ನನ್ನ ಫೇಸ್‌ಬುಕ್ ಖಾತೆ ಹ್ಯಾಕ್ ಆಗಿದೆ! ಏನು ಮಾಡಲಿ?

0
632

“ನನ್ನ ಫೇಸ್‌ಬುಕ್ ಖಾತೆ ಹ್ಯಾಕ್ ಆಗಿದೆ, ನನ್ನ ಹೆಸರಲ್ಲಿ ಬೇರೊಂದು ಖಾತೆ ಕ್ರಿಯೇಟ್ ಆಗಿ, ಅದರಿಂದ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಲಾಗುತ್ತಿದೆ! ದಯವಿಟ್ಟು ಸ್ವೀಕರಿಸಬೇಡಿ”!

ಈ ರೀತಿಯ ಪೋಸ್ಟ್‌ಗಳು ಕಳೆದೊಂದು ತಿಂಗಳಿಂದೀಚೆಗೆ ಫೇಸ್‌ಬುಕ್‌ನಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿವೆ. ಜೊತೆಗೆ ಫೇಸ್‌ಬುಕ್ ಸರಿ ಇಲ್ಲ, ಸೈಬರ್ ಭದ್ರತೆ ಇಲ್ಲ, ಖಾಸಗಿತನಕ್ಕೆ ಧಕ್ಕೆ ಅಂತೆಲ್ಲ ಚರ್ಚೆಗಳಂತೂ ಸಾಕಷ್ಟು ನಡೆದಿವೆ. ಫೇಸ್‌ಬುಕ್‌ಗೆ ಬಂದವರು ಖಾಸಗಿತನ ಬಗ್ಗೆ ಚರ್ಚೆ ಮಾಡುವುದು ಶುದ್ಧ ತಪ್ಪು. ಯಾಕೆಂದರೆ, ನಮ್ಮ ಇಮೇಲ್, ಫೋನ್ ನಂಬರ್, ಊರು, ಹುದ್ದೆ, ಸ್ನೇಹಿತರು, ಎಲ್ಲೆಲ್ಲ ಹೋದೆವು ಎಂಬಿತ್ಯಾದಿ ಎಲ್ಲ ಪ್ರಮುಖ ಖಾಸಗಿ ವಿಷಯಗಳನ್ನು ಫೇಸ್‌ಬುಕ್‌ಗೆ ಧಾರೆ ಎರೆದಿರುತ್ತೇವೆ ಎಂಬುದು ಎಷ್ಟು ನಿಜವೋ, ಈ ರೀತಿಯಾಗಿ ಪುಕಾರುಗಳು, ನಕಲಿಗಳು ಸಾಮಾಜಿಕ ಜಾಲತಾಣದಲ್ಲಿ ಕಿರಿಕಿರಿಗೆ ಕಾರಣವಾಗಿರುವುದು ಅಷ್ಟೇ ಸತ್ಯ.

ಹ್ಯಾಕ್ ಅಥವಾ ಫೇಕ್?
ಫೇಸ್‌ಬುಕ್ ಖಾತೆ ಹ್ಯಾಕ್ ಆಗುವುದು ಮತ್ತು ಈ ರೀತಿಯಾದ ಫೇಕ್ ಖಾತೆಗಳು ಸೃಷ್ಟಿಯಾಗುವ ವಿಚಾರಗಳು ಪ್ರತ್ಯೇಕ ಸಂಗತಿಗಳು.

ಹ್ಯಾಕ್ ಆಗುವುದು ಎಂದರೆ, ಹಲವಾರು ತಂತ್ರಗಳ ಮೂಲಕ ನಮ್ಮ ಖಾತೆಯ ಪಾಸ್‌ವರ್ಡ್ ಪತ್ತೆ ಹಚ್ಚಿ, ಅದನ್ನು ಬಳಸಿ ಲಾಗಿನ್ ಆಗುವುದು. ಇದನ್ನು ಹಣ ಕೀಳುವುದಕ್ಕೋ ಅಥವಾ ಅನಗತ್ಯವಾಗಿ ಅಶ್ಲೀಲ ಬರಹಗಳು, ವಿಡಿಯೊಗಳನ್ನು ಶೇರ್ ಮಾಡುವುದಕ್ಕೋ ಬಳಸಲಾಗುತ್ತದೆ.

ಈಗ ಸದ್ದು ಮಾಡುತ್ತಿರುವುದು ಫೇಕ್ ಪ್ರೊಫೈಲ್ ರಚನೆಯ ಸಮಸ್ಯೆ. ಅಂದರೆ, ನಮ್ಮದೇ ಪ್ರೊಫೈಲ್‌ನಿಂದ ಫೋಟೋ ತೆಗೆದುಕೊಂಡು, ನಮ್ಮದೇ ಹೆಸರಿನಲ್ಲಿ ಬೇರೊಬ್ಬರು ಖಾತೆ ತೆರೆಯುತ್ತಾರೆ. ಅದಕ್ಕೆ ಅವರದ್ದೇ ಆದ ಇಮೇಲ್ ಅಥವಾ ಫೋನ್ ನಂಬರ್ ಇತ್ಯಾದಿ ಕೊಟ್ಟಿರುತ್ತಾರೆ. ನಾವಂತೂ, ಇವರು ನಮ್ಮವರೇ ಅಂತ ನಂಬುತ್ತೇವೆ.

ಏನಾಗುತ್ತದೆ?
ನಮ್ಮ ನಕಲಿ ಖಾತೆ ಮಾಡಿದವರು ನಮ್ಮ ಸ್ನೇಹಿತರಿಗೆ ಪುನಃ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಾರೆ. ಯೋಚನೆ ಮಾಡದೆ ಸ್ವೀಕರಿಸಿಬಿಟ್ಟಿರುತ್ತೇವೆ. ‘ಏನೋ ಸಮಸ್ಯೆಯಾಗಿದೆ, ಹೀಗಾಗಿ ಈ ಖಾತೆ ತೆರೆದಿದ್ದೇನೆ’ ಎಂಬ ಸಮಜಾಯಿಷಿಯೂ ಸಿಗಬಹುದು. ಅಥವಾ ನಾವೇ ಹಾಗೆ ಅಂದುಕೊಂಡಿರುತ್ತೇವೆ!

ನಂತರ ಅವರು ಮೆಸೆಂಜರ್ ಮೂಲಕ ಸಂಪರ್ಕಿಸಿ, ‘ಸಮಸ್ಯೆಯಲ್ಲಿ ಸಿಲುಕಿದ್ದೇನೆ, ತುರ್ತಾಗಿ ಈ ಲಿಂಕ್ ಮೂಲಕ ಒಂದಿಷ್ಟು ಹಣ ಕಳುಹಿಸು. ಎರಡೇ ದಿನದಲ್ಲಿ ವಾಪಸ್ ಮಾಡ್ತೇನೆ’ ಅಂತೆಲ್ಲ ಸಂದೇಶ ಕಳುಹಿಸಬಹುದು. ಆ ಸ್ನೇಹಿತರೋ, ಅದು ನೀವೇ ಅಂತಂದುಕೊಂಡು ಧೈರ್ಯದಿಂದ ದುಡ್ಡು ಕೊಡಲೂಬಹುದು. ಅಲ್ಲಿಗೆ ಆನ್‌ಲೈನ್‌ನಲ್ಲಿ ಇರುವುದರ ಬಗ್ಗೆ ನಾವೆಷ್ಟೇ ಎಚ್ಚರ ವಹಿಸಿದರೂ ಸಾಕಾಗುವುದಿಲ್ಲ ಎಂಬುದು ನಮ್ಮ ಗಮನಕ್ಕೆ ಬರುತ್ತದೆ, ಆದರದು ತಡವಾಗಿರುತ್ತದೆ.

ಅವಸರದಲ್ಲೇ ಇರುವ ನಾವು ಫ್ರೆಂಡ್ ರಿಕ್ವೆಸ್ಟ್ ಒಪ್ಪಿಕೊಂಡುಬಿಟ್ಟಿರುತ್ತೇವೆ. ‘ಇಲ್ಲಪ್ಪಾ, ನಾನು ಫ್ರೆಂಡ್ ರಿಕ್ವೆಸ್ಟ್ ಕಳಿಸಿಲ್ಲ, ಅದನ್ನು ಡಿಲೀಟ್ ಮಾಡಿಬಿಡು’ ಅಂತ ಆ ಸ್ನೇಹಿತ ಗಾಬರಿಯಿಂದಲೇ ಹೇಳಿದಾಗ, ನಾವು ಮತ್ತಷ್ಟು ಗಾಬರಿಗೆ ಬಿದ್ದು, ಅಸಲಿಯೋ, ನಕಲಿಯೋ ತಿಳಿಯದೆ ಎರಡನ್ನೂ ಅನ್‌ಫ್ರೆಂಡ್ ಮಾಡಿರುತ್ತೇವೆ! ಇದು ಮತ್ತೊಂದು ಅವಾಂತರಕ್ಕೆ ಕಾರಣವಾಗುತ್ತದೆ.

ಸೆಲೆಬ್ರಿಟಿಗಳ ಹೆಸರಿನಲ್ಲಿ ನಕಲಿ ಖಾತೆಗಳಿರುತ್ತವೆ ಎಂಬುದು ಇದುವರೆಗೂ ನಮಗೆ ಗೊತ್ತಿದ್ದ ಸಂಗತಿ. ಆದರೆ, ಜನ ಸಾಮಾನ್ಯರ ಖಾತೆಗಳಿಗೂ, ವಿಶೇಷವಾಗಿ ಗರಿಷ್ಠ ಸಂಖ್ಯೆಯ ಸ್ನೇಹಿತರಿರುವ ಪ್ರೊಫೈಲ್‌ಗಳಿಗೂ ಈ ನಕಲಿಗಳ ಕಾಟ ಹೆಚ್ಚಾಗುತ್ತಿದೆ.

ಎರಡು ವರ್ಷದ ಹಿಂದೆಯೂ ಹೀಗೇ ಆಗಿತ್ತು. ಅದೆಂದರೆ, ‘ನನ್ನ ಖಾತೆ ಹ್ಯಾಕ್ ಆಗಿದೆ. ನನ್ನಿಂದ ಬರುವ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಬೇಡಿ’ ಎಂಬ ಇಂಗ್ಲಿಷ್ ಒಕ್ಕಣೆಯಿರುವ ಸಂದೇಶ. ಅದರಲ್ಲೇ, ‘ಇದನ್ನು ನಿಮ್ಮ ಸ್ನೇಹಿತರೊಂದಿಗೂ ಶೇರ್ ಮಾಡಿಕೊಳ್ಳಿ’ ಅಂತಲೂ ಬರೆಯಲಾಗಿತ್ತು. ಎಲ್ಲರೂ ಶೇರ್ ಮಾಡಿದ್ದೇ ಮಾಡಿದ್ದು. ಅದು ವೈರಲ್ ಆಗಿದ್ದೇ ಆಗಿದ್ದು. ನಂತರ ಈ ಸಂದೇಶವೇ ನಕಲಿ ಎಂಬುದು ಆಮೇಲೆ ಗೊತ್ತಾಯಿತು. ಅದೊಂಥರಾ ’10 ಜನರಿಗೆ ಈ ಸಂದೇಶ ಕಳುಹಿಸಿ, ಅದೃಷ್ಟ ನಿಮ್ಮದಾಗುತ್ತದೆ’ ಎಂಬ ಮೂಢನಂಬಿಕೆಯ ಪುಕಾರು ಸಂದೇಶಗಳ ಸರಪಣಿ. ಕೆಲಸವಿಲ್ಲದಿರುವವರು ಫೇಸ್‌ಬುಕ್‌ನಲ್ಲಿ ಮಾಡುವ ಅವಾಂತರವಾಗಿತ್ತದು.

ಇದಷ್ಟೇ ಅಲ್ಲದೆ, ಸಂದೇಶಗಳು ಕ್ಲೋನ್ ಆಗುತ್ತಾ ಹೋಗುವ ವಿದ್ಯಮಾನವೊಂದು ಕೆಲ ವರ್ಷಗಳ ಹಿಂದೆ ಕೊರೊನಾ ವೈರಸ್‌ನಂತೆ ಫೇಸ್‌ಬುಕ್‌ನಲ್ಲಿಯೂ ಹರಡಿದ್ದು ನಿಮಗೆ ನೆನಪಿರಬಹುದು. ಅಂದರೆ, ಒಂದು ಸಂದೇಶದ ಲಿಂಕ್ ಕ್ಲಿಕ್ ಮಾಡಿದಲ್ಲಿ, ಅದು ಸ್ನೇಹಿತರನ್ನು ಟ್ಯಾಗ್ ಮಾಡುತ್ತಾ, ಪೋಸ್ಟ್ ಆಗುತ್ತಿತ್ತು. ಅದು ನಿಂತು ಹೋಯಿತು. ಅದಾದ ಬಳಿಕ, ಹ್ಯಾಶ್‌ಟ್ಯಾಗ್‌ಗಳು ವೈರಲ್ ಆಗತೊಡಗಿದವು. ಇದಂತೂ ಮಾನವ ನಿರ್ಮಿತವೇ. ಸಾರೀ ಚಾಲೆಂಜ್, ಐಸ್ ಬಕೆಟ್ ಚಾಲೆಂಜ್, ಸೆಲ್ಫೀ ಚಾಲೆಂಜ್, ಕಪಲ್ ಚಾಲೆಂಜ್… ಹೀಗೆ. ಇವುಗಳಿಂದ ಯಾವುದೇ ಸಮಸ್ಯೆಗಳಿಲ್ಲ.

ಆದರೆ, ಫೇಸ್‌ಬುಕ್ ಮಾತ್ರವಲ್ಲದೆ ಹಲವು ಖಾತೆಗಳು ಹ್ಯಾಕ್ ಆಗಿರುವ ಸುದ್ದಿಗಳು ಕೇಳಿಬರುತ್ತಿರುವ ಈ ಸಂದರ್ಭದಲ್ಲಿ ಸೈಬರ್ ಭದ್ರತೆ ಕುರಿತು ಹೆಚ್ಚು ಕಾಳಜಿ ವಹಿಸಿರುವಾಗ, ಹೆದರಿದವರ ಮೇಲೆ ರಬ್ಬರ್ ಹಾವೆಸೆದಂತೆ ಫೇಕ್ ಖಾತೆಗಳು ಕಿರಿಕಿರಿ ಮಾಡಿ, ಗಾಬರಿ ಮೂಡಿಸುವುದಂತೂ ಸುಳ್ಳಲ್ಲ.

ಹೀಗಾದಾಗ ಏನು ಮಾಡಬೇಕು?
ನಮ್ಮ ನಕಲಿ ಪ್ರೊಫೈಲ್ ಎಂದು ತಿಳಿದ ತಕ್ಷಣ, ಅದನ್ನು ಫೇಸ್‌ಬುಕ್‌ಗೆ ವರದಿ (ರಿಪೋರ್ಟ್) ಮಾಡಬೇಕು. ಅಂದರೆ, ಆ ಪ್ರೊಫೈಲ್‌ಗೆ ಹೋಗಿ, ಬಲ ಭಾಗದಲ್ಲಿ ಮೂರು ಚುಕ್ಕೆಗಳು ಕಾಣಿಸುತ್ತವೆ. ಅದನ್ನು ಒತ್ತಿದಾಗ, Find Support or Report Profile ಎಂಬ ಆಯ್ಕೆ ಗೋಚರಿಸುತ್ತದೆ. ಆಗ, ಕಾರಣವೇನು ಅಂತ ಆಯ್ಕೆ ಮಾಡಿಕೊಳ್ಳುವ ಸ್ಕ್ರೀನ್ ಕಾಣಿಸುತ್ತದೆ. ಅಲ್ಲಿ ಫೇಕ್ ಅಕೌಂಟ್ ಅಥವಾ ಫೇಕ್ ನೇಮ್ ಅಂತ ಕ್ಲಿಕ್ ಮಾಡಿ ವರದಿ ಸಲ್ಲಿಸಿದರಾಯಿತು.

ಫೇಸ್‌ಬುಕ್ ಈ ರೀತಿಯ ಸಮಸ್ಯೆಗಳ ಬಗ್ಗೆ ಹೆಚ್ಚಿನ ಆಸ್ಥೆ ವಹಿಸುತ್ತದೆ. ನಿಮಗೆ ಯಾರಾದರೂ ಫೇಸ್‌ಬುಕ್‌ನಲ್ಲಿ ಕಿರಿಕಿರಿ ಮಾಡುತ್ತಾರೆ, ಸುಳ್ಳು ವಿಷಯ ಹರಡುತ್ತಾರೆ ಎಂದಾದರೂ ಕೂಡ ಈ ರೀತಿಯಾಗಿ ಫೇಸ್‌ಬುಕ್‌ಗೆ ರಿಪೋರ್ಟ್ ಮಾಡಬಹುದು (ದೂರು ನೀಡಬಹುದು).

ಇದನ್ನು ನಾವೇ ಮಾಡಬೇಕೆಂದಿಲ್ಲ, ನಮ್ಮ ಹೆಸರಿನ ನಕಲಿ ಖಾತೆಯಿಂದ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿದ ಗೆಳೆಯರು ಕೂಡ ಫೇಸ್‌ಬುಕ್‌ಗೆ ವರದಿ ಮಾಡಬಹುದು. ಹೀಗೆ ಮಾಡಿದಾಗ, ಫೇಸ್‌ಬುಕ್‌ನಿಂದಲೇ ನಿಮಗೊಂದು ಭರವಸೆ ನೀಡುವ ಸಂದೇಶ ಬರುತ್ತದೆ.

ಆದರೂ, ನಿಮ್ಮ ಖಾತೆ ಹ್ಯಾಕ್ ಆಗಿದೆ ಅಂತೇನಾದರೂ ಸಂದೇಹ ಬಲವಾಗಿಯೇ ಇದ್ದರೆ ಈ ಲಿಂಕ್ ಮೂಲಕ ನಮ್ಮ ಖಾತೆ ಸುರಕ್ಷಿತವಾಗಿಟ್ಟುಕೊಳ್ಳಬಹುದು.

ನಕಲಿ ಖಾತೆಯ ಬಗ್ಗೆ ಇಲ್ಲಿ ದೂರು ನೀಡಿ.

ಒಂದು ಮಾತು ನೆನಪಿಡಬೇಕು. ಈ ಡಿಜಿಟಲ್ ಜಗತ್ತಿನಲ್ಲಿ ನಕಲಿ ಯಾವುದು ಅಸಲಿ ಯಾವುದು ಎಂದು ತಿಳಿದುಕೊಳ್ಳುವುದು ಕಷ್ಟ. ಸಾಮಾಜಿಕ ಜಾಲತಾಣಗಳನ್ನು ವಿವೇಚನೆಯಿಂದ ಉಪಯೋಗಿಸುವುದೇ ಸುರಕ್ಷಿತವಾಗಿರುವ ಏಕೈಕ ಮಾರ್ಗ.

My Article Published in Prajavani on 05 Dec 2020

LEAVE A REPLY

Please enter your comment!
Please enter your name here