ಬಲಿಪ ಗಾನ ಯಾನ ಎಂಬ ಮಧುರ ಯಕ್ಷಾಭಿಯಾನ

ಯಕ್ಷಗಾನವೀಗ ಕರಾವಳಿಯ ಗಡಿ ದಾಟಿ, ದಿಗ್ದಿಗಂತಗಳಲ್ಲಿ ಮನೆ ಮಾತಾಗುವುದಕ್ಕೆ ಕಾರಣ ಅದರ ನಮ್ಯತೆ, ಬದಲಾವಣೆಗೆ ಒಗ್ಗಿಕೊಳ್ಳುವ ಸ್ವಭಾವ. ಕೋವಿಡ್ ಸಂಕಷ್ಟ ಕಾಲದಲ್ಲಿ ಆರಂಭಿಕ ಆಘಾತದ ಜಡವನ್ನು ಕೊಡವಿಕೊಂಡು, ತಂತ್ರಜ್ಞಾನ ಬಳಸಿ ಆನ್‌ಲೈನ್ ಮೂಲಕವೇ ತನ್ನ ಅಸ್ತಿತ್ವವನ್ನು ರೂಪಿಸಿಕೊಂಡ ಏಕೈಕ ರಂಗ ಕಲಾ ಪ್ರಕಾರ ಬಹುಶಃ ಯಕ್ಷಗಾನವಿರಬೇಕು.

ಕಲೆ, ಕಲಾವಿದರಿಗೆ ಹಿನ್ನಡೆಯಾದರೂ ಸರ್ಕಾರದ ನಿಬಂಧನೆಗಳಿಗೆ ಅನುಗುಣವಾಗಿ ಆರಂಭವಾದ ತಾಳಮದ್ದಳೆ, ಯಕ್ಷಗಾನ ಪ್ರದರ್ಶನಗಳು ಜನಮೆಚ್ಚುಗೆ ಪಡೆದವು. ಇದರ ಮಧ್ಯೆ, ತೆಂಕು ತಿಟ್ಟು ಯಕ್ಷಗಾನದ ಶಿಷ್ಟ ಪರಂಪರೆಯೊಂದು ತನ್ನ ಇರುವಿಕೆಯನ್ನು ಮುಂದಿನ ಪೀಳಿಗೆಗೆ ಸಮರ್ಥವಾಗಿ ಉಳಿಸಿ, ಪಾರಂಪರಿಕ ಯಕ್ಷಗಾನದ ಸೊಗಡನ್ನು ಉಳಿಸುವ ಕಾಯಕದಲ್ಲಿ ತೊಡಗಿಕೊಂಡಿದೆ.

ತೆಂಕುತಿಟ್ಟು ಯಕ್ಷಗಾನದಲ್ಲಿ ಬಲಿಪ ಶೈಲಿ ಎಂಬುದು ಸರ್ವಾದರಣೀಯ. ದಿವಂಗತ ಹಿರಿಯ ಬಲಿಪ ನಾರಾಯಣ ಭಾಗವತರ ಈ ಪರಂಪರೆಯು ಈಗ ಹಿರಿಯರಾಗಿರುವ, ಆದರೆ ಕಿರಿಯ ಬಲಿಪರೆಂದೇ ಹೆಸರು ಪಡೆದಿರುವ ಮೊಮ್ಮಗ ನಾರಾಯಣ ಭಾಗವತರಿಂದ ಉತ್ತಮ ಪೋಷಣೆ ಪಡೆಯಿತು. ಈಗ ಅವರ ಪುತ್ರರಾದ ಬಲಿಪ ಪ್ರಸಾದ ಮತ್ತು ಶಿವಶಂಕರರೂ ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಹತ್ತಾರು ದಶಕಗಳ ಹಿಂದೆ ದೊಡ್ಡ ಬಯಲಿನಲ್ಲಿ ಹಾಕಿದ್ದ ರಂಗಸ್ಥಳದಲ್ಲಿ ಯಕ್ಷಗಾನ ನಡೆಯುತ್ತಿದ್ದರೆ, ಬಲಿಪ ಭಾಗವತರ ತಾರಸ್ಥಾಯಿಯ ಭಾಗವತಿಕೆಯ (ಹಾಡಿನ) ಸ್ವರವು ಮೈಕ್ ಇಲ್ಲದೆಯೂ ನಾಲ್ಕೈದು ಕಿಲೋಮೀಟರ್ ವ್ಯಾಪ್ತಿಗೆ ಕೇಳಿಸುತ್ತಿತ್ತು ಮತ್ತು ಇದನ್ನು ಕೇಳಿಯೇ ಜನರು ಯಕ್ಷಗಾನವಿದೆ ಎಂಬುದರ ಮಾಹಿತಿ ಪಡೆದು ನೋಡಲು ಬರುತ್ತಿದ್ದರು ಎಂಬ ಮಾತನ್ನು ನಾವು ಕೇಳಿದ್ದೇವೆ.

ಕಂಚಿನ ಕಂಠ, ಯಕ್ಷಗಾನ ಪದಗಳ ಹಾಡಿನ ಶೈಲಿ – ಇದು ಬಲಿಪರದ್ದೇ ಶೈಲಿಯಾಗಿ ಮಾರ್ಪಟ್ಟಿದೆ. ಬಲಿಪರ ಮಕ್ಕಳಲ್ಲದೆ, ಅಳಿಯ ಪುಂಡಿಕಾಯಿ ಗೋಪಾಲಕೃಷ್ಣ ಭಟ್ ಮತ್ತು ಇತರ ಹಲವಾರು ಹವ್ಯಾಸಿ ಭಾಗವತರೂ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಯಕ್ಷಗಾನವೆಂಬ ಸರ್ವಾಂಗೀಣ ಕಲೆಯೊಂದು ಟಿಸಿಲೊಡೆದು ಗಾನ ವೈಭವ, ನಾಟ್ಯ ವೈಭವ ಹಾಗೂ ಅರ್ಥ ವೈಭವ ಎಂಬ ಮೂರು ಕವಲುಗಳಾಗಿ ತಮ್ಮದೇ ಆದ ಕಲಾ ರಸಿಕರನ್ನು ಆಕರ್ಷಿಸುವ ಹೊಸ ಯುಗಾರಂಭವಾಗಿದ್ದು ಕಳೆದ ದಶಕದ ಬೆಳವಣಿಗೆ. ಇದರ ಮಧ್ಯೆ, ಗಾನ ವೈಭವವು ಯಕ್ಷಗಾನಕ್ಕೆ ಸೀಮಿತವಾಗದೆ ಶಾಸ್ತ್ರೀಯ ಸಂಗೀತ, ಜಾನಪದ, ಸಿನಿಮಾ – ಹೀಗೆ ಕಲೆಯ ಎಲ್ಲ ಪ್ರಕಾರಗಳನ್ನೂ ತನ್ನೊಳಗೆ ಸೇರಿಸಿಕೊಂಡು ಮುಂದುವರಿಯಿತು. ಆದರೆ ಯಕ್ಷಗಾನದ ಗಾನ ವೈಭವಕ್ಕೆ ಹೊಸ ಹೊಳಹು ನೀಡಿದ್ದು ಈ ಬಲಿಪ ಗಾನ ಯಾನ. ಇದು ನಿಜ ಅರ್ಥದ ಯಕ್ಷಗಾನ ವೈಭವ. ಇಲ್ಲಿ ಹಾಡುಗಳು, ಚೆಂಡೆ, ಮದ್ದಳೆ ಎಲ್ಲವೂ ಯಕ್ಷಗಾನೀಯವಾಗಿಯೇ ಇರುತ್ತವೆ.

ಯಕ್ಷಗಾನದ ಪಿತಾಮಹನೆಂಬ ಅಗ್ಗಳಿಕೆಯ ಕುಂಬಳೆಯ ಪಾರ್ತಿಸುಬ್ಬ ಹಾಗೂ ಅನೇಕ ಕವಿಗಳು ರಚಿಸಿದ ಯಕ್ಷಗಾನೀಯ ಸಾಹಿತ್ಯಕ್ಕೆ ಇಲ್ಲಿ ಹೆಚ್ಚಿನ ಮನ್ನಣೆ. ಯಕ್ಷಗಾನ ಪ್ರದರ್ಶನಗಳಲ್ಲಿ ಕುಣಿತ, ಮಾತು ಹೆಚ್ಚಾಗುವ ಸಂದರ್ಭದಲ್ಲಿ ಸಮಯಾವಕಾಶವಿಲ್ಲದ ಕಾರಣ ಎಲ್ಲ ಹಾಡುಗಳನ್ನು ಬಳಸಿಕೊಳ್ಳುವ ಸಾಧ್ಯತೆಗಳಿರುವುದಿಲ್ಲ. ಹೀಗೆ ಪ್ರಸಂಗಗಳಲ್ಲಿ ಹೆಚ್ಚಾಗಿ ಚಾಲ್ತಿಯಲ್ಲಿಲ್ಲದ, ಯಕ್ಷಗಾನ ಸಾಹಿತ್ಯದ ಸೊಗಡನ್ನು ಉಣಬಡಿಸಬಲ್ಲ ಮತ್ತು ಯಕ್ಷಗಾನದ ಸಾಹಿತ್ಯದ ಸಮೃದ್ಧಿಯನ್ನು ಬೆಳಕಿಗೆ ತರಬಲ್ಲ ಅದೆಷ್ಟೋ ಹಾಡುಗಳು ರಂಗದಲ್ಲಿ ಕೇಳಿಸದೆ ಬಡವಾಗಿದ್ದವು. ಈ ಬಿಟ್ಟು ಹೋದ ಪದಗಳ ಸಮೃದ್ಧ ಸಾಹಿತ್ಯವನ್ನು ಆಯ್ದುಕೊಂಡು ಬಲಿಪ ಗಾನ ಯಾನ ತಂಡವು ಪ್ರಸ್ತುತಪಡಿಸುತ್ತಿದೆ. ಯಕ್ಷರಂಗದ ಭೀಷ್ಮ ಎಂದೇ ಪರಿಗಣಿಸಲಾಗಿರುವ, ಈಗ ಇಳಿವಯಸ್ಸಿನಲ್ಲಿರುವ ಬಲಿಪಜ್ಜನ ಮಾರ್ಗದರ್ಶನದಲ್ಲಿ, ಅವರ ಆಶಯದಲ್ಲೇ ಇದು ನಡೆಯುತ್ತಿದೆ.

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಯಕ್ಷಗಾನದ ಕೊಡುಗೆ ಏನೆಂಬುದನ್ನೂ ಜಗತ್ತಿಗೆ ತೋರಿಸಿಕೊಡುವ ಇರಾದೆಯೂ ಇಲ್ಲಿದೆ. ಕಲಾರಾಧಕರು ತಮ್ಮ ಮನೆಯಲ್ಲಿ ಮಂಗಳ ಕಾರ್ಯಗಳಿದ್ದರೆ ಅಥವಾ ಸಾಮಾನ್ಯ ದಿನಗಳಲ್ಲಿ, ಅಭಿಮಾನದಿಂದ ಆಹ್ವಾನಿಸಿ, ಗಾನ ಯಾನವನ್ನು ಮುನ್ನಡೆಸುತ್ತಿದ್ದಾರೆ. ಇದು ಯಾವುದೇ ವಾಣಿಜ್ಯ ಉದ್ದೇಶಕ್ಕಾಗಿ ಆರಂಭಿಸಿದ ಅಭಿಯಾನವಲ್ಲ, ಬಲಿಪ ಪರಂಪರೆಯ ದಾಖಲೀಕರಣವೇ ಪ್ರಧಾನ ಉದ್ದೇಶ ಎನ್ನುತ್ತಾರೆ ಇದರ ರೂವಾರಿ, ಯಕ್ಷಗಾನ ಕಲಾವಿದ ಚಂದ್ರಶೇಖರ ಕೊಂಕಣಾಜೆ.

ಈ ತಂಡವು ಪ್ರಜಾವಾಣಿ ಓದುಗರಿಗಾಗಿ (fb.com/prajavani.net) ಫೇಸ್‌ಬುಕ್ ಪುಟದಲ್ಲಿ ಅಕ್ಟೋಬರ್ 4ರ ಭಾನುವಾರ ಸಂಜೆ 5ರಿಂದ ‘ಬಲಿಪ ಗಾನ ಯಾನ’ ಪ್ರಸ್ತುತಪಡಿಸಿದೆ. ಭಾಗವತರಾಗಿ ಬಲಿಪ ಪ್ರಸಾದ ಭಟ್, ಚೆಂಡೆ-ಮದ್ದಳೆಯಲ್ಲಿ ಚಂದ್ರಶೇಖರ ಕೊಂಕಣಾಜೆ ಹಾಗೂ ಸತ್ಯಜಿತ್ ರಾವ್ ರಾಯಿ ಸಾಥ್ ನೀಡಿದ್ದಾರೆ.

My Article Published in Prajavani on 02 Oct 2020 (Paper 03 Oct)

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Recent Posts

iPhone 16e: Best Features and Specs: ಹೊಸ ಐಫೋನ್ 16ಇ ಬಿಡುಗಡೆ

iPhone 16e joins the iPhone 16 lineup, featuring the fast performance of the A18 chip,…

4 days ago

ಚಳಿಯಲ್ಲಿ ಬಣ್ಣ ಬದಲಾಯಿಸುವ Realme 14 Pro ಸರಣಿ ಫೋನ್ ಬಿಡುಗಡೆ

ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…

1 month ago

ಎಐ ವೈಶಿಷ್ಟ್ಯಗಳ realme GT 7 Pro ಬಿಡುಗಡೆ: ಬೆಲೆ ಎಷ್ಟು? ವೈಶಿಷ್ಟ್ಯಗಳೇನು? ಇಲ್ಲಿದೆ ಪೂರ್ಣ ಮಾಹಿತಿ

ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್‌ ಇರುವ ಬಹುನಿರೀಕ್ಷಿತ…

3 months ago

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

5 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

5 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

6 months ago