ಗೂಗಲ್ ಅಸಿಸ್ಟೆಂಟ್: ವೆಬ್ ಪುಟವನ್ನು ಓದುವ ಬದಲು ಕೇಳಿಸಿಕೊಳ್ಳಿ!

ಗೂಗಲ್‌ನ ಓದಿ ಹೇಳುವ ತಂತ್ರಜ್ಞಾನ, ಧ್ವನಿ ಸಹಾಯಕದ ಪ್ರಯೋಜನ ಪಡೆಯಲು ಹೀಗೆ ಮಾಡಿ

ಇತ್ತೀಚೆಗೆ ಬಿಡುಗಡೆಯಾದ ರಿಲಯನ್ಸ್‌ನ ಜಿಯೋಫೋನ್ ನೆಕ್ಸ್ಟ್ ಎಂಬ ಅಗ್ಗದ ಸ್ಮಾರ್ಟ್ ಫೋನ್‌ನಲ್ಲಿ, ಸ್ಕ್ರೀನ್ ಮೇಲಿರುವುದನ್ನು ಓದಿಹೇಳುವ ತಂತ್ರಜ್ಞಾನವೊಂದು ಎಲ್ಲರನ್ನೂ ಆಕರ್ಷಿಸಿದ್ದು ನಿಜ. ಕೇವಲ 2ಜಿಬಿ RAM ಇರುವ ಫೋನ್‌ನಲ್ಲಿ, ಇಂಥದ್ದೊಂದು ತಂತ್ರಾಂಶವನ್ನು ಗೂಗಲ್ ಸಹಯೋಗದಲ್ಲಿ ಜಿಯೋಫೋನ್ ನೆಕ್ಸ್ಟ್‌ನಲ್ಲಿ ಅಳವಡಿಸಲಾಗಿತ್ತು. ಆಂಡ್ರಾಯ್ಡ್‌ನ ಅನ್ಯ ಸ್ಮಾರ್ಟ್ ಫೋನ್‌ಗಳಲ್ಲಾದರೆ, ಗೂಗಲ್ ಅಸಿಸ್ಟೆಂಟ್ ಎಂಬ ಪ್ರತ್ಯೇಕವಾದ ಧ್ವನಿ ಸಹಾಯಕ ತಂತ್ರಾಂಶವಿದೆ. ಆದರೆ ಅದನ್ನು ಸ್ಕ್ರೀನ್ ಓದುವಂತೆ ಮಾಡಬೇಕಿದ್ದರೆ, ಒಂದಿಷ್ಟು ಕಸರತ್ತು ಮಾಡಬೇಕಾಗುತ್ತದೆ.

ಪಠ್ಯವನ್ನು ಓದಿಹೇಳುವ (Text To Speech) ತಂತ್ರಜ್ಞಾನ ಈಗ ಸಾಕಷ್ಟು ಸುಧಾರಣೆಯಾಗಿದೆ. ಜಿಯೋಫೋನ್ ನೆಕ್ಸ್ಟ್‌ನಲ್ಲಿ ಗೂಗಲ್ ಕಂಪನಿಯ ಸಹಯೋಗದಲ್ಲಿಯೇ ಇದನ್ನು ಅಂತರ್‌ನಿರ್ಮಿತವಾಗಿ ಅಳವಡಿಸಲಾಗಿದ್ದರೆ, ಬೇರೆ ಫೋನ್‌ಗಳಿಗೆ ಗೂಗಲ್‌ನ ಈ ಧ್ವನಿ ಸಹಾಯಕ ಉಚಿತ ಆ್ಯಪ್ ಅನ್ನು ನಾವೇ ಅಳವಡಿಸಿಕೊಳ್ಳಬೇಕಾಗುತ್ತದೆ.

ಜಿಯೋಫೋನ್ ನೆಕ್ಸ್ಟ್‌ನಲ್ಲಿ:
ಗೂಗಲ್ ಟೆಕ್ಸ್ಟ್ ಟು ಸ್ಪೀಚ್ ಎಂಜಿನ್ ಅಂತರ್‌ನಿರ್ಮಿತವಾಗಿರುವುದರಿಂದ ಇದರಲ್ಲಿ ಯಾವುದೇ ಸಮಸ್ಯೆಯಿಲ್ಲದೆಯೇ ಸಕ್ರಿಯಗೊಳಿಸಬಹುದು. ಹೇಗೆಂದರೆ, ಬ್ರೌಸರ್‌ನಲ್ಲಿ ಯಾವುದೇ ವೆಬ್ ಪುಟವನ್ನು ತೆರೆದು, “ಇತ್ತೀಚೆಗೆ ಬಳಸಿದ” (Recents) ಆ್ಯಪ್‌ಗಳನ್ನು ತೋರಿಸುವ ಶಾರ್ಟ್‌ಕಟ್ ಬಟನ್ (ಸ್ಕ್ರೀನ್‌ನ ಬಲಭಾಗದಲ್ಲಿರುವ ಚೌಕಾಕಾರದ ಬಟನ್) ಒತ್ತಿದಾಗ ಕಂಡುಬರುವ ಮತ್ತೊಂದು ಸ್ಕ್ರೀನ್‌ನಲ್ಲಿ, ‘Listen’ ಎಂಬುದನ್ನು ಒತ್ತಿದರಾಯಿತು. ಬ್ರೌಸರಿನಲ್ಲಿ ಕಾಣುವುದೆಲ್ಲವನ್ನೂ ಫೋನ್ ಕನ್ನಡದಲ್ಲಿ ಓದಿ ಹೇಳುತ್ತದೆ.

ಉಳಿದ ಆಂಡ್ರಾಯ್ಡ್ ಫೋನ್‌ಗಳಲ್ಲಿ:
ಮೊದಲು ಗೂಗಲ್ ಅಸಿಸ್ಟೆಂಟ್ ಎಂಬ ಆ್ಯಪ್ (ಇಲ್ಲದೇ ಇದ್ದರೆ) ಅಳವಡಿಸಿಕೊಳ್ಳಬೇಕು. ಬಳಿಕ, ಗೂಗಲ್ ಅಸಿಸ್ಟೆಂಟ್ ಸೆಟ್ಟಿಂಗ್ಸ್‌ಗೆ ಹೋಗಿ, ಲ್ಯಾಂಗ್ವೇಜಸ್ ಎಂದಿರುವಲ್ಲಿ, ನಾವು ಮಾತನಾಡಬೇಕಿರುವ ಭಾಷೆಯನ್ನು ಹೊಂದಿಸಿಕೊಳ್ಳಬೇಕು. ಗೂಗಲ್ ಅಸಿಸ್ಟೆಂಟ್ ಆ್ಯಪ್ ತೆರೆಯದೆಯೇ ನೇರವಾಗಿ, ‘ಒಕೆ ಗೂಗಲ್’ ಅಥವಾ ‘ಹೇ ಗೂಗಲ್’ ಹೇಳಿದಾಕ್ಷಣ ಅದು ಸಕ್ರಿಯವಾಗುವಂತೆ ಮೊದಲೇ ಹೊಂದಿಸಿಟ್ಟುಕೊಳ್ಳಬೇಕಾಗುತ್ತದೆ. ಅದಕ್ಕಾಗಿ, ಗೂಗಲ್ ಅಸಿಸ್ಟೆಂಟ್ ಆ್ಯಪ್ ತೆರೆದು, ಅದಕ್ಕೆ ನಮ್ಮ ಧ್ವನಿಯನ್ನು (ವಾಯ್ಸ್ ಮ್ಯಾಚ್) ಸೇರಿಸಬೇಕಾಗುತ್ತದೆ. ಆ್ಯಪ್ ತೆರೆದಾಗ, ಸ್ಕ್ರೀನ್ ಮೇಲಿರುವ ಸೂಚನೆಗಳನ್ನು ಪಾಲಿಸುತ್ತಾ ಹೋದರಾಯಿತು. ಈ ಧ್ವನಿ ಸಹಾಯಕಕ್ಕೆ ನೀವು ಏನು ಬೇಕಾದರೂ ಆದೇಶ ನೀಡಬಹುದು. ಉದಾಹರಣೆಗೆ, Remind me for the meeting, Call Amma, Tell me a joke ಇತ್ಯಾದಿ ಆದೇಶಗಳನ್ನು ಅದು ಪಾಲಿಸುತ್ತದೆ. ಸ್ಮಾರ್ಟ್ ಫೋನ್ ಮುಟ್ಟದೆಯೇ ಹಲವಾರು ಕೆಲಸಗಳನ್ನು ಮಾಡಬಹುದಾಗಿದೆ.

ಕನ್ನಡದಲ್ಲಿ ಕೊಡುವ ಆದೇಶಗಳನ್ನು ಅರ್ಥ ಮಾಡಿಕೊಳ್ಳುವುದು ಗೂಗಲ್‌ಗೆ ಕೊಂಚ ಕಷ್ಟವಾಗುತ್ತದೆ, ಆದರೆ, ಕನ್ನಡ ಪುಟಗಳನ್ನು ಅದು ಚೆನ್ನಾಗಿ ಓದುತ್ತದೆ. ಓದುವಂತೆ ಹೊಂದಿಸಲು, ಸೆಟ್ಟಿಂಗ್ಸ್ ಆ್ಯಪ್‌ನಲ್ಲಿ, ಗೂಗಲ್ (ಸರ್ವಿಸಸ್) ಆಯ್ಕೆ ಮಾಡಿಕೊಂಡು, ಕೆಳಭಾಗದಲ್ಲಿರುವ “Settings For Google Apps” ಎಂಬುದನ್ನು ಒತ್ತಿ, ಅದರಲ್ಲಿ ‘ಸರ್ಚ್, ಅಸಿಸ್ಟೆಂಟ್ ಆ್ಯಂಡ್ ವಾಯ್ಸ್’ ಅಂತ ಇರುವಲ್ಲಿ ‘Voice’ ಆಯ್ಕೆ ಮಾಡಿಕೊಳ್ಳಬೇಕು. ಅದರಲ್ಲಿ ಪ್ರಧಾನ ಭಾಷೆಯಾಗಿ ಇಂಗ್ಲಿಷ್ ಅನ್ನೂ, ಎರಡನೇ ಭಾಷೆಯಾಗಿ ಕನ್ನಡವನ್ನೂ ಆಯ್ಕೆ ಮಾಡಿಕೊಂಡು ಸೇವ್ ಮಾಡಿಕೊಳ್ಳಿ. ಇಂಗ್ಲಿಷ್ ಯಾಕೆ ಎಂದರೆ, ಕನ್ನಡದ ಕಮಾಂಡ್‌ಗಳಿಗಿಂತ (ಆದೇಶ-ಸೂಚನೆ) ಇಂಗ್ಲಿಷನ್ನು ಗೂಗಲ್ ಹೆಚ್ಚು ಚೆನ್ನಾಗಿ ಅರ್ಥ ಮಾಡಿಕೊಳ್ಳಬಹುದಾಗಿದೆ.

ಇದಾದ ಬಳಿಕ, ಬ್ರೌಸರಿನಲ್ಲಿ ಯಾವುದಾದರೂ ವೆಬ್ ಪುಟವನ್ನು ಉದಾಹರಣೆಗೆ, Prajavani.net ತೆರೆದು, ಅದರಲ್ಲಿರುವ ಸುದ್ದಿ/ಲೇಖನವನ್ನು ತೆರೆಯಿರಿ. ನಂತರ ಗೂಗಲ್ ಅಸಿಸ್ಟೆಂಟ್ (ಧ್ವನಿ ಸಹಾಯಕ) ತೆರೆದು, (ಅಥವಾ ಮೊದಲೇ ಹೊಂದಿಸಿಟ್ಟಂತೆ, ‘ಒಕೆ ಗೂಗಲ್’ ಹೇಳಿದ ಬಳಿಕ) Read my screen ಅಂತ ಹೇಳಿದರೆ, ಕನ್ನಡದಲ್ಲೇ ಇಡೀ ವೆಬ್ ಸುದ್ದಿ/ಲೇಖನವನ್ನು ಅದು ನಿಮಗೆ ಓದಿ ಹೇಳುತ್ತದೆ.

ಪ್ರಖರ ಪ್ರಕಾಶವಿರುವ ಸ್ಕ್ರೀನ್‌ನಲ್ಲಿ ಹೆಚ್ಚು ಸಮಯ ಓದುವುದರಿಂದ ಕಣ್ಣುಗಳಿಗೆ ಶ್ರಮ ಎಂದಾದರೆ, ಈ ಓದಿ ಹೇಳುವ ಸಹಾಯಕನ ನೆರವನ್ನು ಬಳಸಿಕೊಳ್ಳಬಹುದು.

My Article Published in Prajavani on 8 Dec 2021

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Recent Posts

ಚಳಿಯಲ್ಲಿ ಬಣ್ಣ ಬದಲಾಯಿಸುವ Realme 14 Pro ಸರಣಿ ಫೋನ್ ಬಿಡುಗಡೆ

ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…

5 days ago

ಎಐ ವೈಶಿಷ್ಟ್ಯಗಳ realme GT 7 Pro ಬಿಡುಗಡೆ: ಬೆಲೆ ಎಷ್ಟು? ವೈಶಿಷ್ಟ್ಯಗಳೇನು? ಇಲ್ಲಿದೆ ಪೂರ್ಣ ಮಾಹಿತಿ

ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್‌ ಇರುವ ಬಹುನಿರೀಕ್ಷಿತ…

2 months ago

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

4 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

4 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

5 months ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

6 months ago