Apple Watch Series 6 Review: ಮೊಣಕೈಯಲ್ಲಿ ಆರೋಗ್ಯ, ಫಿಟ್ನೆಸ್

0
544

ಕೋವಿಡ್-19 ಕಾಲದಲ್ಲಿ ಜನರು ಆರೋಗ್ಯದತ್ತ ಕೊಟ್ಟಷ್ಟು ಗಮನ ಬಹುಶಃ ಬೇರೆ ಸಮಯದಲ್ಲಿ ಎಂದಿಗೂ ನೀಡಿರಲಾರರು. ನಮ್ಮ ದೇಹದ ರೋಗಪ್ರತಿರೋಧಕತೆ ಹೆಚ್ಚಿಸಿಕೊಳ್ಳುವುದು, ಕೈಗಳ ಸ್ವಚ್ಛತೆಯ ಮೇಲೆ ಗಮನ ಹರಿಸುವುದು, ವರ್ಕ್ ಫ್ರಂ ಹೋಂ ವೇಳೆ ಹೆಚ್ಚು ಸಮಯ ಕುಳಿತಲ್ಲೇ ಕುಳಿತಿರುವುದನ್ನು ತಪ್ಪಿಸುವುದು, ಧ್ಯಾನ, ಯೋಗ, ನಿದ್ರೆ – ಇವುಗಳೆಲ್ಲವೂ ಉತ್ತಮ ಆರೋಗ್ಯಕ್ಕೆ ಪೂರಕ. ಜೊತೆಗೆ ರಕ್ತದಲ್ಲಿನ ಆಮ್ಲಜನಕ ವ್ಯತ್ಯಯವಾಗದಂತೆ ನೋಡಿಕೊಳ್ಳುವುದು, ಹೃದಯ ಬಡಿತದ ಮೇಲೆ ನಿಗಾ ಇರಿಸುವುದು ಕೂಡ ಕೋವಿಡ್ ಕಾಲದಲ್ಲಿ ಅತ್ಯಂತ ಅನಿವಾರ್ಯ.

ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಂಡಿದೆ ಆ್ಯಪಲ್‌ನ ಹೊಸ 6ನೇ ಸರಣಿಯ ಸ್ಮಾರ್ಟ್ ವಾಚ್. ವಿಮರ್ಶೆಗೆ ಬಂದಿರುವ ಈ ಆ್ಯಪಲ್ ವಾಚ್ ಹೇಗಿದೆ, ಹೇಗೆಲ್ಲಾ ಬಳಸಬಹುದು – ಇಲ್ಲಿದೆ ಮಾಹಿತಿ.

ವಿನ್ಯಾಸ
ನೋಡಲು ಸಾಮಾನ್ಯ ವಾಚ್‌ನಂತೆ, ಆದರೆ ಥಟ್ಟನೇ ಗಮನ ಸೆಳೆಯುವಂತಿದೆ. ವಿಮರ್ಶೆಗೆ ಬಂದಿರುವ 44ಮಿಮೀ ಮಾಡೆಲ್ 10.4 ಮಿಮೀ ದಪ್ಪವಿದ್ದು, 44 ಮಿಮೀ ಎತ್ತರ, 34 ಮಿಮೀ ಅಗಲ ಹಾಗೂ 47.1 ಗ್ರಾಂ ತೂಕವಿದೆ. ಚೌಕಾಕಾರದಲ್ಲಿದ್ದು, ಹಿಂಭಾಗದಲ್ಲಿ ಕಪ್ಪು ಸಿರಾಮಿಕ್ ಮತ್ತು ಸ್ಫಟಿಕದಂತಹಾ ಕಪ್ಪನೆಯ ಕವಚವಿದ್ದು, ಅದರಲ್ಲಿ ಹೃದಯ ಬಡಿತ, ರಕ್ತದ ಆಮ್ಲಜನಕ ಹಾಗೂ ಇಸಿಜಿ ಅಳೆಯುವ ಸೆನ್ಸರ್‌ಗಳಿವೆ. ಇದಕ್ಕೆ ಪೂರಕವಾಗಿ ಬೆಳಕಿನ ಮೂಲಕ ಈ ಆರೋಗ್ಯ ಸಂಬಂಧಿತ ಅಳತೆ ಪಡೆದುಕೊಳ್ಳಲು ನಾಲ್ಕು ಎಲ್‌ಇಡಿ ದೀಪಗಳ ಗುಚ್ಛಗಳು ಹಾಗೂ ನಾಲ್ಕು ಫೋಟೊ-ಡಯೋಡ್‌ಗಳಿವೆ. ನ್ಯಾವಿಗೇಶನ್ ಸುಲಭವಾಗಿಸಲು ದೊಡ್ಡದಾದ ಕ್ರೌನ್ ಇರುವ ಬಟನ್ ಇದೆ. ಇದನ್ನು ತಿರುಗಿಸಿದರೆ ವಾಚ್‌ನ ಸ್ಕ್ರೀನ್‌ನಲ್ಲಿ ಮೇಲೆ, ಕೆಳಗೆ, ಹಿಂದೆ-ಮುಂದೆ ಸ್ಕ್ರಾಲ್ ಮಾಡುವುದು ಸುಲಭ.

ಆ್ಯಪಲ್ ಸೀರೀಸ್ 6 ಸರಣಿಯಲ್ಲಿ OLED ರೆಟಿನಾ ಸ್ಕ್ರೀನ್ ಇದ್ದು, ಸದಾ ಕಾಲ ಆನ್ ಇರುವಾಗಲೂ, ಕಡಿಮೆ ಬ್ಯಾಟರಿ ಬಳಸಿಕೊಳ್ಳುವ ತಂತ್ರಜ್ಞಾನವಿದೆ. ಡಿಸ್‌ಪ್ಲೇ ಮೇಲೆ ನಮಗೆ ಬೇಕಾದ ಆ್ಯಪ್‌ಗಳ ಶಾರ್ಟ್‌ಕಟ್‌ಗಳನ್ನು ಅಳವಡಿಸಿಕೊಳ್ಳಬಹುದು, ನಮಗಿಷ್ಟವಾದ ಹಲವಾರು ವಾಚ್-ಫೇಸ್‌ಗಳನ್ನು (ಡಯಲ್ ವಿನ್ಯಾಸ) ಬದಲಾಯಿಸಿಕೊಳ್ಳಬಹುದು. LTE ಸಂಪರ್ಕವನ್ನು ಬೆಂಬಲಿಸುತ್ತಿದ್ದು, ಈ ವೈಶಿಷ್ಟ್ಯ ಇಲ್ಲದಿರುವ ವಾಚ್ ಮಾಡೆಲ್ ಕೂಡ ಇದೆ.

ಕೈ ಕೆಳಗಿರುವಾಗ ಡಿಸ್‌ಪ್ಲೇಯಲ್ಲಿ ಬೆಳಕು ಕಡಿಮೆ ಇರುತ್ತದೆ, ಗಂಟೆ ನೋಡಲು ಎತ್ತಿದ ತಕ್ಷಣ ಬೆಳಕು ಪ್ರಖರವಾಗುತ್ತದೆ. ಇದೊಂದು ಪುಟ್ಟ ಫೋನ್‌ನಂತಿದ್ದು, ಕೆಳಗಿಂದ ಮೇಲಕ್ಕೆ ಸ್ವೈಪ್ ಮಾಡಿದರೆ ಕಂಟ್ರೋಲ್ ಸೆಂಟರ್ ಹಾಗೂ ಮೇಲಿನಿಂದ ಕೆಳಗೆ ಸ್ವೈಪ್ ಮಾಡಿದಲ್ಲಿ ನೋಟಿಫಿಕೇಶನ್‌ಗಳನ್ನು ನೋಡಬಹುದು.

ಮೊಣಕೈಯಲ್ಲಿ ಆರೋಗ್ಯ
ವಾಚನ್ನು ಆ್ಯಪಲ್ ಕಂಪನಿಯು ತೀರಾ ವೈಯಕ್ತಿಕ ಮಟ್ಟಕ್ಕೆ ತಂದು ಆಪ್ತವಾಗಿಸಿದೆ. ಈ ವಾಚ್ ಕಟ್ಟಿಕೊಂಡಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಇರುವವರಿಗಂತೂ ತುಂಬಾ ಅನುಕೂಲ, ಸದಾ ಕಾಲ ಚಟುವಟಿಕೆಯಿಂದಿರಲು ಪ್ರೇರೇಪಿಸುತ್ತದೆ ಎಂಬುದು ಒಂದು ವಾರ ಇದನ್ನು ಬಳಸಿದಾಗ ಅನುಭವಕ್ಕೆ ಬಂದ ವಿಚಾರ.

ಕೋವಿಡ್ ಕಾಲದಲ್ಲಂತೂ ರಕ್ತದಲ್ಲಿನ ಆಮ್ಲಜನಕ ಮಟ್ಟ, ಪದೇ ಪದೇ ಕೈತೊಳೆಯುವುದು ತುಂಬಾ ಮುಖ್ಯವಾದುದು. ಈ ಕಾರಣಕ್ಕೆ ವಾಚ್ ನಮಗೆ ಇವುಗಳ ಮೇಲೆ ಗಮನ ಹರಿಸಲು ಪ್ರೇರೇಪಿಸುತ್ತಾ ಇರುತ್ತದೆ. ಒಂದು ಗಂಟೆಗಿಂತ ಹೆಚ್ಚು ಕಾಲ ಕುಳಿತಲ್ಲೇ ಇದ್ದರೆ, ಒಂದಿಷ್ಟು ನಿಂತು, ಚೆನ್ನಾಗಿ ಉಸಿರಾಡಿ ಅಂತೆಲ್ಲ ಅದು ನೆನಪಿಸುತ್ತದೆ. ಕೈ ತೊಳೆಯಲು ಹೊರಟರೆ ಅದರ ಸೆನ್ಸರ್‌ಗಳು ಕೈತೊಳೆಯುವ ಪ್ರಕ್ರಿಯೆಯನ್ನು ಗುರುತಿಸಿ, ಕೌಂಟ್‌ಡೌನ್ ತೋರಿಸುತ್ತದೆ. ಪೂರ್ಣಗೊಂಡಾಗ, ಶಹಬ್ಬಾಸ್ ಹೇಳುತ್ತದೆ. ಮತ್ತು ಆಯಾ ದಿನದ ಚಟುವಟಿಕೆಗಳ ಗುರಿ ಇರಿಸಿಕೊಂಡಲ್ಲಿ, ಅದನ್ನು ತಲುಪಿದಾಗ ಶಹಬ್ಬಾಸ್ ಎನ್ನುತ್ತಾ ಬೆನ್ನು ತಟ್ಟುತ್ತದೆ. ಚಟುವಟಿಕೆಗಳನ್ನು ತೋರಿಸಲೆಂದೇ ಹಲವು ಬಣ್ಣಗಳ ರಿಂಗ್ ಕಾಣಿಸುತ್ತಲೇ ಇರುತ್ತದೆ.

ಆರೋಗ್ಯದ ಆ್ಯಪ್‌ಗಳ ಮೂಲಕ ಈ ವಾಚ್ ನಮ್ಮ ಹೃದಯ ಬಡಿತವನ್ನು ಅಳೆದು ತೋರಿಸುತ್ತಾ ಇರುತ್ತದೆ, ನಿದ್ರೆಯ ಅವಧಿಯನ್ನು ಹೊಂದಿಸಿ, ಆ ಸಮಯವನ್ನು ಪಾಲಿಸಲು ಪ್ರೇರೇಪಿಸುತ್ತದೆ. ರಕ್ತದಲ್ಲಿ ಆಮ್ಲಜನಕ ಅಂಶವೆಷ್ಟೆಂಬುದನ್ನು ತೋರಿಸುತ್ತದೆ. ಎಲೆಕ್ಟ್ರೋಕಾರ್ಡಿಯೋಗ್ರಾಂ (ಇಸಿಜಿ) ಮಾಹಿತಿಯನ್ನೂ ಅಳೆದು ತೋರಿಸುತ್ತದೆ. ನಾವು ಎಷ್ಟು ಹೆಜ್ಜೆ ನಡೆದೆವು, ಎಷ್ಟು ದೂರ ಓಡಿದೆವು, ಎಷ್ಟು ವ್ಯಾಯಾಮ ಮಾಡಿದೆವು, ಎಷ್ಟು ಬಾರಿ, ಹೇಗೆ ಕೈ ತೊಳೆದೆವು ಎಂಬುದನ್ನೆಲ್ಲ ಈ ವಾಚ್ ದಾಖಲಿಸುತ್ತದೆ.

ಇವುಗಳಿಗೆಲ್ಲ ಕಾರಣವಾಗಿರುವುದು ಹಿಂಭಾಗದಲ್ಲಿರುವ ಎಲ್‌ಇಡಿ ಬೆಳಕಿರುವ ಸೆನ್ಸರ್‌ಗಳು. ಉದಾಹರಣೆಗೆ, ರಕ್ತದ ಆಮ್ಲಜನಕ ಅಳೆಯಲು ವಾಚನ್ನು ಗಟ್ಟಿಯಾಗಿ ಕಟ್ಟಿಕೊಂಡಿರಬೇಕು. ಸಂಬಂಧಿತ ಆ್ಯಪ್ ಒತ್ತಿದ ತಕ್ಷಣ, ಹಿಂಭಾಗದ ಎಲ್ಇಡಿ ದೀಪಗಳು ಬೆಳಗುತ್ತವೆ, ಚರ್ಮದ ಮೂಲಕ ಹಾದು ರಕ್ತದ ಮೇಲೂ ಈ ಇನ್‌ಫ್ರಾರೆಡ್ (ನೇರಳಾತೀತ) ಬೆಳಕು ಹರಿದಾಡಿ, ಆಮ್ಲಜನಕ ಅಳತೆ ಮಾಡುತ್ತದೆ.

ಹಸಿರು, ಕೆಂಪು ಮತ್ತು ಇನ್‌ಫ್ರಾರೆಡ್ ಬೆಳಕು ಕೈಯ ರಕ್ತನಾಳಗಳ ಮೂಲಕ ಹಾದು ಹೋದಾಗ, ಅದರ ಪ್ರತಿಫಲಿತ ಬಣ್ಣವನ್ನು ಫೋಟೋ-ಡಯೋಡ್‌ಗಳು ಅಳೆಯುತ್ತವೆ. ಆ್ಯಪಲ್‌ನ ಅಲ್ಗಾರಿದಂ ಈ ಬಣ್ಣವನ್ನು ಅಳೆದು ತೂಗಿ, ಆಮ್ಲಜನಕ ಎಷ್ಟು ಪ್ರಮಾಣದಲ್ಲಿದೆ ಎಂಬುದನ್ನು ತೋರಿಸುತ್ತದೆ. ಶೇ.95ರಿಂದ ಶೇ.100 ಇರುವುದು ಆರೋಗ್ಯಕರ. ಅದಕ್ಕಿಂತ ಕಡಿಮೆ ಇದ್ದರೆ ವೈದ್ಯರನ್ನು ಕಾಣುವುದೊಳಿತು. ಇದನ್ನು ನಾವಾಗಿ ನೋಡಬಹುದು ಅಥವಾ ನಾವು ವಿರಮಿಸಿರುವಾಗ ವಾಚು ತಾನಾಗಿಯೇ ದಿನಕ್ಕೊಮ್ಮೆ ಅಳೆಯುತ್ತದೆ.

ಅಕ್ಸಲರೋಮೀಟರ್ ಮತ್ತು ಗೈರೋಸ್ಕೋಪ್‌ಗಳು ನಾವೆಲ್ಲಿಯಾದರೂ ಬಿದ್ದರೆ ಅದನ್ನೂ ಪತ್ತೆ ಮಾಡಿ ದಾಖಲಿಸಿಕೊಳ್ಳುತ್ತದೆ. ಅಪಘಾತವೇನಾದರೂ ಆಗಿದ್ದರೆ, ಬಿದ್ದಲ್ಲಿಂದಲೇ ವಾಚ್ ಮೂಲಕ ಕರೆ ಮಾಡಲು ಅನುಕೂಲ ಒದಗಿಸುತ್ತದೆ. ಹೃದಯದ ಬಡಿತವನ್ನು ಅಳೆದು, ಅಸಾಮಾನ್ಯ ಎಂದೆನಿಸಿದರೆ ಎಚ್ಚರಿಕೆ ನೀಡುವ ಮೂಲಕ ವೈದ್ಯರನ್ನು ಕಾಣಲು ಪ್ರೇರೇಪಿಸುತ್ತದೆ.

8 ಗಂಟೆ ನಿದ್ದೆಯನ್ನು ಆರೋಗ್ಯಕರ ಅಭ್ಯಾಸ ಎಂದು ಗುರುತಿಸುವ ವಾಚು, ಪ್ರತಿದಿನವೂ ನಿರ್ದಿಷ್ಟ ಸಮಯ ಹೊಂದಿಸಿಡುವುದನ್ನು ಅಭ್ಯಾಸ ಮಾಡಿಸುತ್ತದೆ. ಕೈಗೆ ಕಟ್ಟಿಕೊಂಡೇ ಮಲಗಿದರೆ, ಅದು ನಿದ್ದೆಯ ಗಾಢತೆಯನ್ನೂ ಅಳೆದು ತೋರಿಸುತ್ತದೆ. 8 ಗಂಟೆ ಮಲಗಿದರೂ, ಗಾಢ ನಿದ್ದೆಯ ಮೂಲಕ ವಿಶ್ರಾಂತಿ ಪಡೆದಿರುವುದು ಇಂತಿಷ್ಟೇ ಗಂಟೆ ಎಂಬುದನ್ನು ಅದು ನಮ್ಮ ಕೈಯ ಚಲನೆ, ರಕ್ತ ಪರಿಚಲನೆ, ಉಸಿರಾಟ, ಹೃದಯ ಬಡಿತ ಮುಂತಾದವನ್ನು ಲೆಕ್ಕಾಚಾರ ಮಾಡಿ ಅಳತೆ ಮಾಡಿ ದಾಖಲಿಸಿಕೊಳ್ಳುತ್ತದೆ.

ಅದೇ ರೀತಿಯಾಗಿ, ಕ್ರೌನ್ (ಬಟನ್‌ನ ಪಾರ್ಶ್ವ ಭಾಗ) ಮೇಲೆ ಬೆರಳು ಇರಿಸಿ, ಎಲೆಕ್ಟ್ರೋಕಾರ್ಡಿಯೋಗ್ರಾಂ ರೀಡಿಂಗ್ ಪಡೆಯಬಹುದು. ಇದನ್ನು ವೈದ್ಯರಿಗೆ ತೋರಿಸಿ ಅವರ ಸಲಹೆ ಪಡೆಯಲು ಅನುಕೂಲ. ಆದರೆ ಆ್ಯಪಲ್ ಈಗಾಗಲೇ ಹೇಳಿರುವಂತೆ, ಇದನ್ನು ವೈದ್ಯಕೀಯ ಪರೀಕ್ಷೆ ಅಥವಾ ತಪಾಸಣೆಗೆ ಪರ್ಯಾಯವಾಗಿ ಬಳಸುವಂತಿಲ್ಲ. ಸಾಮಾನ್ಯ ಫಿಟ್ನೆಸ್ ಹಾಗೂ ಸ್ವಾಸ್ಥ್ಯ ಕಾಪಾಡಿಕೊಳ್ಳುವ ಉದ್ದೇಶಕ್ಕಾಗಿ ಮಾತ್ರ ಇದನ್ನು ಬಳಸಬಹುದು.

ಉಳಿದಂತೆ, ಸ್ಮಾರ್ಟ್ ವಾಚ್ ಹಾಗೂ ಸ್ಮಾರ್ಟ್ ಫೋನ್‌ಗಳ ಸಾಮಾನ್ಯ ವೈಶಿಷ್ಟ್ಯಗಳೆಲ್ಲವೂ ಆ್ಯಪಲ್ ವಾಚ್‌ನಲ್ಲೂ ಇವೆ. ಮುಖ್ಯವಾಗಿ, ಕರೆ ಬಂದಾಗ ವಾಚ್‌ನಲ್ಲೇ ಮಾತನಾಡುವ ಆಯ್ಕೆಯಿದೆ. ಸ್ನಾನಕ್ಕೆ ಹೋದಾಗಲೇ ತುರ್ತು ಕರೆ ಬಂದರೂ ತೊಂದರೆಯಿಲ್ಲ ಇನ್ನು! ಫೋನ್ ಬದಲು ವಾಚ್‌ನಲ್ಲೇ ಮಾತನಾಡಬಹುದು. ಇದು ಜಲನಿರೋಧಕವಾಗಿದ್ದು, ಈಜುವಾಗಲೂ ಧರಿಸಿದರೆ ಕ್ಯಾಲೊರಿ ಎಷ್ಟು ಬರ್ನ್ ಮಾಡಲಾಯಿತು ಎಂಬುದನ್ನೆಲ್ಲ ಅಳೆಯಬಹುದು. ದಿಕ್ಸೂಚಿ ಆ್ಯಪ್ ಕೂಡ ಇದರಲ್ಲಿದ್ದು, ಅಕ್ಸಲರೋಮೀಟರ್ ಜೊತೆಗೆ ಬೆಳಕು ಅಳೆಯುವ ಲೈಟ್ ಸೆನ್ಸರ್, ಎಷ್ಟು ಎತ್ತರದಲ್ಲಿದ್ದೀರಿ (ವಿಮಾನದಲ್ಲಿ ಹೋಗುವಾಗ ಅಥವಾ ಮಹಡಿ ಏರಿದಾಗ) ಅಂತ ತಿಳಿಸುವ ಬ್ಯಾರೋಮೆಟ್ರಿಕ್ ಆಲ್ಟಿಮೀಟರ್ ಸೆನ್ಸರ್ ಕೂಡ ಇದರಲ್ಲಿದೆ.

ವಾಚಿನಲ್ಲೇ ಹಾಡುಗಳನ್ನು ಕೇಳಿ ಆನಂದಿಸಬಹುದು. ಇದರಲ್ಲಿ 32GB ಸ್ಟೋರೇಜ್ ಅವಕಾಶವಿರುವುದರಿಂದ, ಹಾಡುಗಳಿಗಾಗಿ ಹಾಗೂ ಸಂಬಂಧಿತ ಆ್ಯಪ್‌ಗಳನ್ನು ಅಳವಡಿಸಿಕೊಳ್ಳಲು ಬಳಸಿಕೊಳ್ಳಬಹುದು. ಬೆಂಬಲ ಇರುವ ಕಾರುಗಳಿಗೆ ಕೀ ಇಲ್ಲದೆ ಪ್ರವೇಶಿಸಲು ಮತ್ತು ಇಗ್ನಿಷನ್ ಕೀ ಆನ್ ಮಾಡುವುದಕ್ಕೂ ಈ ವಾಚ್ ಬಳಸಬಹುದು.

ಬ್ಯಾಟರಿ
ಆ್ಯಪಲ್ ಐಫೋನ್ 12 ಸರಣಿಯಂತೆ ಆಯಸ್ಕಾಂತೀಯ ಚಾರ್ಜಿಂಗ್ ಕೇಬಲ್ ಮಾತ್ರವೇ ನೀಡಲಾಗಿದೆ. ಅಡಾಪ್ಟರ್ ಇರುವುದಿಲ್ಲ. 5W ಅಡಾಪ್ಟರ್ ನಾವೇ ಖರೀದಿಸಬೇಕು ಅಥವಾ ಬೇರೆ ಫೋನ್‌ಗಳ ಅಡಾಪ್ಟರ್ ಅನ್ನು ಯುಎಸ್‌ಬಿ ಕೇಬಲ್‌ಗೆ ಅಳವಡಿಸಿ ಬಳಸಬಹುದು. ಸಾಮಾನ್ಯ ಬಳಕೆಯಲ್ಲಿ ಬ್ಯಾಟರಿಯು ಸುಮಾರು 36 ಗಂಟೆಗಳ ಕಾಲ ಬಂದಿದೆ. ಸದಾ ಕಾಲ ಆನ್ ಇರುವ ಸ್ಕ್ರೀನ್ ಜೊತೆಗೆ, ಸ್ವಯಂಚಾಲಿತವಾಗಿ ಪ್ರತಿ ದಿನವೂ ಅದು ಹಿನ್ನೆಲೆಯಿಂದಲೇ ನಮ್ಮ ಚಲನೆ, ಹೃದಯ ಬಡಿತ, ರಕ್ತದ ಆಮ್ಲಜನಕ ಪ್ರಮಾಣ, ನಿದ್ರೆ, ಎತ್ತರ, ಸದ್ದು ಇತ್ಯಾದಿಗಳನ್ನು ಅಳತೆ ಮಾಡುವುದರ ಹೊರತಾಗಿಯೂ ಇಷ್ಟು ಬ್ಯಾಟರಿ ಚಾರ್ಜ್ ಇರುವುದು ಅಚ್ಚರಿಯೇ. ವೇಗವಾಗಿ ಚಾರ್ಜ್ ಕೂಡ ಆಗುತ್ತದೆ.

ಬೆಲೆ
ಹತ್ತು ಬಣ್ಣಗಳಲ್ಲಿ ವಾಚ್‌ನ ಸ್ಟ್ರ್ಯಾಪ್‌ಗಳು ಲಭ್ಯ ಇವೆ. ಬೆಲೆ ವಿವಿಧ ಮಾಡೆಲ್‌ಗಳಿಗೆ ಎಂದರೆ, ಜಿಪಿಎಸ್ ಮಾತ್ರ, ಸೆಲ್ಯುಲಾರ್ ಸಹಿತದ ವೈಶಿಷ್ಟ್ಯ, ಗ್ರಾಫೈಟ್, ಅಲ್ಯುಮೀನಿಯಂ ಅಥವಾ ಸ್ಟೇನ್‌ಲೆಸ್ ಸ್ಟೀಲ್ ಕೇಸ್ ಹಾಗೂ 40 ಮಿಮೀ/44ಮಿಮೀ ಗಾತ್ರ – ಇವುಗಳಿಗೆ ಅನುಗುಣವಾಗಿ 40,900ರಿಂದ 73,900 ರೂ.ವರೆಗಿದೆ.

ಒಟ್ಟಾರೆ ಹೇಗಿದೆ?
ಆ್ಯಪಲ್ ವಾಚ್ ಕಾರ್ಯಾಚರಣಾ ವ್ಯವಸ್ಥೆ (WatchOS) 7.0 ಮೂಲಕ ವ್ಯವಹರಿಸುವ ಈ ಸ್ಮಾರ್ಟ್ ವಾಚ್, ಉತ್ತಮ ಬಿಲ್ಡ್ ಹೊಂದಿದ್ದು, ಜಲನಿರೋಧಕವಾಗಿದೆ. ಐಫೋನ್ 6 ಅಥವಾ ಮೇಲ್ಪಟ್ಟು ಎಂದರೆ ಐಒಎಸ್ 14.0 ನಲ್ಲಿ ಕೆಲಸ ಮಾಡುವ ಐಫೋನ್‌ಗಳಿಗೆ ಈ ವಾಚ್ ಹೊಂದುತ್ತದೆ. ಕೈಗೆ ಕಟ್ಟಿಕೊಳ್ಳಲು ಬದಲಾಯಿಸಿಕೊಳ್ಳಬಹುದಾದ ಗುಣಮಟ್ಟದ ಸಿಲಿಕೋನ್ ರಬ್ಬರ್ ಸ್ಟ್ರ್ಯಾಪ್‌ಗಳಿವೆ. ಸುಂದರ ವಿನ್ಯಾಸ ಮತ್ತು ದೃಢತೆಯುಳ್ಳ, ವೇಗದ ಕಾರ್ಯಕ್ಷಮತೆ ಇದರ ಪ್ಲಸ್ ಪಾಯಿಂಟ್. ಗೂಗಲ್‌ನ WearOS ಇರುವ ಆಂಡ್ರಾಯ್ಡ್ ಸ್ಮಾರ್ಟ್ ವಾಚ್‌ಗಳಲ್ಲಿ ಕೆಲವನ್ನು ಬಳಸಿ ನೋಡಿದ ನನಗೆ, ಇದರ ವೇಗದ ಮತ್ತು ಸುಲಲಿತ ಕಾರ್ಯಾಚರಣೆ ಗಮನ ಸೆಳೆಯಿತು.

ಆ್ಯಪಲ್ ಐಫೋನ್ ಜೊತೆಗೆ ಬಳಕೆಯಾಗುತ್ತದೆ. ಫೋನ್‌ಗೆ ಬಂದ ನೋಟಿಫಿಕೇಶನ್‌ಗಳನ್ನೆಲ್ಲ ವಾಚ್‌ನಲ್ಲೇ ನೋಡಬಹುದು. ಮ್ಯಾಪ್ ಆನ್ ಮಾಡಿದರೆ ಕೈಯಲ್ಲೇ ಅದರ ದಿಕ್-ಸೂಚನೆಗಳನ್ನು ನೋಡಬಹುದು. ಮನೆಯೊಳಗೆ ಅಥವಾ ಕಚೇರಿಯೊಳಗಿರುವಾಗ ಫೋನನ್ನು ಟೇಬಲ್ ಮೇಲೆ ಇಟ್ಟುಬಿಟ್ಟು, ಈ ವಾಚ್‌ನಲ್ಲೇ (ಲೌಡ್ ಸ್ಪೀಕರ್ ಮೂಲಕ) ಕರೆಗೆ ಉತ್ತರಿಸಬಹುದು. ಬ್ಲೂಟೂತ್ ಇಯರ್‌ಫೋನ್ ಇದ್ದರೆ ಹೆಚ್ಚು ಅನುಕೂಲ, ಯಾಕೆಂದರೆ ಹೊರಗೆ ಹೋದಾಗ ವಾಚ್‌ನ ಸ್ಪೀಕರ್‌ನಿಂದ ಬರುವ ಧ್ವನಿ ಸ್ಪಷ್ಟವಾಗಿ ಕೇಳಿಸಲಾರದು. ಇದರ ಹೊರತಾಗಿ, ಉತ್ತಮ ಆರೋಗ್ಯಕ್ಕಾಗಿ ಸದಾ ಕ್ರಿಯಾಶೀಲರಾಗಿರುವಂತೆ ಪ್ರೇರೇಪಿಸುವ ಆಪ್ತ ಸಹಾಯಕ ಇದ್ದಂತೆ. ಐಷಾರಾಮಿ ಅನ್ನಿಸಿದವರಿಗಾಗಿ ಇಸಿಜಿ ಸೌಲಭ್ಯವಿಲ್ಲದ, ಸೀರೀಸ್ 4ರ SE ಮಾಡೆಲ್ ಇದೆ. ಅದರ ಬೆಲೆ 29,900 ರೂ.ನಿಂದ ಆರಂಭವಾಗುತ್ತದೆ.

ಒಟ್ಟಿನಲ್ಲಿ, ಉತ್ತಮ ಆರೋಗ್ಯಕ್ಕಾಗಿ, ಸದಾ ಫಿಟ್ನೆಸ್ ಕಾಯ್ದುಕೊಳ್ಳಲು ಸದಾ ಕ್ರಿಯಾಶೀಲರಾಗಿರುವಂತೆ ಪ್ರೇರೇಪಿಸುವ ಆಪ್ತ ಸಹಾಯಕ ಇದ್ದಂತೆ.

ಪ್ರಮುಖ ವೈಶಿಷ್ಟ್ಯಗಳು
368×448 ಪಿಕ್ಸೆಲ್ ಡಿಸ್‌ಪ್ಲೇ (44 ಮಿಮೀ ಆವೃತ್ತಿ)
ಚೌಕಾಕಾರ, ತೂಕ 47.1 ಗ್ರಾಂ
50 ಮೀಟರ್‌ವರೆಗೆ ಜಲನಿರೋಧಕ
ಸದಾಕಾಲ ಆನ್ ಇರುವ ಆಲ್ಟಿಮೀಟರ್ (ನಾವಿರುವ ಎತ್ತರ ತಿಳಿಸುತ್ತದೆ)
ಒಂದುವರೆ ದಿನದ ಬ್ಯಾಟರಿ ಚಾರ್ಜ್
ಆ್ಯಪಲ್ ವಾಚ್ ಒಎಸ್ 7.0
ರಕ್ತದ ಆಮ್ಲಜನಕ, ಇಸಿಜಿ, ಹೃದಯ ಬಡಿತ, ಹೆಜ್ಜೆ, ವ್ಯಾಯಾಮ ಅಳೆಯುವ ವ್ಯವಸ್ಥೆ

My Review published in Prajavani on 30/31 Dec 2020

LEAVE A REPLY

Please enter your comment!
Please enter your name here