ಪೋಸ್ಟ್ ಡಿಲೀಟ್ ಮಾಡುವ ಹಕ್ಕು ಫೇಸ್‌ಬುಕ್ ಕೈಯಲ್ಲಿ

0
490

ಫೇಸ್‌ಬುಕ್ ಆ್ಯಪ್ ತೆರೆದಾಗ, ‘ನಾವು ನಮ್ಮ ಗೋಪ್ಯತಾ ನೀತಿಯನ್ನು ಬದಲಿಸಿದ್ದೇವೆ’ ಎಂಬ ಸೂಚನೆಯೊಂದು ಎಲ್ಲರಿಗೂ ಇತ್ತೀಚೆಗೆ ಕಾಣಿಸಿಕೊಂಡಿತ್ತು. ಬಹುಶಃ ಎಂದಿನಂತೆ ಬಹುತೇಕ ಬಳಕೆದಾರರು ಇದನ್ನೂ ನಿರ್ಲಕ್ಷಿಸಿರಬಹುದು. ಆದರೆ, ಇದಕ್ಕೂ ಇತ್ತೀಚೆಗೆ ಫೇಸ್‌ಬುಕ್ ಪೋಸ್ಟ್‌ಗಳ ವಿಷಯದಲ್ಲಿ ಎದ್ದಿರುವ ವಿವಾದಕ್ಕೂ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ ಸಾಕಷ್ಟು ಸಂಬಂಧವಿದೆ.

ಇತ್ತೀಚೆಗೆ ಕೇಂದ್ರ ಸರ್ಕಾರದ ಪರವಾಗಿ ಫೇಸ್‌ಬುಕ್ ಕೆಲಸ ಮಾಡುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದರೆ, ತಮ್ಮ ವಿರುದ್ಧವೇ ಕೆಲಸ ಮಾಡುತ್ತಿದೆ ಎಂದು ಆಡಳಿತ ಪಕ್ಷಗಳೂ ಪ್ರತ್ಯಾರೋಪ ಮಾಡಿದ ಜಟಾಪಟಿಯನ್ನಂತೂ ನಾವು ಕೇಳಿದ್ದೇವೆ. ಫೇಸ್‌ಬುಕ್ ಪೋಸ್ಟ್‌ಗಾಗಿ, ಕಾಮೆಂಟ್‌ಗಾಗಿ ಬೆಂಗಳೂರೇ ಹೊತ್ತಿ ಉರಿದ, ಗಲಭೆಯಾದ ಪ್ರಕರಣಗಳೂ ಕಣ್ಣ ಮುಂದಿದೆ.

ಇಂಥ ಪರಿಸ್ಥಿತಿಯಲ್ಲಿ, ಫೇಸ್‌ಬುಕ್ ತನ್ನ ನೀತಿಯಲ್ಲಿ ಮಾಡಿದ ಮಾರ್ಪಾಟನ್ನು ಬಳಕೆದಾರರ ಗಮನಕ್ಕೆ ತಂದಿದೆ. ಅದೆಂದರೆ, ಜಗತ್ತಿನ ಎಲ್ಲೇ ಆದರೂ ತನ್ನ ವಿರುದ್ಧ ಕಾನೂನು ಅಥವಾ ನಿಯಂತ್ರಣಾತ್ಮಕ ಕ್ರಮಗಳಿಗೆ ಕಾರಣವಾಗಬಹುದೆಂಬ ಸಂದೇಹ ಬರುವ ಯಾವುದೇ ವಿಷಯವನ್ನು (ಕಂಟೆಂಟ್) ಫೇಸ್‌ಬುಕ್ ಅಳಿಸಿಹಾಕಬಹುದು ಅಥವಾ ಅದನ್ನು ನಿರ್ಬಂಧಿಸಬಹುದು ಎಂಬ ಹೊಸ ವ್ಯಾಖ್ಯಾನದ ಸೇರ್ಪಡೆ.

ಈ ಕುರಿತಾಗಿ ಆ್ಯಪ್ ಮತ್ತು ವೆಬ್ ಮೂಲಕ ಪುಷ್ ನೋಟಿಫಿಕೇಶನ್ ಬಹುತೇಕ ಎಲ್ಲ ಬಳಕೆದಾರರಿಗೂ ಬಂದಿರುತ್ತದೆ. ಅದರಲ್ಲೇನಿದೆ ಎಂದು ಯೋಚಿಸುವ ಗೋಜಿಗೆ ಹೋಗಿರುವುದಿಲ್ಲ ಅಷ್ಟೆ.

ಆಸ್ಟ್ರೇಲಿಯಾ, ಅಮೆರಿಕ, ಯೂರೋಪ್ ಸೇರಿದಂತೆ ಜಾಗತಿಕವಾಗಿ ವಿವಿಧ ಸರ್ಕಾರಗಳಿಂದ ಇತ್ತೀಚೆಗೆ ನಿರ್ಬಂಧಗಳ ಒತ್ತಡ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಫೇಸ್‌ಬುಕ್ ವೇದಿಕೆಯ ಮೂಲಕ ಪ್ರಸಾರವಾಗುವ ಪೋಸ್ಟ್‌ಗಳು ಇನ್ನು ತನ್ನದೇ ನಿಯಂತ್ರಣದಲ್ಲಿರುತ್ತದೆ ಎಂಬುದನ್ನು ಮಾರ್ಕ್ ಜುಕರ್‌ಬರ್ಗ್ ಕಂಪನಿಯು ಖಚಿತಪಡಿಸಿದೆ. ಅಕ್ಟೋಬರ್ 1ರಿಂದ ಈ ನಿಯಮ ಬದಲಾವಣೆ ಲಾಗೂ ಆಗಿದೆ.

ಈ ನಿರ್ಧಾರದ ಹಿಂದೆ ಆಸ್ಟ್ರೇಲಿಯಾದಲ್ಲಿ ನಡೆದ ಒಂದು ಬೆಳವಣಿಗೆಯಿದೆ. ಅಲ್ಲಿ ಫೇಸ್‌ಬುಕ್ ಹಾಗೂ ಗೂಗಲ್ ಕಂಪನಿಗಳು ಸುದ್ದಿ ಪ್ರಕಾಶನ ಸಂಸ್ಥೆಗಳಿಗೆ ಹಣ ಪಾವತಿಸಬೇಕೆಂಬ ಹೊಸ ನಿಯಮದ ಪ್ರಸ್ತಾಪವಿದೆ. ಇದನ್ನು ವಿರೋಧಿಸುತ್ತಿರುವ ಫೇಸ್‌ಬುಕ್, ಈ ನಿಯಮವೇನಾದರೂ ಜಾರಿಗೆ ಬಂದರೆ, ಆಸ್ಟ್ರೇಲಿಯಾ ನಿವಾಸಿಗಳು ಸ್ಥಳೀಯ ಅಥವಾ ಅಂತರರಾಷ್ಟ್ರೀಯ ಸುದ್ದಿಗಳನ್ನು ಶೇರ್ ಮಾಡಿಕೊಳ್ಳುವ ಬಳಕೆದಾರರನ್ನು ಬ್ಲಾಕ್ ಮಾಡಲಾಗುತ್ತದೆ ಎಂದು ಹೇಳಿದೆ.

ಆಸ್ಟ್ರೇಲಿಯಾದ ಸ್ಫರ್ಧಾ ಮತ್ತು ಗ್ರಾಹಕ ಆಯೋಗ (ಎಸಿಸಿಸಿ) ‘ಸುದ್ದಿ ಮಾಧ್ಯಮ ಚೌಕಾಶಿ ಸಂಹಿತೆ’ಯ ಕರಡನ್ನು ಸಿದ್ಧಪಡಿಸಿತ್ತು. ಈ ಕರಡಿನ ಪ್ರಕಾರ, ಫೇಸ್‌ಬುಕ್ ಹಾಗೂ ಗೂಗಲ್ ಸಂಸ್ಥೆಗಳು ಪತ್ರಿಕಾ ಸಂಸ್ಥೆಗಳ ಕಂಟೆಂಟ್ ಬಳಸುತ್ತಿರುವುದರಿಂದ, ಅವುಗಳಿಗೆ ಹಣ ಪಾವತಿಸಬೇಕಾಗುತ್ತದೆ. ಅದೇ ರೀತಿ, ಸುದ್ದಿ ಹಂಚಿಕೆಯ ಅಲ್ಗಾರಿದಂ ಹಾಗೂ ಸುದ್ದಿಯನ್ನು ಹೇಗೆ ಬಿಂಬಿಸಲಾಗುತ್ತದೆ ಎಂಬುದರ ಬಗ್ಗೆ ಮಹತ್ವದ ಯಾವುದೇ ಬದಲಾವಣೆ ಮಾಡುವಂತಿದ್ದರೆ, ಇದರ ಬಗ್ಗೆ ಒಂದು ತಿಂಗಳು ಮುಂಚಿತವಾಗಿ ಈ ಪ್ರಕಾಶನ ಸಂಸ್ಥೆಗಳಿಗೆ, ಸರ್ಕಾರಕ್ಕೆ ಸೂಚನೆ ನೀಡಬೇಕಾಗುತ್ತದೆ.

ಫೇಸ್‌ಬುಕ್ ಇದೀಗ ತನ್ನ ಅಸ್ತಿತ್ವವನ್ನು ಗಟ್ಟಿ ಮಾಡಿಕೊಳ್ಳುವುದಕ್ಕಾಗಿ ಹೊಸ ನಿಯಮ ಮಾಡಿದೆ. ಇದರ ನಡುವೆಯೇ, ಫೇಸ್‌ಬುಕ್ ನ್ಯೂಸ್ ಎಂಬ ಉತ್ಪನ್ನವನ್ನು ಈಗಾಗಲೇ ಅಮೆರಿಕದಲ್ಲಿ ಬಿಡುಗಡೆ ಮಾಡಿರುವ ಫೇಸ್‌ಬುಕ್, ಭಾರತ ಸೇರಿದಂತೆ ಜಗತ್ತಿನ ಬೇರೆಡೆಯೂ ಇದನ್ನು ಲಭ್ಯವಾಗಿಸಲಿದೆ. ಅದೇ ರೀತಿ, ಈ ಉತ್ಪನ್ನದ ಜೊತೆ ಕೈಜೋಡಿಸುವ ಮಾಧ್ಯಮ ಸಂಸ್ಥೆಗಳಿಗೆ ಫೇಸ್‌ಬುಕ್ ಹಣ ಪಾವತಿಸಲಿದೆ.

ಅಮೆರಿಕದಲ್ಲಿ ಕೂಡ ಫೇಸ್‌ಬುಕ್‌ಗೆ ಬಿಸಿ ತಟ್ಟಿದೆ. ಅಲ್ಲೀಗ ಚುನಾವಣಾ ಸಮಯ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಜೋ ಬೈಡನ್ ಇಬ್ಬರು ಕೂಡ ಫೇಸ್‌ಬುಕ್‌ಗೆ ಇರುವ ಕಾನೂನಿನ ರಕ್ಷಣೆಯನ್ನು ತೊಡೆದುಹಾಕುವ ಮಾತನ್ನಾಡಿದ್ದಾರೆ. ಅಂದರೆ, ಬಳಕೆದಾರರು ಪೋಸ್ಟ್ ಮಾಡುವ ಅಕ್ರಮ, ಸುಳ್ಳು ಕಂಟೆಂಟ್‌ಗೆ ಫೇಸ್‌ಬುಕ್ ಬಾಧ್ಯಸ್ಥವಲ್ಲ ಎಂಬ ಪರಿಸ್ಥಿತಿ ಈಗಿದೆ. ಅಲ್ಲೂ ನಿರ್ಬಂಧವೇನಾದರೂ ಜಾರಿಗೆ ಬಂದರೆ, ಫೇಸ್‌ಬುಕ್ ಈ ಪೋಸ್ಟ್‌ಗಳನ್ನು ತೆಗೆಯಲೇಬೇಕಾಗುತ್ತದೆ.

ಹೊಸ ನೀತಿಯ ಒಟ್ಟಾರೆ ಪರಿಣಾಮವೆಂದರೆ, ಫೇಸ್‌ಬುಕ್‌ನಲ್ಲಿ ಯಾರು ಬೇಕಾದರೂ ಏನನ್ನಾದರೂ ಪೋಸ್ಟ್ ಮಾಡಬಹುದು ಎಂಬುದು ಎಷ್ಟು ಸತ್ಯವೋ, ಅದನ್ನು ಸಮಯ-ಸಂದರ್ಭ ಬಂದಾಗ ಫೇಸ್‌ಬುಕ್ ಅಳಿಸಿಹಾಕಬಹುದು ಎಂಬುದು ಕೂಡ ಅಷ್ಟೇ ನಿಜ.

ಇನ್ನೊಂದು ಬೆಳವಣಿಗೆಯಲ್ಲಿ, ಇತ್ತೀಚೆಗೆ ಫೇಸ್‌ಬುಕ್‌ನ ವಿನ್ಯಾಸವೂ ಬದಲಾಗುತ್ತಿದ್ದು, ಅದು ಗೋಜಲಾಗಿದೆ ಎಂಬ ದೂರುಗಳು ಸಾಕಷ್ಟು ಕೇಳಿಬರುತ್ತಿದೆ. ಬಹುಶಃ ಎಲ್ಲರೂ ಹೊಸತನದ ಈ ಹೊಸ ಸಮಸ್ಯೆಯನ್ನು ಗಮನಿಸಿದ್ದಿರಬಹುದು.

My Article Published in Prajavani on 04 Oct 2020 (Print 05th Oct).

LEAVE A REPLY

Please enter your comment!
Please enter your name here