ಒಂದೇ ಫೋನ್‌ನಲ್ಲಿ ಎರಡು WhatsApp ಖಾತೆ ಬಳಸುವುದು ಹೇಗೆ?

ಅವಳಿ ಸಿಮ್ ಕಾರ್ಡ್ ಬೆಂಬಲಿಸುವ ಫೋನ್‌ಗಳ ಈ ಕಾಲದಲ್ಲಿ ಬಹುತೇಕರು ಇಂದು ಎರಡೆರಡು ಮೊಬೈಲ್ ಫೋನ್ ನಂಬರ್‌ಗಳನ್ನು (ಸಿಮ್ ಕಾರ್ಡ್) ಹೊಂದಿರುತ್ತಾರೆ. ಒಂದನ್ನು ಕಚೇರಿ ಅಥವಾ ಉದ್ಯಮಕ್ಕೆ ಸಂಬಂಧಿಸಿದಂತೆಯೂ, ಮತ್ತೊಂದನ್ನು ವೈಯಕ್ತಿಕ ಬಳಕೆಗೂ ಉಪಯೋಗಿಸುವುದು ಸಾಮಾನ್ಯ. ಅದಕ್ಕೆ ತಕ್ಕಂತೆ ಕೆಲವರಿಗೆ ಎರಡೆರಡು WhatsApp ಖಾತೆಗಳನ್ನು ತೆರೆಯುವುದು ಅನಿವಾರ್ಯ. ಎರಡನ್ನೂ ನಿಭಾಯಿಸಬೇಕಿದ್ದರೆ ಇದುವರೆಗೆ ಸಾಕಷ್ಟು ಕಸರತ್ತು ಮಾಡಬೇಕಾಗುತ್ತಿತ್ತು ಅಥವಾ ಎರಡೆರಡು ಫೋನ್‌ಗಳಲ್ಲೇ ಒಯ್ಯಬೇಕಾಗುತ್ತಿತ್ತು.

ಆದರೆ, ಕಳೆದ ಅಕ್ಟೋಬರ್ 19ರಂದು ಮೆಟಾ ಒಡೆತನದ ವಾಟ್ಸ್ಆ್ಯಪ್ ಸಂಸ್ಥೆಯೇ ತನ್ನ ಆ್ಯಪ್‌ಗೆ ಹೊಸ ಅಪ್‌ಡೇಟ್ ನೀಡಿದ್ದು, ಎರಡು ವಾಟ್ಸ್ಆ್ಯಪ್ ಖಾತೆಗಳನ್ನು ಏಕಕಾಲದಲ್ಲಿ ನಿಭಾಯಿಸಲು ಅನುವು ಮಾಡಿಕೊಟ್ಟಿದೆ. ಅಂದರೆ ಎರಡೂ ಖಾತೆಗಳನ್ನು ಒಂದೇ ಫೋನ್‌ನಲ್ಲಿರುವ ಒಂದೇ ಆ್ಯಪ್‌ನಿಂದ ನಿಭಾಯಿಸಬಹುದು. ಅದು ಹೇಗೆ ಮತ್ತು ಇದರ ಬದಲಾಗಿ ಇರುವ ಬೇರೆ ಆಯ್ಕೆಗಳೇನು ಎಂಬ ಮಾಹಿತಿ ಇಲ್ಲಿದೆ.

ಒಂದೇ ಆ್ಯಪ್, ಎರಡು ಖಾತೆ: ಬಳಸುವುದು ಹೇಗೆ
ಈ ವ್ಯವಸ್ಥೆ ಈಗಾಗಲೇ ಇನ್‌ಸ್ಟಾಗ್ರಾಂ ಹಾಗೂ ಎಕ್ಸ್‌ನಲ್ಲಿ (ಹಿಂದಿನ ಟ್ವಿಟರ್ನಲ್ಲಿ) ಇದೆ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಖಾತೆ ಬದಲಾಯಿಸಿಕೊಳ್ಳುವ (Switch Accounts) ಒಂದು ಬಟನ್ ಒತ್ತಿದರೆ, ಯಾವ ಖಾತೆಗೆ ಬೇಕೋ, ಅದನ್ನು ಬಳಸಬಹುದು.

  • ವಾಟ್ಸ್ಆ್ಯಪ್ ಇತ್ತೀಚಿನ ಆವೃತ್ತಿಗೆ ಅಪ್‌ಡೇಟ್ ಆಗಿರುವಂತೆ ನೋಡಿಕೊಳ್ಳಿ
  • ಫೋನ್‌ನಲ್ಲಿ ವಾಟ್ಸ್ಆ್ಯಪ್ ತೆರೆಯಿರಿ
  • ಬಲ ಮೇಲ್ಭಾಗದಲ್ಲಿ ಮೂರು ಲಂಬ ಚುಕ್ಕಿಗಳಿರುವಲ್ಲಿ ಒತ್ತಿ ಸೆಟ್ಟಿಂಗ್ಸ್ ತೆರೆಯಿರಿ
  • ಸ್ವಲ್ಪ ಕೆಳಗೆ ನೋಡಿದಾಗ ಕಾಣಿಸುವ ‘ಅಕೌಂಟ್ಸ್’ ಒತ್ತಿ
  • ‘Add Account’ ಕ್ಲಿಕ್ ಮಾಡಿ, ಮುಂದಿನ ಬಟನ್‌ನಲ್ಲಿ ಅನುಮತಿ ನೀಡಿ.
  • ನಂತರ ನಿಮ್ಮ ಫೋನ್ ನಂಬರ್ ನಮೂದಿಸಿ, ‘ನೆಕ್ಸ್ಟ್’ ಒತ್ತಿ
  • ಸ್ಕ್ರೀನ್ ಮೇಲೆ ಮುಂದಿನ ಸೂಚನೆಗಳನ್ನು ಅನುಸರಿಸಿ

ಬೇರೊಂದು ಖಾತೆಯ ಸಂದೇಶಗಳನ್ನು ನೋಡುವುದು ಹೇಗೆ?
ಸಂದೇಶ ಬಂದಾಗ ಯಾವ ಸಂಖ್ಯೆಗೆ ಸಂದೇಶ ಬಂತು ಎಂಬುದನ್ನು ನೋಟಿಫಿಕೇಶನ್‌ನಲ್ಲೇ ಆ್ಯಪ್ ತೋರಿಸುತ್ತದೆ. ಆದರೆ ಎರಡೂ ವಾಟ್ಸ್ಆ್ಯಪ್ ಖಾತೆಗಳಿಗೆ ನೀವು ನೋಟಿಫಿಕೇಶನ್ ಧ್ವನಿಯನ್ನು ಬೇರೆ ಬೇರೆ ಹೊಂದಿಸಿಟ್ಟರೆ, ಯಾವುದರಿಂದ ಸಂದೇಶ ಬಂತು ಎಂಬುದನ್ನು ಫೋನ್ ನೋಡದೆಯೇ ತಿಳಿಯುವುದು ಸಾಧ್ಯ. ನೋಟಿಫಿಕೇಶನ್ ಸ್ಪರ್ಶಿಸಿದ ತಕ್ಷಣ ನೀವು ಆಯಾ ಖಾತೆಯ ವಾಟ್ಸ್ಆ್ಯಪ್‌ಗೇ ನೇರವಾಗಿ ಹೋಗಬಹುದು. ಇಲ್ಲವೆಂದಾದರೆ, ಈಗಾಗಲೇ ತೆರೆದಿರುವ ವಾಟ್ಸ್ಆ್ಯಪ್‌ನಲ್ಲಿ ಹಿಂದೆ ಹೇಳಿದಂತೆ ಸೆಟ್ಟಿಂಗ್ಸ್‌ಗೆ ಹೋದರೆ, ಅಲ್ಲೇ ಕೆಳಗೆ ‘Switch Accounts’ ಎಂಬ ಆಯ್ಕೆ ಗೋಚರಿಸುತ್ತದೆ. ಅದನ್ನು ಬಳಸಿ ಮುಂದುವರಿಸಬಹುದು.

ಈ ರೀತಿ ಮಾಡಿದರೆ, ಕೇವಲ ವಾಟ್ಸ್ಆ್ಯಪ್‌ಗಾಗಿ ಎರಡೆರಡು ಮೊಬೈಲ್ ಫೋನ್‌ಗಳನ್ನು ಒಯ್ಯುವ ಅಗತ್ಯವಿರುವುದಿಲ್ಲ.

WhatsApp ಕ್ಲೋನ್ ಅಥವಾ ಟ್ವಿನ್ ಆ್ಯಪ್
ವಾಟ್ಸ್ಆ್ಯಪ್ ಈ ಅವಳಿ ಖಾತೆಯ ಹೊಸ ವೈಶಿಷ್ಟ್ಯ ಪರಿಚಯಿಸುವ ಮುನ್ನವೇ ಸಾಕಷ್ಟು ಮೊಬೈಲ್ ಫೋನ್ ತಯಾರಿಕಾ ಕಂಪನಿಗಳು ಕ್ಲೋನ್, ಡುಪ್ಲಿಕೇಟ್, ಪ್ಯಾರಲಲ್ ಅಥವಾ ಟ್ವಿನ್ – ಇತ್ಯಾದಿ ಹೆಸರುಗಳಲ್ಲಿ (ಫೋನ್ ಬ್ರ್ಯಾಂಡ್‌ಗಳಲ್ಲಿ ಬೇರೆ ಬೇರೆ ಹೆಸರು) ಪ್ರಮುಖ ಸಾಮಾಜಿಕ ಜಾಲತಾಣಗಳ ಮತ್ತೊಂದು ಆ್ಯಪ್ ಅನ್ನು ಅಳವಡಿಸಲು ಅನುಕೂಲ ಕಲ್ಪಿಸಿದ್ದವು. ಅದಕ್ಕೆ ಪ್ರತ್ಯೇಕವಾಗಿ ಆ್ಯಪ್ ಇನ್‌ಸ್ಟಾಲ್ ಆಗುತ್ತಿತ್ತು. ನಿಮ್ಮ ಫೋನ್‌ನಲ್ಲೂ ಇದೆಯೇ ಎಂದು ಸೆಟ್ಟಿಂಗ್ಸ್‌ನಲ್ಲಿರುವ ಸ್ಪೆಶಲ್ ಫಂಕ್ಷನ್, ಯುಟಿಲಿಟಿ, ಹೆಚ್ಚುವರಿ ಫಕ್ಷನ್ – ಮುಂತಾದ ಆಯ್ಕೆಗಳಲ್ಲಿ ಹುಡುಕಿದರೆ ತಿಳಿಯಬಹುದು (ವಿವಿಧ ಫೋನ್ ಕಂಪನಿಗಳಲ್ಲಿ ಒಂದೊಂದು ಹೆಸರಿರಬಹುದು).

ಇದಲ್ಲದೆ, ಒಂದು ವಾಟ್ಸ್ಆ್ಯಪ್ ಖಾತೆಯನ್ನು ಒಂದು ಮೊಬೈಲ್ ಫೋನ್ ಹಾಗೂ ಇತರ ಮೂರು ಸಾಧನಗಳಲ್ಲಿ Web.WhatsApp.com ಮೂಲಕ (ಕಂಪ್ಯೂಟರ್/ಲ್ಯಾಪ್‌ಟಾಪ್) – ಏಕಕಾಲಕ್ಕೆ ನಾಲ್ಕು ಕಡೆ ಬಳಸುವ ಆಯ್ಕೆ ಈಗಾಗಲೇ ಇದೆ. ವಾಟ್ಸ್ಆ್ಯಪ್ ಸೆಟ್ಟಿಂಗ್ಸ್‌ನಲ್ಲಿರುವ Link A Device ಆಯ್ಕೆಯ ಮೂಲಕ ಇದರ ಉಪಯೋಗ ಪಡೆದುಕೊಳ್ಳಬಹುದು.

Tech Tips by Avinash B, published in Prajavani on 20 Dec 2023

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Recent Posts

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

2 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

2 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

3 months ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

4 months ago

ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

9 months ago

ಮುದ್ದಣನ ಕುಮಾರ ವಿಜಯ, ರತ್ನಾವತಿ ಕಲ್ಯಾಣ ಯಕ್ಷಗಾನ ಧ್ವನಿಮುದ್ರಿಕೆ

ಮುದ್ದಣನ ಕುಮಾರ ವಿಜಯದ ಸುಮಾರು 700ರಷ್ಟಿರುವ ಹಾಡುಗಳನ್ನು ಹಾಡಿದ್ದು ತೆಂಕು ತಿಟ್ಟಿನ ಬಲಿಪ ಶೈಲಿಯ ಪ್ರತಿಪಾದಕ ಭಾಗವತರೇ. ಏಳೆಂಟು ವರ್ಷಗಳ…

9 months ago