ಈ ದೇಶದ ದುರಂತ ನೋಡಿ. ಕಳೆದ 35 ವರ್ಷಗಳಿಂದ ಮನೆ ಮಠ ತೊರೆದು, ಯಾವುದೇ ಅಧಿಕಾರ ದಾಹವಿಲ್ಲದೆ, ನಿಸ್ವಾರ್ಥವಾಗಿ ಜನರ ಪರವಾಗಿ ಹೋರಾಟ ಮಾಡುತ್ತಿರುವ ಗಾಂಧಿವಾದಿ, ಹಣ್ಣು ಹಣ್ಣು ಮುದುಕರೊಬ್ಬರು, ಭ್ರಷ್ಟಾಚಾರದ ವಿರುದ್ಧ ಧ್ವನಿಯೆತ್ತಿ, ನ್ಯಾಯ ಬೇಕು ಎಂದು ಗಾಂಧಿ ಹಾಕಿಕೊಟ್ಟ ಅಹಿಂಸಾ ಮಾರ್ಗ – ಉಪವಾಸ ಮಾಡುತ್ತೇನೆಂದು ಕೂತರೆ, ನಮ್ಮನ್ನು ಆಳುವ ಮಹಾನ್ ನಾಯಕರು ಅಂಥವರ ಹಿಂದೆ ಆರೆಸ್ಸೆಸ್ ಕೈವಾಡ, ಸಂಘ ಪರಿವಾರದ ಸಂಚು ಇದೆ, ದೇಶವನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದೆಲ್ಲಾ ಬಾಯಿಗೆ ಬಂದಂತೆ ಹೇಳುತ್ತಿದ್ದಾರೆ!
ಮಹಾರಾಷ್ಟ್ರದಲ್ಲಿ ಆಳುತ್ತಿದ್ದ ಸರಕಾರಗಳನ್ನೆಲ್ಲಾ ಗಡಗಡ ನಡುಗಿಸಿದ್ದ, ಇದೇ ಕೇಂದ್ರ ಕೃಷಿ ಮಂತ್ರಿ ಶರದ್ ಪವಾರ್ ಮುಖ್ಯಮಂತ್ರಿಯಾಗಿದ್ದಾಗಿನಿಂದಲೂ ಸರಕಾರಿ ಮಟ್ಟದ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಾ ಹೆಸರು ಮಾಡಿದವರು ಅಣ್ಣಾ ಹಜಾರೆ. ಇದೀಗ 3 ದಶಕಗಳಿಂದ ಭ್ರಷ್ಟಾಚಾರ ಆರೋಪಗಳನ್ನು ಎದುರಿಸುತ್ತಲೇ ಕೇಂದ್ರದಲ್ಲಿ ದೊಡ್ಡ ದೊಡ್ಡ, ಪ್ರಭಾವೀ ಮಂತ್ರಿ ಪಟ್ಟ ಗಿಟ್ಟಿಸಿಕೊಂಡಿದ್ದಾರೆ ಶರದ್ ಪವಾರ್. ಆದರೋ, ಅಣ್ಣಾ ಹಜಾರೆಯಂತೂ ಭ್ರಷ್ಟಾಚಾರ ವಿರುದ್ಧ ಇನ್ನೂ ಹೋರಾಡುತ್ತಲೇ ಇದ್ದಾರೆ! ಇದು ವಿಪರ್ಯಾಸ.
ಓದಿದ್ದು 7ನೇ ಕ್ಲಾಸು, ಸೇನೆಯಲ್ಲಿ ಚಾಲಕ…
1940ರ ಜನವರಿ 15ರಂದು ಬಡ ಕುಟುಂಬದಲ್ಲಿ ಜನಿಸಿದ ಹಜಾರೆ ಓದನ್ನು ಕೇವಲ 7ನೇ ತರಗತಿಗೇ ನಿಲ್ಲಿಸಬೇಕಾಗಿತ್ತು. ಆದರೂ, ಭಾರತೀಯ ಸೇನೆಯನ್ನು ಸೇರಿ, ಚಾಲಕನಾಗಿ ಕಾಲ ಕಳೆದಿದ್ದ ಅವರಿಗೆ ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧಿ ಮತ್ತು ಆಚಾರ್ಯ ವಿನೋಬಾ ಭಾವೆ ಆದರ್ಶ.ಇಂಡೋ-ಪಾಕ್ ಯುದ್ಧದಲ್ಲಿ ತಂಡದ ಮೇಲೆ ದಾಳಿ ನಡೆದಾಗ ಅಲ್ಲಿ ಬದುಕುಳಿದ ಶಿಸ್ತಿನ ಸಿಪಾಯಿ ಅವರು. ಅಂದಿನ ಈ ದುರಂತವು ಅವರ ಜೀವನದ ಚರ್ಯೆಯನ್ನೇ ಬದಲಿಸಿತು. ಸೇನೆಯಿಂದ ಸ್ವಯಂ ನಿವೃತ್ತಿ ಪಡೆದು ಜನರ ಜೀವನದ ಬಗೆಗೆ .ಯೋಚಿಸತೊಡಗಿದರು ಅವರು.
ಖಾದಿ ಬಟ್ಟೆ ಮಾತ್ರವೇ ಧರಿಸುತ್ತಿರುವ ಅವರಿಗೆ ಕುಟುಂಬವಾಗಲೀ, ಆಸ್ತಿಪಾಸ್ತಿಯಾಗಲೀ ಏನೂ ಇಲ್ಲ. ರಾಲೆಗಣ ಸಿದ್ಧಿಯ ಯಾದವಬಾಬಾ ಮಂದಿರವನ್ನು ಆತುಕೊಂಡಿರುವ 100 ಚದರಡಿಯ ಒಂದು ಪುಟ್ಟ ಕೊಠಡಿಯಲ್ಲಿ ಅವರ ವಾಸ. ಅವರಿಗೆ ಇಬ್ಬರು ವಿವಾಹಿತ ಸಹೋದರಿಯರಿದ್ದಾರೆ. ಅವರ ತಾಯಿ 2002ರಲ್ಲಿ ತೀರಿಕೊಂಡಿದ್ದರು. ಆದರೆ ರಾಲೆಗಣ ಸಿದ್ಧಿಯ ತಮ್ಮ ಕೌಟುಂಬಿಕ ಮನೆಗೆ ಅವರು ಯಾವತ್ತೂ ಕಳೆದ 35 ವರ್ಷಗಳಿಂದ ಭೇಟಿ ಕೊಟ್ಟಿಲ್ಲ, ಸಹೋದರಿಯರನ್ನೂ ಭೇಟಿಯಾಗಿಲ್ಲ. ತಮ್ಮನ್ನು ಭೇಟಿಯಾದವರಲ್ಲಿ ಐದೋ ಹತ್ತೋ ರೂಪಾಯಿ ಕೊಡಿ ಎನ್ನುತ್ತಾ ಜೀವನ ಸಾಗಿಸುತ್ತಿದ್ದಾರೆ.
ಮಾಹಿತಿ ಹಕ್ಕು ಕಾಯಿದೆಯ ರೂವಾರಿ…
2000 ದಶಕದ ಆದಿಭಾಗದಲ್ಲಿ, ಹಿಂದಿನ ದುರ್ಬಲ ಮಾಹಿತಿ ಹಕ್ಕು ಕಾಯ್ದೆಯನ್ನು ರದ್ದುಪಡಿಸಿ, ಮತ್ತಷ್ಟು ಬಲಯುತವಾದ ಕಾಯಿದೆಯನ್ನು ಮಹಾರಾಷ್ಟ್ರ ಸರಕಾರವು ಜಾರಿಗೆ ತರುವಂತೆ ಮಾಡುವಲ್ಲಿ ಅಣ್ಣಾ ಹಜಾರೆಯವರ ಹೋರಾಟವೇ ಪ್ರಧಾನ ಪಾತ್ರ ವಹಿಸಿತ್ತು. ಇಂದು ಇದೇ ಮಾಹಿತಿ ಹಕ್ಕು ಕಾಯ್ದೆಯನ್ನು (ಆರ್‌ಟಿಐ) ಕೇಂದ್ರೀಯ ಮಟ್ಟದಲ್ಲಿಯೂ ಜಾರಿಗೊಳಿಸಲಾಗಿ, ಹಲವಾರು ಹಗರಣಗಳು ಹೊರಬರಲು ಕಾರಣವಾಗುತ್ತಿರುವುದು ಸುಳ್ಳೇನಲ್ಲ.
ಗ್ರಾಮವನ್ನು ಬೆಳಗಿದ ‘ಪದ್ಮಭೂಷಣ’…
ಮಹಾರಾಷ್ಟ್ರ ಅಹಮದ್‌ನಗರ ಜಿಲ್ಲೆಯ ರಾಲೆಗಣ ಸಿದ್ಧಿ ಎಂಬ ಗ್ರಾಮವನ್ನು ಮದ್ಯ ಮುಕ್ತವಾಗಿ, ಶ್ರಮದಾನದ ಮೂಲಕ ಜನರನ್ನು ಸೇರಿಸಿಕೊಂಡು ಕಾಲುವೆಗಳು, ಸಣ್ಣ ಪುಟ್ಟ ನಾಲೆಗಳು, ನೀರಿನ ಟ್ಯಾಂಕುಗಳು ಮತ್ತು ಶಾಲೆ ಮುಂತಾದವನ್ನು ನಿರ್ಮಿಸಿ, ಅತ್ಯಂತ ಸಮೃದ್ಧವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಿಸಾನ್ ಬಾಪಟ್ ಬಾಬುರಾವ್ ಹಜಾರೆಯವರ ಕೊಡುಗೆ ಪರಿಗಣಿಸಿ ಕೇಂದ್ರ ಸರಕಾರವು ಇದೇ ಹಜಾರೆಗೆ ಪದ್ಮಭೂಷಣ ಪುರಸ್ಕಾರ ನೀಡಿ ಗೌರವಿಸಿತ್ತು.
ಅವರಿಗೆ ಪದ್ಮಭೂಷಣ, 1990ರಲ್ಲಿ ಪದ್ಮಶ್ರೀ, 1986ರಲ್ಲಿ ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ (ಸ್ವತಃ ರಾಜೀವ್ ಗಾಂಧಿ ಕೈಯಿಂದ), ವಿಶ್ವ ಬ್ಯಾಂಕ್ ಪ್ರಶಸ್ತಿ ಮುಂತಾದವುಗಳೆಲ್ಲವೂ ಸಂದಿವೆ.
ಪವರ್‌ಫುಲ್ ಪವಾರ್ ಬೆನ್ನುಬಿದ್ದರು ಹಜಾರೆ…
ಹಾಗಂತ, ಮಹಾರಾಷ್ಟ್ರದ ಬಲಾಢ್ಯ ರಾಜಕಾರಣಿ ಶರದ್ ಪವಾರ್ ಅವರಿಗೆ ಹಜಾರೆ ಕಂಟಕವಾಗುತ್ತಿರುವುದು ಇದೇ ಮೊದಲಲ್ಲ. 1990ರಿಂದಲೂ, ಅಂದು ಕಾಂಗ್ರೆಸ್‌ನಲ್ಲಿದ್ದ ಶರದ್ ಪವಾರ್ ಅವರು ಅಲ್ಪ ಅಂತರದಿಂದ ಅಧಿಕಾರಕ್ಕೆ ಮರಳಿದಾಗ, ಮೊತ್ತ ಮೊದಲು ರಾಜ್ಯದ ಅರಣ್ಯ ಇಲಾಖೆಯ ಭ್ರಷ್ಟಾಚಾರ ವಿರುದ್ಧ ಹೋರಾಟ ಆರಂಭಿಸಿದ್ದರು. ಆರಂಭದಲ್ಲಿ ಪವಾರ್ ನೇರ ಗುರಿಯಾಗಿರಲಿಲ್ಲ. 1993ರಲ್ಲಿ ಪವಾರ್ ಅಧಿಕಾರಕ್ಕೆ ಮರಳಿದಾಗ ಹಜಾರೆ ಭ್ರಷ್ಟಾಚಾರ ವಿರುದ್ಧ ಅವರ ಮೇಲೆ ನೇರ ದಾಳಿ ಪ್ರಾರಂಭಿಸಿಬಿಟ್ಟಿದ್ದರು. ಖೈರ್ನಾರ್ ಎಂಬ ಹೆಸರು ನಿಮಗೆ ನೆನಪಿರಬಹುದು. ಅದೇ ಸಂದರ್ಭದಲ್ಲಿ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿ ಜಿ.ಆರ್.ಖೈರ್ನಾರ್ ಕೂಡ, ಭೂಗತ ಲೋಕದೊಂದಿಗೆ ಪವಾರ್‌ಗೆ ಇರುವ ಸಂಪರ್ಕಗಳ ಕುರಿತು ಸಮರ ಆರಂಭಿಸಿದ್ದರು. ಎನ್ರಾನ್ ವಿದ್ಯುತ್ ಯೋಜನೆ ಕುರಿತಾಗಿ ಬಿಜೆಪಿ-ಶಿವಸೇನೆ ಪಕ್ಷಗಳು ಕೂಡ ಹೋರಾಟ ಆರಂಭಿಸಿದ್ದವು.
ಈ ಹೋರಾಟಗಳು ಪವಾರ್ ಮುಂದಿನ ಬಾರಿ 1995ರಲ್ಲಿ ಅಧಿಕಾರ ಕಳೆದುಕೊಳ್ಳಲು ಕಾರಣವಾಗಿತ್ತು. ನಂತರ ಬಿಜೆಪಿ-ಶಿವಸೇನೆ ಅಧಿಕಾರಕ್ಕೆ ಬಂತು. ಆದರೆ ಆ ಸರಕಾರವೂ ಹಜಾರೆ ದಾಳಿಯಿಂದ ಹೊರತಾಗಿರಲಿಲ್ಲ. ಹಾಗಂತ ಇದೀಗ ಕಾಂಗ್ರೆಸ್ ಆರೋಪಿಸುತ್ತಿರುವಂತೆ ಹಜಾರೆ ಉಪವಾಸದ ಹಿಂದೆ ಬಿಜೆಪಿ-ಸಂಘ ಪರಿವಾರದ ಕೈವಾಡವಿದೆಯೇ? ಇಲ್ಲ ಎನ್ನುತ್ತಾರೆ ಹಜಾರೆ. ಹೋರಾಟದ ಹಾದಿಯಲ್ಲಿ ಸಾಗಿದ್ದ ಹಜಾರೆ ವಿರುದ್ಧ 1998ರಲ್ಲಿ ಮಹಾರಾಷ್ಟ್ರದಲ್ಲಿ ಆಡಳಿತದಲ್ಲಿದ್ದ ಬಿಜೆಪಿ-ಶಿವಸೇನೆ ಸರಕಾರವು ಮಾನನಷ್ಟ ಮೊಕದ್ದಮೆ ಹೂಡಿ ಬಂಧಿಸಿತ್ತು ಎಂಬುದನ್ನೂ ಇಲ್ಲಿ ಉಲ್ಲೇಖಿಸಬೇಕು. ಸಮಾಜ ಕಲ್ಯಾಣ ಸಚಿವ ಬಬನ್ ಘೋಲಪ್ ಈ ಮಾನನಷ್ಟ ಕೇಸು ದಾಖಲಿಸಿದ್ದರು. ಸಾಕ್ಷ್ಯಾಧಾರ ದೊರೆಯದೆ ಕೇಸು ಬಿದ್ದು ಹೋಯಿತು, ಘೋಲಪ್ ಅವರಿಗೇ ಮೂರು ತಿಂಗಳು ಜೈಲು ಶಿಕ್ಷೆ ದೊರೆಯಿತು.
ಭ್ರಷ್ಟಾಚಾರ ಆರೋಪದಿಂದಾಗಿ ಇಬ್ಬರು ಸಚಿವರನ್ನು ಕೈಬಿಡಬೇಕಾಗಿ ಬಂದಿತು. ಆದರೆ ತನಿಖಾ ಆಯೋಗ ರಚಿಸಿತಾದರೂ, ಅದಕ್ಕೆ ಹಜಾರೆ ಸೂಚಿಸಿದವರನ್ನು ನೇಮಿಸಲಿಲ್ಲ ಬಿಜೆಪಿ-ಶಿವಸೇನೆ ಸರಕಾರ. ಕೊನೆಗೆ ಈ ಆಯೋಗವು ಸಚಿವರನ್ನು ದೋಷಮುಕ್ತಗೊಳಿಸಿತ್ತು.
ಜೈಲಿಗಟ್ಟಿದರೂ ಜನ ಬೆಂಬಲದಿಂದ ಹೊರಬಂದರು…
1999ರಲ್ಲಿ ಎನ್‌ಸಿಪಿ-ಕಾಂಗ್ರೆಸ್ ಮೈತ್ರಿಕೂಟದಡಿ ಪವಾರ್ ಮತ್ತೆ ಅಧಿಕಾರಕ್ಕೆ ಬಂದಾಗ ಹಜಾರೆ ಅವರ ಬೆನ್ನು ಬಿಡಲಿಲ್ಲ. ಮೂರು ಮಂದಿ ಎನ್‌ಸಿಪಿ ಸಚಿವರ ವಿರುದ್ಧ ತಮ್ಮ ಭ್ರಷ್ಟಾಚಾರದ ಅಸ್ತ್ರವನ್ನು ಪ್ರಯೋಗಿಸಿ, ಸರಕಾರವನ್ನು ನಡುಗಿಸಿದ್ದರು. ಮುಖ್ಯವಾಗಿ ಸರಕಾರಿ ಅಧಿಕಾರಿಗಳ ವರ್ಗಾವಣೆಯಲ್ಲಿನ ಅವ್ಯವಹಾರವಿದು. ಕೊನೆಗೆ ಸುರೇಶ್ ಜೈನ್, ನವಾಬ್ ಮಲಿಕ್ ಮತ್ತು ವಿಜಯ್ ಗವಿಟ್ ಎಂಬ ಮೂವರು ಸಚಿವರು ಪದತ್ಯಾಗ ಮಾಡಬೇಕಾಯಿತು. ಉಪವಾಸ ಸತ್ಯಾಗ್ರಹದಿಂದಾಗಿ ಸರಕಾರವು ವರ್ಗಾವಣೆಗೆ ಹೊಸ ನೀತಿಯೊಂದನ್ನು ಜಾರಿಗೊಳಿಸಬೇಕಾಯಿತು. ಆದರೆ, ಸೇಡು ತೀರಿಸಿಕೊಂಡ ಸರಕಾರ, ಹಜಾರೆ ಅವರು ನಡೆಸುತ್ತಿರುವ ಟ್ರಸ್ಟ್‌ನಲ್ಲೇ ಅವ್ಯವಹಾರ ನಡೆದಿದೆ ಎಂದು ಕೇಸು ಜಡಿಯಿತು. ಹಜಾರೆ ಜೈಲಿಗೂ ಹೋದರು. ಆದರೆ ಜನರ ಒತ್ತಡ ತೀವ್ರವಾದ ಹಿನ್ನೆಲೆಯಲ್ಲಿ ಸರಕಾರವು ಯಾವುದೇ ಷರತ್ತು ಒಡ್ಡದೆ ಅವರನ್ನು ಬಿಡುಗಡೆಗೊಳಿಸಬೇಕಾಯಿತು.
ಇಂಥ ಸನ್ಯಾಸಿಯಂತಹಾ ಜೀವನ ನಡೆಸುತ್ತಿರುವ, ಭ್ರಷ್ಟಾಚಾರ-ವಿರೋಧಿ ಹೋರಾಟ ಎಂದಾಕ್ಷಣೆ ಕಣ್ಣಮುಂದೆ ನೆನಪಾಗುವ ಅಣ್ಣಾ ಹಜಾರೆ ಪ್ರತಿಭಟನೆಗೆ ಇಳಿದರೆಂದರೆ ರಾಜಕಾರಣಿಗಳು ಬೆಚ್ಚಿ ಬೀಳುತ್ತಾರೆ. ದೇಶಾದ್ಯಂತ ಜನಾಂದೋಲನ ಸೃಷ್ಟಿಸಿ ಸರಕಾರವನ್ನು ನಡುಗಿಸುವ ಶಕ್ತಿ ಇರುವ ಏಕೈಕ ವ್ಯಕ್ತಿ ಎಂಬುದನ್ನು ಎಲ್ಲ ರಾಜಕಾರಣಿಗಳೂ ಪಕ್ಷಭೇದವಿಲ್ಲದೆ ಒಪ್ಪಿಕೊಳ್ಳುತ್ತಾರೆ.
ಈಗ ಲೋಕಪಾಲ ಮಸೂದೆಯ ಹೋರಾಟದಲ್ಲಿ ಜಯ ಗಳಿಸದೆ, ಮಹಾರಾಷ್ಟ್ರಕ್ಕೆ ಮರಳುವುದಿಲ್ಲ ಎಂದು ಪಣ ತೊಟ್ಟಿದ್ದಾರೆ ಹಜಾರೆ. ‘ನನಗಾಗಿ ರೋದಿಸಲು ನನಗೆ ಯಾವುದೇ ಕುಟುಂಬ ಇಲ್ಲ. ಹೀಗಾಗಿ ಸಾವಿಗೆ ಹೆದರುವುದಿಲ್ಲ. ನನ್ನ ಹತ್ಯೆಗೆ ಮಹಾರಾಷ್ಟ್ರದಲ್ಲಿ ಹಿಂದೊಮ್ಮೆ 35 ಲಕ್ಷ ರೂಪಾಯಿ ಸುಪಾರಿ ಕೊಟ್ಟಿದ್ದರು. ಈಗಿನ ಈ ಯುವ ಜನಾಂಗದವರು ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಬೆಂಬಲ ದೊರೆಯುತ್ತಿರುವುದು ನನಗೆ ತುಂಬಾ ಸಂತೋಷ ತಂದಿದೆ. ಬನ್ನಿ, ಗುರಿ ಮುಟ್ಟುವವರೆಗೆ ಹೋರಾಡೋಣ’ ಎಂದಿದ್ದಾರೆ ಅಣ್ಣಾ ಹಜಾರೆ. ಟ್ವಿಟ್ಟರ್, ಫೇಸ್‌ಬುಕ್ ಮುಂತಾಗಿ ಆನ್‌ಲೈನ್ ಮಾಧ್ಯಮಗಳಲ್ಲಿಯೂ ಅಣ್ಣಾ ಹಜಾರೆಗೆ ಬೆಂಬಲ ಹೆಚ್ಚುತ್ತಿದೆ. ಸುದ್ದಿ ಚಾನೆಲ್‌ಗಳೆಲ್ಲವೂ ಅಭೂತಪೂರ್ವವಾಗಿ ಬೆಂಬಲಕ್ಕೆ ನಿಂತಿವೆ. ಎಲ್ಲೆಲ್ಲಿಂದಲೂ ಅಣ್ಣಾ ಹಜಾರೆಗೆ ಬೆಂಬಲ ವ್ಯಕ್ತವಾಗುತ್ತಿದೆ. ಜನಾಂದೋಲನವೊಂದು ರೂಪುಗೊಳ್ಳುತ್ತಿದೆ. ಇಂಧದ್ದೊಂದು ಜನಾಂದೋಲನ ಭ್ರಷ್ಟಾಚಾರದಲ್ಲಿ ಮುಳುಗಿ ದೇಶದ, ಜನರ ಅಭಿವೃದ್ಧಿ ಮರೆತ ಸರಕಾರಗಳಿಗೆ ಖಂಡಿತವಾಗಿಯೂ ಕಂಟಕಪ್ರಾಯವಾಗಲಿದೆ. ಈಜಿಪ್ಟ್, ಟ್ಯುನಿಷಿಯಾ, ಸಿರಿಯಾ, ಲಿಬಿಯಾ, ಯೆಮೆನ್, ಗಲ್ಫ್ ರಾಷ್ಟ್ರಗಳಲ್ಲಿ ಜನ ಆಳ್ವಿಕೆಯ ವಿರುದ್ಧ ರೊಚ್ಚಿಗೆದ್ದಿರುವ ದೃಶ್ಯಾವಳಿಗಳು ಕಣ್ಮುಂದೆ ಬರುತ್ತಿದೆ.
ಸ್ವಾತಂತ್ರ್ಯ ಬಂದು 62 ವರ್ಷಗಳಾದರೂ ಭ್ರಷ್ಟಾಚಾರವು ವರ್ಷದಿಂದ ವರ್ಷ ಪೆಡಂಭೂತವಾಗಿ ಬೆಳೆಯುತ್ತಿದೆ. ಸಣ್ಣ ಕೆಲಸವಾಗಬೇಕಿದ್ದರೂ ಲಂಚವಿಲ್ಲದೆ ಕೆಲಸವಾಗುವುದಿಲ್ಲ ಎಂಬ ಪರಿಸ್ಥಿತಿ ಹಲವೆಡೆ ನೋಡುತ್ತಿದ್ದೇವೆ. ಸರಕಾರಗಳು ಕಟ್ಟುನಿಟ್ಟಿನ ಕಾನೂನು ತರಲು ಹಿಂದೇಟು ಹಾಕುತ್ತಿದೆ. ಜನ ಲೋಕಪಾಲ ಮಸೂದೆಯಲ್ಲಿರುವಂತೆ, ಭ್ರಷ್ಟರ ಮೇಲೆ ನೇರವಾಗಿ ಕ್ರಮ ಕೈಗೊಳ್ಳಬಹುದಾಗಿರುವ ಕಾಯಿದೆ ನಮಗೆ ಬೇಕಿದೆ. ಈ ಕುರಿತಾಗಿನ ಅಣ್ಣಾ ಹಜಾರೆಯವರ ಈ ಅಹಿಂಸಾ ಹೋರಾಟವು ಸರಕಾರೀ ಮಟ್ಟದ ಭ್ರಷ್ಟಾಚಾರ ತೊಡೆಯುವಲ್ಲಿ ಪೂರಕವಾಗಲಿ ಎಂಬುದು ನಮ್ಮ ಆಸೆ. ನೀವೇನಂತೀರಿ?
[ವೆಬ್‌ದುನಿಯಾಕ್ಕಾಗಿ]
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು