ಲಾಕ್‌ಡೌನ್ ಕಾಲದಲ್ಲಿ ಮುದುಡಿದ ಮನಗಳಿಗೆ ತಂಪೆರಚಿದ ಆನ್‌ಲೈನ್ ಸ್ವಾತಂತ್ರ್ಯ ಸಂಭ್ರಮ

0
492


ಕೋವಿಡ್-19 ಸಂಕಷ್ಟ ಕಾಲದಲ್ಲಿ ಮನೆಯಲ್ಲೇ ಕುಳಿತು, ಜಡ್ಡುಗಟ್ಟಿದ ಮನಗಳಿಗೆ ಮನರಂಜನೆಯ ಸಿಂಚನ. ಸದಾ ಹೊಸತನಕ್ಕೆ ಸ್ಪಂದಿಸುವ ಪ್ರಜಾವಾಣಿಯ ಫೇಸ್‌ಬುಕ್ ಲೈವ್, ಪಾಡ್‌ಕಾಸ್ಟ್ ಮುಂತಾದ ಸರಣಿ ಕಾರ್ಯಕ್ರಮಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವಂತೆಯೇ, ಸ್ವಾತಂತ್ರ್ಯೋತ್ಸವ ವಿಶೇಷವಾಗಿ ಸತತ ಮೂರು ದಿನ ಪ್ರಜಾವಾಣಿ ಫೇಸ್‌ಬುಕ್ ಪುಟದಲ್ಲಿ ಆಯೋಜಿಸಲಾದ ‘ನಮನ-ಸಂಭ್ರಮ-ಸಾಂತ್ವನ’ ಕಾರ್ಯಕ್ರಮಗಳು ಲಕ್ಷಾಂತರ ನೊಂದ ಮನಸ್ಸುಗಳನ್ನು ತಣಿಸಿದವು.

ಭಾರತಕ್ಕೆ ಸ್ವಾತಂತ್ರ್ಯ ದೊರೆತಿದ್ದು 1947ರ ಆ.14ರ ಮಧ್ಯರಾತ್ರಿ. ಅದರ ನೆನಪಿನಲ್ಲಿ ಆಗಸ್ಟ್ 14ರ ಶುಕ್ರವಾರ ರಾತ್ರಿ 10.30ರಿಂದ ಮಧ್ಯರಾತ್ರಿಯವರೆಗೂ ಪ್ರಸಿದ್ಧ ಗಾಯಕಿ ಸಂಗೀತಾ ಕಟ್ಟಿ ಕುಲಕರ್ಣಿ ಅವರಿಂದ ದೇಶ ಭಕ್ತಿಗೀತೆಗಳ ಗಾಯನವು ಜನ ಮಾನಸದಲ್ಲಿ ದೇಶಭಕ್ತಿಯನ್ನು ಪಸರಿಸಿತು. ‘ಏ ಮೇರೇ ವತನ್ ಕೇ ಲೋಗೋಂ’ ಹೆಸರಿನ ಗಾಯನ ವೈಭವವು ದೇಶಕ್ಕಾಗಿ ಹೋರಾಡಿ, ಎಲ್ಲ ಸ್ವಾತಂತ್ರ್ಯ ವೀರರ ಸ್ಮರಣೆಯೊಂದಿದಿಗೆ ಅವರಿಗೆ ನಮನವನ್ನು ಸಲ್ಲಿಸಿ, ಬಲಿದಾನಗೈದವರ ಕೊಡುಗೆಯ ಋಣದಲ್ಲಿ ನಾವಿರುವುದನ್ನು ಜ್ಞಾಪಿಸಿತು.

ವೈಷ್ಣವ ಜನತೋ, ಏ ಮೇರೆ ವತನ್ ಕೇ ಲೋಗೋಂ, ಕೆ.ಎಸ್.ನ. ಅವರ ‘ಆಕಾಶಕ್ಕೆದ್ದು ನಿಂತ ಪರ್ವತ ಹಿಮ ಮೌನದಲ್ಲಿ’ ಮುಂತಾದ ಹಾಡುಗಳು ಭಾರತೀಯತೆಯ ಸಾಕ್ಷಿಪ್ರಜ್ಞೆಯನ್ನು ಬಡಿದೆಚ್ಚರಿಸಿದವು. ಇಂಪಾದ ಗಾಯನದೊಂದಿಗೆ ಕೃಷ್ಣ ಉಡುಪ ಕೀಬೋರ್ಡ್, ಪ್ರದ್ಯುಮ್ನ ತಬಲಾ ಹಾಗೂ ಅಭಿಷೇಕ್ ರಿದಂ ಪ್ಯಾಡ್ ಸಾಥ್‌ನೊಂದಿಗೆ ಅಲ್ಲಿ ಸುಂದರ ಸುಮಧುರ ರಾತ್ರಿಯೊಂದು ನಿರ್ಮಾಣಗೊಂಡಿತು.

ಸಂಗೀತಾ ಕಟ್ಟಿ ಗಾಯನ ಸಂಭ್ರಮ

ಸ್ವಾತಂತ್ರ್ಯೋತ್ಸವದ ದಿನವಾದ ಆಗಸ್ಟ್ 15ರಂದು ರಂಜಿಸಿದವರು ಖ್ಯಾತ ಜಾನಪದ ಗಾಯಕಿ ಸವಿತಕ್ಕ ಮತ್ತವರ ತಂಡ. ಸಂಜೆ 5ರಿಂದ ಒಂದುವರೆ ಗಂಟೆ ಈ ಗಾಯನೋತ್ಸವವು ಕರ್ನಾಟಕದ ಸಮೃದ್ಧ ಸಾಂಸ್ಕೃತಿಕ ಪರಂಪರೆಯನ್ನು ತೆರೆದಿಟ್ಟು, ಜನರು ಆನಂದದಿಂದ ಕುಳಿತಲ್ಲೇ ಹೆಜ್ಜೆ ಹಾಕುವಂತೆ ಮಾಡಿತು. ಏಕತೆ, ಸಹೋದರತೆ, ಭಾವೈಕ್ಯ ಸಾರುವ ಸೋಜುಗದ ಸೂಜಿ ಮಲ್ಲಿಗೆ, ಭಾಗ್ಯದಾ ಬಳೆಗಾರ, ಮೊದಲಾದ ಹಾಡುಗಳು “ಸವಿತಕ್ಕನ ಅಳ್ಳೀ ಬ್ಯಾಂಡ್” ಮೂಲಕ ಸ್ವಾತಂತ್ರ್ಯದ ಸಂಭ್ರಮವನ್ನು ಕಳೆಗಟ್ಟಿಸಿತು.

ಸವಿತಕ್ಕನ ಅಳ್ಳೀ ಬ್ಯಾಂಡ್ ಜಾನಪದ ಲೋಕ

ತ್ರಿದಿನ ಕಾರ್ಯಕ್ರಮದ ಕೊನೆಯ ದಿನ ಭಾನುವಾರ ಸಂಜೆ, ‘ಸಂಗೀತ ಋಷಿ’ ವಿದ್ಯಾಭೂಷಣರು, ‘ಚಿಂತೀ ಯಾಕ ಮಾಡುತಿದ್ದೀ, ಚಿನ್ಮಯನಿದ್ದಾನೆ’ ಎನ್ನುತ್ತಲೇ, ಕೋವಿಡ್ ಸಂಕಷ್ಟದಿಂದ ನೊಂದ ಮನಗಳಿಗೆ ಸಾಂತ್ವನದ ಸಿಂಚನ ನೀಡಿದರು. ದಾಸಸಾಹಿತ್ಯ ಪ್ರಸಾರದಲ್ಲಿ ಪ್ರಮುಖ ಪಾತ್ರ ವಹಿಸಿರುವ ಅವರ ಕಂಚಿನ ಕಂಠದಲ್ಲಿ ಮೂಡಿಬಂದ ಪಿಳ್ಳಂಗೋವಿಯ, ಮಧುಕರ ವೃತ್ತಿ ಎನ್ನದು ಮುಂತಾದ ದಾಸಶ್ರೇಷ್ಠರ ಕೃತಿಗಳು ಕೇಳುಗರ ಹೃದಯವನ್ನು ನೇರವಾಗಿ ತಟ್ಟಿ, ಅದ್ಭುತವಾದ ಭಕ್ತಿ ರಸಾನುಭೂತಿಯನ್ನು ನೀಡಿತು. ವಿದ್ವಾನ್ ಪ್ರಾದೇಶ್ ಆಚಾರ್ ಅವರ ಪಿಟೀಲು, ವಿದ್ವಾನ್ ನಿಕ್ಷಿತ್ ಆಚಾರ್ ಅವರ ಮೃದಂಗವು ಗಾಯನವನ್ನು ಕರ್ಣಾನಂದಕರವಾಗಿಸಿತು.

ವಿದ್ಯಾಭೂಷಣರ ಗಾನಸುಧೆ

74ನೇ ಸ್ವಾತಂತ್ರ್ಯೋತ್ಸವವನ್ನು ಮನೆಯಲ್ಲೇ ಕುಳಿತು ಆಚರಿಸುವ ಅನಿವಾರ್ಯತೆಯನ್ನು ಜಾನಪದ ತಜ್ಞ ಶ್ರೀನಿವಾಸ ಜಿ.ಕಪ್ಪಣ್ಣ ಸಂಯೋಜನೆಯಲ್ಲಿ, ರಾಜೀವ್ ಎಸ್.ಜೋಯಿಸ್ ಅವರ ಸ್ಟುಡಿಯೋ ತಾಂತ್ರಿಕ ನೆರವಿನಿಂದ ಈ ಮೂರೂ ಕಾರ್ಯಕ್ರಮಗಳು ಸ್ಮರಣೀಯವಾಗಿಸಿದವು.

ಕನ್ನಡದ ಶ್ರೀಮಂತ ಕಲಾ ಪರಂಪರೆಯನ್ನು ಪ್ರಜಾವಾಣಿ ಫೇಸ್‌ಬುಕ್ ಪುಟದ ಮೂಲಕ ಜಾಗತಿಕವಾಗಿ ಪಸರಿಸುತ್ತಿದ್ದು, ನಾಡಿನ ಉದ್ದಗಲದ ಕಲಾವಿದರ ಸಹಯೋಗದಲ್ಲಿ ಆಯೋಜಿಸಲಾಗುತ್ತಿರುವ ಎಲ್ಲ ಕಾರ್ಯಕ್ರಮಗಳಿಗೂ ಅದ್ಭುತ ಜನಸ್ಪಂದನೆ ದೊರೆತಿದೆ. ಲಾಕ್‌ಡೌನ್ ದಿನಗಳಲ್ಲಿ ನಿರಂತರವಾಗಿ ನಡೆದ, ರಾಜ್ಯದ ಸಾಂಸ್ಕೃತಿಕ ಭವ್ಯತೆಯನ್ನು ಬಿಂಬಿಸುವ ಎಲ್ಲ ಕಲಾ ಪ್ರಕಾರಗಳ ವಿಡಿಯೊವನ್ನು ಪ್ರಜಾವಾಣಿಯ ಫೇಸ್‌ಬುಕ್ ಪುಟದಲ್ಲಿ (fb.com/prajavani.net) ಯಾವಾಗ ಬೇಕಿದ್ದರೂ ವೀಕ್ಷಿಸಬಹುದಾಗಿದೆ.

My Article Published in Prajavani Online on 17 Aug 2020

LEAVE A REPLY

Please enter your comment!
Please enter your name here