Apple Apps: ಎಲ್ಲವೂ ಅಂಗೈಯಲ್ಲೇ ದೊರೆಯುತ್ತದೆ ಎಂಬ ಈ ತಂತ್ರಜ್ಞಾನಾಧಾರಿತ ಕಾಲದಲ್ಲಿ ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಪೂರಕವಾಗಬಹುದಾದ, ತೊದಲುವಿಕೆ ನಿಯಂತ್ರಣಕ್ಕೆ ನೆರವಾಗುವ ಮತ್ತು ದೊಡ್ಡವರಿಗೂ ನೆರವಾಗಬಲ್ಲ ಐದು ಆ್ಯಪ್‌ಗಳ ಪರಿಚಯ ಇಲ್ಲಿದೆ. ಇವು ಮೊಬೈಲ್ ಸ್ಕ್ರೀನ್‌ನಲ್ಲೇ ಹೆಚ್ಚು ಸಮಯ ಕಳೆಯುತ್ತಿರುವ ಮಕ್ಕಳಿಗೆ ಜ್ಞಾನವನ್ನೂ ನೀಡಬಹುದಾದ ಆ್ಯಪ್‌ಗಳಾಗಿದ್ದು, ವಿಶೇಷವಾಗಿ ಆ್ಯಪಲ್ ಕಂಪನಿಯು ಡೆವಲಪರ್‌ಗಳಿಗೆ ವಿಶೇಷ ಪ್ರೋತ್ಸಾಹ ನೀಡಿ ರೂಪಿಸಿದವುಗಳು.
ಒಂದನೆಯದು ನಮ್ಮ ಶಬ್ದಭಂಡಾರ ವರ್ಧಿಸಬಲ್ಲ ಲುಕಪ್ (LookUp) ಎಂಬ ಆ್ಯಪ್. ಇದು ಮೂಲತಃ ಇಂಗ್ಲಿಷ್ ನಿಘಂಟು ಆ್ಯಪ್. ಇದೊಂದು ಕೇವಲ ಪದಕೋಶ ಮಾತ್ರವಾಗಿರದೆ, ರಸಪ್ರಶ್ನೆಯನ್ನು ಆಡುತ್ತಲೇ ಪದದ ಅರ್ಥವನ್ನು ಒರೆಗೆ ಹಚ್ಚಬಲ್ಲ, ಪ್ರತಿ ದಿನವೂ ಒಂದೊಂದು ಪದದ ಅರ್ಥವನ್ನು ಕಲಿಯಬಲ್ಲ ಮತ್ತು 25ಕ್ಕೂ ಹೆಚ್ಚು ವಿದೇಶೀ ಭಾಷೆಗಳಿಗೆ ಅನುವಾದ ಮಾಡಬಲ್ಲ ಆ್ಯಪ್. ದಿನಕ್ಕೊಂದು ಪದ ಪರಿಚಯಿಸುವ ವಿಜೆಟ್ ಇದರಲ್ಲಿದ್ದು, ಫೇಸ್‌ಟೈಮ್ ಎಂಬ ಸಂವಾದ ಆ್ಯಪ್ ಮೂಲಕ ಸ್ನೇಹಿತರೊಂದಿಗೆ ಸೇರಿಕೊಂಡು ಆನ್‌ಲೈನ್ ಕ್ವಿಜ್ ಆಡುತ್ತಾ, ಪದ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು.
ಆ್ಯಪಲ್ ಸ್ಟೋರ್‌ನಿಂದ LookUp ಆ್ಯಪ್ ಅಳವಡಿಸಿಕೊಂಡಲ್ಲಿ, ನಮ್ಮ ಅಭಿರುಚಿಗೆ ತಕ್ಕಂತೆ ವಿನ್ಯಾಸಪಡಿಸಲಾದ ವಿಧಾನದ ಮೂಲಕ ದಿನಕ್ಕೊಂದು ಹೊಸ ಶಬ್ದವನ್ನು ಕಲಿಯಬಹುದು. ಸುಂದರವಾದ ಚಿತ್ರಗಳು, ರೇಖಾಕೃತಿ, ಪದದ ಮೂಲ, ಪರ್ಯಾಯ ಪದ, ಸಮಾನ ಪದಗಳೊಂದಿಗೆ, ಅರ್ಥ, ವಾಕ್ಯ ರಚನೆ ಮುಂತಾದವುಗಳು ಕೂಡ ಇದರಲ್ಲಿ ಸಿಗುತ್ತದೆ. ಇದಲ್ಲದೆ, ಫ್ರೆಂಚ್, ಜರ್ಮನ್, ಚೈನೀಸ್, ಗ್ರೀಕ್ ಮುಂತಾದವುಗಳೊಂದಿಗೆ ಭಾರತದ ಹಿಂದಿ ಮತ್ತು ಮರಾಠಿ ಭಾಷೆಗಳಿಗೂ ಅನುವಾದ ಇಲ್ಲಿ ಲಭ್ಯ.
ಇಂಗ್ಲಿಷಿನಲ್ಲಿ ಹಿಡಿತ ಸಾಧಿಸಲು ಪ್ರಯತ್ನಿಸುವ ವಿದ್ಯಾರ್ಥಿಗಳಿಗಷ್ಟೇ ಅಲ್ಲದೆ, ದೊಡ್ಡವರಿಗೂ ಈ ಆ್ಯಪ್ ಅನುಕೂಲ. ಇದನ್ನು ರೂಪಿಸಿದವರು ದೆಹಲಿಯ ಯುವಕ ವಿದಿತ್ ಭಾರ್ಗವ.
ಕಿಡ್ಡೋಪಿಯಾ
ತೀರಾ ಸಣ್ಣ ಮಕ್ಕಳಿಗೂ ಈಗ ಮೊಬೈಲ್ ವ್ಯಾಮೋಹ. 2ರಿಂದ 7 ವರ್ಷದ ಮಕ್ಕಳಿಗಾಗಿಯೇ ರೂಪಿಸಲಾದ ಆ್ಯಪ್ ಕಿಡ್ಡೋಪಿಯಾ (Kiddopia). ಸಂಖ್ಯೆ, ಆಕೃತಿ, ಹಣ್ಣು, ಪ್ರಾಣಿಗಳನ್ನು ಗುರುತಿಸುವುದು, ಭಾಷೆ ಕಲಿಯುವುದು ಮುಂತಾದವುಗಳನ್ನು ರಂಜನೀಯವಾಗಿಸಿ ಮಕ್ಕಳಿಗೆ ಮನ ಮುಟ್ಟುವಂತೆ ಬೋಧನೆಗೂ ಕಾರಣವಾಗುವ ಆ್ಯಪ್ ಇದು. ಈ ಮೇಡ್ ಇನ್ ಇಂಡಿಯಾ ಆ್ಯಪ್ ಈಗಾಗಲೇ ಜಾಗತಿಕವಾಗಿ 1.4 ಕೋಟಿ ಡೌನ್‌ಲೋಡ್ ಆಗಿದೆಯೆಂದರೆ ಅದರ ಜನಪ್ರಿಯತೆ ಎಷ್ಟೆಂಬುದು ತಿಳಿಯುತ್ತದೆ. ಕಲಿಕೆಗೆ ಪೂರಕವಾಗಿರುವ ಈ ಗೇಮ್ ರೀತಿಯಲ್ಲಿರುವ ಆ್ಯಪ್, ಕೇವಲ ಮಕ್ಕಳಿಗಷ್ಟೇ ಅಲ್ಲದೆ ಹಿರಿಯರಿಗೂ ಇಷ್ಟವಾಗುತ್ತದೆ. ಮುಂಬಯಿಯ ಅನ್ಷು ಧನುಕಾ ಹಾಗೂ ಅನುಪಮ್ ಧನುಕಾ ದಂಪತಿ ಈ ಆ್ಯಪ್ ರೂಪಿಸಿದವರು. ಮಕ್ಕಳಿಗೆ ಇಷ್ಟವಾಗುವ ಬಣ್ಣ, ವಿನ್ಯಾಸವೇ ಇದರ ವಿಶೇಷತೆ. ಇಂಗ್ಲಿಷ್ ಮಾತ್ರವಲ್ಲದೆ ಚೈನೀಸ್, ಜರ್ಮನ್ ಭಾಷೆಯಲ್ಲಿಯೂ ಇದು ಲಭ್ಯವಾಗಿದ್ದು, ಮುಂದೆ ಸ್ಪ್ಯಾನಿಶ್ ಭಾಷೆಯಲ್ಲಿ ಕೆಲಸ ನಡೆಯುತ್ತಿದೆ. ಇದರಲ್ಲಿ ಸಾವಿರಕ್ಕೂ ಹೆಚ್ಚು ಆಟ ಆಧಾರಿತ ಕಲಿಕಾ ಚಟುವಟಿಕೆಗಳಿವೆ.
ತೊದಲುವಿಕೆ ತಡೆಗೆ ಸ್ಟಾಮುರಾಯ್
ಸ್ವತಃ ತೊದಲುವಿಕೆ ಸಮಸ್ಯೆಯಿದ್ದ ಮೀತ್ ಹಾಗೂ ಅನ್ಷುಲ್ ಎಂಬಿಬ್ಬರು ಯುವಕರು ರೂಪಿಸಿದ ಸ್ಟಾಮುರಾಯ್ (Stamurai) ಎಂಬ ಆ್ಯಪ್, ಸ್ಪೀಚ್ ಥೆರಪಿಸ್ಟ್‌ಗಳ ನೆರವಿನಿಂದ ರೂಪುಗೊಂಡಿದೆ. ತೊದಲುವಿಕೆಯ ನಿವಾರಣೆಗೆ ಸಾಕಷ್ಟು ಅಭ್ಯಾಸಕ್ರಮಗಳು ಇಲ್ಲಿದ್ದು, ಇದನ್ನು ಬಳಸಿದವರು ತೊದಲುವಿಕೆಯಿಂದ ಮುಕ್ತರಾಗಿರುವ ಬಗ್ಗೆ ಖುಷಿಯಿಂದ ಬರೆದುಕೊಂಡಿದ್ದಾರೆ. ಅನ್ಷುಲ್ ಅವರ ತೊದಲುವಿಕೆಯೂ ನಿಯಂತ್ರಣಕ್ಕೆ ಬಂದಿದೆ. ಬಳಕೆದಾರರ ಸಮುದಾಯವೇ ಇದ್ದು, ಅವರೇ ಆ್ಯಪ್ ಮೂಲಕ ಸ್ವಸಹಾಯ ಗುಂಪುಗಳನ್ನು ಮಾಡಿಕೊಂಡು ಪರಸ್ಪರರಿಗೆ ಸಮಸ್ಯೆಯಿಂದ ಹೊರಬರುವುದಕ್ಕೆ ನೆರವಾಗುತ್ತಿದ್ದಾರೆ. ಅಲ್ಲದೆ, ವ್ಯಕ್ತಿಗತವಾಗಿ ಹೆಚ್ಚಿನ ಆರೈಕೆ ಬೇಕಾಗಿದ್ದರೆ, ಮಾತಿನ ತಜ್ಞರು ಆ್ಯಪ್ ಮೂಲಕವೇ ನೆರವಿಗೆ ಬರುತ್ತಾರೆ.
ಇದಲ್ಲದೆ ಬುದ್ಧಿಮತ್ತೆಯನ್ನು ಒರೆಗೆ ಹಚ್ಚುವ, ಬುದ್ಧಿಯನ್ನು, ಚುರುಕುತನವನ್ನು ಹರಿತಗೊಳಿಸಬಲ್ಲ ಪ್ಲೇಬೇ (Playbae) ಎಂಬ ಗೇಮಿಂಗ್ ಆ್ಯಪ್ ಕೂಡ ಇದೆ. ಇದನ್ನೂ ಭಾರತದವರೇ ಆದ ನಕುಲ್ ವರ್ಮಾ ಎಂಬವರು ರೂಪಿಸಿದ್ದಾರೆ. ಈ ಗೇಮ್ ರೂಪಿಸಲು ಅವರಿಗೆ ಪ್ರೇರಣೆ ನೀಡಿದ್ದು ನೆರಳು. ನೆರಳಿನ ಚಲನೆಯನ್ನು ನಿಯಂತ್ರಿಸುವ ಮೂಲಕ ಆಡುವ ಆಟವಿದು. ಇದು ಆ್ಯಪಲ್‌ನ ಗೇಮ್ ಆಫ್ ದಿ ಡೇ ಎಂಬ ಸರಣಿಯಲ್ಲೂ ಕಾಣಿಸಿಕೊಂಡಿದೆ.
ಗ್ಲುಕೋಸ್ ಪ್ರಮಾಣ ಅಳೆಯಲು ಅಲ್ಟ್ರಾಹ್ಯೂಮನ್
ಅಲ್ಟ್ರಾಹ್ಯೂಮನ್ ಎಂಬ, ದೇಹಕ್ಕೆ ಅಳವಡಿಸಬಹುದಾದ ಒಂದು ಸಾಧನವನ್ನು ಆ್ಯಪ್ ಮೂಲಕ ಐಫೋನ್‌ಗಳಿಗೆ ಸಂಪರ್ಕಿಸಿದರೆ, ಅದು ನಾವು ಸೇವಿಸಿದ ಆಹಾರದಿಂದಾಗಿ ರಕ್ತದ ಗ್ಲುಕೋಸ್ ಪ್ರಮಾಣ ಎಷ್ಟರ ಮಟ್ಟಿಗೆ ಹೆಚ್ಚಾಯಿತು ಎಂದು ಆ ಕ್ಷಣದಲ್ಲಿಯೇ ತಿಳಿಸುತ್ತದೆ. ಈ ಮೂಲಕ, ಜೀವನಶೈಲಿ ಅಥವಾ ಆಹಾರ ಕ್ರಮದಿಂದಾಗಿಯೇ ಬರುವ ಡಯಾಬಿಟಿಸ್‌ನಂತಹ ಕಾಯಿಲೆಗಳನ್ನು ದೂರವಿಡಲು ಇದು ನೆರವಾಗುತ್ತದೆ. ಇದನ್ನು ರೂಪಿಸಿದವರು ಕೂಡ ಭಾರತೀಯರೇ ಆಗಿರುವ ಮೋಹಿತ್ ಕುಮಾರ್ ಮತ್ತು ವತ್ಸಲ್ ಸಿಂಘಲ್.
ರಿಯಲ್ ಟೈಮ್ ಬಯೋಮಾರ್ಕರ್ ಬಳಸಿ ರಕ್ತದ ಸಕ್ಕರೆ ಪ್ರಮಾಣವನ್ನು ಅಳೆಯುವುದರ ಮೂಲಕ, ಆ ಆಹಾರವನ್ನು ನಿರ್ದಿಷ್ಟ ಸಮಯದಲ್ಲಿ ತಿನ್ನಬಾರದು, ಯಾವುದನ್ನು ಯಾವಾಗ ತಿನ್ನಬೇಕು ಎಂಬುದರ ಬಗ್ಗೆ, ಸಕ್ಕರೆ ಪ್ರಮಾಣ ಕಡಿಮೆ ಮಾಡಿಕೊಳ್ಳಲು ಎಷ್ಟು ವರ್ಕೌಟ್ ಮಾಡಬೇಕು ಎಂದೆಲ್ಲ ನಿಗಾ ಇರಿಸಿಕೊಳ್ಳುವುದು ಸುಲಭವಾಗುತ್ತದೆ. ಇದರಲ್ಲೇ, ವ್ಯಾಯಾಮಕ್ಕೆ, ಧ್ಯಾನಕ್ಕೆ ಮತ್ತು ನಿದ್ರೆಗೆ ಪ್ರಚೋದಿಸುವ ಸೆಶನ್‌ಗಳು ಅಡಕವಾಗಿದ್ದು, ಈ ಒತ್ತಡದ ಯುಗದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಅತ್ಯಂತ ಸೂಕ್ತವಿದು. ಮೂಲತಃ ಇದನ್ನು ಕ್ರೀಡಾಳುಗಳಿಗಾಗಿ ರೂಪಿಸಲಾಗಿದ್ದರೂ, ಇದೀಗ ಜಾಗತಿಕವಾಗಿ ಆರೋಗ್ಯದ ಆ್ಯಪ್ ಆಗಿ ಗಮನ ಸೆಳೆಯುತ್ತಿದ್ದು, ಅಥ್ಲೀಟ್‌ಗಳು, ಶ್ರೇಯಸ್ ಅಯ್ಯರ್ ಮುಂತಾದ ಕ್ರಿಕೆಟಿಗರೂ ಇದನ್ನು ಧರಿಸಿದ್ದಾರೆ.
ಈ ಆ್ಯಪ್‌ಗಳನ್ನು ರೂಪಿಸಿದ ಡೆವಲಪರ್‌ಗಳೆಲ್ಲರಿಗೂ ಆ್ಯಪಲ್ ಸಂಪೂರ್ಣ ಬೆಂಬಲ ನೀಡಿದ್ದು, ಇವರ ನವೀನತೆಯ ಕಾರ್ಯಗಳಿಗೆ ನೆರವು ನೀಡಿ ಪೋಷಿಸುತ್ತಿದೆ.
My Tech Article Published in Prajavani online on 28 May 2022
ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.