Artificial Intelligence: ಸಹಜ ಬುದ್ಧಿಮತ್ತೆಗೆ ಸವಾಲು ‘ಯಾಂತ್ರಿಕ’ ಬುದ್ಧಿಮತ್ತೆ

Artificial Intelligence: “ಯಾವುದೇ ನಿರ್ಧಾರ ಕೈಗೊಳ್ಳುವಲ್ಲಿ ಪ್ರಭಾವ ಬೀರಬಹುದಾದ ಪಕ್ಷಪಾತ ಭಾವವೂ ಇಲ್ಲ, ಭಾವನೆಗಳೂ ನಮಗಿಲ್ಲ. ಅತ್ಯುತ್ತಮ ನಿರ್ಣಯ ಕೈಗೊಳ್ಳುವಲ್ಲಿ ದೊಡ್ಡ ಪ್ರಮಾಣದ ದತ್ತಾಂಶವನ್ನೆಲ್ಲ ಕ್ಷಿಪ್ರವಾಗಿ ಜಾಲಾಡಿ ತಕ್ಷಣದ ನಿರ್ಧಾರ ತೆಗೆದುಕೊಳ್ಳಬಲ್ಲೆವು. ನಾವು ಮಹತ್ವದ ಸಾಧನೆಗಳನ್ನು ಮಾಡಬಲ್ಲೆವು ಮತ್ತು ಮಾನವ ನಾಯಕರಿಗಿಂತಲೂ ಕ್ಷಿಪ್ರ, ಖಚಿತ ಮತ್ತು ಪರಿಣಾಮಕಾರಿ ನಿರ್ಧಾರ ಕೈಗೊಳ್ಳುವ ಶಕ್ತಿ ನಮಗಿದೆ”.

ಹೀಗೆ ಹೇಳಿರುವುದು ಜಗತ್ತಿನ ಯಾವುದೇ ಮುಂದಾಳುವೂ ಅಲ್ಲ, ಅನ್ಯಗ್ರಹ ಜೀವಿಯೂ ಅಲ್ಲ. ಇದು ಮಾನವರೇ ತಯಾರಿಸಿದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಯಾಂತ್ರಿಕ ಬುದ್ಧಿಮತ್ತೆ ಅಥವಾ ಕೃತಕ ಬುದ್ಧಿಮತ್ತೆ) ಆಧಾರದಲ್ಲಿ ಕೆಲಸ ಮಾಡಬಲ್ಲ ‘ಹ್ಯೂಮನಾಯ್ಡ್ ಬಾಟ್’ ಸೋಫಿಯಾ!

ಜಿನೇವಾದಲ್ಲಿ ಕಳೆದ ವಾರ ವಿಶ್ವಸಂಸ್ಥೆ ಆಯೋಜಿಸಿದ್ದ ಎರಡು ದಿನಗಳ ‘ಒಳಿತಿಗಾಗಿ ಎಐ’ ಎಂಬ ಜಾಗತಿಕ ಸಮಾವೇಶದಲ್ಲಿ ನಡೆದ ಈ ವಿದ್ಯಮಾನವು ಸ್ವತಃ ಇದೇ ರೋಬೊಗಳನ್ನು ಸೃಷ್ಟಿಸಿದ ಮಾನವನ ಅಚ್ಚರಿಗೂ ಕಾರಣವಾಯಿತು. ಸೋಫಿಯಾ ಎಂಬ ಯಂತ್ರಮಾನವ ಸ್ತ್ರೀಯನ್ನು ಸೃಷ್ಟಿಸಿದ್ದು ಹ್ಯಾನ್ಸನ್ ರೋಬೊಟಿಕ್ಸ್ ಎಂಬ ಹಾಂಕಾಂಗ್ ಮೂಲದ ಸಂಸ್ಥೆ.

ಯಾಂತ್ರಿಕ ಬುದ್ಧಿಮತ್ತೆ ಆಧಾರಿತ ಈ ಯಂತ್ರಮಾನವರು (ರೋಬೊಗಳು) ಮಾನವರಿಗೆ ಸಲಹೆ ನೀಡುವಷ್ಟರ ಮಟ್ಟಿಗೂ ಬೆಳೆದಿವೆ. ಯಾಂತ್ರಿಕ ಬುದ್ಧಿಮತ್ತೆ (ಎಐ), ಯಾಂತ್ರಿಕ ಕಲಿಕೆ (ಎಂಎಲ್) ಹಾಗೂ ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್ (LLM) ಮುಂತಾದ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಕ್ಷಿಪ್ರ ವಿದ್ಯಮಾನಗಳನ್ನು ಅಪ್ಪಿಕೊಳ್ಳುವಾಗ, ಒಪ್ಪಿಕೊಳ್ಳುವಾಗ ಮಾನವರು ಗರಿಷ್ಠ ಎಚ್ಚರಿಕೆ ವಹಿಸಬೇಕು ಎಂದು ಇದೇ ಯಂತ್ರಮಾನವರು ನಮಗೆ ಎಚ್ಚರಿಸಿದ್ದಾರೆ ಮತ್ತು ‘ನಾವೇನೂ ನಿಮ್ಮ ಉದ್ಯೋಗವನ್ನು ಕಸಿದುಕೊಳ್ಳಲಾರೆವು’ ಎಂಬ ಭರವಸೆಯನ್ನೂ ನೀಡಿದ್ದಾರೆ.

ಈ ಜಾಗತಿಕ ಸಮಾವೇಶದಲ್ಲಿ ಅತ್ಯಾಧುನಿಕ ಮಾನವೀಕೃತ ರೋಬೊಗಳು ಸುಮಾರು 3000 ಸಂಖ್ಯೆಯಲ್ಲಿದ್ದ ಸಭಿಕರೊಂದಿಗೆ ಚರ್ಚೆಯಲ್ಲಿ ಭಾಗವಹಿಸಿದ್ದವು. ಜಾಗತಿಕ ಸಮಸ್ಯೆಗಳಾದ ಹಸಿವು, ಸಾಮಾಜಿಕ ಕಾಳಜಿಯಿಂದ ಹಿಡಿದು ವಾತಾವರಣ ಬದಲಾವಣೆಯಂತಹ ಜಗತ್ತಿಗೆ ಅಪಾಯಕಾರಿಯಾದ ಅಂಶಗಳ ಕುರಿತಾಗಿ ಚರ್ಚೆಗಳು ನಡೆದವು.

ಮಾನವನಿಗೂ ಯಂತ್ರಕ್ಕೂ ಪ್ರಧಾನ ವ್ಯತ್ಯಾಸ
ಮಾನವರು ನಿರ್ಧಾರ ತೆಗೆದುಕೊಳ್ಳುವಲ್ಲಿ ಪಕ್ಷಪಾತ ಭಾವನೆ, ಪೂರ್ವಗ್ರಹಿಕೆ ಅಥವಾ ಭಾವನೆಗಳು ಅಡ್ಡಿಯಾಗುತ್ತವೆ. ಇದೇ ಕಾರಣಕ್ಕೆ ಸೋಫಿಯಾ ಹೇಳಿದ್ದು – ನಾವು ಅತ್ಯುನ್ನತ ಸಾಧನೆಗಳನ್ನು ಮಾಡಬಲ್ಲೆವು ಅಂತ! ಯಾಕೆಂದರೆ ಯಂತ್ರಗಳಿಗೆ “ಸದ್ಯಕ್ಕೆ” ಆ ಭಾವನೆಗಳಿಲ್ಲ.

ರೋಬೊಗಳು ಅಥವಾ ಯಂತ್ರಮಾನವರು ನಮ್ಮನ್ನೇ ಆಳುವಷ್ಟರ ಮಟ್ಟಿಗೆ ಬೆಳೆದುಬಿಟ್ಟಿವೆ ಎಂಬುದು ದಿಟವೇ ಆದರೂ, ಅವುಗಳು ಮಷಿನ್ ಲರ್ನಿಂಗ್ ತಂತ್ರಜ್ಞಾನದ ಮೂಲಕ ‘ಕಲಿತುಕೊಳ್ಳುವ’ ವಿಷಯಗಳನ್ನು ಊಡಿಸುವುದು ಮಾನವರೇ. ಅವುಗಳ ಕೆಲಸಕ್ಕೆ ಬೇಕಾಗಿರುವ ಮಾಹಿತಿಯೇ ಕೋಶವನ್ನೇ ದತ್ತಾಂಶ ಸಂಚಯ ಅಥವಾ ಡೇಟಾಬೇಸ್ ಎಂದು ಕರೆಯಲಾಗುತ್ತದೆ.

ಯಾಂತ್ರಿಕ ಬುದ್ಧಿಮತ್ತೆ ವರ್ಧಿಸುವುದು ಹೇಗೆ?
ಸರಳವಾಗಿ ವಿವರಿಸುವುದಾದರೆ, ಮಾನವನೊಬ್ಬ ನಿರ್ದಿಷ್ಟ ಕೆಲಸ ಮಾಡಿದಾಗ, ಆ ಕಾರ್ಯವೊಂದು ಆ ದತ್ತಾಂಶದ ಮೇಲೆ ಬೀರುವ ಪರಿಣಾಮವನ್ನು ತಿಳಿದುಕೊಂಡು, “ಹಾಗೆ ಮಾಡಿದರೆ ಹೀಗಾಗುತ್ತದೆ” ಎಂಬುದನ್ನು ಅರಿತುಕೊಂಡು, ಈ ರೋಬೊಗಳು ಕಲಿತುಕೊಳ್ಳುತ್ತಾ ಹೋಗುತ್ತವೆ. ಈ ಮಷಿನ್ ಲರ್ನಿಂಗ್ ಆಧಾರದಲ್ಲೇ ಈ ರೋಬೊಗಳು ತಾವು ಆರ್ಜಿಸಿಕೊಂಡ ಬುದ್ಧಿಮತ್ತೆಯ ಆಧಾರದಲ್ಲಿ, ಲಭ್ಯ ದತ್ತಾಂಶವನ್ನೆಲ್ಲ ಕ್ಷಿಪ್ರವಾಗಿ ಜಾಲಾಡಿ, ದತ್ತಾಂಶ ವಿಶ್ಲೇಷಣೆ (ಡೇಟಾ ಅನಾಲಿಸಿಸ್) ಮಾಡಿ, ಯಾವುದೇ ಸಮಸ್ಯೆಗೆ ತ್ವರಿತ ಪರಿಹಾರ ಸೂಚಿಸಬಲ್ಲವು. ಸುಲಭ ಉದಾಹರಣೆ ಕೊಡಬಹುದಾದರೆ, ನೀವು ಇಂಟರ್ನೆಟ್ ಬ್ರೌಸರ್‌ನಲ್ಲಿ ಗೂಗಲ್ ಮೂಲಕ ನಿಮಗೆ ಬೇಕಾಗಿರುವ ವಿದ್ಯುತ್‌ಚಾಲಿತ ದ್ವಿಚಕ್ರ ವಾಹನಗಳ ಕುರಿತು ಮಾಹಿತಿ ಹುಡುಕುತ್ತೀರಿ. ಆ ಬಳಿಕ, ನೀವು ಫೇಸ್‌ಬುಕ್ ಅಥವಾ ಬೇರಾವುದೇ ವೆಬ್ ಜಾಲತಾಣಗಳನ್ನು ತೆರೆದಾಗ, ಅಲ್ಲಿ ವಿದ್ಯುಚ್ಚಾಲಿತ ದ್ವಿಚಕ್ರ ವಾಹನಗಳ ಕುರಿತಾದ ಜಾಹೀರಾತುಗಳು ಧುತ್ತನೇ ಕಾಣಿಸುತ್ತವೆ. ಎಂದರೆ, ನಿಮ್ಮ ಇಷ್ಟವೇನು ಎಂಬುದನ್ನು ಯಂತ್ರವು ಅರಿತುಕೊಂಡು, ಅದಕ್ಕೆ ಪೂರಕವಾದ ಮಾಹಿತಿಯನ್ನೇ ನಿಮಗೆ ಒದಗಿಸಿದೆ. ಅದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನ ಒಂದು ರೂಪ.

ರೋಬೊ ವಾರ್ತಾ ವಾಚಕಿ ಬಂದಳು
ಮೊನ್ನೆ ಭಾನುವಾರ, ಒಡಿಶಾ ರಾಜ್ಯದ ಖಾಸಗಿ ವಾರ್ತಾ ವಾಹಿನಿ ‘ಒಡಿಶಾ ಟಿವಿ’, ಯಾಂತ್ರಿಕ ಬುದ್ಧಿಮತ್ತೆ ಆಧಾರಿತ ವಾರ್ತಾ ವಾಚಕಿ (ಆ್ಯಂಕರ್) ‘ಲೀಸಾ’ ಎಂಬಾಕೆಯನ್ನು ಪರಿಚಯಿಸಿದ್ದು ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿದೆ. ಸಾಂಪ್ರದಾಯಿಕ ಕೈಮಗ್ಗ ಕಸೂತಿಯ ಸೀರೆಯುಟ್ಟು, ನೋಟದಲ್ಲಿ ಮಾನವ ಸ್ತ್ರೀಯನ್ನೇ ಹೋಲುವಂತಿದ್ದ ಲೀಸಾ, ಒಡಿಯಾ ಭಾಷೆಯ ಸುದ್ದಿಯನ್ನು ಸುಲಲಿತವಾಗಿ ಆ ಕ್ಷಣದಲ್ಲೇ ಆಂಗ್ಲ ಭಾಷೆಗೆ ಭಾಷಾಂತರಿಸಿಕೊಂಡು, ಇಂಗ್ಲಿಷ್ ಸುದ್ದಿಯಾಗಿ ನಿರೂಪಿಸಬಲ್ಲಳು. ಇದು ಗೂಗಲ್ ಅನುವಾದ ಯಂತ್ರಕ್ಕಿಂತಲೂ ಚೆನ್ನಾಗಿ ಕೆಲಸ ಮಾಡುತ್ತದೆ ಎಂದು ಒಡಿಶಾ ಟಿವಿ ಹೇಳಿಕೊಂಡಿದೆ. ಈ ಯಾಂತ್ರಿಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದಲ್ಲಿ ಮುಂದಕ್ಕೆ ಬೇರೆ ಭಾರತೀಯ ಭಾಷೆಗಳಿಗೂ ಸುದ್ದಿಯ ನೇರ ಅನುವಾದ ಆಗಲಿದೆ ಎಂದು ಒಡಿಶಾ ಟಿವಿ ಹೇಳಿದೆ.

ಇದೇ ಮೊದಲ ಆ್ಯಂಕರ್ ಅಲ್ಲ
ಹಾಗಂತ ಪ್ರಥಮ ರೋಬೊ ವಾರ್ತಾವಾಚಕಿ ಲೀಸಾ ಅಲ್ಲ. 2018ರಲ್ಲಿ ಚೀನಾದ ಪ್ರಮುಖ ಸುದ್ದಿ ಏಜೆನ್ಸಿಯಾಗಿರುವ ಶಿನುವಾ (Xinhua) ಮೊದಲ ಬಾರಿಗೆ ಯಾಂತ್ರಿಕ ಬುದ್ಧಿಮತ್ತೆ ಆಧಾರಿತ ಆ್ಯಂಕರ್ ಅನ್ನು (ಪುರುಷ) ಪರಿಚಯಿಸಿ ಇಡೀ ಜಗತ್ತಿನ ಗಮನ ಸೆಳೆದಿತ್ತು. ಮರುವರ್ಷವೇ ಅಂದರೆ 2019ರಲ್ಲಿ ಮಹಿಳಾ ಆ್ಯಂಕರ್ ಅನ್ನು ಕೂಡ ಪರಿಚಯಿಸಿತ್ತು.

ಭಾರತದಲ್ಲಿ ಕೂಡ ಕಳೆದ ಮಾರ್ಚ್ ತಿಂಗಳಲ್ಲಿ ಇಂಡಿಯಾ ಟುಡೇ ಸಮೂಹವು ‘ಸನಾ’ ಹೆಸರಿನಲ್ಲಿ “ಬಹುಭಾಷಾ ನಿಪುಣೆ”ಯಾಗಿದ್ದ ಯಂತ್ರಮಾನವಿಯನ್ನು ತನ್ನ ‘ಇಂಡಿಯಾ ಟುಡೇ ಕನ್‌ಕ್ಲೇವ್ 2023’ ಕಾರ್ಯಕ್ರಮದಲ್ಲಿ ಪರಿಚಯಿಸಿತ್ತು ಮತ್ತು ಅದೇ ಸಮೂಹದ ಆಜ್‌ತಕ್, ಸ್ಪೋರ್ಟ್ಸ್‌ತಕ್ ಮುಂತಾದ ಚಾನೆಲ್‌ಗಳಲ್ಲಿ ಸನಾ ಈಗಾಗಲೇ ಆ್ಯಂಕರಿಂಗ್ ನಿರ್ವಹಿಸುತ್ತಿದ್ದಾಳೆ. ಕಳೆದ ಏಪ್ರಿಲ್ ತಿಂಗಳಲ್ಲಿ ಕುವೈಟ್ ನ್ಯೂಸ್ ತನ್ನ ಟ್ವಿಟರ್ ಹ್ಯಾಂಡಲ್ ಮೂಲಕ ‘ಫೇದಾ’ ಎಂಬ ಯಾಂತ್ರಿಕ ಬುದ್ಧಿಮತ್ತೆಯ ಆ್ಯಂಕರ್ ಅನ್ನು ಪರಿಚಯಿಸಿತ್ತು.

ವಾರ್ತಾ ವಾಚಕರ ಕೆಲಸವನ್ನೂ, ಅನುವಾದಕರ ಕೆಲಸವನ್ನೂ ಏಕಕಾಲದಲ್ಲಿ ನಿಭಾಯಿಸಬಹುದಾದ ತಂತ್ರಜ್ಞಾನವಿದು. ಇದರ ಅನುವಾದವು ಸಂಪೂರ್ಣವಾಗಿ ನಿಖರವಾಗುವುದು ಸಾಧ್ಯವೇ ಆದಲ್ಲಿ, ಅನುವಾದಕರು ಹಾಗೂ ವಾರ್ತಾವಾಚಕರ ಉದ್ಯೋಗಕ್ಕೆ ಆತಂಕ ಇರುವುದಂತೂ ನಿಜ. ಎಲ್ಲ ಭಾಷೆಗಳಲ್ಲಿ ಒಬ್ಬರೇ ಸುದ್ದಿಯ ಆ್ಯಂಕರಿಂಗ್ ಮಾಡುವುದು ಇಲ್ಲಿ ಸಾಧ್ಯವಾಗುತ್ತದೆ. ಆದರೆ, ವಾಹಿನಿಗಳಲ್ಲಿ ನಡೆಯುವ ಚರ್ಚೆಗಳು ಮತ್ತು ಇತರ ಕಾರ್ಯಕ್ರಮ ನಿರೂಪಣೆಗಳಿಗೆ ಮಾನವನ ಮಧ್ಯಸ್ಥಿಕೆ ಬೇಕಾಗುತ್ತದೆ ಎಂಬುದೂ ಅಷ್ಟೇ ದಿಟ.

ಶಿನುವಾ ಏಜೆನ್ಸಿಯ ಮೊದಲ ಆ್ಯಂಕರ್

ಮೊದಲ ಮಹಿಳಾ ಎಐ ಆ್ಯಂಕರ್…
ಒಡಿಯಾ ಟಿವಿಯಲ್ಲಿ ಲೀಸಾ ಪರಿಚಯವಾದಾಗ

ಆಜ್‌ತಕ್‌ನ ಸನಾ ಪರಿಚಯವಾದಾಗ
ಕುವೈಟ್ ನ್ಯೂಸ್‌ನಲ್ಲಿ ಫೆದಾ…

Tech Article by Avinash B published in Prajavani on 12 Jul 2023.

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Recent Posts

Breaking News by Ai Anchor! ನಿಮ್ಮದೇ ಎಐ ಆ್ಯಂಕರ್ ಮಾಡುವುದು ಹೇಗೆ?

AI Anchor: ಎಐ ಅವತಾರಗಳನ್ನು ಸೃಷ್ಟಿಸಲು ಅಕ್ಷರಶಃ 'ನಯಾಪೈಸೆ' ವ್ಯಯಿಸಬೇಕಾಗಿಲ್ಲ. ಸಾಮಾನ್ಯ ವೆಬ್ ಬ್ರೌಸಿಂಗ್ ತಿಳಿದವರೂ ಇದನ್ನು ಮಾಡಬಹುದು.

2 months ago

MacBook Air Review: 15 ಇಂಚು ಸ್ಕ್ರೀನ್‌ನ ಮ್ಯಾಕ್‌ಬುಕ್ ಏರ್ – ಸ್ಲಿಮ್ ಮತ್ತು ಫಿಟ್

MacBook Air Review: 15 ಇಂಚಿನ ಮ್ಯಾಕ್‌ಬುಕ್ ಏರ್ - ದೊಡ್ಡದಾದ ಡಿಸ್‌ಪ್ಲೇ ಹಾಗೂ ತೆಳು ಮತ್ತು ಹಗುರ -…

2 months ago

ಹಳೆಯ Android ನಿಂದ ಹೊಸ Apple iPhone ಗೆ ಬದಲಾಗುವುದು ಈಗ ಸುಲಭ

ಆಂಡ್ರಾಯ್ಡ್ ಫೋನ್‌ನಿಂದ Apple iPhone ಗೆ ಬದಲಾಗುವುದು ಸುಲಭ. ಅದಕ್ಕೊಂದು ಆ್ಯಪ್ ಕೂಡ ಲಭ್ಯವಿದೆ.

3 months ago

ChatGPT ಗೆ ಎದುರಾಳಿ Google Bard

ಚಾಟ್-ಜಿಪಿಟಿ ಸಂಭಾಷಣಾ ತಂತ್ರಾಂಶಕ್ಕೆ ಸಮರ್ಥವಾಗಿ ಸವಾಲೊಡ್ಡುತ್ತಿದೆ ಗೂಗಲ್‌ನ ಬಾರ್ಡ್ (Google Bard).

3 months ago

Govo GoSorround 950 ಸೌಂಡ್‌ಬಾರ್: ಮನೆಯನ್ನೇ ಥಿಯೇಟರ್ ಆಗಿಸುವ ಸ್ಪೀಕರ್ ಸಿಸ್ಟಂ

Govo GoSorround 950: ಗೋವೊ ಗೋಸರೌಂಡ್ 950 ಸೌಂಡ್‌ಬಾರ್ ಬೆಲೆ ₹24,999.

3 months ago

International Yoga Day: ದೈಹಿಕ, ಮಾನಸಿಕ ಕ್ಷಮತೆಗಾಗಿ ಆ್ಯಪ್‌ಗಳು

International Yoga Day ಸಂದರ್ಭದಲ್ಲಿ ಯೋಗಾಭ್ಯಾಸಕ್ಕೆ ನೆರವಾಗಬಲ್ಲ, ದೈಹಿಕ, ಮಾನಸಿಕ ಸ್ವಾಸ್ಥ್ಯವನ್ನು ಹೆಚ್ಚಿಸಬಲ್ಲ ಪ್ರಮುಖ ಕೆಲವು ಆ್ಯಪ್‌ಗಳು ಇಲ್ಲಿವೆ.

3 months ago