ಇದು ಭಾರತೀಯರಿಗೆ ತಮ್ಮ ನ್ಯಾಯ ವ್ಯವಸ್ಥೆಯಲ್ಲಿ ನಂಬಿಕೆಯೇ ಹೊರಟುಹೋಗಲು ಕಾರಣವಾದ ಸಂಗತಿ. 25 ಸಾವಿರಕ್ಕೂ ಹೆಚ್ಚು ಮಂದಿಯ ಸಾವಿಗೆ ಕಾರಣವಾದ, ಜಗತ್ತಿನ ಅತ್ಯಂತ ಭೀಕರ ಕೈಗಾರಿಕಾ ದುರಂತಗಳಲ್ಲೊಂದಾದ, 1984ರಲ್ಲಿ ಘಟಿಸಿದ ‘ಭೋಪಾಲ ಅನಿಲ ಸೋರಿಕೆ’ ಪ್ರಕರಣಕ್ಕೆ ಸಂಬಂಧಿಸಿ, ಕಾಲು ಶತಮಾನಗಳ ಕಾಲ ವಿಚಾರಣೆ ನಡೆಸಿ, ತೀರ್ಪು ಹೊರಬಿದ್ದಿದೆ – ಆರೋಪಿಗಳಿಗೆ ಕೇವಲ ಎರಡು ವರ್ಷ ಜೈಲು ಶಿಕ್ಷೆ. ಇದು ವಿಚಾರಣಾ ನ್ಯಾಯಾಲಯದ ತೀರ್ಪು, ಇನ್ನೂ ಅದೆಷ್ಟೋ ಮೇಲಿನ ಕೋರ್ಟುಗಳಿವೆ ಎಂಬುದನ್ನು ಓದುಗರು ಪರಿಗಣಿಸಬೇಕು.
ಛೆ, ಎಲ್ಲಿಗೆ ಬಂತು ನಮ್ಮ ನ್ಯಾಯದಾನ ವ್ಯವಸ್ಥೆ. ಅದೇ ಹಳೆಯ ತುಕ್ಕು ಹಿಡಿದ, ಜಡ್ಡುಗಟ್ಟಿದ ಕಾನೂನಿನ ಕೆಲವೊಂದಾದರೂ ವಿಧಿಗಳಿಗೆ ತಿದ್ದುಪಡಿ ತರುವ ಇಚ್ಛಾಶಕ್ತಿಯನ್ನು ರಾಜಕೀಯ ಪಕ್ಷಗಳೇಕೆ ಮಾಡುತ್ತಿಲ್ಲ? ಈ ಅನಿಲ ಸೋರಿಕೆಯಿಂದಾದ ದುರಂತವು ಇಂದಿಗೂ ಕೂಡ ಕಣ್ಣೆದುರೇ ರಾಚುತ್ತಿದ್ದರೂ, ಇಂದಿಗೂ ಜೀವಂತವಾಗಿ ನರಳುತ್ತಲೇ ಜೀವನ ಸಾಗಿಸುತ್ತಿರುವ, ನರಕ ಯಾತನೆ ಅನುಭವಿಸುತ್ತಿರುವ ಲಕ್ಷಾಂತರ ಮಂದಿ ಪ್ರತ್ಯಕ್ಷ ಸಾಕ್ಷಿಗಳೇ ಇದ್ದರೂ, ಆರೋಪಿ ಸ್ಥಾನದಲ್ಲಿರುವವರಿಗೆ ತಕ್ಕನಾದ ಶಿಕ್ಷೆಯಾಗುತ್ತಿಲ್ಲ, ಬೆಂದು ಬಸವಳಿದವರಿಗೆ ಸಮರ್ಪಕ ಪರಿಹಾರ, ಸಾಂತ್ವನ ಸಿಗುತ್ತಿಲ್ಲ ಎಂದಾದರೆ, ನಾವು ನೆಚ್ಚಿಕೊಳ್ಳುವುದು, ಅನ್ಯಾಯವಾದಾಗ ನ್ಯಾಯ ಕೇಳಲು ಹೋಗುವುದು ಇನ್ಯಾರ ಬಳಿಗೆ? ಎಂಬ ಪ್ರಶ್ನೆ ಕಾಡದೇ ಬಿಡುವುದಿಲ್ಲ.
ಇಷ್ಟೆಲ್ಲಾ ದುರಂತಗಳ ಸರಮಾಲೆ ನಡೆದರೂ, ಈ ಅನಿಲ ಸೋರಿಕೆಯ ಪರಿಣಾಮ ಇಂದಿಗೂ ಭೋಪಾಲ ಸುತ್ತಮುತ್ತಲಿನ ಜನರ ಮೈಕೈಗಳಲ್ಲಿ ಇಂದಿಗೂ ಗೋಚರಿಸುತ್ತಿದೆ. ಆದರೆ ಈ ಸಾಮೂಹಿಕ ನರಮೇಧಕ್ಕೆ ಕಾರಣವಾದ, ಯೂನಿಯನ್ ಕಾರ್ಬೈಡ್ ಕಂಪನಿಯ ಭಾರತೀಯ ಘಟಕದ ಮುಖ್ಯಸ್ಥ ವಾರೆನ್ ಆಂಡರ್ಸನ್‌ನ ಹೆಸರೇ ಈ ಶಿಕ್ಷಿತರ ಪಟ್ಟಿಯಲ್ಲಿ ಇಲ್ಲ ಎಂದರೆ, ಅನಿಲ ದುರಂತಕ್ಕೆ ಬಲಿಪಶುಗಳಾದವರ ಆತ್ಮ ಎಷ್ಟೊಂದು ನಲುಗುತ್ತಿರಬಹುದು!
ಯಾವುದೇ ಪರಿಹಾರ ನೀಡದ ಪರಿಹಾರ
ಸತ್ತವರಿಗೆ 1 ಲಕ್ಷ, ಶ್ವಾಸಕೋಶ ಹಾಳು ಮಾಡಿಕೊಂಡು ನರಳುತ್ತಿರುವವರಿಗೆ 25 ಸಾವಿರ ಪರಿಹಾರ ನೀಡುವ ಕುರಿತು ಯೂನಿಯನ್ ಕಾರ್ಬೈಡ್ 713 ಕೋಟಿ ರೂ. ಪರಿಹಾರ ಕೊಡುವ ಒಡಂಬಡಿಕೆಗೆ ಭಾರತ ಸರಕಾರವು ಪೂರ್ಣ ಸಮ್ಮತಿ ನೀಡಿ ಸಹಿ ಹಾಕಿತ್ತು. ಆದರೆ ಸತ್ತವರ ಮತ್ತು ಬಾಧಿತರಾದವರ ಲೆಕ್ಕಾಚಾರವನ್ನು ನಿಖರವಾಗಿ ಮಾಡಿರಲಿಲ್ಲ. ಹೀಗಾಗಿ ಸತ್ತವರ ಸಂಖ್ಯೆ 20000 ಮೀರಿದಾಗ, ಗಾಯಾಳುಗಳ ಸಂಖ್ಯೆ ಐದಾರು ಲಕ್ಷ ತಲುಪಿದಾಗ, ಮೊದಲೇ ನಿಗದಿಪಡಿಸಿದ್ದ ಪರಿಹಾರದಲ್ಲೇ ಹಂಚಲಾಯಿತು. ತತ್ಪರಿಣಾಮ, ತಲಾ ಸುಮಾರು 12 ಸಾವಿರ ಪರಿಹಾರ ಮಾತ್ರ ದೊರೆಯಿತು. ಪರಿಹಾರಕ್ಕಾಗಿ ಇಂದೂ ಒದ್ದಾಡುತ್ತಿರುವವರು ಸಾಕಷ್ಟಿದ್ದಾರೆ. ತಾವು ಸಂತ್ರಸ್ತರು ಎಂದು ಸಾಬೀತುಪಡಿಸಿಕೊಳ್ಳಲು ಹೆಣಗಾಡುತ್ತಿರುವವರು ಮತ್ತಷ್ಟಿದ್ದಾರೆ.
ಸಂತ್ರಸ್ತರು ಪರಿಹಾರಕ್ಕಾಗಿ, ನ್ಯಾಯಕ್ಕಾಗಿ ಏನೆಲ್ಲಾ ಮಾಡಿದರು, ಕೂಗಿದರು, ಅತ್ತರು, ಉಪವಾಸ ಕುಳಿತರು, ಪ್ರತಿಭಟಿಸಿದರು, ಪೊಲೀಸರ ಲಾಠಿಯ ರುಚಿ ತಿಂದರು, ಕೋರ್ಟುಗಳಲ್ಲಿ ಕೇಸುಗಳ ಮೇಲೆ ಕೇಸುಗಳನ್ನು ಜಡಿದರು- ಇವೆಲ್ಲವೂ- ಒಂದಲ್ಲ ಒಂದು ದಿನ ತಮಗೆ ನ್ಯಾಯ ಸಿಗುತ್ತದೆ ಎಂಬ ಆಶಾಭಾವದಿಂದ.
ಆರೋಪಿಯ ಹೋಗಗೊಟ್ಟು ಲಬೋ ಲಬೋ ಎಂದಿತು ಸರಕಾರ
ಇದೇ ಪ್ರಧಾನ ಆರೋಪಿ ಆಂಡರ್ಸನ್‌ನನ್ನು ದುರಂತ ಸಂಭವಿಸಿದ ಬಳಿಕ, ಅಂದಿನ ರಾಜೀವ್ ಗಾಂಧಿ ನೇತೃತ್ವದ ಕೇಂದ್ರ ಸರಕಾರವು ಅಮೆರಿಕಕ್ಕೆ ಹಾರಿ ಹೋಗಲು ಅವಕಾಶ ಮಾಡಿಕೊಟ್ಟಿತ್ತು. ಆ ಬಳಿಕ ನರಸಿಂಹ ರಾವ್ ಅಧಿಕಾರಾವಧಿಯಲ್ಲಿ ಆಂಡರ್ಸನ್‌ನ ಗಡೀಪಾರು ಕುರಿತಂತೆ ಹೆಚ್ಚು ತಲೆಕೆಡಿಸಿಕೊಳ್ಳದಂತೆ ತನಿಖಾ ಅಧಿಕಾರಿಗಳಿಗೆ ವಿದೇಶಾಂಗ ಸಚಿವಾಲಯ ಸೂಚಿಸಿತ್ತು ಎಂಬ ಅಂದಿನ ಸಿಬಿಐ ಅಧಿಕಾರಿಯೊಬ್ಬರ ಹೇಳಿಕೆಯನ್ನೂ ನಾವಿಲ್ಲಿ ಗಮನಿಸಬೇಕು.
ಎಷ್ಟರ ಮಟ್ಟಿಗೆ ನಾವು ಬಹುರಾಷ್ಟ್ರೀಯ ಕಂಪನಿಗಳ ಬಗೆಗೆ ಒಲವು ಹೊಂದಿದ್ದೇವೆ ಎಂಬುದರ ಅರಿವಾಗದಿರದು. ಆಂಡರ್ಸನ್‌ನನ್ನು 1984ರಲ್ಲಿ ಅರ್ಜುನ್ ಸಿಂಗ್ ಮುಖ್ಯಮಂತ್ರಿಯಾಗಿದ್ದ ಮಧ್ಯಪ್ರದೇಶ ಸರಕಾರವು ಬಂಧಿಸಿತ್ತು. ಅದಿರಲಿ, ಕೆಲವೇ ಗಂಟೆಗಳಲ್ಲಿ ಜಾಮೀನು ಕೂಡಾ ನೀಡಲಾಗಿತ್ತು! ಆ ಬಳಿಕ ಮೂರೇ ದಿನದಲ್ಲಿ ರಾಜೀವ್ ಗಾಂಧಿ ಅಧಿಕಾರಾವಧಿಯಲ್ಲಿ ಆತನಿಗೆ ಖಾಸಗಿ ವಿಮಾನದಲ್ಲಿ ಅಮೆರಿಕಕ್ಕೆ ಮರಳಿ ಹೋಗಲು ಅವಕಾಶವನ್ನೂ ಕೊಡಲಾಗಿತ್ತು! ಈ ಹೊತ್ತಿಗೆ ಭೋಪಾಲ ಸಂತ್ರಸ್ತರ ತೀವ್ರ ಆಕ್ರೋಶವನ್ನು ಎದುರಿಸುವುದು ಸಾಧ್ಯವಿಲ್ಲ ಎಂದಾದಾಗ, ಆತನನ್ನು ‘ತಲೆಮರೆಸಿಕೊಂಡಿದ್ದಾನೆ’ ಎಂದು ಸಾರಲಾಯಿತು ಹಾಗೂ ಇಂಟರ್‌ಪೋಲ್‌ಗೂ ಈ ಕುರಿತು ಮಾಹಿತಿ ನೀಡಿ ಕೈತೊಳೆದುಕೊಳ್ಳಲಾಯಿತು. ನಮ್ಮ ದೇಶದ ಪ್ರಜೆಗಳು ಎಂತಹಾ ಅಮಾನವೀಯ ಮರಣವನ್ನಪ್ಪುತ್ತಾ, ಹಿಂಸಾತ್ಮಕ ಜೀವನ ಸಾಗಿಸುತ್ತಿದ್ದರೂ ಪರವಾಗಿಲ್ಲ, ಈ ಬಹುರಾಷ್ಟ್ರೀಯ ಕಂಪನಿಯ ಒಡೆಯನಿಗೆ ಏನೂ ಆಗಬಾರದು. ಎಂತಹಾ ವಿಪರ್ಯಾಸ! ಈಗ 89ರ ಹರೆಯದ ಆಂಡರ್ಸನ್ ನ್ಯೂಯಾರ್ಕ್‌ನಲ್ಲಿ ಐಷಾರಾಮಿ ಜೀವನ ಸಾಗಿಸುತ್ತಿದ್ದಾನೆ.
ಸುರಕ್ಷತಾ ಎಚ್ಚರಿಕೆ ಧಿಕ್ಕರಿಸಿದ್ದ ಆಂಡರ್ಸನ್
ಅದಿರಲಿ, ಗ್ರೀನ್‌ಪೀಸ್ ಎಂಬ ಸಂಘಟನೆಯ ಪ್ರಕಾರ, ಇದೇ ಯೂನಿಯನ್ ಕಾರ್ಬೈಡ್ ಕಂಪನಿಯು ಅಮೆರಿಕದಲ್ಲೂ ಅದೇ ರೀತಿಯ ಅನಿಲ ಸ್ಥಾವರವನ್ನು ಹೊಂದಿತ್ತು. 1982ರಲ್ಲೇ ಭೋಪಾಲ ಸ್ಥಾವರದ ಸುರಕ್ಷತಾ ತಪಾಸಣೆ ನಡೆಸಲಾಗಿತ್ತು ಮತ್ತು ಅಂದು 30 ಪ್ರಮುಖ ಅಪಾಯಕಾರಿ ಅಂಶಗಳನ್ನು ಗುರುತಿಸಲಾಗಿತ್ತು. ಭೋಪಾಲದ ಸ್ಥಾವರದಲ್ಲಿ ಅವುಗಳನ್ನು ಸರಿಪಡಿಸುವ ಬದಲಾಗಿ, ಅಮೆರಿಕದಲ್ಲಿರುವ ಸ್ಥಾವರದಲ್ಲಿ ಮಾತ್ರವೇ ಎಲ್ಲ ಸುರಕ್ಷತಾ ಅಪಾಯಗಳನ್ನೂ ಸರಿಪಡಿಸಲಾಗಿತ್ತು. ಯಾಕೆಂದರೆ ಭೋಪಾಲ ಇದ್ದುದು ಭಾರತದಲ್ಲಿ… ಅಲ್ಲವೇ? ಅಸಡ್ಡೆಯ ಪರಾಕಾಷ್ಠೆ, ಕರ್ತವ್ಯ ನಿರ್ಲಕ್ಷ್ಯದ ಪರಮಾವಧಿಯಿದು!
ಸಂಬಂಧ ಕೆಡುವ ಚಿಂತೆ ನಮಗೆ…
ಇಂಟರ್‌ಪೋಲ್ ಮಧ್ಯಪ್ರವೇಶದಿಂದಾಗಿ ಅಮೆರಿಕಕ್ಕೂ, ಭಾರತಕ್ಕೂ ‘ಬೇಕಾಗಿದ್ದಾನೆ’ ಎಂಬ ಹಣೆಪಟ್ಟಿ ಹೊತ್ತಿರುವ ಆಂಡರ್ಸನ್ ಎಂಬ ಯಮನ ಏಜೆಂಟ್ ಬಗ್ಗೆ ಕಳೆದ ಎರಡು ದಶಕಗಳಿಂದ ಭಾರತ ಮತ್ತು ಅಮೆರಿಕದ ಅಧಿಕಾರಿಗಳು ಯಾವುದೇ ರೀತಿಯಲ್ಲೂ ತಲೆಕೆಡಿಸಿಕೊಳ್ಳುತ್ತಿಲ್ಲ! ಅದಕ್ಕೆ ಬದಲು, ಅಮೆರಿಕದೊಂದಿಗಿನ ಸಂಬಂಧ ಎಲ್ಲಿ ಕೆಡುತ್ತದೋ, ಪರಮಾಣು ಬಾಧ್ಯತಾ ಮಸೂದೆಗೆ ಎಲ್ಲಿ ಧಕ್ಕೆಯಾಗುತ್ತದೋ ಎಂಬುದೇ ನಾವು ಇಂದಿಗೂ ತಲೆಕೆಡಿಸಿಕೊಳ್ಳುತ್ತಿರುವ ಸಂಗತಿ!
ಭೋಪಾಲ ದುರಂತ ಅಮೆರಿಕದಲ್ಲಾಗಿದ್ದರೆ…
ಒಂದು ಪರಿಸ್ಥಿತಿ ಯೋಚನೆ ಮಾಡಿ: ಇಂಥದ್ದೇ ದುರಂತ, ಅಮೆರಿಕದಲ್ಲಿ ಸ್ಥಾವರ ಸ್ಥಾಪಿಸುವ ಭಾರತೀಯ ಕಂಪನಿಯೊಂದರ ಮೂಲಕ ನಡೆದಿದ್ದರೆ? ಯೋಚಿಸಲೂ ಪುರುಸೊತ್ತು ಇರುತ್ತಿರಲಿಲ್ಲವೇನೋ… ಅಮೆರಿಕದಲ್ಲಿ ತಕ್ಷಣವೇ ವಿಶೇಷ ತ್ವರಿತ ನ್ಯಾಯಾಲಯ ರಚನೆಯಾಗಿ, ಭಾರತದ ಮೇಲೆ ಒತ್ತಡ ಹೇರಿ, ಆ ಕಂಪನಿಯ ಅಧ್ಯಕ್ಷನನ್ನು ತಮ್ಮ ನೆಲದ ಕಾನೂನಿಗೊಪ್ಪಿಸುವಂತೆ ಭಾರೀ ಒತ್ತಡ ಹೇರಲಾಗುತ್ತಿತ್ತು. ಅದಕ್ಕೆ ಬೇಕಾದ ಗಡೀಪಾರು ಒಪ್ಪಂದವನ್ನೂ ತಕ್ಷಣವೇ ಮಾಡಿಕೊಳ್ಳಲಾಗುತ್ತಿತ್ತು. ಭಾರತ ಜಗ್ಗದೇಹೋದರೆ, ಭಾರತದ ನೆರೆಯಲ್ಲಿರುವ ಪಾಕಿಸ್ತಾನ ಮತ್ತು ಚೀನಾಕ್ಕೆ ಮಿಲಿಟರಿ ನೆರವನ್ನು ಹೆಚ್ಚಿಸಿ, ಪರೋಕ್ಷವಾಗಿ ಒತ್ತಡ ಹೇರುತ್ತಿತ್ತು. ಮತ್ತೂ ಮಾತು ಕೇಳದೇ ಹೋದರೆ, ಬಹುಶಃ ಯುದ್ಧವನ್ನೇ ಸಾರುತ್ತಿತ್ತೇನೋ… ಒಟ್ಟಿನಲ್ಲಿ ಸಂತ್ರಸ್ತರಿಗೆ ಲಕ್ಷ ಲಕ್ಷ ಪರಿಹಾರವೂ, ನ್ಯಾಯವೂ ತ್ವರಿತವಾಗಿ ಸಿಗಬಹುದಾಗಿತ್ತು. 9/11ರ ಅಮೆರಿಕದ ಮೇಲೆ ನಡೆದ ಭಯೋತ್ಪಾದನಾ ದಾಳಿಯ ಬಳಿಕದ ವಿದ್ಯಮಾನಗಳನ್ನು ಪರಿಗಣಿಸಿ, ಅಫ್ಘಾನಿಸ್ತಾನದ ಸ್ಥಿತಿ ನೆನಪಿಸಿಕೊಂಡು ಈ ರೀತಿ ಲೆಕ್ಕಾಚಾರ ಹಾಕಬಹುದು.
ಅನಿಲ ಸೋರಿಕೆಯ ಪರಿಣಾಮವಾಗಿ ಹಲವು ಮಂದಿ ತಮ್ಮ ಕರುಳ ಕುಡಿಗಳನ್ನು, ಬದುಕಿನ ಆಧಾರಗಳನ್ನು, ಪ್ರೀತಿಯ ಜೀವಗಳನ್ನು, ಬಂಧುಗಳನ್ನು ಕಳೆದುಕೊಂಡಿದ್ದಾರೆ. ಅನಿಲಕ್ಕೆ ಒಡ್ಡಿಕೊಂಡ ಮಕ್ಕಳು ಈಗಲೂ ಕೈಕಾಲು ಸರಿ ಇಲ್ಲದೆ, ದೃಷ್ಟಿ ಸರಿ ಇಲ್ಲದೆ, ವಿಭಿನ್ನ ಅನಾರೋಗ್ಯಗಳಿಗೆ ತುತ್ತಾಗಿ ನರಕಯಾತನೆಯ ಜೀವನ ಸಾಗಿಸುತ್ತಿದ್ದಾರೆ. ಸುತ್ತಮುತ್ತಲಿನ ಭೂಮಿ ಬರಡಾಗಿದೆ, ನೀರು ಕಲ್ಮಷಗೊಂಡಿದೆ, ವಾತಾವರಣವೂ ಕಲುಷಿತವಾಗಿದೆ. 25 ಸಾವಿರಕ್ಕೂ ಹೆಚ್ಚು ಸಾವು, ಲಕ್ಷಾಂತರ ಮಂದಿಗೆ ಅನಾರೋಗ್ಯದ ಬಾಧೆ… ಇವೆಲ್ಲಕ್ಕೆ ಕಾರಣರಾದ ಅಂತಕನ ದೂತರಿಗೆ ಬರೇ 2 – ಎರಡು ವರ್ಷ ಜೈಲು ಶಿಕ್ಷೆ!
ಇನ್ನು ಆಕ್ರೋಶ, ನಿರಾಶೆ, ಹತಾಶೆಗಳೇ ಮಡುಗಟ್ಟಿದಂತಿರುವ, ಏನೂ ಮಾಡಲಾರದ ಪರಿಸ್ಥಿತಿಯಲ್ಲಿರುವ ದುರಂತ ಸಂತ್ರಸ್ತರು ಭೋಪಾಲದಿಂದ ದೆಹಲಿ, ದೆಹಲಿಯಿಂದ ಭೋಪಾಲಕ್ಕೆ ಅಲೆಯುತ್ತಲೇ ಇದ್ದರು, ಅಲೆಯುತ್ತಲೇ ಇದ್ದಾರೆ, ಮತ್ತು ಇನ್ನೂ ಅಲೆಯುತ್ತಿರುತ್ತಾರೆ. ಎಲ್ಲವೂ ನ್ಯಾಯಕ್ಕಾಗಿ…! ಅದೇ ಹಳೇ ಶಿಲಾಯುಗದ ಕಾಲದ ಕಾನೂನು ಬದಲಿಸಲು, ಕನಿಷ್ಠ ಪಕ್ಷ ಭೋಪಾಲದಂತಹಾ, ಜಗತ್ತು ಕಂಡ ಮಹಾ ದುರಂತಗಳಲ್ಲಾದರೂ ಕ್ಷಿಪ್ರ ನ್ಯಾಯದಾನ ದೊರೆಯಲು ನಮ್ಮನ್ನಾಳುವವರು ಕುರ್ಚಿ, ಅಧಿಕಾರ ಎಂದೆಲ್ಲಾ ಯೋಚಿಸದೆ ಮಾನವೀಯತೆಯನ್ನು ಪ್ರದರ್ಶಿಸಿ, ಕ್ರಮ ಕೈಗೊಳ್ಳುವರೇ?
ಗೆಲುವಿನ ಅನುಭವ ಪಡೆಯುವ ಮೊದಲೇ
ಸೋಲಿನ ಸಂಚಿಗೆ ಬಲಿಯಾದೆ
ಒಲವಿನ ಸಿಹಿಯನು ಪಡೆಯುವ ಮೊದಲೇ
ಸಾವಿನ ಉರುಳಿಗೆ ಸೆರೆಯಾದೆ
ದೇವ ಮಂದಿರದಲ್ಲಿ ದೇವರು ಕಾಣಲೇ ಇಲ್ಲ
ನ್ಯಾಯ ಮಂದಿರದಲ್ಲಿ ನ್ಯಾಯವು ಸಿಗಲೇ ಇಲ್ಲ!
(ಜಿಮ್ಮಿ ಗಲ್ಲು ಚಿತ್ರದ ಗೀತೆಯ ಸಾಲುಗಳು)
[ವೆಬ್‌ದುನಿಯಾದಲ್ಲಿ ಪ್ರಕಟಿತ ಲೇಖನ]
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು
View Comments
ಛೆ, ೨೫ ಸಾವಿರ ಜನರ ಹತ್ಯೆಗೆ ಎರಡೇ ವರ್ಷ ಶಿಕ್ಷೆ !!!!!
ಇದೆಂಥಾ ನ್ಯಾಯ ಸರ್ .......??!!!!!
ಇನ್ನು ನೀವು ಹೇಳಿದ ಹಾಗೆ ಯಾವುದೇ ಭಾರತೀಯ ಮೂಲದ ಕಂಪನಿಯಿಂದ ಅಮೇರಿಕಾದಲ್ಲಿ ಈ ರೀತಿಯೇನಾದರೂ ಆಗಿದ್ದರೆ ಅದರ ವಿಚಾರಣೆಗಾಗಿಯೇ ವಿಶೇಷ ನ್ಯಾಯಾಲಯ ರಚಿಸಿ,ಘನಘೋರ ಶಿಕ್ಷೆಯ ವಿಧಿಸಿ
ಇನ್ನು ಯಾವ ಭಾರತೀಯನಿಗೂ ಅಮೆರಿಕೆಯಲ್ಲಿ ಕಂಪನಿ ಪರವಾನಿಗೆ ನೀಡುತ್ತಿರಲಿಲ್ಲವೇನೋ.........!!!!!!
ಈಗ ಅದರ ಪರಿಸ್ಥಿತಿ ನೋಡಿ ರಾಘವೇಂದ್ರರೇ. ಭೋಪಾಲ ವಿಷಯವನ್ನು ಕೇಳುವವರೇ ಇಲ್ಲವಲ್ಲ...., (ಪ್ರತಿಸ್ಪಂದಿಸಲು ತಡ ಮಾಡಿದ್ದಕ್ಕೆ ಕ್ಷಮೆಯಿರಲಿ.)