ಯುದ್ಧ ಪ್ರಚೋದನೆ: ಅಮೆರಿಕದ ಹುನ್ನಾರವೇ ಇದು?

6
746

 

ಪಾಕಿಸ್ತಾನವು ಪಾತಕಿಸ್ತಾನವೇ ಆಗಿಬಿಟ್ಟಿದೆ. ಅಲ್ಲಿನ ಸರಕಾರಕ್ಕೂ ಉಗ್ರಗಾಮಿಗಳ ಮೇಲೆ ಹಿಡಿತ ತಪ್ಪಿದೆ. ಐಎಸ್ಐ ಮತ್ತು ಪಾಕಿಸ್ತಾನ ಸೇನೆಯೇ ಸರಕಾರವನ್ನು ನಿಯಂತ್ರಿಸುತ್ತಿದೆ ಎಂಬ ಪರಿಸ್ಥಿತಿ ಇದೆ.

 

ಈಗ ನೋಡಿ… ಮುಂಬಯಿ ಮೇಲಿನ ಉಗ್ರಗಾಮಿ ದಾಳಿ ಪ್ರಕರಣ. ಇದರಲ್ಲಿ ಭಾಗಿಯಾದವರೆಲ್ಲರೂ ಪಾಕಿಸ್ತಾನೀಯರು ಮತ್ತು ಇದರಲ್ಲಿ ಪಾಕಿಸ್ತಾನದ ಸೇನೆ, ಐಎಸ್ಐ ನೇರ ಕೈವಾಡವಿದೆ ಎಂಬ ಕುರಿತಾದ ವರದಿಗಳನ್ನೆಲ್ಲಾ ಸಾಕಷ್ಟು ಓದಿದ್ದೇವೆ. ಇಷ್ಟೆಲ್ಲಾ ಆದರೂ ಪಾಕಿಸ್ತಾನವು ಉಗ್ರಗಾಮಿಗಳ ಒತ್ತಡದಲ್ಲಿ ಸಿಲುಕಿಕೊಂಡು ನಿಮಿಷಕ್ಕೊಂದು ಹೇಳಿಕೆ ನೀಡುತ್ತಿದೆ. ಅಷ್ಟು ಸಮರ್ಪಕ ಸಾಕ್ಷ್ಯಾಧಾರಗಳಿದ್ದರೂ, ಪುರಾವೆ ನೀಡಿ ಎಂದು ಮತ್ತೆ ಮತ್ತೆ ಒತ್ತಾಯಿಸುತ್ತಿದೆ. ಜಮಾತ್ ಉದ್ ದಾವಾ ಎಂಬ ಲಷ್ಕರ್ ಸಂಘಟನೆಯ ಮತ್ತೊಂದು ಮುಖವನ್ನು ನಿಷೇಧಿಸುವ ವಿಷಯದಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಚರ್ಚೆಯಾಗಿ, ನಿಷೇಧವೂ ಆಗಿದೆ.

 

ಪಾಕಿಸ್ತಾನದ ಆಡಳಿತಾರೂಢರು, ಒಮ್ಮೆ, ಉಗ್ರರನ್ನು ಹಿಡಿಯುತ್ತೇವೆ ಎಂದು ಹೇಳಿಕೆ ನೀಡಿದರೆ, ಮತ್ತೊಮ್ಮೆ, ಇಲ್ಲ ಅವರನ್ನು ನಾವು ವಿಚಾರಿಸ್ತೇವೆ, ಪತ್ತೆ ಹಚ್ಚಿದರೂ ಭಾರತಕ್ಕೆ ಒಪ್ಪಿಸುವುದಿಲ್ಲ ಎನ್ನುತ್ತಾರೆ. ಹಾಗಿದ್ದರೆ ಖಂಡಿತವಾಗಿಯೂ ಉಗ್ರಗಾಮಿಗಳು ಬಲವಾಗಿಯೇ ಒತ್ತಡ ಹೇರುತ್ತಿದ್ದಾರೆ ಎಂದರ್ಥ. ಇಂದು ಲಷ್ಕರ್ ಅಂತಹಾ ಒಂದು ಯಃಕಶ್ಚಿತ್ ಭಯೋತ್ಪಾದಕ ಸಂಘಟನೆ, ಭಾರತವು ಯುದ್ಧ ಸಾರಿದರೆ ಪಾಕಿಸ್ತಾನ ಸೇನೆಗೆ ನಾವು ಪೂರ್ಣ ಬೆಂಬಲ ನೀಡುತ್ತೇವೆ ಎಂದು ಘೋಷಿಸುವಷ್ಟರ ಮಟ್ಟಕ್ಕೆ ಬೆಳೆದುಬಿಟ್ಟಿದೆ ಎಂದರೆ ಇದರ ಹಿಂದೆ ಯಾರ ಕೈವಾಡವಿದೆ ಮತ್ತು ಅದರ ಶಕ್ತಿ-ಸಾಮರ್ಥ್ಯ ಎಂತಹುದ್ದು ಎಂಬುದು ಮನದಟ್ಟಾಗಬಹುದು. ಹೀಗಾಗಿ ಪಾಕಿಸ್ತಾನದಲ್ಲಿರುವುದು ಅರಾಜಕ, ದುರ್ಬಲ, ಅಸಹಾಯ ಪ್ರಜಾಪ್ರಭುತ್ವ ಸರಕಾರ.

 

ನನ್ನ ಅಭಿಪ್ರಾಯದ ಪ್ರಕಾರ, ಇದರೆಲ್ಲದರ ಹಿಂದೆ ಅಮೆರಿಕದ ಕೈವಾಡವೂ ಇದೆ. ಯಾಕೆಂದರೆ ಭಾರತವು ಜಾಗತಿಕವಾಗಿ ಒಂದು ದೈತ್ಯಶಕ್ತಿಯಾಗಿ ಬೆಳೆಯುತ್ತಿದೆ. ಅಮೆರಿಕ ಹೇಗೂ ದೊಡ್ಡಣ್ಣ. ತನ್ನ ದೊಡ್ಡಸ್ತಿಕೆಗೆ ಭಾರತದಿಂದಾಗಿ ಎಲ್ಲಿ ಭಂಗ ಬಂದೀತೋ ಎಂಬ ಭೀತಿ ಅದಕ್ಕೆ. ಅಲ್ಲದೆ, ಆರ್ಥಿಕ ಹಿಂಜರಿತ ಸಮಸ್ಯೆಯಿಂದಾಗಿ ಜಾಗತಿಕವಾಗಿ ಬಹುತೇಕ ಎಲ್ಲ ರಾಷ್ಟ್ರಗಳು ಕಂಗೆಟ್ಟರೂ, ಅಮೆರಿಕವೇ ದಿವಾಳಿಯಂಚಿಗೆ ತಲುಪಿದ್ದರೂ, ಭಾರತದ ಮೇಲೆ ಅಷ್ಟೇನೂ ಪರಿಣಾಮ ಬೀರದಿರುವುದು ಅದರ ಕಣ್ಣು ಕೆಂಪಗಾಗಿಸಲು ಪ್ರಧಾನ ಕಾರಣ.

 

ಇದೇ ಕಾರಣದಿಂದ, ಕಾಂಡೊಲಿಸಾ ರೈಸ್ ಭಾರತದಲ್ಲಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿ ಹೋಗಿದ್ದಾರೆ. ಪಾಕಿಸ್ತಾನಕ್ಕೆ ಹೋಗಿ ರಾಗ ಬದಲಿಸಿ, ಧ್ವನಿ ತಗ್ಗಿಸಿ ಬಂದಿದ್ದಾರೆ. ಮತ್ತೆ ಅಮೆರಿಕಕ್ಕೆ ಮರಳಿದ ಬಳಿಕ ಪಾಕಿಸ್ತಾನದ ಮೇಲೆ ಒತ್ತಡ ಹೇರುವ ಹೇಳಿಕೆ ನೀಡುತ್ತಾರೆ.

 

ಅದೇ ರೀತಿ, ಅಮೆರಿಕದ ಇತರ ನಾಯಕರು ಕೂಡ, ಉಗ್ರರನ್ನು ಮಟ್ಟ ಹಾಕದಿದ್ದರೆ ಭಾರತವು ನಿಮ್ಮ ಮೇಲೆ ದಾಳಿ ಮಾಡುತ್ತದೆ ಎಂದು ಪಾಕಿಸ್ತಾನವು ಪ್ರಚೋದನೆಗೊಳ್ಳುವ ಹೇಳಿಕೆ ನೀಡುತ್ತಾರೆ. ಒಟ್ಟಿನಲ್ಲಿ ಭಾರತ-ಪಾಕಿಸ್ತಾನ ನಡುವೆ ಯುದ್ಧ ನಡೆಸಬೇಕಾಗಿರುವುದು ಅಮೆರಿಕದ ಉದ್ದೇಶವೋ ಎಂಬಂತೆ ತೋರುತ್ತಿದೆ.

 

ಇಲ್ಲೊಂದು ವಿಷಯವನ್ನು ಗಮನಿಸಬೇಕು. ಪಾಕಿಸ್ತಾನದ ಜನತೆಯಲ್ಲಾಗಲೀ, ಅಥವಾ ಅಲ್ಲಿನ ಕೆಲವೊಂದು ರಾಜಕಾರಣಿಗಳಲ್ಲಾಗಲೀ, ಭಾರತದ ವಿರುದ್ಧ ದ್ವೇಷ ಇರಲಾರದು. ನಾವೆಲ್ಲರೂ ಒಂದೇ ಎಂಬ ಮನೋಭಾವನೆ ಇದೆ. ಆದರೆ, ಈ ಮೂಲಭೂತವಾದಿಗಳಿದ್ದಾರಲ್ಲ, ಭಾರತವನ್ನೇ ಇಸ್ಲಾಂ ರಾಷ್ಟ್ರವಾಗಿಸುತ್ತೇವೆ ಎಂದು ಪಣ ತೊಟ್ಟ ಐಎಸ್ಐ ಮತ್ತು ಪಾಕಿಸ್ತಾನದ ಸೇನೆಯಲ್ಲಿರುವ ಕೆಲವು ಹುಳುಗಳು, ಇವು ಭಾರತ-ಪಾಕ್ ನಡುವಣ ಜನಸಾಮಾನ್ಯರ ಮನಸ್ಸನ್ನು ಕೆಡಿಸತೊಡಗಿವೆ. ಸರಕಾರದ ಮೇಲೆ ಹಿಡಿತ ಸಾಧಿಸುವಲ್ಲಿಯೂ ಐಎಸ್ಐ ಮತ್ತು ಪಾಕ್ ಸೇನೆ ಯಶಸ್ವಿಯಾಗಿದೆ ಎನ್ನುವುದು ನನ್ನ ಅಭಿಪ್ರಾಯ. ಅತ್ತ ಕಡೆ, ಅಣ್ವಸ್ತ ಶಕ್ತ ರಾಷ್ಟ್ರದ ಒಳಗಿರುವ ಉಗ್ರಗಾಮಿಗಳ ಹುನ್ನಾರ, ಇತ್ತ ಕಡೆ ಅಮೆರಿಕದ “ಭಾರತ-ಪಾಕ್‌ಗಳು ಹೊಡೆದಾಡಿ ಸಾಯಬೇಕು” ಎಂಬ ಮನೋಭಾವವಿರುವ ಅಮೆರಿಕದ ನಡುವೆ… ನಮ್ಮ ಭಾರತೀಯರ ಗತಿ? ಬಡ ಪಾಕಿಸ್ತಾನದ ಸ್ಥಿತಿ? ನೀವೇನಂತೀರಿ?

 

[polldaddy poll=1186857]

6 COMMENTS

  1. ನಿಮ್ಮ ಅನುಮಾನ ಸಕಾರಣವಾದದ್ದೆ. ಅದು ಪ್ರತಿ ಬಾರಿ ನಡೆಯುತ್ತಿದ್ದ ನಾಟಕ, ಆದರೆ ಈ ಬಾರಿ ಸ್ವಲ್ಪ ಬದಲಾವಣೆ ಗಮನಿಸಬಹುದಾಗಿದೆ. ಏಕೆಂದರೆ ಚೀನಾ ಪಾಕಿಸ್ಥಾನವನ್ನು ಬೆಂಬಲಿಸುತ್ತಿರುವುದು ಗುಟ್ಟಾಗೆನೂ ಉಳಿದಿಲ್ಲ. ಪಾಕಿಸ್ಥಾನ ಚೀನಾದ ಸಹಾಯ ಪಡೆಯುತ್ತಿರುವುದು ಅಮೇರಿಕಾದ ಕೆಂಗಣ್ಣಿಗೆ ಕಾರಣವಾಗಿದೆ ಮತ್ತು. ಅಫ್ಘಾನಿಸ್ಥಾನದಲ್ಲಿ ಮತ್ತು ಪಾಕಿಸ್ಥಾನದ ಅಫ್ಘನ್ ಗಡಿಗಳಲ್ಲಿ ಪಾಕಿಸ್ಥಾನ ಅಲ್ ಖೈದ ಮತ್ತು ತಾಲಿಬಾನಿಗಳಿಗೆ ಸಹಾಯ ಮಾಡುತ್ತಿರುವುದು ಅಫ್ಘನ್ ಯುದ್ದದಲ್ಲಿ ಅಮೇರಿಕಾ ಹಿನ್ನಡೆ ಅದರ ನಿದ್ದೆ ಕೆಡಿಸಿದೆ. ಏನೇ ಆದರೂ ಅಮೇರಿಕಾವನ್ನು ಸುಲಭವಾಗಿ ನಂಬುವುದು ಕಷ್ಟವೆ.

  2. ಪ್ರಸನ್ನ ಅವರೆ,
    ಖಂಡಿತವಾಗಿಯೂ ಹೌದು. ಅಮೆರಿಕ ನಂಬಲು ಅನರ್ಹವಾದ ದೇಶ. ಯಾಕೆಂದರೆ, ಈಗ ನಮಗೆ ಸಹಾಯ ಮಾಡಿದಂತೆ ನಟಿಸುವ ಅಮೆರಿಕ, ಬಳಿಕ ನಿಧಾನವಾಗಿ ಭಾರತವನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಪ್ರಯತ್ನಿಸುವ ಸಾಧ್ಯತೆಗಳು ಹೆಚ್ಚು.

  3. ಅಮೇರಿಕದ ಹುನ್ನಾರವೇನೆಂಬುದು ಸ್ಪಷ್ಟವಾಗಿಲ್ಲ. (ಅದು ಯಾವತ್ತೂ ಸ್ಪಷ್ಟವಾಗಿರಲಿಲ್ಲ ಬಿಡಿ). ಆದರೆ, ನೀವು ಹೇಳಿದಂತೆ, ಪಾಕಿಸ್ತಾನವು ಪಾತಕಿಸ್ತಾನವಾಗಿರುವುದಂತೂ ನಿಜ…..

  4. ಪ್ರದೀಪ್,

    ಬ್ಲಾಗಿಗೆ ಸ್ವಾಗತ.
    ಜಾಗತಿಕ ಬಿಕ್ಕಟ್ಟಿನಿಂದ ಭಾರತಕ್ಕೆ ಏನೂ ಆಗಿಲ್ಲ ಎಂಬುದು ಅಮೆರಿಕಕ್ಕೆ ಹೊಟ್ಟೆಯುರಿ. ಮತ್ತು ಪ್ರಬಲ ಶಕ್ತಿಯಾಗಿ ಬೆಳೆಯುತ್ತಿದೆ ಎಂಬುದು ಅದರ ಆತಂಕ. ಮತ್ತೆ, ಪಾಕಿಸ್ತಾನಕ್ಕೆಹೇಗೂ ಮತ್ತೊಂದು ಪ್ರಬಲ ಶಕ್ತಿ ಚೀನಾದ ಬೆಂಬಲವಿದೆ. ಹೀಗಾಗಿ ಇಬ್ಬರ ನಡುವ ಯುದ್ಧ ಮಾಡಿಸಿ, ಎರಡೂ ರಾಷ್ಟ್ರಗಳ ಬಲ ಕುಗ್ಗಿಸಿದರೆ ತಾನು ದೊಡ್ಡಣ್ಣನಾಗಿಯೇ ಇರಬಹುದು ಎಂಬ ಇರಾದೆ ಅಮೆರಿಕದ್ದು.

Leave a Reply to Avi Cancel reply

Please enter your comment!
Please enter your name here