ವಿಜಯ ಕರ್ನಾಟಕ ಮಾಹಿತಿ@ತಂತ್ರಜ್ಞಾನ ಅಂಕಣ-49, ಆಗಸ್ಟ್ 26, 2013
ಮಕ್ಕಳ ಪಠ್ಯ ಕ್ರಮದಲ್ಲೂ ಕಂಪ್ಯೂಟರ್ ಇದೆ, ಹಿರಿಯರಿಗೂ ಅದು ಎಲ್ಲ ರೀತಿಯಲ್ಲಿಯೂ ಉಪಯುಕ್ತ. ಹೀಗಿರುವಾಗ ಮನೆಗೊಂದು ಕಂಪ್ಯೂಟರ್ ಬೇಡವೇ? ಪೈಪೋಟಿಯಿಂದಾಗಿ ಬ್ರ್ಯಾಂಡೆಡ್ ಕಂಪ್ಯೂಟರ್‌ಗಳು ಸುಲಭ ದರದಲ್ಲಿಯೇ ಲಭ್ಯವಾಗುತ್ತಿದ್ದರೂ, ಮತ್ತಷ್ಟು ಕಡಿಮೆ ಖರ್ಚಿನಲ್ಲಿ ಉತ್ತಮ ಆಧುನಿಕ ವೈಶಿಷ್ಟ್ಯಗಳಿರುವ ಉತ್ಕೃಷ್ಟ ಕಂಪ್ಯೂಟರ್ ಹೊಂದಿಸಬಹುದು ಎಂಬುದು ಬಹುತೇಕರಿಗೆ ತಿಳಿದಿರಲಾರದು.
ಹೇಗೆಂದರೆ, ಬ್ರ್ಯಾಂಡೆಡ್ ಕಂಪ್ಯೂಟರುಗಳಲ್ಲಿ ಬಳಕೆಯಾಗುವ ಬಿಡಿ ಭಾಗಗಳು ಕಂಪ್ಯೂಟರ್ ಮಳಿಗೆಗಳಲ್ಲಿ ಸ್ಫರ್ಧಾತ್ಮಕ ದರಗಳಲ್ಲಿ ಸಿಗುತ್ತವೆ. ಕಂಪನಿಗಳು ಅವುಗಳನ್ನು ಅಸೆಂಬ್ಲ್ ಮಾಡಿದ್ದಕ್ಕೆ ಮತ್ತು ತಮ್ಮ ಬ್ರ್ಯಾಂಡ್ ಮುದ್ರೆ ಹಾಕಿದ್ದಕ್ಕೆ ಹೆಚ್ಚುವರಿ ಹಣ ತೆರುವ ಬದಲು ನಾವಾಗಿಯೇ ಕಂಪ್ಯೂಟರನ್ನು ನಮಗೆ ಬೇಕಾದಂತೆ ಸಿದ್ಧಪಡಿಸಿಕೊಂಡರೆ?
ಮುಖ್ಯವಾಗಿ ಕಂಪ್ಯೂಟರುಗಳಿಗೆ ಬೇಕಾಗಿರುವುದು ಮಾನಿಟರ್, ಕೀಬೋರ್ಡ್, ಮೌಸ್, ಪ್ರೊಸೆಸರ್, ಮದರ್‌ಬೋರ್ಡ್, ರಾಮ್ (RAM), ಹಾರ್ಡ್ ಡಿಸ್ಕ್, ಕ್ಯಾಬಿನೆಟ್ ಅಥವಾ ಚಾಸೀ ಮತ್ತು ಪವರ್ ಸಪ್ಲೈ ಯುನಿಟ್ ಹಾಗೂ ಆಪ್ಟಿಕಲ್ ಡ್ರೈವ್. ಬೇಕಿದ್ದರೆ ಗ್ರಾಫಿಕ್ಸ್ ಕಾರ್ಡ್.
ಈಗ ಒಂದೊಂದಾಗಿ ನೋಡೋಣ.
ಮಾನಿಟರ್: ಹಳೆಯ ಟಿವಿಯಂತೆ ತೋರುವ ಸಿಆರ್‌ಟಿ ಮಾನಿಟರ್‌ಗಳ ಕಾಲ ಹೋಗಿದೆ. ಎಲ್‌ಸಿಡಿ ಅಥವಾ ಎಲ್‌ಇಡಿ ಮಾನಿಟರುಗಳು (ಒಳ್ಳೆಯ ಕಂಪನಿಯವು) ಈಗ 3 ಸಾವಿರ ರೂ.ನಿಂದಲೇ ಗಾತ್ರಕ್ಕೆ ಅನುಗುಣವಾದ ಬೆಲೆಯಲ್ಲಿ ದೊರೆಯುತ್ತವೆ.
ಕೀಬೋರ್ಡ್: ಮಾರುಕಟ್ಟೆಯಲ್ಲಿ ಮುನ್ನೂರು ರೂಪಾಯಿ ಆಸುಪಾಸಿನಲ್ಲಿ ಒಳ್ಳೆಯ ಕಂಪನಿಯ, ಮಲ್ಟಿಮೀಡಿಯಾ ಕೀಬೋರ್ಡ್ ಲಭಿಸುತ್ತದೆ. ಸ್ವಲ್ಪ ಅನುಕೂಲವಿದ್ದರೆ ಹೆಚ್ಚು ಬೆಲೆಯ ಕೀಬೋರ್ಡ್‌ಗೆ ಹೋಗಬಹುದು.
ಮೌಸ್: ಮೋಸರ್‌ಬೇರ್, ಲಾಜಿಟೆಕ್ ಮುಂತಾದ ಒಳ್ಳೆಯ ಕಂಪನಿಗಳ ಮೌಸ್‌ಗಳು ಇನ್ನೂರು ರೂಪಾಯಿ ಆಸುಪಾಸಿನಲ್ಲಿ ದೊರೆಯುತ್ತವೆ.
ಪ್ರೊಸೆಸರ್: ಇಂಟೆಲ್ ಕಂಪನಿಯ ಪೆಂಟಿಯಂ ಪ್ರೊಸೆಸರ್‌ಗಳು ಜನಮನ್ನಣೆ ಗಳಿಸಿವೆ. ಸಾಮಾನ್ಯ ವೆಬ್ ಬ್ರೌಸಿಂಗ್, ಕಚೇರಿ ಕಾರ್ಯ, ಇಮೇಲ್, ವೀಡಿಯೋ-ಚಿತ್ರ ಎಡಿಟಿಂಗ್ ಇತ್ಯಾದಿಗಳಿಗೆ, ಗೇಮ್ಸ್‌ಗೆ ಸಾಕಾಗುವ ಪೆಂಟಿಯಂ ಜಿ2020 ಬೆಲೆ ಸುಮಾರು 3,500 ರೂ. ಇರಬಹುದು. ಉತ್ತಮ ಕಾರ್ಯಕ್ಷಮತೆಯುಳ್ಳ ಕೋರ್ ಐ3 ಅಥವಾ ಅದಕ್ಕಿಂತ ಮೇಲ್ಪಟ್ಟವುಗಳಿಗೆ ಕೊಂಚ ಹೆಚ್ಚು ಹಣ.
ಮದರ್‌ಬೋರ್ಡ್: ಕಂಪ್ಯೂಟರಿನ ಪ್ರಮುಖ ಅಂಗವಿದು. ನಿಮ್ಮ ಪ್ರೊಸೆಸರ್‌ಗೆ ಹೊಂದಿಕೆಯಾಗಬಲ್ಲ ಮದರ್‌ಬೋರ್ಡ್ ಆಯ್ಕೆ ಮಾಡಿಕೊಳ್ಳಿ. ಗಿಗಾಬೈಟ್ ಕಂಪನಿಯ ಮದರ್‌ಬೋರ್ಡ್ ಬೆಲೆ ಸುಮಾರು 3 ಸಾವಿರದ ಆಸುಪಾಸು ಇರುತ್ತದೆ.
ರಾಂ (RAM): ಈಗಿನ ಆಧುನಿಕ ಕೆಲಸ ಕಾರ್ಯಗಳಿಗೆ 4ಜಿಬಿ ಡಿಡಿಆರ್3 RAM ಗಳನ್ನೇ ಆಯ್ದುಕೊಳ್ಳಿ. ಟ್ರಾನ್ಸೆಂಡ್ ಅಥವಾ ಕಿಂಗ್‌ಸ್ಟನ್ ಕಂಪನಿಯವು 2 ಸಾವಿರ ರೂ. ಆಸುಪಾಸಿನಲ್ಲಿ ದೊರೆಯುತ್ತವೆ.
ಹಾರ್ಡ್ ಡಿಸ್ಕ್: ಇದು ನಿಮ್ಮ ಕಂಪ್ಯೂಟರಿನಲ್ಲಿ ಫೈಲುಗಳನ್ನು ಸೇವ್ ಮಾಡಿಟ್ಟುಕೊಳ್ಳಲು ಸಹಾಯಕವಾಗುವ ಸ್ಟೋರೇಜ್ ಭಾಗ. ಸೀಗೇಟ್ ಅಥವಾ ವೆಸ್ಟರ್ನ್ ಡಿಜಿಟಲ್ ಮುಂತಾದ ಕಂಪನಿಗಳ, ಕನಿಷ್ಠ 500 ಜಿಬಿ ಸಾಮರ್ಥ್ಯವುಳ್ಳ ಹಾರ್ಡ್ ಡಿಸ್ಕ್ ಉತ್ತಮ. ಬೆಲೆ ಸುಮಾರು 3 ಸಾವಿರ ರೂ. ಆಸುಪಾಸು.
ಚಾಸೀ ಮತ್ತು ಪವರ್ ಸಪ್ಲೈ ಯುನಿಟ್ (ಕ್ಯಾಬಿನೆಟ್): ಸೀಗೇಟ್, ಕೂಲರ್ ಮಾಸ್ಟರ್, ಕಾರ್ಸೇರ್ ಮುಂತಾದ ಕಂಪನಿಗಳ ಚಾಸೀ ಹಾಗೂ ಪಿಎಸ್‌ಯುಗಳು ಅಥವಾ ಕ್ಯಾಬಿನೆಟ್‌ಗಳು ಲಭ್ಯವಿರುತ್ತವೆ. ಇವುಗಳ ಬೆಲೆಯೂ 2 ಸಾವಿರ ರೂ. ಆಸುಪಾಸಿನಲ್ಲಿರುತ್ತವೆ.
ಆಪ್ಟಿಕಲ್ ಡ್ರೈವ್ (ಡಿವಿಡಿ ಡ್ರೈವ್): ಎಲ್‌ಜಿ ಅಥವಾ ಸ್ಯಾಮ್ಸಂಗ್ ಕಂಪನಿಗಳ ಡಿವಿಡಿ (ಆಪ್ಟಿಕಲ್) ಡ್ರೈವ್‌ಗಳು 1 ಸಾವಿರ ರೂ. ಆಸುಪಾಸಿನಲ್ಲಿ ದೊರೆಯುತ್ತವೆ.
ಗ್ರಾಫಿಕ್ಸ್ ಕಾರ್ಡ್: ವೀಡಿಯೋ ಎಡಿಟಿಂಗ್ ಕೆಲಸ ಮಾಡಬೇಕಿದ್ದರೆ ಮತ್ತು ಗೇಮಿಂಗ್ ಇಷ್ಟವಿದ್ದರೆ ಗ್ರಾಫಿಕ್ಸ್ ಕಾರ್ಡ್ ಹಾಕಿಕೊಳ್ಳಬಹುದು. ಇದು ಐಚ್ಛಿಕ. ಪವರ್‌ಕಲರ್, ಗಿಗಾಬೈಟ್ ಮುಂತಾದ ಕಂಪನಿಗಳ ಉತ್ಪನ್ನವನ್ನು ಕೊಳ್ಳಬಹುದು.
ನಿಮ್ಮ ಪರಿಚಯದ ಕಂಪ್ಯೂಟರ್ ಸ್ಟೋರ್‌ಗಳಲ್ಲಿ ಹೋದರೆ, ನಿಮ್ಮ ಆವಶ್ಯಕತೆ ಹೇಳಿದರೆ, ಅಸೆಂಬಲ್ಡ್ ಕಂಪ್ಯೂಟರ್‌ಗೆ ಎಷ್ಟಾಗುತ್ತದೆ ಎಂದು ಅವರೇ ಲೆಕ್ಕಾಚಾರ ಹಾಕಿ ಕೊಡುತ್ತಾರೆ. ಬ್ರ್ಯಾಂಡೆಡ್ ಕಂಪ್ಯೂಟರ್‌ಗಳಿಗಿಂತ ಅಗ್ಗದ ದರದಲ್ಲಿ (ಸುಮಾರು 20 ಸಾವಿರ ರೂ. ಆಸುಪಾಸಿನಲ್ಲಿ) ಉತ್ತಮ ಕಾನ್ಫಿಗರೇಶನ್ ಇರುವ ಪಿಸಿ ನಿಮ್ಮದಾಗುತ್ತದೆ. ಕಾರ್ಯಕ್ಷಮತೆ ಬಗ್ಗೆ ಸಂದೇಹ ಬೇಡ, ಯಾಕೆಂದರೆ ಒಳಗಿರುವ ಬಿಡಿಭಾಗಗಳೆಲ್ಲವೂ ಬ್ರ್ಯಾಂಡೆಡ್ ಕಂಪನಿಗಳದ್ದೇ ಅಲ್ಲವೇ?
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು