ಮೊಬೈಲ್ ಫೋನ್‌ನಲ್ಲಿ ಯಾವುದೇ ವೆಬ್‌ಸೈಟ್ ಬ್ರೌಸ್ ಮಾಡಬೇಕಿದ್ದರೆ ಕ್ಯಾಪ್ಚಾ (Captcha) ಅಡ್ಡಬರುತ್ತದೆ, ಸಮಸ್ಯೆಯಾಗುತ್ತಿದೆ ಅಂತ ಇತ್ತೀಚೆಗೆ ಹಲವು ಸ್ನೇಹಿತರು ಹೇಳಿಕೊಂಡಿದ್ದರು. ಕ್ಯಾಪ್ಚಾ ಎಂದರೆ, ಬಳಕೆದಾರರು ಮಾನವನೋ ಅಥವಾ ಕಂಪ್ಯೂಟರೋ ಎಂಬುದನ್ನು ಗುರುತಿಸುವುದಕ್ಕಾಗಿ ಇರುವ ಒಂದು ಪ್ರೋಗ್ರಾಂ. ಸ್ಪ್ಯಾಮ್‌ಗಳನ್ನು ತಡೆಯುವುದಕ್ಕಾಗಿ ಇರುವಂಥಾ ಸುರಕ್ಷತಾ ಹೆಜ್ಜೆಯಿದು. ಬ್ರೌಸರ್‌ನಲ್ಲಿ ಪ್ರದರ್ಶಿತವಾಗುವ ಅಕ್ಷರ, ಅಂಕಿಗಳನ್ನು ಅಥವಾ ಗಣಿತದ ಸರಳ ಲೆಕ್ಕಕ್ಕೆ ಉತ್ತರವನ್ನು ನಾವು ಪಕ್ಕದ ಬಾಕ್ಸ್‌ನಲ್ಲಿ ನಮೂದಿಸಬೇಕಾಗುತ್ತದೆ. ಆದರೆ, ಇದು ಪದೇ ಪದೇ ಕಾಣಿಸಿಕೊಂಡರೆ, ಖಂಡಿತವಾಗಿಯೂ ಕಿರಿಕಿರಿಯೇ.
ಕೆಲವರು ‘ಫೋನ್ ಸರಿ ಇಲ್ಲ, ವೈರಸ್ ಅಟ್ಯಾಕ್ ಆಗಿದೆ’ ಎಂದುಕೊಂಡು ಫೋನ್ ದುರಸ್ತಿ ಮಳಿಗೆಗಳಿಗೆ ಹೋಗಿದ್ದರೆ, ಮತ್ತೆ ಕೆಲವರು ತಮ್ಮ ಇಂಟರ್ನೆಟ್ ಸರ್ವಿಸ್ ಪ್ರೊವೈಡರ್ (ಐಎಸ್‌ಪಿ)ಗಳಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ದೇಶದಲ್ಲಿ ಗರಿಷ್ಠ ಮಾರಾಟ ಕಂಡಿರುವ (ಅಂದರೆ 10 ಕೋಟಿಗೂ ಹೆಚ್ಚು) ಶವೊಮಿ (Xiaomi – ಉಚ್ಚಾರಣೆ ಶಓಮಿ) ಕಂಪನಿಯ ಫೋನ್‌ಗಳನ್ನು ಬಳಸುತ್ತಿರುವವರಿಗೆ ಇದರ ಸಮಸ್ಯೆ ಕಾಣಿಸಿಕೊಂಡಿದ್ದು ಹೆಚ್ಚು. ಇದಕ್ಕೆ ಕಾರಣವೇನು?
ಭಾರತದ ಸಾರ್ವಭೌಮತೆಗೆ ಧಕ್ಕೆ ತರುವ ಮತ್ತು ಭಾರತೀಯ ಬಳಕೆದಾರರ ಖಾಸಗಿ ಮಾಹಿತಿಯು ಚೀನಾದ ಸರ್ವರ್‌ಗಳಲ್ಲಿ ಶೇಖರಣೆಯಾಗುತ್ತಿವೆ ಎಂಬ ಕಾರಣಕ್ಕೆ ಈ ವರ್ಷದ ಜುಲೈ ತಿಂಗಳಲ್ಲಿ 47, ಆಗಸ್ಟ್‌ನಲ್ಲಿ 59 ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ 117 ಚೀನಾ ಮೂಲದ ಆ್ಯಪ್‌ಗಳಿಗೆ ಕೇಂದ್ರ ಸರ್ಕಾರವು ನಿರ್ಬಂಧ ಘೋಷಿಸಿತ್ತು. ನಿಷೇಧಿತವಾಗಿರುವ ಟಿಕ್‌ಟಾಕ್, ಪಬ್‌ಜಿ, ವಿ-ಚಾಟ್ ಮುಂತಾದ ಆ್ಯಪ್‌ಗಳೊಂದಿಗೆ, ಶವೊಮಿ (Xiaomi) ಕಂಪನಿಯ ‘ಮಿ’ (Mi) ಫೋನ್‌ಗಳಲ್ಲಿ ಡೀಫಾಲ್ಟ್ ಆಗಿ ಬರುವ ಬ್ರೌಸರ್‌ಗಳು ಕೂಡ ಸೇರಿದ್ದವು. ಅವೆಂದರೆ ಮಿ ಬ್ರೌಸರ್, ಮಿ ಬ್ರೌಸರ್ ಪ್ರೋ ಹಾಗೂ ಮಿಂಟ್ ಬ್ರೌಸರ್. ಮಿ ಕಮ್ಯೂನಿಟಿ ಆ್ಯಪ್ ಕೂಡ ನಿಷೇಧಿಸಲಾಗಿದೆ.
ಶವೊಮಿಯ ರೆಡ್ಮಿ ಹಾಗೂ ಪೊಕೊ (Poco) ಫೋನ್‌ಗಳಲ್ಲಿ ಹಲವರು ಈಗಾಗಲೇ ಈ ಸಮಸ್ಯೆ ಎದುರಿಸಿದ್ದಾರೆ. ಇದಕ್ಕೆ ಕಾರಣವೆಂದರೆ ಈ ಬ್ರೌಸರ್ ಆ್ಯಪ್‌ಗಳು ಅವುಗಳಲ್ಲಿ ಮೊದಲೇ ಇನ್‌ಸ್ಟಾಲ್ ಆಗಿ ಬಂದಿರುತ್ತವೆ. ಡೀಫಾಲ್ಟ್ ಬ್ರೌಸರ್ ಆಗಿರುವ ಇವುಗಳ ಮೂಲಕ ಇಂಟರ್ನೆಟ್‌ನಲ್ಲಿ ಜಾಲಾಡಲು ಹೊರಟಾಗ ಕ್ಯಾಪ್ಚಾ ಕಾಣಿಸಿಕೊಳ್ಳುತ್ತದೆ. ಸರ್ಕಾರದ ಆದೇಶದಂತೆ ಇಂಟರ್ನೆಟ್ ಸರ್ವಿಸ್ ಪ್ರೊವೈಡರ್‌ಗಳು (ISPಗಳು) ಈ ಆ್ಯಪ್‌ಗೆ ನಿರ್ಬಂಧ ವಿಧಿಸಿರುವುದೇ ಇದಕ್ಕೆ ಕಾರಣ.
ನಿಷೇಧ ಘೋಷಣೆಯಾದ ತಕ್ಷಣ ಶವೊಮಿ ಕಂಪನಿಯು ತನ್ನ MIUI ಕಾರ್ಯಾಚರಣಾ ವ್ಯವಸ್ಥೆಯನ್ನೇ ಪರಿಷ್ಕರಿಸುವುದಾಗಿಯೂ, ಅದರಲ್ಲಿ ಡೀಫಾಲ್ಟ್ ಬ್ರೌಸರ್ ಆ್ಯಪ್‌ಗಳಿರುವುದಿಲ್ಲ ಎಂದೂ ಹೇಳಿತ್ತು. ಅದನ್ನು ಅಪ್‌ಡೇಟ್ ಮಾಡಿಕೊಂಡರೆ, ನಿಷೇಧಿತ ಆ್ಯಪ್‌ಗಳು ತಾನಾಗಿ ಅನ್‌ಇನ್‌ಸ್ಟಾಲ್ ಆಗುತ್ತವೆ. ಈಗಾಗಲೇ ಈ ಸಮಸ್ಯೆ ಎದುರಿಸುತ್ತಿರುವವರು, ತಮ್ಮ ಫೋನ್‌ಗಳಿಂದ ಈ ಬ್ರೌಸರನ್ನು ಅನ್-ಇನ್‌ಸ್ಟಾಲ್ ಮಾಡಿ, ಕ್ರೋಮ್, ಫೈರ್‌ಫಾಕ್ಸ್ ಅಥವಾ ಸಫಾರಿ ಮುಂತಾದ ಬ್ರೌಸರ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಂಡರಾಯಿತು. ಇಂಟರ್ನೆಟ್ ಜಾಲಾಟಕ್ಕೆ ಯಾವುದೇ ಸಮಸ್ಯೆಯಾಗುವುದಿಲ್ಲ.
ಇನ್ನು ಮುಂದೆ ಮಾರುಕಟ್ಟೆಗೆ ಬರುವ ಫೋನ್‌ಗಳಲ್ಲಿ ಈ ನಿಷೇಧಿತ ಆ್ಯಪ್‌ಗಳಿರುವುದಿಲ್ಲ ಮತ್ತು ತಾವು ಸರ್ಕಾರದ ನೀತಿ ಸೂತ್ರಗಳಿಗೆ ಬದ್ಧರಾಗುತ್ತೇವೆ ಎಂಬುದನ್ನು ಕಂಪನಿ ಈಗಾಗಲೇ ಸ್ಪಷ್ಟಪಡಿಸಿದೆ.
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು