ಈಗಾಗಲೇ ರಾಜ್ಯಾದ್ಯಂತ 249 ವಚನಕಾರರ ಸುಮಾರು 21 ಸಾವಿರದಷ್ಟು ವಚನಗಳನ್ನು ಒಟ್ಟುಗೂಡಿಸಿ ವಚನ ಸಂಚಯ (vachana.sanchaya.net) ವೆಬ್ ಉಪತಾಣವನ್ನು ಈ ತಂಡವು ರೂಪಿಸಿದೆ. ಒಂದು ನಿರ್ದಿಷ್ಟ ಪದವನ್ನು ಹುಡುಕಿದರೆ, ಆ ಪದವನ್ನು ಬಳಸಿ ಬೇರೆ ಬೇರೆ ವಚನಕಾರರು ಯಾವೆಲ್ಲಾ ವಚನಗಳನ್ನು ಪೋಣಿಸಿದ್ದಾರೆ, ಯಾವೆಲ್ಲಾ ಸಂದರ್ಭಗಳಲ್ಲಿ ಬಳಸಿದ್ದಾರೆ ಎಂಬುದನ್ನೆಲ್ಲಾ ತಿಳಿಯಬಹುದಾಗಿದೆ. ವಚನ, ಸಾಹಿತ್ಯ ಸಂಶೋಧಕರಿಗೆ, ಆಸಕ್ತರಿಗೆ ಉಪಯುಕ್ತ.
ಈಗ ಇದೇ ತಂಡವು, ಒಸ್ಮಾನಿಯಾ ವಿಶ್ವವಿದ್ಯಾಲಯದ ಡಿಜಿಟಲ್ ಲೈಬ್ರರಿಯಲ್ಲಿರುವ ಕನ್ನಡ ಪುಸ್ತಕಗಳನ್ನು ಡಿಜಿಟಲ್ ರೂಪದಲ್ಲಿ, ಉಚಿತವಾಗಿ ಕನ್ನಡಿಗರಿಗೆ ದೊರಕಿಸುವ ಪ್ರಯತ್ನ ಆರಂಭಿಸಿದೆ. ಇದರ ಮುಂದುವರಿದ ಭಾಗವಾಗಿ, ವಿಕಿಪೀಡಿಯ ಎಂಬ ಜ್ಞಾನಕೋಶದಲ್ಲಿ ಕನ್ನಡ ಬರಹಗಾರರು, ಪ್ರಕಾಶಕರು ಮುಂತಾದವರಿಗೆ ಸಂಬಂಧಿಸಿದಂತೆ ಎಲ್ಲ ವಿವರಗಳು ದೊರೆಯುವಂತೆ, ಪ್ರತ್ಯೇಕ ವಿಕಿ ಪುಟಗಳನ್ನು ರೂಪಿಸುವುದೂ ಈ ಸಂಚಯ ತಂಡದ ಇರಾದೆ.
ಪ್ರಸ್ತುತ, 2000ಕ್ಕೂ ಹೆಚ್ಚು ಪುಸ್ತಕಗಳು, ಅದರ ಲೇಖಕರು ಹಾಗೂ ಪ್ರಕಾಶಕರ ಹೆಸರನ್ನು ಇಂಗ್ಲಿಷಿನಿಂದ ಯುನಿಕೋಡ್ ಕನ್ನಡ ಅಕ್ಷರದಲ್ಲಿ ಪಡಿಮೂಡಿಸುವ ಕಾರ್ಯ ಶುರುವಾಗಿದೆ. ಇದರಲ್ಲಿ ಎಲ್ಲ ಕನ್ನಡಿಗರೂ ಭಾಗಿಯಾಗಬಹುದು. ಹೇಗೆಂದರೆ, samooha.sanchaya.net ಎಂಬ ತಾಣಕ್ಕೆ ಹೋದರೆ, ಅಲ್ಲಿ ಇಂಗ್ಲಿಷ್‌ನಲ್ಲಿ ಹೆಸರುಗಳಿರುತ್ತವೆ. ಅವುಗಳನ್ನು ಕನ್ನಡಕ್ಕೆ ಪರಿವರ್ತಿಸಬೇಕು. ಕನ್ನಡದಲ್ಲಿ ಬರೆಯಬೇಕಿದ್ದರೆ ಪ್ರತ್ಯೇಕ ತಂತ್ರಾಂಶ ಬೇಕಿಲ್ಲ. ಬಾಕ್ಸ್‌ನಲ್ಲಿ ಇಂಗ್ಲಿಷಿನಲ್ಲಿ ಟೈಪ್ ಮಾಡುತ್ತಾ ಹೋದರೆ ಕನ್ನಡಕ್ಕೆ ತಾನಾಗಿಯೇ ಪರಿವರ್ತನೆಯಾಗುವ ಟ್ರಾನ್ಸ್‌ಲಿಟರೇಶನ್ (ಲಿಪ್ಯಂತರಣ) ವ್ಯವಸ್ಥೆ ಅಳವಡಿಸಲಾಗಿದೆ. ಮೇಲೆ ಕಾಣಿಸುವ ಇಂಗ್ಲಿಷ್ ಪದಗಳನ್ನು ಕೆಳಗಿನ ಬಾಕ್ಸ್‌ನಲ್ಲಿ ಕನ್ನಡದಲ್ಲಿ ಬರೆದು ‘ಲಿಪ್ಯಂತರಿಸಿ’ ಎಂಬ ಬಟನ್ ಕ್ಲಿಕ್ ಮಾಡಿದರಾಯಿತು. ತೀರಾ ಸರಳ ಕಾರ್ಯವಿದು.
ಎಷ್ಟು ಪದಗಳ ಲಿಪ್ಯಂತರಣವಾಗಿದೆ, ಎಷ್ಟು ಬಾಕಿ ಇವೆ ಎಂಬುದನ್ನು ತೋರಿಸುವ ವ್ಯವಸ್ಥೆಯೂ ಇದೆ. ಅಲ್ಲದೆ, ‘ಲಿಪ್ಯಂತರಿಸಿ’ ಎಂಬ ಬಟನ್ ಪಕ್ಕದಲ್ಲೇ ಇರುವ ಪುಸ್ತಕ ಚಿಹ್ನೆಯನ್ನು ಕ್ಲಿಕ್ ಮಾಡಿದರೆ, ಅದು ಒಸ್ಮಾನಿಯಾ ಯುನಿವರ್ಸಿಟಿಯ ಡಿಜಿಟಲ್ ಲೈಬ್ರರಿಯಲ್ಲಿ ಲಭ್ಯವಿರುವ ಪುಸ್ತಕದ ಪಿಡಿಎಫ್ ಪ್ರತಿಯ ಲಿಂಕ್‌ಗೆ ಹೋಗುತ್ತದೆ. ಅಲ್ಲಿಂದ ಉಚಿತವಾಗಿ ಪುಸ್ತಕ ಡೌನ್‌ಲೋಡ್ ಮಾಡಿಕೊಂಡು ನೀವೂ ಓದಬಹುದು, ಅದರಲ್ಲಿರುವ ಲೇಖಕರು, ಪ್ರಕಾಶಕರ ಹೆಸರನ್ನೂ ಸರಿಯಾಗಿ ತಿಳಿದುಕೊಳ್ಳಲು ಇದು ಅನುಕೂಲ. ಯಾರು ಬೇಕಾದರೂ ಕೈಜೋಡಿಸಿ ಕನ್ನಡಕ್ಕಾಗಿ ಕಿಂಚಿತ್ ಸೇವೆ ಮಾಡಬಹುದು.
ಮುಂದಿನ ಹಂತ: ಒಸ್ಮಾನಿಯಾ ಲೈಬ್ರರಿ ಬಳಿಕ, ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ಅಮೂಲ್ಯ ಹಳೆಯ ಕನ್ನಡ ಪುಸ್ತಕಗಳ ಭಂಡಾರವೇ ಇದೆ. ಇವುಗಳ ಪರಿವಿಡಿ ಸಿದ್ಧಪಡಿಸುವುದು, ಸಾಧ್ಯವಾದಷ್ಟು ಕನ್ನಡದ ಸಾಹಿತ್ಯವನ್ನು ಯುನಿಕೋಡ್‌ನಲ್ಲಿ ಲಭ್ಯವಾಗಿಸಿ, ಎಲ್ಲರಿಗೂ ಹುಡುಕುವಂತೆ ಅನುಕೂಲ ಮಾಡಿಕೊಡುವುದು, ಪುಸ್ತಕಗಳನ್ನೂ ಯೂನಿಕೋಡ್‌ನಲ್ಲಿ ದೊರೆಯುವಂತೆ ಮಾಡುವುದು ಸಂಚಯ ತಂಡದ ಮುಂದಿನ ಗುರಿ ಎಂದಿದ್ದಾರೆ ಈ ಸಂಚಯ ತಂಡದ ರೂವಾರಿ ಓಂಶಿವಪ್ರಕಾಶ್.
ಶತಮಾನಗಳಷ್ಟು ಹಳೆಯ ಸಮೃದ್ಧ ಕನ್ನಡ ಸಾಹಿತ್ಯ ಲೋಕದ ಕಂಪನ್ನು ಅಂತರ್ಜಾಲದಲ್ಲಿಯೂ ಪಸರಿಸುವ ಗುರಿ ಹೊತ್ತ ಈ ತಂಡದಲ್ಲಿ ಪವಿತ್ರಾ ಮತ್ತು ದೇವರಾಜ್ ಕೂಡ ಇದ್ದಾರೆ. ಇವರೆಲ್ಲರೂ ಐಟಿ ಕಂಪನಿಗಳಲ್ಲಿ ದುಡಿಯುತ್ತಿರುವವರು. ವಾರಾಂತ್ಯಗಳಲ್ಲಿ, ರಜಾ ದಿನಗಳಲ್ಲಿ, ಬಿಡುವಿನ ಸಮಯವನ್ನು ಇವರು ಹೀಗೆ ಸದುಪಯೋಗ ಮಾಡುತ್ತಿದ್ದಾರೆ.
ಮುಕ್ತ ಮತ್ತು ಉಚಿತ ತಂತ್ರಾಂಶಗಳು ಅಭಿವೃದ್ಧಿಯಾಗಿ ತಂತ್ರಜ್ಞಾನದ ಪೂರ್ಣ ಪ್ರಯೋಜನವು ಕನ್ನಡಿಗರಿಗೆ ಮುಕ್ತವಾಗಿ ದೊರೆಯುವಂತಾಗಬೇಕು, ಕನ್ನಡ ಸಾಹಿತ್ಯವೂ ಇಂಟರ್ನೆಟ್‌ನಲ್ಲಿ ಸಮೃದ್ಧವಾಗಬೇಕು ಎಂಬುದು ಸಂಚಯ ತಂಡದ ಧ್ಯೇಯ. ಆನ್‌ಲೈನ್‌ನಲ್ಲಿ ಸಮಾನ ಮನಸ್ಕ ನೂರಾರು ಕನ್ನಡಿಗರು ಇದಕ್ಕೆ ಕೈಜೋಡಿಸುತ್ತಿದ್ದಾರೆ.
ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. [ವಿಜಯ ಕರ್ನಾಟಕ ಅಂಕಣ, ಜನವರಿ 26, 2015]
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು