ಮಾಹಿತಿ@ತಂತ್ರಜ್ಞಾನ ವಿಜಯ ಕರ್ನಾಟಕ ಅಂಕಣ 85, ಜುಲೈ 21, 2014:
ಕೆಲವೊಂದು ಉತ್ಪನ್ನಗಳು ಆನ್‌ಲೈನ್‌ನಲ್ಲಿ ಮಾತ್ರ ಲಭ್ಯ. ಉದಾಹರಣೆಗೆ, ಮೋಟೋರೋಲದ ಕೆಲವು ಸ್ಮಾರ್ಟ್‌ಫೋನ್ ಮಾಡೆಲ್‌ಗಳು ಭಾರತದಲ್ಲಿ ಬಿಡುಗಡೆಯಾಗಿದ್ದು ಆನ್‌ಲೈನ್‌ನಲ್ಲಿ ಫ್ಲಿಪ್‌ಕಾರ್ಟ್ ಡಾಟ್ ಕಾಂ ಎಂಬ ಜಾಲತಾಣದ ಮೂಲಕ. ಅವೆಲ್ಲವೂ ಆ ತಾಣದಲ್ಲಿ ಮಾತ್ರ ಲಭ್ಯ, ಬೇರೆ ಅಂತರ್ಜಾಲ ತಾಣಗಳಲ್ಲಾಗಲೀ, ಹೊರಗೆ ಮಳಿಗೆಗಳಲ್ಲಾಗಲೀ ದೊರೆಯುವುದಿಲ್ಲ. ಬೇಡಿಕೆಯೂ ಸಾಕಷ್ಟಿದೆ ಎಂದು ಹೇಳಲಾಗುತ್ತಿತ್ತು. ‘ಸ್ಟಾಕ್ ಇಲ್ಲ, ಬಂದಾಗ ತಿಳಿಸುತ್ತೇವೆ, ನಿಮ್ಮ ಇಮೇಲ್ ವಿಳಾಸ ದಾಖಲಿಸಿ’ ಅಥವಾ ‘ಈಗಲೇ ಬುಕ್ ಮಾಡಿ’ ಎಂಬ ಸಂದೇಶಗಳು ಸಾಮಾನ್ಯವಾಗಿದ್ದವು. ಇದು ಉದಾಹರಣೆಯಷ್ಟೆ. ಇದರ ಹಿಂದೆ ಅತ್ಯುತ್ತಮ ಮಾರುಕಟ್ಟೆ ತಂತ್ರಗಳಿರುತ್ತವೆ. ಆನ್‌ಲೈನ್‌ನಲ್ಲಿ ಮಾತ್ರ ಲಭ್ಯ ಎಂಬ ಈ ಮಾರಾಟ ತಂತ್ರವು ಭಾರತಕ್ಕೂ ಬಂದಿದೆ.
ಫ್ಲಿಪ್‌ಕಾರ್ಟ್, ಇ-ಬೇ, ಇಂಡಿಯಾಟೈಮ್ಸ್, ಅಮೆಜಾನ್ ಮುಂತಾದ ಪ್ರಸಿದ್ಧ ಇ-ಕಾಮರ್ಸ್ ತಾಣಗಳು ವೈವಿಧ್ಯಮಯ ವಸ್ತುಗಳನ್ನು ಮಾರಾಟ ಮಾಡುವಲ್ಲಿ ಜನಪ್ರಿಯವಾಗಿವೆ. ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಹಣ ಪಾವತಿಸುವ ವ್ಯವಸ್ಥೆ ಇಲ್ಲಿರುತ್ತದೆ. ಇವೆಲ್ಲ ವಹಿವಾಟುಗಳೂ ನಂಬಿಕೆಯ ಆಧಾರದಲ್ಲೇ ನಡೆಯುವುದರಿಂದ ಹಣ ಪಾವತಿಗಾಗಿ ಸುರಕ್ಷಿತ ಮಾರ್ಗವೊಂದಿದೆ. ಅದಕ್ಕೆ ಗೇಟ್‌ವೇ ಎನ್ನುತ್ತಾರೆ ಮತ್ತು ಸರಕಾರದ ಮಾನ್ಯತೆಯೂ ಇದೆ. ಬ್ಯಾಂಕಿಂಗ್ ಸಂಸ್ಥೆಗಳು, ಕ್ರೆಡಿಟ್ ಕಾರ್ಡ್-ಡೆಬಿಟ್ ಕಾರ್ಡ್ ವಿತರಿಸುವ ಕಂಪನಿಗಳು ಈ ಸುರಕ್ಷಿತವಾದ ಗೇಟ್‌ವೇಯಲ್ಲಿ ನೋಂದಾಯಿಸಿಕೊಂಡಿರುತ್ತವೆ. ಇನ್ನು, ಆನ್‌ಲೈನ್‌ನಲ್ಲಿ ಖರೀದಿಸುವ ಕುರಿತು ಸಂದೇಹ ಇರುವವರಿಗಾಗಿಯೇ ಕ್ಯಾಶ್ ಆನ್ ಡೆಲಿವರಿ (ನಾವು ಖರೀದಿ ಮಾಡುವ ಸಾಧನ ಕೈಗೆ ಸಿಕ್ಕಮೇಲಷ್ಟೇ ಹಣ ನೀಡುವ) ವ್ಯವಸ್ಥೆಯೂ ಇದೆ.
ಆನ್‌ಲೈನ್ ತಾಣಗಳಲ್ಲಿನ ಅತಿದೊಡ್ಡ ಅನುಕೂಲವೆಂದರೆ, ವಿಶ್ವಾಸಾರ್ಹ ಜಾಲ ತಾಣಗಳಲ್ಲಿ ಖರೀದಿ ಮಾಡಿದವರು ಈ ಜಾಲ ತಾಣದ ಸೇವೆ ಹೇಗಿದೆ ಮತ್ತು ಅವರು ಖರೀದಿಸಿದ ವಸ್ತು ಹೇಗಿದೆ ಎಂಬುದರ ಕುರಿತು ಸುದೀರ್ಘ ವಿಮರ್ಶೆ ಮಾಡಿರುತ್ತಾರೆ. ಆಯಾ ಉತ್ಪನ್ನದ ಕೆಳಗೆ ಬಳಕೆದಾರರ ವಿಮರ್ಶೆ/ಕಾಮೆಂಟ್ ದಾಖಲಿಸುವ ಸ್ಥಳದಲ್ಲಿ ಇವೆಲ್ಲವೂ ಲಭ್ಯ. ಕೆಲವೊಂದು ವಿಮರ್ಶೆಗಳು (ರಿವ್ಯೆ) ಮಾರುಕಟ್ಟೆ ತಂತ್ರದ ಭಾಗ ಎಂದು ತೋರುತ್ತವೆಯಾದರೂ, ಮತ್ತೆ ಕೆಲವು ಪ್ರಾಮಾಣಿಕ ವಿಮರ್ಶೆಗಳಿರುತ್ತವೆ. ತಾವು ಖರೀದಿಸಿದ ಸಾಧನವನ್ನು ಒಂದಷ್ಟು ದಿನಗಳ ಕಾಲ ಬಳಸಿದವರು ಅದರ ಒಳ್ಳೆಯ ಅಂಶಗಳು, ಕೆಟ್ಟ ಅಂಶಗಳನ್ನು ಪಟ್ಟಿ ಮಾಡಿ ಅಲ್ಲಿ ನಮೂದಿಸಿರುತ್ತಾರೆ. ಸಾಧನ ಚೆನ್ನಾಗಿಲ್ಲದಿದ್ದರೆ ಖಡಕ್ ಆಗಿ ಹೇಳಿರುತ್ತಾರೆ.
ನಿರ್ದಿಷ್ಟ ಉತ್ಪನ್ನದ ಕುರಿತಾಗಿ ಕೇವಲ ಒಂದು ಜಾಲತಾಣದಲ್ಲಿನ ವಿಮರ್ಶೆ ನೋಡಬಾರದು. ಹಲವು ವೆಬ್‌ಸೈಟ್‌ಗಳಲ್ಲಿರುವ ತಜ್ಞರ ವಿಮರ್ಶೆಗಳನ್ನು ಓದಿದರೆ ಜತೆಗೆ, ಅದಕ್ಕೆ ಬಂದಿರುವ ನೈಜ ಬಳಕೆದಾರರ ಕಾಮೆಂಟ್‌ಗಳನ್ನೂ ನೋಡಿದರೆ ನಿರ್ದಿಷ್ಟ ವಸ್ತುವನ್ನು ಖರೀದಿಸಬಹುದೇ ಬೇಡವೇ ಎಂಬ ಬಗ್ಗೆ ಅಳೆದು ತೂಗಿ ನಿರ್ಧಾರಕ್ಕೆ ಬರಲು ನೆರವಾಗುತ್ತವೆ. ಒಂದು ಸ್ಮಾರ್ಟ್‌ಫೋನನ್ನೇ ಉದಾಹರಣೆಗೆ ತೆಗೆದುಕೊಂಡರೆ, ಅದರ ಕ್ಯಾಮರಾ ಹೇಗೆ ಕೆಲಸ ಮಾಡುತ್ತದೆ, ಅದರ ಆನ್/ಆಫ್ ಸ್ವಿಚ್ ಹೇಗಿರುತ್ತದೆ, ಮ್ಯೂಸಿಕ್ ಹೇಗೆ ಕೇಳಿಸುತ್ತದೆ, ವೀಡಿಯೋ ಪ್ಲೇ ಮಾಡುವಾಗ ಚೆನ್ನಾಗಿ ಕಾಣಿಸುತ್ತದೆಯೇ ಅಥವಾ ಹ್ಯಾಂಗ್ ಆಗುತ್ತದೆಯೇ, ಹಲವು ಕಾರ್ಯಗಳನ್ನು ಒಂದೇ ಸಲ ಮಾಡುವಾಗ ಸಾಧನವು ಬಿಸಿಯಾಗುತ್ತದೆಯೇ ಎಂಬಿತ್ಯಾದಿ ವಿವರ ಅಲ್ಲಿ ಲಭ್ಯವಾಗುತ್ತದೆ.
ಸರಕು ಮಾರುವ ತಾಣಗಳಲ್ಲಿಯೂ ಆಯಾ ವಸ್ತುಗಳ ಪುಟದಲ್ಲಿ ಬಳಕೆದಾರರು ಮಾಡಿದ ಕಾಮೆಂಟ್‌ಗಳನ್ನು ನೋಡಿದರೆ ಮತ್ತಷ್ಟು ಮಾಹಿತಿ ನಿಮಗೆ ದೊರೆಯುತ್ತದೆ. ನಿಮ್ಮಲ್ಲಿರಬಹುದಾದ ಸಂದೇಹಗಳು ಬೇರೆಯವರಿಗೂ ಬಂದಿರಬಹುದು, ಅವರು ಅದನ್ನು ಅಲ್ಲಿ ದಾಖಲಿಸಿದಾಗ, ತಿಳಿದವರು ಉತ್ತರಿಸಿರುತ್ತಾರೆ. ಅಲ್ಲೇ ಸಾಧನದ ಒಳಿತು-ಕೆಡುಕುಗಳ ಕುರಿತು ಚರ್ಚೆ, ವಾದ-ಪ್ರತಿವಾದಗಳೂ ನಡೆಯುತ್ತವೆ. ಇವುಗಳಿಂದ ನೀವು ಖರೀದಿಸಬೇಕೆಂದಿರುವ ಸಾಧನವು ನಿಮ್ಮ ಹಣಕ್ಕೆ ತಕ್ಕ ಮೌಲ್ಯ ಕೊಡಬಲ್ಲುದೇ ಎಂದು ನಿರ್ಧರಿಸಲು ನಿಮಗೆ ಅನುಕೂಲವಾಗುತ್ತದೆ. ಹೀಗಾಗಿ, ಯಾವುದೇ ವಸ್ತು ಖರೀದಿಸುವ ಮುನ್ನ ಆನ್‌ಲೈನ್‌ನಲ್ಲಿ ರಿಸರ್ಚ್ ಮಾಡಿದರೆ, ಸಾಕಷ್ಟು ಹಣ ಉಳಿತಾಯ ಮಾಡಬಹುದು ಮತ್ತು ಒಳಿತು ಕೆಡುಕುಗಳ ಕುರಿತು ಸ್ಪಷ್ಟ ಮಾಹಿತಿ ತಿಳಿದುಕೊಳ್ಳಬಹುದು.
ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.