ಕಳುಹಿಸಿದ WhatsApp ಸಂದೇಶ ಡಿಲೀಟ್ ಮಾಡುವುದು ಹೇಗೆ?

0
371

WhatsApp Deleteಕಳೆದ ವಾರ ವಾಟ್ಸಪ್ ಎಂಬ ಸಂದೇಶ ವಿನಿಮಯ ಕಿರು ತಂತ್ರಾಂಶವು ಕೆಲವು ನಿಮಿಷಗಳ ಕಾಲ ಸ್ಥಗಿತವಾದಾಗ ಅದು ಜಾಗತಿಕವಾಗಿ ಉಂಟು ಮಾಡಿದ ಚಡಪಡಿಕೆ ಅಷ್ಟಿಷ್ಟಲ್ಲ. ಈಗ ಜನರಿಗೆ ಇಂಟರ್ನೆಟ್ ಸಂಪರ್ಕವಿರುವ ಸ್ಮಾರ್ಟ್‌ಫೋನ್ ಎಷ್ಟು ಅನಿವಾರ್ಯವಾಗಿದೆಯೋ, ಅದರಲ್ಲಿ ವಾಟ್ಸಪ್ ಇರುವುದು ಕೂಡ ಅಷ್ಟೇ ಅನಿವಾರ್ಯವಾಗಿಬಿಟ್ಟಿದೆ. ಇಂಥ ವಾಟ್ಸಪ್‌ನಲ್ಲಿ ತಂತ್ರಾಂಶ ಸೌಕರ್ಯಗಳು ನಿಧಾನವಾಗಿ ಹೆಚ್ಚುತ್ತಿವೆ. ಟೆಲಿಗ್ರಾಂ ಎಂಬ ಮತ್ತೊಂದು ಸಂದೇಶ ವಿನಿಮಯ ಕಿರು ತಂತ್ರಾಂಶದಲ್ಲಿ (ಆ್ಯಪ್) ವಾಟ್ಸಪ್‌ಗಿಂತ ತುಂಬ ಮುಂದಿದೆ. ಅದರಲ್ಲಿ ಈಗಾಗಲೇ ಇರುವ ಅನುಕೂಲವೊಂದು ವಾಟ್ಸಪ್‌ಗೆ ಕಳೆದ ವಾರ ಸೇರ್ಪಡೆಯಾಗಿದೆ. ಅದೆಂದರೆ, ಕಳುಹಿಸಿದ ಸಂದೇಶವನ್ನು ಡಿಲೀಟ್ ಮಾಡುವ ವ್ಯವಸ್ಥೆ.

ಇದುವರೆಗೆ ಬೀಟಾ ಆವೃತ್ತಿಯ ಮೂಲಕ ಕೆಲವೇ ಕೆಲವು ತಂತ್ರಜ್ಞರಿಗೆ, ಟೆಸ್ಟರ್‌ಗಳಿಗೆ ಲಭ್ಯವಿದ್ದ ಈ ವಾಟ್ಸಪ್ ವೈಶಿಷ್ಟ್ಯವು ಭಾರತದಲ್ಲೀಗ ಎಲ್ಲರಿಗೆ ಬಿಡುಗಡೆಯಾಗಿದೆ. ಮತ್ತು ವೈವಿಧ್ಯಮಯ ವಾಟ್ಸಪ್ ಗ್ರೂಪುಗಳಲ್ಲಿರುವವರು ಇದನ್ನು ತಿಳಿದುಕೊಂಡಿದ್ದಾರೆ. ಆದರೆ ಗ್ರೂಪುಗಳಲ್ಲಿ ಇಲ್ಲದಿರುವವರು ಹಾಗೂ ಆಗಾಗ್ಗೆ ಮಾತ್ರ ವಾಟ್ಸಪ್ ಬಳಸುತ್ತಿರುವವರು, ಗ್ರಾಮೀಣ ಪ್ರದೇಶದವರಿಗೂ ಇದರ ಪ್ರಯೋಜನ ದೊರೆಯುವಂತಾಗಲಿ ಎಂಬುದಕ್ಕಾಗಿ ಸಮಗ್ರ ಮಾಹಿತಿ ಇಲ್ಲಿದೆ. ಜತೆಗೆ, ಡಿಲೀಟ್ ಮಾಡುವುದು ಹೇಗೆ, ಡಿಲೀಟ್ ಆಗುತ್ತಿಲ್ಲ ಅಂತೆಲ್ಲ ಕೆಲವು ಸಂದೇಹಗಳ ಸಂದೇಶಗಳನ್ನು ಕಳುಹಿಸಿದವರಲ್ಲಿ ನಗರ ಪ್ರದೇಶದಲ್ಲಿರುವವರೂ ಇದ್ದರು. ಹೀಗಾಗಿ ಈ ಸೌಕರ್ಯದ ಕುರಿತು ಎಲ್ಲರೂ ತಿಳಿದುಕೊಳ್ಳುವಂತಾಗಲೆಂಬ ಆಶಯ.

ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಎಂಬ ಮಾತಿದೆ. ತಪ್ಪಾದ ಸಂದೇಶವನ್ನು ಗ್ರೂಪಿನಲ್ಲಿಯೋ ಅಥವಾ ವೈಯಕ್ತಿಕವಾಗಿಯೋ ಅಪ್ಪಿ ತಪ್ಪಿ ಕಳುಹಿಸಿದರೆ ಅದರಿಂದಾಗುವ ಮುಜುಗರ ಅಷ್ಟಿಷ್ಟಲ್ಲ. ಮತ್ತೆ ಕ್ಷಮೆ ಕೇಳಿದರೂ ಆಗಿದ್ದು ಆಗಿರುತ್ತದೆ. ಆದರೆ, ಇನ್ನು ಮುಂದೆ ಈ ಸನ್ನಿವೇಶ ತಪ್ಪಿಸಿಕೊಳ್ಳಬಹುದು. ಆರಂಭದಲ್ಲಿ 7 ನಿಮಿಷದೊಳಗೆ ಸಂದೇಶ ಡಿಲೀಟ್ ಮಾಡಲು ಕಾಲಾವಕಾಶವಿತ್ತು. ಈಗ ಹಲವಾರು ಗಂಟೆಗಳ ಕಾಲಾವಕಾಶವಿದೆ. ಆದರೆ, ಅಷ್ಟರೊಳಗೆ ಸಂದೇಶ ಸ್ವೀಕರಿಸಿದವರು ಓದಿರಬಾರದು. ಅದೇ ರೀತಿ ನೋಟಿಫಿಕೇಶನ್ ಬಾರ್‌ನಲ್ಲಿ ಕೂಡ ಈ ಸಂದೇಶ ಕಾಣಿಸುತ್ತದೆ ಎಂಬುದು ನೆನಪಿರಲಿ. ಆದರೆ, ಸಂದೇಶ ಡಿಲೀಟ್ ಮಾಡಿದ ಬಳಿಕ ನೋಟಿಫಿಕೇಶನ್ ಬಾರ್‌ನಲ್ಲಿಯೂ ಅದು ಕಾಣಿಸುವುದಿಲ್ಲ.

ಡಿಲೀಟ್ ಮಾಡುವುದು ಹೇಗೆ?: ಯಾವುದೇ ಸಂದೇಶವನ್ನು ನೀವು ಫಾರ್ವರ್ಡ್ ಅಥವಾ ಪೋಸ್ಟ್ ಮಾಡಿದಾಗ ನಿಮಗೆ ತಪ್ಪಾಗಿದೆ ಎಂಬ ಅರಿವಾಗುತ್ತದೆ. ಅಥವಾ ಅದರಲ್ಲಿ ತಿದ್ದುಪಡಿ ಮಾಡಿ ಕಳುಹಿಸಬೇಕೆಂದು ಆಲೋಚಿಸುತ್ತೀರಿ. ಈ ರೀತಿ ಆಲೋಚಿಸಲು ನಿಮಗೆ 7 ನಿಮಿಷಗಳ ಕಾಲಾವಕಾಶವನ್ನು ವಾಟ್ಸಪ್ ನೀಡಿದೆ. ಸಂದೇಶ ಸ್ವೀಕರಿಸುವವರು ಕಾರ್ಯವ್ಯಸ್ತತೆಯಿಂದ ನೋಡಲು ಸಮಯ ತೆಗೆದುಕೊಂಡಿದ್ದರೆ, ಅಥವಾ ತಕ್ಷಣವೇ ನೀವು ಡಿಲೀಟ್ ಮಾಡಿದ್ದರೆ, ಆ ಸಂದೇಶವು ಅವರಿಗೆ ಓದಲು ಸಿಗುವುದಿಲ್ಲ. ಡಿಲೀಟ್ ಮಾಡುವುದು ಹೇಗೆ, ಸಂದೇಶವನ್ನು ಬೇರೆಯವರಿಗೆ ಕಾಣಿಸದಂತೆ ಮಾಡುವ ‘Delete for Everyone’ ಆಯ್ಕೆ ಗೋಚರಿಸುತ್ತಿಲ್ಲ ಅಂತ ನನಗೆ ಬಂದಿರುವ ಒಂದು ಸಂದೇಶದಲ್ಲಿತ್ತು. ಅದಕ್ಕೆ, ನೀವು ಡಿಲೀಟ್ ಮಾಡಬೇಕಾಗಿರುವ ಸಂದೇಶವನ್ನು ಒತ್ತಿ ಹಿಡಿದುಕೊಳ್ಳಿ. ಮೇಲ್ಭಾಗದಲ್ಲಿ ಕಾಣಿಸುವ ಡಿಲೀಟ್ ಬಟನ್ (ಕಸದ ತೊಟ್ಟಿಯ ಐಕಾನ್) ಒತ್ತಿ. ಆಗ ನಿಮಗೆ ಮೂರು ಆಯ್ಕೆಗಳು ಗೋಚರಿಸುತ್ತವೆ. Delete For Me, Cancel ಹಾಗೂ Delete For Everyone ಅಂತ. ಇದರಲ್ಲಿ ‘ಡಿಲೀಟ್ ಫಾರ್ ಎವ್ರಿವನ್’ ಒತ್ತಿದರೆ, ನೀವು ಕಳುಹಿಸಿದ ಸಂದೇಶವನ್ನು ಯಾರಿಗೆಲ್ಲ ಕಳುಹಿಸಿದ್ದೀರೋ, ಅವರ್ಯಾರಿಗೂ ಗೋಚರಿಸುವುದಿಲ್ಲ. ಆದರೆ, ನೀವು ಸಂದೇಶ ಡಿಲೀಟ್ ಮಾಡಿದ್ದೀರಿ ಎಂಬುದು ಎಲ್ಲರಿಗೂ ತಿಳಿಯುತ್ತದೆ. ಅಲ್ಲಿ ‘You deleted this message’ ಎಂಬ ಮಾಹಿತಿ ಅವರ ಮೊಬೈಲ್‌ನಲ್ಲಿ ಕಾಣಿಸುತ್ತದೆ. ಅದನ್ನೂ ನೀವು ಡಿಲೀಟ್ ಮಾಡಬಹುದು, ಆದರೆ ಇಲ್ಲಿ ನಿಮಗೆ ಆಯ್ಕೆ ದೊರೆಯುವುದು ಕ್ಯಾನ್ಸಲ್ ಹಾಗೂ ‘ಡಿಲೀಟ್ ಫಾರ್ ಮಿ’ ಮಾತ್ರ. ಅಂದರೆ ನಿಮ್ಮ ಮೊಬೈಲಿನಲ್ಲಿ ಮಾತ್ರ ಅದನ್ನು ಡಿಲೀಟ್ ಮಾಡಬಹುದು. ಉಳಿದವರಿಗೆ ‘ಯು ಡಿಲೀಟೆಡ್ ದಿಸ್ ಮೆಸೇಜ್’ ಅಂತಾನೇ ಕಾಣಿಸುತ್ತಿರುತ್ತದೆ.

ಈ ಸೌಕರ್ಯ ಆಂಡ್ರಾಯ್ಡ್ ಹಾಗೂ ಐಒಎಸ್ ಸಾಧನಗಳಲ್ಲಿ ನೀವು ಗ್ರೂಪುಗಳಲ್ಲಿ ಕಳುಹಿಸುವ ಸಂದೇಶಗಳಿಗೆ ಮಾತ್ರವೇ ಅಲ್ಲದೆ, ವೈಯಕ್ತಿಕವಾಗಿ ಕಳುಹಿಸುವ ಸಂದೇಶಗಳಿಗೂ ಲಭ್ಯವಿದೆ.

ಆ್ಯಪ್ ಅಪ್‌ಡೇಟ್ ಮಾಡಿಕೊಳ್ಳುವುದು: ಆದರೆ ಇದು ಕೆಲಸ ಮಾಡಬೇಕಿದ್ದರೆ, ನೀವು ವಾಟ್ಸಪ್ ಆ್ಯಪ್ ಅನ್ನು ಪ್ಲೇ ಸ್ಟೋರ್‌ನಿಂದ ಅಪ್‌ಡೇಟ್ ಮಾಡಿಕೊಂಡಿರಬೇಕಾಗುತ್ತದೆ. ಆ್ಯಪ್‌ಗಳ ಸುಧಾರಿತ ಆವೃತ್ತಿ ಲಭ್ಯವಿರುವಾಗ ಸ್ವಯಂಚಾಲಿತ ಅಪ್‌ಡೇಟ್ ಆಗಲಿ ಅಂತ ಹೊಂದಿಸಿಕೊಂಡವರಿಗೆ ಸಮಸ್ಯೆಯಾಗುವುದಿಲ್ಲ. ಆ್ಯಪ್‌ಗಳ ‘ಆಟೋಮ್ಯಾಟಿಕ್ ಅಪ್‌ಡೇಟ್’ ಆಯ್ಕೆ ಮಾಡಿಕೊಳ್ಳದವರು ಹೀಗೆ ಮಾಡಿ: ಇಂಟರ್ನೆಟ್ ಆನ್ ಮಾಡಿ, ಗೂಗಲ್ ಪ್ಲೇ ಸ್ಟೋರ್ ಆ್ಯಪ್ ಮೇಲೆ ಕ್ಲಿಕ್ ಮಾಡಿ. ಓಪನ್ ಆದಾಗ, ಮೇಲ್ಭಾಗದಲ್ಲಿ Google Play ಎಂದು ಬರೆದಿರುವ ಸರ್ಚ್ ಬಾಕ್ಸ್‌ನ ಎಡಭಾಗದಲ್ಲಿ ಮೂರು ಗೆರೆಗಳು ಕಾಣಿಸುತ್ತವೆ. ಅದನ್ನು ಮೆನು ಬಟನ್ ಎನ್ನಲಾಗುತ್ತದೆ. ಕ್ಲಿಕ್ ಮಾಡಿ. ನಂತರ ಕಾಣಿಸಿಕೊಳ್ಳುವ ವಿಂಡೋದಲ್ಲಿ, My Apps & games ಅಂತ ಕಾಣಿಸುತ್ತದೆ. ಅದನ್ನು ಒತ್ತಿದಾಗ ಹಳೆಯ ಆವೃತ್ತಿಗಳಿರುವ ಮತ್ತು ಹೊಸ ಆವೃತ್ತಿ ಲಭ್ಯವಿರುವ ಆ್ಯಪ್‌ಗಳ ಪಟ್ಟಿ ಗೋಚರಿಸುತ್ತದೆ. ಆಯಾ ಆ್ಯಪ್‌ನ ಮುಂದೆ ‘ಅಪ್‌ಡೇಟ್’ ಎಂಬ ಬಟನ್ ಕೂಡ ಕಾಣಿಸುತ್ತದೆ. ಒಂದಕ್ಕಿಂತ ಜಾಸ್ತಿ ಇದ್ದರೆ, ಮೇಲ್ಭಾಗದಲ್ಲಿಯೇ ‘ಅಪ್‌ಡೇಟ್ ಆಲ್’ ಅಂತ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ. ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿರುವ ಆ್ಯಪ್‌ಗಳು ಪರಿಷ್ಕರಣೆಗೊಳ್ಳುತ್ತವೆ.

‘ಟೆಲಿಗ್ರಾಂ ಎಂಬುದು ಭಾರತೀಯ ಆ್ಯಪ್, ಅದನ್ನು ಎಲ್ಲರೂ ಬಳಸುವಂತೆ ಪ್ರಧಾನಿ ಮೋದಿ ಸೂಚಿಸಿದ್ದಾರೆ’ ಎಂಬ ನಕಲಿ ಸಂದೇಶವೊಂದು ವಾಟ್ಸಪ್‌ನಲ್ಲಿ ಹರಿದಾಡುತ್ತಿದ್ದುದು ನೆನಪಿರಬಹುದು. ಟೆಲಿಗ್ರಾಂ ಭಾರತದ್ದಲ್ಲ ಅಂತ ನನಗೆ ತಿಳಿದ ಗ್ರೂಪುಗಳಲ್ಲೆಲ್ಲ ತಿಳಿಹೇಳಿದ್ದೇನೆ ಮತ್ತು ಇಂಥ ಸುಳ್ಳು ಸಂದೇಶಗಳನ್ನು ದೃಢೀಕರಿಸಿಕೊಳ್ಳದೆ ಗ್ರೂಪುಗಳಿಗೆ ಫಾರ್ವರ್ಡ್ ಮಾಡಬಾರದು ಅಂತಲೂ ಎಚ್ಚರಿಸಿದ್ದೇನೆ. ಬಹುಶಃ ನೀವೂ ಆ ರೀತಿ ಮಾಡಿರಬಹುದು. ಅದಿರಲಿ, ಟೆಲಿಗ್ರಾಂನಲ್ಲಿ ಇರುವ ಮತ್ತೊಂದು ಅನುಕೂಲವೂ ವಾಟ್ಸಪ್‌ಗೆ ಬರಲಿ ಎಂಬುದು ವಾಟ್ಸಪ್ ಬಳಕೆದಾರರ ಆಶಯವಿದೆ. ಏನೆಂದರೆ ವಾಟ್ಸಪ್‌ನಲ್ಲಿ ವೀಡಿಯೋ ಅಥವಾ ಆಡಿಯೋ ಫೈಲುಗಳ ಗಾತ್ರವು 16 ಎಂಬಿಗಿಂತ ಜಾಸ್ತಿ ಇದ್ದರೆ ಮೊಬೈಲಿನಿಂದ ನೇರವಾಗಿ ಕಳುಹಿಸಲು ಸಾಧ್ಯವಾಗುವುದಿಲ್ಲ. ಆದರೆ ಟೆಲಿಗ್ರಾಂನಲ್ಲಿ ಇದು ಸಾಧ್ಯ. ವಾಟ್ಸಪ್‌ಗೂ ಈ ಸೌಕರ್ಯ ಬಂದರೆ, ದೊಡ್ಡ ಗಾತ್ರದ ಫೈಲುಗಳನ್ನು ಕಳುಹಿಸಲು ಟೆಲಿಗ್ರಾಂ ಅವಲಂಬಿಸುವ, ಆ ಮೂಲಕ ನಮ್ಮ ಮೊಬೈಲಿನಲ್ಲಿ ಮತ್ತೊಂದು ಆ್ಯಪ್/ಖಾತೆ ತೆರೆಯುವ ತ್ರಾಸ ತಪ್ಪುತ್ತದೆ.

ಮಾಹಿತಿ@ತಂತ್ರಜ್ಞಾನ – ವಿಜಯ ಕರ್ನಾಟಕ ಅಂಕಣ: ಅವಿನಾಶ್ ಬಿ. (06 ನವೆಂಬರ್ 2017)

LEAVE A REPLY

Please enter your comment!
Please enter your name here