‘ಧರ್ಮ ರಾಜಕೀಯ’ ಬೇಡ, ರಾಜಕೀಯ ಧರ್ಮ ಇರಲಿ

12
358

ಮಾಲೆಗಾಂವ್‌ನಲ್ಲಿ ಐದು ಮಂದಿಯ ಸಾವಿಗೆ ಕಾರಣವಾದ ಬಾಂಬ್ ಸ್ಫೋಟ ಪ್ರಕರಣವೊಂದು ಇಡೀ ದೇಶದ ಮಾನವನ್ನೇ ಹರಾಜು ಮಾಡುವಷ್ಟರ ಮಟ್ಟಿಗೆ ಬೆಳೆಯುತ್ತಿರುವುದನ್ನು ನೋಡಿದರೆ, ಈಗಾಗಲೇ ನಡೆಯುತ್ತಿರುವ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗಳು ಮತ್ತು ಸದ್ಯೋಭವಿಷ್ಯದಲ್ಲೇ ಬರಲಿರುವ ಮಹಾ ಚುನಾವಣೆಗಳಿಗೂ ಇದಕ್ಕೂ ಸಂಬಂಧವಿದೆ ಎಂಬ ಶಂಕೆ ಬಲವಾಗುತ್ತಿದೆ.

ನಮ್ಮನ್ನಾಳುವವರಿಗೆ ಖಂಡಿಸಲೂ ಪುರುಸೊತ್ತಿಲ್ಲದಂತೆ ಅಲ್ಲಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಗಳಿಂದ ಭಯಭೀತರಾಗಿದ್ದಲ್ಲದೆ, ಏರುತ್ತಿರುವ ಬೆಲೆಗಳ ನಡುವೆ ಬದುಕು ಸಾಗಿಸಬೇಕಾದ ವ್ಯಥೆಯೊಂದಿಗೆ ಜನತೆಯು ಆಡಳಿತಾರೂಢ ಪಕ್ಷಗಳ ವಿರುದ್ಧ ಕಿಡಿ ಕಾರುತ್ತಿದ್ದರೆ, ಜನರ ಗಮನವನ್ನು ಬೇರೆಡೆ ಸೆಳೆದು ಓಟು ಬ್ಯಾಂಕ್ ಭದ್ರಪಡಿಸಿಕೊಳ್ಳುವ ಮತ್ತು ಚುನಾವಣೆಗಳಲ್ಲಿ ಆಗಲಿರುವ ಮುಖಭಂಗವನ್ನು ತಪ್ಪಿಸಿಕೊಳ್ಳುವ ಎಗ್ಗಿಲ್ಲದ ಪ್ರಯತ್ನವೊಂದು ನಡೆಯುತ್ತಿದೆ ಎಂಬ ವಿರೋಧ ಪಕ್ಷಗಳ ಆರೋಪವನ್ನೂ ಇಲ್ಲಿ ಗಮನಿಸಬೇಕಾಗುತ್ತದೆ.

ಕಳೆದ ಒಂದು ತಿಂಗಳಿಂದ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ನೀವು ಗಮನಿಸಿರಬಹುದು. ಮಾಲೆಗಾಂವ್ ಎಂಬಲ್ಲಿ ನಡೆದ ಸ್ಫೋಟ ಪ್ರಕರಣವೊಂದು ಅಂತಾರಾಷ್ಟ್ರೀಯವಾಗಿ ಕುತೂಹಲ ಕೆರಳಿಸತೊಡಗಿದೆ. ಇದಕ್ಕೆ ಕಾರಣ? “ಹಿಂದೂ ಉಗ್ರವಾದ” ಎಂಬೊಂದು ಪದ ಪ್ರಯೋಗ. ಇದುವರೆಗೆ ದೇಶದ ವಿವಿಧೆಡೆ ನಡೆದಿರುವ ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಬಂಧನಕ್ಕೀಡಾದವರಲ್ಲಿ, ಅಲ್ ಖಾಯಿದಾ, ಲಷ್ಕರ್, ಸಿಮಿ, ಐಎಸ್ಐ ಎಂಬಿತ್ಯಾದಿ ಭಾರತದ ದೇಶದ್ರೋಹಿ ಸಂಘಟನೆಗಳ ಹೆಸರಷ್ಟೇ ಕೇಳಿಬರುತ್ತಿತ್ತು. ಇದೀಗ ಹಿಂದೂ ಉಗ್ರವಾದವೊಂದು ಹುಟ್ಟಿಕೊಂಡಿದೆ ಎಂಬ ಕೂಗು ಕೇಳಿಬರುತ್ತಿದೆ.

ಅದಕ್ಕೆ ಸರಿಯಾಗಿ, ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್, ಸ್ವಾಮೀಜಿ ದಯಾನಂದ ಪಾಂಡೆ ಮುಂತಾದವರು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಬೀಸಿದ ಬಲೆಗೆ ಬಿದ್ದಿದ್ದಾರೆ. ಇದುವರೆಗೆ ಇದು ನಮ್ಮ ದೇಶ, ನಮ್ಮ ಮಣ್ಣು, ನಮ್ಮ ತಾಯ್ನೆಲ ಎಂದೆಲ್ಲಾ ಹೆಮ್ಮೆ ಪಟ್ಟುಕೊಂಡಿದ್ದ ಬಹುಸಂಖ್ಯಾತ ಸಮುದಾಯ ಬೆಚ್ಚಿ ಬಿದ್ದಿದೆ. ಹೆಚ್ಚಿನವರಂತೂ ಇಂಥದ್ದೊಂದು ವಿದ್ಯಮಾನವನ್ನು ನಂಬುವ ಸ್ಥಿತಿಯಲ್ಲಿಲ್ಲ.

ಸಂದು ಹೋದ ಸಂಜೋತಾ ಎಕ್ಸ್‌ಪ್ರೆಸ್ ರೈಲಿನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ 70 ಮಂದಿ ಮುಗ್ಧರು ಸಾವನ್ನಪ್ಪಿದ್ದರು. ಇದರ ಹಿಂದೆ ಐಎಸ್ಐ ಕೈವಾಡವಿತ್ತು ಎಂದು ತನಿಖೆ ನಡೆಸಿದ ಪೊಲೀಸರು, ದೇಶದ ಗುಪ್ತಚರ ಮಂಡಳಿ (ಐಬಿ) ಕೂಡ ಜಗತ್ತಿಗೇ ಹೇಳಿದ್ದರು. ಅದರಲ್ಲಿ ಆರ್‌ಡಿಎಕ್ಸ್ ಬಳಸಲಾಗಿರಲಿಲ್ಲ, ಬದಲಾಗಿ ಇಂಧನ ಎಣ್ಣೆ, ಪೊಟ್ಯಾಷಿಯಂ ಕ್ಲೋರೇಟ್ ಮತ್ತು ಸಲ್ಫರ್ ಮಿಶ್ರಣವನ್ನು ಬಳಸಲಾಗಿತ್ತು ಎಂದು ಫೋರೆನ್ಸಿಕ್ ವರದಿಗಳು ಸಾರಿ ಸಾರಿ ಹೇಳಿದ್ದವು. ಭಾರತ-ಪಾಕಿಸ್ತಾನ ನಡುವೆ ನಡೆದ ಅಧಿಕಾರಿಗಳ ಮಟ್ಟದ, ರಾಜಕಾರಣಿಗಳ ಮಟ್ಟದ ಮಾತುಕತೆಯಲ್ಲೂ ಇದು ಪ್ರಸ್ತಾಪವಾಗಿತ್ತು. ಆದರೆ, ಈಗ ‘ಹಿಂದೂ ಉಗ್ರವಾದ’ ಎಂಬೊಂದು ಅಂಶವನ್ನು ಮತ್ತಷ್ಟು ದೃಢಪಡಿಸುವ ನಿಟ್ಟಿನಲ್ಲಿ, ಆ ಸ್ಫೋಟದಲ್ಲಿ ಹಿಂದೂ ಉಗ್ರರ ಕೈವಾಡವಿದೆ, ಸೇನಾಪಡೆಯಿಂದ ಕದ್ದು ತಂದ 60 ಕೆಜಿ ಆರ್‌ಡಿಎಕ್ಸ್ ಬಳಸಲಾಗಿತ್ತು ಎಂಬೆಲ್ಲಾ ಹೇಳಿಕೆಗಳು ಹೊರಬಿದ್ದಿವೆ.

ಹಾಗಿದ್ದರೆ, ಭಾರತವು ಸಂದರ್ಭಕ್ಕೆ ತಕ್ಕಂತೆ ನಾಲಿಗೆ ಹೊರಳಿಸುವ ದೇಶ ಎಂದು ಬಿಂಬಿಸಲಾಗುತ್ತಿದೆಯೇ? ಮುಗ್ಧರ ಸಾವು ನೋವು ಸಂಭವಿಸಿದ ಮುಂಬಯಿ, ಜೈಪುರ, ಅಹಮದಾಬಾದ್, ನಾಸಿಕ್, ಅಸ್ಸಾಂ, ದೆಹಲಿ ಸರಣಿ ಬಾಂಬ್ ಸ್ಫೋಟಗಳ ಮೂಲ ಕಂಡುಹಿಡಿಯಲು, ಆರೋಪಿಗಳನ್ನು ಪತ್ತೆ ಹಚ್ಚಿ ಶಿಕ್ಷಿಸಲು ಇಲ್ಲದ ಧಾವಂತ ಮಾಲೆಂಗಾವ್ ಸ್ಫೋಟ ಪ್ರಕರಣಕ್ಕೆ ಮಾತ್ರ ಏಕೆ ಎಂಬ ಜನಸಾಮಾನ್ಯನ ಪ್ರಶ್ನೆ. ಇದಕ್ಕೆ ಉತ್ತರ ಮಾತ್ರ ಕೇವಲ ಒಂದು ಪ್ರಶ್ನಾರ್ಥಕ ಚಿಹ್ನೆ. ಉಳಿದೆಲ್ಲಾ ಸ್ಫೋಟ ಪ್ರಕರಣಗಳಲ್ಲಿ ದೇಶದ ಅಲ್ಪ ಸಂಖ್ಯಾತ ಸಮುದಾಯದವರ ಪಾತ್ರ ಎದ್ದು ಕಂಡಿದೆ, ಹಲವರು ಬಂಧಿತರಾಗಿದ್ದಾರೆ, ಸಿಮಿ ಕೈವಾಡ ಗೋಚರಿಸಿದೆ, ಹೀಗಾಗಿ ಆ ಸಮುದಾಯಕ್ಕೆ ನೋವಾಗುತ್ತದೆ, ಅವರ ಮರ್ಯಾದೆ ಮೂರಾಬಟ್ಟೆಯಾಗಿದೆ ಎಂಬ ತುಡಿತ, ಹೃದಯದ ಮಿಡಿತ ನಮ್ಮ ಓಟುಬ್ಯಾಂಕಿನಲ್ಲಿ ಮಗ್ನರಾಗಿರುವ ರಾಜಕಾರಣಿಗಳಿಗೆ ಇರಬಹುದು. ಅದು ಇರಲಿ, ಆದರೆ ಆ ಸಮುದಾಯವನ್ನು ಓಲೈಸುವ, ಓಟುಗಳನ್ನು ಪಡೆಯುವ ಏಕೈಕ ಉದ್ದೇಶದಿಂದ ಒಂದು ಸಮುದಾಯದ ಮೇಲೆ ಇಂಥ ಆರೋಪ ಮಾಡಲಾಗುತ್ತಿದೆ ಎಂಬ ಅಭಿಪ್ರಾಯವನ್ನು ಬಿಜೆಪಿ ಪ್ರಧಾನಮಂತ್ರಿ ಪದವಿ ಅಭ್ಯರ್ಥಿ ಎಲ್.ಕೆ.ಆಡ್ವಾಣಿ ವ್ಯಕ್ತಪಡಿಸಿದ್ದಾರೆ. ಹಾಗಿದ್ದರೆ ಭಾರತೀಯರು ಯಾರನ್ನು ನಂಬಬೇಕು?

ಭಯೋತ್ಪಾದಕ ಚಟುವಟಿಕೆ, ದೇಶದೆಲ್ಲೆಡೆ ವಿಧ್ವಂಸಕ ಕೃತ್ಯಗಳ ವಿಷಯದಲ್ಲಿ ಕೇಂದ್ರ ಸರಕಾರವು ಎಲ್ಲೆಡೆಯಿಂದ ಟೀಕೆಗೆ ಗುರಿಯಾಗುತ್ತಿದೆ. ಉಗ್ರವಾದ ಹತ್ತಿಕ್ಕುವಲ್ಲಿ ವಿಫಲವಾಗಿದೆ, ಭಯೋತ್ಪಾದಕರ ಬಗ್ಗೆ ಮೃದು ಧೋರಣೆ ಹೊಂದಿದೆ, ಸರಕಾರಕ್ಕೆ ಧೈರ್ಯ ಇಲ್ಲ ಎಂಬಿತ್ಯಾದಿ ಟೀಕೆಗಳೆಲ್ಲಾ ಕೇಂದ್ರವನ್ನು ಕಂಗೆಡಿಸಿರಬಹುದು. ಹೀಗಾಗಿ ಹತಾಶೆಯಿಂದ ಅದು ತಮ್ಮ ಓಟು ಬ್ಯಾಂಕು ಅಲ್ಲದವರನ್ನು ಪ್ರಕರಣದಲ್ಲಿ ಸಿಲುಕಿಸಿ, ಕೈತೊಳೆದುಕೊಳ್ಳಲು ಪ್ರಯತ್ನಿಸುತ್ತಿದೆಯೇ ಎಂಬ ಪ್ರಶ್ನೆ ಏಳುವುದು ಸಹಜ. ವಿರೋಧ ಪಕ್ಷಗಳು ಕೂಡ ಕೇಳುವುದು ಇದನ್ನೇ. ಒಂದು ದೇಶದ ಸಾರ್ವಭೌಮತೆಗೆ ಧಕ್ಕೆ ಬಂದಾಗ, ಜಗತ್ತಿನೆದುರು ತಮ್ಮದೇ ಗುಪ್ತಚರ ಮಂಡಳಿಯ ವೈಫಲ್ಯವನ್ನು ಬಟಾಬಯಲು ಮಾಡಿಬಿಡುವ, ಅದರ ಹೆಸರಿಗೂ ಮಸಿ ಬಳಿಯುವ ಪ್ರಯತ್ನ ಮಾಡುವುದು, ದೇಶದ ಪ್ರಧಾನಿಯ ಮಾತಿನ ವಿಶ್ವಾಸಾರ್ಹತೆಗೆ ಧಕ್ಕೆಯಾಗುವಂತೆ ನಡೆದುಕೊಳ್ಳುವ ಕ್ರಮ ಎಷ್ಟು ಸಮಂಜಸ ಎಂಬುದರ ಬಗೆಗೂ ಸ್ವಲ್ಪ ಯೋಚನೆ ಮಾಡಬೇಕಿತ್ತು. ಒಟ್ಟಿನಲ್ಲಿ ಅಂತಾರಾಷ್ಟ್ರೀಯ ಸಮುದಾಯ ಭಾರತದತ್ತ ನೋಡಿ ಕೈತಟ್ಟಿಕೊಳ್ಳುವಂತಾಗಿದೆ.

ಸೇನೆಯಿಂದ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಕದ್ದು ತಂದಿದ್ದ ಆರ್‌ಡಿಎಕ್ಸನ್ನು ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟದಲ್ಲಿ ಬಳಸಲಾಗಿದೆ ಎಂಬ ಹೇಳಿಕೆಯನ್ನು ಮರುದಿನವೇ ‘ಮಾಧ್ಯಮಗಳು ತಿರುಚಿವೆ’ ಎನ್ನುತ್ತಾ ನಿರಾಕರಿಸುವ ಪ್ರಸಂಗ ಬಂದಿದ್ದೇಕೆ? ಸಂಜೋತಾ ಸ್ಫೋಟದಲ್ಲಿ ಐಎಸ್ಐ ಕೈವಾಡವಿದೆ ಎಂಬುದನ್ನು ದೇಶದ ಉನ್ನತ ಬೇಹುಗಾರಿಕಾ ಸಂಸ್ಥೆ ಅದಾಗಲೇ ತನಿಖೆ ನಡೆಸಿ, ಇಡೀ ವಿಶ್ವಕ್ಕೆ ಸಾರಿತ್ತು. ಇದೀಗ ಸ್ಫೋಟದಲ್ಲಿ ಗುಪ್ತಚರ ಮಂಡಳಿಯ ಹೇಳಿಕೆಯನ್ನು ಮರೆತೇಬಿಟ್ಟವರಂತೆ, ಸೇನಾ ಅಧಿಕಾರಿಯ ಕೈವಾಡ ಎಂದೆಲ್ಲಾ ಎಟಿಎಸ್ ಹೇಳಿಕೆ ನೀಡಿ, ಕೇಂದ್ರದ ವಿಶ್ವಾಸಾರ್ಹತೆಯನ್ನೇ ಅಂತಾರಾಷ್ಟ್ರೀಯವಾಗಿ ನೀರುಪಾಲು ಮಾಡಿದಂತಾಗಿದೆ. ಇದಕ್ಕೂ ಹೆಚ್ಚಾಗಿ, ಸ್ಫೋಟ ತಾಣದಲ್ಲಿ ನಡೆಸಿದ ಫೋರೆನ್ಸಿಕ್ ಪರೀಕ್ಷೆ ಹಾಗೂ ಸ್ಫೋಟವಾಗದೆ ಉಳಿದಿದ್ದ ಎರಡು ಬಾಂಬ್‌ಗಳು ಪತ್ತೆಯಾಗಿ ಪರೀಕ್ಷೆ ನಡೆಸಿದಾಗ ಕೂಡ, ಆರ್‌ಡಿಎಕ್ಸ್ ಬಳಸಿರಲಿಲ್ಲ ಎಂಬುದು ಸಾಬೀತಾಗಿತ್ತು. ಈಗ ಅದಕ್ಕೆ ಸೇನೆಯಿಂದ ಪುರೋಹಿತ್ ಕದ್ದು ತಂದ ಆರ್‌ಡಿಎಕ್ಸ್ ಬಳಸಲಾಗಿದೆ ಎಂದು ಹೇಳಿದ್ದು ಎಷ್ಟು ಆಭಾಸಕರ! ಸೇನೆಯಿಂದ 60 ಕೆಜಿ ಆರ್‌ಡಿಎಕ್ಸ್ ನಾಪತ್ತೆಯಾಗುವಾಗ ಸೇನೆಯು ಅಂದು ತನಿಖೆ ನಡೆಸಿರಲಿಲ್ಲವೇ? ಸೇನಾಪಡೆಗಳೆಂದರೆ ಅಷ್ಟೊಂದು ದುರ್ಬಲ ವ್ಯವಸ್ಥೆ ಇರುವಂಥದ್ದೇ ಎಂಬುದು ಕೂಡ ಇಲ್ಲಿ ಗಮನಿಸಬೇಕಾದ ವಿಚಾರ.

ತನಿಖೆಯನ್ನು ಮತ್ತಷ್ಟು ಖಚಿತಪಡಿಸಿಕೊಂಡ ಮೇಲಷ್ಟೇ ಎಟಿಎಸ್ ಈ ಬಗ್ಗೆ ದೃಢವಾದ ಹೇಳಿಕೆ ನೀಡಬಹುದಿತ್ತಲ್ಲ? ಹಾಗಿದ್ದರೆ, ಈ ದೇಶದಲ್ಲಾಗುವ ಯಾವುದೇ ತನಿಖೆಯನ್ನೂ ನಂಬಲಾಗದು ಎಂಬ ಪರಿಸ್ಥಿತಿ ಏಕೆ ಬರಬೇಕು? ಗೋಧ್ರಾ ಹಿಂಸಾಚಾರದ ಬಗ್ಗೆಯೂ ರಾಜಕಾರಣಿಗಳು ತಮಗೆ ಬೇಕಾದಂತೆ ಮೂರ್ನಾಲ್ಕು ಆಯೋಗಗಳ ಮೂಲಕ ವರದಿ ತಯಾರಿಸಿಕೊಂಡಿದ್ದಾರೆ. ಇದೀಗ ಭಯೋತ್ಪಾದಕ ಚಟುವಟಿಕೆಗಳ ಕುರಿತ ತನಿಖೆಯೂ ಇದೇ ದಿಕ್ಕಿನಲ್ಲಿ ಸಾಗುತ್ತಿದೆ. ಹಾಗಿದ್ದರೆ ಈ ದೇಶದಲ್ಲಿ ಸತ್ಯ ಹೊರಬರುವುದೇ ಇಲ್ಲವೇ? ಈ ರೀತಿಯ ಕೆಸರು ಎರಚಿಕೊಳ್ಳುವ ರಾಜಕಾರಣವು ಹೀಗೇ ಮುಂದುವರಿದರೆ, ಭಯೋತ್ಪಾದನೆ ವಿರುದ್ಧ ಕಠಿಣತಮವಾದ ಪೋಟಾದಂತಹ ಕಾನೂನು ಜಾರಿಗೆ ಬಂದಲ್ಲಿ, ಅದನ್ನು ಕೂಡ ಕೇವಲ ರಾಜಕೀಯ ದ್ವೇಷಕ್ಕೇ ಬಳಸಿಕೊಂಡರೆ, ಬಸವಳಿಯುವುದು ಬಡ ಪ್ರಜೆಯೇ ಅಲ್ಲವೇ?  ಇದು ‘ಸತ್ಯಮೇವ ಜಯತೆ’ ಎಂಬ ಧ್ಯೇಯಮಂತ್ರವಿರುವ ನಮ್ಮ ದೇಶದಲ್ಲಿ ನಡೆಯುವ ತನಿಖೆಗಳ ವೈಖರಿ.

ಒಟ್ಟಿನಲ್ಲಿ ಇದು ದೇಶ ಒಡೆಯುವ ದುಷ್ಟ ರಾಜಕಾರಣಿಗಳ ಹುನ್ನಾರ. ಹಿಂದೂಗಳ ವಿರುದ್ಧ ಹಿಂದೂಗಳನ್ನು, ಕ್ರಿಶ್ಚಿಯನ್ನರ ವಿರುದ್ಧ ಹಿಂದೂಗಳನ್ನು, ಮುಸ್ಲಿಮರ ವಿರುದ್ಧ ಹಿಂದೂಗಳನ್ನು, ಉತ್ತರ ಭಾರತೀಯರ ವಿರುದ್ಧ ಮರಾಠಿಗರನ್ನು, ತಮಿಳರ ವಿರುದ್ಧ ಕನ್ನಡಿಗರನ್ನು ಎತ್ತಿಕಟ್ಟುತ್ತಿರುವುದೆಲ್ಲವೂ ಈ ದುಷ್ಟ ರಾಜಕಾರಣಿಗಳೇ. ಒಗ್ಗಟ್ಟಿನಲ್ಲಿರುವ ಪ್ರಜಾಕೋಟಿಯನ್ನು ಪರಸ್ಪರ ಬಡಿದಾಡುವಂತೆ ಮಾಡಿ, ಉದ್ಭವಿಸುವ ಪರಿಸ್ಥಿತಿಯ ಲಾಭ ಪಡೆದುಕೊಳ್ಳದ ಒಂದೇ ಒಂದು ರಾಜಕೀಯ ಪಕ್ಷ ಇಲ್ಲದಿರುವುದು ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಅತಿದೊಡ್ಡ ದುರಂತ. ಎಟಿಎಸ್‌ನ, ಪೊಲೀಸರ, ಗುಪ್ತಚರ ಮಂಡಳಿಯ, ಪ್ರಧಾನಿ ಪದವಿಯ, ಅಷ್ಟೇಕೆ ಇಡೀ ದೇಶದ ಮಾನವೇ ಅಂತಾರಾಷ್ಟ್ರೀಯ ಸ್ತರದಲ್ಲಿ ಹರಾಜಾಗುತ್ತಿದೆ.

ಭಾರತೀಯರು ಇಂಥ ದುಷ್ಟ ಕ್ರಿಮಿನಲ್ ರಾಜಕಾರಣಿಗಳ ಬಲೆಗೆ ಬೀಳಬಾರದು. ಮಾಧ್ಯಮಗಳು ಕೂಡ ಬ್ರೇಕಿಂಗ್ ನ್ಯೂಸ್ ಕೊಡುವ ತರಾತುರಿಯಲ್ಲಿ ಎಲ್ಲವನ್ನೂ ಗಾಳಿಗೆ ತೂರುತ್ತಿವೆ. ಯಾವ ಸುದ್ದಿಯನ್ನು ‘ಬ್ರೇಕ್’ ಮಾಡಬೇಕೋ ಅಂತ ಮಾಧ್ಯಮಗಳು ತೀರ್ಮಾನ ತೆಗೆದುಕೊಳ್ಳುವ ಮುಂಚೆ ಒಂದಷ್ಟು ಯೋಚನೆ, ಯೋಜನೆ ಮತ್ತು ರೂಪಿಸಿಕೊಳ್ಳಬೇಕಿದೆ.ದೇಶವನ್ನೇ ಈ ರಾಜಕಾರಣಿಗಳು ಮಾರುವ ಹಂತ ತಲುಪಿರುವಾಗ ಮಾಧ್ಯಮಗಳು ಅತ್ಯಂತ ಕಾಳಜಿಯಿಂದ, ಅತ್ಯಂತ ಸಹಿಷ್ಣುತೆಯಿಂದ ಕರ್ತವ್ಯ ನಿಭಾಯಿಸದಿದ್ದರೆ, ಭಾರತ ಮಾತೆಯನ್ನು ರಕ್ಷಿಸುವವರು ಯಾರೂ ಇರಲಾರರು.

ದೇಶವನ್ನಾಳುವ, ದೇಶದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ಮಹತ್ವದ ಹೊಣೆಗಾರಿಕೆ ಇರುವ, ಅದೆಷ್ಟೋ ದಶಕಗಳ ಇತಿಹಾಸವುಳ್ಳ ರಾಜಕೀಯ ಪಕ್ಷಗಳು ಇಂಥದ್ದನ್ನೂ ಮಾಡಬಲ್ಲವು, ಈ ಮಟ್ಟಕ್ಕೂ ಇಳಿಯಬಲ್ಲವು ಎಂದು ಯೋಚಿಸಿದಾಗ ಬಡ ಪ್ರಜೆಗಳಿಗೆ ಅನ್ನಿಸುವುದು ‘ನಾಚಿಕೆಗೇಡು’. ಉಗ್ರವಾದವನ್ನು ಯಾರೇ ಬೆಂಬಲಿಸಲಿ, ಭಯೋತ್ಪಾದಕ ಚಟುವಟಿಕೆಗಳಲ್ಲಿ ಯಾರೇ ತೊಡಗಿಸಿಕೊಳ್ಳಲಿ, ಅವರಿಗೆ ಶಿಕ್ಷೆಯಾಗಲೇಬೇಕು. ಯಾವುದೇ ಪ್ರಮಾಣದ ಭಯೋತ್ಪಾದನೆ ಚಟುವಟಿಕೆಯೂ ಅಕ್ಷಮ್ಯ ಮತ್ತು ಶಿಕ್ಷಾರ್ಹ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಈ ಕೆಸರಿನಲ್ಲಿ ಬಿದ್ದುಕೊಂಡು ಪರಸ್ಪರರ ವಿರುದ್ಧ ಅದನ್ನು ಎರಚಾಡುತ್ತಿದ್ದರೆ ದೇಶದ ಪ್ರತಿಷ್ಠೆ ಹಾಳಾಗುತ್ತದೆ.

ಎಟಿಎಸ್ ತನಗೆ ದೈಹಿಕ, ಮಾನಸಿಕ ಚಿತ್ರ ಹಿಂಸೆ ನೀಡುತ್ತಿದೆ, ಇದಕ್ಕಾಗಿ ಆತ್ಮಹತ್ಯೆಗೂ ಯತ್ನಿಸಿದ್ದೆ ಎಂದು ಮಾಲೆಗಾಂವ್ ಸ್ಫೋಟದಲ್ಲಿ ಬಳಸಿದ ಬೈಕ್‌ನ ನೋಂದಾಯಿತ ಒಡತಿ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ನ್ಯಾಯಾಲಯದಲ್ಲಿ ಅಲವತ್ತುಕೊಂಡಿದ್ದಾರೆ. ಸಂಜೋತಾ ಸ್ಫೋಟದಲ್ಲಿ ಐಎಸ್ಐ ಕೈವಾಡ ಎಂದಿದ್ದು, ಸೇನಾಧಿಕಾರಿ ಕೈವಾಡ ಎಂದಾಗಿ ಪರಿವರ್ತನೆಗೊಂಡು, ಬಳಿಕ ಮತ್ತೆ ಹೇಳಿಕೆ ಬದಲಿಸುವ ಮೂಲಕ ಭಾರತದ ತನಿಖಾ ಮಂಡಳಿಗಳ ಕ್ರೆಡಿಬಿಲಿಟಿ ನಷ್ಟವಾಗುತ್ತಿದೆ, ದೇಶದ ವಿಶ್ವಾಸಾರ್ಹತೆ ಅಧೋಮುಖಿಯಾಗುತ್ತಿದೆ, ಭಾರತ ಸರಕಾರದ ವಿಶ್ವಾಸಾರ್ಹತೆ ಸವೆಯುತ್ತಿದೆ… ಜನ ನಾಯಕರು ಅನ್ನಿಸಿಕೊಂಡವರು ಕೇಳಿಸಿಕೊಳ್ಳುತ್ತಿದ್ದೀರಾ? ಕೇಳಿಸಿಕೊಳ್ಳದೇ ಹೋದರೆ, ಈ ದೇಶವನ್ನು ಆ ದೇವರೇ ರಕ್ಷಿಸಬೇಕು! [polldaddy poll=1117630]

12 COMMENTS

  1. ಉಗ್ರವಾದ, ಭೀತಿವಾದ ಯಾವ ಧರ್ಮದವರೇ ಮಾಡಿರಲಿ ನಾವದನ್ನು ವಿರೋಧಿಸಲೇ ಬೇಕು. ಆದರೆ ಅದೇ ಹೊತ್ತಿನಲ್ಲಿ ರಾಜಕೀಯ ಮಿಶ್ರಿತ ತನಿಖೆ ಇಡೀ ವ್ಯವಸ್ಥೆಯ ವಿಶ್ವಾಸಾಹ್ರತೆಯನ್ನೇ ಬುಡಮೇಲುಗೊಳಿಸುತ್ತದೆ. ನೈಜ ಅಪರಾಧಿಗಳು ಹೊರ ಬರಲಿ. ನಾವು ಭಯೋತ್ಪಾದನೆಯದ್ದೇ ಸುದ್ದಿಯನ್ನು ಹೆಡ್ಲೈನ್ ಮಾಡುವ ಪ್ರಸಂಗ ಬಾರದಿರಲಿ..

    –ಹರೀಶ ಮಾಂಬಾಡಿ

  2. ಇದು ತು೦ಬಾ ಅಪಾಯಕಾರಿ ಬೆಳವಣಿಗೆ, ನಮ್ಮ ದೇಶವಾಸಿಗಳಿಗೆ ಯಾವಾಗ ಬುದ್ಧಿ ಬರುತ್ತದೋ?.ಒಕ್ಕೂಟ ವ್ಯವಸ್ಥೆಯ ಕಡೆಯ ದಿನಗಳೇ..? ಗೊತ್ತಿಲ್ಲ..

  3. ಹರೀಶರೆ,
    ಹೌದು. ವ್ಯವಸ್ಥೆಯೇ ಕುಲಗೆಟ್ಟು ಹೋಗಿರುವಾಗ ವಿಶ್ವಾಸಾರ್ಹತೆಯ ಪ್ರಶ್ನೆಯೆಲ್ಲಿಂದ?

    ಬೇಡ ಬೇಡವೆಂದರೂ ಬೇರೆ ಬೇರೆ ಕಾರಣಗಳಿಗಾಗಿ ಭಯೋತ್ಪಾದನೆಯೇ ಹೆಡ್ಲೈನ್ ಆಗ್ತಿರೋದಂತೂ ವಿಷಾದನೀಯ.

    ಧನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ.

  4. ಚೇತನಾ ಅವರೆ,
    ಈ ರಾಜಕಾರಣಿಗಳು ಅಧಿಕಾರಕ್ಕಾಗಿ ಮತ್ತು ಎದುರಾಳಿಗಳನ್ನು ಬಗ್ಗುಬಡಿಯುವುದಕ್ಕಾಗಿ ಏನು ಮಾಡುವುದಕ್ಕೂ ಹೇಸುವುದಿಲ್ಲ ಎಂಬುದು ತೀರಾ ವಿಷಾದಕರ ಸಂಗತಿ.

    ಇವತ್ತು ನೋಡಿ, ಒರಿಸ್ಸಾದಲ್ಲಿ ಆವತ್ತು “ನನ್ನನ್ನು ಸಾಮೂಹಿಕ ಅತ್ಯಾಚಾರ ಮಾಡಿದರು” ಅಂತ ಹೇಳಿ ಕೋಲಾಹಲದ ಬೆಂಕಿಗೆ ತುಪ್ಪ ಸುರಿದಿದ್ದ ಅದೇ ಕ್ರೈಸ್ತ ಸನ್ಯಾಸಿನಿ ಈಗಷ್ಟೇ ಹೇಳಿಕೆ ಬದಲಿಸಿ, ಹಿಂದೂವೊಬ್ಬ ನನ್ನನ್ನು ರಕ್ಷಿಸಿದ ಅಂತ ಹೇಳಿದ್ದಾರೆ. ಒಟ್ಟಿನಲ್ಲಿ ಆರೋಪಿಗಳು ಮತ್ತು ಬಲಿಪಶುಗಳು ಎಲ್ಲರೂ ರಾಜಕಾರಣಿಗಳ ಕೈಗೊಂಬೆಗಳಾಗುತ್ತಿದ್ದಾರೆ. ಹಾಗಿದ್ದರೆ ಇಂದಿನ ಕಾಲದಲ್ಲಿ ಯಾರನ್ನು ನಂಬುವುದು? ಯಾವ ತನಿಖೆಯನ್ನು ನಂಬುವುದು ಎಂಬ ಗೊಂದಲ ನಮಗೆ ಸಹಜ.

    ಧನ್ಯವಾದಗಳು ನಿಮ್ಮ ಅಭಿಪ್ರಾಯಗಳಿಗೆ.
    -ಅವಿನಾಶ್

  5. ಪ್ರಮೋದರೆ,

    ನಿಮ್ಮ ಸಂಶಯ ನನಗೂ ಕಾಡುತ್ತಿದೆ. ಜನ ದಂಗೆ ಏಳ್ತಾರೇಂತಾನೂ ಭಯ ಹುಟ್ಕೊಂಡಿದೆ. ಜನರು ಈ ಬಗ್ಗೆ ನಿರ್ಲಕ್ಷ್ಯ ಭಾವನೆ ತೋರುವುದರ ಬದಲು ಒಂದಷ್ಟು ಯೋಚನೆ ಮಾಡಿದ್ರೆ ಸಾಕು…

    ಬರ್ತಾ ಇರಿ… ಧನ್ಯವಾದ
    -ಅವಿನಾಶ್

  6. ರಂಜಿತ್ ಅವರೆ,

    ಖಂಡಿತವಾಗಿಯೂ ಹೌದು. ಸಮಾಜಸೇವೆ ಅನ್ನೋ ಹೆಸ್ರಲ್ಲಿ ಅಧಿಕಾರ ಮತ್ತು ಹಣ ಅಂತ ಸಾಯೋವ್ರಷ್ಟೇ ರಾಜಕಾರಣದತ್ತ ವಾಲುತ್ತಾರೆ. ಒಂದಷ್ಟು ಮಾನವೀಯತೆ ಬೇಕಿದ್ದರೆ, ಜೀವನಕ್ಕಾಗಿ ಬೇರೆ ಒಳ್ಳೆಯ ದಾರಿ ಕಂಡುಕೊಳ್ಳುತ್ತಾರೆ.

  7. ಎಲ್ಲೋ ಒಂದು ಕಡೆ ಹಿಂದೂ ಸಮಾಜ ಎಚ್ಚೆತ್ತುಕೊಳ್ಳದಂತೆ ಹೊಡೆಯುವ ಹುನ್ನಾರವಿರಬಹುದೆ? ನಮಗೂ ಸಹಿಸಿ ಸಹಿಸಿ ಸಾಕಾಗಿ ಹೋಗಿ ಬೇಸತ್ತು ಈ ಕೃತ್ಯಕ್ಕೆ ಇಳಿದಿದ್ದಾರಲ್ಲವೆ? ಎಷ್ಟು ದಿನ ಈ ಮುಸ್ಲಿಂ ಭಯೋತ್ಪಾದನೆ ಸಹಿಸ್ಕೊಳ್ತೀರಿ ಸ್ವಾಮಿ. ಕಾಶ್ಮೀರದಲ್ಲಿದ್ದ ಹಿಂದೂಗಳನ್ನು ಕಳೆ ಕಿತ್ತ ಹಾಗೆ ಕಿತ್ತು ಹಾಕಿದ್ರಲ್ಲ ಆಗ ಈ ಮಾಧ್ಯಮಗಳೆಲ್ಲ ಎಲ್ಲಿ ಹೋಗಿದ್ದವು?

    ನಿಮ್ಮನ್ನ ಬಗ್ಗಿಸಿದ್ರೆ ಎಲ್ಲಿವರ್ಗೂ ಬಗ್ತೀರಿ? ನೆಲ ಸಿಗೊವರ್ಗೂ ಆಮೇಲೂ ಬಗ್ಗೂ ಅಂದ್ರೆ ಎದ್ದು ನಿಂತು ಕೊಳ್ತೀರಿ. ಈಗ್ಲೂ ಅದೇ ಆಗ್ತಾ ಇದೆ. ಭಯೋತ್ಪಾದರಿಗೆ ಯಾವ ಶಿಕ್ಷೆಯೂ ಆಗಲ್ಲ ಬದಲಿಗೆ ವಿಶ್ವವಿದ್ಯಾಲಯಗಳೂ ರಾಜಕೀಯ ಪಕ್ಷಗಳೂ ಅವರ ನೆರವಿಗೆ ಧಾವಿಸುತ್ತವೆ. ಅದರ ಪ್ರೇರಣೆಯೇ ಈ ಹಿಂದೂ ಉಗ್ರವಾದ. ಈಗ್ಲಾದ್ರೂ ಕುಂಭಕರ್ಣ ನಿದ್ದೆಯಲ್ಲಿರುವ ನಮ್ಮ ಸಮಾಜ ಭಾಂದವರು ಎಚ್ಚುತ್ತುಕೊಳ್ತರ ನೋಡೋಣ ಇರಿ.

  8. ಧರ್ಮ ರಾಜಕೀಯ ಬೇಡ. ರಾಜಕೀಯ ಧರ್ಮ’ ಬೇಕು..ನಿಜವಾಗಲೂ ಹೌದು. ನಾವು-ನೀವು ಮಾತ್ರವಲ್ಲ ಸಮಸ್ತ ಭಾರತೀಯರ ಆಶಯವೂ ಹೌದು. ಆದರೆ ಧರ್ಮ ಎಂಬುದೇನೆಂದೇ ಗೊತ್ತಿಲ್ಲದ ನೀಚ ರಾಜಕಾರಣಿಗಳಿಗೆ ಎಷ್ಟು ಹೇಳಿದರೂ ‘ನಾಯಿ ಬಾಲ ಡೊಂಕೇ..’!
    -ಚಿತ್ರಾ

  9. ಪ್ರಸನ್ನ ಅವರೆ, ನನ್ನ ಬ್ಲಾಗ್ ತಾಣಕ್ಕೆ ಸ್ವಾಗತ.

    ಹೌದು. ನೀವು ಹೇಳಿದಂತೆ ಖಂಡಿತಾ ಒಂದು ಹುನ್ನಾರ ಗೋಚರಿಸ್ತಾ ಇದೆ. ಇದರಲ್ಲಿ ಮೂಲಭೂತವಾದಿಗಳ ಕೈವಾಡವಂತೂ ಖಂಡಿತಾ ಇದೆ. ಭಾರತದಲ್ಲಿ ಹಿಂದೂ ಸಮಾಜವನ್ನು ಮಟ್ಟ ಹಾಕಿದರೆ, ಆ ಮೇಲೆ ಇದನ್ನೂ ಇಸ್ಲಾಮಿಕ್ ಗಣರಾಜ್ಯವಾಗಿಸಬಹುದೆಂಬ ಹುನ್ನಾರವೊಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿದೆ. ಅರಿತೋ ಅರಿದಯೆಯೋ ನಮ್ಮ ರಾಜಕಾರಣಿಗಳು ಅದರ ಸಂಚಿನ ಭಾಗವಾಗಿ ಹೋಗುತ್ತಿರುವುದು ದುರಂತ.

  10. ಚಿತ್ರಾ,

    ಹೌದು… ನೀಚ ರಾಜಕಾರಣಿಗಳಿಗೆ ಓಟು ಪಡೆದು ಅಧಿಕಾರ ಗಳಿಸಿ ಹಣ ನುಂಗುವುದು, ತಮಗಾಗದವರನ್ನು ಮಟ್ಟ ಹಾವುದೇ ಧರ್ಮ ಎಂಬಂತಾಗಿದೆ.

Leave a Reply to Chitra karkera Cancel reply

Please enter your comment!
Please enter your name here