ಇಲ್ಲದ ಚಾಪ್ಲಿನ್ ಪ್ರತಿಮೆ ಮೇಲೆ ದಾಳಿ!

16
1781

ಬ್ರೇಕಿಂಗ್ ನ್ಯೂಸ್ ಆವಾಂತರಗಳ ಸಾಲಿಗೆ ಮತ್ತು ಇದೇ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿರುವ ಪ್ರಚಾರ ಗಳಿಸುವವರ ತಂತ್ರಗಾರಿಕೆಗೆ ಇದು ಮತ್ತೊಂದು ಸೇರ್ಪಡೆ. ಹಾಗೆಯೇ ಮಾಧ್ಯಮಗಳ ವಸ್ತುನಿಷ್ಠತೆಗೆ, ಅದರ ವಿಶ್ವಾಸಾರ್ಹತೆಗೆ ಸವಾಲು ಕೂಡ. ಈ ಕಾರಣಕ್ಕೆ, ನಿನ್ನೆಯ ಲೇಖನವನ್ನು ಮತ್ತೆ ಮುಂದುವರಿಸಬೇಕಾಯಿತು, ಮತ್ತಷ್ಟು ಮಾಹಿತಿಗಳೊಂದಿಗೆ.

ಮಾಧ್ಯಮವನ್ನು ತಮ್ಮಿಚ್ಛೆಗಾಗಿ ಯಾವೆಲ್ಲಾ ರೀತಿಯಲ್ಲಿ ದುರುಪಯೋಗಪಡಿಸಿಕೊಳ್ಳಬಹುದು ಎಂಬುದಕ್ಕೆ ಅಥವಾ ಮಾಧ್ಯಮಗಳು ಯಾವ ರೀತಿ ಒಂದು ವಿಷಯದ ಮೇಲೆ ಪ್ರಭಾವ ಬೀರಬಹುದು (!) ಎಂಬುದಕ್ಕೂ ಇದೇ ಉದಾಹರಣೆಯಾಗಲೂಬಹುದು. ದೇವಸ್ಥಾನದ ಸಮೀಪ 67 ಅಡಿ ಎತ್ತರದಲ್ಲಿ 35 ಲಕ್ಷ ರೂಪಾಯಿ ವೆಚ್ಚದಲ್ಲಿ ಚಾರ್ಲಿ ಚಾಪ್ಲಿನ್ ಪ್ರತಿಮೆ ಸ್ಥಾಪಿಸುತ್ತೇವೆ ಎಂದು (ಯಾವುದೇ ಅನುಮತಿ ಇಲ್ಲದೆ) ಬಂದವರನ್ನು ತಡೆದ ಪ್ರಕರಣವನ್ನು, ವಿವೇಚಿಸದೆ (ಅಥವಾ ವಿವೇಚನೆಯಿಂದಲೇ, ಉದ್ದೇಶವೊಂದರ ಸಾಧನೆಗಾಗಿ) ಮುಖಪುಟದಲ್ಲಿ ‘ಕ್ರಿಶ್ಚಿಯನ್’ ಚಾಪ್ಲಿನ್‌ಗೆ ದಾಳಿ ಎಂದೆಲ್ಲಾ ಬ್ಯಾನರ್ ಹೆಡ್ಡಿಂಗ್ ಹಾಕಿ ಪ್ರಕಟಿಸಿಬಿಟ್ಟಿತು. ನೆನಪಿಡಿ. ಇದು ಇಲ್ಲದ ಪ್ರತಿಮೆಯ ಮೇಲೆ ಬಿಜೆಪಿ ದಾಳಿ! ಖಂಡಿತ ಇದು ಕೋಮು ಭಾವನೆ ಕೆರಳಿಸುವ ಹುನ್ನಾರ.

ಸಮಾಜದ ಸ್ವಾಸ್ಥ್ಯ ಕಾಪಾಡುವುದು, ಸಾಮಾಜಿಕ ಸಾಮರಸ್ಯ ಕೆಡದಂತೆ ನೋಡಿಕೊಳ್ಳುವುದು ಮಾಧ್ಯಮಗಳ ಧರ್ಮ. ಸಮಾಜದ ಏಕತೆಗೆ ಭಂಗ ಬಾರದಂತೆ ವರ್ತಿಸುವುದು, ಜನರ ಭಾವನೆಗೆ ಧಕ್ಕೆಯಾಗದಂತೆ ಕಾಳಜಿ ವಹಿಸುವುದು ಅವುಗಳ ಕರ್ತವ್ಯವೂ ಹೌದು. ಹೀಗಿರುವಾಗ ಸಮಸ್ಯೆ ಏನೆಂಬುದನ್ನು ವಿವೇಚಿಸದೆ, ಅದನ್ನು ದೊಡ್ಡಕ್ಷರಗಳಲ್ಲಿ ಪ್ರಕಟಿಸಿ, ಅದು ಕೂಡ ದೆಹಲಿಯ ಆವೃತ್ತಿಯಲ್ಲಿ ಮಾತ್ರ ‘ಕ್ರಿಶ್ಚಿಯನ್ ಚಾಪ್ಲಿನ್‌ಗೆ ಬಿಜೆಪಿ ಅಡ್ಡಿ’ ಎಂದೆಲ್ಲಾ ಡಂಗೂರ ಸಾರಿರುವುದು ಯಾವ ದೆಹಲಿ ದೊರೆಗಳನ್ನು ಮೆಚ್ಚಿಸುವುದಕ್ಕೋಸ್ಕರ? ಹೀಗಾಗಿ ಸಂಪಾದಕರ ಜವಾಬ್ದಾರಿ ಇಲ್ಲಿ ಪ್ರಶ್ನಾರ್ಹವಾಗುತ್ತದೆ.

ದೇವಸ್ಥಾನದ ದೈವಿಕತೆಗೆ ಭಂಗವಾಗದಂತೆ, ಭಕ್ತಾದಿಗಳಿಗೆ ತೊಂದರೆಯಾಗದಂತೆ ಸ್ಥಳೀಯರು ಪ್ರತಿಭಟಿಸಿದ್ದಿರಬಹುದಲ್ಲವೇ? ಅವರಿಗೆ ಚಾರ್ಲಿ ಚಾಪ್ಲಿನ್ ಕ್ರಿಶ್ಚಿಯನ್ ಅಂತ ಹೇಳಿಕೊಟ್ಟವರಾರು? ಮುಗ್ಧತೆಯಿಂದಲೇ ಹಳ್ಳಿಗರು, ‘ಯಾರೋ ಚಾಪ್ಲಿನ್ ಪ್ರತಿಮೆ ಮಾಡ್ತಾರಂತೆ, ದೇವಸ್ಥಾನದೆದುರು ಇದು ಮಾಡೋದು ತಪ್ಪು’ ಅಂದಿದ್ದಿರಬಹುದು. ನಾವು ಕೂಡ ಚಾಪ್ಲಿನ್ ಒಬ್ಬ ಕ್ರಿಶ್ಚಿಯನ್ ಎಂದು “ಅರಿತು”ಕೊಂಡದ್ದು ಈಗಲೇ!

ಇಲ್ಲಿ ಜಾತಿ-ಧರ್ಮವನ್ನು ಎಳೆದು ಹಾಕಿದ್ದೇಕೆ ಎಂಬುದು ಪ್ರಶ್ನೆ. ಜೀವನದಲ್ಲಿ ಶ್ರೇಷ್ಠತೆ ಮೆರೆದವರನ್ನು ಜಾತಿಯಲ್ಲಿ ಗುರುತಿಸಲು ಹೇಳಿಕೊಟ್ಟವರಾರು? ಅಬ್ದುಲ್ ಕಲಾಂ ಅವರನ್ನು ಮುಸಲ್ಮಾನ ಅಂತನೋ, ಇಂದಿರಾ ಗಾಂಧಿ ಹಿಂದೂ ಅಂತಾನೋ ನಾವು ಗುರುತಿಸುತ್ತೇವೆಯೋ?

ದೇವಸ್ಥಾನದ ಎದುರೇ ಮೂರ್ನಾಲ್ಕು ಅಂತಸ್ತಿನಷ್ಟು ಎತ್ತರದಲ್ಲಿ ಶಾಶ್ವತ ಪ್ರತಿಮೆ ಕಟ್ಟುವ ಉದ್ದೇಶವೇಕೆ? ಅದರ ಔಚಿತ್ಯ ಏನು ಅಂತ ಸ್ವಲ್ಪ ಯೋಚಿಸಬೇಕು. ಮೊದಲೇ ಇತ್ತೀಚಿನ ಬೆಳವಣಿಗೆಗಳಿಂದಾಗಿ ಆ ಪ್ರದೇಶದಲ್ಲಿ ಪ್ರತಿಯೊಬ್ಬರ ಮನದಲ್ಲಿಯೂ ಕೆರಳಿದ ಭಾವನೆ ಇದೆ. ಹೀಗಾಗಿ ಹಿಂದೂ ಭಾವನೆಗಳನ್ನು ಕೆರಳಿಸಿದರೆ, ಅಂದರೆ ಅವರಿಗೆ ಸೂಜಿ ಚುಚ್ಚಿದರೆ (ಸಣ್ಣಪುಟ್ಟ ಸಂಗತಿಗಳಿಗೆಲ್ಲ ಅವರು ತಲೆಕೆಡಿಸಿಕೊಳ್ಳುವುದಿಲ್ಲ ಎಂಬುದು ಗೊತ್ತಿದ್ದೂ) ತಮ್ಮ ಉದ್ದೇಶ ಈಡೇರುತ್ತದೆ ಎಂಬ ತಂತ್ರಗಾರಿಕೆಯ ಫಲ ಈಗ ಇಡೀ ಕರಾವಳಿಯ ಜನತೆಯ ಮುಖಕ್ಕೆ ಮಸಿ ಬಳಿದಿರುವುದು.

ಚಾಪ್ಲಿನ್ ಮೊದಲು ಚರ್ಚ್ ಆಫ್ ಇಂಗ್ಲೆಂಡ್‌ನಿಂದ ಕ್ರೈಸ್ತ ಧರ್ಮ ದೀಕ್ಷೆ ಸ್ವೀಕರಿಸಿದ್ದರೂ, ಆ ಬಳಿಕ ತನ್ನನ್ನು ನಾಸ್ತಿಕ ಎಂದು ಘೋಷಿಸಿಕೊಂಡವನು. ಸ್ಥಳೀಯರು ಚಾಪ್ಲಿನ್ ಒಬ್ಬ ಕ್ರಿಶ್ಚಿಯನ್ ಎಂಬ ಕಾರಣಕ್ಕೆ ಆಕ್ಷೇಪಿಸಿದ್ದು ಖಂಡಿತಾ ಅಲ್ಲ ಎಂಬುದು ಆ ಸ್ಥಳದಲ್ಲಿದ್ದ ನನ್ನ ಗೆಳೆಯರೊಬ್ಬರು ಹೇಳಿದ ಮಾತು. ಅವರು ಆಕ್ಷೇಪಿಸಿದ್ದು ದೇವಸ್ಥಾನದ ಎದುರು ಇಷ್ಟು ದೊಡ್ಡ (62 ಅಡಿ ಎಂದರೆ ಸಾಧಾರಣ ಮೂರ್ನಾಲ್ಕು ಮಹಡಿ ಮನೆಯೆತ್ತರದಷ್ಟು) ಪ್ರತಿಮೆ ನಿರ್ಮಿಸುವುದಕ್ಕೆ. ಈ ಬಗ್ಗೆ ಹಿಂದೂಸ್ತಾನ್ ಟೈಮ್ಸ್‌ನಲ್ಲಿ ಬೈಲೈನ್ ಸಹಿತವಾದ ವರದಿಯೊಂದಿದೆ ನೋಡಿ. ಅಂತೆಯೇ ಆಡಳಿತದಿಂದ ಎನ್ಒಸಿ ಪಡೆದುಕೊಂಡಿಲ್ಲ, ಅದು ಪಡೆಯಲು ಕಷ್ಟ ಎಂದು ಸ್ವತಃ ನಿರ್ದೇಶಕರೇ ಒಪ್ಪಿಕೊಂಡಿದ್ದಾರೆ.

ಉಡುಪಿ ಜಿಲ್ಲಾಧಿಕಾರಿ ಹೇಮಲತಾ ಕೂಡ “ನಾವು ಶೂಟಿಂಗ್‌ಗೆ ಅನುಮತಿ ನೀಡಿದ್ದೆವು, ಆದರೆ ಪ್ರತಿಮೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅನುಮತಿ ದೊರೆಯುವವರೆಗೆ ಕಾಯಬೇಕು” ಎಂದಿದ್ದರು. ಅಂತೆಯೇ ಪಡುವರಿ ಗ್ರಾಮ ಪಂಚಾಯತ್ ಸದಸ್ಯ ಸುರೇಶ್ ಬಟ್ವಾಡಿ ಅವರ ಹೇಳಿಕೆಯೂ ಇಲ್ಲಿದೆ. ಆ ಸ್ಥಳದಲ್ಲಿ ಬೇಡ, ಬೇರೆ ಸ್ಥಳ ನೋಡುವಂತೆ ಚಿತ್ರ ತಂಡಕ್ಕೆ ಹೇಳಿದ್ದೇವೆ, ಅನುಮತಿ ಪಡೆಯುವಂತೆ ಸೂಚಿಸಿದ್ದೇವೆ ಎಂದಿದ್ದಾರವರು.

ಗ್ರಾಮಸ್ಥರು ದೇವಸ್ಥಾನದ ಎದುರು ಇಷ್ಟೆತ್ತರದ ಪ್ರತಿಮೆ ಸ್ಥಾಪಿಸಿದ್ದಕ್ಕೆ ಆಕ್ಷೇಪಿಸಿದ್ದಾರೆ. ಚರ್ಚಿನ ಸಮೀಪ ಅದರ ಗೋಪುರಕ್ಕಿಂತಲೂ ಎತ್ತರದ ಹಿಂದೂ ಪುಣ್ಯ ಪುರುಷನೊಬ್ಬನ ಪ್ರತಿಮೆ ಸ್ಥಾಪಿಸುತ್ತೇವೆ ಎಂದರೆ ಯಾರಾದರೂ ಬಿಡುತ್ತಾರೆಯೇ? ಆಕ್ಷೇಪಿಸ್ತಾರೆ ಅನ್ನೋದು ಖಂಡಿತ. ಇದು ಲಾಜಿಕ್ಕು. ಇದು ಧಾರ್ಮಿಕವಾಗಿ ಸೂಕ್ಷ್ಮ ವಿಚಾರ. ಧಾರ್ಮಿಕ ಸ್ವಾತಂತ್ರ್ಯ ಹಿಂದೂಗಳಿಗಿಲ್ಲವೇ?

ಒಟ್ಟಿನಲ್ಲಿ ಇದು ದೇಶದ ಹೆಸರಿಗೆ, ಕರ್ನಾಟಕದ ಹೆಸರಿಗೆ, ಕರಾವಳಿಯ ಶಾಂತಿಪ್ರಿಯ ಮಣ್ಣಿನ ಜನರ ಹೆಸರಿಗೆ ಮಸಿ ಬಳಿಯುವ ಪ್ರಯತ್ನವಂತೂ ಖಂಡಿತ. ದೇಶದ ಹೆಸರಿಗೆ ಮಸಿ ಬಳಿದರೂ ಪರವಾಗಿಲ್ಲ, ನನ್ನ ಚಿತ್ರಕ್ಕೆ ಪ್ರಚಾರ ಸಿಗಬೇಕು ಎಂಬ ಧೋರಣೆಯ ಪ್ರತೀಕವಿದು.

ಇದರ ಪರಿಣಾಮವೇನಾಯ್ತು? ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಮತ್ತೆ ತಲೆ ತಗ್ಗಿಸುವಂತಾಯಿತು. ಇಲ್ಲಿ ಬ್ರಿಟನ್‌ನ ಪತ್ರಿಕೆ ಪ್ರಕಟಿಸಿರುವ ಸುದ್ದಿ ನೋಡಿ… ಹಿಂದೂ ಜಾಗರಣ ವೇದಿಕೆಯ ಹೆಸರು ಅವರಿಗೆ ಎಲ್ಲಿಂದಲೋ ಸಿಕ್ಕಿದೆ. ಅರ್ದಂಬರ್ಧ ವರದಿ, ಸುತ್ತಿ ಬಳಸಿ ಬರುವ ಸುದ್ದಿಯ ಒಟ್ಟಾರೆ ಸಾರಾಂಶವೆಂದರೆ, “ಭಾರತದಲ್ಲಿ, ಅದರಲ್ಲೂ ಕರ್ನಾಟಕದಲ್ಲಿ ಕ್ರಿಶ್ಚಿಯನ್ನರನ್ನು ಮಟ್ಟ ಹಾಕಲಾಗುತ್ತಿದೆ”

ಅದರಲ್ಲಿ Karnataka has one of the poorest records for anti-Christian violence in the country. According to the Global Council of Indian Christians, at least 112 anti-Christian attacks were recorded in the state last year. ಅಂತಾನೂ ಇದೆ!

ನಮ್ಮ ಬಗ್ಗೆ ಛೀಥೂ ಅಂತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಳಿದುಕೊಳ್ಳಲು ನಮಗೆ ಹೇಸಿಗೆಯಿಲ್ಲ… ನಾವು ತಾಲಿಬಾನೀಕರಣಗೊಳ್ಳುತ್ತಿದ್ದೇವೆ, ಹಿಂದೂ ಉಗ್ರಗಾಮಿಗಳು ಹುಟ್ಟಿಕೊಂಡಿದ್ದಾರೆ ಎಂದೆಲ್ಲಾ ಬಿಂಬಿಸಲಾಗುತ್ತಿದೆ.

ಇಲ್ಲೊಂದು ತೀರಾ ಸರಳ ಪ್ರಶ್ನೆ. ದೇಶದಲ್ಲಿ ಎಲ್ಲಿಯೂ ಇಲ್ಲದ, ದೇಶಕ್ಕೆ ದೇಶವೇ ಹೆಮ್ಮೆ ಪಡುವಂತಹ ಮಹಾನ್ ಹಾಸ್ಯ ನಟ ಚಾಪ್ಲಿನ್‌ನ ಬೃಹತ್ ಪ್ರತಿಮೆ ನಿರ್ಮಾಣವಾಗುತ್ತದೆಂದರೆ ಎಲ್ಲರೂ ಹೆಮ್ಮೆ ಪಡುವ ವಿಚಾರವೇ. ಇದರಿಂದ ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತದೆ, ಹಾಡಿನ ಚಿತ್ರೀಕರಣ ಮುಗಿದ ಬಳಿಕ ಪ್ರತಿಮೆಯನ್ನು ಪ್ರವಾಸೋದ್ಯಮ ಇಲಾಖೆಗೆ ಬಿಟ್ಟು ಕೊಡುವುದು ನಮ್ಮ ಉದ್ದೇಶವಾಗಿತ್ತು ಎಂಬ ಚಿತ್ರ ತಂಡದ ಹೇಳಿಕೆ ಒಳ್ಳೆಯ ಉದ್ದೇಶವೇ. ದೇಶಕ್ಕೇ ಹೆಮ್ಮೆಯಾಗಬಹುದಾದ ಈ ಪ್ರತಿಮೆ ನಮ್ಮಲ್ಲಿದೆ ಎಂಬುದು ಅಲ್ಲಿನ ಪಡುವರಿ ಗ್ರಾಮಸ್ಥರೂ ಎದೆತಟ್ಟಿಕೊಂಡು ಹೇಳಬಹುದು. ಯಾರೂ ಆಕ್ಷೇಪಿಸುತ್ತಲೂ ಇರಲಿಲ್ಲ. ಆದರೆ ದೇವಸ್ಥಾನದ ಸಮೀಪವೇ ಆಗಬೇಕು ಎಂಬುದೇಕೆ? ಮತ್ತು ಆ ಊರಿನ ಮಿತ್ರರೊಬ್ಬರು ಹೇಳುವಂತೆ, ಈ ಚಿತ್ರ ತಂಡವು ಗುದ್ದಲಿ-ಹಾರೆ ಹಿಡಿದುಕೊಂಡು ಅಲ್ಲಿ 67 ಅಡಿಯ ಬೃಹತ್ ವಿಗ್ರಹ ಸ್ಥಾಪನೆಗೆ ಒಂದು ತೆಂಗಿನ ಸಸಿ ನೆಡುವುದಕ್ಕೆ ತೋಡಿದಂತೆ ಗುಂಡಿ ತೋಡಲು ಸಜ್ಜಾಗಿತ್ತಂತೆ! ಅದನ್ನು ಆಕ್ಷೇಪಿಸಿದ್ದಕ್ಕೆ ಪತ್ರಿಕೆ ಬರೆದದ್ದು ಇಲ್ಲದ “ಚಾಪ್ಲಿನ್ ಪ್ರತಿಮೆಗೆ ಬಿಜೆಪಿ ದಾಳಿ”!

ಇಂಥದ್ದೊಂದು ದೊಡ್ಡ ಯೋಜನೆ, ಲಕ್ಷಾಂತರ ರೂಪಾಯಿ ವೆಚ್ಚದ ಒಳ್ಳೆಯ ಪ್ರವಾಸೋದ್ಯಮಕ್ಕೆ ಪೂರಕವಾಗಬಹುದಾದ ಯೋಜನೆ, ಇದಕ್ಕೆ ಜಿಲ್ಲಾಡಳಿತ, ಸ್ಥಳೀಯ ಪಂಚಾಯತ್ ಇತ್ಯಾದಿಗಳಿಂದ ಮೊದಲೇ ಒಪ್ಪಿಗೆ ಪಡೆದು, ಯೋಜಿತ ರೀತಿಯಲ್ಲಿ ಮುಂದುವರಿದಿಲ್ಲವೇಕೆ? ಈಗಾಗಲೇ ಶೇ.90 ಚಿತ್ರೀಕರಣ ಮುಗಿದಾಗಿದೆ, ಈ ಒಂದು ಪ್ರತಿಮೆಗಾಗಿ 35 ಲಕ್ಷ ಖರ್ಚು ಮಾಡುತ್ತಾರೆ ಎಂದಾದರೆ ಹಣ ಎಲ್ಲಿಂದ ಎಂಬುದು ಯಾರೂ ಕೇಳಬಹುದಾದ ಸಾಮಾನ್ಯ ಪ್ರಶ್ನೆ. ಹಾಗಿದ್ದರೆ, 35 ಲಕ್ಷ ರೂ ಖರ್ಚು ಮಾಡದೆಯೇ ತಮ್ಮ ಚಿತ್ರಕ್ಕೆ ಅದಕ್ಕಿಂತಲೂ ಮಿಗಿಲಾದ ಪ್ರಚಾರ ದಕ್ಕಿಸಿಕೊಳ್ಳುವುದು ಉದ್ದೇಶವಾಗಿರಬಹುದೇ? ಎಲ್ಲ ಪತ್ರಿಕೆಗಳಲ್ಲಿಯೂ ಬರುತ್ತದೆ, ಜಾಹೀರಾತಿಗೆ ಹಣ ಖರ್ಚು ಮಾಡಬೇಕಾಗಿಲ್ಲ ಎಂಬ ಲಾಜಿಕ್ಕೇ?

ಇತ್ತೀಚೆಗೆ ಸ್ಥಳೀಯವಾಗಿ ಬಗೆಹರಿಯಬಹುದಾದ ಸಮಸ್ಯೆಗಳನ್ನು ಮಾಧ್ಯಮಗಳು ಅಂತಾರಾಷ್ಟ್ರೀಕರಣ ಮಾಡಲಾಗುತ್ತಿರುವುದೇಕೆ ಮತ್ತು ಮಾಧ್ಯಮಗಳ ಜವಾಬ್ದಾರಿ ಏನು ಎಂಬ ಬಗ್ಗೆ ಒಂದಿಷ್ಟು ಯೋಚಿಸಬೇಕಾಗಿದೆ.

16 COMMENTS

  1. ಇಂದಿನ ಮಾಧ್ಯಮಗಳು ಬರೇ ಬೇಜವಾಬ್ದಾರಿಗಳು. ಇದರಲ್ಲಿ ಎರಡು ಮಾತಿಲ್ಲ. ನಮ್ಮ ಕರಾವಳಿಯಲ್ಲಿ ತೊಂದರೆಗಳಿಲ್ಲ ಅಂತಲ್ಲ. ತೊಂದರೆಯಿಲ್ಲದ ಊರು, ಪ್ರದೇಶ ಯಾವುದೆಂದು ಹೇಳಿ? ಆದರೆ, ಇಂತಹ ಬೇಜವಾಬ್ದಾರಿಯ ಕೆಲಸ ಮಾಡುವುದೆಂದರೇನರ್ಥ? ಮಂಗಳೂರಿನ ಯಾವುದೇ ಚರ್ಚ್ ಮೇಲೆ ದಾಳಿಯಾಗಿಲ್ಲವಾದರೂ, (ದಾಳಿಯಾದುದು ಒಂದು ಹಾಲ್ ಮೇಲೆ) ರಾಷ್ಟ್ರೀಯ ಮಾಧ್ಯಮದಲ್ಲಿ ಚರ್ಚ್ ಮೇಲೆಯೇ ದಾಳಿಯಾಗಿದೆ ಎಂದೆಲ್ಲಾ ಕೂಗೆಬ್ಬಿಸಿ, ಹುಯಿಲೆಬ್ಬಿಸಿದ್ದರು. ಈ ಚಾರ್ಲಿ ಚಾಪ್ಲಿನ್ ಘಟನೆಯೂ ಮಾಧ್ಯಮಗಳ ಸಮಾಜ ದ್ರೋಹ, ಬೇಜವಾಬ್ದಾರಿತನ, ಹಿಂಸೆ ಪ್ರೇರೇಪಿಸುವ ಹುನ್ನಾರವೇ ಅಲ್ಲವೇ.. ಈಮ್ದಿನ ಮಾಧ್ಯಮಗಳು ಸುದ್ದಿಯನ್ನು ಕೇವಲ ತಲುಪಿಸುತ್ತಿಲ್ಲ, ಸುದ್ದಿಯ ಸೃಷ್ಟಿ ಮಾಡುವುದರಲ್ಲೂ ನಿಸ್ಸೀಮರು.

  2. ಇಂದಿನ ಮಾಧ್ಯಮಗಳು ಬರೇ ಬೇಜವಾಬ್ದಾರಿಗಳು. ಇದರಲ್ಲಿ ಎರಡು ಮಾತಿಲ್ಲ. ನಮ್ಮ ಕರಾವಳಿಯಲ್ಲಿ ತೊಂದರೆಗಳಿಲ್ಲ ಅಂತಲ್ಲ. ತೊಂದರೆಯಿಲ್ಲದ ಊರು, ಪ್ರದೇಶ ಯಾವುದೆಂದು ಹೇಳಿ? ಆದರೆ, ಇಂತಹ ಬೇಜವಾಬ್ದಾರಿಯ ಕೆಲಸ ಮಾಡುವುದೆಂದರೇನರ್ಥ? ಮಂಗಳೂರಿನ ಯಾವುದೇ ಚರ್ಚ್ ಮೇಲೆ ದಾಳಿಯಾಗಿಲ್ಲವಾದರೂ, (ದಾಳಿಯಾದುದು ಒಂದು ಹಾಲ್ ಮೇಲೆ) ರಾಷ್ಟ್ರೀಯ ಮಾಧ್ಯಮದಲ್ಲಿ ಚರ್ಚ್ ಮೇಲೆಯೇ ದಾಳಿಯಾಗಿದೆ ಎಂದೆಲ್ಲಾ ಕೂಗೆಬ್ಬಿಸಿ, ಹುಯಿಲೆಬ್ಬಿಸಿದ್ದರು. ಈ ಚಾರ್ಲಿ ಚಾಪ್ಲಿನ್ ಘಟನೆಯೂ ಮಾಧ್ಯಮಗಳ ಸಮಾಜ ದ್ರೋಹ, ಬೇಜವಾಬ್ದಾರಿತನ, ಹಿಂಸೆ ಪ್ರೇರೇಪಿಸುವ ಹುನ್ನಾರವೇ ಅಲ್ಲವೇ.. ಇಂದಿನ ಮಾಧ್ಯಮಗಳು ಸುದ್ದಿಯನ್ನು ಕೇವಲ ತಲುಪಿಸುತ್ತಿಲ್ಲ, ಸುದ್ದಿಯ ಸೃಷ್ಟಿ ಮಾಡುವುದರಲ್ಲೂ ನಿಸ್ಸೀಮರು.

  3. ಅವಿನಾಶರೇ,
    ನಿಮ್ಮ ಬರಹ ಸಕಾಲಿಕವಾಗಿದೆ, ವಾಸ್ತವ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತದೆ. ಆದರೆ ಸ್ಥಳೀಯವಾಗಿ ಇತ್ಯರ್ಥವಾಗಬಹುದಾದ ವಿಷಯಗಳನ್ನು ವೃಥಾ ವೈಭವಿಕರಿಸಿ, ರಾಷ್ಟ್ರೀಯ ಮಟ್ಟದ issue ಆಗಿಸುವುದು ಇತ್ತೀಚಿಗೆ ಜಾಸ್ತಿಯಾಗುತ್ತಿದೆ. ಆ ಚಾಪ್ಲಿನ್ ಮೂರ್ತಿ ಸ್ಥಾಪನೆಗೆ ಉದ್ದೇಶಿಸಲಾಗಿರುವ ಪ್ರದೇಶದ ಶೇ:೮೦ ಜನಕ್ಕೆ ಆತ ಯಾರೆ೦ಬುದು ತಿಳಿದಿರಲಿಕ್ಕಿಲ್ಲ, ಮತ್ತು ಆತನೊಬ್ಬ ಕ್ರೈಸ್ತ ಎ೦ಬ ನೆಲೆಯಲ್ಲಿ ಯಾರು ಯೋಚನೆ ಮಾಡಲಾರರು. ಚಾಪ್ಲಿನ್ ಮೂರ್ತಿ ಸ್ಥಾಪನೆ ಕುರಿತು ಜೋಗಿ ಬರೆದ ಲೇಖನ ಆ ನ೦ತರದಲ್ಲಿ “ಅವಧಿ” ಯಲ್ಲಿ ಪ್ರಕಟವಾದ ಒ೦ದೆರಡು ಬರಹಗಳನ್ನು ಓದಿ ನಿಜಕ್ಕೂ ಬೇಸರವಾಯಿತು. ಯಾರು ಕೂಡ ಇಷ್ಟೊ೦ದು mean mentality ಇಟ್ಟುಕೊ೦ಡು ಬರೆದಿಲ್ಲವೆನಿಸುತ್ತದೆ. ಎಲ್ಲವನ್ನೂ ಜಾತಿಯ, ಧರ್ಮದ ನೆಲೆಯಲ್ಲಿ ನೋದುತ್ತಿರುವ ಈ ಪ್ರಜ್ನಾವ೦ತರು, ಮತಾ೦ಧರಿಗಿ೦ತ ಅಪಾಯಕಾರಿ.
    Paranjape
    http://www.nirpars.blogspot.com

  4. Plz send it to avadhi, let us c whether they will publish it or not. If not we can confirm that they are one more pseudosecularists and antinational elements like TOI.

  5. @ ಪ್ರದೀಪ್,
    ಇದು ಮಾಧ್ಯಮಗಳ ನಡುವೆ ಏರ್ಪಡುತ್ತಿರುವ ಅನಾರೋಗ್ಯಕರ ಪೈಪೋಟಿ, ಬ್ರೇಕಿಂಗ್ ಸುದ್ದಿ ಕೊಡುವ ಧಾವಂತಕ್ಕೆ ಸಾಕ್ಷಿ. ಇಲ್ಲಿ ಜವಾಬ್ದಾರಿ ಮರೆತುಹೋಗುತ್ತದೆ. ಸಮಾಜದ ಸಾಮರಸ್ಯ, ಶಾಂತಿ ಮಂತ್ರಗಳನ್ನು ಮಾಧ್ಯಮಗಳೇ ಮರೆತರೆ ಏನಾಗುತ್ತದೆ? ಹೀಗೇ ಆಗುವುದು. ಛೆ ಎಂದುಕೊಳ್ಳಬೇಕಷ್ಟೆ.

  6. @ ಪರಾಂಜಪೆ,
    ನೀವು ಹೇಳಿದ್ದು ಸರಿ. ಆ ಊರಿನ ನನ್ನ ಮಿತ್ರರನ್ನು ಈ ಬಗ್ಗೆ ವಿಚಾರಿಸಿದ್ದೆ. ಗ್ರಾಮಸ್ಥರಲ್ಲಿ ಹೆಚ್ಚಿನವರಿಗೆ ಚಾಪ್ಲಿನ್ ಅಂದ್ರೆ ಯಾರೆಂಬುದೇ ಗೊತ್ತಿಲ್ಲ, ಮತ್ತು ಆತ ಕ್ರೈಸ್ತ ಅಂತ ಯಾರು ಕೂಡ ಯೋಚಿಸುವ ಹಂತದಲ್ಲಿರಲಿಲ್ಲ. ಅವರಂತೂ ಇದನ್ನು ಜಾತಿ ಧರ್ಮದ ನೆಲೆಯಲ್ಲಿ ನೋಡಿರಲಿಲ್ಲ. ನಮ್ಮ ದೇವಸ್ಥಾನಕ್ಕೆ ತೊಂದರೆಯಾಗಬಹುದು, ಬೇರೆಡೆ ಮಾಡಿ ಅಂತಲೇ ಸಲಹೆ ಮಾಡಿದ್ದಾರಂತೆ. ಈ ಸುದ್ದಿಗೆ ಜಾತಿ-ಧರ್ಮದ ವಿಷವನ್ನು ಸೇರಿಸಿದ್ದು ಯಾರು ಎಂಬುದೇ ಚರ್ಚಾರ್ಹ ಸಂಗತಿ. ಇದರ ಹಿಂದೆ ಅಂತಾರಾಷ್ಟ್ರೀಯ ಸಂಚು ಇರಬಹುದು ಎಂದು ಹೇಳಿದರೂ ನಾವು ‘ಕೋಮುವಾದಿ’ ಅಂತನ್ನಿಸಿಕೊಳ್ಳುವ ಪರಿಸ್ಥಿತಿ ಇದೆ. ಅದು ಯಾಕೆ ಕರಾವಳಿಯಲ್ಲಿ ಮಾತ್ರವಲ್ಲ, ದೇಶದ ಪ್ರತಿಯೊಂದು ಭಾಗಗಳಲ್ಲಿಯೂ ನಡೆಯಬಹುದಾದ ಸಣ್ಣ ಪುಟ್ಟ ಸಂಗತಿಗಳಿಗೆ ಕೋಮು ಬಣ್ಣ ಹಚ್ಚುತ್ತಾರೆ ಎಂಬುದು ಅರ್ಥವಾಗಲೊಲ್ಲದು.

    ಇನ್ನು, ಕೆಲವು ಮಾಧ್ಯಮಗಳಿಗಾದರೂ ಮಾಡಿದ ತಪ್ಪು ತಿದ್ದಿಕೊಳ್ಳುವ ಮನಸ್ಸಿದೆ. ಈ ಕಾರಣಕ್ಕೆ ಮರು ದಿನದ ಪತ್ರಿಕೆಯಲ್ಲಿ ಇದು ಪ್ರಚಾರ ಗಳಿಸುವ ಹುನ್ನಾರ ಎಂಬ ಮಾಹಿತಿಯೂ ಪ್ರಕಟವಾಗಿದ್ದು ಸಂತೋಷ.

  7. @ ಅಜಯ್
    ಕಾಮೆಂಟ್ ಮಾಡಿದ್ದಕ್ಕೆ ಧನ್ಯವಾದ. ನಿಮ್ಮ ಸಲಹೆ ಒಳ್ಳೆಯದೆ. ಆದರೆ ಅವರಿಗೂ ತಪ್ಪಭಿಪ್ರಾಯ ಆಗಿತ್ತೇ ಎಂಬ ಶಂಕೆ ನನಗೆ.

  8. ನಮ್ಮ ಮಾಧ್ಯಮಗಳ ಅಧಿಕಪ್ರಸ೦ಗಿತನಕ್ಕೆ ಇದಕ್ಕಿ೦ತ ಒಳ್ಳೆಯ ಉದಾಹರಣೆ ಇನ್ನು ಸಿಗುವುದು ಕಷ್ಟ. ‘TOI’ ಎ೦ಬ ಮತಿಗೆಟ್ಟ ಬಳಗ ಇ೦ತಹ ‘ಒಳ್ಳೆಯ’ ಟ್ರಾಕ್ ರೆಕೊರ್ಡ್ ಇಟ್ಟಿದೆ..ಇದ್ರ ಜತೆ..NDTV,CNN-IBN, The Hindu..ಇನ್ನೂ ಹಲವಾರು..

  9. @ ಅಜಯ್
    ಅವಧಿಯವರು ಕೂಡ ‘TOI’let paper ತರ ಆಡ್ತಾ ಇದ್ದಾರೆ..ನೀವು ಹೇಳಿದ್ದು ಸತ್ಯ..

  10. @ ಪ್ರಮೋದ್,
    ಜನರಲ್ಲಿ ಈ ಥರ ಕೆಟ್ಟ ಅಭಿಪ್ರಾಯ ಮೂಡಿಸುವಲ್ಲಿ ನಿರ್ದಿಷ್ಟ ಹಿತಾಸಕ್ತಿಯೂ ಅಡಗಿರುತ್ತದೆ. ಆದರೆ ಇದು ನಮ್ಮ ದೇಶವನ್ನೇ ಜರೆಯುವಷ್ಟರ ಮಟ್ಟಿಗೆ ಹೋಗುತ್ತದೆ ಎಂಬುದನ್ನು ಅವರೇಕೆ ಅರ್ಥೈಸಿಕೊಳ್ಳುವುದಿಲ್ಲ ಎಂಬುದೇ ಚಿಂತೆಯ ವಿಷಯ.

  11. ಅವಿನಾಶ್ ಅವರೆ,

    ಉತ್ತಮ ಲೇಖನ. ಸಕಾಲಿಕವಾಗಿದೆ. ತಪ್ಪು ಮಾಡುತ್ತಿರುವವನಿಗೆ ತಪ್ಪು ಎಂದು ಹೇಳಿದಾಗ, ಒಮ್ಮೆ ವಿವೇಚಿಸಿ, ತಿದ್ದಿಕೊಂಡರೆ ಒಪ್ಪಿಕೊಳ್ಳಬಹುದು. ಆದರೆ ಈಗ ಹಲವೆಡೆ ಆಗುತ್ತಿರುವುದು ತಾವು ಹೇಳುತ್ತಿರುವುದು ಮಾತ್ರ ಸತ್ಯ. ಉಳಿದುದೆಲ್ಲ ಮಿಥ್ಯ ಎಂಬ ಮೊಂಡು ಹಠವಾದ. ಎಡಪಂಥೀಯತೆಯನ್ನು ವರ್ಧಿಸುವುದು. ಧರ್ಮ, ಜಾತೀಯತೆಯ ಮೇಲೆ ಕಿಡೀ ಹಚ್ಚುವುದು ಇದೇ ನಡೆಯುತ್ತಿದೆ ಎಲ್ಲೆಡೆ. ದುರದೃಷ್ಟವಶಾತ್ ಈಗ ಇದು ಬ್ಲಾಗ್ ಲೋಕಕ್ಕೂ ಕಾಲಿಟ್ಟಿದೆ!

  12. ಬ್ರೇಕಿಂಗ್ ನ್ಯೂಸ್ ಹಾವಳಿ ಈಗ ಕೇವಲ್ ಟಿವಿ ಚಾನೆಲ್ ಗೆ ಅಷ್ಟೇ ಸೀಮಿತ ಆಗಿಲ್ಲ ..ಅವಧಿ ಅಂಥಹ ಬ್ಲಾಗ್ ಗು ಹಬ್ಬಿದೆ

  13. @ ತೇಜಸ್ವಿನಿ,
    ಹೌದು. ಯಾಕೆಂದರೆ ಕ್ಷಮೆಗೆ ಹೆಸರಾದ ನೆಲ ನಮ್ಮದು. ಆದರೆ ಮೊಂಡು ವಾದ ಮಾಡುವವರಿಗೆ ಏನನ್ನೋಣ. ಅವರ ಮನಸ್ಥಿತಿ ಬದಲಾಯಿಸುವುದಾದರೂ ಹೇಗೆ. ತಾನು ಸರಿ ಇದ್ದರೆ ತಾನೇ ಜಗತ್ತು, ಧರ್ಮ, ಸಂಸ್ಕೃತಿ ಇತ್ಯಾದಿ ಸರಿ ಇದೆ ಎಂದು ವಿಶ್ಲೇಷಣೆಗೆ ಹೊರಡಬಹುದು…? ಬ್ಲಾಗು ಲೋಕ ಸುಸಂಸ್ಕೃತರ, ವಿದ್ಯಾವಂತರ ತಾಣ ಎಂಬ ಭರವಸೆ ಇತ್ತು ನನಗೆ. ಈಗ ಮತ್ತೊಮ್ಮೆ ಯೋಚಿಸಬೇಕಾಗಿದೆ.

    ಅಭಿಪ್ರಾಯ ಹಂಚಿಕೊಂಡದ್ದಕ್ಕೆ ಧನ್ಯವಾದಗಳು.

  14. @ ಸೂರಜ್,
    ಪೂರ್ವಾಪರ ಯೋಚಿಸಬೇಕು ಮತ್ತು ಸ್ವ-ನಿಯಂತ್ರಣ ಅಗತ್ಯವಿದೆ ಎಂದಷ್ಟೇ ಹೇಳಬಲ್ಲೆ.

    ಓದಿ ಕಾಮೆಂಟ್ ಮಾಡಿದ್ದಕ್ಕೆ ಆತ್ಮೀಯ ಧನ್ಯವಾದ.

  15. howdri paapa nim paadige neevu nimma madi mailigeya rogagrasta jagattinalli sakkatt aaramavaagidri. ee haalaada jana ilgu bandbitru aalwa? che che…

  16. @ ಉಮಾ ವಿಜಯ್,
    ಮಡಿ ಮೈಲಿಗೆ ಯಾರಿಗೆ ಬೇಕು. ಮಾನವೀಯತೆ ಮುಖ್ಯ. ಮಡಿ-ಮೈಲಿಗೆ ಎಲ್ಲವೂ ಅವರವರಿಗೆ, ವ್ಯಕ್ತಿಗೆ ಸಂಬಂಧಿಸಿದ ವಿಚಾರ. ಶ್ರೀಕೃಷ್ಣ ‘ಈ ಜಗತ್ತು ಹೇಗೆ’ ಎಂದು ಕೇಳಿದಾಗ ಧರ್ಮರಾಯ ಹೇಳಿದ್ದು : “ಸ್ವಾಮೀ, ಈ ಜಗತ್ತು ಅತಿ ಸುಂದರವಾಗಿದೆ, ಆದರೆ ನಮ್ಮ ಮನಸ್ಸಿನಲ್ಲೇ ಎಷ್ಟೊಂದು ಕೊಳೆ ತುಂಬಿದೆ” ಅಂತ. ಅದೇ ದುರ್ಯೋಧನನಲ್ಲಿ ಇದೇ ಪ್ರಶ್ನೆಗೆ ಬಂದ ಉತ್ತರ ಉತ್ತರ: “ಕೃಷ್ಣಾ, ಈ ಜಗತ್ತು ತುಂಬಾ ಕೆಟ್ಟದು. ನಾವೆಷ್ಟು ಸಭ್ಯರು!”. ಇದು ಯಾಕೆ, ಹೇಗೆ ಎಂಬುದು ಅರಿವಿಗೆ ಬಂದರೆ ಸಾಕು.

Leave a Reply to Avinash Cancel reply

Please enter your comment!
Please enter your name here