ವಿಜಯ ಕರ್ನಾಟಕದಲ್ಲಿ ಅಂಕಣ – ಮಾಹಿತಿ@ತಂತ್ರಜ್ಞಾನ -2 (Sep-3)
ಈ ವೇಗದ ಯುಗದಲ್ಲಿ ಆವೇಗದಿಂದಲೇ ಮಾಹಿತಿಯನ್ನು ತಲುಪಿಸುವ ಸಾಮರ್ಥ್ಯವಿರುವ, ಅಂತರಜಾಲದ ಸಾಮಾಜಿಕ ತಾಣಗಳಲ್ಲಿ ಒಂದಾದ ಟ್ವಿಟರ್‌ನಲ್ಲಿ ಕಳೆದೆರಡು ವಾರಗಳ ಕಾಲ ಚಿಲಿಪಿಲಿ ಬದಲು ಅಟ್ಟಹಾಸವೇ ಕೇಳಿಬರುತ್ತಿತ್ತು. ಇದು ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ತಂತ್ರ ಎಂಬ ಕೂಗಾಟ ಜೋರಾಗಿತ್ತು. ಇದಕ್ಕೆ ಕಾರಣ ಕೇಂದ್ರ ಸರಕಾರವು ಹಲವು ವೆಬ್‌ಸೈಟುಗಳು, ಫೇಸ್‌ಬುಕ್, ಯೂಟ್ಯೂಬ್, ಟ್ವಿಟರ್ ಖಾತೆಗಳನ್ನು ಬ್ಲಾಕ್ ಮಾಡಲು ಸೂಚನೆ ನೀಡಿರುವುದು.
ಆದರೆ ಅಷ್ಟು ಸುಲಭದ ಮಾತಲ್ಲ. ನಿಷೇಧಿಸುವಂತೆ ಸೂಚನೆ ನೀಡಿದ ಟ್ವಿಟರ್ ಖಾತೆಗಳು ಈಗಲೂ ಸಕ್ರಿಯವಾಗಿವೆ. Tweetಗುಟ್ಟುವ ನಿಷೇಧಿತ ಟ್ವಿಟರ್ ಖಾತೆಗಳು (ಹ್ಯಾಂಡಲ್‌ಗಳು ಎನ್ನುತ್ತಾರೆ) ಫೀನಿಕ್ಸ್ ಹಕ್ಕಿಯಂತೆ ಚಿಲಿಪಿಲಿಗುಟ್ಟುತ್ತಲೇ ಇವೆ. ಯುಆರ್‌ಎಲ್‌ಗಳಲ್ಲಿ http ಎಂಬಲ್ಲಿ https ಅಂತ ಸೇರಿಸಿದರೆ ಕೆಲವು ತೆರೆದುಕೊಳ್ಳುತ್ತವೆ. ಇನ್ನು ಕೆಲವರು, ಬೇರೆಯೇ ಒಂದು ಖಾತೆ ತೆರೆಯುತ್ತಾರೆ, ಬ್ಲಾಕ್ ಮಾಡಿದ ಖಾತೆಗಳಿಂದಲೇ (ಬೇರೆ ಟ್ವಿಟರ್ ಕ್ಲೈಂಟ್‌ಗಳನ್ನು ಬಳಸಿ) ಟ್ವೀಟ್ ಮಾಡುತ್ತಾರೆ, ಅದನ್ನು ಹೊಸ ಖಾತೆಯಿಂದ RT (ಅಂದರೆ ರೀ-ಟ್ವೀಟ್) ಮಾಡುತ್ತಾರೆ.
ಇದರ ನಡುವೆ ಪ್ರಮುಖವಾಗಿ ಸದ್ದು ಮಾಡಿದ ಸುದ್ದಿಗಳು ಎರಡು. ಒಂದನೆಯದು, ಭಾರತದ ಪ್ರಧಾನ ಮಂತ್ರಿಯವರ ಟ್ವಿಟರ್ ಖಾತೆ’ಗಳು’. ನಿಷೇಧಿಸಬೇಕೆಂದು ಸರಕಾರ ಟ್ವಿಟರನ್ನು ಕೋರಿದ ಪಟ್ಟಿಯಲ್ಲಿ ಪ್ರಧಾನಿ ಹೆಸರಿನಲ್ಲೇ ನಡೆಯುತ್ತಿರುವ 6 ನಕಲಿ ಖಾತೆಗಳೂ ಸೇರಿದ್ದವು! ಎರಡನೆಯ ವಿಚಿತ್ರ ಸಂಗತಿಯೆಂದರೆ, ಈ ನಕಲಿ ಖಾತೆಗಳು ಇನ್ನೂ ಕಾರ್ಯಾಚರಿಸುತ್ತಿದ್ದರೂ, ಸ್ವತಃ ಮಾಹಿತಿ ತಂತ್ರಜ್ಞಾನ ಸಚಿವರ ಟ್ವಿಟರ್ ಖಾತೆಯೇ ಸಸ್ಪೆಂಡ್ ಆದದ್ದು!
ನಕಲಿ ಖಾತೆಗಳು
ಪ್ರಧಾನಿ ಕಾರ್ಯಾಲಯದ ಟ್ವಿಟರ್ ಹ್ಯಾಂಡಲ್ @PMOIndia ಅಂತ, ಇದು ಪ್ರಧಾನಿ ಕಚೇರಿ ಸಲಹೆಗಾರ ಪಂಕಜ್ ಪಚೌರಿಯವರ ಕನಸಿನ ಕೂಸು, ಇದಕ್ಕೆ ಹೆಚ್ಚೂಕಡಿಮೆ 1.80 ಕ್ಷದಷ್ಟು ಅನುಯಾಯಿಗಳಿದ್ದಾರೆ. ಮತ್ತೊಂದು ಹ್ಯಾಂಡಲ್ ನೋಡಿ: @PM0India. ವ್ಯತ್ಯಾಸ ತಿಳಿಯಿತೇ? ಇಂಗ್ಲಿಷ್ ಅಕ್ಷರ ಕ್ಯಾಪಿಟಲ್ ಅಕ್ಷರ ‘ಓ’ (O) ಬದಲು ಸೊನ್ನೆ (0) ಬಳಸಿದ್ದಾರೆ. ಇದು ತೀರಾ ಸೂಕ್ಷ್ಮ ವಿಚಾರ. ಇದು ನಕಲಿಗಳ ಕೈವಾಡ.
ಈಗ ಸರಕಾರದ ಕೆಂಗಣ್ಣಿಗೆ ಗುರಿಯಾದವುಗಳಲ್ಲಿ @PM0India ಅಲ್ಲದೆ, @Indian_pm, @PMOIndiaa, @DrYumYumSingh, @FakeIndianPM, @TheIndianPM ಮುಂತಾದವೂ ಇವೆ. ಪ್ರಧಾನಿ ಅಂತೇನಲ್ಲ, ಹಲವಾರು ನಕಲಿ ಖಾತೆಗಳೂ ಇವೆ. ಅವುಗಳಲ್ಲಿ ಹೆಚ್ಚಿನವು ವಿಡಂಬನೆಯೊಂದಿಗೆ ಕಚಗುಳಿ ನೀಡುತ್ತವೆ. ವಾಸ್ತವದ ವ್ಯಂಗ್ಯವನ್ನು ಪ್ರತಿಪಾದಿಸುತ್ತಾ ತಮ್ಮ ಪಾಡಿಗೆ ಇದ್ದು ಬಿಡುತ್ತವೆ. ಕೆಲವೊಂದು ಮಾತ್ರ ನೇರವಾಗಿ ಸರಕಾರವನ್ನೇ ಟಾರ್ಗೆಟ್ ಮಾಡಿಕೊಂಡಿರುತ್ತವೆ.
ಇದೇ ರೀತಿ, ಸಾಕಷ್ಟು ಸೆಲೆಬ್ರಿಟಿಗಳ ನಕಲಿ ಖಾತೆಗಳು ಟ್ವಿಟರಿನಲ್ಲಿ ಸೃಷ್ಟಿಯಾಗಿವೆ. ಈ ಹೊಸ ತಂತ್ರಜ್ಞಾನವನ್ನು ಅಪ್ಪಿಕೊಳ್ಳಲು ತಡ ಮಾಡಿದವರ ಹೆಸರಿನಲ್ಲೆಲ್ಲಾ ಬಹುತೇಕ ಇರುವುದು ನಕಲಿ ಖಾತೆಗಳೇ.
ಪರಿಹಾರ: ವೆರಿಫೈಡ್ ಅಕೌಂಟ್
ಇದೇ ಕಾರಣಕ್ಕೆ ಟ್ವಿಟರ್, ಸೆಲೆಬ್ರಿಟಿಗಳಿಗೆ ಒಂದು ದೃಢೀಕೃತ ಖಾತೆ (ವೆರಿಫೈಡ್ ಅಕೌಂಟ್) ಅಂತ ಮುದ್ರೆ ಹಾಕಿಕೊಳ್ಳುವ ವ್ಯವಸ್ಥೆಯನ್ನೂ ಮಾಡಿಕೊಟ್ಟಿದೆ. ಕೆಲವರು ಮಾಡಿಕೊಂಡಿದ್ದಾರೆ; ಇನ್ನು ಕೆಲವರು ಮಾಡಿಸಿಕೊಂಡಿಲ್ಲ. ತಮ್ಮ ಹೆಸರಿನಲ್ಲಿ ಬೇರೆಯವರು ಟ್ವೀಟ್ ಮಾಡುತ್ತಿರುವುದರಿಂದ ಅಧಿಕೃತ ಸೆಲೆಬ್ರಿಟಿಗಳು ತಮ್ಮ ಟ್ವಿಟರ್ ಹ್ಯಾಂಡಲ್‌ಗಳಲ್ಲಿ ಏನಾದರೂ ಒಂದೆರಡು ಅಕ್ಷರಗಳನ್ನು ಸೇರಿಸಿಕೊಳ್ಳುತ್ತಾರೆ. ಉದಾಹರಣೆಗೆ ಶಿಲ್ಪಾಶೆಟ್ಟಿ @TheShilpaShetty, ಸಚಿನ್ ತೆಂಡುಲ್ಕರ್ @Sachin_rt, ಪ್ರೀತಿ ಜಿಂಟಾ @RealPreityZinta, ಮಾಧುರಿ ದೀಕ್ಷಿತ್ @MadhuriDixit1, ಶಾರೂಖ್ ಖಾನ್ @iamsrk, ಸಲ್ಮಾನ್ ಖಾನ್ @BeingSalmanKhan, ಅಮಿತಾಭ್ ಬಚ್ಚನ್ @SrBachchan ಮುಂತಾದವರು ಅನಿವಾರ್ಯವಾಗಿ ಬದಲಾಯಿಸಿಕೊಂಡು ‘ವೆರಿಫೈಡ್ ಅಕೌಂಟ್’ ಎಂಬ ಮುದ್ರೆ ಹಾಕಿಸಿಕೊಂಡಿದ್ದಾರೆ.
ಹೀಗೆ ಮಾಡಬೇಕಿದ್ದರೆ ಟ್ವಿಟರ್ ಸಂಸ್ಥೆಯನ್ನೇ ಸಂಪರ್ಕಿಸಿ ಮನವಿ ಮಾಡಿಕೊಳ್ಳಬೇಕು. ಜನ ಸಾಮಾನ್ಯರಿಗೆ ವೆರಿಫೈಡ್ ಅಕೌಂಟ್ ಅಂತ ಮುದ್ರೆ ಹಾಕಿಕೊಳ್ಳುವ ಭಾಗ್ಯ ಇಲ್ಲ. ಸೆಲೆಬ್ರಿಟಿಗಳಿಗೆ ಮಾತ್ರ.
ಅಂತೆಯೇ @MANMOHANSINGH, @SONIAGANDHI ಅನ್ನೋ ಟ್ವಿಟರ್ ಹ್ಯಾಂಡಲ್‌ಗಳು ಖಂಡಿತಾ ಅಸಲಿ ಅಲ್ಲ (ಪ್ರಧಾನಿ ಕಾರ್ಯಾಲಯದ ಟ್ವಿಟರ್ ಖಾತೆ ಕೆಲ ತಿಂಗಳ ಹಿಂದಷ್ಟೇ ಆರಂಭವಾಗಿದ್ದರೆ, ಸೋನಿಯಾ ಗಾಂಧಿ ಟ್ವಿಟರ್ ಖಾತೆ ಇನ್ನೂ ಇಲ್ಲ). ಇನ್ನು ಅಸಭ್ಯತೆಯ ಪ್ರತೀಕವಾಗಿರುವ ಪೂನಂ ಪಾಂಡೆ ಹೆಸರಿನಲ್ಲಿ ಏನಿಲ್ಲವೆಂದರೂ ಹತ್ತು ನಕಲಿ ಖಾತೆಗಳಿವೆ. ಹೀಗಾಗಿ, ನಿಮ್ಮ ನೆಚ್ಚಿನ ಸೆಲೆಬ್ರಿಟಿಗಳು ಟ್ವಿಟರ್‌ನಲ್ಲಿದ್ದಾರೆ ಅಂತೇನಾದರೂ ನೀವು ಅವರನ್ನು ಫಾಲೋ ಮಾಡಲು ಹೊರಟರೆ, ಬೇಸ್ತು ಬೀಳಬೇಕಾದೀತು, ಯಾಕೆಂದರೆ ಇದು ‘ತಂತ್ರ’ಜ್ಞಾನ ಯುಗ!
ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
View Comments
ವೆರಿಫೈಡ್ ಖಾತೆ ಮಾಡಿಕೊಳ್ಳಲು ಜನಸಾಮಾನ್ಯ ಅಥವಾ ಸೆಲೆಬ್ರಿಟಿ ಅನ್ನುವುದನ್ನು ಟ್ವಿಟ್ಟರ್ ಸಂಸ್ಥೆ ಯಾವ ಆಧಾರದ ಮೇಲೆ ನಿರ್ಧರಿಸುತ್ತದೆ? ‘ಸೆಲೆಬ್ರಿಟಿ‘ ಅನ್ನುವುದಕ್ಕೆ ಮಾನದಂಡವೇನು?
ವಿಕಾಸ್,
ಸೆಲೆಬ್ರಿಟಿಯೋ ಅಲ್ಲವೋ ಎಂಬುದನ್ನು ಟ್ವಿಟರೇ ನಿರ್ಧರಿಸುತ್ತದೆ. ಅದಕ್ಕೆ ಅದರದ್ದೇ ಆದ ಮಾನದಂಡಗಳಿರುತ್ತವೆ. ಸೆಲೆಬ್ರಿಟಿಗಳು ಅನ್ನಿಸಿಕೊಂಡವರು, ತಮಗೆ ವೆರಿಫೈಡ್ ಬ್ಯಾಡ್ಜ್ ಬೇಕು ಅಂತ ಅನ್ನಿಸಿದರೆ @support ಮೂಲಕ ಮನವಿ ಮಾಡಿಕೊಳ್ಳಬಹುದು. ಅದು ಸಮಗ್ರವಾಗಿ ಪರಿಶೀಲಿಸಿದ ಬಳಿಕ ಈ ಬ್ಯಾಡ್ಜ್ ನೀಡುತ್ತದೆ.
ಅದರದ್ದೇ ಆದ ಮಾನದಂಡಗಳಿರುತ್ತವೆ ಅಂದರೆ ಅವು ಯಾವರೀತಿಯ ಮಾನದಂಡಗಳು ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ಇದ್ದರೆ ಹೇಳಿ. ಹೇಗೆ ಅವರು ಸಮಗ್ರವಾಗಿ ಪರಿಶೀಲಿಸುತ್ತಾರೆ?! ವೆರಿಫೈಡ್ ಬ್ಯಾಡ್ಜ್ ಬೇಕಾದವರು ತಮ್ಮ ಬಗ್ಗೆ, ತಾವು ಸೆಲೆಬ್ರಿಟಿ ಯಾಕೆ ಹೇಗೆ ಅನ್ನುವುದರ ಬಗ್ಗೆ ದಾಖಲೆಗಳನ್ನು ಅಥವಾ ಮಾಹಿತಿಗಳನ್ನು ಒದಗಿಸಬೇಕಾಗುತ್ತಾ?
ಮಾನದಂಡಗಳನ್ನು ಟ್ವಿಟರಿನವರೇ ನಿರ್ಧರಿಸುತ್ತಾರೆ ಮತ್ತು ಅದನ್ನು ಬಹಿರಂಗಪಡಿಸುವುದೂ ಇಲ್ಲ. ಟ್ವಿಟರ್ ನೀಡಿರುವ ಮಾಹಿತಿ ಪ್ರಕಾರ, ಕೋರಿಕೆ ಸಲ್ಲಿಸಿದರೆ, ಅವರೇ ವೆರಿಫೈ ಮಾಡಿಕೊಳ್ಳುತ್ತಾರೆ. ಹೇಗೆ ಅನ್ನುವುದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇನೆ.