Photo by Lisa on Pexels.com
“ಪರಿಚಿತ ಸ್ನೇಹಿತನೊಬ್ಬನಿಂದ ಇತ್ತೀಚೆಗಷ್ಟೇ ಫೇಸ್‌ಬುಕ್‌ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಬಂತು. ಜೊತೆಗೆ ಇನ್‌ಸ್ಟಾಗ್ರಾಂನಲ್ಲೂ ಫಾಲೋ ಮಾಡಿದ ಸೂಚನೆ ಬಂತು. ಈತ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಸ್ನೇಹಿತರ ಪಟ್ಟಿಯಲ್ಲಿ ಈಗಾಗಲೇ ಇದ್ದಾನೆ ಎಂಬುದು ನೆನಪಿರಲಿಲ್ಲ. ಒಪ್ಪಿಕೊಂಡುಬಿಟ್ಟೆ. ಮರುದಿನವೇ ಮೆಸೆಂಜರ್ ಮೂಲಕ ಮತ್ತು ಇನ್‌ಸ್ಟಾಗ್ರಾಂ ಚಾಟ್ ಮೂಲಕ ‘ಹಾಯ್, ಹೌ ಆರ್ ಯು’ ಎಂಬಿತ್ಯಾದಿ ಕುಶಲೋಪರಿ ವಿಚಾರಣೆ. ಬಳಿಕ, ‘ತುರ್ತಾಗಿ ಸ್ವಲ್ಪ ಹಣ ಬೇಕಿತ್ತು. ಪೇಟಿಎಂ, ಗೂಗಲ್ ಪೇ ಅಥವಾ ಫೋನ್‌ಪೇ ಇದೆಯಾ’ ಅಂತೆಲ್ಲ ಸಹಜವಾಗೆಂಬಂತೆ ಇಂಗ್ಲಿಷಿನಲ್ಲೇ ಕೇಳಿದ.
‘ಯಾವ ಕಾರಣಕ್ಕಾಗಿ’ ಅಂತ ಕನ್ನಡದಲ್ಲಿ ಬರೆದೆ. ತಕ್ಷಣ ಉತ್ತರ ಬಂತು – ನನ್ನ ಮೊಬೈಲಲ್ಲಿ ಬೇರೆ ಭಾಷೆ ಸರಿಯಾಗಿ ಕಾಣಿಸುವುದಿಲ್ಲ, ಇಂಗ್ಲಿಷಲ್ಲೇ ಉತ್ತರಿಸಿ ಅಂತ ಇಂಗ್ಲಿಷಲ್ಲೇ ಮನವಿ ಮಾಡಿಕೊಂಡ. 10 ಸಾವಿರ ರೂ. ಕಳುಹಿಸಿಬಿಟ್ಟಿದ್ದೇನೆ. ಹೇಗೂ ಸ್ನೇಹಿತನಲ್ವಾ, ಯಾವುದೋ ಕಷ್ಟಕ್ಕೆ ಸಿಲುಕಿರಬೇಕು.”
ಈ ರೀತಿಯಾಗಿ ಹಲವರು ಹೇಳಿರುವುದನ್ನು ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಕೇಳಿದ್ದೀರಿ. ದುಡ್ಡು ಕೊಟ್ಟು ಮೋಸ ಹೋದ ಇಂಟರ್ನೆಟ್ ಕಥೆಗಳಿವು. ನಾವು ಎಂತಹಾ ಜಗತ್ತಿನಲ್ಲಿದ್ದೇವೆ, ಅಲ್ಲವೇ?
ಹೌದು. ಇಂಟರ್ನೆಟ್‌ಗೆ ಕಾಲಿಟ್ಟೆವೆಂದರೆ ಅದು ಮುಳ್ಳಿನ ಮೇಲಿನ ನಡಿಗೆಯಂತೆಯೇ. ಎಚ್ಚರ ತಪ್ಪಿದರೆ ಚುಚ್ಚುತ್ತದೆ. ಇದಕ್ಕೆ ಉದಾಹರಣೆಯೇ, ನಮ್ಮನ್ನೇ ಹೋಲುವ, ಅಥವಾ ನಮ್ಮ ಸ್ನೇಹಿತರನ್ನೇ ಹೋಲುವ ಸಾಕಷ್ಟು ನಕಲಿ ಖಾತೆಗಳು ದಿಢೀರ್ ಆಗಿ ಹುಟ್ಟಿಕೊಳ್ಳಲಾರಂಭಿಸಿವೆ. ಹಣ ಮಾಡುವುದಷ್ಟೇ ಈ ವಂಚಕರ ಉದ್ದೇಶ. ನಮ್ಮದೇ ಪ್ರೊಫೈಲಿನಿಂದ ಫೋಟೋಗಳನ್ನು ಕದ್ದು, ತಮ್ಮ ಪ್ರೊಫೈಲಿಗೆ ಹಾಕಿಕೊಳ್ಳುತ್ತಾರೆ. ನಮ್ಮ ಸ್ನೇಹಿತರ ಪಟ್ಟಿ ದೊಡ್ಡದಾಗಿರುವುದರಿಂದ ಅವರು ಈಗಾಗಲೇ ಅದರಲ್ಲಿದ್ದಾರೆಯೇ ಅಂತ ನಾವು ಯೋಚಿಸುವುದೇ ಇಲ್ಲ. ಸ್ನೇಹದ ಕೋರಿಕೆಯನ್ನು ಸ್ವೀಕರಿಸಿಬಿಡುತ್ತೇವೆ.
ಅಲ್ಲದೆ, ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಪ್ರಭಾವವುಳ್ಳವರು ಫ್ರೆಂಡ್ ರಿಕ್ವೆಸ್ಟ್ ಕಳಿಸಿದರೆ ‘ಹೆಮ್ಮೆ’ ಮತ್ತು ‘ಪ್ರತಿಷ್ಠೆ’ಯೂ ಆಗುತ್ತದೆ ಅಲ್ವೇ? ಒಪ್ಪಿಕೊಂಡಿರುತ್ತೇವೆ. ಅಲ್ಲಿಗೆ ಹಣ ಯಾಚಿಸುವ ವಂಚನೆಯ ಜಾಲಕ್ಕೆ ಸಿಲುಕುತ್ತೇವೆ.
ಈ ವಂಚನೆಯ ಟ್ರೆಂಡ್ ಈಗ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಮಾತ್ರವಲ್ಲದೆ ಇಮೇಲ್ ಮೂಲಕವೂ ಹಬ್ಬುತ್ತಿದೆ. ಇದಕ್ಕೆ ಇಂಪರ್ಸೊನೇಶನ್ ಅನ್ನುತ್ತಾರೆ. ಸಾಮಾಜಿಕ ಜಾಲತಾಣಗಳ ಬಗ್ಗೆ ಅಲ್ಪಜ್ಞಾನ ಇರುವವರು, ವಯಸ್ಕರೇ ಈ ವಂಚಕರ ಪ್ರಮುಖ ಟಾರ್ಗೆಟ್. ವಿದ್ಯಾವಂತರೂ ಈ ವಂಚಕರ ಸುಳಿಗೆ ಬಿದ್ದಿದ್ದಾರೆ ಎಂಬುದು ಮತ್ತಷ್ಟು ಆತಂಕಕಾರಿ ಸಂಗತಿ.
ತಕ್ಷಣ ಏನು ಮಾಡಬೇಕು?
ಮೊದಲನೆಯದಾಗಿ, ಫ್ರೆಂಡ್ ರಿಕ್ವೆಸ್ಟ್ ಬಂದಾಗಲೇ ಎಚ್ಚರಿಕೆ ವಹಿಸಲೇಬೇಕು. ಆ ಪ್ರೊಫೈಲಿನಲ್ಲಿ ಕೇವಲ ಒಂದೆರಡು ಪೋಸ್ಟ್‌ಗಳಿರಬಹುದು ಅಥವಾ ಪ್ರೊಫೈಲ್ ಲಾಕ್ ಮಾಡಿರಬಹುದು. ಆಗಲೇ ನಿಮಗೆ ಸಂಶಯ ಮೂಡಬೇಕು. ದುಡ್ಡು ಕೇಳುವಷ್ಟು ಸಲುಗೆ ಹೊಂದಿದವರ ಬಳಿ ನಿಮ್ಮ ಮೊಬೈಲ್ ನಂಬರ್ ಅಂತೂ ಇದ್ದೇ ಇರುತ್ತದೆ ಮತ್ತು ತುರ್ತು ಎಂದಾದರೆ ನೇರವಾಗಿ ನಿಮ್ಮನ್ನು ಸಂಪರ್ಕಿಸಿ ಹಣ ಕೇಳಬಹುದಾಗಿದೆಯಲ್ಲ? ಸೋಷಿಯಲ್ ಮೀಡಿಯಾದಲ್ಲಿ ಕೇಳಿದರೆಂದರೆ ಹಣ ಕೊಡಲೇಬಾರದು. ವಂಚಕರು ಬಹುತೇಕ ಹೊರ ದೇಶ ಅಥವಾ ರಾಜ್ಯದವರಾಗಿರುತ್ತಾರೆಯಾದುದರಿಂದ, ನಮ್ಮದೇ ಭಾಷೆಯಲ್ಲಿ ಮಾತನಾಡುವುದೂ ಅವರನ್ನು ಪತ್ತೆ ಮಾಡುವ ಮತ್ತೊಂದು ವಿಧಾನ.
ಸ್ನೇಹಿತರೇ ಮತ್ತೊಮ್ಮೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಿದ್ದಾರೆಂದರೆ, ಅವರಲ್ಲೇ ಖಚಿತಪಡಿಸಿಕೊಳ್ಳಿ. ಅದು ನಕಲಿ ಖಾತೆಯಾಗಿರಬಹುದು. ನಕಲಿತನ ಖಚಿತವಾದ ಬಳಿಕ, ಆ ವ್ಯಕ್ತಿಯ ಪ್ರೊಫೈಲ್‌ನ ಬಲಭಾಗದಲ್ಲಿರುವ ಮೂರು ಚುಕ್ಕಿಗಳ ಮೆನುವನ್ನು ಆಯ್ಕೆ ಮಾಡಿದಾಗ, Find Support or Report Profile ಎಂಬ ವಿಭಾಗವೊಂದು ಕಾಣಿಸುತ್ತದೆ. ಅಲ್ಲಿಗೆ ಹೋಗಿ ಫೇಸ್‌ಬುಕ್‌ಗೆ ಈ ಬಗ್ಗೆ ದೂರು ಕೊಡಿ.
ನಮ್ಮದೇ ಖಾತೆಯ ನಕಲಿ ಪ್ರೊಫೈಲ್‌ಗಳು ಸೃಷ್ಟಿಯಾದರೂ ಇದೇ ರೀತಿ ದೂರು ಕೊಡಿ ಮತ್ತು ಯಾರೂ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿ ಮೋಸ ಹೋಗದಂತೆ ಎಚ್ಚರಿಕೆ ಸೂಚನೆಯನ್ನು ಪೋಸ್ಟ್ ಮಾಡಿಬಿಡಿ.
ಇನ್‌ಸ್ಟಾಗ್ರಾಂನಲ್ಲೂ ಅದರ help ವಿಭಾಗಕ್ಕೆ ಹೋಗಿ Report an Impersonation Account ಅಂತ ಹುಡುಕಿದಾಗ ಬರುವ ಲಿಂಕ್‌ನಲ್ಲಿ ದೂರು ನೀಡಬಹುದು. ಅಲ್ಲಿ ಪೂರ್ಣ ವಿವರ ನೀಡಿ, ಗುರುತಿನ ದಾಖಲೆಯನ್ನೂ ನೀಡಬೇಕಾಗಬಹುದು. ಇದೇ ರೀತಿ, ಇಮೇಲ್ ಮೂಲಕ ಬರುವ ಕೋರಿಕೆಗಳನ್ನೂ ತಿರಸ್ಕರಿಸಿಬಿಡಿ. ಸ್ನೇಹಿತರು, ಕುಟುಂಬಿಕರೆಂದಾದರೆ ನೇರವಾಗಿ ಸಂಪರ್ಕಿಸಿ, ಸಂದೇಹ ಪರಿಹರಿಸಿಕೊಳ್ಳಿ. ಯಾವುದಕ್ಕೂ ಇರಲಿ ಅಂತ ಸೈಬರ್ ಪೊಲೀಸರಿಗೂ ದೂರು ನೀಡಿ.
ಗಮನದಲ್ಲಿರಲಿ. ಇಂತಹಾ ವಿದ್ಯಮಾನದ ಬಗ್ಗೆ ಕೆಲವರು ‘ನನ್ನ ಖಾತೆ ಹ್ಯಾಕ್ ಆಗಿದೆ’ ಅಂತ ಭಯಬೀಳುತ್ತಾರೆ. ಆತಂಕ ಬೇಡ. ಇವೆಲ್ಲ ನಕಲಿ ಖಾತೆಗಳಷ್ಟೇ. ಆದರೆ, ಆನ್‌ಲೈನ್‌ಗೆ ಬಂದಿರೆಂದಾದರೆ ಪ್ರತಿ ಹೆಜ್ಜೆಯಲ್ಲೂ ಎಚ್ಚರಿಕೆ ಅಗತ್ಯ.
iPhone 16e joins the iPhone 16 lineup, featuring the fast performance of the A18 chip,…
ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…