ಯಕ್ಷಗಾನೀಯ ರೂಪದಲ್ಲಿ ಶೇಕ್ಸ್‌ಪಿಯರ್ ಆಂಗ್ಲ ನಾಟಕ ‘ಮ್ಯಾಕ್‌ಬೆತ್’

0
690

ಧುರದೊಳಗೆ ಮ್ಯಾಕ್‌ಬೆತ್ತನನು ತಾ| ತರಿದು ತಲೆಯನು ತಂದು ಸಭೆಯೊಳು |
ದೊರೆ ಸಿವಾರ್ಡಗು ಸಹಿತ ಮ್ಯಾಲ್ಕಂಗಾಗ ತೋರಿಸಲೂ ||
ಪರಿಪರಿಯ ಪರಿಭವವ ಹೊಂದುತ | ಬರಿದೆ ಚಿತ್ತ ಗ್ಲಾನಿ ಹೊಂದಿದ |
ಪರಮ ಮಿತ್ರರೆ ನಿಮಗೆ ಶುಭವಿನ್ನೆಂದು ಪೇಳಿದನೂ || ೧ ||

ಭಾಮಿನಿ ಷಟ್ಪದಿಯ ಈ ಹಾಡು ಓದಿದಾಗ ಥಟ್ಟನೇ ಮನಸ್ಸು ಅರಳುತ್ತದೆ. ಆದರೆ ಮತ್ತೊಮ್ಮೆ ಓದಿಕೊಂಡಾಗ ಎಲ್ಲೋ ಒಂದು ಕಡೆ ನಾಲಿಗೆ ತಡವರಿಸಿದಂತಾಗುತ್ತದೆ ಎಂದರೆ ಅದಕ್ಕೆ ಆಂಗ್ಲ ನಾಮಪದಗಳು ಕಾರಣ. ಆದರಿಲ್ಲಿ ತಲುಪಬೇಕಾದ ಸಂದೇಶವೊಂದು ತಲುಪಿದೆ. ಈ ರೀತಿಯ ಹಾಡುಗಳ ಸರಣಿಯನ್ನೇ ರಚಿಸಿದ ಕವಿ ಹಿರಿಯ ಯಕ್ಷಗಾನ ಕಲಾವಿದ ಸೂರಿಕುಮೇರು ಗೋವಿಂದ ಭಟ್.

ಕನ್ನಡದ ಮಣ್ಣಿನ ರಮ್ಯಾದ್ಭುತ ಕಲೆಯೂ, ಸಾಹಿತ್ಯ, ಅಭಿನಯ, ಭಾವನೆ, ಮಾತು, ಬಣ್ಣ, ವೇಷ, ಕುಣಿತ, ಹಾಡು, ವಾದನ, ಜೊತೆಗೊಂದು ಸಂದೇಶ – ಇವೆಲ್ಲವುಗಳನ್ನೂ ಮೇಳೈಸಿಕೊಂಡಿರುವ ಸರ್ವಾಂಗೀಣ ಕಲೆಯೂ ಆಗಿರುವ ಯಕ್ಷಗಾನವಿಂದು ವಿಶ್ವಗಾನವಾಗಿದೆ. ಮನರಂಜನೆಯೊಂದಿಗೆ ಸಾಮಾಜಿಕ ಮೌಲ್ಯವನ್ನೂ ಬಿತ್ತುತ್ತಾ ಜಗದಗಲ ವ್ಯಾಪಿಸುತ್ತಿದೆ. ಕನ್ನಡದ ನೆಲದ ರಂಗಕಲೆಗಳಲ್ಲಿ ಕಾಲದ ಹೊಡೆತಕ್ಕೆ ತಲೆಬಾಗದೆ, ತನ್ನನ್ನು ಶ್ರೀಮಂತವಾಗಿಸಿಕೊಳ್ಳುತ್ತಲೇ ತಲೆ ಎತ್ತಿ ನಿಂತ ಕಲೆಯಿದು.

ಬೇರೆ ಜನಪದೀಯ, ಶಾಸ್ತ್ರೀಯ ಕಲೆಗಳು ತಮ್ಮ ಚೌಕಟ್ಟು ಮೀರದೆ ತಮ್ಮದೇ ಗತಿಯಲ್ಲಿ ಸಾಗುತ್ತಿದ್ದರೆ, ಯಕ್ಷಗಾನವು ನಿಂತ ನೀರಾಗದೆ, ಎಲ್ಲ ಕಡೆಯಿಂದಲೂ ಒಳಿತನ್ನು ಆವಾಹಿಸಿಕೊಳ್ಳುತ್ತಾ ಬೆಳೆದಿದೆ. ಯಾವುದು ಒಳಿತಲ್ಲವೋ, ಅದನ್ನು ಪ್ರೇಕ್ಷಕ ತಿರಸ್ಕರಿಸುತ್ತಾನೆ ಎಂದಾದಾಗ, ಅದು ತಾನಾಗಿ ಯಕ್ಷಗಾನದಿಂದ ದೂರವಾಗುತ್ತದೆ, ಕಲೆ ಗಟ್ಟಿಯಾಗುತ್ತದೆ.

ಯಕ್ಷಗಾನವೆಂಬ ರಂಗಕಲೆಯ ಶಕ್ತಿಯದು, ಸತ್ತ್ವವದು. ಕಾಲ ಕಾಲಕ್ಕೆ ಒಳಿತನ್ನು ಸೇರಿಸಿಕೊಂಡು, ಕೆಡುಕಾದರೆ ದೂರ ಮಾಡಿಕೊಂಡು, ಆಧುನಿಕತೆಯೊಂದಿಗೆ ಮಿಳಿತವಾಗಿ ಪರಿಷ್ಕಾರಕ್ಕೊಳಗಾಗುತ್ತಾ ಬಂದಿದೆ. ಅಂದು, 1970ರ ದಶಕದಲ್ಲಿ ಹಿರಿಯ ಯಕ್ಷಗಾನ ಕಲಾವಿದ, ಯಕ್ಷ ದಶಾವತಾರಿ ಎಂದೇ ಬಿರುದಾಂಕಿತರಾದ ಸೂರಿಕುಮೇರು ಗೋವಿಂದ ಭಟ್ಟರು ರಚಿಸಿದ ಯಕ್ಷಗಾನ ಪ್ರಸಂಗವೇ ಮ್ಯಾಕ್‌ಬೆತ್. ಇದು 16ನೇ ಶತಮಾನದ ಸ್ಥಿತಿಗತಿಗೆ ಅನುಗುಣವಾದ, ಈಗಲೂ ಪ್ರಸ್ತುತವೆನಿಸುವ ಕಥಾವಸ್ತುವನ್ನೊಳಗೊಂಡ ಸಾಹಿತ್ಯ ಸೃಷ್ಟಿಸುತ್ತಾ ಪ್ರಸಿದ್ಧಿಗೆ ಬಂದಿದ್ದ ಆಂಗ್ಲ ಕಾದಂಬರಿಕಾರ ವಿಲಿಯಂ ಶೇಕ್ಸ್‌ಪಿಯರ್ ಬರೆದಿದ್ದ ‘ಟ್ರಾಜೆಡಿ ಆಫ್ ಮ್ಯಾಕ್‌ಬೆತ್’ ನಾಟಕದ ಯಕ್ಷಗಾನೀಯ ಅವತಾರ.

ಮಂಕು ತಿಮ್ಮನ ಕಗ್ಗದಿಂದ ಜನಮಾನಸ ತಟ್ಟಿದ ಕವಿ ಡಿ.ವಿ.ಜಿ. ಅವರ ಅನುವಾದದ ಆಧಾರದಲ್ಲಿ ಗೋವಿಂದ ಭಟ್ಟರು ರಚಿಸಿದ್ದ ಪ್ರಸಂಗವು ದೃಶ್ಯ ರೂಪಕ್ಕೆ 1977ರಲ್ಲಿ ಬಂದಿತ್ತು. ಉಜಿರೆಯ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಅದು ರಂಗದಲ್ಲಿ ಕಾಣಿಸಿಕೊಂಡ ಬಳಿಕ ಎಲ್ಲೂ ಪ್ರದರ್ಶನವಾದ ಉಲ್ಲೇಖಗಳಿಲ್ಲ. ಮೂಡಲಪಾಯದ ಆಡುಂಬೊಲವಾದ ತುಮಕೂರಿನಲ್ಲಿ ಪಡುವಲಪಾಯ ಯಕ್ಷಗಾನದ ಚಟುವಟಿಕೆಗಳು ನಿಧಾನವಾಗಿ ಚಿಗುರೊಡೆಯುತ್ತಿರುವ ಈ ಕಾಲದಲ್ಲಿ ಇತ್ತೀಚೆಗೆ (ನ.18ರಂದು) ಇದೇ ಪ್ರಸಂಗವನ್ನು ಆಡಿ ತೋರಿಸಿದವರು ಕಟೀಲು ಮೇಳದ ಭಾಗವತರಾದ ಪುತ್ತೂರು ರಮೇಶ್ ಭಟ್ ಮತ್ತು ಹವ್ಯಾಸಿ ಯಕ್ಷಗಾನ ಕಲಾವಿದರ ಬಳಗ.

ಕೊರೊನಾ ಹಾವಳಿಯಿಂದಾಗಿ ಕರ್ನಾಟಕ ಯಕ್ಷಗಾನ ಅಕಾಡೆಮಿಯು ತನ್ನ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮೂರು ಭಾಗಗಳಾಗಿ ವಿಂಗಡಿಸಿ, ಕಲಾವಿದರಿಗೆ ಸಮೀಪವಿರುವ ಊರಲ್ಲೇ ಹೋಗಿ ಕಾರ್ಯಕ್ರಮ ಏರ್ಪಡಿಸಿ ಪುರಸ್ಕರಿಸುವ ಪರಿಪಾಟ ಆರಂಭಿಸಿತ್ತು. ಅದರ ಅಂಗವಾಗಿ ತುಮಕೂರು, ಬೆಂಗಳೂರು ಸುತ್ತಮುತ್ತಲಿನ ಪುರಸ್ಕೃತರನ್ನು ಕನ್ನಡ ಸಾಹಿತ್ಯ ಪರಿಷತ್‌ನ ಕನ್ನಡ ಭವನದಲ್ಲಿ ನಡೆದ ಸಮಾರಂಭದಲ್ಲಿ ಗೌರವಿಸಿದ ನಂತರ, ‘ಮ್ಯಾಕ್‌ಬೆತ್’ ಗಮನ ಸೆಳೆಯಿತು.

ಈ ಪ್ರಸಂಗ ಸಿದ್ಧವಾದ ನಂತರದ ನಾಲ್ಕು ದಶಕಗಳಲ್ಲಿ ಯಕ್ಷಗಾನವೂ ಸಾಕಷ್ಟು ಬೆಳೆದಿದೆ. ಈ ಪರಿಯಾಗಿ ಬೆಳೆದ ಬಳಿಕ, ಹಿರಿಯ ಕಲಾವಿದರೊಂದು ಬರೆದಿದ್ದ ವಿಶೇಷ ಪ್ರಸಂಗವನ್ನು ಆಡಿದರೆ ಹೇಗೆ ಎಂಬ ಯೋಚನೆಯೊಂದಿಗೆ ತುಮಕೂರಿನಲ್ಲಿ ಉಪನ್ಯಾಸಕರಾಗಿರುವ ಸಿಬಂತಿ ಪದ್ಮನಾಭ -ಆರತಿ ಪಟ್ರಮೆ ದಂಪತಿ ಸೇರಿಕೊಂಡು, ಈ ಪ್ರಸಂಗವನ್ನು ಹುಡುಕಿದರು. 1977ರ ಪ್ರದರ್ಶನದಲ್ಲಿ ಭಾಗವಹಿಸಿದ್ದ ದಂಬೆ ಈಶ್ವರ ಶಾಸ್ತ್ರಿ ಅವರಲ್ಲಿದ್ದ ಯಕ್ಷಗಾನ ಪ್ರಸಂಗದ ಕೈಪ್ರತಿಯು ಕುಂಬ್ಳೆ ಗೋಪಾಲ ರಾವ್ ಮೂಲಕ ಲಭ್ಯವಾಯಿತು.

ಹವ್ಯಾಸಿ ಕಲಾವಿದೆಯೂ ಆಗಿರುವ ಯಕ್ಷಗಾನ ಅಕಾಡೆಮಿಯ ಸದಸ್ಯ ಸಂಚಾಲಕಿ ಆರತಿ ಪಟ್ರಮೆ ಅವರು ಪತಿಯೊಂದಿಗೆ ಸೇರಿಕೊಂಡು ಪ್ರಸಂಗಕರ್ತೃ ಗೋವಿಂದ ಭಟ್ಟರು ಹಾಗೂ ಭಾಗವತ ರಮೇಶ್ ಭಟ್‌ರನ್ನು ಸಂಪರ್ಕಿಸಿ ಪ್ರದರ್ಶನದ ಸಿದ್ಧತೆಗೆ ಅಣಿಯಾದರು. ಮೂಡಲಪಾಯದ ನೆಲದಲ್ಲಿ ಪಡುವಲಪಾಯ ತೆಂಕು ಯಕ್ಷಗಾನದ ಸುಳಿಗಾಳಿ ಈಗಷ್ಟೇ ಬೀಸಲಾರಂಭಿಸಿದೆ. ಅಲ್ಲಿನವರಿಗೆ ಹೆಜ್ಜೆ ಕಲಿಸಿ, ಗೆಜ್ಜೆ ಕಟ್ಟುವಂತೆ ಮಾಡುವ ಕೈಂಕರ್ಯದಲ್ಲೂ ಅವರು ತೊಡಗಿದ್ದಾರೆ.

ಡಿವಿಜಿ ಸಮಗ್ರ ಸಂಪುಟದಿಂದ ‘ಕನ್ನಡ ಮ್ಯಾಕ್‌ಬೆತ್’ ಕೃತಿ ಹುಡುಕಿ, ಅದರ ಆಧಾರದಲ್ಲಿ ಪದ್ಯಕ್ಕೆ ಅನುರೂಪವಾದ ಸಂಭಾಷಣೆ ಸಿದ್ಧಪಡಿಸಿ, ಅದನ್ನು ಪ್ರಸಂಗಕರ್ತರಿಗೂ, ಪ್ರದರ್ಶನದ ನಿರ್ದೇಶಕರಾದ ಭಾಗವತರಿಗೂ ಕಳುಹಿಸಿ, ಅವರ ಸಲಹೆಯನುಸಾರ ಸಣ್ಣ ಪುಟ್ಟ ಬದಲಾವಣೆಯೊಂದಿಗೆ ಮ್ಯಾಕ್‌ಬೆತ್ ರಂಗಸ್ಥಳವೇರಲು ಸಜ್ಜಾಯಿತು ಎಂದು ನೆನಪಿಸಿಕೊಳ್ಳುತ್ತಾರೆ ಆರತಿ ಪಟ್ರಮೆ.

‘ಪ್ರಸಂಗದ ತಯಾರಿ ಹೇಗೆ ನಡೆದಿದೆ, ಎರಡುವರೆ ಗಂಟೆಯೊಳಗೆ ಮುಗಿಸ್ತೀರಲ್ಲ’ ಅನ್ನುತ್ತಲೇ, ಕಲಾವಿದರನ್ನೂ ಸಂಪರ್ಕಿಸಿ ಅವರಿಗೆ ಪಾತ್ರದ ಬಗ್ಗೆ ಮಾಹಿತಿ ನೀಡುತ್ತಲೇ ಇದ್ದವರು ಪ್ರಸಂಗಕರ್ತೃ, 82ರ ಹರೆಯದ ಗೋವಿಂದ ಭಟ್ಟರು. ಯಕ್ಷಗಾನ ಕಲೆಗೆ ಪೂರಕವಾಗುವ ಹೊಸ ಸಾಧ್ಯತೆಗಳು, ಪ್ರಯೋಗಗಳ ಬಗ್ಗೆ ಹೆಚ್ಚು ಯಕ್ಷಗಾನ ಅಕಾಡೆಮಿಯು ಸದಾ ಕುತೂಹಲಿಯಾಗಿರುತ್ತದೆ ಎಂಬ ನಿಲುವಿನ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ.ಎ.ಹೆಗಡೆ ಅವರೂ, ‘ಯಾಕೆ ಮಾಡಬಾರದು’ ಅಂತಂದರು. ಅಲ್ಲಿಗೆ ಮ್ಯಾಕ್‌ಬೆತ್ ರಂಗಸ್ಥಳವೇರಲು ಸಿದ್ಧತೆಯಾಯಿತು.

ಹಿಮ್ಮೇಳದಲ್ಲಿ ಪುತ್ತೂರು ರಮೇಶ್ ಭಟ್ ರಂಗನಡೆಗಳನ್ನೆಲ್ಲ ಹೇಳಿಕೊಟ್ಟು, ಸುಶ್ರಾವ್ಯವಾಗಿ ಹಾಡಿದರೆ, ಪುತ್ತೂರಿನಿಂದ ಬಂದ ಜಗನ್ನಿವಾಸ ರಾವ್ ಚೆಂಡೆಯಲ್ಲಿ, ಬೆಂಗಳೂರಿನ ಅವಿನಾಶ್ ಬೈಪಾಡಿತ್ತಾಯ ಮದ್ದಳೆಯಲ್ಲಿ ಸಹಯೋಗ ನೀಡಿದರು. ಮುಮ್ಮೇಳದಲ್ಲಿ ಸ್ವತಃ ಕಲಾವಿದೆಯಾಗಿರುವ ಆರತಿ ಅವರು ಮಹತ್ವಾಕಾಂಕ್ಷಿ ಮ್ಯಾಕ್‌ಬೆತ್ ಪಾತ್ರದಲ್ಲಿಯೂ, ಸ್ನೇಹಿತ ಬ್ಯಾಂಕೋ ಪಾತ್ರದಲ್ಲಿ ಬೆಂಗಳೂರಿನ ಶಶಾಂಕ ಅರ್ನಾಡಿ, ದುಷ್ಟ ಲಾಲಸೆಯುಳ್ಳ ಮ್ಯಾಕ್‌ಬೆತ್ ಪತ್ನಿಯಾಗಿ ಬೆಂಗಳೂರಿನ ಮನೋಜ್ ಭಟ್, ರಾಜ ಮ್ಯಾಕ್‌ಡಫ್ ಆಗಿ ಸಿಬಂತಿ ಪದ್ಮನಾಭ ಅವರು ಕಥಾ ಹಂದರವನ್ನು ಕಟ್ಟಿಕೊಟ್ಟರು. ಆರತಿಯವರ ಯಕ್ಷಗಾನ ಗರಡಿಯಲ್ಲಿ ಕಲಿಯುತ್ತಿರುವ ವೈಷ್ಣವಿ ಜೆ. ರಾವ್, ಲಹರಿ ಟಿ.ಜೆ., ಜನ್ಯ ಟಿ.ಜೆ., ಧನುಷ್ ಓಂಕಾರ್, ಸಾತ್ವಿಕ ನಾರಾಯಣ ಭಟ್ ಅವರು ಜತೆಗೂಡಿದರು. ಬೆಂಗಳೂರಿನ ಅರ್ಜುನ್ ಕೊರ್ಡೇಲ್ ಅವರ ತಂಡವು ಪ್ರಸಾಧನ, ವೇಷಭೂಷಣಗಳ ವ್ಯವಸ್ಥೆ ಒದಗಿಸಿತು.

ಕೆಟ್ಟವರಿಗೆ ಉಳಿಗಾಲವಿಲ್ಲ ಎಂದು ಸಮಾಜಕ್ಕೆ ಸಾರುವಂಥಹ ಸಂದೇಶದೊಂದಿಗೆ, ಯಕ್ಷಗಾನದ ಚೌಕಟ್ಟಿನೊಳಗೆಯೇ ಈ ಪ್ರಸಂಗ ಪ್ರದರ್ಶನಗೊಂಡು, ಆನ್‌ಲೈನ್‌ನಲ್ಲಿ ಜನಮನ್ನಣೆಯನ್ನೂ ಗಳಿಸಿತು. ಹಿತಮಿತವಾದ ಹಿಮ್ಮೇಳ, ಮುಮ್ಮೇಳ, ಆಹಾರ್ಯ, ಮಾತುಗಾರಿಕೆ, ಅಭಿನಯ, ಕುಣಿತ – ಎಲ್ಲಿಯೂ ಕೂಡ ಯಕ್ಷಗಾನದ ಚೌಕಟ್ಟು ಮೀರದೆ, ಅಪಸವ್ಯಗಳಿಲ್ಲದೆ ಪ್ರದರ್ಶನಗೊಂಡಿತು. ಇಲ್ಲಿ ಯಕ್ಷಗಾನವು ಮ್ಯಾಕ್‌ಬೆತ್ ನಾಟಕದಂತಾಗದೆ, ಇಂಗ್ಲಿಷ್ ನಾಟಕವೇ ಯಕ್ಷಗಾನೀಯವಾಗಿ ಪ್ರದರ್ಶನಗೊಂಡಿದ್ದು ಗಮನಿಸಬೇಕಾದ ಅಂಶ.

ಯಕ್ಷಗಾನವಿಂದು ಹಲವು ಸೀಮೆಗಳನ್ನು ದಾಟಿ ಜಗದಗಲ ವ್ಯಾಪಿಸಿದೆ. ಕನ್ನಡವಲ್ಲದೆ, ತುಳು, ಇಂಗ್ಲಿಷ್, ಹಿಂದಿ, ಮಲಯಾಳಂ ಯಕ್ಷಗಾನಗಳೂ ಪ್ರದರ್ಶನಗೊಂಡಿವೆ. ಇತ್ತೀಚೆಗಷ್ಟೇ ಅರೆಬಾಸೆಯಲ್ಲಿಯೂ ಯಕ್ಷಗಾನವೊಂದು ಏರ್ಪಟ್ಟಿದ್ದು, ಬ್ಯಾರಿ ಭಾಷೆಗೂ ವ್ಯಾಪಿಸುವ ಬಗ್ಗೆ ಚರ್ಚೆ ನಡೆದಿದೆ. ಯಕ್ಷಗಾನದ ವಿಶೇಷತೆಯೇ ಅದರ ಭಾಷೆ. ಹಿಂದಿ-ಇಂಗ್ಲಿಷ್ ಭಾಷೆಗಳಲ್ಲೂ ದೇಶ-ವಿದೇಶಗಳಲ್ಲಿ ಯಕ್ಷಗಾನಗಳು ಪ್ರದರ್ಶನಗೊಂಡಿವೆ.

ಹಾಗಂತ, ಶೇಕ್ಸ್‌ಪಿಯರ್ ಕೃತಿಯೊಂದು ಯಕ್ಷಗಾನ ರೂಪಕ್ಕೆ ಬಂದಿರುವುದು ಇದೇ ಮೊದಲೇನಲ್ಲ. ಆತನ ‘ಕಿಂಗ್ ಲಿಯರ್’ ಕೃತಿಯು ‘ಗುಣಸುಂದರಿ – ಪಾಪಣ್ಣ ವಿಜಯ’ ಹೆಸರಿನಲ್ಲಿ ಪ್ರದರ್ಶನಗೊಂಡು, ಡೇರೆ ಮೇಳಗಳಿಗೆ ಭರ್ಜರಿ ಕಲೆಕ್ಷನ್ ಒದಗಿಸಿ ಹಿಟ್ ಆದ ಪ್ರಸಂಗ. ಅದರಲ್ಲಿ ಹೆಸರುಗಳೂ ದೇಸೀಕರಣಗೊಂಡಿದ್ದರೆ, ಮ್ಯಾಕ್‌ಬೆತ್ ಪ್ರಸಂಗದಲ್ಲಿ ಮೂಲಕೃತಿಯಲ್ಲಿದ್ದ ಹೆಸರುಗಳನ್ನೇ ಉಳಿಸಿಕೊಳ್ಳಲಾಗಿದೆ.

ಯಕ್ಷಗಾನ ಪ್ರಸಂಗಗಳು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆ ಅತ್ಯದ್ಭುತ. ಆದರೂ ಅವು ಸಾಹಿತ್ಯದ ಮುಖ್ಯವಾಹಿನಿಯಿಂದ ದೂರವೇ ಇವೆ. ನೂರಾರು-ಸಾವಿರಾರು ಸಂಖ್ಯೆಯಲ್ಲಿ ಪೌರಾಣಿಕ ಕಥಾನಕಗಳು, ಸಾಮಾಜಿಕ, ಕಾಲ್ಪನಿಕ ಪ್ರಸಂಗಗಳನ್ನು ಕವಿಗಳು ರಚಿಸಿದ್ದಾರೆ. ಇವೆಲ್ಲವುಗಳಲ್ಲಿಯೂ ಇರುವ ಏಕೈಕ ಸಂದೇಶ – ಧರ್ಮಕ್ಕೆ ಒಳಿತಾಗುತ್ತದೆ ಎಂಬುದೇ ಆಗಿದೆ. ಇಂಥದ್ದೇ ಸಂದೇಶವುಳ್ಳ ಕಥಾನಕ, ಇಂಗ್ಲಿಷ್‌ನ ಮ್ಯಾಕ್‌ಬೆತ್.

ಪಾದೆಕಲ್ಲು ಛತ್ರ ವೆಂಕಟರಮಣ ಭಟ್ ಹಾಗೂ ಬಲಿಪ ನಾರಾಯಣ ಭಟ್ ಅವರಿಬ್ಬರೂ ‘ಕಿಂಗ್ ಲಿಯರ್’ ಆಧಾರದಲ್ಲಿ ಪ್ರತ್ಯೇಕವಾಗಿ ಗುಣಸುಂದರಿ ಪಾಪಣ್ಣ ವಿಜಯ ಹಾಗೂ ಚಂದ್ರಸೇನ ವಿಜಯ ಪ್ರಸಂಗಗಳನ್ನು ಯಕ್ಷಗಾನ ರಂಗಕ್ಕೆ ಅಳವಡಿಸಿದ್ದಾರೆ. ಸೋಫೋಕ್ಲಿಸ್ ಬರೆದ ‘ಈಡಿಪಸ್ ರೆಕ್ಸ್’ ಹೆಸರಿನ ಗ್ರೀಕ್ ನಾಟಕ ಆಧಾರಿತವಾಗಿ ‘ರಾಜಾ ಆದಿಪಾಶ’ ಹೆಸರಿನಲ್ಲಿ ಜಿ.ಎಸ್.ಭಟ್ಟ ಸಾಗರ ಅವರು ಯಕ್ಷಗಾನ ಪ್ರಸಂಗ ರಚಿಸಿದ್ದಾರೆ. ಅದೇ ರೀತಿ, ಶೇಕ್ಸ್‌ಪಿಯರ್‌ನ ಹ್ಯಾಮ್ಲೆಟ್ ನಾಟಕವನ್ನು ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ ಅವರು ‘ಗೆಂಡ ಸಂಪಿಗೆ’ ಹೆಸರಿನಲ್ಲಿ (ಕುವೆಂಪು ‘ರಕ್ತಾಕ್ಷಿ’ ಅನುವಾದ ಆಧಾರಿತ), ಹೊಸ್ತೋಟ ಮಂಜುನಾಥ ಭಾಗವತರು ಇದೇ ಮ್ಯಾಕ್‌ಬೆತ್ ಅನ್ನು ‘ಮೇಘಕೇತ’ ಹೆಸರಿನಲ್ಲಿ, ‘ಆಲ್ ಇಸ್ ವೆಲ್ ದ್ಯಾಟ್ ಎಂಡ್ಸ್ ವೆಲ್’ ಅನ್ನು ‘ಗುಣಪನ ಕಲ್ಯಾಣ’ ಹೆಸರಿನಲ್ಲಿಯೂ ಯಕ್ಷಗಾನ ರೂಪಕ್ಕೆ ಪರಿವರ್ತಿಸಿದ್ದರು. ‘ಸೋಹ್ರಾಬ್ ಆ್ಯಂಡ್ ರುಸ್ತುಮ್’ ಎಂಬ ಮ್ಯಾಥ್ಯೂ ಅರ್ನಾಲ್ಡ್‌ರ ಕೃತಿಯನ್ನು ಭಾಗವತ ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ‘ದಳವಾಯಿ ಮುದ್ದಣ್ಣ’ ಹೆಸರಿನಲ್ಲಿ ತುಳು ಯಕ್ಷರಂಗಕ್ಕೆ ಪರಿಚಯಿಸಿದ್ದಾರೆ.

ನಿರ್ದಿಷ್ಟ ಭಾಷೆಯಲ್ಲಿ ಪ್ರದರ್ಶನಗೊಳ್ಳುವ ಯಕ್ಷಗಾನ ಪ್ರಸಂಗಗಳಲ್ಲಿ, ಅನ್ಯ ಭಾಷೆಯ ಸಂಕರವಿರುವುದಿಲ್ಲ. ಉನ್ನತ ಶಿಕ್ಷಣ ಪಡೆದ ಕಲಾವಿದರು, ಕಚೇರಿಯಲ್ಲಿಯೋ, ಬಾಹ್ಯ ವ್ಯವಹಾರದಲ್ಲಿಯೋ ಢಾಳಾಗಿ ಇಂಗ್ಲಿಷ್ ಬಳಸುತ್ತಿದ್ದರೆ, ವೇಷ ಹಾಕಿ ರಂಗವೇರಿದರೆ, ಅವರ ಬಾಯಿಂದ ಬರುವುದು ಕನ್ನಡದ ಆಣಿಮುತ್ತುಗಳೇ. ಇದು ಆ ಕಲೆಯ ಔನ್ನತ್ಯ. ಆದರೆ, ಬೇರೆ ಭಾಷೆಗಳ ಕೃತಿಯನ್ನು ಯಕ್ಷಗಾನಕ್ಕೆ ತರುವಾಗ ಪ್ರಸಂಗ ಸಾಹಿತ್ಯವು ದೇಸೀ ಭಾಷೆಯಲ್ಲೇ ಇರುವುದು ಚೆನ್ನ. ಕನ್ನಡ ಪ್ರಸಂಗಗಳಿಗೆ ಕನ್ನಡದ್ದೇ ಪದ್ಯಗಳಿರುತ್ತವೆ, ಅದೇ ರೀತಿ ತುಳು, ಹಿಂದಿಯ ಪದ್ಯಗಳೂ ಅನುವಾದಗೊಂಡಿವೆ, ರಚನೆಯೂ ಆಗಿವೆ. ಇಲ್ಲಿ, ಪಣಂಬೂರು ಐತಾಳರ ತಂಡವು ಪ್ರದರ್ಶಿಸಿದ ಇಂಗ್ಲಿಷ್ ಯಕ್ಷಗಾನ, ವಿದ್ಯಾ ಕೋಳ್ಯೂರು ಅವರ ತಂಡವು ದೇಶದ ವಿವಿಧೆಡೆ ಪ್ರದರ್ಶಿಸಿದ ಹಿಂದಿ ಯಕ್ಷಗಾನಗಳೂ ಉಲ್ಲೇಖಾರ್ಹವೇ.

ಸಾಹಿತ್ಯ ಕೃತಿಗಳು ಬೇರೆ ಭಾಷೆಯಿಂದ ಅನುವಾದಗೊಂಡು ಕನ್ನಡಕ್ಕೆ ಬಂದಾಗ ಆ ಸಾಹಿತ್ಯದ ವ್ಯಾಪ್ತಿ ವಿಸ್ತಾರಗೊಂಡಂತೆಯೇ, ಜಗತ್ತಿನ ವಿವಿಧ ಭಾಗಗಳಲ್ಲಿ ಚಾಲ್ತಿಯಲ್ಲಿರುವ ಆಂಗ್ಲ ಕೃತಿಗಳು ಯಕ್ಷಗಾನ ರೂಪಕ್ಕೆ ಬಂದಾಗ, ಯಕ್ಷಗಾನದ ವ್ಯಾಪ್ತಿಯೂ ಬೆಳೆಯುವ ಸಾಧ್ಯತೆಗಳಿರುತ್ತವೆ. ಕಲೆಯ ಬೆಳವಣಿಗೆಗೆ ಭಾಷೆಯೊಂದು ಅಡ್ಡಿಯಾಗಬಾರದು ಮತ್ತು ವಿಶೇಷವಾಗಿ ಯಕ್ಷಗಾನೇತರರನ್ನೂ ಒಳಗೊಳ್ಳುವ ನಿಟ್ಟಿನಲ್ಲಿ ಇಂಥ ಪ್ರಯತ್ನಗಳು ಆಗುತ್ತಲೇ ಇವೆ. ಈ ಪರಿಯ ಕೊಡು-ಕೊಳ್ಳುವಿಕೆಗಳು ಯಕ್ಷಗಾನದ ಚೌಕಟ್ಟಿನೊಳಗೆ ನಡೆದರೆ ಎಲ್ಲವೂ ಚೆನ್ನ.

ರೇಡಿಯೋ, ಟಿವಿ, ಅಂತರಜಾಲ ಮಾಧ್ಯಮಗಳನ್ನೇ ಗಮನಿಸುತ್ತಿದ್ದರೆ, ನಮ್ಮಲ್ಲೇ ಆಡುನುಡಿಯಲ್ಲಿ ಯಾವೆಲ್ಲ ರೀತಿಯ ಬದಲಾವಣೆಗಳಾಗಿಲ್ಲ? ಭಾಷಾಸಂಕರವಾಗಿದೆ, ಅಪಭ್ರಂಶಗಳೇ ಹೆಚ್ಚಾಗಿವೆ. ಆದರೆ, ಯಕ್ಷಗಾನ? ರಂಗಕ್ಕೇರಿದವನ ಬಾಯಲ್ಲಿ ಒಂದು ಇಂಗ್ಲಿಷ್ ಶಬ್ದ ಬರುವುದಿಲ್ಲ. ಕೇವಲ ದೇಸೀ ಶಬ್ದಗಳೇ ನಿರರ್ಗಳವಾಗಿ ಹರಿದಾಡುತ್ತದೆ ಎಂದರೆ, ಕಲೆಯ ಬಗೆಗಿನ ಪ್ರೀತಿಯಿಂದ ಪಾತ್ರಧಾರಿಯೊಬ್ಬನ ಪರಕಾಯ ಪ್ರವೇಶ ಸಾಮರ್ಥ್ಯವೂ, ಸಾಹಿತ್ಯದ ಉಳಿವಿನಲ್ಲಿ ರಂಗಕಲೆಯೊಂದರ ಕೊಡುಗೆಯೂ ವೇದ್ಯವಾಗುತ್ತದೆ.

ಮ್ಯಾಕ್‌ಬೆತ್ ಯಕ್ಷಗಾನ ಪ್ರದರ್ಶನದ ಬಗ್ಗೆ ಆಕ್ಷೇಪಣೆಗಳೂ ಬಂದಿವೆ. ಬಹುತೇಕರು ಯಕ್ಷಗಾನ ಪ್ರದರ್ಶನ ನೋಡದೆ ವಿರೋಧಿಸಿದವರು. ಇದು ಪ್ರಜಾವಾಣಿಯ ಫೇಸ್‌ಬುಕ್ ಪುಟದಲ್ಲಿ ಜಗದಗಲ ನೇರ ಪ್ರಸಾರವಾದ ಬಳಿಕ, ಹೆಚ್ಚಿನವರು ತಮ್ಮ ಅಭಿಪ್ರಾಯ ಬದಲಿಸಿಕೊಂಡರು. ಹೆಸರುಗಳನ್ನು ದೇಸೀಕರಣಗೊಳಿಸಬಹುದು ಎಂಬುದು ಬಹುತೇಕರ ಸಲಹೆಯಾಗಿತ್ತು. ಆದರೆ, ಹೀಗೆ ಮಾಡಿದರೆ ಅದು ಮ್ಯಾಕ್‌ಬೆತ್ ಯಕ್ಷಗಾನವಾಗಲಾರದು ಎಂಬುದು ಈ ಪ್ರಸಂಗದ ಕವಿ ಕೆ.ಗೋವಿಂದ ಭಟ್ಟರ ಖಚಿತ ಅಭಿಪ್ರಾಯ. ಅವರು ಪದ್ಯ ಸಾಹಿತ್ಯದಲ್ಲಿಯೂ ಮ್ಯಾಕ್‌ಬೆತ್ ನಾಟಕದ ಪಾತ್ರಗಳ ಹೆಸರನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಛಂದಸ್ಸು, ಮಾತ್ರಾಗಣ, ತಾಳ, ರಾಗ ಅಥವಾ ಮಟ್ಟು – ಇವುಗಳನ್ನೆಲ್ಲ ಬಳಸಿಕೊಂಡು, ಎಲ್ಲೂ ತಪ್ಪಾಗದಂತೆ, ಯಕ್ಷಗಾನದ ಪದ್ಯ ಸಾಹಿತ್ಯವೊಂದನ್ನು ಬರೆಯುವ ಕವಿಯ ಸಾಧನೆ, ಶ್ರಮ ಸಣ್ಣದೇನಲ್ಲ ಎಂಬುದೂ ಇಲ್ಲಿ ಉಲ್ಲೇಖಾರ್ಹ.

ಈ ಸಂದರ್ಭದಲ್ಲಿ, ಕರ್ನಾಟಕ ಯಕ್ಷಗಾನ ಅಕಾಡೆಮಿ ನಡೆಸುತ್ತಿರುವ ‘ಮಾತಿನ ಮಂಟಪ’ ಎಂಬ ಯಕ್ಷಗಾನ ಕಲಾವಿದರೊಂದಿಗಿನ ಆನ್‌ಲೈನ್ ಸಂವಾದ ಕಾರ್ಯಕ್ರಮದಲ್ಲಿ ಹಿರಿಯ ಮದ್ದಳೆಗಾರ ಲಕ್ಷ್ಮೀಶ ಅಮ್ಮಣ್ಣಾಯರ ಮಾತೊಂದು ನೆನಪಾಗುತ್ತದೆ. ಯಕ್ಷಗಾನದ ಸತ್ತ್ವ ಗಟ್ಟಿಯಿದೆ, ಯಾವುದೇ ಆಧುನಿಕ ಬದಲಾವಣೆಗಳು ಅದರ ಮೇಲೆ ಪರಿಣಾಮ ಬೀರದು ಎಂಬುದಕ್ಕೆ ಅವರೊಂದು ಉಪಮೆ ನೀಡಿದ್ದರು. ಯಕ್ಷಗಾನವೆಂಬುದು ಈಗಾಗಲೇ ಹಿರಿಯರೆಲ್ಲ ಅಲಂಕರಿಸಿಬಿಟ್ಟ ಕಾಮಧೇನುವಿದ್ದಂತೆ. ಮತ್ತಷ್ಟು ಚಂದಗಾಣಿಸಲು ಅದಕ್ಕೆ ಬೇಕು ಬೇಕಾದ ಮತ್ತು ಬೇಡವಾದ ಆಭರಣಗಳನ್ನೂ ತೊಡಿಸಲಾಗಿದೆ. ಆದರೆ ಆಭರಣಗಳಲ್ಲೇ ಕಾಮಧೇನು ಮುಳುಗಿಹೋದರೆ, ಅದನ್ನು ಗುರುತಿಸುವುದೆಂತು? ಅತಿ ಎನಿಸಿದ ಆಭರಣಗಳನ್ನು ಒಂದೊಂದಾಗಿ ಸರಿಸುತ್ತಾ ಹೋದರೆ, ಯಕ್ಷಗಾನವಂತೂ ಒಳಗಿನಿಂದ ಸುಂದರವಾಗಿ ಕಾಣಿಸುತ್ತದೆ. ಅಂದರೆ, ಯಕ್ಷಗಾನದ ಚೌಕಟ್ಟಿನಲ್ಲೇ ಅದರ ಅಲಂಕರಣ ನಡೆಯಬೇಕು ಎಂದೂ, ಒಳಗಿರುವ ಯಕ್ಷಗಾನವಂತೂ ಜಾಜ್ವಲ್ಯಮಾನವಾಗಿ, ಭದ್ರವಾಗಿ ಇರುತ್ತದೆ ಎಂದೂ ಅರ್ಥೈಸಿಕೊಳ್ಳಬಹುದು.

ಯಕ್ಷಗಾನದ ಹೆಸರಲ್ಲಾಗುತ್ತಿರುವ ಅಪಸವ್ಯಗಳಿಗಿಂತ, ಚೌಕಟ್ಟು ಮೀರದೆ ನಡೆಯಬಹುದಾದ ಪ್ರದರ್ಶನಗಳು ಯಾವತ್ತೂ ಕಲೆಯು ಕಾಲನೊಂದಿಗೆ ಜೊತೆಯಾಗಿ ಎಗ್ಗಿಲ್ಲದೆ ಹೆಜ್ಜೆ ಹಾಕುತ್ತಾ ಬೆಳೆಯಲು ಪೂರಕವೇ. ಇತ್ತೀಚೆಗೆ ಯಕ್ಷಗಾನ ಪ್ರದರ್ಶನಗಳು ಹೆಚ್ಚು ಹೆಚ್ಚು ಅಂತರಜಾಲದ ಮೂಲಕವೇ ಪ್ರಸಾರವಾಗುತ್ತಿರುವ ಈ ಕಾಲದಲ್ಲಿ, ಆನ್‌ಲೈನ್ ಪ್ರೇಕ್ಷಕರ ಚರ್ಚೆಯ ಧಾಟಿಯೂ ಇದನ್ನೇ ಬಿಂಬಿಸುತ್ತದೆ.

ವಸುಧೈವ ಕುಟುಂಬ ಎಂದು ಭಾವಿಸುವ ನಾವುಗಳು ಜಗತ್ತಿನ ಎಲ್ಲವನ್ನೂ ತಮ್ಮದಾಗಿಸಿಕೊಂಡಿದ್ದೇವೆ. ಆನೋ ಭದ್ರಾಃ ಕೃತವೋ ಯಂತು ವಿಶ್ವತಃ – ಅಂದರೆ ವಿಶ್ವದೆಲ್ಲೆಡೆಯಿಂದ ಜ್ಞಾನದ ಬೆಳಕು ಹರಿದು ಬರಲಿ ಎಂದು ತಿಳಿದವರು ಭಾರತೀಯರು. ಹಿಂದೆಂದಿಗಿಂತಲೂ ಹೆಚ್ಚು ಮಾನಸಿಕ ತುಮುಲಗಳು ಕಾಡುವ ಈ ಕೋವಿಡ್ ಕಾಲಘಟ್ಟದಲ್ಲಿ, ಮನಸ್ಸಿನ ದುಗುಡ ನಿವಾರಿಸುವ ರಂಗ ಕಲೆಗಳನ್ನು ಪರಂಪರೆಗೆ ಧಕ್ಕೆಯಾಗದಂತೆ ಉಳಿಸಿ, ಬೆಳೆಸುವಲ್ಲಿ ಪ್ರಯೋಗಶೀಲ ಮನಸ್ಸುಗಳ ಕೊಡುಗೆ, ಜವಾಬ್ದಾರಿ ಹೆಚ್ಚಾಗಿದೆ.

Published in Prajavani on 28 Nov 2020 as PV Web Exclusive by me, Avinash Baipadithaya

LEAVE A REPLY

Please enter your comment!
Please enter your name here