ನಿಮಗಿದು ತಿಳಿದಿರಲಿ: Dark Web ಎಂಬ ಕಳ್ಳ ಕಿಂಡಿ

ತಂತ್ರಜ್ಞಾನ ಜಗತ್ತು ಆಧುನೀಕರಣಗೊಂಡಂತೆ ಪೈರಸಿ, ನಕಲು, ಡ್ರಗ್ಸ್, ಅಕ್ರಮ ದಂಧೆ, ಕಳ್ಳ ವ್ಯವಹಾರಗಳು, ಹವಾಲ… ಇವೆಲ್ಲವು ಕೂಡ ಆಧುನೀಕರಣಗೊಳ್ಳುತ್ತಿವೆ. ಇತ್ತೀಚೆಗೆ ಬಾಲಿವುಡ್‌ನಿಂದ ತೊಡಗಿ ನಮ್ಮ ಕನ್ನಡದ ಸ್ಯಾಂಡಲ್‌ವುಡ್ ತನಕ ವಿಸ್ತರಿಸಿಕೊಂಡಿರುವ ಮಾದಕ ದ್ರವ್ಯ ಜಾಲದ ಘಮಲು ರಾಜಕೀಯದತ್ತ ಹೊರಳುತ್ತಿದೆ. ಆದರೆ, ಇದರ ನಡುವೆ ಕೇಳಿಬರುತ್ತಿರುವ ಒಂದು ಪದ ಗುಚ್ಛ ಡಾರ್ಕ್ ವೆಬ್. ಏನಿದು? ಇದರ ಕುರಿತ ಚರ್ಚೆ ಈಗ ಯಾಕೆ ಮುನ್ನೆಲೆಗೆ ಬರುತ್ತಿದೆ?

ಡಾರ್ಕ್ ಎಂಬ ಪದದಲ್ಲೇ ಕತ್ತಲು ಇರುವುದರಿಂದ ಇದು ಅಂಥಾ ದಂಧೆಗಾಗಿಯೇ ಇರುವಂಥದ್ದು, ಕತ್ತಲಲ್ಲಿ ಏನು ಮಾಡಿದರೂ ಗೊತ್ತಾಗುವುದಿಲ್ಲ ಎಂಬುದೊಂದು ಸಾಮಾನ್ಯ ನಂಬಿಕೆ. ನೈಜ ಜೀವನದಲ್ಲಿ ನಡೆಯುವಂತಹಾ ‘ಕತ್ತಲಿನ’ ವ್ಯವಹಾರಗಳು ಆನ್‌ಲೈನ್‌ನಲ್ಲಿ ನಡೆಯಲು ವೇದಿಕೆ ಕಲ್ಪಿಸಿಕೊಡುವುದೇ ಈ ಡಾರ್ಕ್ ವೆಬ್. ಇದು ಸ್ಥೂಲ ಪರಿಚಯ. ಆದರೆ, ಇದಕ್ಕೆ ಹೇಗೆ ಹೋಗುವುದು, ಇದರಲ್ಲಿ ಸಕ್ರಿಯವಾಗುವುದು ಹೇಗೆ ಎಂಬ ‘ಅಡ್ಡ ದಾರಿ ಹಿಡಿಯುವ’ ಮಾಹಿತಿಯನ್ನು ಇಲ್ಲಿ ಹೊರಗೆಡಹುವುದಿಲ್ಲ. ಆದರೆ, ಏನೆಲ್ಲಾ ನಡೀತಿದೆ ಎಂಬುದನ್ನಷ್ಟೇ ಹೇಳುವ ಮೂಲಕ ಈ ಕತ್ತಲ ಜಾಲ ಕೂಪದ ಅಪಾಯಗಳ ಬಗ್ಗೆ ಬೆಳಕು ಚೆಲ್ಲುವುದು ಈ ಲೇಖನದ ಉದ್ದೇಶ.

ಭೌತಿಕ ಜಗತ್ತಿನ ಕತ್ತಲಿನ ತಾಣವು ಆನ್‌ಲೈನ್‌ಗೆ ಬಂದಾಗ ಡಾರ್ಕ್ ವೆಬ್ ಆಗುತ್ತದೆ. ನಮಗೆ-ನಿಮಗೆ ತಿಳಿದಂತೆ ಇಂಟರ್ನೆಟ್ ಎಂಬುದು ಅಗಾಧ ಮಾಹಿತಿಯ ಆಗರವೂ; ಒಳ್ಳೆಯದಷ್ಟೇ ಅಲ್ಲದೆ, ಹೆಚ್ಚಾಗಿ ಅಕ್ರಮ ಕೂಟಗಳ ಸಾಗರವೂ ಆಗಿದೆ ಎಂಬುದನ್ನು ನಾವು ಹೆಚ್ಚು ಆಸ್ಥೆಯಿಂದ ಗಮನಿಸಬೇಕು. ಗೂಗಲ್, ಅಮೆಜಾನ್, ವಿಕಿಪೀಡಿಯ, ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್, ಟೈಮ್ಸ್ ಮೊದಲಾದ ಸುದ್ದಿ ತಾಣಗಳು, ಮಾಹಿತಿ ಕೋಶಗಳು – ಇವೆಲ್ಲ ಹೊರಜಗತ್ತಿಗೆ ಕಾಣಬಲ್ಲ, ಜ್ಞಾನವನ್ನು ಪಸರಿಸಬಲ್ಲ ವೈಟ್ ವೆಬ್ ಲೋಕ ಅಂತ ಕರೆಯಬಹುದು. ಆದರೆ, ಇಡೀ ಇಂಟರ್ನೆಟ್ ಜಗತ್ತಿನಲ್ಲಿ ಈ ಸುಜ್ಞಾನಕೋಶಗಳ ಪಾಲು ಇರುವುದು ಕೇವಲ ಬೆರಳೆಣಿಕೆಯ ಪರ್ಸೆಂಟೇಜ್ ಮಾತ್ರ. ಉಳಿದದ್ದೆಲ್ಲವೂ ಅನಾಮಧೇಯವಾಗಿ ಮಾಹಿತಿ ನೀಡುವ ಡಾರ್ಕ್ ವೆಬ್ ಸಾಮ್ರಾಜ್ಯಕ್ಕೆ ಸೇರಿದೆ ಎಂದರೆ ಅಚ್ಚರಿಪಡಲೇಬೇಕು, ಆದರೆ ಇದು ನಿಜ.

ತಪ್ಪು ಮಾಹಿತಿಯ ಸಾಗರವೂ ಇಂಟರ್ನೆಟ್ಟಲ್ಲಿ ಬಹಿರಂಗವಾಗಿ ಸಿಗುತ್ತದೆ ಎಂಬುದಕ್ಕೆ ಬಹುಶಃ ವಿವರಣೆಯೇ ಬೇಕಿಲ್ಲ ಅನಿಸುತ್ತದೆ. ಆದರೂ ಸಿಂಪಲ್ಲಾಗಿ ಹೇಳುವುದಿದ್ದರೆ, ಯಾರೋ ಏನೋ ಲಿಂಕ್ ಕಳುಹಿಸುತ್ತಾರೆ, ನಾಲ್ಕೇ ದಿನಗಳಲ್ಲಿ ತೂಕ ಕಳೆದುಕೊಳ್ಳಿ ಎಂದೋ, ನೀವು ಇದನ್ನು ಮಾಡಿದರೆ ಒಂದೇ ವಾರದಲ್ಲಿ ಡಯಾಬಿಟಿಸ್‌ನಿಂದ ಮುಕ್ತರಾಗುವಿರೆಂದೋ… ಈ ರೀತಿಯಾಗಿ, ಜನರ ಸಾಮಾನ್ಯ ಸಮಸ್ಯೆಗಳನ್ನೆಲ್ಲ ತನ್ನ ತಲೆಯ ಮೇಲೆ ಹಾಕಿಕೊಂಡ ಸಂದೇಶವೊಂದು ನಿಮಗೆ ವಾಟ್ಸ್ಆ್ಯಪ್ಪೋ, ಫೇಸುಬುಕ್ಕೋ, ಟ್ವಿಟರೋ – ಅಂತೂ ಯಾವುದೋ ತಾಣದ ಮೂಲಕ ತಲುಪುತ್ತದೆ. ನೀವೇನು ಮಾಡುತ್ತೀರಿ? ಹೌದು, ನನಗೂ ಇದೆಯಲ್ಲಾ, ಅಥವಾ ನನ್ನ ಆಪ್ತೇಷ್ಟರಿಗೂ ಇರುತ್ತದೆಯಲ್ಲಾ… ಅವರಿಗೂ ನೆರವಾಗಲಿ ಅಂತ ಯೋಚಿಸದೇ ಫಾರ್ವರ್ಡ್ ಮಾಡುತ್ತೀರಿ. ಅದು ಅಲ್ಲಿಂದ ಮತ್ತೊಂದು ಗ್ರೂಪಿನ ಮೂಲಕ ನೂರಾರು ಜನರಿಗೆ ಹೋಗುತ್ತದೆ. ಇದು ಅಕ್ರಮ ಅಥವಾ ತಪ್ಪು ಮಾಹಿತಿಯು ಹರಡುವ ವಿಧಾನ. ನೀವೇನೋ ಒಳ್ಳೆಯದೆಂದು ಹಂಚಿಕೊಂಡರೆ, ಅದು ಕೆಟ್ಟದಾಗುವುದು ಹೇಗೆ? ಎಂಬುದು ಅಚ್ಚರಿಯೇ? ಇಂಟರ್ನೆಟ್‌ನಲ್ಲಿ ಹರಿದಾಡುವ ಬಹುತೇಕ ಮಾಹಿತಿಗಳನ್ನು ವಿದ್ಯಾವಂತರೇ ಕೆಡಿಸಿಬಿಟ್ಟಿದ್ದಾರೆ. ಗೂಗಲ್‌ನಲ್ಲಿ ಸರ್ಚ್ ಮಾಡಿದಾಗ ಧುತ್ತನೇ ಇಂಥ ಸಾಕಷ್ಟು ಮಾಹಿತಿಗಳು ಸಿಗುತ್ತವೆ. ಕೆಲವೇ ಕೆಲವು ನಂಬಲರ್ಹ, ವಿಶ್ವಾಸಾರ್ಹ ತಾಣಗಳಲ್ಲಿರುವುದನ್ನಷ್ಟೇ ನಂಬಬೇಕಾಗುತ್ತದೆ. ಉಳಿದವೆಲ್ಲವೂ ಪೇಜ್ ವ್ಯೂಸ್ ಹೆಚ್ಚಿಸಿಕೊಳ್ಳಲು, ಇಂಪ್ರೆಶನ್ಸ್ ಹೆಚ್ಚಿಸಿಕೊಂಡರೆ ಜಾಹೀರಾತು ಹಣ ಹೆಚ್ಚು ಬರುತ್ತದೆ ಎಂಬ ದಂಧೆಯಿಂದಲೇ ನಡೆಯುತ್ತಿರುವವು. ಅವುಗಳಿಗೆ ನಿಜಕ್ಕೂ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ಇರುವುದಿಲ್ಲ.

ವಿಷಯಾಂತರವಾಗಬಾರದಲ್ಲ. ಈ ಮೇಲಿನ ಕೆಟ್ಟ ಪ್ರಕ್ರಿಯೆಯು ಡಾರ್ಕ್ ವೆಬ್ ಅಡಿಯಲ್ಲಿ ಬರುವುದಿಲ್ಲ. ಇದೊಂಥರಾ ರಾಜಾರೋಷವಾಗಿ, ಹಾಡಹಗಲೇ ಮೋಸ ಮಾಡುವ ವಿಧಾನವಿದ್ದಂತೆ. ಇಂಟರ್ನೆಟ್ ಜಗತ್ತಿನಲ್ಲಿ ಎಲ್ಲವನ್ನೂ ನಂಬಬೇಕಿಲ್ಲ ಎಂದು ಮನದಟ್ಟು ಮಾಡುವ ಉದ್ದೇಶಕ್ಕೆ ಈ ವಿಷಯ ತಿಳಿಸಬೇಕಾಯಿತು.

ಹಾಗಿದ್ದರೆ ಡಾರ್ಕ್ ವೆಬ್?
ತೂಕ ಕಮ್ಮಿ ಮಾಡಿಕೊಳ್ಳುವುದು ಹೇಗೆ ಅಥವಾ ಸಕ್ಕರೆ ಕಾಯಿಲೆ ಕ್ಷಣಾರ್ಧದಲ್ಲಿ ಗುಣಪಡಿಸುವುದು ಹೇಗೆ ಅಂತ ನೀವೇನಾದರೂ ಗೂಗಲ್ ಅಥವಾ ಬಿಂಗ್‌ನಲ್ಲಿ ಸರ್ಚ್ ಮಾಡಿದರೆ ಒಂದಷ್ಟು ಅಗಾಧ ಮಾಹಿತಿ ನಿಮ್ಮ ಮುಂದೆ ಬರುತ್ತದೆ. ಆದರೆ, ಡಾರ್ಕ್ ವೆಬ್‌ನಲ್ಲಿರುವ ಅಕ್ರಮ ಮಾಹಿತಿಗಳು, ವಹಿವಾಟುಗಳು – ಇವ್ಯಾವುವೂ ಸರ್ಚ್ ಎಂಜಿನ್‌ಗಳ ಗಮನಕ್ಕೇ ಬರುವುದಿಲ್ಲ. ಇಲ್ಲಿರುವ ಯಾವುದೇ ವಿಷಯಗಳು ಎನ್ಕ್ರಿಪ್ಟ್ ಆಗಿರುವಂಥವು ಮತ್ತು ಮರೆ ಮಾಡಲಾಗುವ ಐಪಿ (ಇಂಟರ್ನೆಟ್ ಪ್ರೊಟೊಕಾಲ್) ವಿಳಾಸಗಳ ಮೂಲಕ ನಮಗೆ ದೊರೆಯುತ್ತದೆ. ಅಲ್ಲಿ ಸರ್ಚ್ ಮಾಡುವುದಕ್ಕೆ ಅದರದ್ದೇ ಆದ ಸರ್ಚ್ ಎಂಜಿನ್ ಇರುತ್ತದೆ. ಹಣವನ್ನೋ, ಮಾಲನ್ನೋ… ಯಾರು ಕಳುಹಿಸಿದ್ದು, ಯಾರು ಪಡೆದದ್ದು ಅಂತ ಯಾರಿಗೂ ಗೊತ್ತಾಗುವುದಿಲ್ಲ. ಜಾಡು ಹಿಡಿಯಲಾಗದ ಜಾಲವಿದು. ಒಟ್ಟಿನಲ್ಲಿ ಅನಾಮಧೇಯವಾಗಿ ವ್ಯವಹರಿಸುವ ಅಕ್ರಮ ಕೂಟಗಳ ತಾಣವಿದು ಎನ್ನಲಡ್ಡಿಯಿಲ್ಲ. ಇದನ್ನು ಬ್ರೌಸ್ ಮಾಡುವುದಕ್ಕೂ ಅದರದ್ದೇ ಆದ ಬ್ರೌಸರ್‌ಗಳೇ ಬೇಕು.

ಬಳಕೆದಾರರ ಇಂಟರ್ನೆಟ್ ಸಂಪರ್ಕವನ್ನು ಬೇರೆಯೇ ರೂಟರ್‌ಗಳ ಮೂಲಕ, ಜಾಡು ಹಿಡಿಯಲಾಗದಂತೆ ಯಾವ್ಯಾವುದೋ ಸರ್ವರ್‌ಗಳಿಗೆ ಸಂಪರ್ಕಿಸುವುದು ಡಾರ್ಕ್ ವೆಬ್‌ನ ಪ್ರಕ್ರಿಯೆ. ಹಲವಾರು ಸರ್ವರುಗಳನ್ನು ದಾಟಿ ಈ ದತ್ತಾಂಶವು ಪಯಣಿಸುವುದರಿಂದ, ಇದರಲ್ಲಿ ಜಾಲಾಡುವ ಪ್ರಕ್ರಿಯೆಯೂ ತೀರಾ ಸ್ಲೋ ಆಗಿರುತ್ತದೆ. ಮಾಹಿತಿಯು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗುತ್ತಿರುವಂತೆಯೇ ಯುಆರ್‌ಎಲ್‌ಗಳೂ ಬದಲಾಗಬಹುದಾಗಿದೆ. ಈ ಎಲ್ಲವೂ ಅನಾಮಿಕತೆಯನ್ನು ಕಾಪಾಡಿಕೊಳ್ಳುವುದಕ್ಕೋಸ್ಕರ. ಇದೊಂಥರಾ ಈರುಳ್ಳಿಯನ್ನು ಬಿಡಿಸಿದಂತೆ. ಸುತ್ತಲಿನ ಸಿಪ್ಪೆ ಬಿಡಿಸುತ್ತಾ ಮುಂದೆ ಸಾಗಿದ ಬಳಿಕ, ಕೊನೆಯಲ್ಲಿ ತಿರುಳು ಕಾಣಿಸುತ್ತದೆಯಲ್ಲವೇ ಹೀಗೆ. ಇದಕ್ಕಾಗಿಯೇ ಇವುಗಳಿಗೆ ಆನಿಯನ್ ತಾಣಗಳೆಂಬ ಹೆಸರೂ ಇವೆ ಮತ್ತು ಡಾಟ್ ಆನಿಯನ್ ಎಂಬ ಡೊಮೇನ್ ಎಕ್ಸ್‌ಟೆನ್ಷನ್ ಇರುವ ವೆಬ್ ತಾಣಗಳು ಈ ಡಾರ್ಕ್ ವೆಬ್ ವ್ಯವಹಾರದಲ್ಲಿ ಬಲುದೊಡ್ಡ ಹೆಸರು.

ಆದರೆ, ಈ ದುಷ್ಟ ಕೂಟದಲ್ಲಿ ಪಾಲ್ಗೊಳ್ಳುವ ಮೊದಲು ನಮಗೆ ನಾವೇ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ ಎಂಬುದು ಗಮನಿಸಬೇಕಾದ ವಿಚಾರ.

ಇಲ್ಲಿ ವ್ಯವಹಾರ ನಡೆಯುವುದೆಲ್ಲವೂ ಮಾಮೂಲಿ ಕರೆನ್ಸಿಗಳ ಮೂಲಕ ಅಲ್ಲ. ಬದಲಾಗಿ ಬಿಟ್ ಕಾಯಿನ್ ಎಂಬ ಎಲೆಕ್ಟ್ರಾನಿಕ್ ಹಣದ ಮೂಲಕ. ಮತ್ತು ಅಕ್ರಮ ದಂಧೆ ಅಂತಲೇ ಕರೆಯಬಹುದಾದ ಎಲ್ಲ ಚಟುವಟಿಕೆಗಳನ್ನು ನಾವು ಸಾಮಾನ್ಯವಾಗಿ ಬಳಸುವ ಕ್ರೋಮ್, ಫೈರ್‌ಫಾಕ್ಸ್, ಎಡ್ಜ್, ಸಫಾರಿ ಮುಂತಾದ ಬ್ರೌಸರ್‌ಗಳ ಮೂಲಕ ನಡೆಸಲು ಅಸಾಧ್ಯ. ಅದಕ್ಕೆ ಅದರದ್ದೇ ಆದ TOR ನಂತಹಾ ಬ್ರೌಸರ್ ಕೂಡ ಇದೆ. ಅನುಕೂಲ ಏನೆಂದರೆ, ಹವಾಲಾ ದಂಧೆ, ಕಳ್ಳ ಸಾಗಾಟ, ಪೈರೇಟೆಡ್ ವಸ್ತುಗಳು, ಕಳ್ಳ ಮಾಲು, ಡ್ರಗ್ಸ್, ಹೆಣ್ಣು, ಹೆಂಡವಷ್ಟೇ ಅಲ್ಲದೆ, ಶಾಸಕರ ಖರೀದಿ ಪ್ರಕ್ರಿಯೆಗೂ ಈ ಡಾರ್ಕ್ ವೆಬ್ ಎಂಬುದೊಂದು ವೇದಿಕೆಯಾಗುತ್ತದೆ ಎಂದಾದರೆ, ಡಾರ್ಕ್ ವೆಬ್‌ನ ಕತ್ತಲ ಕೂಪದ ವ್ಯಾಪ್ತಿ ವಿಸ್ತಾರ ಯಾವ ಮಟ್ಟಿಗಿದೆ ಎಂಬುದನ್ನು ಅರಿಯಬಹುದು.

ಇಲ್ಲಿ ಕದ್ದ ಮಾಲುಗಳು ಸಿಗುತ್ತವೆ. ಕಳವು ಮಾಡಲಾದ ಕ್ರೆಡಿಟ್ ಕಾರ್ಡ್‌ಗಳು, ಶಸ್ತ್ರಾಸ್ತ್ರಗಳು, ರಿಲೀಸ್ ಆಗುವ ಮೊದಲೇ ಚಲನಚಿತ್ರಗಳು, ಎಲೆಕ್ಟ್ರಾನಿಕ್ ಕರೆನ್ಸಿ, ಪೋರ್ನ್ ಮೂವೀಗಳು ಕೂಡ ಸಿಗುತ್ತವೆ. ಇಂಥ ಕತ್ತಲ ಕೂಪಕ್ಕೆ ಹೋದರೂ, ನಮ್ಮ ಜಾಡು ಸಿಗುವುದಿಲ್ಲ. ಅಷ್ಟು ಸುರಕ್ಷಿತವಾಗಿ ಎನ್‌ಕ್ರಿಪ್ಟ್ ಮಾಡಲಾಗಿರುವ ತಾಣವದು. ಬಿಟ್ ಕಾಯಿನ್, ಮೊನೆರೊ ಮುಂತಾದ ಕ್ರಿಪ್ಟೋಕರೆನ್ಸಿ ಎಂಬ ಎಲೆಕ್ಟ್ರಾನಿಕ್ ಕರೆನ್ಸಿಯ ಜಾಡು ಹಿಡಿಯುವುದು ಹೇಗೆ ಸಾಧ್ಯವಿಲ್ಲವೋ, ಡಾರ್ಕ್ ವೆಬ್ ಜಾಲಾಟವೂ ಹಾಗೆಯೇ. ಇಲ್ಲಿ ಅನಾಮಿಕರಾಗಿದ್ದುಕೊಂಡೇ ದಂಧೆ ಮಾಡುವುದು ಸುರಕ್ಷಿತ. ಆದರೆ, ಕ್ರಿಪ್ಟೋಕರೆನ್ಸಿಯು ಡಾರ್ಕ್ ವೆಬ್‌ನಲ್ಲಷ್ಟೇ ಅಲ್ಲ, ಹೊರಗಿನ ಜಗತ್ತಿನಲ್ಲೂ ಚಲಾವಣೆಯಲ್ಲಿದೆ ಮತ್ತು ಕೆಲವು ದೇಶಗಳಲ್ಲಿ ಇದಕ್ಕೆ ಮಾನ್ಯತೆಯೂ ಇದೆ.

ಡಾರ್ಕ್ ವೆಬ್ ಹಾಗೂ ಡೀಪ್ ವೆಬ್
ಇವೆರಡೂ ಸರ್ಚ್‌ಗೆ ಸಿಗುವುದಿಲ್ಲವಾದರೂ ಸಾಕಷ್ಟು ವ್ಯತ್ಯಾಸವಿದೆ. ಡೀಪ್ ವೆಬ್ ಎಂಬುದರ ಒಂದು ಸಣ್ಣ ಭಾಗ ಡಾರ್ಕ್ ವೆಬ್. ಡೀಪ್ ವೆಬ್‌ನಲ್ಲಿ ನಮ್ಮ ಬ್ಯಾಂಕಿಂಗ್ ಹಾಗೂ ಖಾಸಗಿ ಮಾಹಿತಿಗಳನ್ನು ಸಂಗ್ರಹಿಸಿಡುವ ತಾಣಗಳ ಸಕ್ರಮ ವಹಿವಾಟುಗಳು ನಡೆಯುತ್ತಿದ್ದರೆ, ಡಾರ್ಕ್ ವೆಬ್‌ನಲ್ಲಿ ನಡೆಯುವುದೆಲ್ಲವೂ ಅಕ್ರಮವೇ.

ಹೇಗೆ ನಡೆಯುತ್ತದೆ?
ಇದು ಅಕ್ರಮ ಕೂಟಗಳ ಕುರಿತಾದ ಮಾಹಿತಿ ಆದುದರಿಂದ, ಸ್ಪಷ್ಟವಾಗಿ ವಿವರಿಸುವುದು ತರವಲ್ಲ. ಆದರೆ, ಡೀಪ್ ವೆಬ್‌ನ ಬಗ್ಗೆ ಡೀಪ್ ಆಗಿ ಹೇಳುವ ಬದಲು, ಸೂಕ್ಷ್ಮವಾಗಿ ಅದರ ಕಾರ್ಯವೈಖರಿ ಬಗ್ಗೆ ಹೇಳಬಹುದಷ್ಟೇ.

ಇತ್ತೀಚೆಗೆ ಗಣ್ಯರನೇಕರ ಟ್ವಿಟರ್ ಖಾತೆ ಹ್ಯಾಕ್ ಆಗಿತ್ತಲ್ಲವೇ? ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ಖಾತೆಯೂ ಹ್ಯಾಕ್ ಆಗಿ, ಅದರಲ್ಲಿ, ಇಂತಿಷ್ಟು ಹಣದ ಬಿಟ್ ಕಾಯಿನ್ ಕೊಡಿ ಅಂತೆಲ್ಲ ಸಂದೇಶ ಹಾಕಲಾಗಿತ್ತು. ಜನ ನಂಬಿದವರು ಕೊಟ್ಟಿದ್ದಾರೆ, ಎಲ್ಲ ತಿಳಿಯುವುದಷ್ಟರೊಳಗೆ ಹ್ಯಾಕರ್‌ಗಳು ಹಣ ಮಾಡಿಕೊಂಡು ಹೋಗಿದ್ದಾರೆ. ಅಷ್ಟು ಕ್ಷಿಪ್ರವಾಗಿ ಕೆಲಸ ನಡೆಯುತ್ತದೆ.

ಬಿಟ್ ಕಾಯಿನ್ ಮೂಲಕ ನಡೆಯಬಹುದಾದ ಈ ಡಾರ್ಕ್ ವ್ಯವಹಾರದಲ್ಲಿ ಯಾರು ಯಾವ ಖಾತೆಗೆ ಹಣ ಹಾಕಿದರು ಎಂಬುದನ್ನು ಟ್ರೇಸ್ ಮಾಡುವುದು ಅಸಾಧ್ಯ. ಈ ಆತ್ಮವಿಶ್ವಾಸದೊಂದಿಗೆ, ಧೂರ್ತರು ಇಲ್ಲಿ ಮಾದಕ ದ್ರವ್ಯಗಳನ್ನು ಪೂರೈಸುತ್ತಾರೆ, ಬಾಡಿಗೆ ಗೂಂಡಾಗಳು, ಕೊಲೆಗಾರರು ಸಿಗುತ್ತಾರೆ, ಕಳವು ಮಾಲುಗಳು ದೊರೆಯುತ್ತವೆ, ಪೋರ್ನ್ ವಿಡಿಯೊಗಳು, ಹೆಣ್ಣು, ಹೆಂಡ – ಎಲ್ಲವೂ ಸಿಗುತ್ತದೆ. ಈ ಡಾರ್ಕ್ ವೆಬ್‌ನಲ್ಲಿ ಏನಿರುತ್ತದೆ ಎಂದರೆ, ನೈಜ ಜಗತ್ತಿನಲ್ಲಿ ನಿಷೇಧವಾಗಿರುವ ಎಲ್ಲವೂ ಇರುತ್ತವೆ! ಆದರೆ, ಇಲ್ಲಿ ಎಲ್ಲವೂ ಅಕ್ರಮವೇ ಆಗಿರಬೇಕಾಗಿಲ್ಲ; ಒಳ್ಳೆಯ ಕೆಲಸಕ್ಕೂ ಡಾರ್ಕ್ ವೆಬ್ ಬಳಸಬಹುದು.

ನಮ್ಮನ್ನು ಯಾರೂ ಟ್ರೇಸ್ ಮಾಡುವುದಿಲ್ಲ ಎಂಬ ನಂಬಿಕೆಯಿಂದಾಗಿಯೇ ದುಷ್ಟರ ಕೂಟವೂ ಆಧುನಿಕ ತಂತ್ರಜ್ಞಾನವನ್ನು ‘ಸದುಪಯೋಗ’ ಮಾಡಿಕೊಳ್ಳುತ್ತಿರುವುದು ಹೀಗೆ. ತಂತ್ರಜ್ಞಾನದಲ್ಲಿ ಹೊಸ ಆವಿಷ್ಕಾರಗಳಾಗುತ್ತಿರುವಂತೆಯೇ ಒಳ್ಳೆಯದೂ ಇರುತ್ತದೆ, ಅದಕ್ಕಿಂತ ಹೆಚ್ಚು ಕೆಡುಕೂ ಇರುತ್ತದೆ! ಯಾರು ಬಳಸುತ್ತಿದ್ದಾರೆ ಎಂಬುದರ ಮೇಲಷ್ಟೇ ಒಳ್ಳೆಯದು ಎಂಬುದು ಅವಲಂಬಿತವಾಗಿರುತ್ತದಷ್ಟೇ.

ಮುಗಿಸುವ ಮುನ್ನ ಒಂದು ಎಚ್ಚರಿಕೆಯಿದೆ. ಡಾರ್ಕ್ ವೆಬ್ ಜಾಲಾಡುವುದು ಅಕ್ರಮವಲ್ಲ, ಆದರೆ, ಅಪಾಯಕಾರಿಯಾಗಬಹುದು.

PV Web Exclusive Published in Prajavani on 12 Sept 2020

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Recent Posts

ಎಐ ವೈಶಿಷ್ಟ್ಯಗಳ realme GT 7 Pro ಬಿಡುಗಡೆ: ಬೆಲೆ ಎಷ್ಟು? ವೈಶಿಷ್ಟ್ಯಗಳೇನು? ಇಲ್ಲಿದೆ ಪೂರ್ಣ ಮಾಹಿತಿ

ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್‌ ಇರುವ ಬಹುನಿರೀಕ್ಷಿತ…

3 weeks ago

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

3 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

3 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

4 months ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

5 months ago

ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

10 months ago