ಅಯೋಧ್ಯೆ ಸನ್ನಾಹ: ಎಡವಿದ ಸರಕಾರ, ಮಾಧ್ಯಮಗಳು

4
426

ಅಯೋಧ್ಯೆ ತೀರ್ಪು ಕೇವಲ ಹಿಂದೂ ಅಥವಾ ಮುಸ್ಲಿಮರಿಗೆ ಸಂಬಂಧಿಸಿದ್ದಲ್ಲ, ಇದು ಈ ನೆಲದ ಕಾನೂನಿನ ಮೇಲ್ಮೆಯನ್ನು ಮತ್ತು ನ್ಯಾಯಾಂಗದ ಸ್ವಾತಂತ್ರ್ಯವನ್ನು, ದೇಶದ ಜಾತ್ಯತೀತತೆಯನ್ನು ಎತ್ತಿ ಹಿಡಿಯುವ ತೀರ್ಪಾಗಿರುತ್ತದೆ ಎಂಬುದು, ಶತಮಾನಗಳಲ್ಲೇ ಅತ್ಯಂತ ಹೆಚ್ಚು ಕುತೂಹಲ ಕೆರಳಿಸಿದ್ದ ಪ್ರಕರಣದ ತೀರ್ಪು ಹೊರಬೀಳುವ ಕೆಲವೇ ಕ್ಷಣಗಳ ಮುನ್ನ ಅಯೋಧ್ಯೆಯ ಬಾಬರಿ ಮಸೀದಿ ಕ್ರಿಯಾ ಸಮಿತಿ ಸಂಚಾಲಕ ಝಫರ್ಯಾಬ್ ಜಿಲಾನಿ ನೀಡಿದ್ದ ಹೇಳಿಕೆ. ಇಂಥದ್ದೊಂದು ಮನಸ್ಥಿತಿ ಅವರಲ್ಲೇ ಇದ್ದಿರುವಾಗ…

ಒಂದು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಆಳುವ ಸರಕಾರ ಮತ್ತು ಅದರಿಂದ ಪ್ರೇರಣೆ ಪಡೆದ ದೃಶ್ಯ ಮಾಧ್ಯಮಗಳು ಎಷ್ಟರ ಮಟ್ಟಿಗೆ ಜನಸಾಮಾನ್ಯನ ಮನಸ್ಥಿತಿ ಮೇಲೆ ಪರಿಣಾಮ ಬೀರಬಲ್ಲವು ಎಂಬುದಕ್ಕೆ ಸಾಕ್ಷಿಯಾಗಿಬಿಟ್ಟಿತು ಈ ಅಯೋಧ್ಯೆ ಜಮೀನು ಒಡೆತನದ ತೀರ್ಪಿನ ಮುನ್ನ ದೇಶದಲ್ಲಿ ಎದ್ದಿದ್ದ ಭಾವನೆಗಳ ಅಲೆ.

“ದಯವಿಟ್ಟು ಜನತೆ ಶಾಂತಿ ಕಾಪಾಡಿ, ಶಾಂತರಾಗಿ, ಹಿಂದೂಗಳು-ಮುಸ್ಲಿಮರು ಬಾಂಧವರು, ಕೋರ್ಟ್ ತೀರ್ಪನ್ನು ಗೌರವಿಸಿ” ಎಂಬ ಘೋಷಣೆಗಳನ್ನು ಹೊರಡಿಸುತ್ತಾ, ಕೇರಿ ಕೇರಿಗಳಲ್ಲಿ ಗರಿಷ್ಠ ಕಟ್ಟೆಚ್ಚರ ವಹಿಸಲಾಗಿದೆ, ಭದ್ರತಾ ಕ್ರಮಗಳನ್ನು ಏರ್ಪಡಿಸಲಾಗಿದೆ, ಸೂಕ್ಷ್ಮ ಪ್ರದೇಶದಲ್ಲಿ ಭಾರೀ ಪ್ರಮಾಣದ ತುಕಡಿಗಳನ್ನು ನಿಯೋಜಿಸಲಾಗಿದೆ ಎಂಬ ಹೇಳಿಕೆಗಳೂ ಜನ ಸಾಮಾನ್ಯನ ತುಡಿತದ, ಉದ್ವಿಗ್ನತೆಯ, ಕುತೂಹಲದ ಬೆಂಕಿಗೆ ತುಪ್ಪ ಸುರಿದಿದ್ದರೆ, ಮಾಧ್ಯಮಗಳು ಈ ತುಪ್ಪವನ್ನೇ ಪೆಟ್ರೋಲ್ ಆಗಿ ಬದಲಾಯಿಸಿವೆ ಎಂಬುದಂತೂ ಸುಳ್ಳಲ್ಲ.

ಹಾಗಿದ್ದರೆ, ಸರಕಾರವೇ ಈ ರೀತಿಯ ಒಂದು ಹೈಪ್ ಕ್ರಿಯೇಟ್ ಮಾಡುವ ಮೂಲಕ, ನ್ಯಾಯಾಲಯದ ತೀರ್ಪು ಕೂಡ ತಪ್ಪಾಗಿರಲು ಸಾಧ್ಯ ಎಂಬ ಸಂದೇಶ ನೀಡಿತೇ? ಅಥವಾ ನಮ್ಮ ನ್ಯಾಯ ವ್ಯವಸ್ಥೆಯ ಮೇಲೆ ಸರಕಾರಕ್ಕೇ ವಿಶ್ವಾಸವಿರಲಿಲ್ಲವೇ? ಇಲ್ಲವಾದಲ್ಲಿ, ನ್ಯಾಯಾಲಯವು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತೀರ್ಪು ನೀಡುತ್ತದೆ ಎಂದಾದಾಗ ಇಡೀ ದೇಶಕ್ಕೆ ದೇಶವೇ ಹೊತ್ತಿ ಉರಿಯಲಿದೆ ಎಂಬ ಭಾವನೆಯನ್ನು ಜನರ ಮನಸ್ಸಿನಲ್ಲಿ ಉಂಟುಮಾಡುವಂತಹಾ ಘೋಷಣೆಗಳನ್ನು ಹೊರಡಿಸಬೇಕಿತ್ತೇಕೆ? ಹಾಗೇನಾದರೂ ಗಲಭೆ ಉಂಟಾಗುತ್ತದೆ ಎಂಬ ಭೀತಿಯಿದ್ದರೆ ಸದ್ದಿಲ್ಲದೆ ಸರ್ವ ರೀತಿಯಲ್ಲಿಯೂ ಸನ್ನದ್ಧವಾಗುವುದು ಬಿಟ್ಟು, ಟಾಂ ಟಾಂ ಮಾಡಿ ಜನಮಾನಸದಲ್ಲೇಕೆ ಆತಂಕದ ಅಲೆಗಳನ್ನು ಸೃಷ್ಟಿಸಬೇಕು?

ಲಕ್ಷಾಂತರ ಜನರ ಧಾರ್ಮಿಕ ಭಾವನೆಗಳೆಂಬ ಸುಪ್ತ ಕೆಂಡಕ್ಕೆ ರಾಜಕೀಯದ ಹಳಸಲು ಇಂಧನ ಸೇರಿದರೆ ಆಗೋದು ಹೀಗೆಯೇ. ಯಾಕೆಂದರೆ, ಭಾರತದ ನ್ಯಾಯಾಲಯವೊಂದು ಶತಮಾನಗಳ ವಿವಾದಕ್ಕೆ ಕಾರಣವಾಗಿದ್ದ ಜಮೀನು ಯಾರಿಗೆ ಸೇರಿದ್ದು ಎಂಬ ಕುರಿತು ತೀರ್ಪು ನೀಡುತ್ತದೆ ಎಂದಾದಾಗ ಯಾಕಿಷ್ಟು ಉದ್ವೇಗ, ಉದ್ವಿಗ್ನತೆ? ಇದರ ಹಿಂದೆ ಹಿಂದೂ-ಮುಸ್ಲಿಮರ ನಡುವೆ ಈಗಾಗಲೇ ಓಟ್ ಬ್ಯಾಂಕ್ ರಾಜಕೀಯದ ಕಾರಣದಿಂದ ಸೃಷ್ಟಿಯಾಗಿರುವ ಕಂದಕವನ್ನು ಮತ್ತಷ್ಟು ಅಂತರಗೊಳಿಸುವ, ಮತಗಳ ಕ್ರೋಡೀಕರಣವನ್ನು ಒಂದೆಡೆಗೆ ವಾಲಿಸುವ ಹುನ್ನಾರ ಇದೆ. ಪರಿಣಾಮವೇನು? ಹಿಂಸಾಚಾರ ಮತ್ತು ಪರಸ್ಪರರ ನಡುವೆ ಅಪನಂಬಿಕೆ! ನಾವು ನಮ್ಮ ಪಕ್ಕದಲ್ಲೇ ವಾಸಿಸುತ್ತಿರುವವರನ್ನು ನಂಬದಂತಹಾ ಪರಿಸ್ಥಿತಿ!

ಅಣ್ಣ ತಮ್ಮಂದಿರಂತೆ ಬಾಳಬೇಕಾಗಿರುವ ಉಭಯ ಕೋಮುಗಳ ಬಾಂಧವರ ಮನಸ್ಥಿತಿ ಈ ತೀರ್ಪು ಪ್ರಕಟವಾಗುವ ಹಿಂದಿನ ಕ್ಷಣಗಳಲ್ಲಿ ಇಷ್ಟೊಂದು ಕದಡಿ ಹೋಗುವುದಕ್ಕೆ ಸರಕಾರದ ಮತ್ತು ಮಾಧ್ಯಮಗಳ ಹಾಹಾಕಾರದ್ದೂ ಪಾತ್ರವಿದೆ ಎಂಬುದು ತಥ್ಯ.

ಇಷ್ಟಾದರೂ, ಉತ್ತರ ಪ್ರದೇಶ ಹೈಕೋರ್ಟ್‌ನ ಅಲಹಾಬಾದ್ ಪೀಠವು ತೀರ್ಪು ನೀಡಿದಾಕ್ಷಣ ನ್ಯಾಯಾಂಗ ಪ್ರಕ್ರಿಯೆ ಪೂರ್ಣಗೊಂಡಂತಾಗುವುದಿಲ್ಲ ಅಥವಾ ಪ್ರಕರಣ ಇತ್ಯರ್ಥವೂ ಆದಂತಾಗುವುದಿಲ್ಲ. ತೀರ್ಪಿನಿಂದ ಬಾಧೆಗೀಡಾದ ಕಕ್ಷಿದಾರರು ಮೇಲಿನ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸುವ ಅವಕಾಶವಿದೆ. ಇದರ ವಿಚಾರಣೆಗೆ ಮತ್ತಷ್ಟು ಸಮಯ ಹಿಡಿಯುತ್ತದೆ ಎಂಬುದು ಸುಳ್ಳಲ್ಲ. ಅದರ ನಡುವೆಯೇ, ಉಭಯ ಮತೀಯರೂ, ಇಷ್ಟು ವರ್ಷಗಳಿಂದ ಎಳೆದದ್ದನ್ನೇ ಎಳೆದು ಮತ್ತಷ್ಟು ಅಶಾಂತಿ ಹೆಚ್ಚಾಗುವ ಬದಲಾಗಿ, ಮಾನವೀಯ ನೆಲೆಯಲ್ಲಿ ಕೋರ್ಟಿನ ತೀರ್ಪಿನ ಪರಿಧಿಯಲ್ಲಿ ನ್ಯಾಯಾಲಯದ ಹೊರಗೆ ಮಾತುಕತೆ ನಡೆಸಿ ವಿವಾದ ಇತ್ಯರ್ಥಗೊಳಿಸುವ ಅವಕಾಶಗಳೂ ಇವೆ.

ಇಷ್ಟಕ್ಕೂ, ಅಯೋಧ್ಯೆಯ ವಿಷಯವೊಂದು ರಾಷ್ಟ್ರೀಯ ವಿವಾದವಾಗಿ ಪರಿವರ್ತಿತವಾಗಿದ್ದೇಕೆ? ಉಭಯ ಸಮಾಜದ ಮುಖಂಡರು ಕುಳಿತುಕೊಂಡು ಪರಿಹಾರ ಕಂಡುಹುಡುಕಬಹುದಾಗಿದ್ದ ವಿಚಾರವೊಂದು ಕೋರ್ಟಿನ ಮೆಟ್ಟಿಲು ಹೋಗಿದ್ದೇಕೆ? ಮತ್ತು ಈಗ ಕೋರ್ಟು ತೀರ್ಪು ನೀಡುತ್ತದೆಯೆಂದಾದಾಗ ಇಷ್ಟೊಂದು ಕದನ ಕುತೂಹಲ ಯಾಕೆ ಹುಟ್ಟಿತು? ಜನ ಸಾಮಾನ್ಯರ ಮನದ ಮೂಲೆ ಮೂಲೆಯಲ್ಲಿ ಅದೇನೋ ಆತಂಕದ ಎಳೆ ಸುಳಿಯುತ್ತಿದ್ದುದೇಕೆ? ಎಂದೆಲ್ಲಾ ಪ್ರಶ್ನಿಸುತ್ತಾ ಹೋದರೆ, ಮೊತ್ತ ಮೊದಲು ಉತ್ತರ ಸಿಗುವುದು ರಾಜಕೀಯ, ಆಮೇಲಿನ ಹೆಸರು ಕೇಳಿಬರುವುದು ಮಾಧ್ಯಮ.

ತಾವು ಜನ ನಾಯಕರು, ಜನರು ತಮ್ಮನ್ನು ನೋಡಿ ಕಲಿಯಬೇಕು ಎಂಬಂತಹಾ ಅತ್ಯಮೂಲ್ಯ ಜವಾಬ್ದಾರಿಯುಳ್ಳ ರಾಜಕಾರಣಿಗಳಿಗೆ ಮತ ಪಡೆಯುವುದೊಂದೇ ಉದ್ದೇಶವಾಗಿಬಿಟ್ಟಿದೆಯಾದರೆ, ಮಾಧ್ಯಮಗಳಿಗೆ? ಅವುಗಳೂ ದಿಕ್ಕು ತಪ್ಪುತ್ತಿವೆಯೇ? ಬ್ರೇಕಿಂಗ್ ನ್ಯೂಸ್ ಧಾವಂತ… ಮತ್ತು ಆ ಚಾನೆಲ್‌ನವರು ಮಾಡ್ತಾರೆ, ನಾವು ಅವರಿಗಿಂತ “ಹೆಚ್ಚು” ಚೆನ್ನಾಗಿ ಅದನ್ನೇ ಕವರ್ ಮಾಡಬೇಕು ಎಂಬ ಪೈಪೋಟಿಯಿಂದ ಸಾಮಾಜಿಕ ಸಾಮರಸ್ಯ ಹಾಳಾಗುತ್ತಿದೆ ಎಂಬ ಕೂಗಿಗೆ ಅರ್ಥವಿಲ್ಲವೇ?

ದೇಶದ ಹೆಮ್ಮೆಯ ಸಾರೇ ಜಹಾಂ ಸೇ ಅಚ್ಛಾ, ಹಿಂದೂಸ್ತಾನ್ ಹಮಾರಾ ಎಂಬ ಹಾಡು ಬರೆದ ಖ್ಯಾತ ಮುಸಲ್ಮಾನ ಕವಿ ಅಲ್ಲಮ ಇಕ್ಬಾಲ್ ಅವರೇ ಶ್ರೀರಾಮನನ್ನು ‘ಇಮಾಮ್-ಇ-ಹಿಂದ್’ ಅಂತ ವರ್ಣಿಸಿದ್ದಾರೆ. ಇಂತಹಾ ಕೋಮು ಸೌಹಾರ್ದತೆಗೆ ಹೆಸರಾದ ಭಾರತೀಯರ ನಡುವೆ ದ್ವೇಷ ಕಿಡಿ ಹಚ್ಚಿ, ಗಾಳಿ ಊದುವುದು ಸರ್ವಥಾ ಸರಿಯಲ್ಲ.

ಅದೆಲ್ಲಾ ಒತ್ತಟ್ಟಿಗಿಟ್ಟು, ತೀರ್ಪು ಪ್ರಕಟವಾದ ಬಳಿಕದ ವಿದ್ಯಮಾನಗಳನ್ನು ಗಮನಿಸಿ ನೋಡಿ. ಹಿಂದೂ-ಮುಸ್ಲಿಂ ಬಾಂಧವರು ಹೊಡೆದಾಡಿದ್ದಾರೆಯೇ? ಇಲ್ಲವೇ ಇಲ್ಲ ಎಂಬಷ್ಟರ ಮಟ್ಟಿಗೆ ಅವರು ಸೌಹಾರ್ದತೆ ಕಾಯ್ದುಕೊಂಡು ಬಂದಿದ್ದಾರೆ. ಈ ತೀರ್ಪಿನಿಂದಾಗಿ ದೃಶ್ಯ ಮಾಧ್ಯಮಗಳ ವಿಘ್ನಸಂತೋಷದ ಪ್ರಯತ್ನಕ್ಕೂ ಆಸ್ಪದವಾಗಲಿಲ್ಲ.

ಕಳೆದೆರಡು ದಶಕಗಳಿಂದ ಪರಸ್ಪರರ ಅಪನಂಬಿಕೆಗೆ ಕಾರಣವಾಗಿದ್ದ, ಕಚ್ಚಾಟ, ಕೋಮು ಸಂಘರ್ಷ, ಹಿಂಸಾಚಾರ ಮತ್ತು ಭಯೋತ್ಪಾದನೆ ವರ್ಧನೆಗೂ ಹೇತುವಾಗಿದೆ ಎಂದು ವಿಶ್ಲೇಷಿಸಲಾಗುತ್ತಿರುವ ಅಯೋಧ್ಯೆ ವಿವಾದದ ಬೆಂಕಿ ಶಮನವಾಗುವ ಲಕ್ಷಣಗಳೂ ಬಲವಾಗಿಯೇ ಗೋಚರಿಸುತ್ತಿದೆ. ಹೀಗಾದರೆ ಹಿಂದೂ-ಮುಸಲ್ಮಾನರು ಸಹೋದರತೆಯಿಂದ ನೆಮ್ಮದಿಯಿಂದ ಬದುಕಬಹುದು, ರಾಜಕಾರಣಿಗಳು ಈ ವಿಷಯದಲ್ಲಿ ಮೂಗು ತೂರಿಸದೇ ಬಿಟ್ಟುಬಿಟ್ಟರೆ!

ದ್ವೇಷ ಮರೆಯಲಿ, ಸಾಮರಸ್ಯ ಮೆರೆಯಲಿ!
[ವೆಬ್ ದುನಿಯಾಕ್ಕೆ ಬರೆದದ್ದು]

4 COMMENTS

  1. ಸರ್ಕಾರ ಹೈಪ್ ಕೊಟ್ಟಿತು ಎನ್ನುವ ನೀವು ಲೇಖನ ಬರೆದು ಹೈಪ್ ಕೊಡುತ್ತಿರುವುದ್ಯಾಕೆ? ಆಭಾಸ ಅನ್ನಿಸಲ್ವಾ ಇದು!

    • ಖಂಡಿತಾ ಇಲ್ಲ ಅಜಯ್. ಈಗಾಗಲೇ ತಣ್ಣಗಾಗಿರುವ ಜನರ ಮನಸ್ಸನ್ನು ಮತ್ತೆ ಕೆದಕಿ, ಕೆರಳಿಸಬೇಕೇಕೆ?

  2. Yes this is true. Media was acting stupidly.
    When nothing happened, instead of praising the country men for it,
    they were engaged in thoughts like ‘ on what basis is the judgement given’?
    ‘Can faith be the basis of judgement?’ and many more questions like this.
    Kannada media was at least sensible enough to concentrate on other news but most of the English media as always was biased and sounding stupid.

  3. ಹೌದು ಸ್ವರ್ಣ ಅವರೆ, ಇಂಗ್ಲಿಷ್ ಮಾಧ್ಯಮಗಳ ಶೀರ್ಷಿಕೆಗಳನ್ನೇ ಗಮನಿಸಿದ್ದೀರಾ? ಎರಡು ಪಾಲು ಹಿಂದುಗಳಿಗೆ, ಒಂದು ಪಾಲು ಮುಸ್ಲಿಮರಿಗೆ ಎಂಬರ್ಥದ ಶೀರ್ಷಿಕೆಗಳು. ಜನರನ್ನು ಒಡೆಯಲು ಇದಕ್ಕಿಂತ ಬೇರೆ ವಿಷಯ ಬೇಕೇ?

Leave a Reply to Avinash Cancel reply

Please enter your comment!
Please enter your name here