Dual WhatsApp: ಒಂದೇ ಫೋನ್‌ನಲ್ಲಿ ಎರಡು ವಾಟ್ಸ್ಆ್ಯಪ್ ಖಾತೆ ಬಳಸುವುದು ಹೀಗೆ

Dual WhatsApp: ಡ್ಯುಯಲ್ ಅಥವಾ ಅವಳಿ (ಎರಡೆರಡು) ಸಿಮ್ ಕಾರ್ಡ್‌ಗಳನ್ನು ಅಳವಡಿಸುವ ಸ್ಮಾರ್ಟ್‌ಫೋನ್ ಬಂದ ಬಳಿಕ, ಈ ಎರಡೂ ಸಿಮ್ ಕಾರ್ಡ್‌ಗಳ ಪೂರ್ಣ ಪ್ರಯೋಜನ ಪಡೆಯುವ ನಿಟ್ಟಿನಲ್ಲಿ ತಂತ್ರಜ್ಞಾನದ ತುರ್ತು ಅಭಿವೃದ್ಧಿಯ ಫಲವೆಂದರೆ, ಅವಳಿ ಮೆಸೆಂಜರ್‌ಗಳು, ಅವಳಿ ಫೇಸ್‌ಬುಕ್ ಖಾತೆಗಳು, ಅವಳಿ ವಾಟ್ಸ್ಆ್ಯಪ್ ಖಾತೆಗಳನ್ನು ಒಂದೇ ಫೋನ್‌ನಲ್ಲಿ ನಿಭಾಯಿಸುವುದು. ಅಧಿಕೃತವಾಗಿ ಎರಡು ಫೇಸ್‌ಬುಕ್ ಖಾತೆಗಳಿಗೆ, ಎರಡು ವಾಟ್ಸ್ಆ್ಯಪ್ ಖಾತೆಗಳಿಗೆ ಒಂದೇ ಸ್ಮಾರ್ಟ್‌ಫೋನ್‌ನಿಂದ ಏಕಕಾಲಕ್ಕೆ ಲಾಗಿನ್ ಆಗುವುದು ಸಾಧ್ಯವಿಲ್ಲ. ಒಂದು ಫೋನ್‌ನಲ್ಲಿ, ಒಂದು ಸಂಖ್ಯೆಯ ಮೂಲಕವಷ್ಟೇ ಯಾವುದೇ ಖಾತೆಯನ್ನು ದೃಢೀಕರಿಸಬಹುದಾಗಿದೆ. ಹೀಗಾಗಿ ಈ ತಂತ್ರವನ್ನು ಬಳಸಿದರೆ, ಏಕಕಾಲದಲ್ಲಿ ಎರಡು ಖಾತೆಗಳನ್ನು ಒಂದೇ ಫೋನ್‌ನಲ್ಲಿ ಬಳಸಬಹುದಾಗಿದೆ. ಕೆಲವು ಫೋನ್ ತಯಾರಕರು ಈ ವೈಶಿಷ್ಟ್ಯವನ್ನು ಅಳವಡಿಸಿಯೇ ವಿತರಿಸುತ್ತಿದರೆ, ಇನ್ನು ಕೆಲವು ಆ್ಯಪ್‌ಗಳನ್ನು ಬಳಸಿ ಎರಡೆರಡು ಖಾತೆಗಳನ್ನು ಒಂದೇ ಫೋನ್‌ನಲ್ಲಿ ನಿಭಾಯಿಸಬಹುದು. ಪ್ರತ್ಯೇಕ ಆ್ಯಪ್ ಬಳಸುವುದು ಅಷ್ಟೇನೂ ಸುರಕ್ಷಿತವಲ್ಲದ ಕಾರಣ ಅದರ ಬಗ್ಗೆ ಇಲ್ಲಿ ವಿವರಣೆ ನೀಡಲಾಗಿಲ್ಲ.

ಅಂತರ್‌ನಿರ್ಮಿತವಾಗಿಯೇ ಬಂದಿರುವ ಡ್ಯುಯಲ್ ಆ್ಯಪ್ ಬಳಕೆಯ ವೈಶಿಷ್ಟ್ಯವು ಹೆಚ್ಚು ಉಪಯೋಗಕ್ಕೆ ಬರುವುದು ವಾಟ್ಸ್ಆ್ಯಪ್ ಬಳಕೆಯಲ್ಲಿ. ಒಂದು ಸ್ವಂತ ಅಥವಾ ಖಾಸಗಿ ಸಂಪರ್ಕಗಳಿಗಾಗಿ ಖಾತೆ ಹಾಗೂ ಇನ್ನೊಂದು ಫೋನ್ ನಂಬರ್‌ಗೆ ಲಿಂಕ್ ಆಗಿರುವ ವಾಟ್ಸ್ಆ್ಯಪ್ ಖಾತೆಯನ್ನು ಬಿಸಿನೆಸ್ ಅಥವಾ ವ್ಯಾವಹಾರಿಕ ಖಾತೆಯಾಗಿ, ಉತ್ಪನ್ನಗಳು ಇಲ್ಲವೇ ಸೇವೆಗಳ ಪ್ರಚಾರಕ್ಕಾಗಿ ಬಳಸಬಹುದು.

ಮೂಲತಃ ಒಂದು ಫೋನ್ ನಂಬರ್‌ನಿಂದ ಒಂದು ವಾಟ್ಸ್ಆ್ಯಪ್ ಖಾತೆಯನ್ನು ಮಾತ್ರವೇ ನಿಭಾಯಿಸಬಹುದು. ತಯಾರಕರು ನೀಡುವ ವೈಶಿಷ್ಟ್ಯದ ಮೂಲಕ, ಡ್ಯುಯಲ್ (ಎರಡು) ಸಿಮ್ ಕಾರ್ಡ್ ಇರುವವರು ಅವಳಿ ಖಾತೆಗಳನ್ನು ರಚಿಸಲು ಆಂಡ್ರಾಯ್ಡ್ ಫೋನ್‌ಗಳಲ್ಲಿ ಅವಕಾಶವಿದೆ. ಸ್ಯಾಮ್‌ಸಂಗ್, ಒನ್‌ಪ್ಲಸ್, ಒಪ್ಪೊ, ಶಓಮಿ, ಹುವಾವೆ, ವಿವೋ ಹಾಗೂ ರಿಯಲ್‌ಮಿ ಮುಂತಾದ ಇತ್ತೀಚಿನ ಸ್ಮಾರ್ಟ್‌ಫೋನ್‌ಗಳಲ್ಲಿ ಅಂತರ್-ನಿರ್ಮಿತ ವ್ಯವಸ್ಥೆಯಿದೆ. ಸೆಟ್ಟಿಂಗ್ಸ್ ಆ್ಯಪ್‌ನಲ್ಲಿ ‘ಅಡ್ವಾನ್ಸ್‌ಡ್ ಫೀಚರ್ಸ್’ ಎಂಬಲ್ಲಿ ಹೋದರೆ, ‘ಡ್ಯುಯಲ್ ಮೆಸೆಂಜರ್’ ಎಂಬ ಆಯ್ಕೆ ಇದೆ. ಅದನ್ನು ತೆರೆದರೆ, ಫೇಸ್‌ಬುಕ್, ವಾಟ್ಸ್ಆ್ಯಪ್, ಸ್ನ್ಯಾಪ್‌ಚಾಟ್, ಟೆಲಿಗ್ರಾಂ ಹಾಗೂ ಮೆಸೆಂಜರ್ – ಇವುಗಳನ್ನು ಅವಳಿ ಖಾತೆ ಬಳಸುವಂತೆ ಹೊಂದಿಸುವ ಆಯ್ಕೆ ದೊರೆಯುತ್ತದೆ. ಆಯಾ ಆ್ಯಪ್ ಹೆಸರಿನ ಮುಂದಿರುವ ಸ್ಲೈಡರ್ ಅನ್ನು ಬಲಕ್ಕೆ ಸರಿಸಿದರೆ ಅದರ ಎರಡನೇ ಆ್ಯಪ್ ಕ್ರಿಯೇಟ್ ಆಗುತ್ತದೆ. ಮೇಲಿನದು ಸ್ಯಾಮ್‌ಸಂಗ್ ಫೋನ್‌ನ ಸೆಟ್ಟಿಂಗ್ ಆಗಿದ್ದರೆ, ಬೇರೆ ಕೆಲವು ಕಂಪನಿಗಳ ಫೋನ್‌ಗಳಲ್ಲಿ ಇದಕ್ಕೆ ಕ್ಲೋನ್ ಆ್ಯಪ್, ಡ್ಯುಯಲ್ ಆ್ಯಪ್ಸ್ ಅಥವಾ ಬೇರೆ ಸಂಬಂಧಿತ ಹೆಸರು ಇರಬಹುದು ಎಂಬುದು ಗಮನದಲ್ಲಿರಲಿ.

ಹೀಗೆ ಕ್ರಿಯೇಟ್ ಆಗುವ ಎರಡನೇ ಆ್ಯಪ್ ಅನ್ನು ಪ್ರಧಾನ ಆ್ಯಪ್‌ನಿಂದ ಪ್ರತ್ಯೇಕವಾಗಿ ಕಾಣುವಂತೆ ಮಾಡಲು ಆ್ಯಪ್ ಐಕಾನ್ ತುದಿಗೊಂದು ಬೇರೆ ಬಣ್ಣದ ಸೂಚಕವಿರುತ್ತದೆ. ಹೀಗೆ ರಚನೆಯಾದ ಎರಡನೇ ಆ್ಯಪ್‌ಗೆ ಎಂದಿನಂತೆಯೇ ಫೋನ್ ನಂಬರ್ ಬಳಸಿ ಅಥವಾ ಫೇಸ್‌ಬುಕ್ ಬಳಕೆದಾರ ಹೆಸರು – ಪಾಸ್‌ವರ್ಡ್ ಬಳಸಿ ಲಾಗಿನ್ ಆಗಬಹುದು.

ಆದರೆ ಗಮನಿಸಬೇಕಾದ ಅಂಶವೆಂದರೆ, ಇದು ಪ್ರತ್ಯೇಕ ಆ್ಯಪ್ ಇನ್‌ಸ್ಟಾಲ್ ಮಾಡುವುದಲ್ಲ. ಬದಲಾಗಿ ಒಂದು ಆ್ಯಪ್‌ನ ಕ್ಲೋನ್ ಅಥವಾ ತದ್ರೂಪಿಯನ್ನು ಸೃಷ್ಟಿಸುವುದು. ನೀವು ಆ ಆ್ಯಪ್ ಅನ್‌ಇನ್‌ಸ್ಟಾಲ್ ಮಾಡಿದರೆ ಎರಡೂ ಖಾತೆಗಳು ಫೋನ್‌ನಿಂದ ಡಿಲೀಟ್ ಆಗುತ್ತವೆ ಎಂಬುದು ನೆನಪಿಡಬೇಕಾದ ವಿಚಾರ.

ಇನ್‌ಸ್ಟಾಗ್ರಾಂ, ಟೆಲಿಗ್ರಾಂ, ಟ್ವಿಟರ್ ಮುಂತಾದ ಆ್ಯಪ್‌ಗಳಲ್ಲಿ, ಇನ್ನೊಂದು ಖಾತೆಗೆ ಲಾಗಿನ್ ಆಗುವ ಆಯ್ಕೆ ನೀಡಲಾಗಿದೆ. ಆಯಾ ಖಾತೆಗಳನ್ನು ನೋಡಲು ಪ್ರೊಫೈಲ್ ಬದಲಿಸುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ಸಾಕಾಗುತ್ತದೆ.

My article published in Prajavani on 11th Jan 2023

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Recent Posts

ಚಳಿಯಲ್ಲಿ ಬಣ್ಣ ಬದಲಾಯಿಸುವ Realme 14 Pro ಸರಣಿ ಫೋನ್ ಬಿಡುಗಡೆ

ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…

5 days ago

ಎಐ ವೈಶಿಷ್ಟ್ಯಗಳ realme GT 7 Pro ಬಿಡುಗಡೆ: ಬೆಲೆ ಎಷ್ಟು? ವೈಶಿಷ್ಟ್ಯಗಳೇನು? ಇಲ್ಲಿದೆ ಪೂರ್ಣ ಮಾಹಿತಿ

ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್‌ ಇರುವ ಬಹುನಿರೀಕ್ಷಿತ…

2 months ago

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

4 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

4 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

5 months ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

6 months ago