ಜಾಲತಾಣಗಳಿಗಿನ್ನು ಅಚ್ಚಗನ್ನಡ ಲಿಪಿಯಲ್ಲೇ ವೆಬ್ ವಿಳಾಸ!

ಬೆಂಗಳೂರು: ಅಂತರಜಾಲದಲ್ಲಿ ಅಚ್ಚಗನ್ನಡದ ಕಹಳೆ ಮೊಳಗಿಸಲು ಕಾತರಿಸುತ್ತಿರುವವರೆಲ್ಲರೂ ಸಂಭ್ರಮಿಸುವ ಸುದ್ದಿಯಿದು. ಇನ್ನು ಮುಂದೆ ನಮ್ಮ ಜಾಲತಾಣಗಳ (ವೆಬ್‌ಸೈಟ್) ವಿಳಾಸಗಳು ಸಂಪೂರ್ಣವಾಗಿ ಕನ್ನಡಮಯ!

ಕೆಲವು ವರ್ಷಗಳ ಹಿಂದಿನವರೆಗೂ ಜಾಲತಾಣಗಳ ವಿಳಾಸವು ಇಂಗ್ಲಿಷಿಗಷ್ಟೇ ಸೀಮಿತವಾಗಿತ್ತು. ಆದರೆ, ಅಂತರಜಾಲದಲ್ಲಿ ಪ್ರಾದೇಶಿಕ ಭಾಷೆಯ ಬಳಕೆ ಹೆಚ್ಚಾಗುತ್ತಿರುವಂತೆಯೇ, ಡೊಮೇನ್ ಹೆಸರುಗಳೂ (ವೆಬ್ ವಿಳಾಸ) ಆಯಾ ಭಾಷೆಯಲ್ಲಿ ಲಭ್ಯವಾಗತೊಡಗಿದವು. ಇದೀಗ ಅವುಗಳ ವಿಸ್ತರಣಾ ಭಾಗ (ಎಕ್ಸ್‌ಟೆನ್ಷನ್) ‘.ಭಾರತ’ ಮೂಲಕ ಕನ್ನಡದಲ್ಲೇ ದೊರೆಯುತ್ತಿದೆ. ಮುಂದೆ .ಕರ್ನಾಟಕ, .ಪತ್ರಿಕೆ, .ಸಂಸ್ಥೆ ಮುಂತಾದವುಗಳೂ ಲಭ್ಯವಾಗುವ ಸಾಧ್ಯತೆಗಳಿವೆ.

ಭಾರತೀಯ ಭಾಷಾ ಕಟ್ಟಾಳುಗಳ ಶ್ರಮದ ಪರಿಣಾಮವಾಗಿ ಡಾಟ್ ಭಾರತ (.ಭಾರತ) ಎಂಬ ಟಾಪ್ ಲೆವೆಲ್ ಡೊಮೇನ್ (ಟಿಎಲ್‌ಡಿ) ಜು.15ರಿಂದ ಸಾರ್ವಜನಿಕರಿಗೆ ಲಭ್ಯವಾಗಿದ್ದು, ಆನ್‌ಲೈನ್ ಕನ್ನಡಿಗರಿಗೆ ಇದು ಹೊಸ ಉತ್ಸಾಹ.

ಏನಿದು ಹೊಸ ವ್ಯವಸ್ಥೆ?
ಯಾವುದೇ ಜಾಲತಾಣದ (ವೆಬ್‌ಸೈಟ್) ವಿಳಾಸವು ಇಂಗ್ಲಿಷಿನಲ್ಲಿ ಇರುತ್ತದೆ. ಉದಾಹರಣೆಗೆ www.Prajavani.net. ಇದರಲ್ಲಿ www ಎಂಬುದು ವಿಶ್ವವ್ಯಾಪಿ ಜಾಲ (ವರ್ಲ್ಡ್ ವೈಡ್ ವೆಬ್) ಎಂಬುದರ ಸೂಚಕ. Prajavani ಎಂಬುದು ಸಂಸ್ಥೆ ಅಥವಾ ವ್ಯಕ್ತಿಯ ಪ್ರಧಾನ ಗುರುತು. ಮುಂದಿನ .net, .com, .org, .co.in, .news, .tv, .org, .com ಇತ್ಯಾದಿ ಎಕ್ಸ್‌ಟೆನ್ಷನ್‌ಗಳನ್ನು ಟಾಪ್ ಲೆವೆಲ್ ಡೊಮೇನ್ (TLD) ಎನ್ನುತ್ತಾರೆ. ಇದುವರೆಗೆ, ಕಂಪನಿಯ/ವ್ಯಕ್ತಿಯನ್ನು ಗುರುತಿಸಬಹುದಾದ ಭಾಗವನ್ನಷ್ಟೇ ಕನ್ನಡದಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿತ್ತು.

‘.ಭಾರತ’ ಅಡಿಯಲ್ಲಿ ನಮ್ಮ ಡೊಮೇನ್ ಹೆಸರುಗಳನ್ನು ನೋಂದಾಯಿಸಿಕೊಳ್ಳಲು ವಾರ್ಷಿಕ 500 ರೂ. ಶುಲ್ಕವಿದೆ. registry.in ನಲ್ಲಿ ಲಭ್ಯವಿರುವ ಡೊಮೇನ್ ರಿಜಿಸ್ಟ್ರಾರ್ ತಾಣಗಳಲ್ಲಿ ನೋಂದಾಯಿಸಿಕೊಳ್ಳಬಹುದು. ಎಲ್ಲ ರಿಜಿಸ್ಟ್ರಾರ್ ತಾಣಗಳಲ್ಲಿ ಇನ್ನೂ ಲಭ್ಯವಾಗಿಲ್ಲವಾದರೂ, ಸದ್ಯಕ್ಕೆ godil.in ಮೂಲಕ ದೊರೆಯುತ್ತಿದೆ. ವಿಶೇಷವೆಂದರೆ, ಕನ್ನಡದಲ್ಲೇ ಇಮೇಲ್ ವಿಳಾಸವನ್ನೂ ಖರೀದಿಸಬಹುದು. 2014ರಲ್ಲೇ ಹಿಂದಿ, ತೆಲುಗು, ತಮಿಳು, ಬಂಗಾಳಿ, ಗುಜರಾತಿ, ಉರ್ದು, ಪಂಜಾಬಿ ಭಾಷೆಗಳಲ್ಲಿ ‘.ಭಾರತ’ ಬಂದಿತ್ತು. ಆರು ವರ್ಷಗಳ ಬಳಿಕವಾದರೂ ಕನ್ನಡಕ್ಕೆ ಲಭ್ಯವಾಗಿರುವುದು ತೃಪ್ತಿಯ ವಿಚಾರವೇ.

ಕನ್ನಡ ತಂತ್ರಜ್ಞರ ಶ್ರಮ
ಡೊಮೇನ್ ಹೆಸರುಗಳಲ್ಲಿ ಕನ್ನಡವನ್ನು ಬರುವಂತೆ ಮಾಡುವುದೇನೂ ಸುಲಭದ ಕೆಲಸವಲ್ಲ. ಹಲಂತದ ಹಿಂದೆ ಸ್ವರಾಕ್ಷರ ಇರುವಂತಿಲ್ಲ, ವ್ಯಂಜನವೇ ಇರಬೇಕು, ಯಾವ ಯಾವ ಸಂಕೀರ್ಣಾಕ್ಷರಗಳಿದ್ದರೆ ತಾಂತ್ರಿಕವಾಗಿ ಯಾವ ಸಮಸ್ಯೆಗಳು ಎದುರಾಗಬಹುದು ಎಂಬುದೇ ಮುಂತಾಗಿ ಕಂಪ್ಯೂಟರ್ ಭಾಷೆ (ಪ್ರೋಗ್ರಾಮಿಂಗ್) ಮೂಲಕ ಪ್ರಯೋಗ ಮಾಡಿ, ಸರಿ-ತಪ್ಪು-ಒಪ್ಪುಗಳನ್ನೆಲ್ಲ ವಿಶ್ಲೇಷಿಸಲು ಅದಕ್ಕೆ ನಿಯಮಗಳನ್ನು ಅನ್ವಯಿಸಬೇಕಾಗುತ್ತದೆ. ಡೊಮೇನ್ ಹೆಸರುಗಳ ವಿಲೇವಾರಿಯ ಹೊಣೆ ಹೊತ್ತಿರುವ ಐಕ್ಯಾನ್ (ಇಂಟರ್‌ನೆಟ್ ಕಾರ್ಪೊರೇಶನ್ ಫಾರ್ ಅಸೈನ್ಡ್ ನೇಮ್ಸ್ ಆಂಡ್ ನಂಬರ್ಸ್ – ICANN) ಗೆ ಅಂತರರಾಷ್ಟ್ರೀಯ ಡೊಮೇನ್ ಹೆಸರುಗಳ (ಇಂಟರ್‌ನ್ಯಾಷನಲೈಸ್ಡ್ ಡೊಮೇನ್ ನೇಮ್ -IDN) ಬಗ್ಗೆ ನೆರವು ನೀಡಲು, ನಿಯೋಬ್ರಾಹ್ಮೀ ಜನರೇಶನ್ ಪ್ಯಾನೆಲ್ ಎಂಬ ತಂಡ ಸಹಕರಿಸುತ್ತಿದೆ. ಬ್ರಾಹ್ಮೀ ಲಿಪಿಯಿಂದ ಉಗಮಿಸಿದ ಎಲ್ಲ ಲಿಪಿಗಳಲ್ಲಿ ಡೊಮೇನ್ ಹೆಸರು ತಯಾರಿಸಲು ಬೇಕಾದ ನಿಯಮಗಳನ್ನು ರೂಪಿಸುವುದೇ ಈ ತಂಡ. ಈ ತಂಡದಲ್ಲಿ, ಕನ್ನಡ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಈಗಾಗಲೇ ಹೆಸರು ಮಾಡಿರುವ ಡಾ.ಯು.ಬಿ.ಪವನಜ, ಅವರೊಂದಿಗೆ ಬೆಂಗಳೂರಿನ ಧನಲಕ್ಷ್ಮೀ ಹಾಗೂ ಅಮೆರಿಕದ ತೇಜಸ್ ಜೈನ್ ಕೂಡ ಇದ್ದಾರೆ.

ಕನ್ನಡದಲ್ಲಿ ಡೊಮೇನ್ ಹೆಸರುಗಳಿಗೆ ಅತ್ಯಂತ ದೊಡ್ಡ ಗೊಂದಲವಿರುವುದು ಝೀರೋ ವಿಡ್ತ್ ಜಾಯಿನರ್/ನಾನ್ ಜಾಯಿನರ್ ಎಂಬ ಕಣ್ಣಿಗೆ ಕಾಣದ ಒಂದು ಗುಪ್ತಾಕ್ಷರದ ಬಗ್ಗೆ. ಎಂದರೆ, ರಾಜ್ ಮತ್ತು ಕುಮಾರ್ ಒಟ್ಟಿಗೆ ಬರೆದಾಗ (ರಾಜ್‌ಕುಮಾರ್) ‘ಜ್’ ಹಾಗೂ ‘ಕು’ ಕೂಡಿಕೊಳ್ಳದಂತೆ ಮಾಡುವ ಅಗೋಚರ ಅಕ್ಷರವದು. ಉದಾಹರಣೆಗೆ ‘ರಾಜ್‌ಕುಮಾರ್.ಭಾರತ’ ನಂತಹಾ ಡೊಮೇನ್ ಹೆಸರಿಗೆ ಇದು ಅಗತ್ಯ. ಈ ವಿಚಾರದೊಂದಿಗೆ, ಎರಡು ಪದಗಳ ಮಧ್ಯೆ ಅಡ್ಡಗೆರೆ (ಹೈಫನ್) ಸೇರಿಸುವುದು ಹಾಗೂ ಕನ್ನಡ ಅಂಕಿಗಳನ್ನು ಅಳವಡಿಸುವ ಕುರಿತ ಕಾರ್ಯಕ್ಕೆ ಒತ್ತಡ ಹೇರಲಾಗುತ್ತಿದೆ ಎನ್ನುತ್ತಾರೆ ಕನ್ನಡದ ನಿಯಮಗಳನ್ನು ರೂಪಿಸಲು ಶ್ರಮಿಸಿರುವ ಡಾ.ಪವನಜ.

ಕರ್ನಾಟಕ ಸರ್ಕಾರಕ್ಕೆ ಮನವಿ
ಆಡಳಿತದಲ್ಲಿ ಕನ್ನಡ ಅಳವಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ, ಮುಖ್ಯಮಂತ್ರಿಯವರ ಇ-ಆಡಳಿತ ಸಲಹೆಗಾರ ಬೇಳೂರು ಸುದರ್ಶನ ಅವರು ‘ಡಾಟ್ ಭಾರತ’ ಟಿಎಲ್‌ಡಿ ಬಗ್ಗೆ ಅತೀವ ಹರ್ಷ ವ್ಯಕ್ತಪಡಿಸಿದ್ದಾರೆ. ಇಡೀ ಜಾಲತಾಣವನ್ನೇ ಕನ್ನಡದಲ್ಲಿ ನೋಡುವುದು ಬಹುಕಾಲದ ಕನಸಾಗಿತ್ತು. ಅದೀಗ ನಿಜವಾಗಿದೆ. ಮುಂದಿನ ದಿನಗಳಲ್ಲಿ ಡಾಟ್ ಕರ್ನಾಟಕ ಎಂಬ TLD ಕೂಡ ಲಭ್ಯವಾಗಲಿದೆ. ಈಗಾಗಲೇ ಈ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದು, ವಿಶೇಷವಾಗಿ ಸರ್ಕಾರಿ ಜಾಲತಾಣಗಳಲ್ಲಿ ಕನ್ನಡದ ಯುಆರ್‌ಎಲ್ ಹಾಗೂ ಕನ್ನಡದಲ್ಲೇ ಮಿಂಚಂಚೆ ವಿಳಾಸಗಳನ್ನೂ ಬಳಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ.

ಈಗ ಸುದರ್ಶನರು ತಮ್ಮ ಬ್ಲಾಗನ್ನು ‘ಬೇಳೂರುಸುದರ್ಶನ.ಭಾರತ‘ ಅಂತ ಸಂಪೂರ್ಣವಾಗಿ ಕನ್ನಡಕ್ಕೆ ಪರಿವರ್ತಿಸಿಕೊಂಡಿದ್ದಾರೆ. ‘ಪ್ರಜಾವಾಣಿ.ಭಾರತ‘, ಡಾ.ಪವನಜರ ‘ವಿಶ್ವಕನ್ನಡ.ಭಾರತ‘ ಹಾಗೂ ‘ಅವಿನಾಶ.ಭಾರತ‘ ಕನ್ನಡ ಡೊಮೇನ್‌ಗಳನ್ನು ಆಯಾ ತಾಣಗಳಿಗೆ ರೀಡೈರೆಕ್ಟ್ ಮಾಡಲಾಗಿದ್ದು, ಕನ್ನಡದ ಡೊಮೇನ್ ಹೆಸರುಗಳಿರುವ ಮೊದಲ ತಾಣಗಳಿವು. ಕನ್ನಡಿಗರೆಲ್ಲರೂ ಡಾಟ್ ಭಾರತ ಹೆಸರಿನಲ್ಲಿ ತಮ್ಮ ತಮ್ಮ ಹೆಸರಿನ, ಸಂಸ್ಥೆಯ ಜಾಲತಾಣಗಳನ್ನು ನೋಂದಾಯಿಸಿಕೊಳ್ಳಬಹುದಾಗಿದೆ.

ವರ್ತಮಾನ ಮತ್ತು ಭವಿಷ್ಯಕ್ಕೆ ಯುನಿಕೋಡ್ ಲಿಪಿಯೇ ಶಿಷ್ಟತೆಯೇ ಆಗಿದ್ದರೂ, ಅಂತರಜಾಲದಲ್ಲಿ ಕನ್ನಡ ಎಂಬ ವಿಷಯ ಬಂದಾಗ ನುಡಿ-ಬರಹ ಎಂಬುದನ್ನೇ ನೆಚ್ಚಿಕೊಂಡ ಸಾಕಷ್ಟು ಮಂದಿ ಈಗಲೂ ಇದ್ದಾರೆ ಎಂಬುದೆಷ್ಟು ನಿಜವೋ, ಸದ್ದಿಲ್ಲದೆಯೇ ಕನ್ನಡದ ಕಾಯಕಕ್ಕೆ ಕೈಜೋಡಿಸಿದ ಅದೆಷ್ಟೋ ಮಂದಿ ತಜ್ಞರು, ತಂತ್ರಜ್ಞರು, ಟೆಕೀ ಯುವಮನಸುಗಳಿಂದಾಗಿ ಈಗ ಅಂತರಜಾಲದಲ್ಲಿ ಕನ್ನಡ ಸಾಕಷ್ಟು ಮುಂದುವರಿದಿದೆ ಎಂಬುದೂ ಅಷ್ಟೇ ದಿಟ. ಅಂತರಜಾಲದಲ್ಲಿ ಕನ್ನಡ ಸಮೃದ್ಧವಾಗಬೇಕಿದ್ದರೆ, ಬೇರೆ ಫಾಂಟ್ ಅಥವಾ ಇಂಗ್ಲಿಷಿನಲ್ಲಿ ಕನ್ನಡ (ಕಂಗ್ಲಿಷ್) ಬರೆಯುವುದನ್ನು ಬಿಟ್ಟು, ನೇರವಾಗಿ ಯುನಿಕೋಡ್‌ನಲ್ಲಿ ಟೈಪ್ ಮಾಡಲು ಸಾಕಷ್ಟು ಸುಲಭವಾದ ಪರಿಕರಗಳಿರುವುದರಿಂದ, ಅದನ್ನು ಅಭ್ಯಾಸ ಮಾಡಿಕೊಳ್ಳಬೇಕಿದೆ.

My exclusive story published in Prajavani on 19 Jul 2020

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Recent Posts

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

1 week ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

1 month ago

ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

7 months ago

ಮುದ್ದಣನ ಕುಮಾರ ವಿಜಯ, ರತ್ನಾವತಿ ಕಲ್ಯಾಣ ಯಕ್ಷಗಾನ ಧ್ವನಿಮುದ್ರಿಕೆ

ಮುದ್ದಣನ ಕುಮಾರ ವಿಜಯದ ಸುಮಾರು 700ರಷ್ಟಿರುವ ಹಾಡುಗಳನ್ನು ಹಾಡಿದ್ದು ತೆಂಕು ತಿಟ್ಟಿನ ಬಲಿಪ ಶೈಲಿಯ ಪ್ರತಿಪಾದಕ ಭಾಗವತರೇ. ಏಳೆಂಟು ವರ್ಷಗಳ…

7 months ago

ಒಂದೇ ಫೋನ್‌ನಲ್ಲಿ ಎರಡು WhatsApp ಖಾತೆ ಬಳಸುವುದು ಹೇಗೆ?

ಕಳೆದ ಅಕ್ಟೋಬರ್ 19ರಂದು ಮೆಟಾ ಒಡೆತನದ WhatsApp ಸಂಸ್ಥೆಯೇ ತನ್ನ ಆ್ಯಪ್‌ಗೆ ಹೊಸ ಅಪ್‌ಡೇಟ್ ನೀಡಿದ್ದು, ಎರಡು ವಾಟ್ಸ್ಆ್ಯಪ್ ಖಾತೆಗಳನ್ನು…

9 months ago

AI Images: Text ಬಳಸಿ ಚಿತ್ರ ತಯಾರಿಸುವುದು ಹೇಗೆ?

AI Images: ನಮ್ಮ ಕಲ್ಪನೆಯನ್ನು ಎಐ ಎಂಜಿನ್‌ಗೆ ಟೆಕ್ಸ್ಟ್ (ಪಠ್ಯ) ಮೂಲಕ ಊಡಿಸಿದರೆ ಸಾಕು, ಕ್ಷಣ ಮಾತ್ರದಲ್ಲಿ ನೀವಂದುಕೊಂಡ ಚಿತ್ರವೊಂದು…

9 months ago