Categories: myworld

ಬನ್ನಿ, ಅವಕಾಶವಾದಿಗಳು, ಸಮಯ ಸಾಧಕರಾಗೋಣ!

ಉದಯ ಗಗನದಲಿ ಅರುಣನ ಛಾಯೆ
ಜಗದ ಜೀವನಕೆ ಚೇತನವೀಯೆ
-ಕುವೆಂಪು

ಹೊಸದೊಂದು ಅರುಣೋದಯವಾಗುತ್ತಿದೆ. 2010ರ ದುಗುಡ ದುಮ್ಮಾನಗಳು ಕಳೆದು 2011 ಹಿಂದಿಗಿಂತ ಚೆನ್ನಾಗಿರಲಪ್ಪಾ, ಕಳೆದುಹೋದ ವರುಷದ ಒಳ್ಳೆಯ ಸಂಗತಿಗಳು ಮುಂದುವರಿಯಲಪ್ಪಾ ಎಂದು ನಾವು ನಂಬಿದ ದೇವರನ್ನು ಪ್ರಾರ್ಥಿಸುತ್ತಲೇ ಹೊಸ ಬೆಳಗು ಆರಂಭಿಸುತ್ತೇವೆ. ಅಂಥದ್ದೊಂದು ಪರ್ವ ಕಾಲದಲ್ಲಿ ಆತ್ಮೀಯ ಕ್ಷಣಗಳನ್ನೋ, ಹಿಂದೆ ಮಾಡಿದ ತಪ್ಪುಗಳು ಮರುಕಳಿಸದಂತಹಾ ‘ಹೊಸ ವರ್ಷದ ಶಪಥ’ಗಳನ್ನೋ ಕೈಗೊಳ್ಳಲು ನಾವೆಲ್ಲಾ ಸಜ್ಜಾಗುತ್ತಿದ್ದೇವೆ.

ಕಾಲ ಬದಲಾಗಿದೆ, ಪೀಳಿಗೆಯ ಅಂತರ ಅದೆಷ್ಟು ಶೀಘ್ರವಾಗಿ ಹೆಚ್ಚಾಗುತ್ತಿದೆಯಲ್ಲಾ? ಮೊನ್ನೆ ಮೊನ್ನೆಯಷ್ಟೇ ಆಟವಾಡುತ್ತಿದ್ದ ಮಗು ಬಂದು, ‘ಅಂಕಲ್… ಈ ರೀತಿ ಮಾಡಬೇಡಿ, ಆಂಟಿ… ಹೀಗೆ ಮಾಡೋದು ತಪ್ಪು’ ಅಂತೆಲ್ಲಾ ವಯಸ್ಸಿನಲ್ಲಿ ಹತ್ತಿಪ್ಪತ್ತು ವರ್ಷ ಹೆಚ್ಚಿರುವ ನಮಗೇ ಹೇಳುತ್ತದೆಯೆಂದಾದರೆ, ಕಾಲದ ಮಹಿಮೆ ಎಷ್ಟರ ಮಟ್ಟಿಗಿದೆ ಎಂಬುದು ಅರಿವಿಗೆ ಬರುತ್ತದೆ.

ಉರುಳುತ್ತಿರುವ ಕಾಲದ ವೇಗಕ್ಕೆ ಮನಸ್ಸಿನ್ನೂ ಹೊಂದಿಕೊಂಡಂತಿಲ್ಲ. ಈಗಷ್ಟೇ 2009 ಕಳೆದಿದ್ದೇವೆ ಎಂಬ ಭಾವನೆ ಮನಸ್ಸಿನಲ್ಲಿದ್ದರೂ, ನಿಜವಾಗಿಯೂ ಸಂದು ಹೋದದ್ದು 2010. 21ನೇ ಶತಮಾನದ ಮೊದಲ ದಶಕ ಕಳೆದಿದೆ ಎಂದರೆ ನಂಬಲಾಗುತ್ತಿಲ್ಲ. ಮೊನ್ನೆ ಮೊನ್ನೆಯಷ್ಟೇ ವೈ2ಕೆ ಎಂಬ ವೈರಸ್ ಬಗ್ಗೆ ಕೇಳಿದವರಲ್ಲವೇ ನಾವು? ಕಾಲ ಯಾರನ್ನೂ ಕಾಯುವುದಿಲ್ಲ. ಮನುಜನಷ್ಟೇ ನಿಧಾನಿಸುವುದು.

ಅಂದು ಯಾವುದೋ ಕಂಪನಿಯಲ್ಲಿ ಗಂಧದ ಕೊರಡಿನಂತೆ ಜೀವ ತೇಯುತ್ತಿದ್ದವರು, ಇಂದು ಬೇರೊಂದು ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದೀರಿ. ಅಂದು ಶಾಲಾ ಕಾಲೇಜುಗಳ ದಿನಗಳನ್ನು ಆನಂದಿಸುತ್ತಿದ್ದವರು ಇಂದು ನಿಜವಾದ ಜೀವನ ಪಾಠ ಕಲಿಯಲು ಬಾಹ್ಯ ಜಗತ್ತಿನ ಶಾಲೆಗೆ ಕಾಲಿರಿಸಿದ್ದೀರಿ. ಅಂಬೆಗಾಲಿಡುತ್ತಿದ್ದ ಮನೆ ಮಗು ಎದ್ದು ನಿಲ್ಲತೊಡಗುತ್ತಾ ಜೀವನ ಯಾನದಲ್ಲಿ ಒಂದೊಂದೇ ಹೆಜ್ಜೆ ಮುಂದೋಡುತ್ತಿದೆ. ಅಂದು ಭಿಕ್ಷಾಧಿಪತಿಗಳಾಗಿದ್ದವರು ಈಗ ಲಕ್ಷಾಧೀಶ್ವರರಾಗಿದ್ದಾರೆ, ಕಸ ಹೊಡೆಯುತ್ತಿದ್ದ ರಾಜಕಾರಣಿಗಳು ಕೋಟ್ಯಂತರ ರೂಪಾಯಿ ಆಸ್ತಿಯ ಒಡೆಯರಾಗಿದ್ದಾರೆ. ಪತ್ರ-ಪ್ರೇಮ ಮತ್ತು ಪತ್ರ-ಕಾಳಜಿಗಳೆಲ್ಲವೂ ಇ-ಮೇಲ್, ಓರ್ಕುಟ್, ಫೇಸ್‌ಬುಕ್, ಟ್ವಿಟರ್‌ಗಳಲ್ಲಿ ಹುದುಗಿ ಹೋಗಿವೆ. ಮಾತುಕತೆಗಳು ಮೊಬೈಲ್, ಎಸ್ಎಂಎಸ್‌ಗಳಿಗೆ ಸೀಮಿತವಾಗಿಬಿಟ್ಟಿವೆ. ಅಂತೂ ಕಾಲ ಸರಿಯುತ್ತಿರುವಂತೆಯೇ ನಮ್ಮನ್ನು ನಾವು ಒಂದು ಕಿರಿದಾದ, ಕಡಿದಾದ ಗೂಡಿನ ಒಳಗೆ ಹುದುಗಿಸಿಕೊಂಡಿದ್ದೇವೆ ಅಂತ ಅನ್ನಿಸೋಲ್ವೇ?

ಆದರೆ, ಹೊಸ ವರ್ಷ ಬರುತ್ತಿದೆಯೆಂಬೋ ಸಂಭ್ರಮ ಬದಿಗಿರಿಸಿ, ನಮ್ಮ ಟೈಮ್ ವೇಸ್ಟ್ ಮಾಡಲು ಮತ್ತೊಂದು ವರ್ಷ ಕಡಿಮೆಯಾಯಿತು, ಇನ್ನೊಂದು ವರ್ಷವೂ ಟೈಮ್ ವೇಸ್ಟ್ ಮಾಡೋಣ ಎಂದುಕೊಳ್ಳುತ್ತಿರುವವರಿಗೇನೂ ಬರವಿಲ್ಲ. “ಹೊಸ ವರುಷದ ಶುಭಾಶಯಗಳು, ಇದು ನಿಮಗೆ ಮಾತ್ರ” ಎಂಬ ಒಂದು ಇ-ಮೇಲ್ ಸಿದ್ಧಪಡಿಸಿ, ಅದನ್ನು Bcc ಯಲ್ಲಿ ಹಾಕಿ ಎಲ್ಲರಿಗೂ ಕಳುಹಿಸುವ ಮೂಲಕ ವರ್ಷದ ಸ್ವಾಗತ ಸಮಾರಂಭವೊಂದನ್ನು ಮುಗಿಸಿದ ತೃಪ್ತಿಯಲ್ಲಿ ಕೈತೊಳೆದುಕೊಳ್ಳುವವರೂ ಇದ್ದಾರೆ. ಅದೆಲ್ಲವನ್ನೂ ಬದಿಗಿಟ್ಟು, ಏನಾದರೂ ಮಾಡೋಣ, ಸ್ವಯಂ ಉದ್ಧಾರದತ್ತ ಗಮನ ಹರಿಸೋಣ, “ಸಮಯ ಸಾಧಕ”ರಾಗೋಣ, “ಅವಕಾಶವಾದಿ”ಗಳಾಗೋಣ.

ಹೌದು, ಜೀವನದಲ್ಲಿ ಮೇಲೆ ಬರಬೇಕಿದ್ದರೆ ಸಮಯ ಸಾಧಕರಾಗಬೇಕು, ಅವಕಾಶವಾದಿಗಳಾಗಬೇಕು. ಈ ಎರಡು ಶಬ್ಧಗಳು ನಮ್ಮನ್ನಾಳುವವರ ಧನ ದಾಹ, ಅಧಿಕಾರ ದಾಹಗಳಿಂದಾಗಿ ಅರ್ಥ ಕಳೆದುಕೊಂಡಿದೆ ಎಂದುಕೊಳ್ಳಿ. ಅದರ ನಿಜವಾದ ಅರ್ಥವೆಂದರೆ, ಕೈಗೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವುದು ಎಂದಷ್ಟೇ. ಅಪಾರ್ಥ ಕಲ್ಪಿಸಿಕೊಳ್ಳಬೇಕಾಗಿಲ್ಲ. ಎದುರಿಗೊಂದು ಗುರಿ ಇರಲಿ, ಹೊಸ ವರ್ಷಕ್ಕೊಂದು ನಿರ್ಣಯವಿರಲಿ. ಅದು ನಿಮ್ಮ ಜೀವನವನ್ನು ರೂಪಿಸುವ ಮಾದರಿಯಲ್ಲಿರಲಿ. ಜೀವನಕ್ಕೊಂದು ಭದ್ರ ಅಡಿಪಾಯ ಹಾಕಿಕೊಡುವ ರೀತಿಯಲ್ಲಿರಲಿ. ಕುಡಿತ ಬಿಡುತ್ತೇನೆ, ಸಿಗರೇಟು ಬಿಡುತ್ತೇನೆ ಎಂದು ಘಂಟಾಘೋಷವಾಗಿ ಸಾರಿದವರದೆಷ್ಟು ಮಂದಿ ಅದೇ ನಿರ್ಣಯವನ್ನು ಪ್ರತಿವರ್ಷ ಕೈಗೊಳ್ಳುತ್ತಿಲ್ಲ? ನಿರ್ಣಯದ ಜೊತೆ ಜೊತೆಗೂ ಛಲ, ಬದ್ಧತೆ ಇರಲೇಬೇಕು ಎಂಬುದಂತೂ ನಿಮ್ಮ ಗೆಳೆಯ-ಗೆಳತಿಯರ ಈ ಪ್ರತಿಜ್ಞೆ ಮುರಿಯುವ ಪ್ರಸಂಗಗಳಿಂದಾಗಿ ನಿಮ್ಮ ಕಣ್ಣೆದುರೇ ದೃಢಪಟ್ಟಿದೆ.

ಹೀಗಾಗಿ ಒಂದಾದರೂ ಒಳ್ಳೆಯ, ಪೂರೈಸಬಹುದಾದ ಪ್ರತಿಜ್ಞೆ ಮಾಡಿ, ಸಾಧಿಸಿ ತೋರಿಸಿದಾಗ ಬರುವ ಉತ್ಸಾಹವು ಅತ್ಯಂತ ಕೆಟ್ಟ ಗುಣವನ್ನು ಬಿಟ್ಟು ಬಿಡಲು ನೆರವಾಗುತ್ತದೆ.

ಇದರೊಂದಿಗೆ ಕುವೆಂಪು ಅವರ ವಿಶ್ವಮಾನವತೆಯ ಸಂದೇಶ:

ಓ ಬನ್ನಿ ಸೋದರರೆ ಬೇಗ ಬನ್ನಿ
ಸಿಲುಕದಿರಿ ಮತವೆಂಬ ಮೋಹದಜ್ಞಾನಕ್ಕೆ
ಮತಿಯಿಂದ ದುಡಿಯಿರೈ ಲೋಕಹಿತಕೆ
ಆ ಮತದ ಈ ಮತದ ಹಳೆ ಮತದ ಸಹವಾಸ
ಸಾಕಿನ್ನು ಸೇರಿ ಮನುಜ ಮತಕೆ
ಓ ಬನ್ನಿ ಸೋದರರೆ ವಿಶ್ವ ಪಥಕೆ

ಈ ನುಡಿಯೊಂದಿಗೆ, ಹೊಸ ವರುಷವನ್ನು ಏಕತಾ ಭಾವದಿಂದ, ದ್ವೇಷ-ರೋಷಗಳನ್ನು ದೂರ ಮಾಡುತ್ತಾ, ಹರುಷದಿಂದಲೇ ಸ್ವಾಗತಿಸೋಣ. ಕಳೆದ ವರ್ಷದಲ್ಲಿ ಆಗದೇ ಇದ್ದ ಕನಸನ್ನು ನನಸಾಗಿಸಿಕೊಳ್ಳಲು ಮತ್ತೊಂದು ವರ್ಷ ಬಂದಿದೆ ಎನ್ನುತ್ತಾ ಮುಂದಡಿಯಿಡೋಣ.

ಆತ್ಮೀಯರೆಲ್ಲರಿಗೂ ಹೊಸ ವರುಷವು ಶುಭ ತರಲಿ, ಜೀವನವನ್ನು ಬೆಳಗಲಿ, ಅಂದುಕೊಂಡ ಗುರಿ ಸಾಧನೆಯಾಗಲಿ, ನೆನಸಿದ್ದು ನನಸಾಗಲಿ. ಶುಭವಾಗಲಿ.

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

View Comments

  • ಸು೦ದರ ಬರಹ..
    ಹೊಸ ವರುಷದ ಜೊತೆಗೆ ಸ೦ಕ್ರಾತಿಪ್ರಯುಕ್ತವೂ ನಿಮಗೆ ಮತ್ತು ಎಲ್ಲರಿಗೂ ಶುಭಹಾರೈಕೆಗಳು.

  • ವಿಜಯಶ್ರೀ ಅವರೇ,
    ತಡವಾಗಿ ಉತ್ತರಿಸಿದ್ದಕ್ಕೆ ಕ್ಷಮೆ ಇರಲಿ. ಬ್ಲಾಗಿಗೆ ಸ್ವಾಗತ.
    ಶುಭವಾಗಲಿ.

Share
Published by
Avinash B

Recent Posts

ಎಐ ವೈಶಿಷ್ಟ್ಯಗಳ realme GT 7 Pro ಬಿಡುಗಡೆ: ಬೆಲೆ ಎಷ್ಟು? ವೈಶಿಷ್ಟ್ಯಗಳೇನು? ಇಲ್ಲಿದೆ ಪೂರ್ಣ ಮಾಹಿತಿ

ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್‌ ಇರುವ ಬಹುನಿರೀಕ್ಷಿತ…

3 weeks ago

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

3 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

3 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

4 months ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

5 months ago

ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

10 months ago