ಗೂಗಲ್ ಮ್ಯಾಪ್‌ನಲ್ಲಿ Pegman ಎಂಬ ಗೆಳೆಯ ನಿಮಗೆ ಗೊತ್ತೇ?

0
397

ಗೂಗಲ್ ಮ್ಯಾಪ್ ಎಂಬುದು ವೆಬ್ ಬ್ರೌಸರ್‌ನಲ್ಲಿ ಮಾತ್ರವಲ್ಲದೆ ಸ್ಮಾರ್ಟ್‌ಫೋನ್‌ಗಳ ಆ್ಯಪ್‌ಗಳ ಮೂಲಕ ನಮಗೆಲ್ಲ ಚಿರಪರಿಚಿತವಾದ ಭೂಮಿಯ ನಕಾಶೆ. ಹೆಚ್ಚಿನವರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುವುದಕ್ಕಾಗಿಯೋ ಅಥವಾ ಎರಡು ಸ್ಥಳಗಳ ಮಧ್ಯೆ ದೂರವನ್ನು ಅಳೆಯುವುದಕ್ಕಾಗಿಯೋ ಗೂಗಲ್ ಮ್ಯಾಪ್ ಬಳಸಿರುತ್ತಾರೆ. ಆದರೆ, ಇದರಲ್ಲಿ ಪೆಗ್‌ಮ್ಯಾನ್ ಎಂಬ ಗೆಳೆಯ ಇದ್ದಾನೆ, ಆತ ನಮಗೆಲ್ಲ ಸಹಾಯ ಮಾಡುವುದಕ್ಕೆ ಕಾಯುತ್ತಾ ಇರುತ್ತಾನೆ ಎಂಬುದನ್ನು ಎಷ್ಟು ಮಂದಿ ಗಮನಿಸಿದ್ದೀರಿ?

ಹೌದು. ಗೂಗಲ್ ಮ್ಯಾಪ್ ಅನ್ನು ಕಂಪ್ಯೂಟರಿನಲ್ಲಿ ವೆಬ್ ಬ್ರೌಸರಿನಲ್ಲಿ ತೆರೆದಾಗಲಷ್ಟೇ ಈ ಪೆಗ್‌ಮ್ಯಾನ್ ಎಂಬ ವೈಶಿಷ್ಟ್ಯಪೂರ್ಣವಾದ ಒಂದು ಐಕಾನ್ ಕಾಣಸಿಗುತ್ತದೆ. ಈ ವೈಶಿಷ್ಟ್ಯ ಹೊಸದೇನಲ್ಲ. ದಶಕದ ಹಿಂದೆಯೇ ಇದನ್ನು ಪರಿಚಯಿಸಲಾಗಿತ್ತು. ಬಹುತೇಕರಿಗೆ ಇದರ ಅರಿವಿಲ್ಲ ಅಷ್ಟೇ. ಮಾನವಾಕೃತಿಯ ಈ ಲಾಂಛನವನ್ನು ಬಳಸಿ, ಮ್ಯಾಪ್‌ನಲ್ಲಿ ನಿರ್ದಿಷ್ಟ ಸ್ಥಳದಲ್ಲಿರುವ ವಿವರಗಳನ್ನು ಚಿತ್ರದ ಮೂಲಕ ತಿಳಿದುಕೊಳ್ಳಬಹುದಾಗಿದೆ. ಅದು ಹೇಗೆಂದರೆ, ಗೂಗಲ್ ಸ್ಟ್ರೀಟ್‌ವ್ಯೂ ಎಂಬುದನ್ನು ಕೇಳಿರುತ್ತೀರಿ. ಗೂಗಲ್ ದೇಶದ ಉದ್ದಗಲಕ್ಕೆ ಸಂಚರಿಸಿ ಬೀದಿ ಬೀದಿಯ ಚಿತ್ರಗಳನ್ನು ತನ್ನ ಮ್ಯಾಪ್ ಸರ್ವರ್‌ನಲ್ಲಿ ಸೇರಿಸಿದೆ. ಅದುವೇ ಗೂಗಲ್ ಮ್ಯಾಪ್‌ನಲ್ಲಿರುವ ಸ್ಟ್ರೀಟ್ ವ್ಯೂ. ಇದನ್ನು ನೋಡಬೇಕಿದ್ದರೆ ನಮಗೆ ಪೆಗ್‌ಮ್ಯಾನ್ ಸಹಾಯ ಮಾಡುತ್ತಾನೆ.

ಬ್ರೌಸರ್‌ನಲ್ಲಿ ಗೂಗಲ್ ಮ್ಯಾಪ್ ತೆರೆದಾಗ, ಕೆಳಗಿನ ಬಲ ಮೂಲೆಯಲ್ಲಿ ನ್ಯಾವಿಗೇಶನ್ ನಿಯಂತ್ರಣ ಕೇಂದ್ರದಲ್ಲಿ ಈ ಪೆಗ್‌ಮ್ಯಾನ್ ಕಾದಿರುತ್ತಾನೆ. ಈ ಮ್ಯಾಪ್‌ನಲ್ಲಿ ನಾವು ನೋಡಬೇಕಾದ ಸ್ಥಳದ ರಸ್ತೆಗಳು ಹೇಗಿವೆ, ಅಲ್ಲಿರುವ ಸ್ಮಾರಕಗಳು ಅಥವಾ ಕಟ್ಟಡಗಳು ಏನೆಲ್ಲಾ ಇವೆ, ಹೇಗಿವೆ ಎಂಬುದನ್ನು ಈ ಸ್ಟ್ರೀಟ್ ವ್ಯೂ ಎಂಬ ವೈಶಿಷ್ಟ್ಯವು ತೋರಿಸುತ್ತದೆ. ಇದು ಈ ಹಿಂದೆ ಗೂಗಲ್ ಕಾರ್ ದೇಶದ ಉದ್ದಗಲಕ್ಕೂ ಓಡಾಡಿ ಸಂಗ್ರಹಿಸಿರುವ, ಉತ್ತಮ ಗುಣಮಟ್ಟದ ಚಿತ್ರಗಳ ಗುಚ್ಛ.

ಬಲ ಕೆಳ ಮೂಲೆಯಲ್ಲಿ ಕುಳಿತಿರುವ ಈ ಪೆಗ್‌ಮ್ಯಾನ್ ಐಕಾನ್ ಮೇಲೆ ಕ್ಲಿಕ್ ಮಾಡಿ ಹಿಡಿದಾಗ, ಇಡೀ ಮ್ಯಾಪ್‌ನಲ್ಲಿ ನೀಲಿ ಗೆರೆಗಳು ಅಥವಾ ನೀಲಿ ಬಣ್ಣದ ಬಿಂದುಗಳು ಗೋಚರಿಸುತ್ತವೆ. ಈ ನೀಲಿ ಗೆರೆಗಳು ಅಥವಾ ಬಿಂದುಗಳು, ಆ ಸ್ಥಳದಲ್ಲಿ ಸ್ಟ್ರೀಟ್‌ವ್ಯೂ ಲಭ್ಯವಿದೆ ಎಂಬುದನ್ನು ಸೂಚಿಸುತ್ತವೆ. ನೀಲಿ ಗೆರೆ ಅಥವಾ ಬಿಂದುಗಳು ಇಲ್ಲದಿರುವಲ್ಲಿ ಸ್ಟ್ರೀಟ್‌ವ್ಯೂ ಚಿತ್ರಗಳು ಇರುವುದಿಲ್ಲ ಎಂದರ್ಥ.

ಹೀಗೆ, ಪೆಗ್‌ಮ್ಯಾನ್ ಐಕಾನ್ ಅನ್ನು ಕ್ಲಿಕ್ ಮಾಡಿ ಹಿಡಿದು, ಈ ನೀಲಿ ಗೆರೆ ಅಥವಾ ಬಿಂದು ಇರುವಲ್ಲಿ ಎಳೆಯುತ್ತಾ ಹೋದರೆ, ಆಯಾ ಜಾಗದಲ್ಲಿರುವ ಚಿತ್ರಗಳು ಚಿಕ್ಕದಾಗಿ (ಥಂಬ್‌ನೇಲ್) ಕಾಣಿಸುತ್ತವೆ. ನಿರ್ದಿಷ್ಟ ಜಾಗಕ್ಕೆ, ಉದಾಹರಣೆಗೆ, ಬೆಂಗಳೂರಿನಲ್ಲಿ ‘ವಿಧಾನಸೌಧ’ ಎಂದು ಬರೆದಿರುವಲ್ಲಿಗೆ ಈ ಪೆಗ್‌ಮ್ಯಾನ್ ಅನ್ನು ಎಳೆದು ಬಿಟ್ಟರೆ, ಸ್ಟ್ರೀಟ್ ವ್ಯೂ ಮೋಡ್‌ನಲ್ಲಿ ಆ ಜಾಗದ ಚಿತ್ರವು ದೊಡ್ಡದಾಗಿ ಪೂರ್ತಿ ಬ್ರೌಸರಿನಲ್ಲಿ ಕಾಣಿಸುತ್ತದೆ. ಈ ಚಿತ್ರವನ್ನೂ ಕ್ಲಿಕ್ ಮಾಡಿ ಎಳೆಯುತ್ತಾ ನೋಡಿದರೆ, 360 ಡಿಗ್ರಿಯಲ್ಲಿ ಈ ಸ್ಥಳದ ರಸ್ತೆಗಳು, ಕಟ್ಟಡಗಳು, ವಾಹನಗಳನ್ನು ನೋಡಬಹುದಾಗಿದೆ. ಈ ಚಿತ್ರವನ್ನು ಯಾವಾಗ ಸೆರೆಹಿಡಿದದ್ದು ಎಂಬ ಮಾಹಿತಿಯೂ ಎಡ ಮೇಲ್ಭಾಗದಲ್ಲಿ ಗೋಚರಿಸುತ್ತದೆ. ಅದು ಲೈವ್ (ಉಪಗ್ರಹ ಮೂಲಕ) ಚಿತ್ರ ಅಲ್ಲ.

ಯಾವುದೇ ನಿರ್ದಿಷ್ಟ ಸ್ಥಳದ ಅನ್ವೇಷಣೆಗೆ, ಅಲ್ಲಿ ಏನೇನಿದೆ, ಯಾವ ಕಟ್ಟಡ ಹೇಗಿದೆ ಎಂದೆಲ್ಲ ತಿಳಿದುಕೊಳ್ಳುವುದಕ್ಕೆ ಈ ಪೆಗ್‌ಮ್ಯಾನ್ ತೋರಿಸುವ ಸ್ಟ್ರೀಟ್‌ವ್ಯೂ ಅತ್ಯುಪಯುಕ್ತ. ಇದರಿಂದ ಮತ್ತೊಂದು ಪ್ರಯೋಜನವೂ ಇದೆ. ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೋ ಒಂದು ಫೋಟೋ ವೈರಲ್ ಆಗಿರುತ್ತದೆ. ಅದು ನಿಜವಾಗಿಯೂ ಆ ದೇಶದ್ದೇ ಅಥವಾ ಆ ಪ್ರದೇಶದ್ದೇ ಎಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಗೂಗಲ್ ಮ್ಯಾಪಿನ ಸ್ಟ್ರೀಟ್ ವ್ಯೂ ಬಳಸಿ ತಾಳೆ ನೋಡಬಹುದಾಗಿದೆ. ಉದಾಹರಣೆಗೆ, ಇದು ಬೆಂಗಳೂರಿನ ಕಬ್ಬನ್ ಪಾರ್ಕ್ ಬಳಿ ಇರುವ ಸುಂದರವಾದ ಕೆತ್ತನೆಯುಳ್ಳ ಕಟ್ಟಡ ಅಂತ ಯಾರೋ ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಸುಳ್ಳೇ ಒಂದು ಫೋಟೋ ಹಂಚಿಕೊಂಡಿರುತ್ತಾರೆ. ಗೂಗಲ್ ಮ್ಯಾಪ್ ಮೂಲಕ ಕಬ್ಬನ್ ಪಾರ್ಕ್‌ನ ಸ್ಟ್ರೀಟ್‌ವ್ಯೂ ನೋಡಿದರೆ, ಅಂತಹ ಕಟ್ಟಡ ಇದೆಯೇ ಅಥವಾ ಇಲ್ಲವೇ ಎಂಬುದು ಖಚಿತವಾಗುತ್ತದೆ.

My article Published in Prajavani on 28/29 Dec 2021

LEAVE A REPLY

Please enter your comment!
Please enter your name here