ನನಗೆ ಗ್ರಹಣ ಬಡಿದದ್ದು…

2
567

ಹಲೋ ಮಿತ್ರರೇ..!

ಟ್ರಿಣ್… ಟ್ರಿಣ್…
ನಾನು: ಹಲೋ

ರೀ 8 ಗಂಟೆಯೊಳಗೆ ಏನಾದ್ರೂ ತಿಂದ್ಕೊಂಡು ಮನೆಗೆ ಬನ್ರೀ… ಗ್ರಹಣ ಅಂತೆ, ಆ ನಂತರ ಏನೂ ತಿನ್ಬಾರ್ದಂತೆ

ನಾನು: ಹೌದಾ? ಯಾರೋ ಹೇಳಿದ್ದದು???

ಪಕ್ಕದ್ಮನೆಯವ್ರು… ಆಮೇಲೆ… ಅವರಿವರು ಎಲ್ರೂ ಹೇಳ್ತಾ ಇದ್ದಾರೆ…

ನಾನು: ಏನಾದ್ರೂ ಮಾಡಿಡು, ಅಷ್ಟ್ರೊಳಗೆ ಬರೋಕೆ ಟ್ರೈ ಮಾಡ್ತೀನಿ

ಇಲ್ಲರೀ, ಎಲ್ಲ ಪಾತ್ರೆ ಗೀತ್ರೆ ತೊಳೆದಿಟ್ಟಿದ್ದೀನಿ, ಮನೆ ಕ್ಲೀನ್ ಆಗಿದೆ. ಅಲ್ಲೇ ಏನಾದ್ರೂ ತಿನ್ಕೊಂಡು ಬನ್ನಿ

ನಾನು: ಹಾಂ! ಏನಾದ್ರೂ ಹಣ್ಣಾದ್ರೂ ಇಟ್ಟಿರು… ನಾನು…. ಪರ್ಸ್… ಹಲೋ ಹಲೋ ಹಲೋ… ಕೇಳಿಸ್ತಾ ಇದೆಯಾ?

ಕಟ್…

ಬೈಕಲ್ಲಿ ಹೋಗ್ತಿರೋವಾಗ ಸಿಗ್ನಲ್ ಇಲ್ದೆ ಮಾತು ಕಟ್ ಆಯ್ತು…

ಆದ್ರೂ, ಏನೋ ಭಯಂಕರ ಪರಿಸ್ಥಿತಿ ಇದೆ ಅಂತ ನೆನಪಾಗಿ, ಬ್ಯಾಗೆಲ್ಲಾ ತಡಕಾಡಿ, 1 ರೂ., 2 ರೂ. ಕಾಯಿನ್‌ಗಳನ್ನೆಲ್ಲಾ ಹೆಕ್ಕಿ ಲೆಕ್ಕ ಹಾಕಿದೆ. ಅಬ್ಬ, 20 ರೂಪಾಯಿ ಆಯ್ತು…

ಒಂದು ಮಸಾಲೆ ಪುರಿಗೆ ಸಾಕು…

ತಿಂದೆ, ದುಡ್ಡು ಕೊಡಲು ಹೋದಾಗ…

”ಏನ್ರೀ ಇದು? ನೋಟ್ ಬ್ಯಾನ್ ಮಾಡಿದಂಗೇ ಕಾಯಿನ್ನೂ ಬ್ಯಾನ್ ಮಾಡ್ಬೇಕಿತ್ತು… ಎಲ್ಲಿ ಇಟ್ಕೊಳೋದು ಈ ಚಿಲ್ರೆ ಹಣಾನ… ನೋಟು ಕೊಡ್ರೀ…” ಅಂದ ಬೇಲ್ ಪುರಿ ಅಂಗಡಿಯವನು.

ಅರೆ, ಯಾವಾಗ್ಲೂ ಚಿಲ್ರೆ ಕೊಡಿ ಅನ್ನುತ್ತಿದ್ದವನು ಇವತ್ತೇಕೆ ಹೀಗೆ? ಇವನಿಗೇನೋ ಗ್ರಹಣ ಬಡಿದಿರ್ಬೇಕು… ಅಂದ್ಕೊಂಡ ನಾನು ಚಿಲ್ಲರೆಯನ್ನು ಠಣ್ ಅಂತ ಆತ ಇಟ್ಟಿದ್ದ ತಟ್ಟೆಗೆ ಹಾಕಿ, ಎಣಿಸ್ಕೊಳಿ ಅಂದು, ಮುಖ ಮುಚ್ಚಿಕೊಂಡು ಬಂದ್ಬಿಟ್ಟೆ…

ವಿಷಯ ಏನಪಾ ಅಂದ್ರೆ…

ಇವತ್ತು ಮಂಡೇ ಮಾರ್ನಿಂಗ್ ಬ್ಲೂಸ್… ಬೆಳಗ್ಗೆ ಹೊರಡೋ ಗಡಿಬಿಡಿಯಲ್ಲಿ ಪರ್ಸ್ ಮನೇಲೇ ಬಾಕಿ. ಕ್ರೆಡಿಟ್ಟು, ಡೆಬಿಟ್ಟು ಕಾರ್ಡುಗಳೂ ಅದರಲ್ಲೇ….

ಮಧ್ಯಾಹ್ನವೇನೋ ಬುತ್ತಿ ಇತ್ತು. ಸಂಜೆಯೇನೂ ತಿನ್ನೋಕೆ ಪುರುಸೊತ್ತಿರಲಿಲ್ಲ. ರಾತ್ರಿ ಹೋಟೆಲಲ್ಲಿ ತಿನ್ನೋಣಾಂದ್ರೆ, ಅವನೇನಾದ್ರೂ ಸುಮ್ನೇ ಕೊಡ್ತಾನಾ… ?

ಅಂತೂ ಗ್ರಹಣ ಚೆನ್ನಾಗಿ ಆಚರಣೆಯಾಯ್ತು…

ಆದ್ರೂ ಹಣ್ಣು ಹಂಪಲು ತಿನ್ಬೋದಂತೆ ಎಂಬ ಅಂತೆ ಕಂತೆಗಳಲ್ಲೊಂದು ಅಂಶವನ್ನು ಹೆಕ್ಕಿಕೊಂಡಾಗ, ಮನೇಲಿ ಬಾಳೆ ಹಣ್ಣು ರೆಡೀ ಇತ್ತು. ಗಬಕ್ಕನೇ ನುಂಗಿ ನೀರು ಕುಡಿದು ಬರೆಯಲು ಕೂತೆ.

ಪರ್ಸ್ ಇಲ್ಲ ಅಂತ ಗೊತ್ತಾದ್ದು ಅದರ ಅಗತ್ಯ ಬಿದ್ದಾಗಲೇ ಅಲ್ವೇ?

ಲೈಫೂ ಅಷ್ಟೇ…

ಇಲ್ಲದಿದ್ದಾಗಲೇ ಅಥವಾ ಅಗತ್ಯ ಬಿದ್ದಾಗಲೇ ಅದ್ರ ಬೆಲೆ ಗೊತ್ತಾಗೋದು…

ಇಲ್ಲದಿದ್ದಾಗ ಗೊತ್ತಾದ್ರೆ ಪಾಠ ಕಲೀತೀವಿ

ಅಗತ್ಯ ಬಿದ್ದಾಗ ಮಾತ್ರ ಬೆಲೆ ಗೊತ್ತಾದ್ರೆ ಹೀಗೇ ತುತ್ತಿಗೂ ಪರದಾಡಬೇಕಾಗುತ್ತದೆ

-ಅವಿನಾಶ್ ಬಿ. (ಲೇಖನ ಕದ್ದವರು ಹೆಸರು ಬರೆದವರ ಹಾಕಬೇಕಾಗಿ ವಿನಂತಿ)

2 COMMENTS

Leave a Reply to Talaku Srinivas Cancel reply

Please enter your comment!
Please enter your name here