Categories: myworldOpinion

ಕೋಮುವಾದಿಗಳು, ಜಾತ್ಯತೀತರು ಮತ್ತು ಪಕ್ಷಾಂತರಿಗಳು!

ರಾಜಕೀಯ ಕ್ಷೇತ್ರದಲ್ಲಿ ಹಿಂದಿನಿಂದಲೂ ಅಸ್ತಿತ್ವದಲ್ಲಿದ್ದ, ಅತ್ಯಂತ ಹೆಚ್ಚು ಟೀಕೆಗೆ, ನಿಂದನೆಗೆ, ವ್ಯಂಗ್ಯಕ್ಕೆ, ದೂಷಣೆಗೆ, ಛೀ-ಥೂಗಳಿಗೆ ಗುರಿಯಾಗಿದ್ದ ಸಂಪ್ರದಾಯವೊಂದು ಇತ್ತೀಚಿನ ದಿನಗಳಲ್ಲಿ ಮತ್ತಷ್ಟು ಮಹತ್ವ ಪಡೆದುಕೊಳ್ಳುತ್ತಿದೆ. ಅದೇ ಪಕ್ಷಾಂತರ. ಅಲ್ಲಿಂದಿಲ್ಲಿಗೆ ಜಿಗಿಯುತ್ತಾ ರಾಜಕೀಯದಲ್ಲಿ ಪಕ್ಷ-ಸಿದ್ಧಾಂತಗಳೆಲ್ಲ “ಹೇಳಲು ಮಾತ್ರ” ಎಂಬ ಭಾವನೆ ಮೂಡಿಸುವಲ್ಲಿ ಈ ಪಕ್ಷಾಂತರಿಗಳ ಪಾತ್ರ ಮಹತ್ವದ್ದು. ಯಾವ ರಾಜಕೀಯ ಪಕ್ಷದಲ್ಲಿಯೂ ತತ್ವ ಸಿದ್ಧಾಂತಗಳೆಂಬ ಪದಗಳಿಲ್ಲ, ರಾಜಕೀಯ ಕ್ಷೇತ್ರವು “ವಸುಧೈವ ಕುಟುಂಬಕಂ” ಎಂಬಂತೆ. ಎಲ್ಲರೂ ಇಲ್ಲಿ ಒಂದೇ, ಜಾತಿ-ಮತ ಭೇದಗಳಿಲ್ಲ. ತಪ್ಪು-ಒಪ್ಪುಗಳ ಮಧ್ಯೆ ವ್ಯತ್ಯಾಸವಿಲ್ಲ, ಪ್ರಾಮಾಣಿಕರು-ಅಪ್ರಾಮಾಣಿಕರಿಗೆ ಭಿನ್ನತೆ ಇಲ್ಲ, ಪಕ್ಷದ್ರೋಹಿಗಳು-ಪಕ್ಷ ನಿಷ್ಠರ ಮಧ್ಯೆ ಯಾವುದೇ ವೈಪರೀತ್ಯಗಳಿಲ್ಲ. ಇಂತದ್ದೊಂದು ಭಾವನೆ ಮತದಾರರ ಮನದಲ್ಲಿ ಅಚ್ಚಳಿಯದೆ ಮೂಡುವಂತಾಗಿದೆ.

ಮಾಜಿ ಮುಖ್ಯಮಂತ್ರಿ, ರಾಜ್ಯದಲ್ಲಿ ಹಲವು ಪಕ್ಷಗಳ ಮುಖಂಡರಾಗಿ ಮೆರೆದು ತಮ್ಮತನವನ್ನು ಕಾಯ್ದುಕೊಂಡ ಎಸ್.ಬಂಗಾರಪ್ಪ ಅವರ ಇತಿಹಾಸವೇ ನಮ್ಮ ಕಣ್ಣ ಮುಂದಿದೆ. ಕಾಂಗ್ರೆಸ್, ಕ್ರಾಂತಿರಂಗ, ಕರ್ನಾಟಕ ಕಾಂಗ್ರೆಸ್ ಪಾರ್ಟಿ, ಬಿಜೆಪಿ, ಸಮಾಜವಾದಿ ಪಕ್ಷ… ಹೀಗೆ ಎಲ್ಲ ಪಕ್ಷಗಳಾಗಿ ಇದೀಗ “ಮತ್ತೊಂದು ಬಾರಿ” ಮರಳಿದ್ದಾರೆ ಕಾಂಗ್ರೆಸಿಗೆ. ಅವರ ವರ್ಣಮಯ ಅಲ್ಲಲ್ಲ ವೈವಿಧ್ಯಮಯ ರಾಜಕೀಯ ಜೀವನದ ತಿರುಳೇ ಅದು.

ಇಂಥದ್ದೇ ಸಂಪ್ರದಾಯಕ್ಕೆ ಹೆಚ್ಚು ಕಾವು ದೊರೆತಿದ್ದು ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರಕಾರ ಮೊದಲ ಬಾರಿಗೆ ಅಸ್ತಿತ್ವಕ್ಕೆ ಬಂದಾಗ. ಅಧಿಕಾರಕ್ಕಾಗಿ ಅತ್ತಿಂದಿತ್ತ ಜಿಗಿಯುವ ಸಂಪ್ರದಾಯ ಅಂದಿನಿಂದ ಇಂದಿನವರೆಗೂ ‘ಆಪರೇಶನ್ ಕಮಲ’ ಹೆಸರಿನಲ್ಲಿ ಮುಂದುವರಿದಿದೆ. ಅಲ್ಲಿ ಬೆಲೆ ಸಿಗಲಿಲ್ಲ ಎಂಬ ಕಾರಣಕ್ಕೆ ಇಲ್ಲಿಗೆ ಬಂದವರ ಮಧ್ಯೆ ತೀವ್ರ ಗೊಂದಲದಲ್ಲಿ ಸಿಲುಕಿರುವುದು ಕರ್ನಾಟಕದ ಮತದಾರರು. ಈಗಲೂ ಕೂಡ, ಚುನಾವಣಾ ಕಣದಲ್ಲಿರುವ ಹೆಚ್ಚಿನ ಮುಖ ಪರಿಚಯ ಮತದಾರರಿಗಿದೆ. ಆದರೆ “ಈಗ” ಯಾರು, ಯಾವ ಪಕ್ಷದಲ್ಲಿದ್ದಾರೆ ಎಂಬುದೇ ಗೊಂದಲದ ಸಂಗತಿ. ಚುನಾವಣೆ ಸಮೀಪಿಸುತ್ತಿರುವಂತೆಯೇ ವಿಧಾನಸಭೆಗೆ ರಾಜೀನಾಮೆ ನೀಡಿ ಪಕ್ಷಾಂತರ ಮಾಡುತ್ತಾ ಇರುವವರ ಸಂಖ್ಯೆಯೂ ಹೆಚ್ಚಾಗತೊಡಗಿದೆ.

ಕಟ್ಟಾ “ಜಾತ್ಯತೀತ”ವಾದಿಗಳು ನಾವು ಎಂದು ಕೊಳ್ಳುತ್ತಿದ್ದ ಕಾಂಗ್ರೆಸ್ ನಾಯಕರು ಕೆಲವೇ ಕ್ಷಣದ ಹಿಂದಿನವರೆಗೂ “ಕೋಮುವಾದಿ” ಎಂದು ತೆಗಳುತ್ತಿದ್ದ ಪಕ್ಷದಲ್ಲಿ ದಿಢೀರ್ ಆಗಿ “ಹಿರಿಯ ಮುಖಂಡ”ರಾಗಿಬಿಡುತ್ತಾರೆ! ಕಾಂಗ್ರೆಸಿಗೆ ಗುಡ್ ಬೈ ಹೇಳಿದ್ದ ಮತ್ತೆ ಕೆಲವರು, “ಕೋಮುವಾದಿ” ಪಕ್ಷ ಬದಲಾಗಲೇ ಇಲ್ಲ ಎನ್ನುತ್ತಾ ಮಾತೃಪಕ್ಷಕ್ಕೆ ಮರಳುವುದನ್ನು ಕೂಡ ಭರ್ಜರಿಯಾಗಿಯೇ ಆಚರಿಸಿಕೊಂಡುಬಿಡುತ್ತಾರೆ. ಜಾತ್ಯತೀತ ಜನತಾ ದಳವನ್ನು ‘ತಂದೆ ಮಕ್ಕಳ ಪಕ್ಷ’ ಎನ್ನುತ್ತಾ ದೂರುತ್ತಿದ್ದವರಿಗೆ, “ಮಣ್ಣಿನ ಮಕ್ಕಳ ಕಲ್ಯಾಣಕ್ಕೆ, ಅಲ್ಪಸಂಖ್ಯಾತರ ರಕ್ಷಣೆಗೆ ಇರುವ ಏಕೈಕ ಪಕ್ಷವಿದು” ಎಂಬುದು ದಿಢೀರ್ ಆಗಿ ‘ಹೊಳೆದು’ಬಿಡುತ್ತದೆ!

ಒಟ್ಟಿನಲ್ಲಿ ಪಕ್ಷದಿಂದ ಪಕ್ಷಕ್ಕೆ ಜಿಗಿಯುವವರಿಂದಾಗಿ ತತ್ವ-ಸಿದ್ಧಾಂತವುಳ್ಳ ನಿಷ್ಠಾವಂತ ನಾಯಕರ ಕೊರತೆ ಎದ್ದುಗಾಣುತ್ತಿದೆ. ಈ ಜಿಗಿತಗಾರರನ್ನು ಅತೀ ಹೆಚ್ಚು ಬುಟ್ಟಿಗೆ ಹಾಕಿಕೊಂಡಿದ್ದೆಂದರೆ ಆಡಳಿತಾರೂಢ ಬಿಜೆಪಿ. ಬೇರೆ ಪಕ್ಷಗಳ ಹಲವು ಶಾಸಕರು ತಮ್ಮ ಶಾಸಕತ್ವವನ್ನು ತೊರೆದು, ಬಿಜೆಪಿ ಸೇರಿ, ಬಿಜೆಪಿ ಟಿಕೆಟಿನಲ್ಲಿ ವಿಧಾನಸಭೆಗೆ ಸ್ಪರ್ಧಿಸಿದ್ದಾರೆ, ಸ್ಪರ್ಧಿಸಲು ಹವಣಿಸುತ್ತಿದ್ದಾರೆ ಮತ್ತೆ ಕೆಲವರು ಲೋಕಸಭೆ ಟಿಕೆಟಿಗಾಗಿಯೂ ಈ ಹೈಜಂಪ್ ಮಾಡಿದ್ದಾರೆ. ಬಿಜೆಪಿ ಕೈಯಲ್ಲಿ ರಾಜ್ಯದಲ್ಲಂತೂ ಅಧಿಕಾರವಿದೆ, ರಾಷ್ಟ್ರದಲ್ಲಿಯೂ ಏನಾದರೂ ಇದೇ ರೀತಿ ಸಿಕ್ಕಿಬಿಟ್ಟರೆ ಎಂಬ ಆಶಾವಾದದಿಂದ ಈ ‘ಹೈಜಂಪರ್’ಗಳು ಬಿಜೆಪಿಯತ್ತ ಹೆಚ್ಚು ಹೆಚ್ಚು ಹಾರುತ್ತಿದ್ದಾರೆ.

ಅತ್ತ ಕಡೆಯಿಂದ ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿ ಕೂಡ ಈ ರೀತಿಯಲ್ಲಿ “ಕೊಡು-ಕೊಳ್ಳುವಿಕೆ” ನಡೆದಿದೆ. ಅಲ್ಲಿ ಅಸಮಾಧಾನಗೊಂಡವರು ಇಲ್ಲಿಗೆ, ಇಲ್ಲಿ ಕೋಪಗೊಂಡವರು ಅಲ್ಲಿಗೆ ಲಾಂಗ್ ಜಂಪ್ ಕೈಗೊಂಡಿದ್ದಾರೆ.

ಅದರಲ್ಲಿ ತೀರಾ ಅಚ್ಚರಿ ಹುಟ್ಟಿಸುವಂತಹ ಕೆಲವು ಹೈ ಜಂಪ್‌ಗಳು ಕೂಡ ಇವೆ. ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿ ಸ್ಪರ್ಧಿಸಿ ಜಯಗಳಿಸಿದ್ದ ಬಂಗಾರಪ್ಪ, ಮತ್ತೆ ಸಮಾಜವಾದಿಯೂ ಆಗಿ ಸಂಸದರಾಗಿ, ಇದೀಗ ಮತ್ತೆ ಕಾಂಗ್ರೆಸ್ ಸಂಸದರಾಗಲು ಹವಣಿಸುತ್ತಿದ್ದಾರೆ.

ಇನ್ನು, 1975ರಲ್ಲಿ ತುರ್ತು ಪರಿಸ್ಥಿತಿ ಹೇರಿದ ಬಳಿಕ ಉತ್ತರ ಭಾರತದಲ್ಲಿ ಕಾಂಗ್ರೆಸ್ ಪಕ್ಷವು ನೆಲಕಚ್ಚಿದ್ದಾಗ 1978ರ ಚುನಾವಣೆಯಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಗಾಗಿ “ಸುರಕ್ಷಿತ ನೆಲೆ” ರೂಪದಲ್ಲಿ ಚಿಕ್ಕಮಗಳೂರು ಕ್ಷೇತ್ರ ತೆರವುಗೊಳಿಸಿದ್ದ, “ನಿಷ್ಠಾವಂತ ಕಾಂಗ್ರೆಸಿಗ”, ರಾಜ್ಯದ ಮಾಜಿ ಸಚಿವ ಡಿ.ಬಿ.ಚಂದ್ರೇಗೌಡ ಈಗ ಬಿಜೆಪಿ ಅಭ್ಯರ್ಥಿ! ಅವರು ಎದುರುಹಾಕಿಕೊಂಡಿರುವುದು ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸಿನ ಹಿರಿಯ ಮುಖಂಡ, ಮಾಜಿ ಕೇಂದ್ರ ಸಚಿವ ಸಿ.ಕೆ.ಜಾಫರ್ ಶರೀಫ್ ಅವರನ್ನು. ಇತ್ತೀಚೆಗೆ ಶರೀಫ್ ಕೂಡ ಪಕ್ಷ ಬದಲಿಸುತ್ತಾರೆ ಎಂಬ ಊಹಾಪೋಹಗಳಿದ್ದದ್ದಂತೂ ನಿಜ.

ಬಿಜೆಪಿಯ ರಣಾಂಗಣಕ್ಕೆ ಹೊಸ ಸೇರ್ಪಡೆ ಎಂದರೆ ಮಾಜಿ ಶಾಸಕ, ಕಾಂಗ್ರೆಸಿಗ ವಿ.ಸೋಮಣ್ಣ. ಅವರ ಜಂಪಿಂಗ್ ಇತಿಹಾಸವೂ ತೀರಾ ದೊಡ್ಡದು. ಜನತಾ ಪಾರ್ಟಿ ಮೂಲಕ ವಿಧಾನ ಪರಿಷತ್ ಪ್ರವೇಶಿಸಿದ್ದ ಅವರು, ಆ ಬಳಿಕ ಸಮಾಜವಾದಿ ಜನತಾ ದಳ ಸೇರಿದ್ದರು. ನಂತರ ಎಚ್.ಡಿ.ದೇವೇಗೌಡರನ್ನು ‘ಅಪ್ಪಾಜಿ’ ಎಂದೆ ಕರೆಯುತ್ತಿದ್ದ ಸೋಮಣ್ಣ ಜನತಾ ದಳದಲ್ಲಿ ಸುದೀರ್ಘ ಕಾಲ ಇದ್ದರು, ಮಂತ್ರಿಯೂ ಆದರು. 2000ರಲ್ಲಿ ದೇವೇಗೌಡರೊಂದಿಗೆ ಮುನಿಸಿಕೊಂಡು ಕಾಂಗ್ರೆಸ್ ಸೇರಿದ್ದರು.

ಚಂದ್ರೇಗೌಡ ಅವರೊಂದಿಗೆ ಬಿಜೆಪಿ ಸೇರಿದ ಕಾಂಗ್ರೆಸ್ ಮಾಜಿ ಸಚಿವ ಎಲ್.ಶಿವರಾಮೇಗೌಡರಿಗೆ ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಟಿಕೆಟ್ ಸಿಕ್ಕಿದೆ. ಅಲ್ಲಿ ಅಂಬರೀಶ್ ಅವರು ಕಾಂಗ್ರೆಸ್ ಹಾಲಿ ಸಂಸದರಾಗಿದ್ದು, ಅವರನ್ನು ಸೆಳೆಯಲು ಬಿಜೆಪಿ ಪ್ರಯತ್ನಿಸಿತ್ತು.

ಉತ್ತರ ಕರ್ನಾಟಕದ ಕಾಂಗ್ರೆಸ್ ನೇತಾರರಾಗಿದ್ದ ಗುರುಪಾದಪ್ಪ ನಾಗಮಾರಪಲ್ಲಿ ಅವರು ಕೂಡ ಜೆಡಿಎಸ್‌ನಲ್ಲಿಯೂ ಅಧಿಕಾರದ ಸವಿಯುಂಡವರು. ಈಗ ಬಿಜೆಪಿ ತೆಕ್ಕೆಯಲ್ಲಿ ಸೇರಿಕೊಂಡಿದ್ದಾರೆ ಮತ್ತು ಬೀದರಿನಲ್ಲಿ ಕಾಂಗ್ರೆಸ್ ಮಾಜಿ ಮುಖ್ಯಮಂತ್ರಿ ಎಂ.ಧರ್ಮ ಸಿಂಗ್ ವಿರುದ್ಧ ಲೋಕಸಭೆಗೆ ಸ್ಪರ್ಧಿಸುತ್ತಿದ್ದಾರೆ. ಅವರ ಮಗ ಸೂರ್ಯಕಾಂತ ನಾಗಮಾರಪಲ್ಲಿ ಕೂಡ ಬೀದರ್ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ

ಇನ್ನುಳಿದಂತೆ, ಕಾಂಗ್ರೆಸ್ ಮತ್ತು ವಿಧಾನಸಭಾ ಸದಸ್ಯತ್ವ ತ್ಯಜಿಸಿ ಬಿಜೆಪಿ ತೆಕ್ಕೆಗೆ ಬಂದವರೆಂದರೆ ನಟ, ನಿರ್ಮಾಪಕ ಮತ್ತು ರಿಯಲ್ ಎಸ್ಟೇಟ್ ಉದ್ಯಮಿ ಸಿ.ಪಿ.ಯೋಗೇಶ್ವರ್. ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ನ ಲೋಕಸಭಾ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಹಾಲಿ ಸಂಸದೆ ತೇಜಸ್ವಿನಿ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ವಿಶೇಷವೇನೆಂದ್ರೆ, ಇದೇ ಯೋಗೇಶ್ವರ್ ಬೆಂಗಳೂರು ಹೊರವಲಯದ ಮೆಗಾ ಸಿಟಿ ಯೋಜನೆಯಲ್ಲಿ ಫ್ಲ್ಯಾಟ್ ನೀಡುವುದಾಗಿ ಜನರನ್ನು ನಂಬಿಸಿ ವಂಚಿಸಿದ್ದಾರೆ ಎಂದು ಇದೇ ಬಿಜೆಪಿಯು ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿತ್ತು. ಈಗ ಎಲ್ಲವೂ ಠುಸ್.

ಬಿಜೆಪಿಯಿಂದ ಕಾಂಗ್ರೆಸ್ ತೆಕ್ಕೆಗೆ ಜಾರಿಕೊಂಡಿದ್ದೆಂದರೆ ಬೆಂಗಳೂರಿನ ಮಾಜಿ ಪೊಲೀಸ್ ಅಧಿಕಾರಿ, ಬಿಜೆಪಿ ಸಂಸದರೂ ಆಗಿದ್ದ ಎಚ್.ಟಿ.ಸಾಂಗ್ಲಿಯಾನ. ಬೆಂಗಳೂರು ಉತ್ತರದಲ್ಲಿ ಅವರು ಬಿಜೆಪಿ ಟಿಕೆಟಿನಲ್ಲಿ ಕಳೆದ ಬಾರಿ ಸ್ಪರ್ಧಿಸಿ ಜಯಿಸಿದ್ದರು. ಆ ನಂತರ ಸಮಾಜವಾದಿ ಪಕ್ಷದಿಂದ ಮರಳಿ ಗೂಡಿಗೆ ಬಂಗಾರಪ್ಪ ಬಂದಿದ್ದು, ಶಿವಮೊಗ್ಗದಲ್ಲಿ ಮುಖ್ಯಮಂತ್ರಿ ಪುತ್ರ, ಬಿಜೆಪಿಯ ಬಿ.ವೈ.ರಾಘವೇಂದ್ರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಆದರೆ ಜೆಡಿಎಸ್‌ಗೆ ಹೇಳಿಕೊಳ್ಳಬಹುದಾದ ಬಲಾಢ್ಯ ನಾಯಕರು ಯಾರೂ ವಲಸೆ ಬಂದಿಲ್ಲ. ಸಣ್ಣ ಪುಟ್ಟ ಮುಖಂಡರು ಅಲ್ಲಲ್ಲಿ ಸೇರಿಕೊಂಡಿದ್ದಾರಷ್ಟೆ.

ಜನರ ಹಣವನ್ನು ಅಷ್ಟೊಂದು ಪ್ರಮಾಣದಲ್ಲಿ ಖರ್ಚು ವೆಚ್ಚ ಮಾಡಿ, ಚುನಾವಣೆ ನಡೆಸಿ ಆರಿಸಿ ಕಳುಹಿಸಿದರೆ, ಇವರೆಲ್ಲರೂ ಸುಲಭವಾಗಿ ಪಕ್ಷಕ್ಕೆ, ವಿಧಾನಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದಾರೆ, ಮರಳಿ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧರಾಗುತ್ತಾರೆ. ಅದಕ್ಕೆ ಮತ್ತಷ್ಟು ತೆರಿಗೆದಾರರ ಹಣ! ಕಳೆದ ಬಾರಿ ಎಂಟು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಸಬೇಕಾಯಿತು. ಈ ವರ್ಷದಲ್ಲಿ ಇನ್ನೆಷ್ಟು ಉಪ ಚುನಾವಣೆಗಳು ನಡೆಯಬೇಕೋ… ತೆರಿಗೆದಾರರ ಹಣ ಇದಕ್ಕಾಗಿ ವ್ಯರ್ಥ ಮಾಡಬೇಕೋ… ಬಲ್ಲವರಾರು?

ಇಷ್ಟಕ್ಕೂ ಬಿಜೆಪಿಯಿಂದ ಹೋಗಿ ಕಾಂಗ್ರೆಸ್ಸೋ, ಜೆಡಿಎಸ್ಸೋ ಸೇರಿಕೊಂಡು ಮರಳಿ ಬಿಜೆಪಿಗೆ ಬಂದವರು ಎಂಥೆಂಥ ದ್ರೋಹಗಳನ್ನು ಮಾಡಿಹೋಗಿದ್ದಾರೆ! ಅಂಥವರನ್ನು ಬಿಜೆಪಿ ಕೂಡ ಕ್ಷಮಿಸಿ ‘ಕ್ಷಮಯಾಧರಿತ್ರಿ’ ಅನ್ನಿಸಿಕೊಂಡು ಒಪ್ಪಿಕೊಂಡುಬಿಟ್ಟಿದೆ, ಅಪ್ಪಿಕೊಂಡುಬಿಟ್ಟಿದೆ.

ಒಟ್ಟಿನಲ್ಲಿ ಇವರು ಇಂತಹ ಪಕ್ಷ ಎಂದುಕೊಂಡು ಯಾರು ಕೂಡ ಮತ ಹಾಕದ ಪರಿಸ್ಥಿತಿ. ಜನ ನೋಡಿ ಮತಹಾಕಲು ಅಥವಾ ಅವರ ಕೆಲಸ ನೋಡಿ ಮತ ಹಾಕಲು ಇದು ಮತದಾರರಿಗೆ ಸಕಾಲ ಎಂದಷ್ಟೇ ತೃಪ್ತಿಪಟ್ಟುಕೊಳ್ಳಬಹುದು. ಯಾರು ಯಾವ ಪಕ್ಷದಲ್ಲಿದ್ದಾರೆ ಎಂದು ಹೇಳುವುದೇ ಕಷ್ಟವಾದಂತಹ ಪರಿಸ್ಥಿತಿ. ಒಟ್ಟಿನಲ್ಲಿ ಮತದಾರನಿಗೆ ಕೋಮುವಾದಿಗಳು ಯಾರು, ಜಾತ್ಯತೀತರು ಯಾರು, ಪಕ್ಷಾಂತರಿಗಳು ಯಾರು ಎಂದು ಪತ್ತೆ ಹಚ್ಚುವ, ಮೆದುಳಿಗೆ ಮೇವು, ಮೇಧಾಶಕ್ತಿಗೆ ಕಸರತ್ತು ನೀಡುವ ಅತ್ಯುತ್ತಮ ಪಝಲ್ ಗೇಮ್ ಈ ಬಾರಿಯ ಚುನಾವಣೆ!
(ವೆಬ್‌ದುನಿಯಾದಲ್ಲಿ ಪ್ರಕಟ)

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Recent Posts

ಎಐ ವೈಶಿಷ್ಟ್ಯಗಳ realme GT 7 Pro ಬಿಡುಗಡೆ: ಬೆಲೆ ಎಷ್ಟು? ವೈಶಿಷ್ಟ್ಯಗಳೇನು? ಇಲ್ಲಿದೆ ಪೂರ್ಣ ಮಾಹಿತಿ

ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್‌ ಇರುವ ಬಹುನಿರೀಕ್ಷಿತ…

3 weeks ago

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

3 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

3 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

4 months ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

5 months ago

ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

10 months ago