ದೇಶದೊಳಗೇ ಅವಿತುಕೊಂಡು ಬಾಂಬ್ ದಾಳಿ ನಡೆಸುತ್ತಾ, ವಿಧ್ವಂಸಕ ಕೃತ್ಯ ನಡೆಸುತ್ತಿರುವ ಉಗ್ರಗಾಮಿಗಳನ್ನಾಗಲೀ, ಹಗಲು ದರೋಡೆ ಮಾಡುವ ಭ್ರಷ್ಟ ಅಧಿಕಾರಿಗಳನ್ನಾಗಲೀ ಶಿಕ್ಷಿಸಲು ನಮಗೆ ಸಾಧ್ಯವಾಗುತ್ತಲೇ ಇಲ್ಲ. ಆದರೆ, ಭ್ರಷ್ಟಾಚಾರ ನಿಲ್ಲಿಸಿ, ವಿದೇಶದಲ್ಲಿ ಭ್ರಷ್ಟರು ಕೂಡಿಟ್ಟಿರುವ ಕಾಳಧನ ಭಾರತಕ್ಕೆ ತಂದು, ಜನಕಲ್ಯಾಣಕ್ಕೆ ವಿನಿಯೋಗಿಸಿ ಎಂದು ಸತ್ಯ-ಆಗ್ರಹ ಮಾಡುತ್ತಿರುವ ನಿರಾಯುಧ, ನಿಷ್ಪಾಪಿ ಜನ ಸಾಮಾನ್ಯರ ಮೇಲೆ ನಿರ್ದಾಕ್ಷಿಣ್ಯವಾಗಿ ದೌರ್ಜನ್ಯ ನಡೆಸುತ್ತೇವೆ. ಕೊಲೆಗಡುಕರಿಗೆ ನ್ಯಾಯಾಲಯ ದಂಡನೆ ವಿಧಿಸಿದರೂ ಶಿಕ್ಷೆ ಜಾರಿಗೊಳಿಸಲು ಹಿಂದೆ ಮುಂದೆ ನೋಡುತ್ತೇವೆ, ಆದರೆ ಯಾವುದೇ ಪಾಪ ಕೃತ್ಯ ಮಾಡದ, ನ್ಯಾಯ ಕೇಳಿ ಗಾಂಧೀಜಿ ಪ್ರಣೀತ ಅಹಿಂಸಾತ್ಮಕ ಪ್ರತಿಭಟನೆ ನಡೆಸುತ್ತಿದ್ದ ಸತ್ಯಾಗ್ರಹಿಗಳ ಮೇಲೆ ಅಪರಾತ್ರಿಯಲ್ಲಿ ಪೊಲೀಸ್ ಪಡೆಯನ್ನು ಛೂಬಿಡುತ್ತೇವೆ. ಹಾಗಿದ್ದರೆ, ಉಪವಾಸ ಸತ್ಯಾಗ್ರಹ ಮಾಡಿ ವಿಶ್ರಾಂತಿಗಾಗಿ ಮಲಗಿದ್ದವರ ಮೇಲೆ, ಮಹಿಳೆಯರ ಮೇಲೆ, ಮಕ್ಕಳ ಮೇಲೆ ಅಪರಾತ್ರಿಯಲ್ಲಿ ಲಾಠಿ ಬೀಸುತ್ತಾ, ಅಶ್ರುವಾಯು ಸಿಡಿಸುತ್ತಾ, ಪ್ರತಿಭಟನೆ ನಡೆಸುತ್ತಿದ್ದವರನ್ನೇ ದೆಹಲಿಯಿಂದ ಹೊರಗೆ ಓಡಿಸುತ್ತಾ, ನಮ್ಮ ಆಡಳಿತಾರೂಢರು ತಮ್ಮ ಸರಕಾರದ ತಪ್ಪುಗಳ ವಿರುದ್ಧದ ಪ್ರತಿಭಟನೆಯನ್ನು ದಮನಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದಾದರೆ ನಾವೆಂತಹಾ ಪ್ರಜಾಪ್ರಭುತ್ವದಲ್ಲಿ ಬದುಕುತ್ತಿದ್ದೇವೆ?
ಹೋರಾಟದ ಹಕ್ಕು ಕಸಿದುಕೊಳ್ಳುವುದು ಅಪಾಯಕಾರಿ!
ಅಹಿಂಸಾತ್ಮಕ ಪ್ರತಿಭಟನೆ ಮಾಡುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ನಾಗರಿಕರ ಹಕ್ಕು. ಕಪ್ಪು ಹಣ ವಾಪಸ್ ತನ್ನಿ ಅಂತಲೋ, ಭ್ರಷ್ಟಾಚಾರ ತಡೆಯಿರಿ ಅಂತಲೋ, ಒಂದು ಜನ ಕಲ್ಯಾಣ ಕಾರ್ಯಕ್ರಮಕ್ಕೆ, ಚುನಾಯಿತ ಜನಪ್ರತಿನಿಧಿಗಳು (ಅದು ಬಿಜೆಪಿ ಇರಲಿ, ಕಾಂಗ್ರೆಸ್ಸೇ ಇರಲಿ) ಮಾಡಲಾಗದೇ ಇರುವುದನ್ನು ಭಾರೀ ಜನಬೆಂಬಲವಿರುವ ಸನ್ಯಾಸಿಯೊಬ್ಬರು ಮಾಡುತ್ತಿದ್ದಾರೆ ಎಂದಾದಾಗ, ಅಂಥದ್ದನ್ನು ದಮನಿಸಲು ಪ್ರಯತ್ನಿಸುವುದು ಖಂಡಿತವಾಗಿಯೂ ಇದು ಭಾರತೀಯ ಸಂಸ್ಕೃತಿಯಲ್ಲ. ಅಧಿಕಾರ ನಮ್ಮ ಕೈಯಲ್ಲಿದೆ, ಆದರೆ ಏರುತ್ತಿರುವ ಜೀವನಾವಶ್ಯಕ ವಸ್ತುಗಳ ಬೆಲೆಗಳಿಗೆ ಕಡಿವಾಣ ಹಾಕಲಾಗದಿದ್ದರೂ, ಪಾಪದ ಪ್ರಜೆಗಳ ಮೇಲೆ ದೌರ್ಜನ್ಯ ನಡೆಸುವುದು ನಮಗೆ ಬ್ರಿಟಿಷರು ಹೇಳಿಕೊಟ್ಟ ಪಾಠ. ಹಾಗಿದ್ದರೆ ಭಾರತೀಯ ಪ್ರಜೆಗಳ ಮೇಲೆ ದೌರ್ಜನ್ಯ ನಡೆಸಿದವರು ಅನುಸರಿಸುತ್ತಿರುವುದು ಖಂಡಿತವಾಗಿಯೂ ಶಾಂತಿಪ್ರಿಯರ ನಾಡಾದ ಭಾರತೀಯ ಸಂಸ್ಕೃತಿ ಅಲ್ಲವೇ ಅಲ್ಲ, ಇದು ವಿದೇಶೀ ಸಂಸ್ಕೃತಿ.
ಇದೇ ಕಾರಣಕ್ಕೆ, ಬಾಬಾ ರಾಮದೇವ್ ಅವರು ನೇರವಾಗಿಯೇ ಕಾಂಗ್ರೆಸ್ ಅಧ್ಯಕ್ಷೆ, ಈ ಯುಪಿಎ ಕೇಂದ್ರ ಸರಕಾರದ ಅಧಿನಾಯಕಿ ಸೋನಿಯಾ ಗಾಂಧಿಯ ಮೇಲೆ ಆರೋಪ ಮಾಡಿದ್ದಾರೆ – “ಸೋನಿಯಾ ವಿದೇಶದವರು, ಹೀಗಾಗಿ ಅವರಿಗೆ ಭಾರತೀಯರ ಮನಸ್ಥಿತಿ ಇಲ್ಲ, ಅರ್ಥವಾಗುವುದೂ ಇಲ್ಲ”.
ಗಡದ್ದಾಗಿ ಮಲಗಿ ನಿದ್ರಿಸುತ್ತಿದ್ದವರನ್ನು ಎಬ್ಬಿಸಿ ಲಾಠಿ ಬೀಸಿದ ಪರಿಣಾಮ ಸತ್ಯಾಗ್ರಹಿಗಳಲ್ಲಿ ಹಲವರು ಆಸ್ಪತ್ರೆ ಸೇರಿದ್ದಾರೆ. ಕೆಲವರ ಸ್ಥಿತಿ ಗಂಭೀರವೂ ಆಗಿದೆ. ಹಾಗಾದರೆ, ನಾವು ದಿನಬಳಕೆಯ ಸೋಪು, ಪೌಡರು, ಟೂತ್ ಪೇಸ್ಟು, ಅಕ್ಕಿ, ಧಾನ್ಯ ಮುಂತಾದವುಗಳನ್ನು ಖರೀದಿಸುವಾಗ, ನಮಗೆ ಗೊತ್ತಿಲ್ಲದೆಯೇ ಸರಕಾರಕ್ಕೆ ತೆರಿಗೆ ಕಟ್ಟುತ್ತೇವಲ್ಲವೇ? ಈ ರೀತಿ ಕಟ್ಟಿದ ಹಣವನ್ನು ಭ್ರಷ್ಟ ರಾಜಕಾರಣಿಗಳು, ಅಧಿಕಾರಿಗಳು, ಉದ್ಯಮಿಗಳೆಲ್ಲರೂ ಲೂಟಿ ಮಾಡಿಯೋ, ಈ ದೇಶದಲ್ಲಿ ತೆರಿಗೆ ತಪ್ಪಿಸುವ ನಿಟ್ಟಿನಲ್ಲಿ ಅಕ್ರಮವಾಗಿ ಗಳಿಸಿದ್ದನ್ನೆಲ್ಲಾ ವಿದೇಶೀ ಬ್ಯಾಂಕುಗಳಲ್ಲಿ ರಾಶಿ ರಾಶಿ ಕೂಡಿಟ್ಟಿದ್ದಾರೆ. ಅದನ್ನು ಮರಳಿ ಭಾರತಕ್ಕೆ ತಂದು, ನಮ್ಮಲ್ಲಿಲ್ಲದ ರಸ್ತೆಗಳು, ನೀರಿನ ವ್ಯವಸ್ಥೆ, ವಿದ್ಯುತ್ ಮುಂತಾದ ಮೂಲಸೌಕರ್ಯಕ್ಕೆ ವಿನಿಯೋಗಿಸಿ ಅಂತ ಸತ್ಯಕ್ಕಾಗಿ ಆಗ್ರಹಿಸುವ ಹಕ್ಕು ನಮಗಿಲ್ಲವೇ?
ಭ್ರಷ್ಟಾಚಾರ ನಿರ್ಮೂಲನೆಗೆ ಆಗ್ರಹಿಸಿದ್ದು ತಪ್ಪೇ?
ಸತ್ಯಾಗ್ರಹ ನಿಲ್ಲಿಸುತ್ತೇವೆ ಎಂದಿದ್ದ ಬಾಬಾ ರಾಮದೇವ್, ಮಾತಿಗೆ ತಪ್ಪಿದ್ದಾರೆ ಎಂಬ ಒಂದೇ ಒಂದು ನೆಪವಿಟ್ಟುಕೊಂಡು, ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಬಾಬಾ ಅವರನ್ನೇ ಅಲ್ಲಿಂದ ಓಡಿಸಿದೆ, ಸತ್ಯಾಗ್ರಹ ನಡೆಯುತ್ತಿದ್ದ ಮೈದಾನವನ್ನು ಯುದ್ಧಭೂಮಿಯಂತೆ ಮಾಡಿಬಿಟ್ಟಿದೆ. ಮಾತಿಗೆ ತಪ್ಪುವುದಕ್ಕೂ, ಕಾಳ ಧನದ ಬಗ್ಗೆ ನಿರ್ಣಯ ಕೈಗೊಂಡು ಭರವಸೆ ನೀಡುವುದಕ್ಕೂ ಸಂಬಂಧವೇ ಇಲ್ಲ. ಭ್ರಷ್ಟಾಚಾರ ನಿರ್ಮೂಲನೆಯ ಇಚ್ಛಾಶಕ್ತಿ ಎಂಬುದು ಈ ಸರಕಾರಕ್ಕೆ ಇದೆ ಎಂದಾಗಿದ್ದಿದ್ದರೆ, ಈ ರೀತಿ ಖಂಡಿತಾ ಮಾಡುತ್ತಿರಲಿಲ್ಲ.
ಸ್ವಾತಂತ್ರ್ಯಕ್ಕೆ ಮೊದಲು ಮಹಾತ್ಮ ಗಾಂಧೀಜಿ ಮಾಡುತ್ತಿದ್ದ ಅಹಿಂಸಾ ಸತ್ಯಾಗ್ರಹವನ್ನು ಕಾಂಗ್ರೆಸ್ ಕೂಡ ಮಾಡಿರಲಿಲ್ಲವೇ? ಅಂದು ಬ್ರಿಟಿಷರು ಹೇಗೆ ದಮನ ಮಾಡಿದ್ದಾರೋ, ಅದೇ ರೀತಿಯಾಗಿ ಗಾಂಧೀಜಿಯೇ ಹೇಳಿಕೊಟ್ಟ ಅಹಿಂಸಾ ಪ್ರತಿಭಟನೆಯ ದಮನ ಕಾರ್ಯವಿಂದು ನಡೆದಿದೆ. ಗಿಲಾನಿ, ಅರುಂಧತಿ ರಾಯ್ ಮುಂತಾದವರು ರಾಷ್ಟ್ರದ್ರೋಹಿ ಹೇಳಿಕೆಗಳನ್ನು ನೀಡುತ್ತಾರೆ, ಅಂಥವರನ್ನು ಹತ್ತಿಕ್ಕಲಾಗದವರು, ಭ್ರಷ್ಟಾಚಾರದ ವಿರುದ್ಧ ಧ್ವನಿಯೆತ್ತಿದ ಜನ ಸಾಮಾನ್ಯರನ್ನು ತಮ್ಮ ತೋಳ್ಬಲ ಪ್ರದರ್ಶಿಸಿ ಹತ್ತಿಕ್ಕುತ್ತಾರೆ. ಇದು ಎಪ್ಪತ್ತರ ದಶಕದಲ್ಲಿ ಇಂದಿರಾ ಗಾಂಧಿ ಮಾಡಿದ ತುರ್ತು ಪರಿಸ್ಥಿತಿಯ ಕಾಲದಲ್ಲಿನ ಸರ್ವಾಧಿಕಾರಿ ಧೋರಣೆ, ದಬ್ಬಾಳಿಕೆ, ದೌರ್ಜನ್ಯಗಳನ್ನು ನೆನಪಿಸುತ್ತದೆ.
ಈಗ ನೀವು ರೇಶನ್ ಕಾರ್ಡ್ ಮಾಡಿಸಲೋ, ಡ್ರೈವಿಂಗ್ ಲೈಸೆನ್ಸ್ ಮಾಡಿಸುವುದಕ್ಕೋ, ಅಥವಾ ಜಮೀನಿನ ಪಟ್ಟಾ ಮಾಡಿಸುವುದಕ್ಕೋ ಸರಕಾರಿ ಕಚೇರಿಗಳಿಗೆ ಹೋಗುತ್ತೀರಿ. ಅಲ್ಲಿ ಕೆಳ ಮಟ್ಟದಲ್ಲೇ ಲಂಚ ಎಂಬ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅದು ಬಿಡಿ, ಟ್ರಾಫಿಕ್ ಪೊಲೀಸನೊಬ್ಬ ದಿಢೀರನೇ ತಡೆದು ನಿಲ್ಲಿಸಿ, ತಪ್ಪಿಲ್ಲದಿದ್ದರೂ, ಕೇಸು ಜಡಿಯುತ್ತೇನೆ ಎಂದು ಹೆದರಿಸುತ್ತಾ, ರಶೀದಿ ಬರೆದರೆ ನೂರಾರು ರೂಪಾಯಿ ಕಟ್ಟಬೇಕು, ಕೋರ್ಟಿಗೆ ಹೋಗಬೇಕಾಗುತ್ತದೆ. “ನೀವು ಚಾ ಕುಡಿಯಲು ಒಂದಿಷ್ಟು ಕೊಟ್ಟರೆ ಇಲ್ಲಿಂದಲೇ ಹೋಗಬಹುಗು” ಅಂತ ಅವಸರದಲ್ಲೇ ಇರುವ ನಮ್ಮ ಮುಂದೆ ಕೈಚಾಚುತ್ತಾನೆ! ಇಂಥವನ್ನು ನಿಲ್ಲಿಸಿ ಎಂದು ಸತ್ಯಾಗ್ರಹ ಮಾಡಿದರೆ ಅಲ್ಲಿ ಲಾಠಿ ಚಾರ್ಜ್ ನಡೆಯುತ್ತದೆ! ಎಂಥಾ ವಿಪರ್ಯಾಸ ನೋಡಿ. ಅದು ಬಿಟ್ಟು, ಯಾವುದೇ ಮುನ್ಸೂಚನೆ ನೀಡದೆಯೇ ದಿಢೀರ್ ಆಗಿ, ಸೆಕ್ಷನ್ 144 ಹೇರಿ ಸತ್ಯಾಗ್ರಹಿಗಳನ್ನು ಬಂಧಿಸಿ ಕರೆದೊಯ್ಯಲಾಗುತ್ತದೆ. ನಾವೆಂಥಾ ಸರಕಾರದ ಅಡಿಯಲ್ಲಿ ಬಾಳುತ್ತಿದ್ದೇವೆ?
ತುಟಿ ಪಿಟಕ್ಕೆನ್ನದ “ಶಾಂತಿ ಪ್ರಿಯ” ಪ್ರಧಾನಿ
ನಿರಾಯುಧರ ಮೇಲೆ ಶಸ್ತ್ರಪ್ರಯೋಗ ಮಾಡಬಾರದು ಎಂದು ಭಾರತದ ಮೂಲ ಸಂಸ್ಕೃತಿಯೇ ಆಗಿರುವ ಶಾಸ್ತ್ರಗ್ರಂಥಗಳು ವಿವರಿಸುವ ಯುದ್ಧನೀತಿಯನ್ನು ನಾವು ಅನುಸರಿಸುವುದಿಲ್ಲ ಎಂದಾದರೆ ಖಂಡಿತವಾಗಿಯೂ ನಾವು ಸರ್ವಾಧಿಕಾರಿಗಳು, ಅಮಾನುಷರು. ದೇಶಾದ್ಯಂತ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಿರುವ ಸತ್ಯಾಗ್ರಹಿಗಳು ಬಾಬಾ ಮೇಲೆ ಮಾಡಿದ ದೌರ್ಜನ್ಯವನ್ನು ಟಿವಿಯಲ್ಲಿ ನೋಡಿ ಕಣ್ಣೀರಿಟ್ಟಿದ್ದಾರೆ. ಸಾಂಕೇತಿಕವಾಗಿ ಸೋನಿಯಾ ಗಾಂಧಿ, ಪ್ರಧಾನಿ ಮನಮೋಹನ್ ಸಿಂಗ್ ಮುಂತಾದವರ ಪ್ರತಿಕೃತಿಗಳನ್ನು ಸುಟ್ಟು ತಮ್ಮ ಆಕ್ರೋಶ ಹೊರಗೆಡಹಿದ್ದಾರೆ. ಇಷ್ಟಾದರೂ, ನಮ್ಮ ಪಾಪದ ಪ್ರಧಾನಿ ಮನಮೋಹನ್ ಸಿಂಗ್ ಅವರು ತುಟಿ ಬಿಚ್ಚುತ್ತಿಲ್ಲ. ಯುಪಿಎಯ ಅಧಿನಾಯಕಿ ಸೋನಿಯಾ ಗಾಂಧಿ ಚಕಾರವೆತ್ತುತ್ತಿಲ್ಲ. ಕೇವಲ ಸಿಬಲ್‌ಗಳು, ಬನ್ಸಾಲ್‌ಗಳು, ದಿಗ್ವಿಜಯ್‌ಗಳು ಮಾತನಾಡುತ್ತಿದ್ದಾರೆ. ಹಾಗಿದ್ದರೆ, ನಮ್ಮನ್ನು ಆಳುವವರಿಗೆ ಎಷ್ಟರ ಮಟ್ಟಿಗೆ ಹೊಣೆಗಾರಿಕೆ ಇದೆ? ಹಾಗಿದ್ದರೆ ಸರಕಾರ ನಡೆಸುತ್ತಿರುವವರು ಯಾರು?
ಇಲ್ಲೇಕೆ ಧರ್ಮವನ್ನು ಎಳೆದು ತರುತ್ತಿದ್ದಾರೆ?
ಇಲ್ಲಿ ಓದುಗರು ಒಂದು ವಿಷಯ ಗಮನಿಸಬೇಕು. ಉಗ್ರಗಾಮಿಗಳಿಗೆ ಯಾವ ರೀತಿ ಧರ್ಮ ಇಲ್ಲ ಎಂದು ಪರಿಗಣಿಸುತ್ತಿದ್ದೇವೆಯೋ, ಅದೇ ರೀತಿ ಭ್ರಷ್ಟಾಚಾರಿಗಳೂ ಧರ್ಮವಿಲ್ಲ. ಇಲ್ಲಿಯೂ ಕೋಮು ಭಾವನೆ ಕೆರಳಿಸುವುದು ಸಲ್ಲ. ಯಾಕೆಂದರೆ, ಇಲ್ಲಿ ಹಸನ್ ಅಲಿಗಳಿದ್ದಾರೆ, ರಾಜಾಗಳಿದ್ದಾರೆ, ಮಧು ಕೋಡಾಗಳಿದ್ದಾರೆ, ಕಲ್ಮಾಡಿಗಳಿದ್ದಾರೆ, ಕರೀಂ ಲಾಲಾ ತೆಲಗಿಗಳಿದ್ದಾರೆ, ಇವರಿಗೆಲ್ಲಾ ಭ್ರಷ್ಟಾಚಾರ ಮಾಡಲು ಧರ್ಮ ಮುಖ್ಯವಾಗಿರಲಿಲ್ಲ. ಆದರೆ, ಕಾಂಗ್ರೆಸ್ ಹೇಳುತ್ತಿರುವುದಾದರೂ ಏನು? ಬಾಬಾ ರಾಮದೇವ್ ಮಾಡುತ್ತಿರುವ ಸತ್ಯಾಗ್ರಹದ ಹಿಂದೆ “ಕೋಮುವಾದಿ”ಗಳ ಹುನ್ನಾರವಿದೆ ಎಂದು! ಹಾಗಿದ್ದರೆ, ಬಾಬಾ ರಾಮದೇವ್ ಅವರು ಒಂದು ಕೋಮಿನ ಅಥವಾ ಒಂದು ಪಕ್ಷದ ಭ್ರಷ್ಟಾಚಾರಿಗಳ ವಿರುದ್ಧ ಮಾತ್ರವೇ ಧ್ವನಿಯೆತ್ತಿದ್ದಾರೆಯೇ? ಭ್ರಷ್ಟಾಚಾರವು ಎಲ್ಲ ಧರ್ಮೀಯರಲ್ಲೂ ಇದೆ, ಕಾಂಗ್ರೆಸ್ಸಿನಲ್ಲೂ, ಬಿಜೆಪಿಯಲ್ಲೂ, ಡಿಎಂಕೆಯಲ್ಲೂ ಇದೆ. ಇದು ಸಾರ್ವತ್ರಿಕ. ಈಗ ಪ್ರಶ್ನೆ ಏಳುತ್ತಿರುವುದು ಧರ್ಮದ ಆಧಾರದಲ್ಲಿ ದೇಶದ ಜನತೆಯನ್ನು ವಿಭಾಗಿಸುವ ರಾಜಕೀಯ ಮಾಡುತ್ತಿರುವುದು ಯಾರು? ಅದೆಲ್ಲಾ ಒತ್ತಟ್ಟಿಗಿರಲಿ, ಆರೆಸ್ಸೆಸ್ ಬೆಂಬಲಿಸುತ್ತದೆ ಎಂದಾದರೆ ಯಾವುದೇ ನಾಗರಿಕರು ಕೂಡ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಬಾರದು ಎಂಬ ಧೋರಣೆಯೇಕೆ? ಇಲ್ಲಿ ಇರುವುದು ಧರ್ಮದ ಪ್ರಶ್ನೆಯಲ್ಲ, ಕೋಮಿನ ಪ್ರಶ್ನೆಯಲ್ಲ. ಇದು ಸಾರ್ವತ್ರಿಕವಾದ ಧರ್ಮಾತೀತ ಭ್ರಷ್ಟಾಚಾರದ ಪ್ರಶ್ನೆ ಮಾತ್ರ.
ಇನ್ನು, ಬಾಬಾ ಅವರು ಯೋಗ ಕಲಿಸುವುದು ಬಿಟ್ಟು ರಾಜಕೀಯ ಮಾಡುತ್ತಿದ್ದಾರೆ ಎಂದು ಕೂಡ ಸ್ವತಃ ಕೇಂದ್ರ ಮಂತ್ರಿ ಕಪಿಲ್ ಸಿಬಲ್ ಆರೋಪಿಸಿದ್ದಾರೆ. ಭ್ರಷ್ಟಾಚಾರಿಗಳ ವಿರುದ್ಧ ಸಮರ ಸಾರಿರುವುದು ರಾಜಕೀಯವೇ? ಅಥವಾ ರಾಜಕೀಯ ಎಂಬುದು ಈ ರೀತಿ ದಮನ ಮಾಡುವಷ್ಟು ಕೆಟ್ಟದ್ದೇ? ಹಾಗಂತ ಬಾಬಾ ರಾಮದೇವ್ ಅವರು, ಸರಕಾರದ ಖಜಾನೆಯಿಂದ ಅಥವಾ ನಿಮ್ಮ ಸ್ವಂತ ಹಣ ಕೊಡಿ ಅಂತ ಕೇಳಿದ್ದಾರೆಯೇ? ಅವರು ಮತ್ತು ಈ ದೇಶದ ಜನತೆ ಕೇಳುತ್ತಿರುವುದು, ವಿದೇಶದಲ್ಲಿ ಕೊಳೆಯುತ್ತಿರುವ ಹಣವನ್ನು ತಂದು, ದೇಶವನ್ನು ಶಾಪಮುಕ್ತವಾಗಿಸಿ ಅಂತಲ್ಲವೇ?
ಟಿವಿ ನೋಡಿದವರು ಗಮನಿಸಿದ್ದಿರಬಹುದು. ರಾಮಲೀಲಾ ಮೈದಾನದಲ್ಲಿ ಮಲಗಿದ್ದ ಸತ್ಯಾಗ್ರಹಿಗಳನ್ನು ಬಡಿದೆಬ್ಬಿಸಿ ಹೊತ್ತುಕೊಂಡು ಹೋಗಲಾಗುತ್ತಿತ್ತು. ಟೆಂಟುಗಳಿಗೆ ಬೆಂಕಿ ಹಚ್ಚಲಾಯಿತು. ನಿದ್ದೆಯಿಂದೆದ್ದು ಏನಾಗುತ್ತಿದೆ ಎಂದು ಕಣ್ಣುಜ್ಜುತ್ತಾ ಕೇಳಿದವರನ್ನು ಬಲವಂತವಾಗಿ ಕರೆದೊಯ್ಯಲಾಯಿತು. ಮಹಿಳೆಯರನ್ನು ಎಳೆದಾಡುತ್ತಿದ್ದ ದೃಶ್ಯವೂ ಕಾಣಬರುತ್ತಿತ್ತು. ಇಲ್ಲಿ ಓದುಗರು ದಯವಿಟ್ಟು ಗಮನಿಸಬೇಕು. ಪ್ರತಿಭಟನೆ ನಡೆಸುತ್ತಿದ್ದವರು ಕೇವಲ ಒಂದು ಧರ್ಮದವರಲ್ಲ. ಹಿಂದೂ, ಸಿಖ್, ಮುಸಲ್ಮಾನ, ಕ್ರಿಶ್ಚಿಯನ್, ಜೈನ ಮುಂತಾದ ಧರ್ಮೀಯರೆಲ್ಲರೂ ಒಟ್ಟು ಸೇರಿದ್ದರು. ದೇಶದ ಸರ್ವಧರ್ಮೀಯರನ್ನೂ ಒಗ್ಗೂಡಿಸಿದ ಬಾಬಾ ಅವರ ಜನಪ್ರಿಯತೆಯು ಕೇಂದ್ರ ಸರಕಾರದ ಕಣ್ಣು ಕುಕ್ಕಿಸಿತೇ? ಯೆಮೆನ್, ಈಜಿಪ್ಟ್, ಲಿಬಿಯಾ ಮುಂತಾದೆಡೆ ಸರ್ವಾಧಿಕಾರಿಗಳ ವಿರುದ್ಧ ನಡೆಯುತ್ತಿರುವ ಜನಾಂದೋಲನವು ಅದರ ಕಣ್ಮುಂದೆ ಬಂತೇ? ಅಲ್ಲಿ ಆದಂತೆ ಜನರು ಈಗ ಆಳ್ವಿಕೆಯನ್ನೇ ಮರೆತುಬಿಟ್ಟಂತಿರುವ ಪ್ರಭುತ್ವದ ವಿರುದ್ಧ ದಂಗೆಯೇಳುವರು ಎಂಬ ಭಯವೇ ಕಾರಣವೇ? ಇದೇನಾ ನಮ್ಮನ್ನು ಆಳುವವರ ಆಡಳಿತದ ವೈಖರಿ?
ಯಾವ ಪುರುಷಾರ್ಥ ಸಾಧಿಸಿದಂತಾಯಿತು?
ಕೊನೆಯಲ್ಲಿ ಹಲವು ಪ್ರಶ್ನೆಗಳು ಉಳಿಯುತ್ತವೆ. ಬಾಬಾ ಅವರ ಎಲ್ಲ ಬೇಡಿಕೆಗಳಿಗೆ ಒಪ್ಪಿದ್ದೇವೆ ಎಂದು ಘೋಷಿಸಿದ ಕಾಂಗ್ರೆಸ್, ಈ ಬಗ್ಗೆ ಲಿಖಿತ ಭರವಸೆ ನೀಡುವ ಬದಲಾಗಿ, ಸತ್ಯಾಗ್ರಹವನ್ನೇ ದಮನ ಮಾಡಿದ್ದು ಯಾಕೆ ಎಂಬುದು ಒಂದೆಡೆಯಾದರೆ, ಯಾವುದೇ ವ್ಯಕ್ತಿಯ ವಿರುದ್ಧವಾಗಲೀ, ಪಕ್ಷದ ವಿರುದ್ಧವಾಗಲೀ ಬಾಬಾ ರಾಮದೇವ್ ಮತ್ತು ಇಡೀ ದೇಶದ ಲಕ್ಷಾಂತರ ಪ್ರಜೆಗಳು ಪ್ರತಿಭಟನೆ ನಡೆಸುತ್ತಿದ್ದಲ್ಲಿಗೆ ಅಪರಾತ್ರಿಯಲ್ಲಿಯೇ ದಾಳಿ ಮಾಡಿ, ಗಾಢ ನಿದ್ದೆಯಲ್ಲಿದ್ದ ಮಹಿಳೆಯರು ಮಕ್ಕಳೆನ್ನದೆ ಎಲ್ಲರನ್ನೂ ಎಬ್ಬಿಸಿ ತದುಕಿರುವುದು ಯಾವ ಪುರುಷಾರ್ಥ? ಉಪವಾಸ ಮಾಡುತ್ತಿದ್ದವರನ್ನು ಬಲವಂತವಾಗಿ ಆಸ್ಪತ್ರೆಗೆ ಸೇರಿಸಿ, ಅವರ ಸತ್ಯಾಗ್ರಹವನ್ನೇ ಕೊನೆಗೊಳಿಸುತ್ತಾರೆ ಎಂದಾದರೆ, ನಮ್ಮ ಪ್ರಜಾಪ್ರಭುತ್ವಕ್ಕೇನು ಬೆಲೆ? ದೇಶದಲ್ಲೆಲ್ಲಾ ಭ್ರಷ್ಟಾಚಾರದ ವಿರೋಧಿ ಅಲೆ ಒಂದಾಗುತ್ತಿದೆ ಎಂದಾದಾಗ, ಸತ್ಯಾಗ್ರಹಕ್ಕೆ ಆಗಮಿಸಿದ ಬಾಬಾ ಅವರನ್ನು ಸಕಲ ಗೌರವಗಳಿಂದ ಬರಮಾಡಿಕೊಳ್ಳಲು ನಾಲ್ಕು ಮಹಾನ್ ಮಂತ್ರಿಗಳೇ ವಿಮಾನ ನಿಲ್ದಾಣಕ್ಕೆ ಹೋಗುತ್ತಾರೆ, ಅವರು ತಮ್ಮ ದಾರಿಗೆ ಬರುವುದಿಲ್ಲ ಎಂದಾದಾಗ ಮರು ದಿನವೇ ಅವರ ಮೇಲೆ ಪ್ರಹಾರ ಮಾಡಲಾಗುತ್ತದೆ!
ಬಾಬಾ ರಾಮದೇವ್ ಅವರೇ ಹೇಳಿದ ಪ್ರಕಾರ, ಉಪವಾಸಕ್ಕೆ ಅಣ್ಣಾ ಹಜಾರೆ ಬೆಂಬಲಿಸದಂತೆ ನೋಡಿಕೊಳ್ಳಬೇಕು, ಅವರೆಲ್ಲೂ ವೇದಿಕೆಯಲ್ಲಿ ಕಾಣಿಸಿಕೊಳ್ಳಬಾರದು ಎಂದು ಕಪಿಲ್ ಸಿಬಲ್ ಒತ್ತಡ ಹೇರಿದ್ದರು! ಅಂದರೆ ಬಾಬಾ ಅವರ ಹೋರಾಟಕ್ಕೆ ದುಪ್ಪಟ್ಟು ಬಲ ಬಂದರೆ, ತಮ್ಮ ಸರಕಾರಕ್ಕೆ ಉಳಿವಿಲ್ಲ ಎಂಬುದಕ್ಕಾಗಿ ಈ ತಂತ್ರ. ಇದಕ್ಕೆ ಒಪ್ಪದ ಬಾಬಾ ಅವರ ಸತ್ಯಾಗ್ರಹವನ್ನು ಬಲವಂತವಾಗಿ ಕೊನೆಗೊಳಿಸಲಾಗುತ್ತದೆ!
ನಮಗೇನೋ ಮಧ್ಯರಾತ್ರಿ ಸ್ವಾತಂತ್ರ್ಯ ಬಂತು. ಹಾಗಂತ ಅಪರಾತ್ರಿಯಲ್ಲಿ ನಿದ್ದೆಯಲ್ಲಿದ್ದ ಸತ್ಯಾಗ್ರಹಿಗಳನ್ನು ಹೊಡೆದೋಡಿಸಿ, ನಾವು ಪ್ರತಿಭಟನೆಯನ್ನು ಹತ್ತಿಕ್ಕಿದ್ದೇವೆ ಎಂದು ಬೀಗುವುದಿದೆಯಲ್ಲ? ಇದಕ್ಕೇನು ಹೇಳಬೇಕು? ಇದೇ ದಿಗ್ವಿಜಯ ಸಿಂಗ್ ಎಂಬ ಕಾಂಗ್ರೆಸ್ ಬಾಯಿಯಿಂದ, ಜಗತ್ತಿನ ಕುಖ್ಯಾತ ಉಗ್ರಗಾಮಿ ಒಸಾಮ ಬಿನ್ ಲಾಡೆನ್ ಗೌರವಯುತವಾಗಿ “ಲಾಡೆನ್‌ಜೀ” ಆಗುತ್ತಾನೆ, ಆದರೆ ನಮ್ಮದೇ ದೇಶದಲ್ಲಿ ಭ್ರಷ್ಟಾಚಾರದ ವಿರುದ್ದ ಸತ್ಯಾಗ್ರಹ ಮಾಡುತ್ತಿರುವ ಸನ್ಯಾಸಿಯು “ಠಕ್ಕ” ಆಗುತ್ತಾರೆ.
ಬಾಬಾ ಅವರ ಹಿಂದೆ ಕೋಟ್ಯಂತರ ಜನರು ದೇಶಾದ್ಯಂತ ಉಪವಾಸ ಮಾಡಿದ್ದಾರೆ, ಕಪ್ಪು ಹಣ ಭಾರತಕ್ಕೆ ಬರಬೇಕು ಎಂಬುದು ಅಷ್ಟೂ ಜನರ ಆಶೋತ್ತರವಾಗಿದೆ. ಹಾಗಿದ್ದರೆ ಈ ಸರಕಾರವು ಭಾರತೀಯ ಆಶೋತ್ತರಗಳಿಗೆ ಇನ್-ಸೆನ್ಸಿಟಿವ್ ಆಗಿದೆಯೇ? ಇದೇನಾ ನಮ್ಮದು “ಆಮ್ ಆದ್ಮೀ” ಪರ ಆಡಳಿತ ಎಂದು ಹೇಳಿಕೊಳ್ಳುತ್ತಿರುವುದರ ಅರ್ಥ? ಇನ್ನು ಸರಕಾರ ಏನೇ ಮಾಡಿದರೂ ನಾವು ಸಹಿಸಿಕೊಂಡಿರಬೇಕಾಗುತ್ತದೆ. ಇಲ್ಲಿ ಪ್ರತಿಪಕ್ಷವಾಗಿರುವ ಬಿಜೆಪಿ ಏನು ಮಾಡಿದೆ? ನಿಜಕ್ಕೂ ಇದು ಪ್ರತಿಪಕ್ಷಗಳ ಕೆಲಸವಾಗಬೇಕಿತ್ತು. ಆದರೆ, ಅದರ ಕೈಯಲ್ಲಿ ಮಾಡಲಾಗದೇ ಇದ್ದುದನ್ನು ಬಾಬಾ ಮಾಡಿ ತೋರಿಸಿದ್ದಾರೆ. ಈ ಇರಿಸುಮುರಿಸಿನಿಂದ, ನಾವೇ ಕಾಳಧನ ವಿಚಾರವನ್ನು ಎತ್ತಿದ್ದು ಎಂದು ಬಿಜೆಪಿ ಹೇಳಿಕೊಳ್ಳುತ್ತಿದೆಯಾದರೂ, ಐದು ವರ್ಷ ಅಧಿಕಾರದಲ್ಲಿದ್ದಾಗ ಅವರು ಮಾಡಿದ್ದೇನು ಎಂಬುದೂ ಉತ್ತರ ಸಿಗದ ಪ್ರಶ್ನೆ.
ಒಟ್ಟಿನಲ್ಲಿ, ನಮ್ಮ ನ್ಯಾಯಕ್ಕಾಗಿ ನಮ್ಮ ಹೋರಾಟದ ಹಕ್ಕು ಕಸಿದುಕೊಳ್ಳುವ ಈ ದಮನಕಾರಿ ನೀತಿ, ಸತ್ಯಾಗ್ರಹ ಹತ್ತಿಕ್ಕುವ ವಿಧಾನವು ಖಂಡಿತವಾಗಿಯೂ ಅಪಾಯಕಾರಿ ಬೆಳವಣಿಗೆ!
[ವೆಬ್‌ದುನಿಯಾಕ್ಕಾಗಿ]
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು