ನಿಮ್ಮ ‘ಸ್ಟೇಟಸ್’ ಹೇಗಿದೆ? ಕೆಲವರಿಗಷ್ಟೇ ಗೋಚರವಾಗುವಂತೆ ಮಾಡಬಹುದು WhatsApp Status

ವಾಟ್ಸ್ಆ್ಯಪ್ ಎಂಬ ಸಂದೇಶ ವಿನಿಮಯ ಕಿರು ತಂತ್ರಾಂಶಕ್ಕೆ ಹೆಚ್ಚಿನವರು ಮಾರು ಹೋಗಿದ್ದೇವೆ. ಸಂದೇಶ ಸಂವಹನಕ್ಕಷ್ಟೇ ಸೀಮಿತವಾಗಿಲ್ಲ ಇದು. ಇದರಲ್ಲಿರುವ ‘ಸ್ಟೇಟಸ್’ ಎಂಬ ವೈಶಿಷ್ಟ್ಯವು ವೈವಿಧ್ಯಮಯ ರೀತಿಯಲ್ಲಿ ಬಳಕೆಯಾಗುತ್ತಿದೆ.

ಏನಿದು ಸ್ಟೇಟಸ್?
ವಾಟ್ಸ್ಆ್ಯಪ್ ತೆರೆದಾಗ, ಚಾಟ್ಸ್, ಸ್ಟೇಟಸ್ ಮತ್ತು ಕಾಲ್ಸ್ ಎಂಬ ಮೂರು ವಿಭಾಗಗಳು ಗೋಚರಿಸುತ್ತವೆ. ಇಲ್ಲಿ ಸ್ಟೇಟಸ್ ಎಂಬುದು ಪ್ರತಿಷ್ಠೆಯ ವಿಷಯ ಅಲ್ಲವೇ ಅಲ್ಲ, ಸ್ಥಾನಮಾನವೂ ಅಲ್ಲ. ವಾಟ್ಸ್ಆ್ಯಪ್‌ನಲ್ಲಿ ನಮ್ಮ ಮನದ ಭಾವನೆಗಳನ್ನು ದಿನದ 24 ಗಂಟೆಗಳ ಕಾಲ ನಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳಲು ಅನುವಾಗುವಂತಹಾ ವೈಶಿಷ್ಟ್ಯವಿದು. ಇಲ್ಲಿ ಪಠ್ಯ, ಚಿತ್ರ ಅಥವಾ ವಿಡಿಯೊ ಮೂಲಕ ಮನದ ಭಾವನೆಗಳನ್ನು ಹಂಚಿಕೊಳ್ಳಬಹುದು. ಈಗಾಗಲೇ ನಮ್ಮ ಗ್ಯಾಲರಿಯಲ್ಲಿ ಸೇವ್ ಆಗಿರುವ ಫೋಟೋ ಆಯ್ದುಕೊಂಡರೆ, ಅದರ ಮೇಲೆ ಪಠ್ಯ ಬರೆಯಬಹುದಾಗಿದೆ. ಸೆಲ್ಫೀ ತೆಗೆದು, ವಿಡಿಯೊ ಮಾಡಿಕೊಂಡು ಕೂಡ ಸ್ಟೇಟಸ್ ಹಂಚಿಕೊಳ್ಳಬಹುದು.

ಭಾವನೆಗಳನ್ನು ವ್ಯಕ್ತಪಡಿಸಲು, ಆತ್ಮೀಯರ ಸಾಧನೆಯನ್ನು ಹೊಗಳಲು, ಬ್ರ್ಯಾಂಡ್ ಅಥವಾ ಏನಾದರೂ ಉತ್ಪನ್ನದ ಜಾಹೀರಾತು ಮಾಡಲು ಕೂಡ ಇದು ಬಳಕೆಯಾಗುತ್ತದೆ. ಅಷ್ಟೇ ಅಲ್ಲ, ಸ್ನೇಹಿತರ ಜೊತೆ ಜಗಳವಾದಾಗ ಅವರಿಗೆ ನಮ್ಮ ಮನದ ನೋವು ಸೂಚ್ಯವಾಗಿ ತಿಳಿಸಲು, ಮನಸ್ಸಿಗಾಗದವರ ಬಗ್ಗೆ ಬೈಗುಳಕ್ಕೂ, ಗಾದೆ ಮಾತಿನ ಮೂಲಕ ತಿವಿಯುವುದಕ್ಕೂ ಬಳಕೆಯಾಗುತ್ತದೆ.

ಇನ್ನು ಕೆಲವರಂತೂ ತುಂಬಾ ಕ್ರಿಯಾಶೀಲರಾಗಿ, ಕವನ, ನಾಲ್ಕು ಸಾಲಿನ ಕಿರುಕಥೆ, ಮಹನೀಯರ ಜಾಣ್ನುಡಿಗಳು, ನಾಣ್ನುಡಿಗಳಿಂದ ತಮ್ಮ ಸ್ಟೇಟಸ್ ಅನ್ನು ಸಿಂಗರಿಸುತ್ತಾರೆ. ಮತ್ತೆ ಕೆಲವರು ಸುಂದರ ದೃಶ್ಯಾವಳಿಯನ್ನೋ, ವಿಡಿಯೊಗಳನ್ನೋ, ಅಚ್ಚರಿ ಮೂಡಿಸುವ ವಿಚಾರಗಳನ್ನೋ ಸ್ಟೇಟಸ್ ಮೂಲಕ ತಮ್ಮ ಸ್ನೇಹಿತರ ವಲಯದ ಜೊತೆ ಹಂಚಿಕೊಳ್ಳುತ್ತಾರೆ. ವಿಡಿಯೊಗೆ 30 ಸೆಕೆಂಡಿನ ಮಿತಿ ಇರುತ್ತದೆ. ಆದರೆ ಹತ್ತು ಹಲವು ಸ್ಟೇಟಸ್ ಅನ್ನು ಏಕಕಾಲದಲ್ಲಿ ನಾವು ಹಾಕಿಕೊಳ್ಳಬಹುದು.

ಆದರೆ, ವಾಟ್ಸ್ಆ್ಯಪ್ ಸ್ಟೇಟಸನ್ನು ಎಲ್ಲರೂ ನೋಡಿಯೇ ನೋಡುತ್ತಾರೆ ಎಂದು ಭಾವಿಸಬೇಕಾಗಿಲ್ಲ. ಹೀಗಾಗಿ ನಾವು ‘ಸ್ಟೇಟಸ್’ ಹಂಚಿಕೊಂಡಾಗ, ಅದು ಯಾರಿಗೆ ತಟ್ಟಬೇಕೋ ಅವರನ್ನು ತಲುಪಿದೆ ಅಂತ ಅಂದುಕೊಳ್ಳಲಾಗದು. ಅನ್ಯ ಕಾರ್ಯವ್ಯಸ್ತತೆಯಿಂದಲೋ, ದಿನದ ಜಂಜಡದಿಂದಲೋ ಅವರು 24 ಗಂಟೆಗಳೊಳಗೆ ನಮ್ಮ ಸ್ಟೇಟಸ್ ಮಿಸ್ ಮಾಡಿಕೊಂಡಿರಲೂಬಹುದು.

ಆದರೆ, ವಾಟ್ಸ್ಆ್ಯಪ್ ಎಂಬುದು ಬಹುತೇಕ ನಮ್ಮ ಸ್ನೇಹಿತರ ಜತೆಗಿನ (ನಮ್ಮ ಸಂಪರ್ಕ ಪಟ್ಟಿಯಲ್ಲಿ ನಾವು ಸೇವ್ ಮಾಡಿಕೊಂಡಿರುವ ಮೊಬೈಲ್ ಸಂಖ್ಯೆಗಳ ಜತೆ ಮತ್ತು ಅವರು ಕೂಡ ವಾಟ್ಸ್ಆ್ಯಪ್ ಬಳಸಿದರೆ ಮಾತ್ರ) ಸಂವಾದಕ್ಕೆ ಬಳಕೆಯಾಗುತ್ತದೆ. ವಾಟ್ಸ್ಆ್ಯಪ್ ಬಳಸದೇ ಇರುವ ಸ್ನೇಹಿತರು ಕೂಡ ಇದ್ದಾರೆ ಎಂಬುದು ನಮ್ಮ ಮನಸ್ಸಿನಲ್ಲಿರಲೇಬೇಕು.

ವಾಟ್ಸ್ಆ್ಯಪ್ ವಿಶೇಷಗಳಲ್ಲೊಂದು ಎಂದರೆ, ನಾವು ಕಳುಹಿಸಿದ ಸಂದೇಶವನ್ನು ಸ್ನೇಹಿತರು ಓದಿದಾಗ ನಮಗೆ ಎರಡು ನೀಲಿ ಟಿಕ್ ಗುರುತುಗಳ ಮೂಲಕ ತಿಳಿಯುತ್ತದೆ. ಅದೇ ರೀತಿ, ನಮ್ಮ ಸ್ಟೇಟಸ್ ಅನ್ನು ಯಾರೆಲ್ಲಾ ನೋಡಿದ್ದಾರೆ, ನಾವು ನೀಡಿದ ಸಂದೇಶ ತಲುಪಬೇಕಾದವರಿಗೆ ತಲುಪಿತೋ ಎಂಬುದನ್ನೂ ನಾವು ಆಗಾಗ್ಗೆ ಇಣುಕಿ ನೋಡುತ್ತಿರಬಹುದು. ಕೆಲವರಿಗೆ ಇದೊಂದು ಸಮಯ ಕೊಲ್ಲುವ ಅಥವಾ ಕಾಲಯಾಪನೆಯ ವಿಷಯವೂ ಹೌದು.

ನಮ್ಮ ವಾಟ್ಸ್ಆ್ಯಪ್ ಸ್ಟೇಟಸ್ ಅನ್ನು ಯಾರು ನೋಡಬಹುದು ಅಂತ ನಾವೇ ನಿರ್ಬಂಧಿಸಬಹುದು ಎಂಬುದು ಬಹುತೇಕರಿಗೆ ತಿಳಿಯದ ಸಂಗತಿ. ಹೇಗೆ ಮಾಡಬಹುದು?

ವಾಟ್ಸ್ಆ್ಯಪ್ ತೆರೆದು, ‘ಸ್ಟೇಟಸ್’ ಎಂಬ ಬಟನ್ ಒತ್ತಿ. ಬಳಿಕ ಬಲ ಮೇಲ್ಭಾಗದಲ್ಲಿರುವ ಮೂರು ಚುಕ್ಕಿಗಳ ಲಂಬ ರೇಖೆಯನ್ನು ಒತ್ತಿದಾಗ, ‘ಸ್ಟೇಟಸ್ ಪ್ರೈವೆಸಿ’ ಎನ್ನುವುದು ಗೋಚರಿಸುತ್ತದೆ. ಅದನ್ನು ಒತ್ತಿದರೆ, ನಿಮ್ಮ ಸ್ಟೇಟಸ್ ಯಾರಿಗೆ ಕಾಣಿಸಬೇಕು ಅಂತ ಹೊಂದಿಸಬಹುದು. ಮೂರು ಆಯ್ಕೆಗಳಿರುತ್ತವೆ. ಅದರ ಅನುಸಾರ ಸ್ಟೇಟಸ್ ಅನ್ನು ಎಲ್ಲರ (My Contacts) ಜೊತೆ ಹಂಚಿಕೊಳ್ಳಬಹುದು, ನಿರ್ದಿಷ್ಟ ವ್ಯಕ್ತಿಗಳನ್ನು ಹೊರತುಪಡಿಸಿ ಉಳಿದೆಲ್ಲರಿಗೆ ಕಾಣಿಸುವಂತೆ ಹೊಂದಿಸಬಹುದು ಮತ್ತು ಕೇವಲ ನಿರ್ದಿಷ್ಟ ವ್ಯಕ್ತಿಗಳಿಗೆ ಕಾಣಿಸುವಂತೆ ಮಾತ್ರವೇ ಹೊಂದಿಸಬಹುದು.

ಆದರೆ, ಗಮನಿಸಬೇಕಾದ ವಿಚಾರವೆಂದರೆ, ಒಂದು ಬಾರಿ ಸ್ಟೇಟಸ್ ಹಂಚಿಕೊಂಡ ಬಳಿಕ ಈ ಸೆಟ್ಟಿಂಗ್ ಬದಲಾವಣೆ ಮಾಡಿದರೆ ಅನ್ವಯವಾಗುವುದಿಲ್ಲ. ಕಳುಹಿಸುವ ಮೊದಲೇ ಇದನ್ನು ಹೊಂದಿಸಿರಬೇಕಾಗುತ್ತದೆ.

ಬೇರೆಯವರ ಸ್ಟೇಟಸ್ ಅನ್ನು ನಾವು ಡೌನ್‌ಲೋಡ್ ಮಾಡಿಕೊಳ್ಳಲು ವಾಟ್ಸ್ಆ್ಯಪ್ ಅನುಮತಿ ನೀಡುವುದಿಲ್ಲ. ಕಾರಣವೆಂದರೆ, ವ್ಯಕ್ತಿಯ ಖಾಸಗಿತನ ಅಥವಾ ಪ್ರೈವೆಸಿಯ ರಕ್ಷಣೆಗಾಗಿ. ಆದರೆ, ಬೇರೆಯವರ ಸ್ಟೇಟಸ್ ಚೆನ್ನಾಗಿದೆ, ನಾವೂ ಹಂಚಿಕೊಳ್ಳೋಣ ಅಂತ ನಿರ್ಧರಿಸಿದರೆ, ಸ್ಟೇಟಸ್ ಡೌನ್‌ಲೋಡರ್ ಆ್ಯಪ್‌ಗಳು ಸಾಕಷ್ಟು ಸಿಗುತ್ತವೆ. ಇದು ಕಾನೂನುಬದ್ಧವಲ್ಲ ಎಂಬುದನ್ನು ಗಮನಿಸಬೇಕು.

My Article Published in Prajavani on 17/18 Jan 2021

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Recent Posts

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

1 month ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

1 month ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

2 months ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

3 months ago

ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

8 months ago

ಮುದ್ದಣನ ಕುಮಾರ ವಿಜಯ, ರತ್ನಾವತಿ ಕಲ್ಯಾಣ ಯಕ್ಷಗಾನ ಧ್ವನಿಮುದ್ರಿಕೆ

ಮುದ್ದಣನ ಕುಮಾರ ವಿಜಯದ ಸುಮಾರು 700ರಷ್ಟಿರುವ ಹಾಡುಗಳನ್ನು ಹಾಡಿದ್ದು ತೆಂಕು ತಿಟ್ಟಿನ ಬಲಿಪ ಶೈಲಿಯ ಪ್ರತಿಪಾದಕ ಭಾಗವತರೇ. ಏಳೆಂಟು ವರ್ಷಗಳ…

8 months ago