ಮೊಬೈಲ್ ಫೋನ್‌ನಿಂದಲೂ ಕರೋನಾ ವೈರಸ್ ಹರಡುತ್ತದೆಯೇ?

ಎಲ್ಲೆಡೆ ಕೊರೊನಾ ವೈರಸ್ಸಿನದ್ದೇ ರಾದ್ಧಾಂತ. ಈ ವೈರಸ್ ಹರಡುವ ಕೋವಿಡ್-19 ಕಾಯಿಲೆಯಿಂದ ಪಾರಾಗಲು ಜನರು ಆತಂಕ ಪಡುತ್ತಿರುವಂತೆಯೇ, ಫೇಕ್ ಸುದ್ದಿಗಳು, ಭಯ ಹುಟ್ಟಿಸುವ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳು ಈ ಆತಂಕದ ಬೆಂಕಿಗೆ ತುಪ್ಪ ಸುರಿಯುತ್ತಿವೆ. ಕೊರೊನಾ ವೈರಸ್ ಹರಡುವುದನ್ನು ತಡೆಯಲು ‘ಸೋಷಿಯಲ್ ಡಿಸ್ಟೆನ್ಸಿಂಗ್’ ಅಂದರೆ ಸಾಮಾಜಿಕವಾಗಿ ಪರಸ್ಪರ ಸಂಪರ್ಕದಿಂದ ದೂರ ಇರುವುದು ಇಲ್ಲವೇ ಅಂತರ ಕಾಯ್ದುಕೊಳ್ಳುವುದು ಎಂಬ ವಿಧಾನವನ್ನು ಅನುಸರಿಸಲು ಸಲಹೆ ನೀಡಲಾಗಿದೆ. ಆದರೆ ಈ ಪದಗುಚ್ಛವನ್ನೇ, ‘ಸೋಷಿಯಲ್ ಮೀಡಿಯಾ ಡಿಸ್ಟೆನ್ಸಿಂಗ್’ ಎಂದು ತಿಳಿದುಕೊಂಡವರು ಮತ್ತೊಂದು ವಿಧದಲ್ಲಿ ಫೇಕ್ ಸುದ್ದಿ ಹರಡಲು ಕಾರಣರಾಗುತ್ತಿದ್ದಾರೆ.

ಒಂದು ರೀತಿಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಫೇಕ್ ಸುದ್ದಿಗಳಿಂದ ಪಾರಾಗಲು, ಅನಗತ್ಯವಾಗಿ ಆತಂಕಗೊಳ್ಳುವುದನ್ನು ತಡೆಯಲು ಸೋಷಿಯಲ್ ಮೀಡಿಯಾದಿಂದ ದೂರವಿರುವುದು ಸೂಕ್ತ ಎಂಬ ವಾದವೂ ಇದೆ. ಆದರೆ ಮೊಬೈಲ್ ಫೋನ್‌ನಿಂದಲೂ ಕೊರೊನಾ ವೈರಸ್ ಹರಡುತ್ತದೆ ಅಥವಾ ಸೋಷಿಯಲ್ ಮೀಡಿಯಾದ ಮೂಲಕವೂ ಹರಡುತ್ತದೆ ಎಂಬೆಲ್ಲ ಸುದ್ದಿಗಳು ಕೂಡ ಹರಿದಾಡುತ್ತಿರುವುದರಿಂದ ಈ ಬಗ್ಗೆ ಮಾಹಿತಿ ಇಲ್ಲಿದೆ.

ಮೂಲತಃ ಕೊರೊನಾ ವೈರಸ್ ಗಾಳಿಯಲ್ಲಿ ಹರಡುವುದಿಲ್ಲ. ಅದು ಶ್ವಾಸಕೋಶದ ವೈರಸ್ ಆಗಿರುವುದರಿಂದ ಸೋಂಕು ಬಾಧಿತ ವ್ಯಕ್ತಿಯು ಕೆಮ್ಮುವಾಗ, ಸೀನುವಾಗ ಸಿಡಿಯುವ ಹನಿಗಳು ಬಾಯಿ, ಮೂಗು ಅಥವಾ ಕಣ್ಣುಗಳ ಮೂಲಕ ಸೋಂಕು ತಗುಲಬಹುದು. ನಾವು ಸದಾ ಕಾಲ ಕೈಯಲ್ಲಿ ಹಿಡಿದುಕೊಂಡಿರುವ ಮೊಬೈಲ್ ಫೋನ್ ಅಥವಾ ಎಲೆಕ್ಟ್ರಾನಿಕ್ ಸಾಧನಗಳು ಕೂಡ ಬ್ಯಾಕ್ಟೀರಿಯಾ, ವೈರಾಣು ಅಥವಾ ಕೀಟಾಣುಗಳ ಅಭಿವೃದ್ಧಿ ತಾಣವೂ ಹೌದು. ಇದಕ್ಕೆ ಪ್ರಧಾನ ಕಾರಣವೆಂದರೆ, ಅದರ ಬಳಕೆಯ ಬಗ್ಗೆ ನಮಗಿರುವ ನಿರ್ಲಕ್ಷ್ಯ ಭಾವ.

ಮೊಬೈಲ್ ಫೋನ್ ಹಿಡಿದುಕೊಂಡೇ ಕೆಮ್ಮುತ್ತೇವೆ, ಸೀನುತ್ತೇವೆ, ಊಟ-ತಿಂಡಿಯ ವೇಳೆಯಲ್ಲೂ ಅದು ನಮ್ಮ ಕೈಯಲ್ಲೇ ಇರುತ್ತದೆ, ಅದೇ ಕೈಯಲ್ಲಿ ಮೊಬೈಲ್ ಸ್ಕ್ರೀನ್ ಸ್ಪರ್ಶಿಸುತ್ತೇವೆ; ಅಷ್ಟೇ ಏಕೆ, ಟಾಯ್ಲೆಟ್‌ಗೂ ಅದನ್ನು ಒಯ್ಯುವವರನ್ನು ನೋಡಿದ್ದೇವೆ, ಕೇಳಿದ್ದೇವೆ! ಆಹಾರದ ತುಣುಕುಗಳು, ಕೆಮ್ಮು, ನೆಗಡಿಯ ತುಂತುರು ಹನಿಗಳು ಯಾವುದೇ ಎಲೆಕ್ಟ್ರಾನಿಕ್ ಸಾಧನದ ಮೇಲೆ, ಸ್ಕ್ರೀನ್ ಮೇಲೆ ಸಿಡಿದಿರುತ್ತವೆ. ಕೊರೊನಾ ವೈರಸ್ ಹರಡದಂತಿರಲು ಕೈ, ಮೂಗು, ಕಣ್ಣು, ಬಾಯಿ ಸ್ವಚ್ಛವಾಗಿಟ್ಟುಕೊಳ್ಳಲೇಬೇಕು ಎಂದು ವೈದ್ಯರಾದಿಯಾಗಿ ಎಲ್ಲರೂ ಹೇಳುವ ಮಾತು. ಇಲ್ಲಿ ಪ್ರಮುಖ ಪಾತ್ರ ವಹಿಸುವವು ನಮ್ಮ ಕೈಗಳು. ಸೋಂಕು ಪೀಡಿತರು ಸೀನುವಾಗ, ಕೆಮ್ಮುವಾಗ ಸಿಡಿಯುವ ಹನಿಗಳು ಯಾವುದೇ ಮೇಲ್ಮೈಗಳಲ್ಲಿ ಇರಬಹುದು. ಉದಾಹರಣೆಗೆ, ಸೋಂಕಿತರೇನಾದರೂ ಬಸ್ಸಲ್ಲಿ ಅಥವಾ ಮೆಟ್ರೋ ರೈಲಿನಲ್ಲಿ ಬಂದವರಾಗಿದ್ದರೆ, ಅದರೊಳಗೆ ಇರುವ ಹಿಡಿಕೆಗಳು, ರೇಲಿಂಗ್ಸ್ – ಇವುಗಳಲ್ಲಿ ವೈರಸ್ ಇರುವ ಸಾಧ್ಯತೆ ತಳ್ಳಿಹಾಕಲಾಗದು. ಇದಕ್ಕಾಗಿಯೇ ಹೊರಗೆ ಹೋಗಿ ಬಂದರೆ, ಮೊದಲು ನಮ್ಮ ಕೈಗಳನ್ನು ಸ್ವಚ್ಛ ಮಾಡಿಕೊಳ್ಳಬೇಕು. ಇಲ್ಲಿ ಮೊಬೈಲ್ ಫೋನ್‌ಗಳಿಗೆ ಈ ‘ವೈರಸ್ ಹರಡುವ ಭೀತಿ’ ಹಬ್ಬಿದ್ದು ಇದೇ ಕಾರಣಕ್ಕೆ. ಸದಾ ಕಾಲ ನಾವು ಮೊಬೈಲ್ ಸ್ಕ್ರೀನ್ ಸ್ಪರ್ಶಿಸುತ್ತಿರುತ್ತೇವೆ, ಅದೇ ಕೈಯಿಂದ ಮೂಗು, ಕಣ್ಣು, ಬಾಯಿಯನ್ನೂ ಅರಿತೋ ಅರಿಯದೆಯೋ ಸ್ಪರ್ಶಿಸಿರುತ್ತೇವೆ.

ಹೀಗಾಗಿ, ಮೊಬೈಲ್ ಅಥವಾ ಲ್ಯಾಪ್‌ಟಾಪ್ ಸ್ಕ್ರೀನ್‌ಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅತ್ಯಂತ ಮುಖ್ಯ. ಪದೇ ಪದೇ ಕೈಗಳನ್ನು ತೊಳೆಯುತ್ತಿರುವುದು ಹಾಗೂ ಕಣ್ಣು, ಮೂಗು, ಬಾಯಿಗಳಿಗೆ ಕೈ ಹಾಕುವ ಅಭ್ಯಾಸವನ್ನು ಬಿಡುವುದು ಎಷ್ಟು ಮುಖ್ಯವೋ, ಮೊಬೈಲ್ ಅಥವಾ ಯಾವುದೇ ಗ್ಯಾಜೆಟ್‌ನ ಮೇಲ್ಮೈಯನ್ನು ಸ್ವಚ್ಛವಾಗಿರಿಸಿಕೊಳ್ಳುವುದೂ ಅಷ್ಟೇ ಮುಖ್ಯ. ಎಲೆಕ್ಟ್ರಾನಿಕ್ ಸಾಧನಗಳನ್ನು ಸ್ವಚ್ಛಗೊಳಿಸಲೆಂದೇ ಅಂಗಡಿಗಳಲ್ಲಿ ಆಲ್ಕೋಹಾಲ್ ವೈಪ್ಸ್ ದೊರೆಯುತ್ತವೆ. ಇದಲ್ಲವೆಂದಾದರೆ, ಪೊಟ್ಯಾಶಿಯಂ ಪರ್ಮಾಂಗನೇಟ್, ಸೋಡಿಯಂ ಹೈಪೋಕ್ಲೋರೈಟ್ ಮುಂತಾಗಿ, ಅನುಮೋದನೆಯಿರುವ ಡಿಸ್ಇನ್‌ಫೆಕ್ಟೆಂಟ್ ಸೊಲ್ಯುಶನ್ (ಕೀಟಾಣುನಾಶಕ ದ್ರಾವಣ) ಬಳಸಿ ಸ್ಕ್ರೀನ್ ಸ್ವಚ್ಛಗೊಳಿಸಬಹುದು. ಹತ್ತಿ ಇಲ್ಲವೇ ಮೃದುವಾದ ಬಟ್ಟೆಯನ್ನು ಈ ದ್ರಾವಣದಲ್ಲಿ ಅದ್ದಿ, ಅದನ್ನು ಸೂಕ್ತವಾಗಿ ಹಿಂಡಿ, ಸ್ಕ್ರೀನ್ ಅಥವಾ ಹೊರಾವರಣಗಳನ್ನು ಸ್ವಚ್ಛಗೊಳಿಸಬಹುದು. ಆದರೆ ಈ ದ್ರಾವಣವು ಯಾವುದೇ ಗ್ಯಾಜೆಟ್‌ನ ಒಳಭಾಗಕ್ಕೆ ಹೋಗದಂತೆ ಎಚ್ಚರವಹಿಸಬೇಕು.

ಹೀಗೆ ಯಾವುದೇ ವೈರಾಣು, ಬ್ಯಾಕ್ಟೀರಿಯಾಗಳು ಗ್ಯಾಜೆಟ್‌ಗಳಲ್ಲಿ ಸೇರಿಕೊಳ್ಳದಂತೆ ತಡೆಯಬಹುದು. ಇದು ಕೊರೊನಾ ವೈರಸ್ ಹಾವಳಿಗಾಗಿ ಮಾತ್ರವೇ ಇಲ್ಲ, ಸದಾ ಕಾಲ ವಿಶೇಷವಾಗಿ ಮೊಬೈಲ್ ಫೋನ್ ನಮ್ಮ ಕೈಯಲ್ಲೇ ಇರುವುದರಿಂದ, ಈ ಕ್ರಮವನ್ನು ಅನುಸರಿಸುವುದು ಉಚಿತ.

19 ಮಾರ್ಚ್ 2020ರಂದು ಪ್ರಜಾವಾಣಿಯಲ್ಲಿ ಪ್ರಕಟ by ಅವಿನಾಶ್ ಬಿ.

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Recent Posts

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

2 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

2 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

3 months ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

4 months ago

ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

9 months ago

ಮುದ್ದಣನ ಕುಮಾರ ವಿಜಯ, ರತ್ನಾವತಿ ಕಲ್ಯಾಣ ಯಕ್ಷಗಾನ ಧ್ವನಿಮುದ್ರಿಕೆ

ಮುದ್ದಣನ ಕುಮಾರ ವಿಜಯದ ಸುಮಾರು 700ರಷ್ಟಿರುವ ಹಾಡುಗಳನ್ನು ಹಾಡಿದ್ದು ತೆಂಕು ತಿಟ್ಟಿನ ಬಲಿಪ ಶೈಲಿಯ ಪ್ರತಿಪಾದಕ ಭಾಗವತರೇ. ಏಳೆಂಟು ವರ್ಷಗಳ…

9 months ago