟೀಜ್ ವಿಷ್ಯ ಕೂಡ’.

ಇದನ್ನು ಕೇಳಿ ದಂಗು ಬಡಿದುಹೋಯಿತು. ಕನ್ನಡ ನಾಡಿನ ರಾಜಧಾನಿಯಲ್ಲಿ ಕನ್ನಡದ ಸ್ಥಿತಿ ಗತಿಯಿದು!

ಕನ್ನಡ ನಾಡಿನಲ್ಲಿ ಕನ್ನಡವನ್ನು ರಕ್ಷಿಸಿ ಅಂತ ಹೋರಾಡೋದ್ರಲ್ಲಿ ತಪ್ಪಿಲ್ಲ ಅಂತನ್ನಿಸಿತು.

ಅದೇ ತಮಿಳುನಾಡು ನೋಡಿ. ಚೆನ್ನೈ ವಿಮಾನ ನಿಲ್ದಾಣದಲ್ಲಿ ಇಳಿದ ತಕ್ಷಣವೇ ಆಟೋ ಅಥವಾ ಟ್ಯಾಕ್ಸಿಯವ ಮಾತಾಡೋದೇ ತಮಿಳಿನಲ್ಲಿ. ಅಲ್ಲಿ ಇದ್ದದ್ದು ಇಲ್ಲಿ ಯಾಕಾಗುವುದಿಲ್ಲ? ಯಾಕಾಗುತ್ತಿಲ್ಲ? ಯಾರಾದ್ರೂ ಉತ್ತರಿಸುವಿರಾ?

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

View Comments

  • ನಿಮ್ಮ ಪ್ರಶ್ನೆ ಎತ್ತಿರುವ ಚಿಂತನೆ ಮೂಲಭೂತವಾದದ್ದು. ಬೆಂಗಳೂರಿನ ಭಾಷಾ ಉದಾರೀಕರಣದ ಸಮಯದಲ್ಲಿ ನಾವು ಭಾಷಾ ಉದ್ಧಾರೀಕರಣದ ಬಗ್ಗೆ ಚಕಾರವೆತ್ತುತ್ತಿದ್ದೇವೆ. ಕನ್ನಡ ಅನ್ನೋದು ಕೇವಲವಾಗಲಿಕ್ಕೆ ನಮ್ಮ ಜನರ ನಿರಭಿಮಾನ ಕಾರಣ. ಇಂಗ್ಳೀಷ್ ಹಿರಿಮೆ, ಹಿಂದೀ ಓಕೆ. ಕನ್ನಡ ಕಸ - ತೂರಿ ಅನ್ನೋದು ನಮ್ಮ ಜನಗಳ ಭಾವನೆ.

    ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಎಸ್ಸೆಸ್ಸೆಲ್ಸಿಯಲ್ಲಿ ಕನ್ನಡ ಭಾಷಾ ಪತ್ರಿಕೆಯಲ್ಲೂ ೪೦ ಅಂಕಗಳನ್ನ ಬಹು ಆಯ್ಕೆ ಪ್ರಶ್ನೆಗಳನ್ನಿಟ್ಟ ಮಹಾನ್ ಶಿಕ್ಷಣ ಚಿಂತಕರಿರುವ, ಶಿಕ್ಷಣ ಸುಧಾರಕರಿರುವ ನಾಡಿನಲ್ಲಿ ಭಾಷೆಯ ಬಗ್ಗೆ ಕಾಳಜಿ ಹೇಗೆ ಹುಟ್ಟೀತು..? ಯಾವ ಸರ್ಕಾರದವನಿಗೂ ಸಿ.ಬಿ.ಎಸ್.ಸಿ ನಲ್ಲಿ ಕನ್ನಡ ಅಳವಡಿಸುವ ಧಮ್ ಇಲ್ಲ. ಇವೆಲ್ಲವುಗಳ ಮಧ್ಯೆ ನಮ್ಮ ಅವಲತ್ತುಗಳಿವೆ, ಕಾಳಜಿಗಳಿವೆ.. ಆದರೆ, ಪರಿಹಾರ, ಆಶಾದಾಯಕ ಬೆಳವಣಿಗೆ...??

  • ಗಣೇಶ ಹೇಳುವ ಮಾತು ನೂರಕ್ಕೆ ನೂರರಷ್ಟು ಸತ್ಯ.
    "ಬೇವಿನ ಬೀಜ ಬಿತ್ತಿ ಮಾವಿನ ಹಣ್ಣಿಗಾಗಿ" ಕಾತರಿಸುವವರ ಪಾಡಾಯಿತು ನಮ್ಮ ಕನ್ನಡದವರ ಪಾಡು.

    ಶಾಲೆಯಲ್ಲಿ ಬಿತ್ತುತ್ತಿರುವುದು ಇಂಗ್ಲೀಷ್ ಎಂಬ ವಿದೇಷಿ ಬೀಜ. ಇಂಗ್ಲೀಷ್ ಇಲ್ಲದೆ ನಮ್ಮ ಭವಿಷ್ಯವಿಲ್ಲ ಅನ್ನೋ ಮಟ್ಟಕ್ಕೆ ನಮ್ಮ ಬುದ್ಧಿಗೆ ಗ್ರಹಣವಿಡಿದಿದೆ. ನನಗೆ ನಾಚಿಕೆ ಯಾಗುವುದು ದಕ್ಷಿಣ ಕೋರಿಯ, ಜಪಾನ್, ಜರ್ಮನ್, ಪ್ರಾನ್ಸ ಇತ್ಯಾದಿ ದೇಶಗಳ ಕತೆ ಕೇಳುವಾಗ. ಇಂಗ್ಲೀಷ್ ಇಲ್ಲದೆ ತಂತ್ರಜ್ಞಾನದಲ್ಲಿ ಅವರೆಷ್ಟು ಮುಂದೆ ಹೋಗಿದ್ದಾರೆಂಬ ನಿಜ ತಿಳಿದಾಗ. ನಮ್ಮಲ್ಲಿ ಕರಗಿ ಹೋಗುತ್ತಿರುವ ಅಭಿಮಾನ, ಶೂನ್ಯವಾಗುತ್ತಿರುವ ನಮ್ಮತನವೆಂಬ ಸ್ವಾಭಿಮಾನವೆ ನಮ್ಮನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ಇಂಗ್ಲೀಷ್ ಇಲ್ಲದೆ ನಮ್ಮ ಉದ್ದಾರವಾಗದು ಎಂಬ ಗುಲಾಮಿತನ. ಹಿಂದೆ ತಪ್ಪು ಮಾಡಿದವರನ್ನ ಬರಿ ತೆಗಳಿ ನಾವು ಅದೇ ತಪ್ಪನ್ನ ಮಾಡದೆ ಇರುವುದು ಈಗ ನಮಗಿರುವ ಮಾರ್ಗ. ಈಗ ಉಳಿದಿರುವುದು ಇನ್ನೋಬ್ಬರನ್ನ ಬೊಟ್ಟು ಮಾಡಿ ತೊರಿಸದೇ ನಮ್ಮಿಂದಲೆ ನಮ್ಮ ಹಂತದಿಂದಲೆ ಏನಾದರು ಮಾಡುವುದು. ಇಲ್ಲದಿದ್ದರೆ ಗುಲಾಮಿತನದಲ್ಲಿ ಬಳೆತೊಟ್ಟ ಹೆಂಗಸಿನಂತೆ ತರ ಸೆರಗು ಸುತ್ತಿ ತಲೆತಗ್ಗಿಸಿ ಇನ್ನೊಬ್ಬನಿಗೆ ಶರಣಾಗುವುದು. ಇದು ಕನ್ನಡಿಗನ ಪಾಡಾಗಬಾರದು.
    ಗಂಡೆದೆಯ ವಿರನಾಗಬೇಕು. ಆದಲೇ ಇದಕ್ಕೆಲ್ಲ ಮುಕ್ತಿ.

    ಸ್ವಾಮಿ.
    ಪುಣೆ
    22/05/08

  • ಗಣೇಶ್ ಮತ್ತು ಕುಮಾರಸ್ವಾಮಿ ಅವರೆ, ಬ್ಲಾಗಿಗೆ ಬಂದು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

    ಶಿಕ್ಷಣ ಸುಧಾರಣೆ ಎಂದೆಲ್ಲಾ ಬೊಬ್ಬೆ ಹೊಡೆಯುತ್ತಾರೆಯೇ ಹೊರತು ನಮ್ಮ ರಾಜಕಾರಣಿಗಳಲ್ಲಿ ಹಣ ಮಾಡುವ ಬಗೆಗಿನ ತುಡಿತದ ನಡುವೆ ಭಾಷೆಯ ಬಗ್ಗೆ ಕಾಳಜಿ ತೋರಲು ಸಮಯವಾದರೂ ಎಲ್ಲಿರುತ್ತದೆ? ಇದು ಕನ್ನಡಿಗರಾದ ನಮ್ಮ ಹಣೆ ಬರಹ. ಆಡಳಿತವೇ ಈ ಬಗ್ಗೆ ಎಚ್ಚೆತ್ತುಕೊಂಡರೆ ಭಾಷೆ ಉದ್ಧಾರವಾಗುತ್ತದೆ ಎಂಬುದಕ್ಕೆ ಪಕ್ಕದ ರಾಜ್ಯಗಳೇ ಉದಾಹರಣೆ ಇವೆ. ಇದು ಒಬ್ಬರ ಇಬ್ಬರ ಕೈಲಾಗುವ ಸಂಗತಿಯೇ ಇಲ್ಲ. ಆಡಳಿತಗಾರರಿಗೆ ಈ ಬಗ್ಗೆ ಬದ್ಧತೆ ಬೇಕು. ಅವರಿಗೆಲ್ಲಿ ಪುರುಸೊತ್ತು ಎಂಬ ಪ್ರಶ್ನೆ ಮೂಡುವುದು ಸಹಜ. ಈ ರಾಜಕಾರಣಿಗಳು ಆರೋಪ-ಪ್ರತ್ಯಾರೋಪ ಮಾಡಲು, ಭ್ರಷ್ಟಾಚಾರ ಮಾಡಲು ಮತ್ತು ಮಾಡಿದ್ದನ್ನು ಮುಚ್ಚಿಹಾಕಲು ಸಮಯ ವ್ಯಯಿಸುತ್ತಾರಲ್ಲ, ಅದರಲ್ಲಿ ಅರ್ಧದಷ್ಟಾದರೂ ಸಮಯ ಉಳಿಸಿ ಕನ್ನಡಕ್ಕಾಗಿ ತೊಡಗಿಸಿಕೊಂಡರೆ ಸಾಕು.

    ತುಂಬಾ ಧನ್ಯವಾದಗಳು.

  • ಇದು ಕನ್ನಡಿಗರ ದೌರ್ಭಾಗ್ಯ. ಬೆಂಗಳೂರಿನಲ್ಲಿ ಎಲ್ಲರೂ ಬೆರಕೆ ಆಗಿಬಿಟ್ಟಿದ್ದಾರೆ...ಅಂದರೆ ಅರ್ಥವಾಯಿತಲ್ಲಾ?....ಕನ್ನಡಿಗ-ತೆಲುಗು, ತೆಮಿಳು(?), ಮರಾಠಿ,ಮಲೆಯಾಳಿ ಹೆಣ್ಣುಗಳನ್ನು ಮದುವೆಯಾಗಿ ಅವರ ಗುಲಾಮರಾಗಿ ಕನ್ನಡತನಕ್ಕೆ ತಿಲಾಂಜಲಿ ಇಡುತ್ತಿದ್ದಾರೆ. ಇಂತಹ ಬೆರಕೆಗಳಿಂದ ನಮ್ಮ ಕನ್ನಡನಾಡು ಇಂದು ಸಂಸ್ಕೃತಿ ಕಳೆದುಕೊಳ್ಳುತ್ತಿದೆ. ಅಲ್ಲದೆ ವ್ಯಾಪಾರಕ್ಕಾಗಿ ಅನ್ಯರ ಕಾಲು ನೆಕ್ಕಿ ತೀರ್ಥ ಕುಡಿಯಲೂ ಹಿಂಜರಿಯದ ನಮ್ಮ ಕೆಲ ಕನ್ನಡದ್ರೋಹಿಗಳು ಕೂಡಾ ಕಾರಣ. ನಮ್ಮವರೇ ಕೆಲವರು....ಕನ್ನಡ, ಕನ್ನಡ ಎಂದರೆ ಹೊಟ್ಟೆ ತುಂಬುತ್ತಾ? ಎಂಬ ಪ್ರಶ್ನೆ ಕೇಳುತ್ತಾರೆ. ಅಂದರೆ ಇವರ ದೃಷ್ಟಿಯಲ್ಲಿ ತಾಯಿ ಹಾಗೂ ಕನ್ನಡ ವ್ಯಾಪಾರದ ಅಂಶಗಳು. ಕನ್ನಡಕ್ಕೇ ಬೆಲೆ ಕೊಡದವರು ತಾಯಿಗೆ ಎಷ್ಟು ಬೆಲೆ ಕೊಡುತ್ತಾರೆ?
    ಇಂತಹ ನೀಚ, ಅಧಮರನ್ನು ಗುಡಿಸಿ ಸಾರಿಸಿ, ತಿಪ್ಪೆಗೆ ಹಾಕಬೇಕಾಗಿದೆ.

  • ಹೌದು. ಕರ್ನಾಟಕದಲ್ಲಿ ಕನ್ನಡಿಗರೇ ಪರಕೀಯರಾಗುತ್ತಿದ್ದಾರೆ. ಇದಕ್ಕೆ ಆಳುವವರ ಪರಮ ನಿರ್ಲಕ್ಷ್ಯವೂ ಕಾರಣವೇ. ಕನ್ನಡಿಗರಿಗೆ ಮಣೆಹಾಕದ ಈ ಮಂದಿ, ಹಣಕ್ಕಾಗಿಯೋ, ಅಥವಾ ಬೇರಾವುದೇ ರಾಜಕೀಯ ಲಾಭಕ್ಕಾಗಿಯೋ ಪರಕೀಯರಿಗೆ ರತ್ನಗಂಬಳಿ ಹಾಸುತ್ತಾರೆ. ನವೆಂಬರು ತಿಂಗಳಲ್ಲಿ ಕನ್ನಡ ಕನ್ನಡ ಎನ್ನುವ ರಾಜಕಾರಣಿಗಳಿಂದ ಮತ್ತೇನನ್ನು ನಿರೀಕ್ಷಿಸುವುದು ಸಾಧ್ಯ?

  • ನಾಗೇಶ್,
    ನಿಮ್ಮ ಮೆಚ್ಚುಗೆ ನುಡಿಗೆ ಧನ್ಯವಾದಗಳು.
    ಬರ್ತಾ ಇರಿ,

Recent Posts

ಎಐ ವೈಶಿಷ್ಟ್ಯಗಳ realme GT 7 Pro ಬಿಡುಗಡೆ: ಬೆಲೆ ಎಷ್ಟು? ವೈಶಿಷ್ಟ್ಯಗಳೇನು? ಇಲ್ಲಿದೆ ಪೂರ್ಣ ಮಾಹಿತಿ

ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್‌ ಇರುವ ಬಹುನಿರೀಕ್ಷಿತ…

3 weeks ago

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

3 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

3 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

4 months ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

5 months ago

ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

10 months ago