ಹಳೆಯ ಸ್ಮಾರ್ಟ್‌ಫೋನ್‌ನ ಪರಿಪೂರ್ಣ ಪ್ರಯೋಜನ ಪಡೆಯಿರಿ…

0
414

mobile-appಮಾರುಕಟ್ಟೆಗೆ ಅತ್ಯಾಧುನಿಕ ಸ್ಮಾರ್ಟ್‌ಫೋನ್‌ಗಳು ಬಂದಿವೆ. ಒಂದೆರಡು ವರ್ಷಕ್ಕೇ ಅವುಗಳ ತಂತ್ರಜ್ಞಾನ ಹಳೆಯದಾಗುತ್ತಿರುವಾಗ ನಮ್ಮ ಮನಸ್ಸು ಕೂಡ ಹೊಸ ತಂತ್ರಜ್ಞಾನದತ್ತ ತುಡಿಯುತ್ತದೆ. ಹೊಸದನ್ನು ಕೊಂಡಾಗ, ಹಳೆಯ ಫೋನನ್ನೇನು ಮಾಡುವುದು? ವಿನಿಮಯ ಕೊಡುಗೆಗೆಂದು ಹೋದರೆ ಚಿಕ್ಕಾಸು ಬೆಲೆಯೂ ಬರುವುದಿಲ್ಲ. ಆದರೆ, ಹಳೆಯ ಸ್ಮಾರ್ಟ್‌ಫೋನ್ ಹಾಗೂ ಟ್ಯಾಬ್ಲೆಟ್‌ಗಳಿಂದ ಸಾಕಷ್ಟು ಪ್ರಯೋಜನಗಳಿವೆ ಎಂಬುದು ನಿಮಗೆ ಗೊತ್ತೇ?

ಹಳೆಯ ಸ್ಮಾರ್ಟ್‌ಫೋನ್‌ಗಳಲ್ಲಿ ಕ್ಯಾಮೆರಾ ಲೆನ್ಸ್‌ನ ಮೆಗಾಪಿಕ್ಸೆಲ್ ಸಾಮರ್ಥ್ಯ ಕಡಿಮೆಯಿದ್ದರೂ, ಫೋಟೋ ಗುಣಮಟ್ಟ, ಬ್ಯಾಟರಿ ಅದ್ಭುತವಾಗಿತ್ತು ಅಂತ ನಿಮಗೆ ಅನ್ನಿಸಿದ್ದಿರಬಹುದು. ಬೇರೆ ವಿಚಾರಗಳಲ್ಲಿಯೂ ಅದನ್ನು ಬಿಟ್ಟುಕೊಡಲು ಮನಸ್ಸಿರಲಾರದು ಅಲ್ಲವೇ? ಹೀಗಾಗಿ ಇವು ಬರೇ ಹಳೇ ಫೋನ್‌ಗಳಲ್ಲ, ಉಪಯುಕ್ತತೆಯ ಗಣಿ ಇದ್ದಂತೆ.

ಮೊಟ್ಟ ಮೊದಲನೆ ಉಪಯೋಗವೆಂದರೆ, ಮಕ್ಕಳಿಗೆ ಆಟಿಕೆ ರೂಪದಲ್ಲಿ. ಅವರಿಗೆ ಅದರಲ್ಲಿ ಬೇಕಾದ ಗೇಮ್ಸ್ ಆ್ಯಪ್‌ಗಳನ್ನು ಅದರಲ್ಲಿ ಅಳವಡಿಸಿಕೊಟ್ಟರೆ (ಎಷ್ಟು ಸಮಯ ಅವರು ಮೊಬೈಲ್‌ನಲ್ಲಿ ಆಡಬೇಕೆಂಬುದನ್ನು ನೀವೇ ನಿರ್ಧರಿಸಿ), ನಿಮ್ಮ ಹೊಸ ಫೋನ್ ಸೇಫ್.

ಮಕ್ಕಳ ಬುದ್ಧಿಮತ್ತೆ ಹೆಚ್ಚಿಸುವ ಕ್ವಿಜ್, ಸಾಮಾನ್ಯ ಜ್ಞಾನ, ಚೆಸ್, ಗಣಿತ ಹೇಳಿಕೊಡುವ ಆಟಗಳು, ಅಬಾಕಸ್ ಮುಂತಾದ ಆ್ಯಪ್‌ಗಳನ್ನು ಅಳವಡಿಸಿ ಅವರಿಗೆ ಕೊಟ್ಟುಬಿಟ್ಟರೆ, ಬಹುಶಃ ಹೇಗೆ ಬಳಸಬೇಕೆಂದು ಹೇಳಿಕೊಡಲೇಬೇಕಾಗಿಲ್ಲ. ಸ್ಮಾರ್ಟ್‌ಫೋನ್ ಬಳಕೆಯಲ್ಲಿ ಅವರ ಸಾಮರ್ಥ್ಯ ನಮಗಿಂತ ಮುಂದಿದೆ ಎಂಬುದು ಕೇವಲ ವ್ಯಂಗ್ಯೋಕ್ತಿಯಲ್ಲ! ಹೀಗಾಗಿ ಈ ಸಾಧನವನ್ನೇ ಮನರಂಜನೆ ಮತ್ತು ಶೈಕ್ಷಣಿಕ ಉಪಕರಣವಾಗಿ ಬಳಸಬಾರದೇಕೆ?

ಟ್ಯಾಬ್ಲೆಟ್ ಹಳೆಯದಿದ್ದರೆ, ಓದುವ ಸಾಧನವಾಗಿ ಬಳಸಬಹುದು. ಇದಕ್ಕಾಗಿ ಗೂಗಲ್ ಪ್ಲೇ ಬುಕ್ಸ್, ಅಮೆಜಾನ್ ಕಿಂಡ್ಲ್, ಪಾಕೆಟ್ ಮುಂತಾದ ಆ್ಯಪ್‌ಗಳನ್ನು ಅಳವಡಿಸಿಕೊಂಡರೆ, ಉಚಿತವಾಗಿ ಅಥವಾ ಖರೀದಿಗೆ ದೊರೆಯುವ ಇ-ಪುಸ್ತಕಗಳನ್ನೋ, ನಿಮ್ಮಲ್ಲಿರಬಹುದಾದ ಪಿಡಿಎಫ್ ರೂಪದ ಪುಸ್ತಕಗಳನ್ನೋ ಓದಲು ಟ್ಯಾಬ್ಲೆಟ್‌ನ ದೊಡ್ಡ ಸ್ಕ್ರೀನ್ ನೆರವು ನೀಡುತ್ತದೆ.

ಸಾಕಷ್ಟು ಫೋಟೋಗಳಿವೆ ಎಂದಾದರೆ, ಎಲ್ಲ ಫೋಟೋಗಳನ್ನೂ ಮೆಮೊರಿ ಕಾರ್ಡ್‌ನಲ್ಲಿ ತುಂಬಿಸಿ, ಡಿಜಿಟಲ್ ಫೋಟೋ ಫ್ರೇಮ್ Dayframe ಎಂಬ ಆ್ಯಪ್ ಅಳವಡಿಸಿಕೊಂಡರೆ, ಬೇಕಾದಾಗಲೆಲ್ಲಾ ಹಳೆಯ ನೆನಪುಗಳನ್ನು ನೋಡುವ ಫೋಟೋ ಆಲ್ಬಂನಂತೆ ಅದನ್ನು ಬಳಸಬಹುದು.

IP Webcam ಎಂಬ ಆ್ಯಪ್ ಅಳವಡಿಸಿಕೊಂಡರೆ, ಮತ್ತು ಇಂಟರ್ನೆಟ್ ಸಂಪರ್ಕವಿದ್ದರೆ ಮನೆಯ ಭದ್ರತಾ ಸಾಧನವನ್ನಾಗಿ (ಅಂದರೆ ಸಿಸಿ ಟಿವಿ ಕ್ಯಾಮೆರಾ ರೂಪದಲ್ಲಿ) ಹಳೆಯ ಸ್ಮಾರ್ಟ್‌ಫೋನ್ ಉಪಯೋಗಕ್ಕೆ ಬರುತ್ತದೆ. ಮನೆಯ ಪ್ರಮುಖ ಸ್ಥಳದಲ್ಲಿ ಅದನ್ನು ಅಳವಡಿಸಿಟ್ಟರೆ, ನೀವು ಹೊರಹೋಗಿದ್ದಾಗ ಮಕ್ಕಳು ಸರಿಯಾಗಿ ಓದುತ್ತಿದ್ದಾರೆಯೇ, ಆಯಾ ಚೆನ್ನಾಗಿ ಮಕ್ಕಳನ್ನು ನೋಡಿಕೊಳ್ಳುತ್ತಾಳೆಯೇ ಅಂತ ನಿಮ್ಮ ಕಚೇರಿಯಿಂದಲೂ ನೋಡಬಹುದು. ಆ್ಯಪ್ ನೆರವಿನಿಂದ ಫೋನ್ ಅಥವಾ ಕಂಪ್ಯೂಟರ್‌ನಲ್ಲಿ ನಿರ್ದಿಷ್ಟ ವೆಬ್‌ಸೈಟಿಗೆ ಲಾಗಿನ್ ಆಗುವ ಮೂಲಕ ಮನೆಯಲ್ಲಿ ನಡೆಯುತ್ತಿರುವ ಚಟುವಟಿಕೆಯನ್ನು ವೀಕ್ಷಿಸಬಹುದು.

ಹತ್ತು ಹಲವಾರು ಆ್ಯಪ್‌ಗಳನ್ನು ಟೆಸ್ಟ್ ಮಾಡುವ ಚಾಳಿ ಹೊಂದಿದ್ದರೆ, ಈ ಪ್ರಯೋಗಕ್ಕಾಗಿಯೇ ಹಳೆಯ ಫೋನ್ ಅಥವಾ ಟ್ಯಾಬ್ಲೆಟ್ ಉಪಯೋಗಕ್ಕೆ ಬರುತ್ತದೆ.

ವೈಫೈ ಅಥವಾ ಮೊಬೈಲ್ ಇಂಟರ್ನೆಟ್ ಮೂಲಕ ಮನೆಯಲ್ಲಿ ಗೂಗಲ್ ಹ್ಯಾಂಗೌಟ್ಸ್ ಅಥವಾ ಸ್ಕೈಪ್ ಆ್ಯಪ್ ಅಳವಡಿಸಿಕೊಂಡು, ದೂರ ದೇಶಗಳಲ್ಲಿರುವ ಮಿತ್ರರು, ಕುಟುಂಬಿಕರೊಂದಿಗೆ, ಆಪ್ತೇಷ್ಟರೊಂದಿಗೆ ವೀಡಿಯೋ ಚಾಟಿಂಗ್‌ಗೆ ಹಳೆಯ ಫೋನ್ ಉಪಯೋಗಕ್ಕೆ ಬರಬಹುದು.

ನಿಮ್ಮಲ್ಲಿ ಕಾರು ಇದ್ದರೆ, ಅದರಲ್ಲಿರುವ ಮ್ಯೂಸಿಕ್ ಸಿಸ್ಟಂ ಹಳೆಯದಾಗಿದ್ದರೆ, ಸ್ಪೀಕರ್‌ನ ಸಂಪರ್ಕವನ್ನು ಈ ಸ್ಮಾರ್ಟ್‌ಫೋನ್‌ಗೆ ಜೋಡಿಸುವ ಮೂಲಕ ಹಳೆಯ ಫೋನನ್ನು ಮ್ಯೂಸಿಕ್ ಪ್ಲೇಯರ್ ಆಗಿ ಬಳಸಬಹುದು. ಮನೆಯಲ್ಲಿ ಕೂಡ ಹಾಡು ಕೇಳಲು, ವೀಡಿಯೋ ನೋಡಲು, ಎಫ್‌ಎಂ ರೇಡಿಯೋ ಆಲಿಸಲು ಉಪಯೋಗಿಸಬಹುದು.

ಅಷ್ಟೇ ಅಲ್ಲ, ಕಾರಿನಲ್ಲಿ ಅತ್ಯಾಧುನಿಕ ಗಡಿಯಾರವಾಗಿಯೂ, ಆಫ್‌ಲೈನ್ ಮ್ಯಾಪ್ (ಹಿಯರ್ ಮ್ಯಾಪ್ಸ್) ಅಳವಡಿಸಿಕೊಂಡರೆ, ನ್ಯಾವಿಗೇಷನ್ (ನಕ್ಷೆಯಲ್ಲಿ ಮಾರ್ಗ ತೋರಿಸುವ) ಸಾಧನವಾಗಿಯೂ ಅದನ್ನು ಬಳಸಬಹುದು. ಇಂಟರ್ನೆಟ್ ಸಂಪರ್ಕ ಇದ್ದರೆ ಹೆಚ್ಚು ನಿಖರವಾಗಿ ಪ್ರಯಾಣದ ಮಾರ್ಗವನ್ನು ತಿಳಿಯಬಹುದು. ಸ್ಮಾರ್ಟ್‌ಫೋನ್‌ಗಳನ್ನು ಕಾರಿನ ವಿಂಡ್‌ಶೀಲ್ಡ್‌ಗೆ (ಮುಂಭಾಗದ ಗಾಜು) ಅಥವಾ ಡ್ಯಾಶ್‌ಬೋರ್ಡ್‌ಗೆ ಅಳವಡಿಸುವ ಹೋಲ್ಡರ್‌ಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ.

ಉಳಿದಂತೆ ಅಲಾರಂ, ಟಾರ್ಚ್ ಲೈಟ್, ಡಿಜಿಟಲ್ ಡೈರಿ ಆಗಿಯೂ ಬಳಸಲೂಬಹುದು. ಇವೆಲ್ಲಾ ಅಗತ್ಯವಿಲ್ಲ ಎಂದುಕೊಳ್ಳುವವರು ವಿನಿಮಯಕ್ಕೆ ಮುಂದಾಗಬಹುದು, ಸಾಧ್ಯವಿದ್ದರೆ ಮಾರಬಹುದು; ಇಲ್ಲವೇ, ಎಲ್ಲಕ್ಕೂ ಮಿಗಿಲಾಗಿ ಸ್ಮಾರ್ಟ್‌ಫೋನ್ ಖರೀದಿಸುವ ಸಾಮರ್ಥ್ಯ ಇಲ್ಲದವರಿಗೆ ದಾನ ಮಾಡಬಹುದು.

ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. [ವಿಜಯ ಕರ್ನಾಟಕ ಅಂಕಣ ಮಾರ್ಚ್ 02, 2015]

LEAVE A REPLY

Please enter your comment!
Please enter your name here