ಒಂದ್ನಿಮಿಷ ಪ್ಲೀಸ್…!

8
281

ಈಗ್ಬಂದೆ ಒಂದ್ನಿಮಿಷ, ಒಂದ್ನಿಮಿಷ ಕೂತ್ಕೊಳ್ಳಿ ಮುಂತಾದ ಪದಸಮೂಹಗಳೊಂದಿಗೆ ‘ಒಂದು ಕ್ಷಣ’ ಅನ್ನೋ ಶಬ್ದವನ್ನು ಎಷ್ಟು ಸುಲಭವಾಗಿ ಹೇಳಿಬಿಡುತ್ತೇವಲ್ಲಾ?

ಜೀವನದಲ್ಲಿ ನಾವು ಯಾವುದೇ ಒಂದು ನಿರ್ಧಾರ ಕೈಗೊಳ್ಳಬೇಕಿದ್ದರೆ, ಆ ಒಂದು ಕ್ಷಣವೇ ಎಷ್ಟೊಂದು ಮುಖ್ಯವಾಗಿಬಿಡುತ್ತದೆ! ಆ ಕ್ಷಣದ ನಿರ್ಧಾರ ತಪ್ಪಿದರೆ ಒಂದೋ ಮುಂದೆ ಪಶ್ಚಾತ್ತಾಪ ಪಡಬೇಕಾಗುತ್ತದೆ, ಅಥವಾ ಆ ಕ್ಷಣದಲ್ಲಿ ತೆಗೆದುಕೊಂಡ ನಿರ್ಧಾರವನ್ನು ಜೀವನವಿಡೀ ಮನಸಾ ಸ್ಮರಿಸಿಕೊಳ್ಳುತ್ತಿರಬಹುದು.

ಇಂಥ ಈ ‘ಕಾಲ’ನ ಆ ಕ್ಷಣಕ್ಕೆ ಎಷ್ಟೊಂದು ಮಹತ್ವವಿದೆ. ಒಂದು ಕ್ಷಣ ತಡವಾದರೆ ರೈಲೋ, ವಿಮಾನವೋ, ಬಸ್ಸೋ ಕೈತಪ್ಪಿಹೋಗಬಹುದು.

ಅದೇ ರೀತಿ ಸಂಬಂಧಗಳೂ. ಅತ್ಯಂತ ಆತ್ಮೀಯರಾದಾಗ ಸಲುಗೆ ಸಹಜವಾಗಿಯೇ ಬೆಳೆಯುತ್ತದೆ. ಆ ಸಲುಗೆಯಿಂದಾಗಿಯೇ ಲೋಕಾಭಿರಾಮ ಹರಟೆ, ಕಷ್ಟ ಸುಖ ಹಂಚಿಕೆ ಸಂದರ್ಭದಲ್ಲಿ ಒಂದು ಕ್ಷಣ ಮೈಮರೆತೋ ಅಥವಾ ಅತಿ ಸಲುಗೆಯಿಂದಲೋ ಒಂದು ಮಾತು ನಮ್ಮ ಬಾಯಿಯಿಂದ ಉದುರಿದರೆ ಅನಾಹುತವೇ ಆಗಿ ಹೋದೀತು. ಆ ಮಾತನ್ನು ಆತ್ಮೀಯರು ಅಪಾರ್ಥ ಮಾಡಿಕೊಂಡರೆ, ಸಂಬಂಧ ಕೆಡುತ್ತದೆ. ಇದಕ್ಕೆ ಬೆಸುಗೆ ಹಾಕಿ ಜೋಡಿಸುವುದು ಒಂದು ನಿಮಿಷದಲ್ಲಿ ಖಂಡಿತಾ ಸಾಧ್ಯವಿಲ್ಲ. ಅಷ್ಟು ವರ್ಷಗಳ ಕಾಲ ಪೋಷಿಸಿಕೊಂಡು ಬಂದಿದ್ದ ಆತ್ಮೀಯತೆ ಕರಗಿ ನೀರಾಗಿ ಹೋಗಲು ಆ ಒಂದು ಕ್ಷಣವಷ್ಟೇ ಸಾಕಲ್ಲವೇ? ಅದೇ ರೀತಿ ಎಷ್ಟೋ ವರ್ಷಗಳ ಕಠಿಣ ಪರಿಶ್ರಮದ ಫಲವೆಲ್ಲಾ ನಾಶವಾಗಲೂ ಇಂಥದ್ದೇ ಒಂದು ಕ್ಷಣ ಸಾಕಲ್ಲವೇ?

ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಎಂಬುದು ಪ್ರಸ್ತುತವಾಗುವುದು ಈ ಕ್ಷಣದಲ್ಲಿಯೇ. ಮನಸ್ಸು ಮನಸ್ಸುಗಳನ್ನು ಬೆಸೆಯುವ ಕಾಯಕಕ್ಕೆ ಎಷ್ಟು ಕಾಲ ತಗುಲುತ್ತದೆಯೋ, ಆ ಬೆಸುಗೆ ಮುರಿದು ಬೀಳಲು ಒಂದು ಕ್ಷಣ ಸಾಕು.

ಅದೇ ರೀತಿ ಆ ಕ್ಷಣದಲ್ಲಿ ನಮ್ಮ ಜೀವನವನ್ನೇ ಬದಲಾಯಿಸಿಬಿಡುವ ನಿರ್ಧಾರಗಳನ್ನು ತೆಗೆದುಕೊಳ್ಳಲು ಆ ಒಂದು ಕ್ಷಣವೇ ತಳಹದಿಯಾಗುತ್ತದೆ.

ಎಲ್ಲರ ಬಾಯಲ್ಲೂ ಹರಿದಾಡುತ್ತಾ ಹರಿದಾಡುತ್ತಾ ಈಗ ಅರ್ಥ ಕಳೆದುಕೊಂಡಂತಾಗಿರುವ ಅಥವಾ ಬಾಯಿಮಾತಿಗಷ್ಟೇ ಸೀಮಿತವಾಗಿಬಿಟ್ಟಿರುವ ‘ಕುಂಬಾರನಿಗೆ ವರುಷ.. ದೊಣ್ಣೆಗೆ ನಿಮಿಷ’ ಎಂಬ ಉಕ್ತಿಯೂ ಇದನ್ನೇ ಅಲ್ಲವೇ ಹೇಳಿದ್ದು? ಸಣ್ಣ ಮಕ್ಕಳಿಗೆ ಗಾದೆ ಮಾತು ಎಂಬ ಕಾರಣಕ್ಕೆ ಇದನ್ನು ಶಾಲೆಗಳಲ್ಲಿ ಹೇಳಿಕೊಟ್ಟಿರುತ್ತಾರೆ. ಆದರೆ ಅದು ಗಾದೆ ಮಾತು ಎಂಬ ಅಂಕ (Mark) ತಂದುಕೊಡುವ ವಾಕ್ಯವಾಗುತ್ತದೆಯೇ ಹೊರತು, ಈ ಮಕ್ಕಳಿಗೆ ಅದರ ಅರ್ಥ ಗ್ರಹಿಸಿಕೊಳ್ಳಬಲ್ಲ ರೀತಿಯಲ್ಲಿ ಬೋಧಿಸಲಾಗುವುದಿಲ್ಲ. ಆದರೆ ಮುಂದೆ ಜೀವನ ರೂಪಿಸಲು, ಜೀವನದಲ್ಲಿ ಔನ್ನತ್ಯ ಸಾಧಿಸಲು, ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ಎರಡೆರಡು ಬಾರಿ ಯೋಚನೆ ಮಾಡಲು ಇದೇ ವಾಕ್ಯವೇ ತಳಹದಿಯಾಗುತ್ತದೆ ಎಂಬುದು ಈ ಮಕ್ಕಳಿಗೇನು ಗೊತ್ತಿರುತ್ತದೆ?

ಅವರಿಗೆ ಬುದ್ಧಿ ತಿಳಿದಾಗಲೊಂದು ದಿನ ‘ಹೌದು, ಇಂಥ ವಾಕ್ಯ ಬರೆದು ನನಗೆ ಇಂತಿಷ್ಟು ಅಂಕ ಬಂದಿದೆ’ ಎಂದಷ್ಟೇ ಅವರು ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಅದರ ಅರ್ಥ ಗ್ರಹಿಸಿರುವುದಿಲ್ಲ.

ಒಂದು ಅರೆಕ್ಷಣದಲ್ಲಿ ನಾವು ಕೈಗೊಳ್ಳುವ ನಿರ್ಧಾರವು ಹೇಗೆ ನಮ್ಮ ಜೀವನದ ದಿಕ್ಕನ್ನು ಬದಲಾಯಿಸುತ್ತವೋ, ಅದೇ ರೀತಿ ಒಂದರೆಕ್ಷಣ ಮೈಮರೆತು ನಾವು ಆಡಿದ ನುಡಿಗಳೋ, ಮಾಡಿದ ಕೃತ್ಯಗಳೋ ಜೀವನದ ಬಂಡಿಯ ಗಾಲಿಯನ್ನು ಎತ್ತೆತ್ತಲೋ ತಿರುಗಿಸಿಬಿಡಬಹುದಲ್ಲಾ…

ಆದಕಾರಣ, ‘ಒಂದ್ನಿಮಿಷ ಪ್ಲೀಸ್’ ಅನ್ನೋದು ಜೀವನದ ಪ್ರತಿ ಕ್ಷಣದಲ್ಲೂ ನಿಮ್ಮ ಜತೆಗಿರಲಿ. ಕೋಪಾವಿಷ್ಟರಾಗಿದ್ದಾಗಲೂ ಒಂದ್ನಿಮಿಷ ಪ್ಲೀಸ್ ಅಂದ್ಬಿಡಿ. ಬದಲಾವಣೆ ನೋಡಿ!

8 COMMENTS

  1. ನಿಜ, ನಿಮಿಷದ ಮಹತ್ವದ ಅರಿವಿರುವುದು ನಿಮಿಷದಲ್ಲಿ ಅನಾಹುತ, ಅಚಾತುರ್ಯ ಮಾಡಿಕೊಂಡವರಿಗೆ !

  2. ಮಿಂಚುಳ್ಳಿ,
    ಥ್ಯಾಂಕ್ಸ್.

    ಲಕ್ಷ್ಮಿ.
    ಹೂಂ, ಅದೂ ಹೌದು, ಆದ್ರೆ, ಮುನ್ನೆಚ್ಚರಿಕೆ ತೆಗೆದುಕೊಳ್ಳುವ ಮನಸ್ಥಿತಿಯವರಿಗೂ!

    ಅನಿಲ್ ಮಂಜು,
    ಧನ್ಯವಾದ.

  3. ನಿಜ ಅವಿ ಅವರೇ.. “ಜೀವನದಲ್ಲಿ ನಾವು ಯಾವುದೇ ಒಂದು ನಿರ್ಧಾರ ಕೈಗೊಳ್ಳಬೇಕಿದ್ದರೆ, ಆ ಒಂದು ಕ್ಷಣವೇ ಎಷ್ಟೊಂದು ಮುಖ್ಯವಾಗಿಬಿಡುತ್ತದೆ!”
    ಎಷ್ಟೋ ಬಾರಿ ತಪ್ಪು ನಿರ್ಧಾರ ತೆಗೆದಾಗ ಹಲುಬಿದ್ದೂ ಉಂಟು!
    ಮತ್ತು, ನೀವಂದಂತೆ, ಸಣ್ಣ ಮಕ್ಕಳಿಗೆ, ಗಾದೆ ಮಾತು ಎಂಬ ಅಂಕ (Mark) ತಂದುಕೊಡುವ ವಾಕ್ಯವಾಗುತ್ತದೆಯೇ ಹೊರತು, ಈ ಮಕ್ಕಳಿಗೆ ಅದರ ಅರ್ಥ ಗ್ರಹಿಸಿಕೊಳ್ಳಬಲ್ಲ ರೀತಿಯಲ್ಲಿ ಬೋಧಿಸಲಾಗುವುದಿಲ್ಲ. ಈ ಮಾತು ನೂರಕ್ಕೆ ನೂರು ಸತ್ಯ. ಕೇವಲ ಗಾದೆ ಮಾತಲ್ಲ, ಪ್ರತಿಯೊಂದು ವಿಷಯವೂ ಕೇವಲ “ಅಂಕ”ಗಳಾಗಿ ಬಿಡುತ್ತಿವೆ. ಈಗ ಬಹುತೇಕ ಶಾಲೆಗಳಲ್ಲಿ, ಕಾಲೇಜುಗಳಲ್ಲಿ ನಡೆಯುತ್ತಿರುವುದು ಮಾತ್ರವಲ್ಲ, ನನ್ನ ಸ್ವಂತ ಅನುಭವವೂ ಹೌದು… ಇಂದು ಶಿಕ್ಷಣವೆಂದರೆ, ಪುಸ್ತಕದ ಬದನೇಕಾಯಿ ತಲೆಯಲ್ಲಿ ಅಜೀರ್ಣವಾಗುವಷ್ಟು ತುಂಬಿಸಿ, ಪರೀಕ್ಷೆಯೆಂಬ ಸಿಂಕ್ ನಲ್ಲಿ ಇದನ್ನು ವಾಕರಿಕೆ ಮಾಡುವುದು… ಇದರಿಂದ ಸಿಗುವುದು ಕೇವಲ ಅಂಕ… ಅಂಕ ಮಾತ್ರ. ಜೀವನ, ಅದರ ಮಹತ್ವ ಎಂದೂ ತಿಳಿವುದೇ ಇಲ್ಲ…

    • ಪ್ರದೀಪ್, ಹೌದು, ನೀವಂದಂತೆ ನಮ್ಮ ಶಿಕ್ಷಣ ಕ್ರಮ ಸರಿ ಇಲ್ಲ. ಮೆಕಾಲೆ ಪದ್ಧತಿಯಿಂದ ನಾವು ಹೊರಬರಬೇಕು. ಹಾಗಿದ್ದಾಗ ಮಾತ್ರವೇ ಗ್ರಾಮೀಣ ಮಟ್ಟದಲ್ಲಿಯೂ ಒಳ್ಳೆ ಪ್ರತಿಭೆಗಳು ಕೀರ್ತಿ ಪಡೆಯುವುದು ಸಾಧ್ಯ. ವರ್ಷವಿಡೀ ಓದಿದ್ದನ್ನು ಮೂರು ಗಂಟೆಯಲ್ಲಿ ಉಗುಳಿ ಕೈತೊಳೆದುಕೊಳ್ಳುವುದಷ್ಟೇ ಇಂದಿನ ಶಿಕ್ಷಣ ಕ್ರಮ.

      ಶಿಕ್ಷಣ ಪದ್ಧತಿಯು ಜ್ಞಾನ ಪಡೆಯುವ ಪದ್ಧತಿಯೂ ಆಗಿ ಪರಿವರ್ತನೆಗೊಂಡರೆ ದೇಶ ಉದ್ಧಾರವಾಗಬಹುದಲ್ವಾ?

  4. ಸರ್,

    ಒಂದ್‌ನಿಮಿಷ ಪ್ಲೀಸ್…ನಿಮ್ಮ ಹಿಂದಿನ ಬರಹ ಓದಿ ಬರ್ತೀನಿ….ಅಹ..ಅಹ….

    • ಶಿವು,
      ಹಹಹ. ಹೌದು ಒಂದೇ ನಿಮಿಷ ಬೇಕು ಅಂತ ಕೇಳಿ ನಾವು ನಿಜಕ್ಕೂ ಎಷ್ಟೊಂದು ನಿಮಿಷಗಳನ್ನು ವ್ಯಯಿಸುತ್ತಿದ್ದೇವಲ್ವಾ… 🙂

Leave a Reply to anil manju Cancel reply

Please enter your comment!
Please enter your name here