ಕೊರೋನಾ ವೈರಸ್: ಯಕ್ಷಗಾನ ಹಾಡುಗಳ ಮೂಲಕ ಜನಜಾಗೃತಿ

0
501

ಬೆಂಗಳೂರು: ಕರಾವಳಿಯ ಜೀವನಾಡಿಯೇ ಆಗಿರುವ ಯಕ್ಷಗಾನ ಜನ ಜಾಗೃತಿಯಲ್ಲಿ ಎಂದಿಗೂ ಹಿಂದೆ ಬಿದ್ದಿಲ್ಲ. ಮಹಾಮಾರಿಯಂತಹಾ ಕಾಯಿಲೆಗಳು ಬಂದಾಗ ಅದರ ಬಗ್ಗೆ ಜನಜಾಗೃತಿ ಮೂಡಿಸುವ ಏಡ್ಸ್ ಅಸುರ ಸಂಹಾರದಂತಹಾ ಯಕ್ಷಗಾನ ಪ್ರಸಂಗಗಳನ್ನೇ ಪ್ರದರ್ಶಿಸಿ ಸೈ ಅನ್ನಿಸಿಕೊಂಡ ಯಕ್ಷಗಾನ ರಂಗವು ಈಗ ಜಾಗತಿಕವಾಗಿ ಆತಂಕ ಮೂಡಿಸಿರುವ ಕೊರೊನಾ ವೈರಸ್‌ಗೂ ಸ್ಪಂದಿಸಿದೆ.

ದಕ್ಷಿಣೋತ್ತರ ಕನ್ನಡ ಜಿಲ್ಲೆಗಳು ಮತ್ತು ಕಾಸರಗೋಡು, ಮಲೆನಾಡು ಪ್ರದೇಶಗಳಲ್ಲಿ ಮನರಂಜನೆಯೊಂದಿಗೆ ಮಾಹಿತಿಯನ್ನೂ, ಪೌರಾಣಿಕ ಅರಿವನ್ನೂ ಪ್ರಸಾರ ಮಾಡುತ್ತಿರುವ ಯಕ್ಷಗಾನ ಕ್ಷೇತ್ರದಲ್ಲಿ ದುಡಿಯುತ್ತಿರುವ ಕಲಾವಿದರಿಗೂ ಕೊರೋನಾ ವೈರಸ್ ಬಿಸಿ ತಟ್ಟಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪ್ರದರ್ಶನಗಳನ್ನು ಸ್ಥಗಿತಗೊಳಿಸುವ ಅನಿವಾರ್ಯತೆಗೆ ಸಿಲುಕಿದ ಹಂತದಲ್ಲಿ, ಇದನ್ನೇ ನೆಚ್ಚಿಕೊಂಡು ಬದುಕು ಸಾಗಿಸುತ್ತಿರುವ ಹಲವು ಕಲಾವಿದರು ಸಂಕಷ್ಟಕ್ಕೆ ಸಿಲುಕಿದ್ದಾರೆ.

Coronavirus Yakshaganaವರ್ಷದ ಆರು ತಿಂಗಳ ತಿರುಗಾಟದ ಸಂದರ್ಭದಲ್ಲಿ ರಾತ್ರಿಯಿಡೀ ಯಕ್ಷಗಾನ ನಡೆಸುವ ಡೇರೆ ಮೇಳಗಳು ಹಾಗೂ ಬಯಲಾಟ ಮೇಳಗಳ ಪ್ರದರ್ಶನವನ್ನು ತತ್ಕಾಲಕ್ಕೆ ತಡೆಹಿಡಿಯಲಾಗಿದೆ. ಕೊರೋನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರ ಕೈಗೊಂಡ ಕಟ್ಟುನಿಟ್ಟಿನ ಕ್ರಮದ ಭಾಗವಿದು. ನೂರಾರು, ಸಾವಿರಾರು ಜನರು ಸೇರುವ ಯಕ್ಷಗಾನ ಪ್ರದರ್ಶನಕ್ಕೂ ಈ ನೀತಿ ಸೂತ್ರಗಳು ಅನ್ವಯವಾಗುತ್ತಿವೆ.

ಯಕ್ಷಗಾನ ಪ್ರದರ್ಶನ ಎಲ್ಲೆಲ್ಲ ಆಗುತ್ತದೆಯೋ ಅಲ್ಲೆಲ್ಲ ಹೆಚ್ಚಿನ ಕಲಾವಿದರು ಸ್ವಯಂಪ್ರೇರಿತವಾಗಿ ಕೊರೊನಾ ವೈರಸ್ ಹರಡದಂತೆ ತಡೆಗೆ ಜಾಗೃತಿ ಮೂಡಿಸುತ್ತಿದ್ದಾರೆ. ಜಗತ್ತಿನ ಯಾವುದೇ ಪ್ರಮುಖ ಆಗುಹೋಗುಗಳನ್ನು ಸಾಂದರ್ಭಿಕವಾಗಿ ಯಕ್ಷಗಾನದಲ್ಲೂ ಎತ್ತಿ ತೋರಿಸುವ ಆಶು ಪ್ರತಿಭೆಯುಳ್ಳ ಕಲಾವಿದರು, ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಜವಾಬ್ದಾರಿಯನ್ನೂ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ.

ಸಾಲಿಗ್ರಾಮ ಮೇಳವು ಹೋದಲ್ಲೆಲ್ಲಾ ಹಿರಿಯ ಕಲಾವಿದರಾದ ಬಳ್ಕೂರು ಕೃಷ್ಣ ಯಾಜಿಯವರು ಸ್ವಚ್ಛತೆಯ ಬಗ್ಗೆ, ಈ ಮೂಲಕ ಕೊರೊನಾ ವೈರಸ್ ಸೋಂಕು ತಗುಲದಂತೆ ಮುನ್ನೆಚ್ಚರಿಕೆ ವಹಿಸುವ ಬಗ್ಗೆ ವೇದಿಕೆಯಲ್ಲೇ ಜಾಗೃತಿ ಮೂಡಿಸುವ ಮಾತುಗಳನ್ನು ಆಡುತ್ತಿರುವ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದರ ನಡುವೆಯೇ, ಯಕ್ಷಗಾನ ಅಕಾಡೆಮಿ ಅಧ್ಯಕ್ಷರೂ, ಸ್ವತಃ ಪ್ರಸಂಗಕರ್ತರು ಮತ್ತು ಕಲಾವಿದರೂ ಆಗಿರುವ ಎಂ.ಎ.ಹೆಗಡೆ ಅವರೂ ಯಕ್ಷಗಾನದ ಮೂಲಕವೇ ಜನರಲ್ಲಿ ವೈರಸ್ ಹರಡದಂತೆ ಮತ್ತು ಸ್ವಚ್ಛತೆಯ ಕುರಿತು ಅಕಾಡೆಮಿ ಮೂಲಕವೂ ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ಕೈಹಚ್ಚಿದ್ದಾರೆ. ತಾವೇ ಸ್ವತಃ ಯಕ್ಷಗಾನದ ಹಾಡನ್ನೂ ರಚಿಸಿರುವ ಅವರು, ಮತ್ತೊಬ್ಬ ಕವಿ, ಪ್ರಸಂಗಕರ್ತ ಶ್ರೀಧರ್ ಡಿ.ಎಸ್. ಅವರ ಮೂಲಕವೂ ಹಾಡು ಬರೆಸಿ, ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ.

ಯಕ್ಷಗಾನ ಕವಿಗಳ ಈ ಪ್ರಯತ್ನವು ಯಕ್ಷಗಾನ ಭಾಗವತರ ಮಧುರ ಕಂಠದ ಮೂಲಕ ಪ್ರೇಕ್ಷಕರಿಗೆ, ಸಾಮಾಜಿಕ ಜಾಲತಾಣ ಬಳಕೆದಾರರಿಗೆ ತಲುಪಲೆಂಬ ಸದಾಶಯ ಅವರದು.

ಈ ಹಾಡುಗಳು ಯಕ್ಷಗಾನದ ರಾಗ, ತಾಳಗಳಿಗೆ ಅನುಸಾರವಾಗಿದ್ದು, ಯಕ್ಷಗಾನ ಅಭಿಮಾನಿಗಳು, ಕಲಾವಿದರಿಂದ ಶ್ಲಾಘನೆ ವ್ಯಕ್ತವಾಗಿದೆ.

ಶ್ರೀಧರ್ ಡಿ.ಎಸ್. ಬರೆದಿರುವ ಪದದಲ್ಲಿ, ಜಾಗರೂಕರಾಗಿರಿ, ಗುಂಪು ಸೇರಬೇಡಿ, ಸಮೂಹ ವಿಭವಕ್ಕೆ ಕಾರಣವಾಗಬೇಡಿ, ವೈದ್ಯರನ್ನು ಕಾಣಿ ಎಂಬ ಸಂದೇಶವಿರುವ ಹಾಡು ಹೀಗಿದೆ:

ಶಂಕರಾಭರಣ ರೂಪಕ
ಜಾಗರೂಕರಾಗಿರೈ ಕೊರೋನ ರೋಗಕೆ|
ತಾಗಿ ವೃದ್ಧಿಯಾಗದಂತೆ ನಿಮ್ಮ ದೇಹಕೆ||
ನಾಗರಿಕರೆ ನೆರೆಯದಿರಿ ಸಮೂಹ ವಿಭವಕೆ|
ಬೇಗ ವೈದ್ಯರನ್ನು ಕಾಣಿರೈ ನಿರೋಧಕೆ||

ಸ್ವಚ್ಛತೆ ಮತ್ತು ಎಚ್ಚರಿಕೆ ಇರಲಿ, ಬೆಚ್ಚಬೇಡಿರಿ ಎಂಬ ಸಂದೇಶವುಳ್ಳ ಪದ್ಯ ಹೀಗಿದೆ:

ಕೇದಾರಗೌಳ ಅಷ್ಟ
ಎಚ್ಚರವಿರಬೇಕು ಹುಚ್ಚು ಕೊರೋನಕೆ|
ಬೆಚ್ಚುವುದುಚಿತವಲ್ಲ||
ಮುಚ್ಚಿಡಬೇಡಿರಿ ನೆಚ್ಚಿರಿ ವೈದ್ಯರ|
ಸ್ವಚ್ಛತೆಯತಿಮುಖ್ಯವು||

ಎಂ.ಎ.ಹೆಗಡೆ ಅವರು ಸ್ವತಃ ಬರೆದಿರುವ ಯಕ್ಷಗಾನ ಪದ್ಯದಲ್ಲಿ, ಭೀತಿ ಬಿಡಿ, ಕೆಮ್ಮುವವರಿಂದ ದೂರವಿರಿ, ಹಸ್ತಲಾಘವ ಬದಲು ಕೈಮುಗಿಯಿರಿ, ಕೈಗಳನ್ನು ತೊಳೆಯಿರಿ, ಇಲ್ಲದಿದ್ದರೆ ನಮ್ಮನ್ನು ನಂಬಿದವರ ಕಂಬನಿಗೆ ಕಾರಣವಾಗಬಹುದೆಂಬ ಸಂದೇಶವಿದೆ.

ಕಾಂಬೋಧಿ ಅಷ್ಟ
ಭೀತಿಯ ತೊರೆದೆಲ್ಲರು| ಕೊರೋನದ
ರೀತಿಯ ಬಲ್ಲವರು||
ಘಾತುಕ ರೋಗದಾಘಾತವ ತಡೆಯಲು|
ಸಾತಿಶಯದ ಕ್ರಮವ್ರಾತವ ತಿಳಿವುದು||

ಹತ್ತಿರ ಸುಳಿಯದಿರಿ| ಕೆಮ್ಮುವ ಜನ|
ರೊತ್ತಿಗೆ ಸೊಕ್ಕಿನಲಿ||
ಹಸ್ತಲಾಘವ ಬೇಡ ಹಸ್ತವ ಜೋಡಿಸಿ
ಉತ್ಸವ ಜಾತ್ರೆ ಸಮಸ್ತವ| ತೊರೆಯಿರಿ

ಉಂಬಾಗ ತಿಂಬಾಗಲು|
ಕೈಗಳನೆಲ್ಲ ತಂಬಾಗಿ ತೊಳೆಯುವುದು||
ಹುಂಬನಡತೆಯಿಂದ ನಂಬಿದ ಜನಗಳು |
ಕಂಬನಿಗರೆಯುವರೆಂಬುದ ನೆನೆಯಿರಿ||

ಈ ಪದ್ಯಗಳು ಇನ್ನಷ್ಟು ಕವಿಗಳಿಗೆ ಪ್ರೇರಕವಾಗಲಿ ಎಂದು ಹಾರೈಸಿರುವ ಯಕ್ಷಗಾನ ಅಕಾಡೆಮಿ ಅಧ್ಯಕ್ಷರು, ಭಾಗವತರು ಇವುಗಳನ್ನು ಹಾಡಿ, ಜನರ ಕಿವಿಗಳಿಗೆ ತಲುಪಿಸುವ ಮೂಲಕ, ಜಾಗೃತಿ ಮೂಡಿಸೋಣ ಎಂದು ವಿನಂತಿ ಮಾಡಿಕೊಂಡಿದ್ದಾರೆ.

ಅವಿನಾಶ್ ಬಿ. (18 ಮಾರ್ಚ್ 2020ರಂದು ಪ್ರಜಾವಾಣಿಯಲ್ಲಿ ಪ್ರಕಟ)

LEAVE A REPLY

Please enter your comment!
Please enter your name here