“ಕ್ರಿಕೆಟ್ ಬಗ್ಗೆ ನಂಗೇನೂ ಗೊತ್ತಿಲ್ಲ. ಆದರೂ ಸಚಿನ್ ಹೇಗೆ ಆಟವಾಡ್ತಾನೆ ಅಂತ ನೋಡೋಕೋಸ್ಕರವಾದರೂ ಕ್ರಿಕೆಟ್ ನೋಡುತ್ತೇನೆ. ಹಾಗಂತ ಸಚಿನ್ ಆಟವೆಂದ್ರೆ ನಂಗೆ ಇಷ್ಟ ಎಂದೇನಲ್ಲ. ಆದ್ರೆ ಅವನು ಆಡ್ತಿರೋವಾಗ ನನ್ನ ದೇಶದ ಉತ್ಪಾದನೆಯು ಶೇ.5ರಷ್ಟು ಕುಸಿತ ಕಾಣುತ್ತಿರುವುದೇಕೆ ಎಂಬುದಕ್ಕೆ ಕಾರಣ ಪತ್ತೆ ಹಚ್ಚುವುದೇ ನನ್ನ ಉದ್ದೇಶ”
ಹೀಗಂತ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಹೇಳಿದ್ದಾರೆಂಬ ಕುರಿತಾಗಿ ಎಸ್ಎಂಎಸ್‌ಗಳು ಹರಿದಾಡತೊಡಗಿದಾಗ ‘ಹೌದಲ್ಲ?’ ಅನ್ನಿಸದಿರದು.
ಯಾವುದೇ ಸುದ್ದಿ ಟಿವಿ ಚಾನೆಲ್ ನೋಡಿದರೂ, ಯಾವುದೇ ಪತ್ರಿಕೆ ತೆರೆದರೂ, ಯಾವುದೇ ಇಂಟರ್ನೆಟ್ ಸೈಟು ತೆರೆದು ನೋಡಿದರೂ, ಬ್ಯಾಟು ಬಾಲುಗಳು, ಗಂಡು-ಹೆಣ್ಣುಗಳೆಂಬ ಭೇದವಿಲ್ಲದೆ ಹಸಿರು ಅಥವಾ ನೀಲಿ ಬಣ್ಣದ ಡ್ರೆಸ್ (ಜರ್ಸಿ) ಧರಿಸಿದವರು, ಮೊಹಾಲಿ ಸ್ಟೇಡಿಯಂ, ಭಾರತ-ಪಾಕಿಸ್ತಾನ, ಕದನ- ಸಮರ -ರಣ ಕಹಳೆ, ರಣಾಂಗಣ, ಹೋರಾಟ, ಯುದ್ಧ ಎಂಬಿತ್ಯಾದಿ ಪದಗಳ ಹೈಪ್‌ಗಳೇ ತುಂಬಿ ತುಳುಕಾಡುತ್ತಿವೆ. ದೇಶಕ್ಕೆ ದೇಶವೇ ಕ್ರಿಕೆಟ್ ಜ್ವರದಿಂದ ನರಳತೊಡಗಿದೆ. ಈ ಏರಿದ ಜ್ವರ ಇಳಿಯುವುದು ಬುಧವಾರ ರಾತ್ರಿಯೇ.
ಮಥುರಾದ ಯಮುನಾ ತಟದಲ್ಲಿ ಸಾಧು ಸಂತರಿಂದ ವಿಶೇಷ ಪೂಜೆ, ಅಭಿಮಾನಿಗಳಿಂದ ಅಲ್ಲಲ್ಲಿ ಹೋಮ ಹವನಾದಿಗಳು, ಪೂಜೆ-ಪ್ರಾರ್ಥನೆಗಳು, ಕ್ರಿಕೆಟ್ ಪ್ರಿಯರಿಂದ ಮೆರವಣಿಗೆಗಳು, ವಿಶ್ವಕಪ್ ಪ್ರತಿಕೃತಿ ರಚಿಸಿ ಪೂಜೆ, ತ್ರಿವರ್ಣ ಧ್ವಜಗಳ ಹಾರಾಟ… ಇವೆಲ್ಲವನ್ನೂ ನೋಡುತ್ತಿದ್ದರೆ, ಬಹುಶಃ ನಮ್ಮ ದೇಶದ ಸ್ವಾತಂತ್ರ್ಯ ದಿನವನ್ನು ಆಚರಿಸಲು ಯಾರು ಕೂಡ ಇಷ್ಟೊಂದು ಸಂಭ್ರಮ ಪಟ್ಟಿರಲಿಕ್ಕಿಲ್ಲ, ಉತ್ಸುಕತೆ ತೋರಿರಲಿಕ್ಕಿಲ್ಲ.
ಅತ್ತ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಕೂಡ ಕ್ರಿಕೆಟ್ ಜ್ವರ ಪೀಡಿತರೇ ಆಗಿದ್ದಾರೆ. ಅವರು ಪಾಕಿಸ್ತಾನಿ ಪ್ರಧಾನಿಯನ್ನು, ಅಧ್ಯಕ್ಷರನ್ನೆಲ್ಲಾ ಆಹ್ವಾನಿಸಿ, ಏನೂ ಆಗುವುದಿಲ್ಲ ಎಂದು ಗೊತ್ತಿದ್ದೂ, ‘ಕ್ರಿಕೆಟ್ ಡಿಪ್ಲೊಮಸಿ’ಗೆ ಹೊಸ ರಂಗು ನೀಡಿ, ಆ ಹಗರಣ ಈ ಹಗರಣಗಳ ಆರೋಪ-ಪ್ರತ್ಯಾರೋಪಗಳ ದಾಳಿಗಳಿಂದೆಲ್ಲ ಸದ್ಯಕ್ಕೆ ಪಾರಾಗಿಬಿಟ್ಟಿದ್ದಾರೆ.
ಇನ್ನೊಂದೆಡೆ, ಮೊಹಾಲಿ ಕ್ರೀಡಾಂಗಣದ ಸುತ್ತ ಸರ್ಪಗಾವಲು ಎಷ್ಟರ ಮಟ್ಟಿಗಿದೆಯೆಂದರೆ, ಈ ಭದ್ರತಾ ಪಡೆಗಳ ನಡುವೆ ತೂರಿಕೊಂಡು ಕ್ರಿಕೆಟ್ ಸ್ಟೇಡಿಯಂನೊಳಗೆ ಹೋಗಲು ಪ್ರೇಕ್ಷಕರಿಗೆ ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿಯಿದೆ. ಮತ್ತು ಭದ್ರತಾ ವ್ಯವಸ್ಥೆಯ ನಡುವೆ ಪ್ರೇಕ್ಷಕರಿಗೆ ಕಾಲಿಡಲು ಅವಕಾಶ ದೊರೆಯುತ್ತದೋ ಎಂಬ ಆತಂಕವೂ ಇದೆ! ಅದರ ನಡುವೆಯೇ, ದೇಶದ ಮಹಾನ್ ಉದ್ಯಮಿಗಳು, ದೊಡ್ಡ ದೊಡ್ಡ ಹೆಸರು ಮಾಡಿದ ರಾಜಕಾರಣಿಗಳೆಲ್ಲರೂ ಮೊಹಾಲಿಯ ಟಿಕೆಟ್ ಪಡೆದುಕೊಂಡು ಕಾಯ್ದಿರಿಸಿದ್ದಾರೆ. ಹೀಗಾಗಿ ನಿಜವಾದ ಕ್ರಿಕೆಟ್ ಅಭಿಮಾನಿಗಳಿಗೆ ಎಷ್ಟು ದಕ್ಕಿತೋ? ಎಷ್ಟು ಬಿಟ್ಟಿತೋ ಎಂಬುದರ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ.
ಅದೆಲ್ಲಾ ಬಿಡಿ, ಈ ಕ್ರಿಕೆಟಿನ ಟಿಕೆಟುಗಳು ಕಾಳ ಸಂತೆಯಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತಿವೆ. ಇನ್ನೂರೈವತ್ತು ರೂಪಾಯಿಯ ಟಿಕೆಟನ್ನು ಒಂದೂ ಕಾಲು ಲಕ್ಷಕ್ಕೆ ಇ-ಬೇ ಎಂಬ ಹರಾಜು ಅಂತರಜಾಲ ತಾಣದಲ್ಲಿ ಮಾರಿದ ಚಂಡೀಘಡದ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬಾತನನ್ನು ಪೊಲೀಸರು ಬಂಧಿಸಿಯೂ ಆಗಿದೆ. ಮತ್ತೊಂದೆಡೆಯಿಂದ ಸೀದಾ ಸಾದಾ ಆಗಿ ಜಾಹೀರಾತುಗಳ ಹೊಳೆಯೊಂದಿಗೆ ಹಣದ ವಹಿವಾಟೂ ಹೆಚ್ಚಳವಾಗುತ್ತಿದ್ದರೆ, ಮತ್ತೊಂದೆಡೆ ಮುಚ್ಚಿದ ಬಾಗಿಲ ನಡುವೆ ಕಪ್ಪು ಹಣವೂ ಬೆಟ್ಟಿಂಗ್ ರೂಪದಲ್ಲಿ ಸಾಕಷ್ಟು ಚಲಾವಣೆಯಾಗುತ್ತವೆ. ಸಚಿನ್ ಶತಕದ ಶತಕ ದಾಖಲಿಸಿದರೆ ಇಷ್ಟು ಹಣ, ದಾಖಲಿಸದಿದ್ದರೆ ಇಂತಿಷ್ಟು, ಆಟಗಾರ ಇಂತಿಷ್ಟು ಸಿಕ್ಸರ್ ಬಾರಿಸಿದರೆ ಇಷ್ಟು ಹಣ, ಇಷ್ಟು ವಿಕೆಟ್ ಕಿತ್ತರೆ ಇಷ್ಟು ಹಣ… ಅಂತೆಲ್ಲಾ ಹಣದ ಹೊಳೆ ಎಲ್ಲೆಲ್ಲೂ ಹರಿಯುತ್ತಿರುತ್ತದೆ.
ಪರಿಸ್ಥಿತಿ ಎಲ್ಲೀವರೆಗೆ ಬಂದಿದೆಯೆಂದರೆ, ವಿಶ್ವಕಪ್ ಗೆಲ್ಲದಿದ್ದರೂ ಪರವಾಗಿಲ್ಲ, ಪಾಕಿಸ್ತಾನವನ್ನು ಮೊಹಾಲಿಯಲ್ಲಿ ಸೋಲಿಸಿದರೆ ಸಾಕು ಎಂಬ ಅಭಿಮಾನಿಗಳ ಒತ್ತಡವೇ ಭಾರತೀಯ ಕ್ರಿಕೆಟ್ ತಂಡದ ತಲೆಯ ಮೇಲಿನ ಭಾರವನ್ನು ಹೆಚ್ಚಿಸುತ್ತದೆ ಎಂಬುದು ಸರ್ವ ವಿದಿತ. ನಮ್ಮ ತಂಡದ ಬೌಲಿಂಗ್ ಎಷ್ಟು ದುರ್ಬಲವಾಗಿದೆಯೋ, ಅಷ್ಟೇ ದುರ್ಬಲ ಅದರ ಮನಸ್ಥಿತಿ ಕೂಡ. ಒತ್ತಡ ಬಂದ ಸಂದರ್ಭಗಳಲ್ಲೆಲ್ಲಾ ನಮ್ಮವರು ಸುಲಭವಾಗಿ ಸೋತು ಶರಣಾದ ಅದೆಷ್ಟೋ ಸಂದರ್ಭಗಳನ್ನು ನಾವು ಕಂಡಿದ್ದೇವೆ.
ಹೀಗಾಗಿ ಭಾರತ ಮತ್ತು ಪಾಕಿಸ್ತಾನ ತಂಡಗಳ ಉಭಯ ನಾಯಕ ಹೇಳಿಕೆಯನ್ನೊಮ್ಮೆ ಅಭಿಮಾನಿಗಳು ಗಮನಿಸಲೇಬೇಕು. ಈ ಮಹತ್ವದ ಪಂದ್ಯದ ಬಗ್ಗೆ ಕೃತಕವಾಗಿ ಹುಟ್ಟಿಸಲಾಗಿರುವ ಓತಪ್ರೋತವಾದ ಹೈಪ್ ಬಗ್ಗೆ ಗಮನವನ್ನೇ ಕೊಡಬೇಡಿ ಎಂದು ಮಹೇಂದ್ರ ಸಿಂಗ್ ಧೋನಿ ತಮ್ಮ ತಂಡದ ಸದಸ್ಯರಿಗೆ ಹೇಳಿದ್ದಾರೆ. ಅತ್ತ ಅಫ್ರಿದಿಯಂತೂ, ಭಾರತೀಯ ಮಾಧ್ಯಮಗಳ ವಿರುದ್ಧ ಕೆಂಡ ಕಾರಿದ್ದಾರೆ. ‘ಭಾರತಕ್ಕೆ ಬೆಂಬಲಿಸುವ ಭರದಲ್ಲಿ ಪಾಕಿಸ್ತಾನ ತಂಡದ ಬಗ್ಗೆ ಬರೇ ನೆಗೆಟಿವ್ ಅಂಶಗಳನ್ನೇ ಬಿಂಬಿಸುತ್ತೀರಿ ನೀವು. ನಾವಂತೂ ಮೈದಾನ ಬಿಟ್ಟರೆ, ಡ್ರೆಸಿಂಗ್ ರೂಂ, ಇದಕ್ಕೇ ಅಂಟಿಕೊಂಡಿರುತ್ತೇವೆ. ನೀವೇನು ಮಾಡ್ತೀರೋ, ಇವೆಲ್ಲಕ್ಕೂ ನಾವು ನಮ್ಮ ಆಟದ ಮೂಲಕವೇ ಉತ್ತರ ಕೊಡ್ತೀವಿ’ ಎಂದು ಗುಡುಗಿದ್ದಾರೆ ಅವರು.
ಮೊದಲೇ ಹೇಳಿದಂತೆ, ಬುಧವಾರವಂತೂ ಖಂಡಿತಾ ನಮ್ಮ ದೇಶದ ಉತ್ಪಾದನೆ ಕುಸಿಯುತ್ತದೆ. ಮಧ್ಯಾಹ್ನ 2 ಗಂಟೆಯ ನಂತರ ಬಹುತೇಕ ಯಂತ್ರಗಳು ತಟಸ್ಥಗೊಳ್ಳುತ್ತವೆ, ಕಂಪ್ಯೂಟರ್ ಕೀಲಿಮಣೆಗಳಿಗೆ ವಿಶ್ರಾಂತಿ ದೊರೆಯುತ್ತದೆ, ಹೊರಗೆ ಜನ ಸಂಚಾರ ಕಡಿಮೆಯಾಗುತ್ತದೆ, ಇಂಟರ್ನೆಟ್ ಜಾಲಾಡುವವರ ಸಂಖ್ಯೆ ಕಡಿಮೆಯಾಗುತ್ತದೆ, ಚಾಟ್ ಮಾಡುವವರ ಸಂಖ್ಯೆಯಂತೂ ಗಣನೀಯವಾಗಿ ತಗ್ಗುತ್ತದೆ. ಆದರೆ, ಟೀವಿ ಜೊತೆ ಫ್ಯಾನ್ ಕೂಡ ಓಡುತ್ತಾ ಇರುತ್ತದೆ, ಇದರಿಂದ ವಿದ್ಯುತ್ ಬಳಕೆ ಹೆಚ್ಚಾಗುತ್ತದೆ. Obviously ಉತ್ಪಾದಕತೆ ಕುಸಿಯುತ್ತದೆ.
ಹಾಗಂತ, ಈ ರೀತಿಯ ಹೈಪ್ ಬೇಕಿತ್ತೇ ಎಂಬ ಪ್ರಶ್ನೆಯ ನಡುವೆ, ಯಾಕೆ ಬೇಡ, ತಪ್ಪೇನು ಅಂತಲೂ ಕೇಳುತ್ತೀರಿ ನೀವು. ದಿನಾ ಅದೇ ಜಂಜಾಟಗಳು, ಕೆಲಸದೊತ್ತಡಗಳ ನಡುವೆ, ಹಲವು ವರ್ಷಗಳಿಗೊಮ್ಮೆ ಸಿಗುವ ಈ ರೀತಿಯ ಸೆಣಸಾಟವನ್ನು ಎಂಜಾಯ್ ಮಾಡೋಣ ಎಂಬ ಭಾವನೆ ಈ ಅವಸರದ ಯುಗದಲ್ಲಿ ಅವಶ್ಯ, ಇದರಿಂದ ಮನಸ್ಸುಗಳು ಪ್ರಫುಲ್ಲಿತವಾಗುತ್ತವೆ, ಒಂದಿಷ್ಟು ನಿರಾಳತೆ ಅನುಭವಿಸಿ, ಹಿಂದಿನ ದಿನ ಸ್ಥಗಿತಗೊಂಡ ಉತ್ಪಾದಕತೆಯನ್ನು ಮರುದಿನ ಅತ್ಯದ್ಭುತ ಉತ್ಸಾಹದಿಂದ ಸರಿದೂಗಿಸುವ ಅಥವಾ ಹೆಚ್ಚಿಸುವ ಪ್ರಯತ್ನಗಳೂ ನಡೆಯುತ್ತವೆ ಎಂಬುದನ್ನು ಕೂಡ ತಳ್ಳಿ ಹಾಕಲಾಗದು.
ಹಾಗಂತ ನಾವು ಮಾತ್ರವೇ? ಖಂಡಿತಾ ಇಲ್ಲ. ಪಾಕಿಸ್ತಾನದಲ್ಲಿಯೂ ಪರಿಸ್ಥಿತಿ ಭಾರತದಂತೆಯೇ ಇದೆ. ನಮ್ಮಲ್ಲೂ ಈಗಲೇ ಕೆಲವರು ಬುಧವಾರದ ಕೆಲಸವನ್ನು ಅರ್ಧಕ್ಕರ್ಧ ಮುಗಿಸಿ ಕೂತಿಲ್ಲವೇ? ಮತ್ತೆ ಕೆಲವರಿಗೆ ಈಗಲೇ ತಲೆನೋವು, ಹೊಟ್ಟೆನೋವು, ಜ್ವರ ಇತ್ಯಾದಿ ಬರುವ ಲಕ್ಷಣಗಳೂ ಕಾಣಿಸತೊಡಗಿಲ್ಲವೇ? ಇಡೀ ದೇಶದ ಗಮನವು ಮೊಹಾಲಿ ಸ್ಟೇಡಿಯಂನತ್ತ ನೆಟ್ಟಿದ್ದರೆ, ನಾಳೆ ಮಧ್ಯಾಹ್ನಾನಂತರ ಎಲ್ಲ ಯಂತ್ರಗಳು ಸ್ಥಗಿತಗೊಳ್ಳುವುದು ಸುಳ್ಳೇ? ಹಾಗಿದ್ದರೆ ಹೇಳಿ, ವಿಶ್ವಕಪ್ ಸೆಮಿಫೈನಲ್ ಪಂದ್ಯಕ್ಕೆ ನಿಮ್ಮ ಸಿದ್ಧತೆಗಳೇನು?
[ವೆಬ್‌ದುನಿಯಾಕ್ಕಾಗಿ]
iPhone 16e joins the iPhone 16 lineup, featuring the fast performance of the A18 chip,…
ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
View Comments
ನಾವು ರೆಡಿ...
ಹಹಹ ಶಿವು,
ಕಾಮೆಂಟಿಗೆ ಥ್ಯಾಂಕ್ಸ್... (ತಡವಾಗಿದ್ದಕ್ಕೆ ಕ್ಷಮೆ ಇರ್ಲಿ.)