Categories: myworldOpinion

ಯಾವ ಪುರುಷಾರ್ಥಕ್ಕೆ ಈ ಸ್ವಾತಂತ್ರ್ಯ?

ಇದು ನಾನು ಪತ್ರಿಕಾರಂಗದಲ್ಲಿ ಹೆಜ್ಜೆಯೂರುತ್ತಿದ್ದ ದಿನಗಳಲ್ಲಿ ಮಂಗಳೂರಿನಿಂದ ಪ್ರಕಟವಾಗುತ್ತಿದ್ದ ಕನ್ನಡ ಜನ ಅಂತರಂಗ ಎಂಬ ದೈನಿಕದಲ್ಲಿ 27-05-1997ರಲ್ಲಿ ಪ್ರಕಟವಾಗಿದ್ದ ಲೇಖನ. ಬಹುಷಃ ಇಂದಿಗೂ ಪ್ರಸ್ತುತ ಅನಿಸುತ್ತಿದೆ. ಆಗ ಅಧಿಕಾರದಲ್ಲಿದ್ದದ್ದು ಹತ್ತು ಹಲವು ಪಕ್ಷಗಳ ಮಿತ್ರಕೂಟವಾದ ಸಂಯುಕ್ತ ರಂಗದ ಇಂದ್ರಕುಮಾರ್ ಗುಜ್ರಾಲ್ ನೇತೃತ್ವದ ಸರಕಾರ. ಅಂದಿನ ಬರವಣಿಗೆ ತುಂಬಾ ಬಾಲಿಶ ಅನ್ನಿಸಿದ್ದಿದೆ. ಆದರೂ ಇದು ಈಗಲೂ ಪ್ರಸ್ತುತ ಅನಿಸುತ್ತಿದೆ. ಲೇಖನ ದೀರ್ಘವಾಗಿದೆ. ಇದರ ಸಾರಾಂಶ ಇಷ್ಟು: ಭ್ರಷ್ಟಾಚಾರ ಅಂದಿಗೂ ಇಂದಿಗೂ ಹಾಗೆಯೇ ಉಳಿದುಕೊಂಡಿದೆ.

ಭಾರತದ ಬಡ ಮತದಾರರು ಗೊಂದಲಕ್ಕೀಡಾಗಿದ್ದಾರೆ. ನಾವು ಯಾರನ್ನೋ ಆರಿಸಿ ಕಳುಹಿಸಿದ್ದರೂ ರಾಜ್ಯಭಾರ ಮಾಡುವವರು ಇನ್ಯಾರೋ ಎಂದು ತಲೆ ಚಚ್ಚಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿಗಳು ಬಹುಸಂಖ್ಯೆಯಲ್ಲಿ ಲೋಕಸಭಾ ಸ್ಥಾನಗಳನ್ನು ಗಳಿಸಿದ್ದರೂ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವುದು ತೇಪೆ ಹಚ್ಚಿದ ನೋಟುಗಳನ್ನು ಪ್ರತಿಬಿಂಬಿಸುವ ನಮ್ಮ ಇಂದಿನ ಚೌಚೌ ಸರಕಾರ. ಪ್ರಜಾಸತ್ತೆಯಲ್ಲಿ ಇದು ವಿರೋಧಾಭಾಸವಲ್ಲವೆ?

ಮತದಾರರು ಯಾವುದೇ ಅತಿದೊಡ್ಡ ಪಕ್ಷವೇ ದೇಶವಾಳಬೇಕೆಂದು ಬಯಸುತ್ತಿದ್ದರೂ ಕೆಲವು ರಾಕ್ಷಸೀ ಪ್ರವೃತ್ತಿಯ, ಗೂಂಡಾಗಿರಿಯ, ಅಧಿಕಾರದಾಹಿ ರಾಜಕಾರಣಿಗಳು ಸ್ವಜನ ಪಕ್ಷಪಾತ ಹಾಗೂ ವೈಯಕ್ತಿಕ ದ್ವೇಷಗಳಿಂದ ಭಾರತ ಮಾತೆಯ ಕಣ್ಣಲ್ಲಿ ನೀರಿಳಿಸುತ್ತಿರುವುದು ಅಕ್ಷಮ್ಯ ಅಪರಾಧ. ತನಗೆ ಅನ್ನ ನೀಡಿದ ಭಾರತ ಮಾತೆಯ ಸೆರಗಿಗೇ ಕೈಹಚ್ಚಿ ಆಕೆಯನ್ನು ಬೆತ್ತಲೆಗೊಳಿಸುವ ಕೆಲವು ರಾಜಕಾರಣಿಗಳ ‘ಸಿಕ್ಕಿದ್ದನ್ನು ಕಬಳಿಸುವ’ ನೀತಿಯಿಂದಾಗಿ ಭಾರತವಿಂದು ವಿಶ್ವದಲ್ಲಿ ತಲೆ ತಗ್ಗಿಸಬೇಕಾಗಿದೆ.

ಪಶುಗಳಿಗೆ ಒದಗಿಸಲಾದ ಮೇವನ್ನು ತಿಂದರು, ಸಸ್ಯಗಳಿಗೆ ನೀಡಬೇಕಾಗಿರುವ ಯೂರಿಯಾವನ್ನೇ ಮುಕ್ಕಿದರು, ಟೆಲಿಫೋನುಗಳನ್ನು ನುಂಗಿ ಹಾಕಿದರು, ಬೋಫೋರ್ಸ್ ಫಿರಂಗಿಗಳನ್ನು ಮಕ್ಕಳಾಟಕ್ಕೆ ಉಪಯೋಗಿಸಿಕೊಂಡರು, ಲಕ್ಕೂಭಾಯಿ ಪಾಠಕ್‌ನ ಉಪ್ಪಿನಕಾಯಿಯನ್ನೇ ನುಂಗಿ ನೀರು ಕುಡಿದರು (ಅಲ್ಲ, ಪಾಠಕ್‌ಗೆ ನೀರು ಕುಡಿಸಿದರು). ಅದೂ ಅಲ್ಲದೆ ಬೆಳಕಿಗೆ ಬಾರದ ಇನ್ನೆಷ್ಟೋ ಹಗರಣಗಳಿಂದ ತುಂಬಿ ತುಳುಕಾಡುತ್ತಿದೆ ನಮ್ಮ ಭವ್ಯ ಭಾರತ. ಮೀಸಲಾತಿ ನೀತಿಯನ್ನು ಜಾರಿಗೊಳಿಸಿ ಜಾತಿಭೇದದ ವಿಷಬೀಜ ಬಿತ್ತಿ ಅಣ್ಣ ತಮ್ಮಂದಿರೊಳಗೆ, ಬಂಧು ಬಾಂಧವರ ನಡುವೆ ಯಾದವೀ ಕಲಹವುಂಟು ಮಾಡುವಲ್ಲಿ ಸಫಲರಾದರು. ಇದೆಲ್ಲವನ್ನೂ ನೋಡುತ್ತಿದ್ದರೆ ನಮಗೆ ಯಾವ ಪುರುಷಾರ್ಥಕ್ಕೆ ಈ ಸ್ವಾತಂತ್ರ್ಯ ದೊರೆಯಿತು ಎಂದು ಕೇಳಬೇಕಾದ ಪರಿಸ್ಥಿತಿ ಬಂದಿದೆ.

ಎಲ್ಲಿ ಹೋದರೂ ಲಂಚವಿಲ್ಲದೆ ಕೆಲಸವಾಗದು. ದಿನದಿಂದ ದಿನಕ್ಕೆ ಏರುತ್ತಿರುವ ಬೆಲೆಗಳಿಂದಾಗಿ ಜನಸಾಮಾನ್ಯರು ನಾಲ್ಕು ದಿನಕ್ಕೊಮ್ಮೆ ಊಟ ಮಾಡುವ ಪರಿಸ್ಥಿತಿ ಇದ್ದರೂ, ರಾಜಕಾರಣಿಗಳು ಹೊಟ್ಟೆ ತುಂಬಾ ತಿನ್ನುತ್ತಾ, ಢರ್ರನೇ ತೇಗಿ, ತಮ್ಮ ಮಕ್ಕಳಿಗೆ, ಮೊಮ್ಮಕ್ಕಳಿಗೆ, ಮರಿ ಮಕ್ಕಳಿಗೆ ಸಾಕಾಗುವಷ್ಟು ಮಾತ್ರಲ್ಲದೆ, ಅದಕ್ಕಿಂತಲೂ ಹೆಚ್ಚು ಕೂಡಿ ಹಾಕುವುದರಲ್ಲೇ ಮಗ್ನರಾಗಿದ್ದಾರಲ್ಲಾ…. ಇಂಥವರಿಗೆ ಏನನ್ನಬೇಕು?

ರಾಜಕಾರಣಿಗಳು ಭ್ರಷ್ಟಾಚಾರದಲ್ಲಿ ತೊಡಗಿರುವುದು ಸಾಬೀತಾದರೂ ಶಿಕ್ಷೆ ನೀಡಲಾಗದ ಕಾನೂನು. ಇದಕ್ಕೆ ಪ್ರಮುಖ ಕಾರಣವೆಂದರೆ ಕಾನೂನನ್ನು ತಮಗೆ ಬೇಕಾದ ರೀತಿಯಲ್ಲಿ ತಿದ್ದುಪಡಿ ಮಾಡುತ್ತಿರುವ ರಾಜಕಾರಣಿಗಳೇ ಎಂಬುದು ಸುಸ್ಪಷ್ಟ. ನಮಗಿಂತಹಾ ಛೀ-ಥೂ ಸಂಸ್ಕೃತಿಗೆ ಲಾಯಕ್ಕಾಗಿರುವ ಆಡಳಿತ ಬೇಡವೆಂದು ಜನರೇ ದಂಗೆ ಏಳಬೇಕಾದ ಪರಿಸ್ಥಿತಿ ಉದ್ಭವವಾದರೂ ಆಶ್ಚರ್ಯಪಡಬೇಕಾಗಿಲ್ಲ.

ಝೈರೆ (ಈಗಿನ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ)ದಲ್ಲಿ ನಡೆದ ಘಟನೆ ನೆನಪಿಸಿಕೊಂಡರೆ ಈ ಬಗ್ಗೆ ನಮ್ಮ ಜನರಿಗೆ ಆತ್ಮವಿಶ್ವಾಸ ವೃದ್ಧಿಯಾಗಬಹುದು. ಅಲ್ಲಿನ ಮಾಜಿ ಅಧ್ಯಕ್ಷ ಮೊಬುಟು ಸೆಸೆ ಸೀಕೋ ಅವರ 32 ವರ್ಷಗಳ ದೀರ್ಘಕಾಲದ ನಿರಂಕುಶಾಡಳಿತದಿಂದ ಬೇಸತ್ತ ಜನರು ಲಾರೆಂಟ್ ಡಿಸ್ವೆರ್ ಕಬಿಲಾ ನೇತೃತ್ವದಲ್ಲಿ ಸರಕಾರವನ್ನು ಕಿತ್ತೊಗೆದು ತಮ್ಮದೇ ಆದ ಸರಕಾರ ರಚನೆಗೆ ಮುಂದಾದರು. ಇದರಿಂದಲಾದರೂ ನಮ್ಮ ರಾಜಕಾರಣಿಗಳು ಪಾಠ ಕಲಿಯುವಂತಾಗಲಿ.

ಸ್ವಾತಂತ್ರ್ಯ ಬಂದು 50 ವರ್ಷಗಳಾದರೂ ಬಡಜನರ ಉದ್ಧಾರ ಆಗಿದೆಯೇ ಎಂದು ಪ್ರತಿಯೊಬ್ಬ ರಾಜಕಾರಣಿಯೂ ಆತ್ಮವಿಮರ್ಶೆ ಮಾಡಿಕೊಳ್ಳಲಿ. ಆದರೆ ಅವರಿಗೆ ಆತ್ಮವಿಮರ್ಶೆಗೆ ಪುರುಸೊತ್ತಾದರೂ ಎಲ್ಲಿದೆ ಸ್ವಾಮೀ? ಸಿಕ್ಕಿದ್ದನ್ನು ಕಬಳಿಸಿ ತನ್ನ ಜೇಬು ಭರ್ತಿ ಮಾಡಿಕೊಳ್ಳುವುದರಲ್ಲೇ ಮಗ್ನರಾದ ಅವರಿಗೆ ಇಂಥ “ಕೆಟ್ಟ” ಯೋಚನೆಗಳನ್ನು ಮಾಡಲು ಸಮಯವಾದರೂ ಎಲ್ಲಿದೆ? ಕಾಲಾವಕಾಶ ಎಂಬುದು ಅಂಗಡಿಗಳಲ್ಲಿ ದೊರೆಯುತ್ತಿದ್ದರೆ ಅವುಗಳಿಗೂ ಕನ್ನ ಹಾಕಿ, ಕಬಳಿಸಿ ಇನ್ನಷ್ಟು ಸಂಪತ್ತು ಸಂಗ್ರಹಣೆಗೆ ಎಳಸುತ್ತಿದ್ದರೋ ಏನೋ…!

ಜನರ ಕಷ್ಟನಷ್ಟಗಳಿಗೆ ಸ್ಪಂದಿಸಿ ಅದರ ನಿವಾರಣೆಗೆ ಪ್ರಯತ್ನಿಸಬೇಕಾಗಿರುವ ನಮ್ಮ “ನಾಯಕರು” ಐದು ವರ್ಷಕ್ಕೊಮ್ಮೆ ಮಾತ್ರ “ಗೋಮುಖ” ಧರಿಸಿ ಕೃತಕ ನಗೆ ಬೀರುತ್ತಾ ತಮ್ಮ ತಮ್ಮ ಕಾರ್ಯಕ್ಷೇತ್ರಗಳಿಗೆ ಭೇಟಿ ನೀಡುತ್ತಿರುವುದನ್ನು ಏನನ್ನೋಣ…?
ಈ ಸಂದರ್ಭದಲ್ಲಿ ಮಹಾಭಾರತದ ಒಂದು ಪ್ರಸಂಗ ಉಲ್ಲೇಖಿಸುವುದು ಸಂಗತವೆನಿಸುತ್ತದೆ.
ಶ್ರೀಕೃಷ್ಣನು ಒಂದು ಬಾರಿ ಧರ್ಮರಾಯನಲ್ಲಿ ಈ ಪ್ರಪಂಚದಲ್ಲಿರುವ ಜನ ಹೇಗಿದ್ದಾರೆ ಎಂದು ಕೇಳಿದಾಗ ಪ್ರಾಮಾಣಿಕವಾಗಿ ಉತ್ತರಿಸಿದ ಧರ್ಮಜ, ಭಗವನ್, ಈ ಜಗತ್ತು ಒಳ್ಳೆಯವರಿಂದಲೇ ತುಂಬಿ ತುಳುಕಾಡುತ್ತಿದೆ ಎಂದನಂತೆ. ಬಳಿಕ ದುರ್ಯೋಧನನಿಗೂ ಇದೇ ಪ್ರಶ್ನೆಯನ್ನು ಶ್ರೀಕೃಷ್ಣ ಪರಮಾತ್ಮ ಒಡ್ಡಿದಾಗ, ಆತ ರೋಷಾವೇಶದಿಂದ ‘ಪ್ರಪಂಚದಲ್ಲಿರುವವರೆಲ್ಲರೂ ಕೆಟ್ಟವರು’ ಎಂದನಂತೆ.

ಈ ಘಟನೆಯ ನೀತಿ ಸ್ಪಷ್ಟ. ಪ್ರಪಂಚ ಎನ್ನುವುದು ಒಳ್ಳೆಯದೂ ಅಲ್ಲ, ಕೆಟ್ಟದೂ ಅಲ್ಲ. ಅವರವರ ಭಾವಕ್ಕೆ ತಕ್ಕಂತಿರುತ್ತದೆ. ನಮ್ಮ ನಮ್ಮ ಮನಸ್ಥಿತಿಯನ್ನು ಅದು ಅವಲಂಬಿಸಿರುತ್ತದೆ.
ಇದನ್ನು ಯಾಕಿಲ್ಲಿ ಪ್ರಸ್ತಾಪಿಸಬೇಕಾಯಿತೆಂದರೆ, ಕೆಲವು ರಾಜಕಾರಣಿಗಳಿಗೆ ಈ ಮಾತು ಬಹಳವಾಗಿ ಅನ್ವಯಿಸುತ್ತದೆ. ತನ್ನ ಸುತ್ತಮುತ್ತ ಇರುವವರೆಲ್ಲರೂ ಮೂರ್ಖರು, ಮೂಢರು ಎಂದು ತಿಳಿದುಕೊಂಡಿರುವ ಇವರಿಗೆ ಕಡಿವಾಣ ಹಾಕುವುದು ಅಸಾಧ್ಯದ ಕೆಲಸ.

ಆದುದರಿಂದ ಭಾರತ ಮಾತೆಯ ಹೆಮ್ಮೆಯ ಮಕ್ಕಳಾದ ಮತದಾರರಲ್ಲಿ ವಿನಮ್ರ, ಕಳಕಳಿಯ ವಿನಂತಿಯೆಂದರೆ, ಯಾವುದೇ ಪಕ್ಷಭೇದ ತೊಡೆದು ಹಾಕಿ,  ಮತದಾನದ ವೇಳೆ ಹಣ, ಹೆಂಡದ ಆಮಿಷಕ್ಕೆ ಬಲಿಯಾಗಬೇಡಿ, ಅಭ್ಯರ್ಥಿಯ ಹಣೆಬರಹವನ್ನು (ಜೀವನ ಚರಿತ್ರೆ) ಓದಿ, ಅರ್ಹರಿಗೆ ಮಾತ್ರವೇ ಮತ ನೀಡಿ. ಇಲ್ಲವಾದಲ್ಲಿ ದೇಶವು ಧ್ವಂಸ-ವಿಧ್ವಂಸವಾಗುವುದರಲ್ಲಿ ಸಂದೇಹವೇ ಇಲ್ಲ.

ಬಹುಶಃ ಈ ರೀತಿ ಮಾಡದಿದ್ದರೆ, ಭಾರತದ ಸರ್ವನಾಶವನ್ನು ತಡೆಗಟ್ಟಲು ಅಂತಿಮ ಪ್ರಯತ್ನವಾಗಿ “ಬ್ರಿಟಿಷರೇ ಭಾರತಕ್ಕೆ ಬನ್ನಿ” ಎಂಬ ಚಳವಳಿ ನಡೆಸಬೇಕಾಗಬಹುದೇನೋ…
ಆದುದರಿಂದ ಸ್ವಾತಂತ್ರ್ಯ ಸುವರ್ಣ ಮಹೋತ್ಸವದ ಈ ಸಂದರ್ಭದಲ್ಲಾದರೂ ಭ್ರಷ್ಟಾಚಾರದಿಂದ ತುಂಬಿ ತುಳುಕಾಡುತ್ತಿರುವ ಭಾರತ ಮಾತೆಯ ಶೀಲ ರಕ್ಷಣೆಗಾಗಿ ಸಿದ್ಧರಾಗಿ, ಭ್ರಷ್ಟ ರಾಜಕಾರಣಿಗಳನ್ನು, ಅಧಿಕಾರಿಗಳನ್ನು, ನಮ್ಮನ್ನಾಳುವವರನ್ನು ಉಗ್ರ ಶಿಕ್ಷೆಗೆ ಗುರಿಪಡಿಸುವುದಕ್ಕೇ ಮತದಾರರು ಆದ್ಯತೆ ನೀಡಿದಲ್ಲಿ, ಅದೊಂದು ಸುವರ್ಣ ವರ್ಷಾಚರಣೆಗೆ ಸಾರ್ಥಕ ಕೊಡುಗೆಯೆನಿಸಬಹುದು. ಭಾರತದ ಗತ ವೈಭವವನ್ನು ಮರುಕಳಿಸುವಂತೆ ಮಾಡಲು ಭಾರತ ಮಾತೆಯ ಹೆಮ್ಮೆಯ ಪುತ್ರ ಇದೊಂದು ಅಳಿಲು ಸೇವೆಯನ್ನಾದರೂ ಮಾಡಬಲ್ಲನೇ….?

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Recent Posts

ಎಐ ವೈಶಿಷ್ಟ್ಯಗಳ realme GT 7 Pro ಬಿಡುಗಡೆ: ಬೆಲೆ ಎಷ್ಟು? ವೈಶಿಷ್ಟ್ಯಗಳೇನು? ಇಲ್ಲಿದೆ ಪೂರ್ಣ ಮಾಹಿತಿ

ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್‌ ಇರುವ ಬಹುನಿರೀಕ್ಷಿತ…

4 weeks ago

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

3 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

4 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

4 months ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

5 months ago

ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

11 months ago