Categories: myworldOpinion

ಹೆಲನ್ ಆಡಂಸ್ ಕೆಲ್ಲರ್

[ಇದು ಚೆನ್ನೈ ಆಕಾಶವಾಣಿಯವರ ಕೋರಿಕೆ ಮೇರೆಗೆ ಅವಸರದಲ್ಲಿ ಸಂಗ್ರಹಿಸಿ ಬರೆದ ಲೇಖನ. ಆಕಾಶವಾಣಿಯಲ್ಲಿ ಕಾರ್ಯಕ್ರಮ ಕೊಡುವುದು ನನಗೆ ಹೊಸತಾದುದರಿಂದ ಮತ್ತು ಜೂ.27ರಂದು ಹೆಲನ್ ಕೆಲ್ಲರ್ ಜನ್ಮದಿನ, ಅದಕ್ಕಾಗಿ ಒಂದು ಕವನ ಕೊಡಬೇಕು ಎಂದು ಅವರು ಕೇಳಿಕೊಂಡಿದ್ದರು. ಅದು ಭಾನುವಾರ ಜೂ.24ರಂದು ಚೆನ್ನೈ ಬಿ ರೇಡಿಯೋ ಕೇಂದ್ರದಿಂದ ಪ್ರಸಾರವಾಗಿದೆ. ಆಕಾಶವಾಣಿಗಾಗಿ ತಯಾರಿಸಿದ ಒಂದು ಲೇಖನ ಇಲ್ಲಿದೆ. ಕವನ ಮುಂದಿನ ಪೋಸ್ಟ್ ನಲ್ಲಿ!]

1 9 ತಿಂಗಳಿನ ಪುಟ್ಟ ಬಾಲಕಿಯಾಗಿರುವಾಗಲೇ ನಿಗೂಢ ಕಾಯಿಲೆಯೊಂದಕ್ಕೆ ತುತ್ತಾಗಿ ತನ್ನ ವಾಕ್, ದೃಷ್ಟಿ ಮತ್ತು ಶ್ರವಣ ಸಾಮರ್ಥ್ಯ ಕಳೆದುಕೊಂಡರೂ ಜೀವನದಲ್ಲಿ ಮಹಾನ್ ಎತ್ತರಕ್ಕೆ ಏರಿ, “ಸಾಧಿಸಿದರೆ ಸಬಲ ನುಂಗಬಹುದು” ಎಂಬುದನ್ನು ತೋರಿಸಿಕೊಟ್ಟವಳು.

ಅಮೆರಿಕದ ವಾಯುವ್ಯ ಅಲಬಾಮಾದ ಪುಟ್ಟ ಗ್ರಾಮೀಣ ಪ್ರದೇಶ ಟಸ್ಕಂಬಿಯಾ ಎಂಬಲ್ಲಿ 1880 ಜೂನ್ 27ರಂದು ಜನಿಸಿದ ಈಕೆ, ಬಾಯಿ ಬಾರದೆ, ಕಣ್ಣಿಲ್ಲದೆ, ಕಿವಿ ಕೇಳಿಸದೆ ಏರಿದ ಎತ್ತರವನ್ನು “ಪವಾಡ” ಎಂದು ಇಂದಿಗೂ ನಂಬುವವರಿದ್ದಾರೆ. ಅದೊಂದು ದಿನ ಆನ್ನೆ ಸುಲಿವಾನ್ ಎಂಬ ತರಬೇತಿದಾರಳೂ, 49 ವರ್ಷಗಳ ಕಾಲ ಒಡನಾಡಿಯಾಗಿದ್ದ ಆತ್ಮೀಯಳೂ ಆದ ಮಹಿಳೆಯೊಬ್ಬಳು, 7ರ ಹರೆಯದ ಹೆಲನ್ ಕೈಗೆ ನೀರು ಹಾಯಿಸಿ “ಇದು ವಾಟರ್” ಎಂದು ಸ್ಪರ್ಶಜ್ಞಾನದ ಮೂಲಕ ಹೇಳಿಕೊಟ್ಟಂದಿನಿಂದ ಹೆಲನ್ ಹಿಂತಿರುಗಿ ನೋಡಿದ್ದಿಲ್ಲ. ಸ್ಪರ್ಶ ಮಾತ್ರದಿಂದ, ತುಟಿಗಳ ಮತ್ತು ಧ್ವನಿಪೆಟ್ಟಿಗೆಯ ಚಲನೆಯನ್ನು ಮುಟ್ಟಿ ನೋಡುತ್ತಾ ಪ್ರತಿಯೊಂದು ವಸ್ತುಗಳನ್ನು ಗುರುತಿಸುತ್ತಾ, ಅಕ್ಷರ ಕಲಿಯುತ್ತಾ ಹೆಲನ್ ಕೆಲ್ಲರ್ ಎಂಬ ಹುಡುಗಿ, 24ನೇ ವಯಸ್ಸಿಗೆ ಪದವಿ ಶಿಕ್ಷಣ ಪೂರೈಸಿದಾಗ ಪದವಿ ಪಡೆದ ಮೊತ್ತ ಮೊದಲ ವಾಕ್-ದೃಷ್ಟಿ-ಶ್ರವಣಹೀನ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿ ಹೊಸ ಇತಿಹಾಸ ಬರೆದಳು.

ಮಾತು ಆಡುವುದು ಹೆಲನ್‌ಳ ಜೀವಮಾನದ ಕನಸು ಆಗಿತ್ತು. ಆದರದು ಕೊನೆಯವರೆಗೂ ಈಡೇರಲೇ ಇಲ್ಲ. ಆದರೂ ಬ್ರೈಲ್ ಲಿಪಿ ಮತ್ತು ಸಾಮಾನ್ಯ ಟೈಪ್‌ರೈಟರ್ ಎರಡರ ಮೂಲಕವೂ ತನ್ನ ಬರವಣಿಗೆಯ ಲೋಕವನ್ನು ತೆರೆದ ಹೆಲನ್, “ದಿ ಸ್ಟೋರಿ ಆಫ್ ಮೈ ಲೈಫ್” ಎಂಬ ಜೀವನ ಚರಿತ್ರೆಯಿಂದ ಹಿಡಿದು, ಸಮಾಜವಾದದ ಕುರಿತಾಗಿ ಬರೆದ “ಔಟ್ ಆಫ್ ದಿ ಡಾರ್ಕ್”, “ದಿ ವರ್ಲ್ಡ್ ಐ ಲಿವ್ ಇನ್” ಮುಂತಾದ ಪುಸ್ತಕಗಳನ್ನು ಬರೆದು ಹೆಸರು ಗಳಿಸಿದರೆ, ಆನ್ನೆ ಜತೆಗೆ ಸೇರಿಕೊಂಡು ವಿಶ್ವಾದ್ಯಂತ ಪ್ರವಾಸ ಮಾಡಿ ದೃಷ್ಟಿ ಹೀನರಲ್ಲಿ ಬದುಕಿನ ಹೊಸ ಆಶಾವಾದ ಮೂಡಿಸಿದರು. ದೃಷ್ಟಿಮಾಂದ್ಯರ ಒಳಿತಿಗಾಗಿ ನಿಧಿ ಸಂಗ್ರಹಿಸಿದಳು. ಬಾಯಿಬಾರದ ಈಕೆ ಸಂಜ್ಞೆ ಮೂಲಕ ತೋರಿಸುತ್ತಿದ್ದುದನ್ನು ಆನ್ನೆ ಸುಲಿವಾನ್ ಭಾಷಾಂತರಿಸುತ್ತಿದ್ದಳು.

ಈ ಸಾಧಕಿಯ ಕುರಿತು “ಡೆಲಿವರೆನ್ಸ್” ಎಂಬ ಹಾಲಿವುಡ್ ಚಿತ್ರ, ಅಕಾಡೆಮಿ ಪ್ರಶಸ್ತಿ ವಿಜೇತ “ದಿ ಅನ್ ಕಾಂಕರ್ಡ್” ಎಂಬ ಸಾಕ್ಷ್ಯ ಚಿತ್ರ ಹಾಗೂ “ಮಿರಾಕಲ್ ವರ್ಕರ್” ಎಂಬ ನಾಟಕ ನಿರ್ಮಾಣವಾಗಿತ್ತು. ಈ ನಾಟಕ ಎಷ್ಟು ಯಶಸ್ಸು ಗಳಿಸಿತ್ತೆಂದರೆ ಅದು ಹಾಲಿವುಡ್ ಸಿನಿಮಾ ರೂಪ ತಳೆದು, ಅದರಲ್ಲಿ ಹೆಲನ್ ಮತ್ತು ಆನ್ನೆ ಪಾತ್ರಧಾರಿಗಳಿಬ್ಬರೂ ಆಸ್ಕರ್ ಪ್ರಶಸ್ತಿ ಗಳಿಸುವಂತಾದರು. 1964ರಲ್ಲಿ ಹೆಲನ್‌ಗೆ ಅಂದಿನ ಅಧ್ಯಕ್ಷ ಲಿಂಡನ್ ಜಾನ್ಸನ್ ಅವರಿಂದ ಅಮೆರಿಕದ ಅತ್ಯುನ್ನತ ಪೌರ ಪ್ರಶಸ್ತಿಯಾದ ರಾಷ್ಟ್ರಪತಿ ಪುರಸ್ಕಾರ ದೊರೆಯಿತು.

1968ರ ಜೂನ್ 1ರಂದು ಹೆಲೆನ್ ಮಾತು ಆಡುವ ನನಸಾಗದ ಕನಸಿನೊಂದಿಗೆ ನಿದ್ರೆಯಲ್ಲೇ ಚಿರನಿದ್ರೆಗೆ ಜಾರಿದಳು.

ಹೆಲನ್ ನಂತರ ವಿಶ್ವ ಸಾಕಷ್ಟು ಬದಲಾಗಿದೆ. ಅಂಧರು ಕೂಡ ಇಂಟರ್ನೆಟ್ ಬಳಸುವಷ್ಟರ ಮಟ್ಟಿಗೆ ಭರ್ಜರಿ ಆವಿಷ್ಕಾರಗಳೊಂದಿಗೆ ತಂತ್ರಜ್ಞಾನದ ಮೂಲಕ ಏನು ಬೇಕಾದರೂ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದೆ. ಈ ತಂತ್ರಜ್ಞಾನದ ಆವಿಷ್ಕಾರಕ್ಕೆ ಹೆಲನ್ ನೇರವಾಗಿ ಭಾಗಿಯಾಗದಿದ್ದರೂ, ಆನ್ನೆ ಸುಲಿವಾನ್ ಜತೆ ಸೇರಿಕೊಂಡು, ತನ್ನ ಬರಹಗಳು, ತರಬೇತಿ ವಿಧಾನಗಳು, ಉಪನ್ಯಾಸಗಳು, ಜೀವನ ಪದ್ಧತಿಗಳ ಮೂಲಕ ಆಕೆ ಜಗತ್ತಿನ ಕೋಟ್ಯಂತರ ಮಂದಿ ದೃಷ್ಟಿಮಾಂದ್ಯರಿಗೆ, ಶ್ರವಣ ಮಾಂದ್ಯರಿಗೆ ಬೆಳಕು ತೋರಿಸಿಕೊಟ್ಟ ಮಹಾಮಾತೆಯಾಗಿದ್ದಾಳೆ.

ಆಕೆಯದೇ ನುಡಿಯೊಂದಿಗೆ ಈ ನುಡಿ ನಮನಕ್ಕೆ ಕೊನೆ ಹಾಡುತ್ತೇನೆ:

“ಅಂಧರಲ್ಲೂ ಸುಶಿಕ್ಷಿತರಾಗುವ ಮನಸ್ಸು, ತರಬೇತಿ ಪಡೆಯಬಹುದಾದ ಕೈಗಳಿವೆ, ಜೀವನದ ನೈಜತೆ ಅರಿತುಕೊಳ್ಳುವ ಆಕಾಂಕ್ಷೆಗಳಿವೆ. ಅವರು ತಮ್ಮೊಳಗಿನ ಸಾಮರ್ಥ್ಯವನ್ನು ಪೂರ್ಣವಾಗಿ ಬಳಸುವಂತೆ ಮಾಡುವಲ್ಲಿ ಮತ್ತು ಕಾರ್ಯಸಾಧನೆ ಮೂಲಕ ಜೀವನದಲ್ಲಿ ಬೆಳಕು ಕಾಣುವಂತೆ ಮಾಡುವುದು ಜನಸಾಮಾನ್ಯರ ಕರ್ತವ್ಯ”.

[ಆಕಾಶವಾಣಿ ಕಾರ್ಯಕ್ರಮದ ಮೊದಲ ಅನುಭವ, ದಿಢೀರ್ ಕವನವೊಂದರ ರಚನೆಯ ಅನಿವಾರ್ಯತೆಯ ಪ್ರಸಂಗದ ಬಗ್ಗೆ ಮುಂದೆ ಬರೆಯುತ್ತೇನೆ]

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Recent Posts

ಎಐ ವೈಶಿಷ್ಟ್ಯಗಳ realme GT 7 Pro ಬಿಡುಗಡೆ: ಬೆಲೆ ಎಷ್ಟು? ವೈಶಿಷ್ಟ್ಯಗಳೇನು? ಇಲ್ಲಿದೆ ಪೂರ್ಣ ಮಾಹಿತಿ

ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್‌ ಇರುವ ಬಹುನಿರೀಕ್ಷಿತ…

2 weeks ago

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

3 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

3 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

3 months ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

5 months ago

ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

10 months ago