Categories: myworldOpinion

ರಣಾಂಗಣ ಸಜ್ಜಾಗಿದೆ; ನಾಯಕರು ಎಲ್ಲಿದ್ದಾರೆ?

ಯಾವುದೇ ಮತದಾರರನ್ನು ಕೇಳಿನೋಡಿ… ರಾಜಕೀಯವೆಂಬುದು ‘ತತ್ವಸಿದ್ಧಾಂತಗಳೆಲ್ಲ ಧೂಳೀಪಟವಾಗಿರುವ ಅಕ್ರಮಗಳ ಆಗರವಾಗಿಬಿಟ್ಟಿದೆ’ ಎಂಬರ್ಥದ ಜುಗುಪ್ಸೆಯ ಭಾವನೆ ಅಲ್ಲಿ ವ್ಯಕ್ತವಾಗುತ್ತದೆ. ಇಲ್ಲಿ ಪಕ್ಷ ನಿಷ್ಠೆ, ಪಕ್ಷ ಅನುಸರಿಸುತ್ತಿರುವ ಸಿದ್ಧಾಂತಕ್ಕೆ ಬದ್ಧವಾಗುವುದು ಇವೆಲ್ಲವೂ ಎಲ್ಲೋ ಕೇಳಿದ ಪದಗುಚ್ಛಗಳ ಹಾಗಿವೆಯಲ್ಲ ಅಂತನ್ನಿಬಿಟ್ಟಿವೆ. ಒಂಚೂರು ಅಸಮಾಧಾನವಾದರೂ ಸಾಕು, ಅದನ್ನು ಚರ್ಚಿಸಿ ಪರಿಹರಿಸಿಕೊಳ್ಳುವುದು ಬಿಟ್ಟು, ವೈರುಧ್ಯಮಯ ಸಿದ್ಧಾಂತಗಳಿರುವ ಮತ್ತೊಂದು ಪಕ್ಷಕ್ಕೆ ನೆಗೆದಾಟ ಆಗಿಬಿಡುತ್ತದೆ. ಸ್ವಪ್ರತಿಷ್ಠೆ, ಹಣದ ಬಲ ಇತ್ಯಾದಿಗಳೇ ಇಲ್ಲಿ ಪ್ರಧಾನ ಪಾತ್ರ ವಹಿಸುವ ಪರ್ವ ಕಾಲವಿದು. ಇದು ಭಾರತೀಯ ರಾಜಕಾರಣದ ಈಗಿನ ಸ್ಥಿತಿ ಮತ್ತು ಗತಿ.

ದೇಶವಿಡೀ ವ್ಯಾಪಿಸಿರುವ ಈ ಪರಿಸ್ಥಿತಿಗೆ ಕರ್ನಾಟಕವೂ ಹೊರತಾಗಿಲ್ಲ. ಇನ್ನೂ ಯಾವ ಪಕ್ಷದಲ್ಲಿದ್ದೇನೆ ಎಂದು ತಮಗೇ ಅರಿವಿಲ್ಲದಿರುವ ನಾಯಕರೂ ಅಥವಾ ‘ನಾಯಕರು’ ಅಂತ ಕರೆಸಿಕೊಳ್ಳುವವರೂ ಇರಬಹುದು. ಪರಿಣಾಮವೇನು? ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಛಾಪು ಮೂಡಿಸಬಲ್ಲ, ಸಮರ್ಥವಾಗಿ ಕ್ಷೇತ್ರೋದ್ಧಾರ ಮಾಡುವ ಕಳಕಳಿಯುಳ್ಳ, ರಾಜ್ಯದ ಧ್ವನಿಯನ್ನು ಕೇಂದ್ರದಲ್ಲಿ ಎತ್ತಿ, ರಾಜ್ಯಕ್ಕಾಗಿ ದುಡಿಯಬಲ್ಲ ಸಮರ್ಥ ನಾಯಕರು ಯಾರು ಎಂದು ಹಗಲಲ್ಲೂ ಟಾರ್ಚ್ ಲೈಟ್ ಹಾಕಿ ಹುಡುಕುವಂತಹ ಪರಿಸ್ಥಿತಿ ಉದ್ಭವಿಸಿದೆ.

ಅಭ್ಯರ್ಥಿಗಳ ಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ. ಅದನ್ನು ಒತ್ತಟ್ಟಿಗಿರಿಸಿ, ಯಾವುದೇ ಕ್ಷೇತ್ರ ತೆಗೆದುಕೊಂಡರೂ, ಸಾಧನೆಯ ಆಧಾರದಲ್ಲಿ ನಾವು ಓಟು ಕೊಡಬಹುದು ಎಂದು ಯಾವ ಜನನಾಯಕನನ್ನು ಪರಿಗಣಿಸುತ್ತೀರಿ? ಕರ್ನಾಟಕದಲ್ಲಿ ರಾಜ್ಯದ ಪರವಾಗಿ ದಿಲ್ಲಿಯಲ್ಲಿ ಸಮರ್ಥವಾಗಿ ವಾದ ಮಂಡಿಸಬಲ್ಲ ನಾಯಕರು ಯಾರಿದ್ದಾರೆ ಎಂಬ ಬಗ್ಗೆ ಒಂದಿಷ್ಟು ಯೋಚಿಸಿ ನೋಡಿ. ಯಾರ ಹೆಸರಾದರೂ ನೆನಪಾಗುತ್ತದೆಯೇ? ಹಾಗಿದ್ದರೆ ಐದಾರು ಕೋಟಿ ಕನ್ನಡಿಗರಲ್ಲಿ, ಎರಡನೇ ಪೀಳಿಗೆಯ ಪ್ರಭಾವೀ ನಾಯಕರ ಕೊರತೆ ಇದೆ ಎಂಬುದು ಎದ್ದು ಕಾಣುತ್ತಿರುವುದು ಈಗ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ಗಳು ಸೂಕ್ತ ಅಭ್ಯರ್ಥಿಗಳಿಗಾಗಿ ಪರದಾಡುತ್ತಿರುವುದನ್ನು ನೋಡಿದರೆ ವೇದ್ಯವಾಗುವ ಸಂಗತಿ.

ಪಕ್ಷಗಳೆಲ್ಲ ಕಲಸು ಮೇಲೋಗರವಾಗಿಬಿಟ್ಟಿವೆ. ಮೊನ್ನೆ ಕಾಂಗ್ರೆಸ್ಸಲ್ಲಿದ್ದವರು ಇಂದು ಬಿಜೆಪಿಯಲ್ಲಿ ಕಾಣಿಸಿಕೊಂಡಿದ್ದರೆ, ಜೆಡಿಎಸ್‌ನಲ್ಲಿದ್ದವರು ಕಾಂಗ್ರೆಸಿನಲ್ಲಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಪಕ್ಷ ನೋಡಿ ಓಟು ಹಾಕುವ ಯುಗ ಅಂತ್ಯವಾಗುವ ಹಂತದಲ್ಲಿದೆಯೇ? ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಅರ್ಹತೆ ಹಲವರಲ್ಲಿ ಇದ್ದರೂ ಅವರು ಪ್ರಚಾರದಲ್ಲಿಲ್ಲ ಎಂಬುದು ಒಂದು ಅಂಶವಾದರೆ, ಪಕ್ಷಗಳು ಕೂಡ ಗೆಲ್ಲುವ ಅಭ್ಯರ್ಥಿಗೆ ತಡಕಾಡಿ ಬಸವಳಿಯುತ್ತಿವೆ ಎಂಬುದು ಮತ್ತೊಂದು ಅಂಶ.

ಲೋಕಸಭೆಗೆ ಯಾರು ಸ್ಪರ್ಧಿಸಬಹುದು ಎಂದು ಚಿಂತನೆಗೆ ಹಚ್ಚುವಾಗ, ಜನಾರ್ದನ ಪೂಜಾರಿ, ದೇವೇಗೌಡ, ವೀರಪ್ಪ ಮೊಯಿಲಿ, ಧನಂಜಯ ಕುಮಾರ್, ಬಂಗಾರಪ್ಪ, ಪ್ರಹ್ಲಾದ ಜೋಷಿ, ಅನಂತಕುಮಾರ್, ಬಸವರಾಜ ಪಾಟೀಲ್ ಸೇಡಂ, ಜಾಫರ್ ಶರೀಫ್, ಸದಾನಂದ ಗೌಡರೇ ಮುಂತಾದ ಹಳೇ ಹುಲಿಗಳ ಹೆಸರಷ್ಟೇ ನೆನಪಿಗೆ ಸುಳಿಯುತ್ತವಾದರೂ, ಅವರೆಲ್ಲರೂ ಸಂಸದರಾಗಿ ಸಾಧಿಸಿದ್ದೇನು ಎಂದು ಯೋಚಿಸಿದರೆ ಅವರಲ್ಲಿ ಕೆಲವರ ಹೆಸರಾದರೂ ಜನರಿಗೆ ಮರೆತುಹೋಗಬಹುದು! ಅದರ ಮಧ್ಯೆ ಪಕ್ಷದ ಆಂತರಿಕ ರಾಜಕೀಯಗಳು, ವೈರುಧ್ಯಗಳು ಸಮರ್ಥ ಅಭ್ಯರ್ಥಿಗೆ ಟಿಕೆಟ್ ತಪ್ಪಿಸುವಲ್ಲಿ ನಿರತವಾಗಿವೆ. ಇಲ್ಲಿ ರಾಜ್ಯದ ಹಿತಕ್ಕಿಂತ ಪಕ್ಷದ ಹಿತ, ಸ್ವಹಿತಗಳೇ ಮುಖ್ಯವಾಗಿಬಿಡುವುದು ವಿಪರ್ಯಾಸ.

ಹೀಗಾಗಿ ಇಂದು, ರಾಜ್ಯದ ಅಭಿವೃದ್ಧಿಯ ಏಕೈಕ ಗುರಿಯಿರುವ ಛಾತಿ ಇರುವ ನಾಯಕತ್ವದ ಅಗತ್ಯತೆ ಕರ್ನಾಟಕದಲ್ಲಿ ಹಿಂದೆಂದಿಗಿಂತ ಹೆಚ್ಚು ಅನಿವಾರ್ಯವಾಗುತ್ತಿದೆ. ನಮ್ಮಲ್ಲೇನಾಗುತ್ತಿದೆ ಎಂದರೆ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷ ರಾಜ್ಯದಲ್ಲಿ ವಿರೋಧ ಪಕ್ಷದಲ್ಲಿರುತ್ತದೆ, ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಪಕ್ಷ ಕೇಂದ್ರದಲ್ಲಿ ವಿರೋಧ ಪಕ್ಷ ಸ್ಥಾನದಲ್ಲಿ ಕುಳಿತಿರುತ್ತದೆ. ಹಿಂದೆ ಎರಡೂ ಅಧಿಕಾರ ಕೇಂದ್ರಗಳಲ್ಲಿ ಕಾಂಗ್ರೆಸ್ ಇದ್ದರೂ, ಆ ಬಳಿಕ ಕಾಂಗ್ರೆಸ್ಸೇತರ ಸರಕಾರಗಳು ಬಂದಾಗ ಆಗಿದ್ದು ಹೀಗೆಯೇ. ಈ ಬಾರಿಯೂ ಇದೇ ಸಂಪ್ರದಾಯ ಅನೂಚಾನವಾಗಿ ಮುಂದುವರಿದಿದೆ. ಹೀಗಾಗಿ ಕೇಂದ್ರದಿಂದ ಬರಬೇಕಾದ ನಿಧಿಯಲ್ಲಿಯೂ ರಾಜಕೀಯ ನಡೆಯುತ್ತದೆ, ಎಲ್ಲ ರೀತಿಯಲ್ಲಿಯೂ ರಾಜ್ಯಕ್ಕೆ ಅನ್ಯಾಯವಾಗುತ್ತಿರುತ್ತದೆ. ಕೇಂದ್ರವೇನಾದರೂ ನಿಧಿ ಬಿಡುಗಡೆ ಮಾಡಲು ಮನಸ್ಸು ಮಾಡಿತು ಎಂದಿಟ್ಟುಕೊಳ್ಳಿ, ಅದರ ಕ್ರೆಡಿಟ್ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬೇರೆ ಪಕ್ಷದ ಸರಕಾರಕ್ಕೆ ಹೋಗಬಹುದು ಎಂಬ ಆತಂಕ ಅಲ್ಲಿ ಮನೆಮಾಡಿರುತ್ತದೆ. ಹೀಗಾಗಿ ಅಭಿವೃದ್ಧಿಯ ಕನಸು ಕನಸಾಗಿಯೇ ಉಳಿಯುತ್ತದೆ. ಹಿಂದಿನ ಮತ್ತು ಇತ್ತೀಚೆಗಿನ ಬಜೆಟ್‌ನಲ್ಲಿ ಆಗಿದ್ದೂ ಇದೇ ಅಲ್ಲವೇ?

ಆದರೆ ತಮಿಳುನಾಡಿನಲ್ಲಿ ನೋಡಿ… ಕೇಂದ್ರದಲ್ಲಿ ಯಾರು ಅಧಿಕಾರ ಹಿಡಿಯುತ್ತಾರೋ, ಅವರ ಹಿಂದೆ ರಾಜ್ಯದ ಆಡಳಿತಾರೂಢರು ಸೇರಿಕೊಂಡು ರಾಜ್ಯ ಅಭಿವೃದ್ಧಿಯಲ್ಲಿ ತೊಡಗುತ್ತಾರೆ. ಅಲ್ಲಿ ಆಯ್ಕೆಯಾದ ಯಾರೇ ಆದರೂ ರಾಜ್ಯದ ಉದ್ಧಾರದ ಏಕೈಕ ಉದ್ದೇಶದಿಂದ ಕೇಂದ್ರದಲ್ಲಿ ಯಾರು ಅಧಿಕಾರ ಹಿಡಿಯುತ್ತಾರೋ, ಅವರೊಂದಿಗೆ ಸೇರಿಕೊಳ್ಳುತ್ತಾರೆ. ತಮ್ಮ ರಾಜ್ಯಕ್ಕೆ ಕೋಟಿ ಕೋಟಿ ನಿಧಿಯನ್ನು ಹರಿಸುತ್ತಾರೆ. ಈ ಕಾರಣಕ್ಕೆ ನೆನಪಾಗುವುದು ಪ್ರಾದೇಶಿಕ ಪಕ್ಷಗಳ ಅಗತ್ಯತೆ. ಅಲ್ಲಿ 2004ರ ಚುನಾವಣೆಗಳಲ್ಲಿ ಹೆಚ್ಚು ಸ್ಥಾನ ಪಡೆದುಕೊಂಡ ಡಿಎಂಕೆ, ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಸಾಕಷ್ಟು ಸಚಿವ ಪಟ್ಟವನ್ನೂ ಗಿಟ್ಟಿಸಿಕೊಂಡಿತು. ಅದಕ್ಕೂ ಮುಂಚೆ ಜಯಲಲಿತಾ ನೇತೃತ್ವದ ಎಐಎಡಿಎಂಕೆಯು ಎನ್‌ಡಿಎ ಜೊತೆ ಸೇರಿಕೊಂಡು ತನ್ನ ರಾಜ್ಯಕ್ಕಾಗಿ ಸಾಕಷ್ಟು ನಿಧಿ ಬಾಚಿಕೊಂಡಿತು. ಒಟ್ಟಿನಲ್ಲಿ ತಮಿಳುನಾಡು ಜನತೆ ಸುಖಿಗಳಾದರು.

ಒಟ್ಟಿನಲ್ಲಿ ಈ ಬಾರಿಯ ಚುನಾವಣೆಯು ಒಂದು ವರ್ಚಸ್ವೀ ನಾಯಕರ ಗಡಣವಿರುವ ಕಾಡಾಕಾಡಿ ಸ್ಪರ್ಧೆ ಎಂದು ಹೇಳಲಾಗದು. ಏನಿದ್ದರೂ ಅದೃಷ್ಟದಾಟ. ಇಲ್ಲಿ ಸಾಧನೆಯನ್ನು ಪಣವಾಗಿಟ್ಟು ಯಾರಾದರೂ ಕಣಕ್ಕಿಳಿಯುತ್ತಾರೆಯೇ? ಖಂಡಿತಾ ಇಲ್ಲ. ತಮ್ಮ ರಾಜಕೀಯ ಅದೃಷ್ಟ ಪರೀಕ್ಷೆಗೆ ಇಳಿಯುವ ಹೊಸಬರಿಗೆ ಇದು ಅತ್ಯುತ್ತಮ ವೇದಿಕೆಯಾಗಿ ಮಾರ್ಪಟ್ಟಿದೆಯಷ್ಟೆ. ಈ ಮಾತಿಗೆ ಕಾರಣವೆಂದರೆ, ಕೆಲವೊಂದಷ್ಟು ಕ್ಷೇತ್ರಗಳನ್ನು ಹೊರತುಪಡಿಸಿ, ಹೆಚ್ಚಿನ ಕ್ಷೇತ್ರಗಳಲ್ಲಿ ಸಾಧನೆಯ ಆಧಾರವಿಲ್ಲದೆ, ಚುನಾವಣಾ ಕಣಕ್ಕೆ ಧುಮುಕುವವರೇ ಹೆಚ್ಚು. ಅಷ್ಟು ಮಾತ್ರವೇ? ವಿಧಾನಸಭೆ ಚುನಾವಣೆಯಲ್ಲಿ ಮತದಾರರಿಂದ ತಿರಸ್ಕೃತರಾದವರು, ಆ ಪಕ್ಷದಿಂದ ಈ ಪಕ್ಷಕ್ಕೆ ಹಾರುತ್ತಾ ಕಾಲ ಕಳೆಯುತ್ತಿರುವವರು, ಯಾರಪ್ಪಾ ಇದು, ಇಷ್ಟರವರೆಗೆ ಹೆಸರು ಕೇಳಿಯೇ ಇಲ್ಲವಲ್ಲ ಎಂಬ ಭಾವನೆ ಬರುವಂತೆ ಮಾಡುವವರು, ತಮ್ಮ ತಂದೆ-ತಾಯಿಯ ರಾಜಕೀಯ ಸಾಧನೆ, ಹಣಬಲ, ತೋಳ್ಬಲ ಆಧಾರದಲ್ಲಿ ಅದೃಷ್ಟ ಪರೀಕ್ಷೆಗೆ ಹೊರಟವರ ದಂಡೇ ಹೆಚ್ಚು.

ಸಂಸತ್ತಿಗೆ ಹೊಸ ಮುಖಗಳು, ಯುವ ಮುಖಗಳು ಈ ಬಾರಿ ರಾಜ್ಯದಿಂದ ಹೊರಡುವ ನಿರೀಕ್ಷೆ ಇದೆಯಾದರೂ ಅನುಭವದ ಕೊರತೆ ಮತ್ತು ಪಕ್ಷ ರಾಜಕೀಯಗಳು ಅವರನ್ನು ಕಟ್ಟಿ ಹಾಕದಿದ್ದರೆ, ರಾಜ್ಯಕ್ಕೆ ದೂರದರ್ಶಿತ್ವವುಳ್ಳ, ಪಕ್ಷಭೇದ ಮರೆತು ರಾಜ್ಯದ ಅಭಿವೃದ್ಧಿಯ ಔದಾರ್ಯ ಮನೋಭಾವವಿರುವ ಹೊಸ ಸಂಸದರಿಂದ ಹೊಸ ಭರವಸೆ ನಿರೀಕ್ಷಿಸಬಹುದು. ಇಲ್ಲವಾದರೆ, ‘ಇವರದ್ದು ಬರೀ ಹಾಳು ರಾಜಕೀಯ’ ಅಂದುಕೊಂಡು ಎಂದಿನಂತೆಯೇ ಸುಮ್ಮನಾಗಿಬಿಡಬೇಕಾಗುತ್ತದೆ. ಅಷ್ಟೆ.
[ವೆಬ್ ದುನಿಯಾದಲ್ಲಿ ಪ್ರಕಟವಾದ ಲೇಖನ]

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

View Comments

  • ಸರ್,

    ನಮ್ಮ ರಾಜ್ಯದ ಉದ್ದಾರಕ್ಕಾದರೂ ಒಂದು ನಿಯತ್ತಿನಿಂದ ಕೆಲಸ ಮಾಡುವ ಪ್ರಾದೇಶಿಕ ಪಕ್ಷದ ಅಗತ್ಯವಿದೆ...

    • ಶಿವು ಅವರೆ,
      ಖಂಡಿತವಾಗಿ ಅದರ ಅಗತ್ಯ ಈಗ ಕಾಣಿಸ್ತಾ ಇದೆ. ಯಾಕಂದ್ರೆ ಇನ್ನೇನಿದ್ರೂ ಚೌಚೌ ಸರಕಾರಗಳ ಕಾಲ. ಹೀಗಾಗಿ ಅದು ತೀರಾ ಅಗತ್ಯ.
      ಧನ್ಯವಾದ.

  • nimma lekhana nanage istavayitu.vidyavantaru jagrutaragi bereyavarannu sari darige tarabeku

  • @ ಹನುಮೇಶ್,
    ಲೇಖನ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದ. ನಿಮಗೆ ಬ್ಲಾಗು ಇದೆಯೇ? ಇಲ್ಲವಾದಲ್ಲಿ ಮಾಡಿಕೊಳ್ಳಿ ಅಂತ ಸಲಹೆ.

Recent Posts

ಎಐ ವೈಶಿಷ್ಟ್ಯಗಳ realme GT 7 Pro ಬಿಡುಗಡೆ: ಬೆಲೆ ಎಷ್ಟು? ವೈಶಿಷ್ಟ್ಯಗಳೇನು? ಇಲ್ಲಿದೆ ಪೂರ್ಣ ಮಾಹಿತಿ

ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್‌ ಇರುವ ಬಹುನಿರೀಕ್ಷಿತ…

3 weeks ago

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

3 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

3 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

4 months ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

5 months ago

ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

10 months ago