Categories: myworld

ಸೀಸರ್ ಪತ್ನಿ ಶಂಕಾತೀತರಲ್ಲವೇ?

ಈ ದೇಶದಲ್ಲಿ ಏನಾಗ್ತಿದೆ? ಇದು ಸುಪ್ರೀಂ ಕೋರ್ಟು ನೇರವಾಗಿ ಕೇಂದ್ರ ಸರಕಾರಕ್ಕೆ ಕೇಳಿದ ಪ್ರಶ್ನೆ. ಇದು ನಮ್ಮ ನಿಮ್ಮೆಲ್ಲರ ಪ್ರಶ್ನೆಯೂ ಹೌದು. ಎಲ್ಲಿ ನೋಡಿದರಲ್ಲಿ, ಎಲ್ಲಿ ಕೇಳಿದರಲ್ಲಿ ಹಗರಣಗಳೇ ಹಗರಣಗಳು! ರಾಜಕಾರಣಿಗಳು, ಅಧಿಕಾರಿವರ್ಗ…. ಇವರೆಲ್ಲರೂ ನುಂಗಣ್ಣಗಳೇ ಎಂಬ ಭಾವನೆ ಭಾರತೀಯರೆಲ್ಲರಲ್ಲೂ ತುಂಬಿ ತುಳುಕಾಡುತ್ತಿದೆ.

ಈ ಹಿಂದೆ ಕಾಮನ್ವೆಲ್ತ್ ಗೇಮ್ಸ್ ಹಗರಣ ಹಾಗೂ ವಿದೇಶಗಳಲ್ಲಿ ಕಪ್ಪು ಹಣವನ್ನು ಅಡಗಿಸಿಟ್ಟವರ ಹೆಸರು ಬಹಿರಂಗಪಡಿಸುವ ನಿಟ್ಟಿನಲ್ಲಿ ಪ್ರಜಾಪ್ರಭುತ್ವದ ನಾಲ್ಕು ಆಧಾರ ಸ್ತಂಭಗಳಲ್ಲಿ ಒಂದಾದ ನ್ಯಾಯಾಂಗದ ಪರಮೋಚ್ಚ ಸಂಸ್ಥೆ ಸುಪ್ರೀಂ ಕೋರ್ಟು, ಕೇಂದ್ರದ ಯುಪಿಎ ಸರಕಾರದ ಕಿವಿ ಹಿಂಡಿ, ಛೀಮಾರಿ ಹಾಕಿತ್ತು. ಆದರೆ ಗುರುವಾರದ ಕಪಾಳ ಮೋಕ್ಷವಿದೆಯಲ್ಲ, ಅದಂತೂ ಖಂಡಿತಾ ಬಲುದೊಡ್ಡ ಛಡಿಯೇಟೇ ಸರಿ.

ಇದಕ್ಕೆ ಕಾರಣವೂ ಇಲ್ಲದಿಲ್ಲ.

ದೇಶದ ಅತ್ಯುನ್ನತ ಹುದ್ದೆಯಲ್ಲಿರುವ ಇಬ್ಬರಿಗೆ (ಪ್ರಧಾನಿ ಸಿಂಗ್ ಮತ್ತು ಗೃಹ ಸಚಿವ ಪಿ.ಚಿದಂಬರಂ) ಸುಪ್ರೀಂಕೋರ್ಟು ಆದೇಶದಿಂದ ಮುಖಭಂಗವಾಗಿದೆ ಅಥವಾ ತಾವಾಗಿಯೇ ಮುಖಭಂಗ ಮಾಡಿಕೊಂಡಿದ್ದಾರೆಯೇ? ಯಾಕೆಂದರೆ, ಇಷ್ಟೊಂದು ಆರೋಪಗಳು, ಆರೋಪ ಪಟ್ಟಿಯೂ ಸಲ್ಲಿಸಲಾಗಿರುವ ವ್ಯಕ್ತಿಯನ್ನು ಪ್ರಜಾತಂತ್ರದ ಕಾವಲುನಾಯಿ ಸ್ಥಾನದಲ್ಲಿರುವ ವಿಚಕ್ಷಣಾ ದಳಕ್ಕೆ ನೇಮಕ ಮಾಡಿದ್ದೇ ಈ ಇಬ್ಬರು. ನೇಮಕಾತಿಗಾಗಿ ರೂಪಿಸಲಾದ ಸಮಿತಿಯಲ್ಲಿದ್ದ ಇನ್ನೊಬ್ಬರೆಂದರೆ ಬಿಜೆಪಿಯ ಸುಷ್ಮಾ ಸ್ವರಾಜ್.

ಸುಷ್ಮಾ ಸ್ವರಾಜ್ ಈ ನೇಮಕಾತಿಗೆ ವಿರೋಧ ಮಾಡುತ್ತಿರುವುದಾದರೂ ಏಕೆ ಎಂಬ ಮೂಲಭೂತ ಪ್ರಶ್ನೆಗೆ ಉತ್ತರ ಕಂಡುಹುಡುಕಲು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಒಂದಿನಿತು ಪ್ರಯತ್ನವನ್ನಾದರೂ ಮಾಡಿಲ್ಲವೇಕೆ?

ಸಭೆಯಲ್ಲಿ ಈ ಕುರಿತು ಚರ್ಚೆಯಾದರೂ ಕೂಡ, ಆರೋಪಪಟ್ಟಿ ಸಲ್ಲಿಸಲಾಗಿರುವುದು ತಮಗೆ ಗೊತ್ತೇ ಇರಲಿಲ್ಲ ಎಂದು ಕೇಂದ್ರವು ಅಟಾರ್ನಿ ಜನರಲ್ ಜಿ.ಇ.ವಾಹನ್ವತಿ ಮೂಲಕ ಸುಪ್ರೀಂ ಕೋರ್ಟಿಗೆ ಹೇಳಿದ್ದಾದರೂ ಏಕೆ?

ಇನ್ನು, ಸುಪ್ರೀಂಕೋರ್ಟು ಸಿವಿಸಿ ನೇಮಕಾತಿಯನ್ನೇ ನಲ್ ಆಂಡ್ ವಾಯ್ಡ್ ಅಂತ ಘೋಷಿಸಿದ ತಕ್ಷಣವೇ ನಮ್ಮ ಕೇಂದ್ರ ಕಾನೂನು ಮಂತ್ರಿ ವೀರಪ್ಪ ಮೊಯ್ಲಿ, ‘ಥಾಮಸ್ ರಾಜೀನಾಮೆ ನೀಡಿದ್ದಾರೆ’ ಎಂದು ಟಿವಿ ಚಾನೆಲ್‌ಗಳಲ್ಲಿ ಘೋಷಿಸಿ ಬಿಟ್ಟಿದ್ದರು! ಆಯ್ಕೆಯನ್ನೇ ರದ್ದುಪಡಿಸಲಾಗಿರುವಾಗ ರಾಜೀನಾಮೆ ನೀಡುವ ಪ್ರಸಂಗ ಎಲ್ಲಿಂದ ಬಂತು? ಇದು ನಮ್ಮ ದೇಶದ ಕಾನೂನು ಮಂತ್ರಿ ವೀರಪ್ಪ ಮೊಯ್ಲಿಗೆ ತಿಳಿದಿಲ್ಲವೇ?

ಹಾಗಿದ್ದರೆ, ನೀವು ಮಾಡಿದ್ದು ಸರಿಯಲ್ಲ, ಇಂಥಾ ತಪ್ಪು ಕೆಲಸ ಮಾಡಬೇಡಿ ಎನ್ನಲು ಮೌನವೇ ಮೂರ್ತಿವೆತ್ತಂತಿರುವ ನಮ್ಮ ಪಾಪದ ಪ್ರಧಾನಿ ಮನಮೋಹನ್ ಸಿಂಗರಿಗೆ ಸುಪ್ರೀಂ ಕೋರ್ಟೇ ಆಗಾಗ ಚುರುಕು ಮುಟ್ಟಿಸಬೇಕೇ? ಪ್ರಧಾನಿಯೇ ಸಿವಿಸಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿರುವುದರಿಂದ ಅವರು ನೈತಿಕ ಹೊಣೆ ಹೊರಬೇಕಾಗುತ್ತದೆ.

2ಜಿ ಹಗರಣ ಜೆಪಿಸಿಗೆ ಒಪ್ಪಿಗೆ ನೀಡುವ ಸಂದರ್ಭ, ಹಗರಣಗಳಿಗೆ ಸಮ್ಮಿಶ್ರ ರಾಜಕೀಯ ಧರ್ಮ ಕಾರಣ, ಎಲ್ಲವೂ ತನ್ನ ನಿಯಂತ್ರಣದಲ್ಲಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದರು ಪ್ರಧಾನಿ. ಹಾಗಿದ್ದರೆ ಈ ದೇಶದ ಜನರ ಸಂಕಷ್ಟ ಪರಿಹಾರಕ್ಕೂ ಸಮ್ಮಿಶ್ರ ರಾಜಕೀಯ ಕಾರಣವಾಗುತ್ತದೆಯೇ?

ಥಾಮಸ್ ಹಗರಣ: ಏನು.. ಎತ್ತ…
ಪಾಮೋಲಿನ್ ಹಗರಣವು 60ರ ಹರೆಯದ ಪೊಲಯಿಲ್ ಜೋಸೆಫ್ ಥಾಮಸ್ (ಪಿ.ಜೆ.ಥಾಮಸ್) ಅವರನ್ನು ಎರಡು ದಶಕಗಳಿಂದ ಕಾಡುತ್ತಿದೆ. 1992ರಲ್ಲಿ ಕರುಣಾಕರನ್ ಕೇರಳ ಮುಖ್ಯಮಂತ್ರಿಯಾಗಿದ್ದಾಗ ಮಲೇಷ್ಯಾದಿಂದ 1500 ಟನ್ ಪಾಮೆಣ್ಣೆ ಆಮದು ಮಾಡಿಕೊಂಡ ಪ್ರಕರಣದಲ್ಲಿ 8ನೇ ಆರೋಪಿ. ಮೊದಲ ಆರೋಪಿ ಅಂದಿನ ಮುಖ್ಯಮಂತ್ರಿ ದಿವಂಗತ ಕೆ.ಕರುಣಾಕರನ್, 2ನೇ ಆರೋಪಿ ಆಹಾರ ಸಚಿವರಾಗಿದ್ದ ಟಿ.ಎಚ್.ಮುಸ್ತಫಾ. ಆಮದು ಡೀಲ್‌ನ ಫಲಾನುಭವಿಗಳಲ್ಲಿ ಥಾಮಸ್ ಕೂಡ ಒಬ್ಬರು ಎಂಬುದು ಅವರ ಮೇಲಿನ ಆರೋಪ. ಹೀಗಾಗಿ ಚಾರ್ಜ್ ಶೀಟ್ ದಾಖಲಾಗಿತ್ತು ಮತ್ತು ತಿರುವನಂತಪುರದ ನ್ಯಾಯಾಲಯದಲ್ಲಿ ಇನ್ನೂ ವಿಚಾರಣೆ ನಡೆಯುತ್ತಿದೆ. ಥಾಮಸ್ ಅಂದು ಆಹಾರ ಇಲಾಖೆಯ ಕಾರ್ಯದರ್ಶಿಯಾಗಿದ್ದರು ಹಾಗೂ ರಾಜ್ಯ ನಾಗರಿಕ ಪೂರೈಕೆ ಇಲಾಖೆಯ ನಿರ್ದೇಶಕರಾಗಿದ್ದರು.

ಬಳಿಕ 2005ರಲ್ಲಿ, ಈ ಡೀಲ್‌ನಿಂದ ರಾಜ್ಯಕ್ಕೆ ನಿಜವಾಗಿಯೂ ಲಾಭವಾಗಿದೆ ಎಂದು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರಕಾರವು ಅವರ ವಿರುದ್ಧದ ಕೇಸು ಹಿಂತೆಗೆದುಕೊಳ್ಳಲು ನಿರ್ಧರಿಸಿತ್ತಾದರೂ 2006ರಲ್ಲಿ ಚುನಾವಣೆ ಘೋಷಣೆಯಾದ ಕಾರಣ, ಕಾನೂನು ಸಂಬಂಧಿತ ಪ್ರಕ್ರಿಯೆಗಳು ಪೂರ್ಣಗೊಂಡಿರಲಿಲ್ಲ. ಹೀಗಾಗಿ ಅದು ಅರ್ಧಕ್ಕೇ ನಿಂತಿತ್ತು. ಆದರೆ ಥಾಮಸ್ ಪ್ರಾಮಾಣಿಕರು, ಶುದ್ಧ ಹಸ್ತರು ಅಂತ ಅವರ ಸಹಯೋಗಿ ಐಎಎಸ್ ಅಧಿಕಾರಿಗಳು ಈಗಲೂ ಹೇಳುತ್ತಿದ್ದಾರೆ. ಅವರು ಕೇರಳದ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಬಳಿಕ ಕೇಂದ್ರೀಯ ಹುದ್ದೆಗೆ ಡೆಪ್ಯುಟೇಶನ್ ಆಧಾರದಲ್ಲಿ ಹೋಗಿದ್ದರು. ಕೇಂದ್ರದಲ್ಲಿ ಸಂಸದೀಯ ವ್ಯವಹಾರಗಳ ಕಾರ್ಯದರ್ಶಿಯಾಗಿ, ಟೆಲಿಕಾಂ ಮತ್ತು ಐಟಿ ಇಲಾಖೆ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಅದಕ್ಕೆ ಮೊದಲು ಕೇರಳದ ಮುಖ್ಯ ಚುನಾವಣಾಧಿಕಾರಿಯಾಗಿಯೂ ಅವರು ಕೆಲಸ ನಿರ್ವಹಿಸಿದ್ದರು.

ಸೀಸರನ ಪತ್ನಿ ಸಂಶಯಾತೀತಳಾಗಿರಬೇಕು!
ಸೀಸರನ ಹೆಂಡತಿ ಸಂಶಯಾತೀತಳಾಗಿರಬೇಕು ಎಂಬ ಮಾತನ್ನು ಪದೇ ಪದೇ ಪ್ರಧಾನಿ ಮನಮೋಹನ್ ಸಿಂಗ್ ಉಲ್ಲೇಖಿಸುತ್ತಿದ್ದಾರೆ. ಸಾವಿರಾರು ಕೋಟಿ ರೂಪಾಯಿಗಳ 2ಜಿ ಸ್ಪೆಕ್ಟ್ರಂ ಹಂಚಿಕೆ ಹಗರಣಕ್ಕೆ ಸಂಬಂಧಿಸಿ ಯಾವುದೇ ವಿಚಾರಣೆಗೆ ತಾನು ಸಿದ್ಧ ಎಂದು ಹೇಳುವಾಗಲೂ ಅವರು ಈ ಮಾತು ಹೇಳಿದ್ದರು.

ಹಾಗಿದ್ದರೆ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವವರಿಗೇ ಅಂಕುಶ ತೊಡಿಸುವ, ಅವರನ್ನು ಹಿಡಿದು ಶಿಕ್ಷಿಸುವ ಜವಾಬ್ದಾರಿ ಹೊತ್ತ ಸಿವಿಸಿಯಂತಹಾ ಉನ್ನತ ಹುದ್ದೆಗೆ ನೇಮಕವಾಗುವವರು ‘ಸಂಶಯಾತೀತ’ರಾಗಿರಬೇಕು ಎಂಬ ಪುಟ್ಟ ಅಂಶ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೇಕೆ ಹೊಳೆಯಲಿಲ್ಲ? ಅಥವಾ ಸುಷ್ಮಾ ಸ್ವರಾಜ್ ಪ್ರಬಲ ಪ್ರತಿರೋಧದ ನಡುವೆಯೂ, ಥಾಮಸ್ ಅವರನ್ನೇ ಸಿವಿಸಿಯಾಗಿ ನೇಮಿಸುವಂತೆ ಪ್ರಧಾನಿಯವರ ಕೈಗಳನ್ನು ಕಟ್ಟಿ ಹಾಕಿದ ಕಾಣದ ಶಕ್ತಿ ಯಾವುದು?

ಸೀಸರನ ಪತ್ನಿ ಶಂಕಾತೀತ ಎಂಬ ನಾಣ್ಣುಡಿ ಬಗ್ಗೆ…
ಜೂಲಿಯಸ್ ಸೀಸರ್‌ನ ಪತ್ನಿ ಪೊಂಪೀಯಾ ಸುಲ್ಲಾ ಏರ್ಪಡಿಸಿದ್ದ ‘ಬೋನಾ ಡೀ’ ಎಂಬ ಹಬ್ಬವೊಂದಕ್ಕೆ ಮಹಿಳೆಯರಿಗೆ ಮಾತ್ರ ಅವಕಾಶವಿತ್ತು. ಆದರೆ ಪಬ್ಲಿಯಸ್ ಕ್ಲಾಡಿಯಸ್ ಪಲ್ಚರ್ ಎಂಬ ಮಹತ್ವಾಕಾಂಕ್ಷಿ ಯುವಕನೊಬ್ಬ ಸೀಸರನ ಸುಂದರ ಪತ್ನಿಯನ್ನು ಒಲಿಸಿಕೊಳ್ಳಲು ಮಹಿಳೆಯ ವೇಷ ಧರಿಸಿ ಅದರಲ್ಲಿ ಪಾಲ್ಗೊಂಡು, ಪತ್ನಿ ಜೊತೆಗೇ ಸಿಕ್ಕಿಬಿದ್ದ. ಅವನನ್ನು ಬಂಧಿಸಲಾಯಿತು. ವಿಚಾರಣೆ ಸಂದರ್ಭ ಸೀಸರ್ ಆತನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಮತ್ತು ಯಾವುದೇ ಸಾಕ್ಷಿ ನೀಡದ ಕಾರಣ ಆತನ ಬಿಡುಗಡೆಯಾಯಿತು. ಕೆಲವು ದಿನಗಳ ಬಳಿಸ ಸೀಸರ್ ಪತ್ನಿಗೆ ವಿಚ್ಛೇದನ ನೀಡಿದ. ಅದಕ್ಕೆ ಆತ ನೀಡಿದ ಕಾರಣ ‘ಸೀಸರನ ಪತ್ನಿಯಾಗಿರುವವಳು ಯಾವತ್ತಿಗೂ ಸಂಶಯಾತೀತಳಾಗಿರಬೇಕು’ ಎಂದು. ಅದುವೇ ಈ ನಾಣ್ಣುಡಿಯ ಹುಟ್ಟಿಗೆ ಕಾರಣವಾಯಿತು.

ಅದು ಒತ್ತಟ್ಟಿಗಿರಲಿ; ಚಾರ್ಜ್ ಶೀಟ್‌ಗೆ ಒಳಪಟ್ಟ ಅಧಿಕಾರಿಯೊಬ್ಬರು ಒಂದರ ಮೇಲೊಂದರಂತೆ ಹುದ್ದೆ ಮೇಲೇರುತ್ತಾ, ದೇಶದ ಅತ್ಯುನ್ನತ ಕೇಂದ್ರ ವಿಚಕ್ಷಣಾ ದಳ ಅಥವಾ ಕೇಂದ್ರ ಜಾಗೃತ ದಳ ಎಂದು ಕರೆಯಲಾಗುವ ಸಿವಿಸಿಗೆ ಮುಖ್ಯಸ್ಥರಾಗಿರುವುದರ ಹಿಂದಿನ ನಿಗೂಢತೆಯಾದರೂ ಏನು? ಎಲ್ಲ ಪ್ರಶ್ನೆಗಳಿಗೆ ಸೋನಿಯಾ ಗಾಂಧಿ ನೇತೃತ್ವದ ಯುಪಿಎ ಸರಕಾರವು ಮತದಾರರಿಗೆ ಉತ್ತರದಾಯಿಯಾಗಿದೆ. ಸಚ್ಚಾರಿತ್ರ್ಯನಂತ, ಶುದ್ಧ ಹಸ್ತ ಎಂದೆಲ್ಲಾ ಕರೆಸಿಕೊಂಡಿರುವ ಪ್ರಧಾನಿ ಬಗೆಗೇ ಸಂದೇಹ ಮೂಡತೊಡಗಿದೆ. ಪ್ರಧಾನಿಯವರೇ ಥಾಮಸ್ ನೇಮಕ ಮಾಡಿದ್ದರಿಂದ ಯಾಕಾಗಿ ಈ ಆಯ್ಕೆ ಮಾಡಿದರು ಎಂಬುದಕ್ಕಂತೂ ಅವರು ಉತ್ತರ ನೀಡಲೇಬೇಕಾಗಿದೆ.
[ವೆಬ್‌ದುನಿಯಾಕ್ಕಾಗಿ]

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Share
Published by
Avinash B

Recent Posts

ಎಐ ವೈಶಿಷ್ಟ್ಯಗಳ realme GT 7 Pro ಬಿಡುಗಡೆ: ಬೆಲೆ ಎಷ್ಟು? ವೈಶಿಷ್ಟ್ಯಗಳೇನು? ಇಲ್ಲಿದೆ ಪೂರ್ಣ ಮಾಹಿತಿ

ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್‌ ಇರುವ ಬಹುನಿರೀಕ್ಷಿತ…

1 month ago

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

4 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

4 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

4 months ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

6 months ago

ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

11 months ago