Categories: Yakshagana

ಚೆನ್ನೈ ಮ್ಯೂಸಿಕ್ ಅಕಾಡೆಮಿಯಲ್ಲಿ ಯಕ್ಷಗಾನದ ಧ್ವನಿ


ಚೆನ್ನೈ ಮ್ಯೂಸಿಕ್ ಅಕಾಡೆಮಿ!
ಸಂಗೀತ ಕ್ಷೇತ್ರದ ಜ್ಞಾನಿಗಳ ಜನಜನಿತ ಹೆಸರು; ಸಂಗೀತ ಕಲಾವಿದರ ಕನಸಿನ ವೇದಿಕೆ. ಒಂದಲ್ಲ ಒಂದು ದಿನ ಇಲ್ಲಿ ಕಾರ್ಯಕ್ರಮ ನೀಡುವ ಅವಕಾಶ ತನ್ನದಾಗಬೇಕೆಂದು ಗಾಯಕರು, ವಾದಕರು ಹಪಹಪಿಸುವ ತಾಣವಿದು. ಶಾಸ್ತ್ರೀಯ ಸಂಗೀತ ಲೋಕದ ಕೇಂದ್ರ ಬಿಂದು – ಚೆನ್ನೈಯಲ್ಲಿರುವ ಮ್ಯೂಸಿಕ್ ಅಕಾಡೆಮಿ.

ಈ ಪೀಠಿಕೆ ಯಾಕೆಂದರೆ, ಭರ್ತಿ ಆರು ವರ್ಷ ಚೆನ್ನೈಯಲ್ಲೇ ಇದ್ದರೂ, ಹಲವಾರು ಬಾರಿ ಮನದ ದುಗುಡ ಕಳೆಯಲೆಂದು ಸಮುದ್ರ ತೀರಕ್ಕೆ ಅದೇ ರಸ್ತೆಯಲ್ಲಿ ಹೋಗುತ್ತಿದ್ದರೂ, ರಾಧಾಕೃಷ್ಣನ್ ಸಾಲೈ (ಟಿಟಿಕೆ ರೋಡ್) ನಲ್ಲೇ ಇರುವ ಮ್ಯೂಸಿಕ್ ಅಕಾಡೆಮಿಯತ್ತ ಕಣ್ಣು ಹಾಯಿಸಿದ್ದೆನಷ್ಟೇ, ಅದೇನೇನೋ ಕನಸುಗಳಲ್ಲಿದ್ದವು, ನಿರೀಕ್ಷೆ ಇದ್ದಿತ್ತು. ಆದರೆ, ಚೆನ್ನೈ ಬಿಟ್ಟು ಬಂದ ನಾಲ್ಕು ವರ್ಷಗಳ ತರುವಾಯ ಆ ಒಂದು ದಿನ ನನ್ನ ಪಾಲಿಗೆ ಬಯಸದೇ ಬಂದ ಭಾಗ್ಯ.

ಅದು ಕೂಡ ಕರ್ನಾಟಕ ಸಂಗೀತ ಲೋಕದ ದಿಗ್ಗಜರೆದುರು ಮ್ಯೂಸಿಕ್ ಅಕಾಡೆಮಿಯ ಆ ಒಂದು ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮದ ಭಾಗವಾಗುವ ಯೋಗ ನನ್ನದಾಗಿತ್ತು. ಈ ಕಾರಣಕ್ಕಾಗಿ, ಸಿಕ್ಕಿದ ಅವಕಾಶ ಬಿಡಬಾರದೆಂದು, ಒಂದೇ ದಿನ ರಜೆ ಹಾಕಿ ಕ್ರಿಸ್‌ಮಸ್ ಮುನ್ನಾದಿನ ಚೆನ್ನೈಗೆ ಹೋಗಿ ಬಂದೆ.

ಡಿಸೆಂಬರ್ ಎಂದರೆ ಮಾರ್ಗಳಿ ಮಾಸ (ಮಾರ್ಗಶಿರ ತಿಂಗಳು); ಚೆನ್ನೈ ತಂಪಾಗುವ ಸಮಯವದು. ಈ ವರ್ಷ ತಿಂಗಳಾರಂಭದ ಭಾರೀ ಮಳೆ ತಂದ ಅನಾಹುತದಿಂದಾಗಿ ಮುಳುಗಿ ಚೆನ್ನೈಯಿನ್ನೂ ನಿಧಾನವಾಗಿ ಕಣ್ಣು ತೆರೆದುಕೊಳ್ಳುತ್ತಿದೆಯಷ್ಟೇ. ಈ ಮಾಸವು ಇದ್ದಬದ್ದ ವೇದಿಕೆಗಳಲ್ಲೆಲ್ಲಾ ಕರ್ನಾಟಕ ಶಾಸ್ತ್ರೀಯ ಸಂಗೀತದ ಆಲಾಪನೆಗಳು, ಮೃದಂಗದ ನುಡಿಗಳು, ಘಟಂ ಪೆಟ್ಟುಗಳು, ಕೊನ್ನಕ್ಕೋಲು, ಕಂಜಿರ, ಪಿಟೀಲು, ವೀಣೆ, ಕೊಳಲಿನ ಧ್ವನಿಗಳು ಕೇಳಿಬರುವ ಕಾಲ. ತಿಂಗಳೊಂದಲ್ಲ, ಎರಡು ತಿಂಗಳಿಗೂ ಮಿಕ್ಕಿ ಕೆಲವು ಕಡೆ ಈ ರೀತಿಯ ಸಂಗೀತೋತ್ಸವಗಳು ಮುಂದುವರಿಯುತ್ತವೆ. ಒಳಗಿದ್ದುಕೊಂಡೂ ವೃತ್ತಿಯೊತ್ತಡದಿಂದಾಗಿ ಸಂಭ್ರಮಿಸಲಾಗದಿದ್ದ ನಾನು, ಈ ಸಂಭ್ರಮ ಕಾಲದಲ್ಲಿ ಚೆನ್ನೈಗೆ ಮತ್ತೊಮ್ಮೆ ‘ಹೊರಗಿನವನಾಗಿ’ ಹೋಗಿ ಬಂದೆ.

ಕಾರ್ಯಕ್ರಮವಿದ್ದದ್ದು ಶಾಸ್ತ್ರೀಯ ಸಂಗೀತಕ್ಕೂ ಯಕ್ಷಗಾನಕ್ಕೂ ನಂಟು ಬೆಸೆಯುವ ತಾಳಗಳ ಬಗೆಗೆ ಮೈಸೂರಿನ ಸಂಗೀತ ವಿದ್ವಾನ್ ಮಹೇಶ ಪದ್ಯಾಣ ನೆರವೇರಿಸಿಕೊಡುವ ಪ್ರಾತ್ಯಕ್ಷಿಕೆ. ಪದ್ಯಾಣ ಮನೆತನ – ನಮಗೆಲ್ಲ ಗೊತ್ತಿರುವಂತೆ ಯಕ್ಷಗಾನಕ್ಕೆ ಭಾರಿ ಹೆಸರು. ಯಕ್ಷಗಾನ ಲೋಕಕ್ಕೆ ದಿಗ್ಗಜರನ್ನು ನೀಡಿದ ಊರದು. ಆದರೆ ಸಂಗೀತ ಕ್ಷೇತ್ರದಲ್ಲಿಯೂ ವಿಟ್ಲ ಸಮೀಪದ ಈ ಒಂದು ಊರಿನ ಮಣ್ಣಿನ ಕೊಡುಗೆ ಅಪಾರ. ಅಲ್ಲಿನವರೇ ಆದ ಮಹೇಶ್ ಪದ್ಯಾಣ ಸಾಫ್ಟ್‌ವೇರ್ ಎಂಜಿನಿಯರ್ ಆಗಿ, ಅಮೆರಿಕದಲ್ಲಿ ಸೇವೆ ಸಲ್ಲಿಸಿ ತಮ್ಮಲ್ಲಿನ ಸಂಗೀತವನ್ನು ಅಲ್ಲೂ ಪೋಷಿಸಿಕೊಂಡೇ ಬಂದವರು. ಈಗ ಕ್ಲೌಡ್ ಡಾಟ್ ಇನ್ ಸಿಇಒ ಆಗಿದ್ದು, ಮೈಸೂರಿನಲ್ಲಿ ನೆಲೆಸಿದ್ದಾರೆ.

‘ಯಕ್ಷಗಾನದಲ್ಲಿ ತಾಳಗಳು’ ಎಂಬ ಕುರಿತಾಗಿ ಉಪನ್ಯಾಸ-ಪ್ರಾತ್ಯಕ್ಷಿಕೆ ಅವರದು. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಹಲವು ಪ್ರಯೋಗಗಳನ್ನು ಮಾಡಿದವರಾಗಿದ್ದರೂ, ಕೆಲವೇ ದಿನಗಳಲ್ಲಿ ಯಕ್ಷಗಾನದ ಶೈಲಿಯಲ್ಲಿ ಹಾಡುಗಳನ್ನು ಕರಗತವಾಗಿಸಿಕೊಂಡು, ಈ ಅಪರೂಪದ ಉಪನ್ಯಾಸ ಕಾರ್ಯಕ್ರಮಕ್ಕೆ ತಯಾರು ಮಾಡಿಕೊಂಡುಬಿಟ್ಟಿದ್ದರು.

ಬೆಳ್ಳಂಬೆಳಗ್ಗೆ 8 ಗಂಟೆಗೆ ಕಾರ್ಯಕ್ರಮ ಆರಂಭವಾದಾಗ ಸಭಾಸದರ ಸಂಖ್ಯೆ ಕಡಿಮೆ ಇತ್ತು. ಐದು-ಹತ್ತು ನಿಮಿಷದಲ್ಲಿ ಮಿನಿ ಹಾಲ್ ತುಂಬಿಕೊಂಡಿತು. ಎದುರಿನ ಸಾಲಿನಲ್ಲಿ ಕುಳಿತಿದ್ದವರಾದರೂ ಯಾರು? ಕರ್ನಾಟಕ ಸಂಗೀತ ಲೋಕ ಕಂಡ ಮೇರು ಕಲಾವಿದ, ಕಲೈಮಾಮಣಿ ಟಿ.ವಿ.ಗೋಪಾಲಕೃಷ್ಣನ್. ಅವರನ್ನು ನೋಡಿದ ತಕ್ಷಣ ಕರಗಳು ಅಯಾಚಿತವಾಗಿ ಮುಗಿದುಕೊಂಡವು, ನಕ್ಕು ಬಿಟ್ಟೆ, ಆದರೆ ಮನಸ್ಸಿನೊಳಗಂತೂ ಭತ್ತ ಕುಟ್ಟಿದ ಅನುಭವ. ಅಂತಹಾ ಅದ್ಭುತ ಹಾಡುಗಾರ, ಮೃದಂಗವಾದನದ ಸಿಂಧುವಿನ ಎದುರು ನಾನೊಂದು ಬಿಂದುವಾಗಿದ್ದೆ. ಆತಂಕವಾಗತೊಡಗಿತು. ಮಹೇಶ್ ಹಾಡಿಗೆ ನಾನು ಮೃದಂಗಕ್ಕೆ ಮದ್ದಳೆಯ ನುಡಿತಗಳನ್ನು ಅಳವಡಿಸಲು ಹೆಣಗಾಡುತ್ತಾ ನುಡಿಸುವಾಗ, ಅವರ ಕೈಗಳೂ ತಾಳ ಹಾಕುತ್ತಿದ್ದವು! ಉಫ್! ಬೆವೆತುಬಿಟ್ಟೆ.

ಅಷ್ಟೆ, ಬೇರೇನೂ ಯೋಚಿಸಲಾರದಾದೆ. 9ರ ಆಸುಪಾಸಿಗೆ ಕಾರ್ಯಕ್ರಮ ಮುಗಿಸಿದ ಬಳಿಕ ಸಂಗೀತವೆಂಬ ಸಾರಸ್ವತ ಸಭೆಯಿಂದ ಕರತಾಡನ ಮತ್ತು ಶ್ಲಾಘನೆ. ಒಂದಿಷ್ಟು ಸಂದೇಹಗಳಿಗೆ ಸಂವಹನಾತ್ಮಕ ಉತ್ತರ. ಒಂದು ಕಾಲದಲ್ಲಿ ಕೇವಲ ಕನಸನ್ನೇ ಕಂಡು, ಅದನ್ನು ಹಾಗೆಯೇ ಮನದೊಳಗೆ ಮುಚ್ಚಿಟ್ಟುಕೊಂಡಿದ್ದ, ಮ್ಯೂಸಿಕ್ ಅಕಾಡೆಮಿಯಲ್ಲಿ ಕಾರ್ಯಕ್ರಮ ನೀಡುವ ಕನಸು ನನಸಾದ ಕ್ಷಣ. ತೃಪ್ತಿ, ಆನಂದ ಮನದೊಳಗಿತ್ತು. ಈ ನೆಪದಲ್ಲಿ ವಾಪಸ್

ಇದಕ್ಕೂ ಹೆಚ್ಚಿನದಾಗಿ, ಚೆನ್ನೈಯೆಂಬ ಸಂಗೀತದ ಮಹಾಸಾಗರದಲ್ಲಿ ಯಕ್ಷಗಾನದ ನಡೆಗಳನ್ನು, ತಾಳಗಳನ್ನು; ಮತ್ತು ಸಂಗೀತ ಲೋಕವು ಕಂಡರಿಯದ ತಾಳ ಬದಲಾವಣೆಯ ಪ್ರಕ್ರಿಯೆಯನ್ನು (ಇದುವೇ ಯಕ್ಷಗಾನದ ವೈಶಿಷ್ಟ್ಯ, ಮಹಾನ್ ವಿದ್ವಾಂಸ ಜೇಸುದಾಸ್ ಅವರೂ ಈ ಬಗ್ಗೆ ಅಚ್ಚರಿಪಟ್ಟಿದ್ದರು) ಪರಿಚಯಿಸಿದ ಹೆಗ್ಗಳಿಕೆಯಲ್ಲಿ ನನ್ನದೂ ಒಂದು ಪಾಲು.

ಯಕ್ಷಗಾನಕ್ಕೂ ಸಂಗೀತಕ್ಕೂ ಬಹುಕಾಲದ ನಂಟಿದೆ. ಈಗ ಸಂಗೀತ ಲೋಕದಲ್ಲಿ ಯಕ್ಷಗಾನದ ಸಾರವನ್ನು ಪರಿಚಯಿಸಿದ್ದಾಗಿದೆ. ಈ ಎರಡು ಅದ್ಭುತ ಕಲೆಗಳ ಮತ್ತಷ್ಟು ಸಾಮೀಪ್ಯದ ನಿರೀಕ್ಷೆಯೊಂದಿಗೆ….

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

View Comments

    • ವಾವ್, ಸೂಪರ್ ಸರ್. ಥ್ಯಾಂಕ್ಯೂ

  • ಪರಿಮಳ ಬಂದು ಭರಣಿ ನೆಕ್ಕಿದ ಅನುಭವವಾಯ್ತು. ನಿಮ್ಮ ಕಲಾಪದ ಚಲಚಿತ್ರ, ಬೇಡ ಕನಿಷ್ಠ ಶ್ರಾವ್ಯ ದಾಖಲೆಯೂ ಇಲ್ಲವೇ?

    • ಶ್ರಾವ್ಯ ದಾಖಲೆ ಮಾಡಿದ್ದಾರೆ ಸರ್, ಕೇಳಿ ತಿಳಿಸುವೆ.

Recent Posts

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

1 week ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

1 month ago

ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

7 months ago

ಮುದ್ದಣನ ಕುಮಾರ ವಿಜಯ, ರತ್ನಾವತಿ ಕಲ್ಯಾಣ ಯಕ್ಷಗಾನ ಧ್ವನಿಮುದ್ರಿಕೆ

ಮುದ್ದಣನ ಕುಮಾರ ವಿಜಯದ ಸುಮಾರು 700ರಷ್ಟಿರುವ ಹಾಡುಗಳನ್ನು ಹಾಡಿದ್ದು ತೆಂಕು ತಿಟ್ಟಿನ ಬಲಿಪ ಶೈಲಿಯ ಪ್ರತಿಪಾದಕ ಭಾಗವತರೇ. ಏಳೆಂಟು ವರ್ಷಗಳ…

7 months ago

ಒಂದೇ ಫೋನ್‌ನಲ್ಲಿ ಎರಡು WhatsApp ಖಾತೆ ಬಳಸುವುದು ಹೇಗೆ?

ಕಳೆದ ಅಕ್ಟೋಬರ್ 19ರಂದು ಮೆಟಾ ಒಡೆತನದ WhatsApp ಸಂಸ್ಥೆಯೇ ತನ್ನ ಆ್ಯಪ್‌ಗೆ ಹೊಸ ಅಪ್‌ಡೇಟ್ ನೀಡಿದ್ದು, ಎರಡು ವಾಟ್ಸ್ಆ್ಯಪ್ ಖಾತೆಗಳನ್ನು…

9 months ago

AI Images: Text ಬಳಸಿ ಚಿತ್ರ ತಯಾರಿಸುವುದು ಹೇಗೆ?

AI Images: ನಮ್ಮ ಕಲ್ಪನೆಯನ್ನು ಎಐ ಎಂಜಿನ್‌ಗೆ ಟೆಕ್ಸ್ಟ್ (ಪಠ್ಯ) ಮೂಲಕ ಊಡಿಸಿದರೆ ಸಾಕು, ಕ್ಷಣ ಮಾತ್ರದಲ್ಲಿ ನೀವಂದುಕೊಂಡ ಚಿತ್ರವೊಂದು…

9 months ago