ಕಳೆದ ವರ್ಷ ಬಾಹುಬಲಿ-1 ಚಿತ್ರ ಯಕ್ಷಗಾನಕ್ಕೆ ಬಂದುಯಶಸ್ವಿಯಾಯಿತು. ಇದೀಗ ಬಾಹುಬಲಿ-2 ಕೂಡ ಯಕ್ಷರಂಗಕ್ಕೆ ಬರಲು ಸಜ್ಜುಗೊಂಡಿದೆ. ಹೀಗೆ ಸದಾ ಬದಲಾವಣೆಗಳಿಗೆ ತೆರೆದುಕೊಂಡು ಯಶಸ್ವಿಯಾದ ಕಾರಣಕ್ಕೇ ಈ ಕಲೆ ಇಂದಿಗೂ ಜನಪ್ರಿಯ. ಯಕ್ಷಕಲೆಯ ಈ ನಿತ್ಯನೂತನತೆಯ ರಹಸ್ಯ ಇಲ್ಲಿದೆ.
* ಅವಿನಾಶ್ ಬೈಪಾಡಿತ್ತಾಯ
ಕಥೆಗೆ ಅನುಗುಣವಾಗಿ, ಆ ಕ್ಷಣದಲ್ಲಿ ಇನ್‌ಸ್ಟೆಂಟ್ ಆಗಿ ಮನದಲ್ಲಿ ಮೂಡಿಬರುವ ಮಾತುಗಳು…ಜತೆಗೆ ಅಭಿನಯ, ಸಾಂದರ್ಭಿಕ ನೃತ್ಯ, ಕಟ್ ಇಲ್ಲ, ತಾಲೀಮು ಇಲ್ಲ, ಪೂರ್ವಲಿಖಿತ ಡೈಲಾಗ್ ಇಲ್ಲ… ಇಲ್ಲಿ ಬೇಕಾದದ್ದು ಪ್ರತ್ಯುತ್ಪನ್ನಮತಿತ್ವ, ಕಥಾ ಹಂದರದ ಅರಿವು, ಮತ್ತು ಸಂದರ್ಭ ಪ್ರಜ್ಞೆ – ಇದು ಯಕ್ಷಗಾನವೆಂಬ ರಂಗಕಲೆಯೊಂದರ ನಿರರ್ಗಳತೆ.
ಸಿನಿಮಾಕ್ಕೂ ಯಕ್ಷಗಾನಕ್ಕೂ ಇರುವ ಪ್ರಧಾನ ವ್ಯತ್ಯಾಸವೇ ಇದು. ಜಾನಪದ ಕಲೆಗಳೆಲ್ಲವೂ ನಶಿಸುತ್ತಿವೆ ಎಂಬ ಕೂಗಿನ ನಡುವೆ ಇದಕ್ಕೆ ಅಪವಾದವಾಗಿ, ಎಲ್ಲ ರೀತಿಯ ಸವಾಲುಗಳೆದುರು ಬಂಡೆಗಲ್ಲಿನಂತೆ ನಿಂತು ಶ್ರೀಮಂತವಾಗುತ್ತಿದೆ ಪಡುವಲಪಾಯ ಯಕ್ಷಗಾನ. ತಲೆಮಾರುಗಳಿಂದ ಕಲಾವಿದರು ಹಾಗೂ ಪ್ರೇಕ್ಷಕ ಸಂದೋಹದ ಪ್ರೀತಿಯ ಪೋಷಣೆಯಿಂದಾಗಿ ಇದು ಬೆಳೆದು ನಿಂತ ಬಗೆ ಅದ್ಭುತ. ಕರಾವಳಿ ಮಣ್ಣಿನಲ್ಲಿ ಹುಟ್ಟಿ, ಮಲೆನಾಡಿನಲ್ಲಿಯೂ ಸುಗಂಧ ಬೀರಿ, ರಾಜಧಾನಿ ಸಹಿತವಾಗಿ ರಾಜ್ಯಾದ್ಯಂತ ಹರಡಿ, ದೇಶದ ಎಲ್ಲೆ ಮೀರಿ ಇಂದು ವಿದೇಶದಲ್ಲೂ ಯಕ್ಷಗಾನ ಮನೆ ಮಾತಾಗಿರುವುದಕ್ಕೆ ಕಾರಣ ಈ ಕಲೆಯ ಗೀತ, ನೃತ್ಯ, ವಾಕ್, ಆಹಾರ್ಯ, ಸಾಹಿತ್ಯ, ಪ್ರದರ್ಶನಗಳುಳ್ಳ ಸರ್ವಾಂಗೀಣ ಸೌಂದರ್ಯದ ಗುಣ.
ಬಹುತೇಕ ಎಲ್ಲ ರಂಗ ಕಲೆಗಳು ಆಧುನಿಕತೆಯ ಸಾಂಸ್ಕೃತಿಕ ದಾಳಿಗಳಿಂದ ಕಂಗೆಟ್ಟಿದ್ದರೆ, ಯಕ್ಷಗಾನ ಮಾತ್ರ ತನ್ನ ಮೂಲ ಸೊಗಡನ್ನು ಉಳಿಸಿಕೊಳ್ಳುವಲ್ಲಿ, ಬೆಳೆಯುವಲ್ಲಿ, ವಿಸ್ತಾರಗೊಳ್ಳುವಲ್ಲಿ ಯಶಸ್ವಿಯಾಗಿದೆ. ಸಿನಿಮಾ, ಟಿವಿ, ಇಂಟರ್ನೆಟ್ಟುಗಳು ವ್ಯಸನವೇ ಆಗಿಬಿಟ್ಟಿರುವ ಈ ಕಾಲಘಟ್ಟದಲ್ಲಿ ಯಕ್ಷಗಾನ ಎಂದರೆ ತುಡಿಯುವ ಯುವಜನಾಂಗವಿದೆ ಎಂಬುದಕ್ಕೆ ಕಾರಣ ಅದು ನೀಡುವ ರಂಜನೆ, ಬೋಧನೆ.
ಯಕ್ಷಗಾನವೂ ಬದಲಾವಣೆಗೆ ಒಡ್ಡಿಕೊಳ್ಳುತ್ತಲೇ ಬಂದಿದೆ. ಅಲ್ಲಲ್ಲಿ ಈಗೀಗ ಯಕ್ಷ ನಾಟ್ಯ ವೈಭವಗಳು (ಡೈಲಾಗ್‌ಗಳಿಲ್ಲದೆ ಯಕ್ಷಗಾನದ ವೇಷಗಳು, ಹಿಮ್ಮೇಳದ ಜತೆ) ನಡೆಯುತ್ತಿದ್ದರೆ, ಶಾಸ್ತ್ರೀಯ ಸಂಗೀತದ ಆಲಾಪನೆ-ತನಿ ಆವರ್ತನಗಳನ್ನೆಲ್ಲ ತನ್ನೊಳಗೆ ಸೆಳೆದುಕೊಂಡ ಗಾನ ವೈಭವಗಳು (ಭಾಗವತರ ಅಂದರೆ ಹಾಡುಗಾರರ ಸಂದೋಹದಿಂದ ಹಾಡುಗಾರಿಕೆ) ಹೊಸ ಶ್ರೋತೃಗಳನ್ನು ಸೃಷ್ಟಿ ಮಾಡುತ್ತಿವೆ. ಎರಡಕ್ಕೂ ಮೂಲಾಧಾರ ಯಕ್ಷಗಾನ ಸಾಹಿತ್ಯ ಹಾಗೂ ಅದರ ಹಿಮ್ಮೇಳ ವಾದನ ಪರಿಕರಗಳಾದ ಚೆಂಡೆ-ಮದ್ದಳೆಗಳು. ಇವೆಲ್ಲದರ ನಡುವೆ ಕೆಲ ವರ್ಷಗಳಿಂದ ಸದ್ದು ಮಾಡುತ್ತಿರುವುದು ಯಕ್ಷಗಾನಕ್ಕೆ ಸಿನಿಮಾ ಕಥೆ ಬೇಕೇ? ಎಂಬ ಕೂಗು.
ಕಳೆದ ವರ್ಷ ಭಾರಿ ಸದ್ದು ಮಾಡಿದ್ದ ಬಾಹುಬಲಿ ಸಿನಿಮಾದ ಪ್ರಭಾವವನ್ನು ಯಕ್ಷಗಾನ ರಂಗಕ್ಕೆ ಪರಿಚಯಿಸಿದ್ದು ವಜ್ರಮಾನಸಿ ಎಂಬ ಪ್ರಸಂಗದ ಮೂಲಕ, ಪ್ರಸಂಗಕರ್ತ ದೇವದಾಸ್ ಈಶ್ವರಮಂಗಲ. ಈಗ ಬಾಹುಬಲಿ 2 ಬಂದಿದೆ, ವಜ್ರಮಾನಸಿ 2 ಕೂಡ ರೆಡಿಯಾಗಿದೆ. ಜು.3ರ ಸೋಮವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇದರ ಪ್ರಥಮ ಪ್ರಯೋಗವು ಸಾಲಿಗ್ರಾಮ ಮೇಳದ ಕಲಾವಿದರ ಕೂಡುವಿಕೆಯಲ್ಲಿ ನಡೆಯುತ್ತಿದೆ.
ವಜ್ರಮಾನಸಿ 1ರಲ್ಲಿ ಕಲಾವಿದರೆಲ್ಲ ಸೇರಿಕೊಂಡು ಯಕ್ಷಗಾನಕ್ಕೆ ಚ್ಯುತಿಯಾಗದಂತೆ ಎಲ್ಲರೂ ಮೆಚ್ಚುವಂತೆ ರಂಗದಲ್ಲಿ ಪ್ರದರ್ಶಿಸಿದರು. ಈಗ ವಜ್ರಮಾನಸಿ -2 ಸಿದ್ಧವಾಗಿದ್ದು, ಇದು ಬಾಹುಬಲಿ ಚಿತ್ರದ ತದ್ರೂಪ ಕಥೆಯಲ್ಲ. ಅದರಿಂದ ಸ್ಫೂರ್ತಿ ಪಡೆದು, ಅದನ್ನು ಯಕ್ಷಗಾನೀಯವಾಗಿಸಿ ರಂಗಕ್ಕೆ ತರಲಾಗಿದೆ. ಅದರಲ್ಲಿಲ್ಲದ ಕಥೆ, ಭವಿಷ್ಯದ ಕಥೆಯೂ ಇದರಲ್ಲಿದೆ. ಬಾಹುಬಲಿ-3 ಮಾಡುವುದಿದ್ದರೂ ರಾಜಮೌಳಿ ಅವರು ಯಕ್ಷಗಾನದಿಂದ ಸ್ಫೂರ್ತಿ ಪಡೆಯಬಹುದೇನೋ… ಯಕ್ಷಗಾನವು ಹಿಂದಿನಿಂದಲೂ ನೆಚ್ಚಿಕೊಂಡು ಬಂದಿರುವ ಪೌರಾಣಿಕ, ಐತಿಹಾಸಿಕ ಪಾತ್ರಗಳನ್ನು ಹೋಲುತ್ತಿರುವುದರಿಂದ (ಕಟ್ಟಪ್ಪ, ರಾಜಮಾತೆ ಶಿವಗಾಮಿ, ಬಲ್ಲಾಳದೇವ, ಬಾಹುಬಲಿ, ದೇವಸೇನಾ…) ಪಾತ್ರಗಳ ಹೆಸರನ್ನು ಮಾತ್ರ ಹಾಗೆಯೇ ಇರಿಸಿಕೊಳ್ಳಲಾಗಿದೆ.
ಯಕ್ಷಗಾನವೆಂಬ ಅಪ್ಪಟ ಸ್ಫಟಿಕ-ಶುಭ್ರ ಕಲೆಗೆ ಸಿನಿಮಾದ ಛಾಯೆ ಬೇಕೇ? ಸಿನಿಮಾ ಹಾಡುಗಳಿಂದ ಹಿಡಿದು, ಸೀನು-ಸೀನರಿಗಳ ಅಳವಡಿಕೆ, ಸಿನಿಮಾ ಶೈಲಿಯ ಹಾಡುಗಳು, ಕೋಲಾಟ, ದೈವದ ಕೋಲ, ಇಷ್ಟೇ ಅಲ್ಲ; ಅಶ್ಲೀಲ ಹಾಸ್ಯಗಳು, ಅಸಭ್ಯ ಕುಣಿತ… ಇವೆಲ್ಲವೂ ಯಕ್ಷಗಾನಕ್ಕೆ ಬಂದಿವೆ. ಸಿನಿಮಾ ಕಥೆಗಳು ಯಕ್ಷಗಾನಕ್ಕೆ ಬಂದಿರುವುದು ಇದೇ ಮೊದಲೇನಲ್ಲ. ಕೆದಕಿದರೆ ಉದ್ದದ ಪಟ್ಟಿಯೇ ದೊರೆಯುತ್ತದೆ.
‘ಪಡೆಯಪ್ಪ’ ಪ್ರೇರಿತ ಶಿವರಂಜಿನಿ, ‘ಮೂಂಡ್ರಮ್ ಪಿರೈ’ನಿಂದ ಪಂಚಮ ವೇದ, ಸುವ್ವಿ ಸುವ್ವಲಾಲಿಯಿಂದ ಶಿವಾನಿ ಭವಾನಿ, ಸಾಜನ್ ಚಲೇ ಸಸುರಾಲ್‌ನಿಂದ ಚೆಲುವ ಚೆನ್ನಿಗ, ಆಪ್ತಮಿತ್ರದಿಂದ ನಾಗವಲ್ಲಿ, ಮಯೂರದಿಂದ – ಗಂಡುಗಲಿ ಮಯೂರ, ಸಂಗೊಳ್ಳಿ ರಾಯಣ್ಣ, ಅಗ್ನಿಸಾಕ್ಷಿಯಿಂದ ಪವಿತ್ರ ಪದ್ಮಿನಿ, ಚಾಲ್ ಬಾಜ್(ರಾಣಿ ಮಹಾರಾಣಿ) ಪ್ರೇರಿತ ಮಲ್ಲಿಗೆ ಸಂಪಿಗೆ (ತುಳು), ಯಜಮಾನ ಪ್ರೇರಿತ ವಜ್ರ ಕುಟುಂಬ (ತುಳು), ರಕ್ತ ಕಣ್ಣೀರು ಚಿತ್ರದಿಂದ ರಕ್ತ ಕಂಬನಿ ರೂಪದಲ್ಲಿ ಮತ್ತೀಗ ಬಾಹುಬಲಿ ಪ್ರಸಂಗಗಳನ್ನು ದೇವದಾಸ್ ಅವರೇ ರಂಗಕ್ಕಿಳಿಸಿದ್ದಾರೆ. ಅದೇ ರೀತಿ, ಅಣ್ಣಯ್ಯ ಚಿತ್ರ ಪ್ರೇರಿತ ಈಶ್ವರಿ ಪರಮೇಶ್ವರಿ, ಬಾಝೀಗರ್ ಚಿತ್ರದಿಂದ ಧೀಶಕ್ತಿ ಎಂಬ ಯಕ್ಷಗಾನವೂ ಹಿಂದೆ ಬಂದಿತ್ತು.
ಸಿನಿಮಾ ಕಥೆಗಳೆಲ್ಲ ಯಕ್ಷಗಾನಕ್ಕೆ ಬೇಕೇ?
ದೇಶಪ್ರೇಮ ಸಾರುವ, ದುಷ್ಟ ಶಿಕ್ಷಣ, ಶಿಷ್ಟ ರಕ್ಷಣೆಯನ್ನು ಬಿಂಬಿಸಿ ಸಮಾಜಕ್ಕೊಂದು ಉತ್ತಮ ಸಂದೇಶ ನೀಡುವ ಕಥೆಗಳನ್ನು ಯಕ್ಷಗಾನಕ್ಕೆ ಬೇಕಾದಂತೆ ಮಾರ್ಪಡಿಸುವುದರಿಂದ ಹೊಸ ಪ್ರೇಕ್ಷಕರೂ ಹುಟ್ಟಿಕೊಳ್ಳುತ್ತಾರೆ. ಬಂಗಾರದ ಮನುಷ್ಯ, ರಾಜಕುಮಾರ ಮುಂತಾದ ಒಳ್ಳೆಯ ಕಥೆಗಳು ಬಂದಾಗ, ಸಮಾಜಕ್ಕೆ ಒಳ್ಳೆಯ ಸಂದೇಶ ದೊರೆಯುತ್ತದೆ. ಅಂಥ ಕಥೆಗಳನ್ನು ಯಕ್ಷಗಾನ ಪ್ರೇಮಿಗಳಿಗೂ ಉಣಬಡಿಸಿದರೆ ತಪ್ಪೇನು? ಒಳ್ಳೆಯ ಸಂದೇಶ ನೀಡುವ, ಯಕ್ಷಗಾನೀಯವಾಗಿ ನಿರೂಪಿಸಲ್ಪಡುವ ಕಥೆಯನ್ನು ಕೊಟ್ಟರೆ, ಯಕ್ಷಗಾನ ಬೆಳೆಯುತ್ತದೆ. ನೀತಿಯುತ ಕಥೆಯೊಂದನ್ನು ರಂಜನೀಯವಾಗಿ ಆದರೆ ಯಕ್ಷಗಾನದ ಚೌಕಟ್ಟಿನಲ್ಲಿ ನೀಡುವುದರಲ್ಲಿ ತಪ್ಪಿಲ್ಲ ಎನ್ನುತ್ತಾರೆ ದೇವದಾಸ್ ಈಶ್ವರಮಂಗಲ.
ಯಕ್ಷಗಾನಕ್ಕೆ ಪೌರಾಣಿಕ ಪ್ರಸಂಗಗಳಷ್ಟೇ ಅಲ್ಲದೆ, ಅದೆಷ್ಟೋ ಸಾಮಾಜಿಕ, ಜಾನಪದ, ಕಾಲ್ಪನಿಕ, ಐತಿಹಾಸಿಕ ಕಥೆಗಳು ಬಂದಿವೆ, ಯಕ್ಷಗಾನವೂ ಏಳಿಗೆಯಾಗಿದೆ, ಸಮಾಜಕ್ಕೂ ಒಳ್ಳೆಯ ಸಂದೇಶ ಸಿಕ್ಕಿದೆ. ಇಂಥದ್ದೇ ರೀತಿಯ ಮೌಲ್ಯ ನೀಡುವ ಸಿನಿಮಾ ಕಥೆ ಬಂದಾಗಲಷ್ಟೇ ಅಪಸ್ವರ ಏಕೆ ಎಂಬುದು ಪ್ರಸಂಗಕರ್ತರ ಪ್ರಶ್ನೆ.
ಸಿನಿಮಾಗಳಾದರೆ ತಾತ್ಕಾಲಿಕ ಪ್ರಚಾರ ಪಡೆದು ಕಾಲಾಂತರದಲ್ಲಿ ನೆನಪಿನಿಂದ ಮರೆಯಾಗುತ್ತವೆ. ಯಕ್ಷಗಾನದಲ್ಲಿ ಹಾಗಲ್ಲ. ಕಲಾವಿದರು ಅವನ್ನು ಸವಾಲಾಗಿ ಸ್ವೀಕರಿಸುತ್ತಾರೆ. ಸಿನಿಮಾ ಪಾತ್ರಗಳನ್ನು ಅವುಗಳ ಪಾತ್ರಪೋಷಣೆಗೂ ಚ್ಯುತಿ ಬಾರದಂತೆ, ಯಕ್ಷಗಾನೀಯವಾಗಿಯೂ ರಂಗದಲ್ಲಿ ಪ್ರದರ್ಶಿಸಬೇಕಾಗುತ್ತದೆ; ಇಂಗ್ಲಿಷ್ ಶಬ್ದ, ಇಂಗ್ಲಿಷ್ ವಿಷಯಗಳಿಲ್ಲದೆ ಮಾತು ಪೋಣಿಸುತ್ತಾ ಅಭಿನಯಿಸಬೇಕಾಗುತ್ತದೆ ಮತ್ತು ಯಕ್ಷಗಾನದ ಸೊಗಡಿಗೆ ಧಕ್ಕೆಯಾಗದಂತೆ ಪ್ರದರ್ಶನ ನೀಡಬೇಕಾಗುತ್ತದೆ. ಹೀಗಾದರೆ ಮಾತ್ರವೇ ಪ್ರೇಕ್ಷಕರು ಒಪ್ಪುತ್ತಾರೆಂಬ ಪ್ರಜ್ಞೆ ಅವರಿಗಿದೆ. ಈ ನಿಟ್ಟಿನಲ್ಲಿ ಸಿನಿಮಾದಿಂದ ಬಂದ ಯಕ್ಷಗಾನದ ಗೆಲುವು-ಸೋಲಿನಲ್ಲಿ ಯಕ್ಷಗಾನ ಕಲಾವಿದರ ಪಾತ್ರ ಅತ್ಯಂತ ಮುಖ್ಯ.
ಇಲ್ಲಿ, ನಾಳೆ ನಡೆಯುವ ಪ್ರದರ್ಶನ ಇಂದಿಗಿಂತ ಭಿನ್ನವೂ, ಪರಿಪಕ್ವವೂ ಆಗಿರುತ್ತದೆ. ಇದಕ್ಕೆ ಕಾರಣ, ಕಲಾವಿದರು ಮತ್ತವರಲ್ಲಿರುವ ಆಶುಪಟುತ್ವ. ಕಲೆಯ ಮೂಲ ಹಂದರಕ್ಕೆ ಧಕ್ಕೆಯಾಗದಂತೆ ಅಂತಸ್ಫೂರ್ತಿಯಿಂದಲೇ ಅವರಲ್ಲಿ ಡೈಲಾಗ್ ಹುಟ್ಟುತ್ತದೆ. ಹೀಗಾಗಿ ಪ್ರತಿಯೊಂದು ಪ್ರದರ್ಶನದಲ್ಲೂ ಹೊಸತನವಿರುತ್ತದೆ. ಇದು ಯಕ್ಷಗಾನದ ವೈಶಿಷ್ಟ್ಯ.
ಸಿನಿಮಾ ಕಥೆಗಳು, ಸಿನಿಮಾ ಹಾಡುಗಳು, ಚಪ್ಪಾಳೆ-ಶಿಳ್ಳೆಗಳ ಪ್ರೇಕ್ಷಕರು, ಸಿನಿಮೀಯ ದೃಶ್ಯಾವಳಿಗಳು, ಬ್ಯಾಂಡು-ವಾಲಗ, ಸುಡುಮದ್ದು-ಸಿಡಿಮದ್ದುಗಳ ಆವರಿಸುವಿಕೆಗಳಲ್ಲ ಬಂದರೂ ಚೆಂಡೆ-ಮದ್ದಳೆಯ ನಾದದ ನುಡಿತದ ಆಪ್ಯಾಯತೆಗೆ ಅದುವೇ ಸಾಟಿ, ಇದು ಅನ್ಯತ್ರ ಅಲಭ್ಯ. ಈ ಕಾರಣದಿಂದಲೇ ಸಂಸ್ಕಾರ ಬೆಳೆಸುವ, ರಂಜನೆ ನೀಡುವ, ಬೋಧನೆಯನ್ನೂ ಮಾಡುವ ಕಲಾ ಮಾಧ್ಯಮ ಯಕ್ಷಗಾನವಿಂದು ಮೂಲಸತ್ವ ಬಿಟ್ಟುಕೊಡದೆ ಬೆಳೆದಿದೆ, ಬೆಳೆಯುತ್ತಲೇ ಇದೆ.
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು
ಮುದ್ದಣನ ಕುಮಾರ ವಿಜಯದ ಸುಮಾರು 700ರಷ್ಟಿರುವ ಹಾಡುಗಳನ್ನು ಹಾಡಿದ್ದು ತೆಂಕು ತಿಟ್ಟಿನ ಬಲಿಪ ಶೈಲಿಯ ಪ್ರತಿಪಾದಕ ಭಾಗವತರೇ. ಏಳೆಂಟು ವರ್ಷಗಳ…