ವಿಂಡೋಸ್‌ನಿಂದ ಆಂಡ್ರಾಯ್ಡ್‌ಗೆ ಫೋನ್ ನಂಬರ್ ವರ್ಗಾಯಿಸುವುದು

0
495

mobile-appಇದುವರೆಗೆ ವಿಂಡೋಸ್ ಫೋನ್ ಬಳಸುತ್ತಿದ್ದವರು ಇತ್ತೀಚೆಗೆ ಹೆಚ್ಚು ಚಾಲ್ತಿಯಲ್ಲಿರುವ ಮತ್ತು ಬಳಕೆಗೆ ಸಾಕಷ್ಟು ಉತ್ತಮ ಆಯ್ಕೆಗಳನ್ನು ಒದಗಿಸುತ್ತಿರುವ ಆಂಡ್ರಾಯ್ಡ್ ಫೋನ್‌ಗಳತ್ತ ಆಕರ್ಷಿತರಾಗುತ್ತಿದ್ದಾರೆ. ಬಳಕೆಯ ರೀತಿಯಲ್ಲಿ ಅಲ್ಪಸ್ವಲ್ಪ ಬದಲಾವಣೆಯಿದೆ. ಆದರೆ, ವಿಂಡೋಸ್ ಫೋನ್‌ನಲ್ಲಿ ಸೇವ್ ಆಗಿರುವ ಫೋನ್ ನಂಬರುಗಳನ್ನು ಆಂಡ್ರಾಯ್ಡ್ ಫೋನ್‌ಗೆ ರವಾನಿಸುವುದು ಹೇಗೆ, ವಿವರಿಸಿಕೊಡಿ ಎಂದು ಓದುಗರೊಬ್ಬರು ಇತ್ತೀಚೆಗೆ ಕೇಳಿಕೊಂಡಿದ್ದಾರೆ. ಇಂಥದ್ದೇ ಸಮಸ್ಯೆ ಎದುರಿಸುತ್ತಿರುವ ಸಾಕಷ್ಟು ಮಂದಿಗೆ ಪ್ರಯೋಜನವಾಗಲೆಂದು ಈ ಮಾಹಿತಿ.

ವಿಂಡೋಸ್ ಫೋನ್‌ಗಳಲ್ಲಿ ದೊಡ್ಡ ಸಮಸ್ಯೆಯೆಂದರೆ, ಸಂಪರ್ಕ ಸಂಖ್ಯೆಗಳನ್ನು (ಕಾಂಟಾಕ್ಟ್ಸ್) ಸಿಮ್ ಕಾರ್ಡ್‌ಗಾಗಲೀ, ಮೆಮೊರಿ ಕಾರ್ಡ್‌ಗಾಗಲಿ ಬ್ಯಾಕಪ್ ಇರಿಸಿಕೊಳ್ಳುವುದು ಕಷ್ಟ. ಹೀಗಾಗಿ ಸುಲಭ ಮಾರ್ಗವೆಂದರೆ, ಫೋನ್‌ನಲ್ಲಿ ಮೈಕ್ರೋಸಾಫ್ಟ್‌ನ ಇಮೇಲ್ ಐಡಿ ಮೂಲಕ (live.com, outlook.com, hotmail.com, outlook.in ಇತ್ಯಾದಿ) ಲಾಗಿನ್ ಆಗಿ, ಅದಕ್ಕೆ ಸಂಪರ್ಕ ಸಂಖ್ಯೆಗಳನ್ನು ಸಿಂಕ್ (ಸಿಂಕ್ರನೈಜ್) ಮಾಡುವುದು.

ಹೇಗೆ ಮಾಡುವುದು?: ಆಂಡ್ರಾಯ್ಡ್ ಬಳಸಬೇಕಿದ್ದರೆ ನಿಮ್ಮಲ್ಲೊಂದು ಗೂಗಲ್ ಮೇಲ್ (ಜಿಮೇಲ್) ಐಡಿ ಇರುವುದು ಕಡ್ಡಾಯ. ಅದನ್ನು ಸಿದ್ಧವಾಗಿಟ್ಟುಕೊಂಡ ಬಳಿಕ ನಿಮ್ಮ ವಿಂಡೋಸ್ ಸ್ಮಾರ್ಟ್ ಫೋನ್‌ನ ಸೆಟ್ಟಿಂಗ್ಸ್‌ನಲ್ಲಿ Email + Accounts ಎಂಬಲ್ಲಿ ಹೋಗಿ, ಅಲ್ಲಿ ಮೈಕ್ರೋಸಾಫ್ಟ್ ಖಾತೆಗೆ ಲಾಗಿನ್ ಆಗಬೇಕು. ಆದ ಬಳಿಕ, ಕಾಣಿಸುವ ಔಟ್‌ಲುಕ್ ಖಾತೆಯನ್ನು ಒತ್ತಿ ಹಿಡಿದುಕೊಳ್ಳಿ. ಆಗ Sync ಮತ್ತು Delete ಎಂಬ ಆಯ್ಕೆಗಳು ಕಾಣಿಸುತ್ತವೆ. Sync ಮಾಡಿ. Outlook ಐಕಾನ್ ಅನ್ನು ಒಂದು ಸಲ ಒತ್ತಿದರೆ, ಅದರ ಸೆಟ್ಟಿಂಗ್ಸ್ ತೆರೆದುಕೊಳ್ಳುತ್ತದೆ ಮತ್ತು ಇಮೇಲ್, ಸಂಪರ್ಕ ಸಂಖ್ಯೆ, ಕ್ಯಾಲೆಂಡರ್, ಟಾಸ್ಕ್ ಸಿಂಕ್ ಮಾಡಿಕೊಳ್ಳುವ ಆಯ್ಕೆ ಕಾಣಿಸುತ್ತದೆ. ಸಿಂಕ್ ಕೊಟ್ಟಮೇಲೆ 2-3 ಗಂಟೆಗಳ ಬಳಿಕವಷ್ಟೇ ನೀವು ಆನ್‌ಲೈನ್‌ನಲ್ಲಿ ಪರಿಶೀಲಿಸಿ ನೋಡಿದರೆ ಸಂಪರ್ಕ ಸಂಖ್ಯೆಗಳು ಕಾಣಿಸುತ್ತವೆ ಎಂಬುದು ನನ್ನ ಅನುಭವಕ್ಕೆ ಬಂದ ವಿಚಾರ.

ಸಿಂಕ್ ಆದ ಮೇಲೆ, ಕಂಪ್ಯೂಟರಿನಲ್ಲಿ people.live.com ಗೆ ಅದೇ ಮೈಕ್ರೋಸಾಫ್ಟ್ ಖಾತೆಯ ಮೂಲಕ ಲಾಗಿನ್ ಆಗಿ. ಮೇಲ್ಭಾಗದಲ್ಲಿ Manage ಎಂಬಲ್ಲಿ ಕ್ಲಿಕ್ ಮಾಡಿ, Export to Outlook.com and Other Services ಅಂತ ಕ್ಲಿಕ್ ಮಾಡಿ. ಆಗ OutlookContacts ಎಂಬ CSV ರೂಪದ ಒಂದು ಫೈಲ್ (ಎಕ್ಸೆಲ್ ರೀತಿ) ನಿಮ್ಮ ಕಂಪ್ಯೂಟರಿಗೆ ಡೌನ್‌ಲೋಡ್ ಆಗುತ್ತದೆ. ಅದನ್ನು ಇರಿಸಿಕೊಳ್ಳಿ.

ಈಗ, ಲಾಗೌಟ್ ಆಗಿ, ನೀವು ಆಂಡ್ರಾಯ್ಡ್ ಫೋನ್‌ನಲ್ಲಿ ಬಳಸಬೇಕೆಂದಿರುವ ಜಿಮೇಲ್‌ಗೆ ಕಂಪ್ಯೂಟರ್ ಮೂಲಕ ಲಾಗಿನ್ ಆಗಿ. ಎಡ ಮೇಲ್ಭಾಗದಲ್ಲಿ Gmail ಅಂತ ಬರೆದಿರುವುದನ್ನು ಕ್ಲಿಕ್ ಮಾಡಿದರೆ, ಡ್ರಾಪ್ ಡೌನ್ ಮೆನು ಕಾಣಿಸಿಕೊಳ್ಳುತ್ತದೆ. ಅದರಲ್ಲಿ Contacts ಆಯ್ಕೆ ಮಾಡಿಕೊಳ್ಳಿ. ಈಗ ಪ್ರತ್ಯೇಕ ವಿಂಡೋ ತೆರೆಯುತ್ತದೆ. ಎಡಭಾಗದಲ್ಲಿರುವ ಆಯ್ಕೆಗಳಲ್ಲಿ Import ಆಯ್ಕೆ ಮಾಡಿಕೊಳ್ಳಿ. ಪಾಪ್-ಅಪ್ ವಿಂಡೋ ಕಾಣಿಸಿಕೊಳ್ಳುತ್ತದೆ. ಅದರಲ್ಲಿ GO TO THE OLD GOOGLE CONTACTS ಅಂತಿರುವುದನ್ನು ಕ್ಲಿಕ್ ಮಾಡಿ. ತೆರೆದುಕೊಳ್ಳುವ ಮತ್ತೊಂದು ವಿಂಡೋದಲ್ಲಿ, ಮೇಲ್ಭಾಗದಲ್ಲಿ More ಇರುವುದನ್ನು ಕ್ಲಿಕ್ ಮಾಡಿ, Import ಒತ್ತಿ. ಅಲ್ಲಿ CSV ಫೈಲ್ ಇಂಪೋರ್ಟ್ ಮಾಡಿಕೊಳ್ಳಲು ಆಯ್ಕೆ ದೊರೆಯುತ್ತದೆ. ನೀವು ಈಗಾಗಲೇ ಸೇವ್ ಮಾಡಿಟ್ಟಿರುವ ಫೈಲ್ ಅನ್ನು Choose File ಮೂಲಕ ಆಯ್ದುಕೊಂಡು Import ಬಟನ್ ಒತ್ತಿದರಾಯಿತು.

ಈಗ, ನಿಮ್ಮ ವಿಂಡೋಸ್ ಫೋನ್‌ನ ಎಲ್ಲ ಸಂಪರ್ಕ ಸಂಖ್ಯೆಗಳು, ಹೆಸರು ಸಹಿತವಾಗಿ ಜಿಮೇಲ್‌ನಲ್ಲಿ ಸಮ್ಮಿಳಿತವಾದವು. ಇನ್ನು, ಆಂಡ್ರಾಯ್ಡ್ ಫೋನ್‌ನಲ್ಲಿ ನೀವು ಜಿಮೇಲ್‌ಗೆ ಲಾಗಿನ್ ಆಗಿ, ಸೆಟ್ಟಿಂಗ್ಸ್‌ನಲ್ಲಿ Accounts & Sync ಎಂದಿರುವಲ್ಲಿ, Contacts ಆಯ್ಕೆ ಮಾಡಿಕೊಂಡು Sync ಮಾಡಿಕೊಂಡರಾಯಿತು. ಆಂಡ್ರಾಯ್ಡ್ ಫೋನ್‌ನಲ್ಲಿ ಎಲ್ಲ ಸಂಪರ್ಕ ಸಂಖ್ಯೆಗಳನ್ನೂ ಕಾಣಬಹುದು. ಆಂಡ್ರಾಯ್ಡ್‌ನಿಂದ ಮತ್ತೊಂದು ಆಂಡ್ರಾಯ್ಡ್ ಫೋನ್‌ಗೆ ಬದಲಾಗುವಾಗ ಜಿಮೇಲ್ ಖಾತೆ ಅದೇ ಇರುವುದರಿಂದಾಗಿ, ಸಂಪರ್ಕ ಸಂಖ್ಯೆಗಳ ಇಂಪೋರ್ಟ್-ಎಕ್ಸ್‌ಪೋರ್ಟ್ ಶ್ರಮ ಇರುವುದಿಲ್ಲ.

ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. ವಿಜಯ ಕರ್ನಾಟಕ ಮೇ 18, 2015

LEAVE A REPLY

Please enter your comment!
Please enter your name here