ಸರಿಯಾಗಿ ಒಂದು ವರ್ಷದ ಹಿಂದೆ, ಏನೋ ಪಟಾಕಿ ಸಿಡಿದಿರಬೇಕು ಅಥವಾ ಅಗ್ನಿ ಆಕಸ್ಮಿಕ ಸಂಭವಿಸಿರಬೇಕು ಇಲ್ಲವೇ ಗ್ಯಾಂಗ್ ವಾರ್ ನಡೆಯುತ್ತಿರಬೇಕು ಎಂಬಂತೆ ಆರಂಭದಲ್ಲಿ ಶಂಕೆ ಹುಟ್ಟಿಸಿದ್ದ ಘಟನೆಯೊಂದು ಬೃಹತ್ತಾಗಿ ಬೆಳೆದು ಭಾರತದ ಸಾರ್ವಭೌಮತೆಗೇ ಸವಾಲೊಡ್ಡಿದ ಪ್ರಕರಣವಾಗಿಬಿಟ್ಟಿತು. ಕೇವಲ 10 ಮಂದಿ ಪಾಕಿಸ್ತಾನೀ ಪ್ರೇರಿತ ಉಗ್ರಗಾಮಿಗಳು ಇಡೀ ದೇಶದ ಸಾರ್ವಭೌಮತೆಯನ್ನೇ ಒತ್ತೆಯಾಳಾಗಿರಿಸಿಕೊಂಡು ಅರುವತ್ತೆರಡು ಗಂಟೆಗಳ ಕಾಲ ನಿದ್ದೆಗೆಡಿಸುವಲ್ಲಿ ಸಫಲರಾಗಿದ್ದರು. ಈ ಉಗ್ರರ ಅಟ್ಟಹಾಸಕ್ಕೆ 175ರಷ್ಟು ಮಂದಿ ಅಮಾಯಕರು ಪ್ರಾಣ ಕಳೆದುಕೊಂಡರು. ಇದು ಭಾರತದ ಪ್ರತಿಷ್ಠೆಯ ಮೇಲೆ, ಅದರ ಸಹಿಷ್ಣುತಾ ಭಾವದ ಮೇಲೆ ಮತ್ತು ಅದರ ‘ಎಲ್ಲರೂ ಒಳ್ಳೆಯವರೆ’ ಎಂಬ ನಂಬಿಕೆಯ ಮೇಲೊಂದು ಕಪ್ಪು ಚುಕ್ಕೆ. ಈ ದಾಳಿಗೀಗ ಒಂದು ವರ್ಷ.
ಕೆಲವು ಸಂಗತಿಗಳು ಹೀಗೆಯೇ ಆಗಿಬಿಡುತ್ತದೆ. ಭಾರತದ ನೀತಿಯೂ ಇದಕ್ಕೆ ಹೊರತಾಗಿಲ್ಲ – We can forgive, but forget too! ಕೇವಲ ಹತ್ತು ಮಂದಿ ಯುವಕರು ಇಡೀ ದೇಶದ ಸಾಮರ್ಥ್ಯಕ್ಕೇ ಸವಾಲೊಡ್ಡಿದ ಸಂದರ್ಭದಲ್ಲಿ, ನಮ್ಮ ಮಹಾನ್ ಯೋಧರು, ಪೊಲೀಸರು ಸಾಹಸದಿಂದ ಹೋರಾಡಿ, ಅವರಲ್ಲಿ ಕೆಲವರು ವೀರಮರಣವನ್ನಪ್ಪಿದಾಗ, ಸಹಜವಾಗಿ ರಾಜಕಾರಣಿಗಳತ್ತ ಜನಾಕ್ರೋಶ ತಿರುಗಿತ್ತು. ರಕ್ಷಣಾ ಪಡೆಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸದ, ದೇಶಾದ್ಯಂತ ಅದುವರೆಗಿನ ಅವಧಿಯಲ್ಲಿ ಸರಣಿ ಬಾಂಬ್ ಸ್ಫೋಟಗಳು ನಡೆಯುತ್ತಲೇ ಇದ್ದರೂ ಕೂಡ, ಪೊಲೀಸ್ ಬಲವನ್ನು ಮೇಲ್ದರ್ಜೆಗೇರಿಸುವಲ್ಲಿ, ಮತ್ತು ಉಗ್ರಗಾಮಿ ಚಟುವಟಿಕೆಗಳ ಮೇಲೆ ನಿಯಂತ್ರಣ ಹೇರುವಲ್ಲಿ ಸರಕಾರ ವಿಫಲವಾಗಿದ್ದಕ್ಕೆ ಅಲ್ಲಿ ಆಕ್ರೋಶ ಮಡುಗಟ್ಟಿತ್ತು ಮತ್ತು ಅದು ಸ್ಫೋಟಗೊಂಡಿತು.
ತೀರಾ ವಿಷಾದನೀಯ ಸಂಗತಿಯೆಂದರೆ, ಅದೇ ವಿಷಾದ ಇನ್ನೂ ಮಾಸಿಲ್ಲ, ಆದರೆ ಆ ಆಕ್ರೋಶ ಮಾತ್ರ ತಣಿದಿದೆ! ಯಾಕೆ? ಈ ದುರಂತ ಘಟನೆ ನಡೆದು ಒಂದು ವರ್ಷವಾದರೂ, “ಉಗ್ರಗಾಮಿಗಳ ಮೇಲೆ ಕ್ರಮ ಕೈಗೊಳ್ಳದಿದ್ದರೆ, ಟೆರರ್ ನೆಟ್ವರ್ಕನ್ನು ನಿರ್ನಾಮ ಮಾಡದಿದ್ದರೆ ನೋಡಿ…” ಅಂತ ನಾವಿನ್ನೂ ಪಾಕಿಸ್ತಾನಕ್ಕೆ ಎಚ್ಚರಿಸುತ್ತಲೇ ಇದ್ದೇವೆ. ಎಡಬಿಡಂಗಿಗಳ ಕೈಯಲ್ಲಿ ಆಡಳಿತ ಮಾಡಿಸಿಕೊಂಡು ನರಳುತ್ತಿರುವ, ಐಎಸ್ಐ, ಸೇನಾಪಡೆಗಳ ಕಪಿಮುಷ್ಟಿಯಲ್ಲಿ ನಲುಗುತ್ತಿರುವ ಪಾಕಿಸ್ತಾನವೋ…. “ಮಾಡ್ತೀವಿ ಮಾಡ್ತೀವಿ, ಮತ್ತಷ್ಟು ಸಾಕ್ಷ್ಯಾಧಾರ ಕೊಡಿ” ಎಂದು ಹೇಳುತ್ತಲೇ, 365 ದಿನಗಳನ್ನು ವ್ಯರ್ಥ ಮಾಡಿ ಅಬ್ಬಬ್ಬಾ ಎಂದು ನಿಟ್ಟುಸಿರುಬಿಟ್ಟಿದೆ. ನಾವು “ಪಾಕಿಗೆ ಬುದ್ಧಿ ಹೇಳಿ” ಎಂದು ಅಮೆರಿಕದ ಬಾಗಿಲು ಬಡಿದಾಗ, ಅಮೆರಿಕವೂ ‘ಕ್ರಮ ಕೈಗೊಳ್ಳಿ’ ಎಂದು ಪಾಕಿಗೆ ಎಚ್ಚರಿಸಿ ಕೈತೊಳೆದುಕೊಳ್ಳುತ್ತದೆ. ಒಂದೆರಡು ದಿನಗಳ ಬಳಿಕ ಪೂರ್ವಸ್ಥಿತಿಗೆ ಮರಳುತ್ತದೆ. ಒಮ್ಮೆ ಉಗ್ರರು ನಮ್ಮವರಲ್ಲ ಎನ್ನುತ್ತಾ, ಜಾಗತಿಕ ಒತ್ತಡ ಹೆಚ್ಚಾದಾಗ, ಹೌದು ಅವರು ನಮ್ಮವರು ಎಂದು ಆಗಾಗ್ಗೆ ಹೇಳಿಕೆ ಬದಲಿಸುತ್ತಿರುವುದನ್ನು ನಾವು ಅಸಹಾಯಕತೆಯಿಂದ ನೋಡುತ್ತಿರುತ್ತೇವೆ. ಪಾಕಿಸ್ತಾನದಲ್ಲಿ ಯಾರೊಂದಿಗೆ ಮಾತನಾಡಬೇಕೆಂದೇ ತಿಳಿಯುತ್ತಿಲ್ಲ ಎಂಬ ಮಾತೂ ನಮ್ಮ ಪ್ರಧಾನಿಗಳ ಬಾಯಿಂದಲೇ ಬಂದಿದೆ!
ಇತ್ತ ಕಡೆ ನೋಡಿದರೆ, ಮುಂಬೈ ದಾಳಿಯ ಸಂದರ್ಭ ಎಡಬಿಡಂಗಿತನ ಪ್ರದರ್ಶಿಸಿದ್ದಕ್ಕಾಗಿ, ಸರಕಾರದ ವಿರುದ್ಧದ ಜನಾಕ್ರೋಶ ತಣಿಸುವುದಕ್ಕಾಗಿ ಆರ್.ಆರ್.ಪಾಟೀಲ ಎಂಬ ಗೃಹಮಂತ್ರಿಯ ರಾಜೀನಾಮೆ ಪಡೆದಿದ್ದ ಅಲ್ಲಿನ ಆಡಳಿತವು, ಸರಿಯಾಗಿ 11 ತಿಂಗಳ ಬಳಿಕ ಮತ್ತೆ ಅವರನ್ನೇ ಗೃಹ ಮಂತ್ರಿ ಸ್ಥಾನದಲ್ಲಿ ತಂದು ಕೂರಿಸಿದೆ. ಮತ್ತು ಅವರು ಇಂದಿನಿಂದ ಹೇಳುತ್ತಾ ಬಂದಿದ್ದನ್ನೇ ಈಗಲೂ ಹೇಳುತ್ತಿದ್ದಾರೆ- ಉಗ್ರರ ದಾಳಿ ಮಟ್ಟ ಹಾಕಲು ನಾವು ಸರ್ವ ಸಮರ್ಥರಾಗಿದ್ದೇವೆ ಅಂತ.
ಅದೇ ಒಬ್ಬ ಉಗ್ರಗಾಮಿ, ಅಮೀರ್ ಅಜ್ಮಲ್ ಕಸಬ್ ಎಂಬ ನರಹಂತಕನನ್ನು ನಮ್ಮ ಮುಂಬೈ ಪೊಲೀಸರು ಪ್ರಾಣ ತ್ಯಾಗ ಮಾಡಿ, ಪ್ರಾಣವನ್ನೇ ಪಣವಿಟ್ಟು ಸೆರೆ ಹಿಡಿದದ್ದು ಕೂಡ ವ್ಯರ್ಥವಾಯಿತೇ ಎಂಬ ಶಂಕೆಗೂ ಕಾರಣವಾಗಿದೆ. ಯಾಕೆ? ಈ ಪಡಪೋಶಿ ಹುಳುವಿನ ರಕ್ಷಣೆಗೆ ದಿನಕ್ಕೆ 85 ಲಕ್ಷ ರೂಪಾಯಿಯನ್ನು ಭಾರತ ಸರಕಾರ ವ್ಯಯ ಮಾಡಬೇಕಾಗಿ ಬಂದಿದೆ! ಒಂದು ವರ್ಷವಾದರೂ ವಿಚಾರಣೆ ಪೂರ್ಣಗೊಂಡಿಲ್ಲ ಮತ್ತು ಕೈಗೆ ಸಿದ್ದ ಪಕ್ಕಾ ಸಾಕ್ಷ್ಯವನ್ನಿಟ್ಟುಕೊಂಡು ನಮಗೆ ಏನು ಮಾಡಲೂ ಸಾಧ್ಯವಾಗುತ್ತಿಲ್ಲ! ಎಂದರೆ ಇದು ನಮ್ಮ ವ್ಯವಸ್ಥೆಯ ದುರಂತವೆಂದೇ ಹೇಳದೇ ವಿಧಿಯಿಲ್ಲ. ಒಂದಿಡೀ ವರ್ಷದಲ್ಲಿ ಅವನಿಗಾಗಿ ಖರ್ಚು ಮಾಡಿದ ಅಂದಾಜು 31 ಕೋಟಿ ರೂಪಾಯಿ ಹಣವನ್ನು, ಅದೇ ನಮ್ಮ ಪೊಲೀಸ್/ರಕ್ಷಣಾ ಪಡೆಗಳ ಆಧುನೀಕರಣಕ್ಕೆ ಮತ್ತು ನಿದ್ದೆ ಮಾಡಿದಂತೆ ತೋರುತ್ತಿದ್ದ ಗುಪ್ತಚರ ದಳವನ್ನು ಬಲಪಡಿಸಲು ವ್ಯಯಿಸಿದ್ದರೆ ಒಂದಿಷ್ಟಾದರೂ ಉಪಕಾರವಾಗುತ್ತಿತ್ತು.
ಈ ಮಾತು ಯಾಕೆ ಹೇಳಬೇಕಾಯಿತೆಂದರೆ, ಕೇಂದ್ರ ಗೃಹ ಸಚಿವ ಚಿದಂಬರಂ ಮೊನ್ನೆ ಮೊನ್ನೆ ಟಿವಿ ಚಾನೆಲ್‌ನಲ್ಲಿ ಹೇಳಿದ್ದು: ಪೊಲೀಸ್, ನೇಮಕಾತಿ, ತರಬೇತಿ, ಆಧುನಿಕ ಶಸ್ತ್ರಾಸ್ತ್ರಗಳ ಖರೀದಿ, ತಂತ್ರಜ್ಞಾನದ ಅಳವಡಿಕೆ ಮತ್ತು ಸಿಬ್ಬಂದಿ ನಿರ್ವಹಣೆಗಾಗಿ ಬಜೆಟ್‌ನಲ್ಲಿ ಗಂಭೀರ ಅನ್ನಿಸಬಹುದಾದ ಕೊರತೆ ಈಗಲೂ ಇದೆ!
ಈ ಕಸಬ್ ಮತ್ತು ಸ್ನೇಹಿತರು ಒಂದು ಯಾಂತ್ರಿಕ ದೋಣಿಯಲ್ಲಿ ಕರಾಚಿಯಿಂದ ಮುಂಬಯಿವರೆಗೆ ರಾಜಾರೋಷವಾಗಿ, ಎಕೆ-47, ಆರ್‌ಡಿಎಕ್ಸ್ ಮುಂತಾದ ಸ್ಫೋಟಕಗಳೊಂದಿಗೆ ಬಂದಾಗ, ಅವರನ್ನು ಪ್ರಶ್ನಿಸುವವರೇ ಇರಲಿಲ್ಲ ಮತ್ತು ಅವರು ಭಾರತದಂತಹಾ ಬಲಿಷ್ಠ ರಾಷ್ಟ್ರವನ್ನೇ ನಡುಗುವಂತೆ ಮಾಡಿದರು ಎಂಬುದಕ್ಕಿಂತ ದೊಡ್ಡ ನಾಚಿಕೆಗೇಡಿನ ಸಂಗತಿಯಿದೆಯೇ?
ಖಂಡಿತವಾಗಿಯೂ ಆತನನ್ನು ಜೀವಂತವಾಗಿರಿಸಬೇಕು ಎಂಬುದು ಸರಿಯೇ. ಆದರೆ, ನೇರಾನೇರ ಅರೋಪಗಳಿದ್ದರೂ, ಅಷ್ಟೊಂದು ಜನರ ಮಾರಣ ಹೋಮ ಮಾಡಿ, ಒಂದು ದೇಶಕ್ಕೇ ಅಪಾಯ ತಂದೊಡ್ಡಿದಾತನಿಗೆ ಈ ನೆಲದ ಕಾನೂನಿನ ಅನುಸಾರ ಸೂಕ್ತ ಶಿಕ್ಷೆ ವಿಧಿಸಿ ಕೈತೊಳೆದುಕೊಳ್ಳಲು ವಿಳಂಬವೇಕೆ? ಎಂಬುದು ಇಲ್ಲಿ ಮೂಡುತ್ತಿರುವ ಪ್ರಶ್ನೆ. ಎಲ್ಲೀವರೆಗೆ ಎಂದರೆ, ವೆಬ್‌ದುನಿಯಾದಲ್ಲಿ ಒಂದೆಡೆ ಓದುಗರು – ಅವನಿಗೆ ಒಂದೈದಾರು ವರ್ಷ ಶಿಕ್ಷೆ ವಿಧಿಸಿ, ಆತ ಬಿಡುಗಡೆಗೊಂಡ ಮೇಲೆ ಅವನಿಗೆ ಕಾಂಗ್ರೆಸ್ ಪಕ್ಷವು ಟಿಕೆಟ್ ಕೊಟ್ಟು ಚುನಾವಣೆಗೆ ನಿಲ್ಲಿಸುತ್ತದೆ ಎಂದು ಕಾಮೆಂಟ್ ಹಾಕುವವರೆಗೆ! ಇದು ಈ ರೀತಿ ಕಾಮೆಂಟ್ ಮಾಡಿದ ಒಬ್ಬರ ಧ್ವನಿಯಲ್ಲ, ಉಗ್ರಗಾಮಿಗಳ ದಾಳಿಯಲ್ಲೂ ರಾಜಕೀಯ ಮಾಡುತ್ತಿದ್ದ ರಾಜಕಾರಣಿಗಳ ನಡೆ-ನುಡಿಗಳನ್ನು ಗಮನವಿಟ್ಟು ನೋಡುತ್ತಿರುವ ಪ್ರಜ್ಞಾವಂತರ ನುಡಿಯೂ ಹೌದು. ಇದೇ ಮಾತು ಸಂಸತ್ ಮೇಲೆ ದಾಳಿ ನಡೆಸಿದ ಅಫ್ಜಲ್ ಗುರು ಎಂಬ ಪಾತಕಿಗೆ ಸಂಬಂಧಿಸಿಯೂ ಕೇಳಿಬರುತ್ತಿದೆ. 2001ರ ಡಿಸೆಂಬರ್ 13ರಂದು ನಡೆದ ಸಂಸತ್ ದಾಳಿ ಪ್ರಕರಣದಲ್ಲಿ ಅಫ್ಜಲ್ ಗುರು ಅಪರಾಧಿ ಎಂದು ಸಾಬೀತಾಗಿ, ಗಲ್ಲು ಶಿಕ್ಷೆಯನ್ನೂ ವಿಧಿಸಲಾಗಿದೆ. ಇದು ನಡೆದು ಐದಾರು ವರ್ಷಗಳೇ ಕಳೆದರೂ ಗಲ್ಲು ಶಿಕ್ಷೆ ಜಾರಿಯಾಗಿಲ್ಲ. ಮತ್ತು ಇದಕ್ಕೆ ಅಂದಿನ ಗೃಹ ಸಚಿವ ಶಿವರಾಜ್ ಪಾಟೀಲ್ ಕೊಟ್ಟಿದ್ದ ಉತ್ತರವಿನ್ನೂ ಓದುಗರ ಮನಸ್ಸಿನ ಮೂಲೆಯಲ್ಲಿರಬಹುದು. ‘ಅಫ್ಜಲ್ ಗಲ್ಲಿಗೇರಿಸಿದರೆ ನೆರೆ ರಾಷ್ಟ್ರ ಪಾಕಿಸ್ತಾನಕ್ಕೆ ಬೇಸರವಾಗಬಹುದು, ಉಭಯ ರಾಷ್ಟ್ರಗಳ ಶಾಂತಿ ಪ್ರಕ್ರಿಯೆಗೆ ಭಂಗವಾಗಬಹುದು’ ಎಂಥಾ ಮನಸ್ಥಿತಿ!
ಇಂಥದ್ದೇ ದಾಳಿ ಬೇರೆ ದೇಶದಲ್ಲಿ ನಡೆದಿದ್ದರೆ ಎಂಬ “…ರೆ” ಬಗ್ಗೆ ಯೋಚಿಸಿ ನೋಡಿ. ಉದಾಹರಣೆಗೆ ಅಮೆರಿಕದಲ್ಲಾಗುತ್ತಿದ್ದರೆ, ಈಗ ಪಾಕಿಸ್ತಾನದ ಪರಿಸ್ಥಿತಿ ಹೇಗಿರುತ್ತಿತ್ತು?
ಅದೆಲ್ಲಾ ಒತ್ತಟ್ಟಿಗಿರಲಿ. ಹಲವಾರು ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಒಬ್ಬ ಉಗ್ರಗಾಮಿ, ಕಟ್ಟಾ ಪಾಕಿಸ್ತಾನೀಯ ಎಂಬುದು ಪರಿಪೂರ್ಣವಾಗಿ ಸಾಬೀತಾದ ಉಗ್ರಗಾಮಿ ಅಮೀರ್ ಅಜ್ಮಲ್ ಕಸಬ್ ಏನಾದರೂ ಜೀವಂತವಾಗಿ ಸೆರೆ ಸಿಕ್ಕದೇ ಹೋಗಿರುತ್ತಿದ್ದರೆ? ಜೀವಂತ ಸಾಕ್ಷಿಯಿರುವಾಗಲೂ ಏನೂ ಮಾಡಲು ಸಾಧ್ಯವಾಗಿಲ್ಲ, ಇನ್ನು ಸಾಕ್ಷಿಯಿಲ್ಲದೆ ಏನಾದರೂ ಮಾಡಬಹುದಾಗಿತ್ತೇ? ಕಸಬ್ ತಪ್ಪೊಪ್ಪಿಗೆ ಹೊರತಾಗಿ ಬೇರೆ ಯಾವ ಸಾಕ್ಷಿಯನ್ನು ಹಿಡಿಯಲು ನಮ್ಮ ಸರಕಾರ ಶಕ್ತವಾಗಿದೆ? ಈ ದಾಳಿಯೊಂದು ಅತ್ಯುತ್ತಮವಾಗಿ ಯೋಜಿಸಿದ, ಅತ್ಯುತ್ತಮವಾಗಿ ಸಂಘಟಿಸಿದ ಮತ್ತು ಅತ್ಯುತ್ತಮವಾಗಿ ಅನುಷ್ಠಾನಗೊಳಿಸಿದ ಪ್ಲಾನ್. ಇದರ ಕುರಿತು ತನಿಖೆ ನಡೆಸಲು ಮಹಾರಾಷ್ಟ್ರ ಸರಕಾರವು ಮಾಜಿ ಗೃಹ ಕಾರ್ಯದರ್ಶಿ ಎಸ್.ಡಿ.ಪ್ರಧಾನ್ ನೇತೃತ್ವದ ಆಯೋಗವನ್ನು ರಚಿಸಿದೆ. ಅದು ವರದಿ ಮಂಡಿಸಿದ್ದರೆ ಅದನ್ನು ಇನ್ನೂ ಬಹಿರಂಗಪಡಿಸಿಲ್ಲವೇಕೆ? ಹಾಗಿದ್ದರೆ, ಭಾರತ ಸರಕಾರವು, ಪ್ರತಿಪಕ್ಷ ಬಿಜೆಪಿಯ ಗಟ್ಟಿ ಧ್ವನಿ ಉಡುಗಿಹೋದ ಕಾರಣದಿಂದಾಗಿ, ವ್ಯವಸ್ಥೆಯೊಳಗಿನ ಹುಳುಕುಗಳನ್ನು, ಲೋಪ ದೋಷಗಳನ್ನು ಜನರಿಗೆ ತಿಳಿಯದಂತೆ ಮಾಡಲು ಯತ್ನಿಸುತ್ತಿದೆಯೇ? ಮುಂಬೈ ಪೊಲೀಸ್ ಅಧಿಕಾರಿಗಳ ಒಳಗಿನ ವೈಮನಸ್ಯ, ಭಿನ್ನಾಭಿಪ್ರಾಯಗಳು ಹೇಗೆ ಕಾರ್ಯಾಚರಣೆ ಮೇಲೆ ಪ್ರಭಾವ ಬೀರಿದವು ಎಂದು ಮಾಜಿ ಪೊಲೀಸ್ ಅಧಿಕಾರಿ ಹಸನ್ ಗಫೂರ್ ಮಾಡಿದ ಆರೋಪಗಳನ್ನು ಅಲ್ಲಿಗೇ ಅಡಗಿಸಿದ್ದೇಕೆ? ರಾಷ್ಟ್ರೀಯ ಭದ್ರತಾ ಪಡೆ (ಎನ್ಎಸ್‌ಜಿ) ಮಾಜಿ ಮುಖ್ಯಸ್ಥ ಜಿ.ಕೆ. ದತ್ ಹೇಳಿರುವಂತೆ ಗುಪ್ತಚರ ವ್ಯವಸ್ಥೆಯಲ್ಲಿನ ಕೊರತೆಯನ್ನು ಪರಿಗಣಿಸಿಲ್ಲವೇಕೆ?
ಮತ್ತು ಯಾವ ಆಧಾರದಲ್ಲಿ, ಈ ಹತ್ತು ಮಂದಿ ಉಗ್ರಗಾಮಿಗಳ ಹೊರತಾಗಿ ಬೇರೆ ಯಾವುದೇ ಉಗ್ರಗಾಮಿಗಳು ಇದರಲ್ಲಿ ಭಾಗಿಯಾಗಿಲ್ಲ ಎಂದು ಸರಕಾರವು ದೃಢ ನಿಲುವು ಹೊಂದಿದೆಯೇ ಅಥವಾ ಈ ಸಾಧ್ಯತೆಯ ಕುರಿತು ಏನಾದರೂ ಯೋಚನೆ ಮಾಡಿದೆಯೇ? ದೇಶದೊಳಗೆ ಇನ್ನೂ ಸಕ್ರಿಯವಾಗಿರುವ ಸಿಮಿ, ಹುಜಿ, ಇಂಡಿಯನ್ ಮುಜಾಹಿದೀನ್ ಉಗ್ರರು ಸಾಕಷ್ಟು ಸಂಖ್ಯೆಯಲ್ಲಿ ಅವಿತಿದ್ದಾರೆ. ಇವರಿಂದಲೂ 26/11 ಉಗ್ರರಿಗೆ ಸಹಾಯ ದೊರೆತಿದ್ದಿರಬಹುದಲ್ಲವೇ? ದೇಶದೊಳಗಿದ್ದುಕೊಂಡೇ ದೇಶದ್ರೋಹಿ ಕಾರ್ಯ ಮಾಡುತ್ತಿರುವವರ ಬಗ್ಗೆ ತಲೆಕೆಡಿಸಿಕೊಂಡಿಲ್ಲವೇಕೆ?
ಪಾಕಿಸ್ತಾನೀಯನೇ ಆಗಿದ್ದ ಡೇವಿಡ್ ಕೋಲ್ಮನ್ ಹೆಡ್ಲಿ (ಮೂಲ ಹೆಸರು ದಾವೂದ್ ಗಿಲಾನಿ) ಮತ್ತು ತಹಾವ್ವುರ್ ಹುಸೇನ್ ರಾಣಾ ಎಂಬವರಿಬ್ಬರನ್ನು ಅಮೆರಿಕದ ಎಫ್‌ಬಿಐ ಬಂಧಿಸಿ, ಅವರಿಗೂ 26/11ಗೂ ನೇರ ಸಂಬಂಧವಿರುವ ಕುರಿತು ಸಾಕ್ಷ್ಯಾಧಾರಗಳನ್ನು ನೀಡುತ್ತಲೇ ಇದೆ. ಅವರಿಬ್ಬರೂ ಸಾಕಷ್ಟು ಬಾರಿ ಭಾರತದೊಳಕ್ಕೆ ಬಂದು, ಈ ದಾಳಿಯನ್ನು ರೂಪಿಸಿದ್ದಾರೆ, ಹೆಡ್ಲಿ ಒಬ್ಬ ಪಾಕ್ ರಾಜತಾಂತ್ರಿಕನ ಪುತ್ರ ಎಂಬ ಕುರಿತಾಗಿಯೂ ಮಾಹಿತಿ ನೀಡುತ್ತಲೇ ಇದೆ. ಆ ಬಳಿಕ ಇಟಲಿಯಲ್ಲಿ ಇಬ್ಬರನ್ನು ಇದೇ ದಾಳಿಗೆ ಸಂಬಂಧಿಸಿ, ಉಗ್ರಗಾಮಿಗಳಿಗೆ ಸಹಾಯ ನೀಡಿದ ಆರೋಪದಲ್ಲಿ ಬಂಧಿಸಲಾಗಿದೆ. ನಮ್ಮ ಭಾರತದೊಳಗೆ ಅವರೇನು ಮಾಡಿದರು ಎಂಬುದನ್ನೆಲ್ಲಾ ನಮಗೆ ವಿದೇಶೀ ತನಿಖಾ ಏಜೆನ್ಸಿಗಳು ಹೇಳಬೇಕು! ನಮಗದು ಗೊತ್ತೇ ಇಲ್ಲ. ಗೊತ್ತಾದರೂ, ಇವುಗಳ ಬಗ್ಗೆ ಧಾವಂತದಿಂದ, ಕ್ಷಿಪ್ರವಾಗಿ ಗಮನ ಹರಿಸಬೇಕಾಗಿದ್ದ ಭಾರತದ ಆಡಳಿತಗಾರರಿಗೆ ಪುರುಸೊತ್ತಿಲ್ಲ!
ಕಳೆದ ಒಂದು ವರ್ಷಗಳಲ್ಲಿ ನಮ್ಮನ್ನಾಳುವವರಿಂದ ಭರವಸೆಗಳ ದೊಡ್ಡ ನದಿಯೇ ಹರಿದಿದೆ. ರಾಷ್ಟ್ರೀಯ ರಕ್ಷಣಾ ಪಡೆ, ತೀರ ರಕ್ಷಣಾ ಪಡೆ, ಭಯೋತ್ಪಾದನಾ ನಿಗ್ರಹ ಪಡೆ, ನೌಕಾಪಡೆಗಳ ನಡುವಣ ಸಮನ್ವಯ ಕೊರತೆಯೇ ಇದಕ್ಕೆಲ್ಲಾ ಕಾರಣವೆಂಬುದು ಜಗಜ್ಜಾಹೀರಾದಾಗ, ಸಮನ್ವಯಕ್ಕೊಂದು ಮಲ್ಟಿ ಏಜೆನ್ಸಿ ಸೆಂಟರ್ (ಎಂಎಸಿ) ಸ್ಥಾಪನೆಗೆ ಘೋಷಿಸಲಾಗಿತ್ತು. ಅದು ಸ್ಥಾಪನೆಯಾಗಿ ಒಂದಿಷ್ಟು ಕೆಲಸ ಮಾಡಿದೆ. ಅದು ಬಿಟ್ಟರೆ, ಅಮೆರಿಕದ ಎಫ್‌ಬಿಐ ಮಾದರಿಯ ತನಿಖಾ ತಂಡ ರಚನೆಯ ಘೋಷಣೆಯು ಕೇವಲ ಘೋಷಣೆಯಾಗಿ ಉಳಿದಿದೆ. ಉಗ್ರರ ದಾಳಿಯಲ್ಲಿ ಬದುಕುಳಿದವರಲ್ಲಿ ಕೆಲವರಿಗೆ ಮಾತ್ರವೇ ಪರಿಹಾರ ದೊರೆತಿದೆ. ಸಮುದ್ರ ತಟದ ಗುಂಟ ಗಸ್ತು ನಡೆಸಲು ತೀರ ರಕ್ಷಣಾ ಪಡೆಗಳಿಗೆ ಸಾಕಷ್ಟು ಸಂಖ್ಯೆಯಲ್ಲಿ ಬೋಟ್‌ಗಳನ್ನು ಒದಗಿಸಲಾಗಿಲ್ಲ. ಫೋರ್ಸ್ ಒನ್ ಎಂಬ ಮಾನಸಿಕವಾಗಿ, ದೈಹಿಕವಾಗಿ ಅತ್ಯಂತ ಬಲಿಷ್ಠವಾಗಿರುವ ಎನ್ನಲಾದ ಪಡೆ ರಚಿಸಲಾಗಿದೆ, ಆದರೆ ಮೊನ್ನೆ ಮಂಗಳವಾರ ಅದರ ಉದ್ಘಾಟನಾ ದಿನದಂದೇ ಕೆಲವು ಫೋರ್ಸ್ ಒನ್ ಕಮಾಂಡೋಗಳು ಪೆರೇಡ್ ನಡುಸ್ತಿದ್ದ ವೇಳೆ ಮೂರ್ಛೆ ತಪ್ಪಿ ಕೆಳಗೆ ಬಿದ್ದಿದ್ದರು. ಈ ಬಗ್ಗೆ ಸರಕಾರ ಏನು ಹೇಳುತ್ತದೆ?
ಒಂದಂತೂ ಸತ್ಯ. ಮುಂಬೈ ಮೇಲಿನ ದಾಳಿ ಕೇವಲ ದಾಳಿಯಾಗಿರಲಿಲ್ಲ. ಇದೊಂದು ಜಾಗತಿಕ ಭಯೋತ್ಪಾದನೆಯ ಮತ್ತೊಂದು ಮುಖವಾಗಿತ್ತು. ಮತ್ತು ಜಗತ್ತೇ ನಮ್ಮ ಬೆಂಬಲಕ್ಕಿತ್ತು. ಇಷ್ಟೆಲ್ಲ ಇದ್ದರೂ ಪಾಕಿಸ್ತಾನದ ಮೇಲೆ ಒತ್ತಡ ಹೇರುವ ಸರ್ವ ಅವಕಾಶಗಳನ್ನೂ ನಾವು ಕೈಯಾರೆ ಕಳೆದುಕೊಂಡೆವು.
ಕೊನೆಗೆ, ಕಸಬ್ ಎಂಬ ಕಸ ಸಿಕ್ಕಿಬಿದ್ದದ್ದು ವ್ಯರ್ಥವಾಗದಿರಲಿ, ರಾಷ್ಟ್ರದ ಸಾರ್ವಭೌಮತೆಗೆ ಸವಾಲೊಡ್ಡಿದ ಸಂಗತಿಯಲ್ಲೂ ‘ಶಾಂತಿ’ ಎನ್ನುತ್ತಾ ಬದ್ಧತೆಯಿಂದ ಹಿಂದೆ ಸರಿಯದಿರಲಿ ಮತ್ತು ನಾಗರಿಕರನ್ನು ಆ ಮೂಲಕ ದೇಶದ ಸಾರ್ವಭೌಮತೆಯನ್ನು ರಕ್ಷಿಸಲು ಹೋರಾಡಿ ಪ್ರಾಣತ್ಯಾಗ ಮಾಡಿದ ವೀರ ಯೋಧರು, ಪೊಲೀಸರ ಬಲಿದಾನ ನಿರರ್ಥಕವಾಗದಂತೆ ಸರಕಾರ ನೋಡಿಕೊಳ್ಳಲಿ.
[ವೆಬ್‌ದುನಿಯಾಕ್ಕೆ ಬರೆದದ್ದು]
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು
View Comments
ಎಲ್ಲಿ ಮರೆಯಾಗಿ ಹೋದರು ಅವಿನಾಶ್ ... ನಿಮ್ಮ ಕರೆದ ದೂರ ತೀರ ಯಾವುದು.. ಇಲ್ಲಿಗಿಂತ ಚಂದದ ಮನೆಯಾ....
ಹೊಟ್ಟೆಪಾಡಿನ ಮನೆಯಲ್ಲಿ ಒಂದಷ್ಟು 'ಬಿಜಿ'ನೆಸ್ ಮಿಂಚುಳ್ಳಿ... ಸೋ.. ಇತ್ತ ಕಡೆ ಗಮನ ಕೊಡಲಾಗ್ತಿಲ್ಲ... ಬರ್ತೀನಿ ಬರ್ತೀನಿ, ಬರ್ದೇ ಬರೀತೀನಿ. :)